ಅನುಭವೀ ಪುಂಡುವೇಷಧಾರಿ ಶ್ರೀ ವಸಂತ ಗೌಡ ಕಾಯರ್ತಡ್ಕ
ಶ್ರೀ ವಸಂತ ಗೌಡ ಕಾಯರ್ತಡ್ಕ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಲ್ಲೊಬ್ಬರು. 1974ರಿಂದ ನಿರಂತರ 43 ವರುಷಗಳ ಕಾಲ ತಿರುಗಾಟ ನಡೆಸುತ್ತಾ ಬಂದಿರುವ ಹಿರಿಮೆ ಇವರದು. ಪುರಾಣ ಪ್ರಸಂಗಗಳ ಜ್ಞಾನ, ಪ್ರಸಂಗ ನಡೆಗಳ ಬಗ್ಗೆ ಇವರಿಗೆ ಇರುವ ಅರಿವು ನಿಜಕ್ಕೂ ಪ್ರಶಂಸನೀಯ. ಕಡತೋಕಾ, ಚಿಪ್ಪಾರು, ಪುತ್ತೂರು ನಾರಾಯಣ ಹೆಗ್ಡೆ, ವಿಟ್ಲ ಜೋಷಿ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈ, ನಯನ ಕುಮಾರ್, ಪುತ್ತಿಗೆ ರಘುರಾಮ ಹೊಳ್ಳರು, ರಾಮಕೃಷ್ಣ ಮಯ್ಯರು, ಕುಂಬಳೆ ಶ್ರೀಧರ ರಾವ್, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಅಡೂರು ಗಣೇಶ ರಾವ್, ಕಡಬ ಸಾಂತಪ್ಪ ಮತ್ತು ಶ್ರೀಧರ ಭಂಡಾರಿ ಮೊದಲಾದವರ ಒಡನಾಟದಿಂದಲೇ ನಾನು ಕಲಾವಿದನಾಗಿ ಕಾಣಿಸಿಕೊಂಡೆ ಎಂಬುದು ಶ್ರೀ ವಸಂತ ಗೌಡರ ಪ್ರಾಮಾಣಿಕ ಅನಿಸಿಕೆ. ಕಿರಿಯ ಸಹಕಲಾವಿದರೂ ನನಗೆ ತುಂಬಾ ಸಹಕರಿಸಿದ್ದಾರೆ ಎಂದು ನೆನಪಿಸುವ ಇವರು ಪ್ರಸಂಗಗಳ ನಡೆಗಳನ್ನು ಅರಿತವರು. ಹೇಳಿಕೊಡಲೂ ಬಲ್ಲರು. ಹಾಗಾಗಿ ವಸಂತ ಗೌಡ ಅವರು ಯಕ್ಷಗಾನಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿಯೂ ಹೌದು.
1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಶ್ರೀ ಬಿರ್ಮಣ್ಣ ಗೌಡ ಮತ್ತು ಬೊಮ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ವಸಂತ ಗೌಡರು ಜನಿಸಿದರು. ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಓದಿದರು. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಹೈಸ್ಕೂಲ್‍ಗೆ ಎಂಟು ಮೈಲುಗಳನ್ನು ನಡೆದೇ ಹೋಗಬೇಕಾಗಿತ್ತು. ಧರ್ಮಸ್ಥಳದ ಹಾಸ್ಟೆಲ್‍ನಲ್ಲಿದ್ದುಕೊಂಡು ಓದೋಣ ಎಂದು ನಿರ್ಧರಿಸಿದರು. ಉತ್ತಮ ಹವ್ಯಾಸೀ ಭಾಗವತರೂ ಆಗಿದ್ದ ಬಿರ್ಮಣ್ಣ ಗೌಡರು ಮಗನನ್ನು (ವಸಂತ ಗೌಡರು) ಧರ್ಮಸ್ಥಳ ಖಾವಂದರ ಬಳಿಗೆ ಕರೆದುಕೊಂಡು ಹೋದರಂತೆ. ಆದರೆ ಇವರು ಹೋದುದು ತಡವಾಗಿತ್ತು. ಎಲ್ಲಾ ಸೀಟುಗಳೂ ಭರ್ತಿಯಾಗಿತ್ತು. ಶ್ರೀ ಹೆಗ್ಗಡೆಯವರು ಯಕ್ಷಗಾನ ಕೇಂದ್ರಕ್ಕೆ ಸೇರುವಂತೆ ಸೂಚಿಸಿದರಂತೆ. ವಸಂತ ಗೌಡರು ಸಂತೋಷದಿಂದ ಒಪ್ಪಿಕೊಂಡರಂತೆ. ಎಳವೆಯಲ್ಲಿ ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಆನಂದಿಸಿದ್ದೆ. ಪೂಜ್ಯ ಖಾವಂದರು ಅನುಗ್ರಹಿಸಿದರು. ಬಡತನದಲ್ಲಿದ್ದವನಿಗೆ ದುಡಿದು ಬದುಕು ಎಂದು ದಾರಿ ತೋರಿದರು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಮತ್ತು ಶ್ರೀ ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದದಿಂದ ಇಂದಿನ ವರೆಗೂ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸುವಂತಾದುದು ನನ್ನ ಭಾಗ್ಯ. ವಸಂತ ಗೌಡರ ಈ ಮಾತುಗಳಲ್ಲಿ ಅವರು ಸಂಪೂರ್ಣ ತೃಪ್ತರು ಎಂಬ ಧ್ವನಿ ಖಂಡಿತಾ ಇದೆ.
1974ನೇ ಇಸವಿ ತನ್ನ 12ನೇ ವರ್ಷದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಶ್ರೇಷ್ಠ ಕಲಾವಿದರುಗಳಿಂದ ಮೆರೆಯುತ್ತಿದ್ದ ಮೇಳ. ಬಾಲಗೋಪಾಲರಾಗಿ. ಮುಖ್ಯ ಸ್ತ್ರೀವೇಷ ಪ್ರಸಂಗಗಳಲ್ಲಿ ಸಿಕ್ಕ ಸಣ್ಣಪುಟ್ಟ ವೇಷಗಳನ್ನು ನಿರ್ವಹಿಸುತ್ತಾ ಬೆಳೆದರು. ನೋಡಿ, ಕೇಳಿ ಕಲಿತರು. ಸತತ ಪರಿಶ್ರಮದಿಂದ ಕಲಾವಿದನಾಗಿ ಬೆಳೆಯತೊಡಗಿದರು. ಪರಿಣಾಮ ಅವಕಾಶಗಳು ಬರತೊಡಗಿದವು. ಬಾಲಲೀಲೆಯ ಶ್ರೀಕೃಷ್ಣ, ಪ್ರಹ್ಲಾದ, ಬಾಲಚ್ಯವನ, ಮಾರ್ಕಂಡೇಯ, ಲೋಹಿತಾಶ್ವ, ಷಣ್ಮುಖ ಮೊದಲಾದ ಪಾತ್ರಗಳಲ್ಲಿ ಮಿಂಚಿದರು. ಮಾತುಗಾರಿಕೆಯನ್ನೂ ಚೆನ್ನಾಗಿ ಅಭ್ಯಸಿಸಿ, ಬಭ್ರುವಾಹನ, ಅಭಿಮನ್ಯು, ಚಂಡ ಮುಂಡರು, ಲಕ್ಷ್ಮಣ, ವಿಷ್ಣು, ಶ್ರೀರಾಮ, ಬ್ರಹ್ಮ, ಅಶ್ವತ್ಥಾಮ ಮೊದಲಾದ ವೇಷಗಳನ್ನು ಮಾಡುತ್ತಾ ಸಮರ್ಥ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ನಯನಕುಮಾರರ ಅನುಪಸ್ಥಿತಿಯಲ್ಲಿ ಹಾಸ್ಯಗಾರನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಎಲ್ಲಾ ಹಾಸ್ಯಪಾತ್ರಗಳನ್ನು ನಿರ್ವಹಿಸುವ ರೀತಿಯನ್ನು ನಯನ ಕುಮಾರರು ಇವರಿಗೆ ಹೇಳಿಕೊಟ್ಟಿದ್ದರಂತೆ. ಮೇಳದಲ್ಲಿ ಹಾಸ್ಯಗಾರರೇ ನಿರ್ವಹಿಸುವ ಬಾಹುಕ, ನಾರದ ಮೊದಲಾದ ಪಾತ್ರಗಳನ್ನೂ ಶ್ರೀ ಕಾಯರ್ತಡ್ಕ ವಸಂತ ಗೌಡರು ಚೆನ್ನಾಗಿ ಮಾಡಬಲ್ಲರು. ಮಳೆಗಾಲದಲ್ಲಿ ದೇವಿಭಟ್ರು ಖ್ಯಾತಿಯ ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ ಕುಂಬಳೆ ಚಂದುರವರ ತಂಡದಲ್ಲಿ ತಿರುಗಾಟ ನಡೆಸಿದ ಶ್ರೀ ವಸಂತ ಗೌಡರು ಪ್ರಸ್ತುತ ಅನೇಕ ವರ್ಷಗಳಿಂದ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಪ್ರಮುಖ ಕಲಾವಿದ. ದೆಹಲಿ, ಭೋಪಾಲ್, ಮುಂಬಯಿ, ಪುಣೆ, ಹೈದರಾಬಾದ್, ಚೆನ್ನೈ, ಊಟಿ, ವಿಜಯವಾಡ, ಕೊಯಂಬತ್ತೂರು, ಅಲ್ಲದೆ ಕರ್ನಾಟಕ, ಕೇರಳ ರಾಜ್ಯದ ಅನೇಕ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಮಳೆಗಾಲದ ಪ್ರದರ್ಶನಗಳ ಸಂದರ್ಭ, ಹೈದರಾಬಾದ್, ಮೈಸೂರು, ಬೆಂಗಳೂರು ಮೊದಲಾದೆಡೆ ವಸಂತ ಗೌಡರು ಸನ್ಮಾನಿತರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ವೀರೇಂದ್ರ ಹೆಗಡೆಯವರ ಪಟ್ಟಾಭಿಷೇಕೋತ್ಸವದ ಸಂದರ್ಭ ದೆಹಲಿ ಪಾರ್ಲಿಮೆಂಟ್ ಭವನದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಿಂದ ನಡೆದ ಪ್ರದರ್ಶನದ ಸಂದರ್ಭ ಅಂದು ಭಾರತದ ರಾಷ್ಟ್ರಪತಿಗಳಾಗಿದ್ದ ಶ್ರೀ ಶಂಕರ ದಯಾಳ್ ಶರ್ಮರಿಂದ ಸನ್ಮಾನಿತರಾಗಿದ್ದಾರೆ. ಸರಳ, ವಿನಯವಂತರಾದ ವಸಂತ ಗೌಡರು ಪ್ರಚಾರಪ್ರಿಯರಲ್ಲ. ತನ್ನ ಕರ್ತವ್ಯವನ್ನು ಚೊಕ್ಕವಾಗಿ ಮಾಡಿ ಮುಗಿಸಿ ಮೌನಕ್ಕೆ ಶರಣಾಗುವವರು. ಬಿಡುವಿನ ವೇಳೆಯಲ್ಲಿ ಇವರು ಗಡ್ಡಮೀಸೆಗಳನ್ನು ತಯಾರು ಮಾಡಿ ಕಲಾವಿದರಿಗೆ ನೀಡುತ್ತಾರೆ. ವಸಂತ ಗೌಡರು ಮಾಡಿದ ಗಡ್ಡಮೀಸೆಗಳಿಗೆ ಬಹು ಬೇಡಿಕೆಯಿದೆ.
ಸಾಂಸಾರಿಕವಾಗಿಯೂ ಇವರು ತೃಪ್ತರು. ಪತಿಯ ಮನವರಿತು ನಡೆಯುವ ಪತ್ನಿ ಗೀತ ಮತ್ತು ಮೂವರು ಗಂಡು ಮಕ್ಕಳ (ರವಿ, ಪುನೀತ್, ದಯಾನಂದ) ಸಂತೃಪ್ತ ಕುಟುಂಬ ಶ್ರೀ ವಸಂತ ಗೌಡರದು. ಶ್ರೀ ವಸಂತ ಗೌಡರ ಹೊಸ ಮನೆಯ ಕೆಲಸವೂ ನಡೆಯುತ್ತಿದೆ. ಆದಷ್ಟು ಬೇಗ ಗೃಹಪ್ರವೇಶ ಸಮಾರಂಭ ನಡೆಯುವಂತಾಗಲಿ. ಸನ್ಮಾನ, ಪ್ರಶಸ್ತಿಗಳು ಸಿಗಲಿ. ಅವರಿಗೆ ದೇವರು ಆರೋಗ್ಯ, ಐಶ್ವರ್ಯ ಭಾಗ್ಯಗಳನ್ನು ಅನುಗ್ರಹಿಸಲಿ ಎಂದು ನಾವೆಲ್ಲರೂ ಹಾರೈಸೋಣ.
ವಿಳಾಸ : ವಸಂತ ಗೌಡ, ಕಾಯರ್ತಡ್ಕ ಮನೆ, ಬೆಳ್ತಂಗಡಿ ತಾಲೂಕು, ದ. ಕ.
ವಸಂತ ಗೌಡ ಕಾಯರ್ತಡ್ಕ
(ಫೋಟೋ: ವೆಂಕಟ್ ಕೋಟೂರು )

Comments
Post a Comment