ಯಕ್ಷ ಸವ್ಯಸಾಚಿ ರೆಂಜಾಳ ರಾಮಕೃಷ್ಣ ರಾವ್
ಯಕ್ಷ ಸವ್ಯಸಾಚಿ ಶ್ರೀ ರೆಂಜಾಳ ರಾಮಕೃಷ್ಣ ರಾವ್
ಶ್ರೀ ರೆಂಜಾಳ ರಾಮಕೃಷ್ಣ ರಾವ್
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳ ಎಂಬಲ್ಲಿ ಶ್ರೀ ವೆಂಕಟ್ರಮಣಯ್ಯ ಮತ್ತು ಯಮುನಮ್ಮ ದಂಪತಿಗಳಿಗೆ ಪ್ರಥಮ ಪುತ್ರನಾಗಿ 1944ನೇ ಇಸ್ವಿ ಮೇ 19ರಂದು ರಾಮಕೃಷ್ಣ ರಾವ್ ಅವರು ಜನಿಸಿದರು. 9ನೇ ತರಗತಿಯವರೇಗೆ ವಿದ್ಯಾಭ್ಯಾಸ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಶ್ರೀ ಕುದ್ಕಾಡಿ ವಿಶ್ವನಾಥ ರೈಗಳಿಂದ ಭರತನಾಟ್ಯ ಅಭ್ಯಸಿಸಿದ್ದರು. ಯಕ್ಷಗಾನ ನಾಟ್ಯ ಕಲಿತದ್ದು ಮೇಳದ ತಿರುಗಾಟದಲ್ಲಿ. ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದಿಂದ ಕೂಡ್ಲು ಮೇಳದಲ್ಲಿ ಗೆಜ್ಜೆಕಟ್ಟಿ ವೇಷ ಮಾಡಲು ಆರಂಭಿಸಿದರು. ಶ್ರೀ ಕುಡಾಣ ಗೋಪಾಲಕೃಷ್ಣ ಭಟ್, ಶ್ರೀ ಕೊಕ್ಕಡ ಈಶ್ವರ ಭಟ್ ಮತ್ತು ಅಡ್ಕಸ್ಥಳ ನಾರಾಯಣ ಶೆಟ್ಟರು ರೆಂಜಾಳ ರಾಮಕೃಷ್ಣರಿಗೆ ನಾಟ್ಯ ಹೇಳಿಕೊಡುತ್ತಿದ್ದರು. ಹೀಗೆ ಮೇಳದಲ್ಲೇ ಕಲಿತು ಕಲಾವಿದನಾಗಿ ಕಾಣಿಸಿಕೊಂಡರು. ಖ್ಯಾತ ಮದ್ದಳೆಗಾರರಾಗಿದ್ದ ಶ್ರೀ ನೆಡ್ಲೆ ನರಸಿಂಹ ಭಟ್ಟರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಕಲಿತು ಮೇಳಕ್ಕೆ ಬರುವುದಕ್ಕಿಂತ ಮೇಳಕ್ಕೆ ಬಂದು ಕಲಿತರೆ ಅದುವೇ ಚಂದ. ಎಷ್ಟು ಅರ್ಥಪೂರ್ಣ ವಾದ ಮಾತುಗಳು! ಮೇಳದಲ್ಲೇ ಕಲಿಯುತ್ತಾ ಹಂತ ಹಂತವಾಗಿ ಬೆಳೆದು ಬಂದ ಕಾರಣವೇ ರೆಂಜಾಳ ರಾಮಕೃಷ್ಣ ರಾಯರು ಇಂದು ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಕಾಣಿಸುತ್ತಿದ್ದಾರೆ.
ಮೊದಲ 4 ವರ್ಷಗಳ ಕಾಲ ಕೂಡ್ಲು ಮೇಳದಲ್ಲಿ, ಮತ್ತೆ 4 ವಷಗಳ ಕಾಲ ಹವ್ಯಾಸಿಯಾಗಿ, ಮತ್ತೆ 1 ವರ್ಷ ಮಡಿಕೇರಿಯ ಚೌಡೇಶ್ವರೀ ಮೇಳದಲ್ಲಿ ಕಲಾಸೇವೆಯನ್ನು ಮಾಡಿದ ಶ್ರೀ ರೆಂಜಾಳ ರಾಮಕೃಷ್ಣ ರಾಯರು ಮತ್ತೆ ನಿರಂತರ 40 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು. ದಿನಾ ಪುರಾಣ ಪ್ರಸಂಗಗಳು. ಪ್ರಬುದ್ಧ ಕಲಾವಿದರ ಒಡನಾಟ. ರೆಂಜಾಳದವರು ಕಲಾವಿದನಾಗಿ ಹೊಳೆ ಹೊಳೆದು ಕಾಣಿಸಿಕೊಳ್ಳತೊಡಗಿದರು. ಇರಾ ಗೋಪಾಲಕೃಷ್ಣ ಭಾಗವತರು, ಬಲಿಪ ನಾರಾಯಣ ಭಾಗವತರೆಲ್ಲಾ ನನ್ನನ್ನು ತಿದ್ದಿ ತೀಡಿದರು. ದಿ. ಬಣ್ಣದ ಕುಟ್ಯಪ್ಪು, ಪುರುಷೋತ್ತಮ ಭಟ್, ಬಣ್ಣದ ಮಾಲಿಂಗ, ಕುಂಞರಾಮ ಮಣಿಯಾಣಿ, ಅಡ್ಕಸ್ಥಳ ನಾರಾಯಣ ಶೆಟ್ಟಿ, ಕೇದಗಡಿ ಗುಡ್ಡಪ್ಪ ಗೌಡ, ಪೆರುವಾಯಿ ನಾರಾಯಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ- ಮೊದಲಾದವರ ವೇಷಗಳನ್ನು ಇಷ್ಟಪಡುತ್ತೇನೆ. ಅವರು ಆದರ್ಶ ನನಗೆ. ಇವರೆಲ್ಲರ ಒಡನಾಟವೂ ಮೇಳದ ತಿರುಗಾಟದಲ್ಲಿ ಸಿಕ್ಕಿತು. ನಾನು ಕಲಾವಿದನಾಗಿ ಬೆಳೆಯುವುದಕ್ಕೆ ಇವರೆಲ್ಲರೂ ಕಾರಣರು ಎಂದು ರೆಂಜಾಳ ರಾಮಕೃಷ್ಣ ರಾಯರು ಹೇಳುತ್ತಾರೆ. ರೆಂಜಾಳದವರು ಪುರುಷ ಪಾತ್ರಗಳನ್ನೂ, ಸ್ತ್ರೀಪಾತ್ರಗಳನ್ನೂ, ಹಾಸ್ಯಪಾತ್ರಗಳನ್ನೂ ಮಾಡಬಲ್ಲ ಸಮರ್ಥರು. ಇವರ ಪ್ರೀತಿಯ ಪುರುಷ ಪಾತ್ರಗಳು- ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು, ಕೌಂಡ್ಲಿಕ, ನಳ, ಹರಿಶ್ಚಂದ್ರ, ದೇವೇಂದ್ರ, ಅರ್ಜುನ- ಈ ಎಲ್ಲಾ ವೇಷಗಳನ್ನೂ ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಇವರಿಗಿದೆ. ಶ್ರೀದೇವಿ, ಸುಭದ್ರೆ, ದಮಯಂತಿ, ಶಶಿಪ್ರಭೆ, ಕೊರವಂಜಿ ಮೊದಲಾದ ಸ್ತ್ರೀವೇಷಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇವರೊಬ್ಬ ಉತ್ತಮ ಹಾಸ್ಯಗಾರನೂ ಹೌದು. ಬಾಹುಕ, ವಿಜಯ, ಪಂಡಿತ, ಮಕರಂದ ಮೊದಲಾದ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ ಋಷಿ, ನಾರದ ಮೊದಲಾದ ವೇಷಗಳನ್ನು ಉತ್ತಮವಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಪುರಾಣ ಪ್ರಸಂಗಗಳ ಜ್ಞಾನ, ಪ್ರಸಂಗದ ನಡೆಯ ಬಗ್ಗೆ ತಿಳುವಳಿಕೆ, ಮುಖವರ್ಣಿಕೆಯ ಬಗ್ಗೆ ಮಾಹಿತಿ ಹೀಗೆ ಎಲ್ಲವನ್ನೂ ತಿಳಿದಿರುವುದರಿಂದಲೇ ಯಕ್ಷಗಾನಕ್ಕೆ ಇವರೊಬ್ಬ ಸಂಪನ್ಮೂಲ ವ್ಯಕ್ತಿಯೂ ಹೌದು. ಕಟೀಲು ಮೇಳದಲ್ಲಿ ಒಂದು ವರ್ಷ ವ್ಯವಸ್ಥಾಪಕ ನಾಗಿಯೂ ಇವರು ಸೇವೆಯನ್ನು ಸಲ್ಲಿಸಿರುತ್ತಾರೆ.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಸುಳ್ಯ ತಾಲೂಕು ಕನ್ನಡ ಸಿರಿ ಪ್ರಶಸ್ತಿ, ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ, ಮುಚ್ಚೂರು ನಾರಾಯಣ ಭಟ್ ಮತ್ತು ಮುಚ್ಚೂರು ರಾಮಣ್ಣ ಪ್ರಶಸ್ತಿ, ಕೋಡಪದವು ಕಲಾ ಸಾಧನಾ ಪ್ರಶಸ್ತಿ ಅಲ್ಲದೆ ಮುಂಬಯಿ, ಪೂನಾ, ಮೈಸೂರು ಮೊದಲಾದೆಡೆ ಸನ್ಮಾನಿತರಾಗಿದ್ದಾರೆ. ಒಟ್ಟು 50ಕ್ಕಿಂತಲೂ ಹೆಚ್ಚು ವರುಷಗಳ ಕಾಲ ಕಲಾಮಾತೆಯ ಸೇವೆಯನ್ನು ಮಾಡಿದ ರೆಂಜಾಳ ರಾಮಕೃಷ್ಣ ರಾಯರಿಗೆ ಆಯುಷ್ಯ, ಆರೋಗ್ಯ ಭಾಗ್ಯಗಳನ್ನೂ, ಇನ್ನಷ್ಟು ಕಲಾಸೇವೆಯನ್ನು ಮಾಡುವ ಶಕ್ತಿಯನ್ನೂ ದೇವರು ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು. ು
Comments
Post a Comment