``ಯಕ್ಷಮಯೂರಿ’’ - ಸಂಜಯಕುಮಾರ್ ಶೆಟ್ಟಿ, ಗೋಣಿಬೀಡು

                           ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ಆಲಸಿಯಾದವನಿಂದ ಇದನ್ನೂ ನಿರೀಕ್ಷಿಸಕೂಡದು. ಅವಿರತವಾದ ಸಾಧನೆ, ಸತತ ಅಭ್ಯಾಸ, ಅರ್ಪಣಾಭಾವಗಳಿಂದ ಮಾತ್ರ ಸಾಧ್ಯ. ಕಲಾವಿದನು ಪಾತ್ರವಾಗಬೇಕಾದರೆ ಅದರ ಸ್ವಭಾವವೇನೆಂದು ಅರಿತು ಅಭ್ಯಸಿಸಬೇಕು. ಆಳವಾದ ಅಧ್ಯಯನ ಅತ್ಯಗತ್ಯ. ಪಾತ್ರದೊಳಗೆ ಅಡಗಿರುವ ವಿಚಾರಗಳನ್ನು ಹೊರಗೆಡಹುವಲ್ಲಿ ಆತ ‘ವಿಜ್ಞಾನಿ’ಯೇ ಆಗಿರಬೇಕು. ಒಂದರ್ಥದಲ್ಲಿ ‘ಪರಕಾಯ ಪ್ರವೇಶ’. ಇಲ್ಲವಾದರೆ ಪಾತ್ರವು ಪೇಲವವಾಗುವುದನ್ನು ನಾವು ಕಾಣಬಹುದು. ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷನು ನಿರ್ವಹಿಸುವುದು ನಿಜವಾಗಿಯೂ ಒಂದು ಸಾಧನೆ. ರೂಪ ಮತ್ತು ಆಕೃತಿಯಾದರೂ ದೇವರ ಕೊಡುಗೆ. ಪ್ರೇಕ್ಷಕರಿಗೆ ಅದು ತಿಳಿದಿದೆ. ಆದರೆ ಅಭಿನಯ, ಹಾವಭಾವ, ಮಾತನಾಡುವಲ್ಲಿ ಸ್ವರದ ಬಗ್ಗೆ ಕಾಳಜಿ ಇವುಗಳನ್ನೆಲ್ಲಾ ಸತತ ಸಾಧನೆಗಳಿಂದ ಮಾತ್ರ ಸಿದ್ಧಿಸಲು ಸಾಧ್ಯ. ಮಾತುಗಾರಿಕೆಯಲ್ಲೂ ಉಳಿದ ಪಾತ್ರಧಾರಿಗಳಷ್ಟು ಸ್ವಾತಂತ್ರ್ಯ ಖಂಡಿತಾ ಸ್ತ್ರೀಪಾತ್ರಧಾರಿಗೆ ಇರಲಾರದು. ಯಾಕೆಂದರೆ ತಾನು ಗಂಡು ಅಲ್ಲ, ಹೆಣ್ಣು. ರಂಗದಲ್ಲಿ ಹೆಣ್ಣಾಗಿಯೇ ವ್ಯವಹರಿಸಬೇಕಾದುದು ಆ ಪಾತ್ರವನ್ನು ಧರಿಸಿದ ಕಲಾವಿದನಿಗೆ ಅನಿವಾರ್ಯವಾದುದರಿಂದ ಅಡಿಗಡಿಗೆ ಎಚ್ಚರವಿರಬೇಕಾಗುತ್ತದೆ. (ಯಕ್ಷಗಾನದಲ್ಲಿ ಪುರುಷವೇಷಗಳನ್ನು ಧರಿಸುವ ಕಲಾವಿದೆಯರೂ ಗಮನಿಸಬೇಕಾದ ವಿಚಾರವಿದು. ತಾನು ಧರಿಸಿದ್ದು ಪುರುಷಪಾತ್ರ ಎಂಬ ಎಚ್ಚರ ಕೊನೆಯವರೇಗೂ ಇದ್ದಾಗ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಪಾತ್ರವನ್ನು ನಿರ್ವಹಿಸಿದ ಆ ಕಲಾವಿದೆಯೂ ಸಾಧಕಿಯಾಗಿ ಹೊಳೆದು ಕಾಣಿಸಿಕೊಂಡು ಗೌರವಿಸಲ್ಪಡುತ್ತಾಳೆ.) `ಯಕ್ಷಶಾಂತಲಾ’ ಗೌರವಕ್ಕೆ ಪಾತ್ರರಾದ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರನ್ನು ಯಕ್ಷದೀಪ ಸಂದರ್ಶಿಸಿ ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರವನ್ನು ಗಮನಿಸೋಣ-
ಪ್ರಶ್ನೆ : ಸ್ತ್ರೀವೇಷ ಹೇಗಿರಬೇಕು? ಪಾತ್ರದ ಸ್ವಭಾವದ ಬಗ್ಗೆ....
ಉತ್ತರ : ``ಗರತಿ ಮತ್ತು ಶೃಂಗಾರ ಪಾತ್ರಗಳು ಹೀಗೆ ಎರಡು ರೀತಿ ಮುಖ್ಯವಾದವು. ಶೃಂಗಾರ ದಲ್ಲೂ ಹಲವಾರು ವಿಧಗಳಿವೆ. ಮೋಹಿನಿಯ ಶೃಂಗಾರ, ಮಾಯಾಪೂತನಿಯ ಶೃಂಗಾರ, ಮಾಯಾಶೂರ್ಪನಖಿಯ ಶೃಂಗಾರ. ಮೇನಕೆಯ ಶೃಂಗಾರ ಎಲ್ಲವೂ ಬೇರೆ ಬೇರೆ. ಮೇನಕೆಯ ಶೃಂಗಾರ ಊರ್ವಶಿಯಲ್ಲಿ ಇಲ್ಲ. ಮಾಯಾ ಪೂತನಿಯ ಶೃಂಗಾರಕ್ಕೂ ಮಾಯಾ ಶೂರ್ಪನಖಿಯ ಶೃಂಗಾರಕ್ಕೂ ವ್ಯತ್ಯಾಸಗಳಿವೆ. ಎರಡೂ ಪಾತ್ರಗಳ ಉದ್ದೇಶ ಬೇರೆ ಬೇರೆ. ಮಾಯಾಹಿಡಿಂಬೆಯ ಶೃಂಗಾರ ಸಹಜವಾದದ್ದು. ಅಂಬೆಯ ಸ್ವಭಾವ ಇನ್ನೊಂದು ರೀತಿ. ಹೀಗೆಯೇ ಪಾತ್ರ ಸ್ವಭಾವಕ್ಕೆ ತಕ್ಕಂತೆ ಬದಲಾಗುವುದೇ ಕಲಾವಿಧನ ಜಾಣ್ಮೆ’’ (ಪಾತಾಳ ವೆಂಕಟ್ರಮಣ ಭಟ್ಟರಷ್ಟು ಅಧ್ಯಯನಶೀಲರಾಗಿದ್ದರು ಎಂಬುದನ್ನು ಈ ಮಾತಿನಿಂದ ನಮಗೆ ತಿಳಿಯಬಹುದು). ಬಣ್ಣಗಾರಿಕೆ ಮತ್ತು ವೇಷಭೂಷಣಗಳ ಬಗ್ಗೆ ಸ್ತ್ರೀಪಾತ್ರಧಾರಿಗಳಿಗೊಂದು ಸಂದೇಶವನ್ನು `ಯಕ್ಷಶಾಂತಲಾ-ಪಾತಾಳ’ ಗ್ರಂಥದಲ್ಲಿ  ಅವರು ತನ್ನನ್ನೇ ಉದಾಹರಿಸಿ ನೀಡಿದ್ದನ್ನು ಗಮನಿಸೋಣ- ``ನನಗೆ ವೇಷ ತಯಾರಾಗಲು ಕನಿಷ್ಠ ಮೂರು ಘಂಟೆಗಳಾದರೂ ಬೇಕು. ಯಾಕೆಂದರೆ ನಾಜೂಕು ಬಾರದಿದ್ದರೆ ನನಗೆ ಸಮಾಧಾನವಾಗುತ್ತಿರಲಿಲ್ಲ. ಮುಖದ ಬಣ್ಣದಲ್ಲಿ ಎಷ್ಟು ಕುಸುರಿ ಇರುತ್ತಿತ್ತೋ ಅಷ್ಟೇ ಕುಸುರಿ ಕೆಲಸ ಹಿಂಬದಿಯ ಜಡೆಯ ಅಲಂಕಾರದಲ್ಲಿರುವಂತೆ ಕಾಳಜಿ ವಹಿಸುತ್ತಿದ್ದೆ. ಮೇಳದ ಸೀರೆ ಎರಡು ಮೂರು ವರುಷ ಬಾಳಿಕೆ ಬರುತ್ತಿತ್ತು. ಸೆರಗು ಜಾರದಂತೆ ಈಗಿನವರು ಪಿನ್ ಹಾಕುತ್ತಾರೆ. ನಾನು ಪಿನ್ ಹಾಕುತ್ತಿರಲಿಲ್ಲ. ಒಮ್ಮೆ ನೆರಿ ಹಿಡಿದರೆ ಆಯಿತು. ಅದೇ ಜಾಗದಲ್ಲಿಯೇ ನೆರಿ ನಿಲ್ಲುತ್ತಿತ್ತು. ಹೀಗೆ ಎಚ್ಚರಿಕೆಯಿಂದ,ಶ್ರದ್ಧೆಯಿಂದ ವ್ಯವಹರಿಸಿದ ಕಾರಣ ಕೋಳ್ಯೂರು ರಾಮಚಂದ್ರ ರಾವ್, ಮಂಕುಡೆ ಸಂಜೀವ ಶೆಟ್ರು, ಕೊಕ್ಕಡ ಈಶ್ವರ ಭಟ್ ಎಂ. ಕೆ. ರಮೇಶ್ ಆಚಾರ್ಯ ಮೊದಲಾದವರು ಶ್ರೇಷ್ಠ ಸ್ತ್ರೀವೇಷಧಾರಿಗಳಾಗಿ ವಿಜೃಂಭಿಸಿದರು. ಇವರುಗಳಂತೆಯೇ ಸತತ ಪರಿಶ್ರಮದಿಂದ, ಅಧ್ಯಯನದಿಂದ ಉತ್ತಮ ಸ್ತ್ರೀವೇಷಧಾರಿಯಾಗಿ ಹೆಸರನ್ನು ಗಳಿಸಿಕೊಂಡವರು ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು.
                                                           ಶ್ರೀ ಸಂಜಯ್ ಕುಮಾರ್ ಶೆಟ್ಟಿ
                           ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದರೂ ಶ್ರೀ ಸಂಜಯ್ ಕುಮಾರ್ ಶೆಟ್ಟರು ಜನಿಸಿದ್ದು ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಎಂಬಲ್ಲಿ (10-10-1960) ತಂದೆ ಐತಪ್ಪ ಶೆಟ್ರು ಉಪ್ಪಿನಂಗಡಿ ಕರಾಯ ಸಮೀಪ ದವರು. ತಾಯಿ ಸುಂದರಿ ಶೆಟ್ಟಿ ಫರಂಗಿಪೇಟೆ ಅರ್ಕುಳ ಮೂಲದವರು. ಗೋಣಿಬೀಡಿನಲ್ಲಿ ಸಂಜಯಕುಮಾರರ ತಂದೆ ಕೃಷಿ ವ್ಯವಹಾರ ನಿರತರಾಗಿದ್ದವರು. ಸಂಜಯ ಕುಮಾರರಿಗೆ ಈಗ ವಯಸ್ಸು 58. ಆದರೆ ಈಗಲೂ ತರುಣರಂತೆ ರಂಗದಲ್ಲಿ ಪಾತ್ರವನ್ನು ನಿರ್ವಹಿಸುತ್ತಾರೆ. ಆರೋಗ್ಯವನ್ನು ಕಾಪಿಟ್ಟುಕೊಂಡು, ದೇವರ, ತಂದೆ-ತಾಯಿಯರ ಕೊಡುಗೆಯಾದ ರೂಪವನ್ನು ಉಳಿಸಿಕೊಂಡು ಈಗಲೂ ಸ್ತ್ರೀಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಗೋಣಿಬೀಡು ಹೊಯ್ಸಳ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ, ಆ ಕಾಲದಲ್ಲಿ ಧರ್ಮಸ್ಥಳ, ಸುರತ್ಕಲ್ಲು, ಕುಂಡಾವು, ಸುಬ್ರಹ್ಮಣ್ಯ ಮೇಳಗಳು ಮಲೆನಾಡ ಪ್ರದೇಶಗಳಲ್ಲೂ (ಘಟ್ಟ) ತಿರುಗಾಟ ನಡೆಸುತ್ತಿದ್ದವು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಗೋಣಿಬೀಡು ಪರಿಸರದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ತಪ್ಪದೇ ನೋಡುತ್ತಿದ್ದರು. ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಸಂಜಯರ ಸೋದರ ಬಂಧು. ಧರ್ಮಸ್ಥಳ ಮೇಳ ಘಟ್ಟಕ್ಕೆ ತಿರುಗಾಟಕ್ಕೆ ಬಂದಾಗ ಅವರ ಜತೆ ಎಲ್ಲಾ ಆಟಗಳನ್ನೂ ನೋಡುವ ಅವಕಾಶ ಸಂಜಯ ಕುಮಾರರಿಗೆ ಒದಗಿತು. ಅವರ ವೇಷ ನೋಡಿ ನನಗೆ ಸ್ಫೂರ್ತಿ ಬಂತು. ನಾನೂ ಕಲಾವಿದನಾಗಬೇಕೆಂಬ ಆಸೆ ಮೂಡಿತು. ಕುಂಡಾವು ಮೇಳದ ಕ್ರಿಶ್ಚನ್ ಬಾಬು ಅವರ ವೇಷ ನೋಡಿಯೂ ಆಸಕ್ತಿ ಹೆಚ್ಚಿತು ಎಂದು ಬಾಲ್ಯದ ದಿನಗಳನ್ನು ಸಂಜಯಕುಮಾರರು ನೆನಪಿಸುತ್ತಾರೆ. ಯಕ್ಷಗಾನದ ಸಿಡಿಲಮರಿ ಕ್ರಿಶ್ಚನ್ ಬಾಬು ಅವರು ಕುಂಡಾವು ಮೇಳ ಘಟ್ಟಕ್ಕೆ ಬಂದಾಗ ಒತ್ತಾಯ ಮಾಡಿ ಸಂಜಯರಲ್ಲಿ ವೇಷ ಮಾಡಿಸಿದರಂತೆ. ಸ್ಫುರದ್ರೂಪಿಯಾದ ಸಂಜಯರು ಬಾಲಕೃಷ್ಣ ಮತ್ತು ಬಾಲ ಅಯ್ಯಪ್ಪ ಮೊದಲಾದ ವೇಷಗಳನ್ನು ಮಾಡಿದರು. ಆಗ ಕೊಕ್ಕಡ ಸುಬ್ರಾಯ ಆಚಾರ್ಯರು ಕುಂಡಾವು ಮೇಳದ ಭಾಗವತರಾಗಿದ್ದರು (1975).
                         ಕಲಾವಿದನಾಗಬೇಕು ಎಂಬ ಆಸೆ ಚಿಗುರೊಡೆದು ನಾಟ್ಯ ಕಲಿಯಲು 1975-76ರಲ್ಲಿ ಸಂಜಯ ಕುಮಾರರು ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು. ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಆದಿಸುಬ್ರಹ್ಮಣ್ಯ ಮೇಳವನ್ನು ಸೇರಿದರು. ಬಂಧುಗಳಾದ ಬಳ್ಳಂಬೆಟ್ಟು ಶೀನ ಭಂಡಾರಿಯವರು ಸಂಚಾಲಕರಾಗಿದ್ದರು. ತುಳು, ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯುತ್ತಿತ್ತು. ಅನಿರೀಕ್ಷಿತವಾಗಿ ಮೊದಲ ವರುಷವೇ ಪ್ರಧಾನ ವೇಷಗಳು ದೊರೆಯಿತು. ಶೇಖರ ಭಂಡಾರಿಯವರ ಅನುಪಸ್ಥಿತಿಯಲ್ಲಿ ಸಂಜಯರ ಪರಶುರಾಮ ಪಾತ್ರವು ರಂಜಿಸಿತು. ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಸದುಪಯೋಗ ಪಡಿಸಿಕೊಂಡರು. ಕಣಿಯೂರು ನಾರಾಯಣ ಆಚಾರ್ಯರು, ಕಾಂಚನ ಸಂಜೀವ ರೈಗಳು, ಗುಡಿಗಾರ ಪೊಳಲಿ ಲೋಕಯ್ಯ, ಪುತ್ತೂರು ಕೃಷ್ಣ ಭಟ್, ಮೂಡುಬಿದಿರೆ ಕೃಷ್ಣ ರಾವ್ ಮೊದಲಾದವರ ಒಡನಾಟವೂ ಸಂಜಯರ ಪ್ರತಿಭೆ ಅರಳಲು ಸಹಾಯವಾಯಿತು. ``ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಗರಡಿಯಲ್ಲಿ ಕಲಾವಿದರು ತಯಾರಾಗುತ್ತಿದ್ದರು. ಅದು ಕಲಾವಿದರನ್ನು ಸಿದ್ಧಗೊಳಿಸುವ ಕಾರ್ಖಾನೆಯಾಗಿತ್ತು. ಹುರಿದುಂಬಿಸಿ ಅವಕಾಶ ಕೊಡುತ್ತಿದ್ದರು. ನನಗವರು ಗಾಡ್ ಫಾದರ್ ಎಂದು ಸಂಜಯರು ಹೇಳುತ್ತಾರೆ. ಶ್ರೀಧರ ಭಂಡಾರಿಯವರ ಜತೆಯಾಗಿ ಕಾಂಚನ ಸಂಜೀವ ರೈಗಳ ಜತೆ ಕಸೆ ಸ್ತ್ರೀವೇಷಗಳನ್ನೂ ಮಾಡುತ್ತಾ, ಕುಶ, ಲವ, ಶ್ರೀಕೃಷ್ಣ, ಅಯ್ಯಪ್ಪ, ಅಭಿಮನ್ಯು, ಚಂಡಮುಂಡರು, ಲಕ್ಷ್ಮಣ ಮೊದಲಾದ ಪಾತ್ರಗಳಲ್ಲಿ ರಂಜಿಸುತ್ತಾ ಪುಂಡುವೇಷಧಾರಿಯಾಗಿ ಸಂಜಯರು ಕಲಾಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಸ್ತ್ರೀವೇಷದಲ್ಲಿ ಇವರಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲವಂತೆ. ಪುತ್ರಕಳ ತಿಮ್ಮಪ್ಪ ಹಾಸ್ಯಗಾರರ ಸಹಾಯದಿಂದ ಸ್ತ್ರೀವೇಷ ಮಾಡಲು ಆರಂಭಿಸಿ, ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ 4 ವರುಷ ತಿರುಗಾಟ ನಡೆಸಿದರು. ಶ್ರೀಧರ ಭಂಡಾರಿಯವರ ಜತೆವೇಷ, ಅವರ ಅನುಪಸ್ಥಿತಿಯಲ್ಲಿ ಮುಖ್ಯ ವೇಷಗಳನ್ನೂ, ಸ್ತ್ರೀವೇಷಗಳನ್ನೂ ಮಾಡುತ್ತಿದ್ದರು. ಕ್ರಮೇಣ ಸಂಜಯರು ಸ್ತ್ರೀವೇಷಕ್ಕೆ ಹೊಂದಿ ಕೊಂಡರು. `ನಾಡಕೇದಗೆ’ ಪ್ರಸಂಗದಲ್ಲಿ ಕೇದಗೆಯ ಪಾತ್ರ ಇವರಿಗೆ ಅಪಾರ ಹೆಸರನ್ನು ಗಳಿಸಿಕೊಟ್ಟಿತು.

                          1984ರಲ್ಲಿ ಎರ್ಮಾಳು ಮೂಲದ ಮಂಡಗದ್ದೆ ಸಂಜೀವ ಶೆಟ್ರ ಪುತ್ರಿ ಪ್ರಫುಲ್ಲ ಎಂಬವರನ್ನು ವಿವಾಹವಾದ ಸಂಜಯಕುಮಾರ್ ಅವರು ಮಾವನ ಪ್ರೋತ್ಸಾಹದಂತೆ ತೀರ್ಥಹಳ್ಳಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಮುಂದುವರಿಸಿದರೆ ದೊಡ್ಡ ಉದ್ಯಮಿಯಾಗಬಹುದಿತ್ತು. ಆದರೆ ಯಕ್ಷಗಾನ ಕೈಬೀಸಿ ಕರೆಯುತ್ತಿತ್ತು. ಪುತ್ತೂರು ಮತ್ತು ಸುರತ್ಕಲ್ಲು ಮೇಳಗಳಲ್ಲಿ ಒಂದೊಂದು ವರುಷ ಕಲಾಸೇವೆಯನ್ನು ಮಾಡಿದರು. ಶೇಣಿ, ಎಂ. ಕೆ. ಪ್ರಕಾಶ್ಚಂದ್ರ ರಾವ್, ಜೋಗಿ, ವೇಣೂರು, ಮಧೂರು ಗಣಪತಿ ರಾವ್ ಇವರ ಜತೆ ಪಾತ್ರಗಳನ್ನು ನಿರ್ವಹಿಸುವ ಭಾಗ್ಯವೂ ಸಿದ್ಧಿಸಿತು. ನಂತರ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ 9 ವರ್ಷ ತಿರುಗಾಟ. ಪಟ್ಟದ ಪೆರುಮಳೆ ಪ್ರಸಂಗದ ಸೋಮಕ್ಕೆ (ಚಿನ್ನಕ್ಕೆ)ಯ ಪಾತ್ರ ಸಂಜಯರಿಗೆ ಪ್ರಸಿದ್ಧಿಯನ್ನು ನೀಡಿತು. ಆಗ ಅಳಿಕೆ ಲಕ್ಷ್ಮಣ ಶೆಟ್ಟರು ಪೆರುಮಳ ಬಲ್ಲಾಳನಾಗಿ, ಬೆಳ್ಳಾರೆ ವಿಶ್ವನಾಥ ರೈಯವರು ಕೇಮರ ಬಲ್ಲಾಳನಾಗಿಯೂ ಅಭಿನಯಿಸಿ ಪ್ರಸಂಗಕ್ಕೆ ಕಳೆಯನ್ನು ತಂದಿತ್ತರು. ಬಾವುಂದ ಚಂದುಗಿಡಿ ಪ್ರಸಂಗದ ದಮಯಂತಿ (ಅರುವದವರ ಚಂದುಗಿಡಿ), ಕಚ್ಚೂರ ಮಾಲ್ದಿ ಪ್ರಸಂಗದ ಮಾಲ್ದಿ (ಮಿಜಾರು ಹಾಸ್ಯಗಾರರ ಕಾಜುಮುಗೇರ), ಕಾಡಮಲ್ಲಿಗೆ ಪ್ರಸಂಗದ ಮದನಕಿನ್ನಿ, ಬೊಮ್ಮಕ್ಕೆ, ಮಲ್ಲಿಗೆ, ತುಂಗೆಯ ಪಾತ್ರಗಳು ಇವರಿಗೆ ಜನಪ್ರಿಯತೆಯನ್ನು ನೀಡಿದವು. ದಿನೇಶ ಅಮ್ಮಣ್ಣಾಯರ ಭಾಗವತಿಕೆ, ರಾಮದಾಸ ಸಾಮಗ, ಕೋಳ್ಯೂರು, ಅರುವ, ಮಿಜಾರು ಹಾಸ್ಯಗಾರರು ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಒಡನಾಟದಿಂದ ಸಂಜಯಕುಮಾರ ಶೆಟ್ರ ಎಲ್ಲಾ ಸ್ತ್ರೀಪಾತ್ರಗಳೂ ರಂಜಿಸಿದವು. ರಾಮದಾಸ ಸಾಮಗರ ಹರಿಶ್ಚಂದ್ರ, ನಳ ಪಾತ್ರಗಳಿಗೆ, ಚಂದ್ರವತಿ, ದಮಯಂತಿ, ಮಿಜಾರು ಅಣ್ಣಪ್ಪ ಹಾಸ್ಯಗಾರರ ಬಾಹುಕ ಪಾತ್ರಕ್ಕೆ ದಮಯಂತಿಯಾಗಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ರ ವಾಲ್ಮೀಕಿ ಪಾತ್ರಕ್ಕೆ ಸೀತೆಯಾಗಿ, ಅರುವ ಕೊರಗಪ್ಪ ಶೆಟ್ರ ಜತೆ ಹಲವು ಜೋಡಿವೇಷ, ಅಲ್ಲದೆ ಗುಂಪೆ ರಾಮಯ್ಯ ರೈ, ಪುಳಿಂಚ, ಅಳಿಕೆ, ಬೆಳ್ಳಾರೆ, ಉಪಾಧ್ಯಾಯರು, ಬಾಯಾರು ರಘುನಾಥ ಶೆಟ್ಟಿ, ಜಪ್ಪು ದಯಾನಂದ ಶೆಟ್ರ ಜತೆ ವೇಷಗಳನ್ನು ನಿರ್ವಹಿಸಿದ್ದು ವಿಶೇಷ ಅನುಭವವೆಂದು ಹೇಳುವ ಸಂಜಯಕುಮಾರರು 1995ರಲ್ಲಿ ಕ್ಷೇತ್ರ ಗಣೇಶಪುರ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಚಾಲಕನಾಗಿ ಮೇಳವನ್ನು 3 ವರ್ಷಗಳ ಕಾಲ ನಡೆಸಿದ್ದಾರೆ. ಮತ್ತೆ 1 ವರ್ಷ ಕರ್ನಾಟಕ ಮೇಳದಲ್ಲಿ ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 3 ವರ್ಷ, ಕುಂಟಾರು ಶ್ರೀ ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳದಲ್ಲಿ       3 ವರ್ಷ ವ್ಯವಸಾಯವನ್ನು ಮಾಡಿದ ಇವರು ಎಡನೀರು ಮೇಳದಲ್ಲಿ ಕಲಾಸೇವೆಯನ್ನು ಮಾಡಿರುತ್ತಾರೆ. ಯಕ್ಷಗಾನವನ್ನೂ ಕಲಾವಿದರನ್ನೂ ಪ್ರೀತಿಸುವ ಎಡನೀರು ಶ್ರೀಗಳನ್ನು ಶ್ರೀ ಟಿ. ಶ್ಯಾಮ ಭಟ್ಟರನ್ನೂ, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರನ್ನು ಭಕ್ತಿ ಗೌರವಗಳಿಂದ ಕಾಣುವ ಸಂಜಯರು ಮತ್ತೆ ಬಪ್ಪನಾಡು ಮೇಳದ ಸಂಚಾಲಕನಾಗಿ 1 ವರ್ಷ, ಮಂಗಳಾದೇವಿ ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿ ಪ್ರಸ್ತುತ 4 ವರ್ಷಗಳಿಂದ ಬಾಚಕೆರೆ ಮೇಳ (ಧರ್ಮದರ್ಶಿ ದೇಜಪ್ಪನವರ ನೇತೃತ್ವ, ಸರಪಾಡಿ ಅಶೋಕ ಶೆಟ್ರ ಸಂಚಾಲಕತ್ವ) ಮತ್ತು ಕೊಲ್ಲಂಗಾನ ಮೇಳಗಳಲ್ಲಿ (ಶ್ರೀ ಗಣಾಧಿರಾಜ ತಂತ್ರಿಗಳ ನೇತೃತ್ವ) ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.
                             ಪಾತಾಳ ಶ್ರೀ ವೆಂಕಟ್ರಮಣ ಭಟ್ಟರು, ಕೋಳ್ಯೂರು ರಾಮಚಂದ್ರ ರಾವ್, ಎಂ. ಕೆ. ಮೊದಲಾದವರ ಮೆಚ್ಚುಗೆಗೆ ಪಾತ್ರನಾದುದು ಸಂತೋಷದ ವಿಚಾರ. ಸ್ತ್ರೀವೇಷಧಾರಿಯಾಗಿ ಧನ್ಯ ಎನ್ನುವ ಸಂಜಯ ಕುಮಾರರು ಸ್ತ್ರೀಪಾತ್ರಧಾರಿಗಳು ಚಾರಿತ್ರ್ಯವನ್ನು ಉಳಿಸಿಕೊಳ್ಳಬೇಕು. ರಂಗದೊಳಗೆ ಮಾತ್ರ ಹೆಣ್ಣಾಗಿರಬೇಕು. ಹೊರಗೆ ಅವನು ಗಂಡೇ ಆಗಿರಬೇಕೆಂದೂ, ಸತತ ಅಭ್ಯಾಸ, ಪಾತ್ರೋಚಿತವಾದ ಕುಣಿತ ಮತ್ತು ಮಾತುಗಳಿಂದ ಮಾತ್ರ ಕಲಾವಿದನಾಗಲು ಸಾಧ್ಯ ಎಂಬ ಸಂದೇಶವನ್ನು ನೀಡುತ್ತಾರೆ. 2017ರಲ್ಲಿ ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಅಲ್ಲದೆ ಒಡಿಯೂರು ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ಬೋಳಾರ ಪ್ರಶಸ್ತಿ, ಅಲ್ಲದೇ 150ಕ್ಕೂ ಹೆಚ್ಚಿನ ಗೌರವ ಸನ್ಮಾನಗಳನ್ನು ಸ್ವೀಕರಿಸಿದ ಇವರಿಗೆ, ಯಕ್ಷಚಿರಕನ್ನಿಕೆ, ಯಕ್ಷಮಯೂರಿ, ಯಕ್ಷನಾಟ್ಯಲಲಿತೆ, ಯಕ್ಷಮಣಿ ಮೇಖಲಾ, ಯಕ್ಷಸಿರಿ, ಯಕ್ಷನಂದಿನಿ ಮೊದಲಾದ ಬಿರುದುಗಳು ದೊರೆತವು. ಮಸ್ಕತ್, ಬಹ್ರೈನ್ಗಳಲ್ಲಿ ಹಲವಾರು ಪ್ರದರ್ಶನಗಳಲ್ಲಿ ಭಾಗಿಯಾಗಿ (5 ಬಾರಿ ವಿದೇಶ ಪ್ರವಾಸ) ಬಂದ  ಶ್ರೀ ಸಂಜಯಕುಮಾರ ಶೆಟ್ಟರು ಪ್ರಸ್ತುತ ಮಂಗಳೂರು ಮಹಾನಗರದಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಮತ್ತು ಮೂವರು ಮಕ್ಕಳು ಮತ್ತು ಮೊಮ್ಮಗನೊಂದಿಗೆ ಸಂತೃಪ್ತ ಕುಟುಂಬ ಇವರದು. ಹಿರಿಯ ಮಗಳು ದೀಕ್ಷಾ MBA, M.Com. ವಿವಾಹಿತೆ. ಪ್ರಸ್ತುತ NITKಯಲ್ಲಿ PhD. ಮಾಡುತ್ತಿದ್ದಾಳೆ.
ಪುತ್ರರು : ದರ್ಶನ್, ಮೆಕ್ಯಾನಿಕ್ ಇಂಜಿನಿಯರ್, ನಿಟ್ಟೆಯಲ್ಲಿ ಕಲಿಕೆ, ಪ್ರಸ್ತುತ ದುಬಾೈಯಲ್ಲಿ Dept of Economic Development ನಲ್ಲಿ ಉದ್ಯೋಗಿ, ದಕ್ಷಿಣ್, Fashion Designer. ಮೊಮ್ಮಗ ತೀಕ್ಷ್ಣ್ 8ನೇ ತರಗತಿ ವಿದ್ಯಾರ್ಥಿ.
ಶ್ರೀ ಸಂಜಯ ಕುಮಾರ್ ಶೆಟ್ಟರಿಗೆ ಶುಭಾಶಯಗಳು. ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ. ದೇವರು ಸಕಲ ಭಾಗ್ಯಗಳನ್ನು ಅನುಗ್ರಹಿಸಲಿ ಎಂದು ಕಲಾಭಿಮಾನಿಗಳ ಪರವಾಗಿ ಹಾರೈಕೆಗಳು.

- ರವಿಶಂಕರ್ ವಳಕ್ಕುಂಜ

Comments

  1. ಚೊಕ್ಕದಾದ ಬರಹ, ಮಿತಿಯೊಳಗೆ ಪೂರ್ತಿ ಅನಾವರಣ...

    ReplyDelete

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು