ರಂಗದ ರಾಜ ಮಧೂರು ಶ್ರೀ ರಾಧಾಕೃಷ್ಣ ನಾವಡ
ಯಕ್ಷಗಾನ ಎಂಬುದು ಒಂದು ಗಂಡುಕಲೆ. ಮೇರುಕಲೆ. ಎಲ್ಲಾ ಕಲಾಪ್ರಕಾರಗಳ ಮೇಲೂ ನಮಗೆ ಗೌರವವಿದೆ. ಪ್ರೀತಿಯಿದೆ. ನೋಡಿ ನಾವು ಆನಂದಿಸುತ್ತೇವೆ. ಆದರೂ ಆಕಾಶಕ್ಕೆ ಆಕಾಶವೇ ಸಾಟಿ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಕಲೆ, ಕಲಾವಿದ, ಪ್ರೇಕ್ಷಕರು ಈ ಮೂರು ವಿಚಾರಗಳು ಪೂರಕವಾಗಿ ಇದ್ದರೂ, ಕಲಾವಿದನಿಗಿಂತ ಕಲೆಯೇ ಶ್ರೇಷ್ಠ. ಪ್ರೇಕ್ಷಕರು ಶ್ರೇಷ್ಠರು. ಪ್ರೇಕ್ಷಕರನ್ನು ಸಭಾಸದರು ಎಂದು ಸಂಬೋಧಿಸಲಾಗುತ್ತದೆ. ಹಾಗಾಗಿಯೇ ಕಲಾವಿದ ರಂಗಪ್ರವೇಶ ಮಾಡಿದಾಗ ಸಭಾ ವಂದನೆಯನ್ನು ಮಾಡುತ್ತಾನೆ. ಕಲಾವಿದನಿಗಾಗಿ ಕಲೆಯಲ್ಲ. ಪ್ರೇಕ್ಷಕರೂ ಅಲ್ಲ. ಕಲೆಗಾಗಿ, ಪ್ರೇಕ್ಷಕರಿಗಾಗಿ ಕಲಾವಿದ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರುಗಳೆಂಬ ಅದೆಷ್ಟೋ ನಕ್ಷತ್ರಗಳು ನಮಗೆ ಕಾಣಬಹುದು. ಕಲಾವಿದರೊಬ್ಬರ ಬಗ್ಗೆ ಬರೆಯಲು ಇದೊಂದು ಕಿರುಪ್ರಯತ್ನ ಅಷ್ಟೆ.
ಸುಂದೋಪಸುಂದ ಕಾಳಗದ 'ಸುಂದ' ನಾಗಿ ಮಧೂರು ಶ್ರೀ ರಾಧಾಕೃಷ್ಣ ನಾವಡ
ಫೋಟೋ : ಶ್ರೀ ಮುರಳಿ ನಾವಡ
ಪ್ರಸ್ತುತ ಇವರು ಕಾಸರಗೋಡಿನಲ್ಲಿ ವಾಸವಾಗಿದ್ದರೂ ಮಧೂರು ರಾಧಾಕೃಷ್ಣ ನಾವಡರೆಂದೇ ಪ್ರಸಿದ್ಧರು. ಕೇರಳ ರಾಜ್ಯ ಕಾಸರಗೋಡು ಸಮೀಪದ ಮಧೂರು (ಬನ್ನೂರು) ಇವರ ಹುಟ್ಟೂರು. ಶ್ರೀ ವಿಷ್ಣು ನಾವಡ ಮಧೂರು, ಲೀಲಾವತಿ ಅಮ್ಮ ದಂಪತಿಗಳ 5 ಮಂದಿ ಮಕ್ಕಳಲ್ಲಿ (4 ಗಂಡು, 1 ಹೆಣ್ಣು) ಇವರು ಹಿರಿಯರು. ಉಭಯತಿಟ್ಟುಗಳ ಖ್ಯಾತ ಪುಂಡು ವೇಷಧಾರಿ ಶ್ರೀ ಉದಯ ನಾವಡರು ಇವರ ತಮ್ಮ. 1962 ಆಗಸ್ಟ್ 1ರಂದು ಜನಿಸಿದ ಶ್ರೀ ರಾಧಾಕೃಷ್ಣ ನಾವಡರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲ್ಲಕಟ್ಟ ಶಾಲೆಯಲ್ಲೂ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೂಡ್ಲು ಗೋಪಾಲಕೃಷ್ಣ ಹೈಸ್ಕೂಲಿನಲ್ಲೂ ಪೂರೈಸಿದರು. ಪದವಿಪೂರ್ವ ವಿದ್ಯಾಭ್ಯಾಸ ಮಾಡಿದ್ದು (ಪಿ.ಡಿ.ಸಿ.) ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಕಲ್ಲಕಟ್ಟ ಶಾಲೆಗೆ ಬಂದು ಮರ್ದಂಬೈಲು ಚಂದ್ರಶೇಖರ ರಾಯರಿಂದ (ಹವ್ಯಾಸೀ ಉತ್ತಮ ಕಲಾವಿದರು) ಯಕ್ಷಗಾನ ನಾಟ್ಯ ಕಲಿತರು. ರಂಗಪ್ರವೇಶ ಕಲ್ಲಕಟ್ಟ ಶಾಲೆಯಲ್ಲಿ. ಶಾಲಾ ಮಕ್ಕಳ ಆಟ ಸೀತಾಪಹಾರ ಪ್ರಸಂಗದಲ್ಲಿ ರಾವಣನಾಗಿ. ನಂತರ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ (ಕೂಡ್ಲು) ಖ್ಯಾತ ಕಲಾವಿದ ಕೂಡ್ಲು ನಾರಾಯಣ ಬಲ್ಯಾಯರಿಂದ ನಾಟ್ಯವನ್ನು ಅಭ್ಯಸಿಸಿದರು. ಪಿ.ಯು.ಸಿ.ಯಲ್ಲಿ ಇಂಗ್ಲಿಷ್‍ನಲ್ಲಿ ಅನುತ್ತೀರ್ಣನಾದುದು. ಯಕ್ಷಗಾನಕ್ಕೆ ಹೋಗಿ ಕ್ಲಾಸ್‍ನಲ್ಲಿ ನಿದ್ದೆ ಮಾಡಿದ್ದು ಕಾರಣವಿರಬಹುದೆಂದು ನಾವಡರು ನಿಸ್ಸಂಕೋಚದಿಂದ ಹೇಳುತ್ತಾರೆ.
ಮೊದಲ ತಿರುಗಾಟ ಕುಬಣೂರು ಶ್ರೀಧರ ರಾಯರ ನೇತೃತ್ವದ ಕುತ್ಯಾಳ ಮೇಳದಲ್ಲಿ. ಆಗ ಅಗರಿ ಶ್ರೀನಿವಾಸ ಭಾಗವತರು ಇವರಿಗೆ ಪ್ರತಿಯೊಂದು ವೇಷಕ್ಕೂ ಹೇಗೆ ಮಾತನಾಡಬೇಕೆಂದು ಬರೆದುಕೊಟ್ಟಿದ್ದರಂತೆ. ಹೊಸಹಿತ್ಲು ಮಹಾಲಿಂಗ ಭಟ್, ಕುದ್ರೆಕೋಡ್ಳು ರಾಮ ಭಟ್, ಕೂಡ್ಲು ನಾರಾಯಣ ಬಲ್ಯಾಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಕೋಡ್ಲ ಗಣಪತಿ ಭಟ್ ಮೊದಲಾದವರ ಒಡನಾಟ, ನಂತರ ಶ್ರೀಧರ ಭಂಡಾರಿ ಸಂಚಾಲಕರಾಗಿದ್ದ ಪುತ್ತೂರು ಮೇಳದಲ್ಲಿ ಅಮ್ಮಣ್ಣಾಯರು, ಪೆರುವಾಯಿ, ಅರುವ, ಕ್ರಿಶ್ಚನ್ ಬಾಬು, ಕಾವೂರು ಕೇಶವ, ಅಡ್ಕಸ್ಥಳ ಜಗನ್ನಾಥ ಶೆಟ್ಟರಂತಹ ಪ್ರಬುದ್ಧ ಕಲಾವಿದರ ಒಡನಾಟ ಕಲಾವಿದನಾಗಿ ಬೆಳೆಯಲು ನಾವಡರಿಗೆ ಅನುಕೂಲವಾಯಿತು. ನಂತರ ಶ್ರೀ ಕಸ್ತೂರಿ ಪೈ ಸಹೋದರರ ಸಂಚಾಲಕತ್ವದ ಸುರತ್ಕಲ್ಲು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿದರು. ಅಗರಿ, ಪದ್ಯಾಣ ಗಣಪತಿ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಕಡಬ ನಾರಾಯಣ ಆಚಾರ್ಯ, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶ ಆಚಾರ್ಯ, ಕುಡ್ತಡ್ಕ ಬಾಬು, ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದವರಿದ್ದ ಗಜಮೇಳ ಅದಾಗಿತ್ತು. ಜನಾರ್ಧನ ಗುಡಿಗಾರ, ಪೆರ್ಲ ಜಗನ್ನಾಥ ಶೆಟ್ಟಿ, ಉಜಿರೆ ರಾಜ, ವೇಣೂರು ಸದಾಶಿವ ಕುಲಾಲ್, ಬಣ್ಣದ ಗೋಪಾಲ ಭಟ್ ಮೊದಲಾದವರು ಸಹಕಲಾವಿದರಾಗಿದ್ದರು. ಆಗ ತಮ್ಮ ಉದಯ ನಾವಡರೂ ಜತೆಗಿದ್ದರಂತೆ. ಶನೀಶ್ವರ ಮಹಾತ್ಮ್ಯೆಯಲ್ಲಿ ವಿಕ್ರಮನನ್ನು ದೋಚುವ ಕಳ್ಳರ ವೇಷಗಳನ್ನು ರಾಕ್ಷಸರಂತೆ ಚಿತ್ರಿಸಿ ಇವರೂ ಸಹಕಲಾವಿದರೂ ಆರೋಗ್ಯಕರ ಸ್ಪರ್ಧೆಯಲ್ಲಿ ನಿರ್ವಹಿಸುತ್ತಿದ್ದರಂತೆ (ಕಿರೀಟ ವೇಷ). ಕಿರೀಟವೇಷದಲ್ಲಿ ಹಿಡಿತ ಸಿಗಲು ಇದು ಕಾರಣವಾಯಿತು. ಅಂತೂ ಸುರತ್ಕಲ್ ಮೇಳದ ತಿರುಗಾಟ ಮರೆಯಲಾಗದ ಅನುಭವ ಎಂಬುದು ಶ್ರೀ ರಾಧಾಕೃಷ್ಣ ನಾವಡರ ಅಭಿಪ್ರಾಯ. ಶೇಖರ ಬೆಳ್ಮಣ್ಣು ನೇತೃತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ, ಸಂಜಯ ಕುಮಾರ್‍ರ ಗಣೇಶಪುರ ಮೇಳ, ಶ್ರೀಧರ ಭಂಡಾರಿಯವರ ಕಾಂತಾವರ ಮೇಳ, ತನ್ನದೇ ಸಂಚಾಲಕತ್ವದ ಮಧೂರು ಮೇಳ, ಶಂಕರ ಆಳ್ವರ ಬಪ್ಪನಾಡು ಮೇಳದಲ್ಲಿ 9 ವರ್ಷ, ಸಾಲಿಗ್ರಾಮ ಮೇಳದಲ್ಲಿ 1 ವರ್ಷ (ತಮ್ಮ ಉದಯ ನಾವಡರೂ ಸಾಲಿಗ್ರಾಮ ಮೇಳದಲ್ಲಿದ್ದರು) ಪೆರ್ಡೂರು ಮೇಳದಲ್ಲಿ 1 ವರ್ಷ, ಪುತ್ತೂರು ಗಂಗಾಧರ ಭಂಡಾರಿಗಳ ಕುಂಟಾರು ಮೇಳದಲ್ಲಿ 2 ವರ್ಷ, ಎಡನೀರು ಮೇಳದಲ್ಲಿ 9 ವರ್ಷಗಳ ತಿರುಗಾಟ ನಡೆಸಿದ ನಾವಡರು ಪ್ರಸ್ತುತ 4 ವರ್ಷಗಳಿಂದ ವಿನೋದ ಕುಮಾರ್ ಬಜಪೆ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ.
ಮೊದಲ ನಾಲ್ಕು ವರ್ಷ ನಿರಾಸೆಯಾಗಿತ್ತು. ನನಗಿದು ಆಗದು. ಯಕ್ಷಗಾನ ಬೇಡ ಎಂದೆನಿಸಿದರೂ ಕ್ರಮೇಣ ಹೊಂದಿಕೊಂಡೆ. ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬ ಮಾತಿದೆ. ಯುದ್ಧ ಎದುರಾದಾಗ ಅಭ್ಯಾಸ ಮಾಡುವುದಲ್ಲ. ಅದು ನಿರಂತರವಾಗಿರಬೇಕು. ಹಾಗಾದರೆ ಮಾತ್ರ ಗೆಲುವು. ಕತ್ತಿಯನ್ನು ದಿನಾ ಮಸೆದರೆ ಮಾತ್ರ ಅದು ಹರಿತವಾಗಿರುತ್ತದೆ. ಕಲಾವಿದನೂ ಹಾಗಿರಬೇಕು. ಸತತ ಅಭ್ಯಾಸಿಯಾಗಿರಬೇಕು. ನಿರಂತರ ಕಸುಬು ಮಾಡಬೇಕು. ಶುದ್ಧವಾದ ಕನ್ನಡ ಮಾತನಾಡುವ ಕಲೆ ಯಕ್ಷಗಾನ ಕಲಾವಿದನಿಗೆ ಅತೀ ಅಗತ್ಯ ಎಂದು ನಾವಡರು ಅಭ್ಯಾಸಿಗಳಿಗೆ, ಕಿರಿಯ ಕಲಾವಿದರಿಗೆ ಸಂದೇಶವನ್ನೂ ನೀಡುತ್ತಾರೆ. ಕಿರೀಟ ಮತ್ತು ನಾಟಕೀಯ ವೇಷಗಳು ನಾವಡರಿಗೆ ಹೆಸರನ್ನು ತಂದುಕೊಟ್ಟವು. ಕಂಸ, ನರಕಾಸುರ, ಋತುಪರ್ಣ, ಅತಿಕಾಯ, ಇಂದ್ರಜಿತು, ಕಾರ್ತವೀರ್ಯ, ವೀರವರ್ಮ, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ರಂಜಿಸಿದರೂ ಭಸ್ಮಾಸುರನ ಪಾತ್ರವನ್ನು ಪ್ರೇಕ್ಷಕರು ತುಂಬಾ ಇಷ್ಟಪಟ್ಟರು. ಪ್ರಸ್ತುತ ಅನೇಕ ಉತ್ತಮ ಕಲಾವಿದರುಗಳಿದ್ದಾರೆ. ಎಲ್ಲರನ್ನೂ ಗೌರವಿಸುವೆ. ಎಳವೆಯಲ್ಲಿ ಪುತ್ತೂರು ನಾರಾಯಣ ಹೆಗ್ಡೆಯವರ ವೇಷಗಳು ನನಗಿಷ್ಟವಾಗಿತ್ತು. ಅವರ ವೇಷಗಳನ್ನು ನೋಡಿ ನಾನೂ ಕಲಾವಿದನಾಗಬೇಕೆಂಬ ಬಯಕೆ ಹುಟ್ಟಿತು.
ನಾನು ಪರಿಪೂರ್ಣನಲ್ಲ. ಪಾತ್ರಗಳಿಗೆ ನನ್ನಿಂದಾಗುವ ನ್ಯಾಯವನ್ನು ಒದಗಿಸುವೆ. ಪ್ರೇಕ್ಷಕರ ನಿರ್ಣಯವನ್ನು ತಲೆಬಾಗಿ ಸ್ವೀಕರಿಸುವೆ ಎಂದು ವಿನೀತರಾಗಿ ಹೇಳುವ ನಾವಡರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು. 1986ರಲ್ಲಿ ಜಯಲಕ್ಷ್ಮಿಯವರನ್ನು ವಿವಾಹವಾದರು. (ಇವರು ಕೇರಳ ರಾಜ್ಯ ಸರಕಾರದ ಉದ್ಯೋಗಿ, ಕಾಸರಗೋಡಿನಲ್ಲಿ ತಹಶೀಲ್ದಾರ್. ಇವರು ಖ್ಯಾತ ಕಲಾವಿದ ಸುಬ್ರಾಯ ಹೊಳ್ಳರ ಅಕ್ಕ). ನಾವಡರಿಗೆ ಮೂರು ಮಂದಿ ಮಕ್ಕಳು. ಹಿರಿಯ ಮಗಳು ನೇತ್ರ Bio Technology ಇಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನಲ್ಲಿ ಉದ್ಯೋಗಿ. ವಿವಾಹಿತೆ. ಪುತ್ರ ವಿನಾಯಕ ನಾವಡ Electronics and Communicationನಲ್ಲಿ ಇಂಜಿನಿಯರಿಂಗ್ ಪದವೀಧರ. ಅಬುದಾಭಿಯಲ್ಲಿ ಉದ್ಯೋಗಿ. ಕಿರಿಯ ಪುತ್ರ ಮುರಳಿ ನಾವಡ ಕಾಸರಗೋಡಿನಲ್ಲಿ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹವ್ಯಾಸೀ ಫೋಟೋಗ್ರಾಫರ್ ಮತ್ತು ಹವ್ಯಾಸೀ ಕಲಾವಿದರೂ ಹೌದು. ು

Comments
Post a Comment