ಹಾಸ್ಯಗಾರ - ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ

                          ಆತ್ಮೀಯರಿಂದ ಮಾಪಣ್ಣ, ಮಹಾಬಲಣ್ಣ ಎಂದೇ ಕರೆಸಿಕೊಳ್ಳುವ ಶ್ರೀ ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ (ಹಾಸ್ಯಗಾರ) ಇವರನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಚೆನ್ನಾಗಿ ಬಲ್ಲರು. ಮುಳಿಯಾಲ ಈಶ್ವರ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ ಫೆಬ್ರವರಿ 13, 1961ರಂದು ಶ್ರೀ ಕೆ. ಮಹಾಬಲೇಶ್ವರ ಭಟ್ ಜನಿಸಿದರು. ಕೊಮ್ಮೆ, ಕೋಳ್ಯೂರು ಇವರ ಹುಟ್ಟೂರು (ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ) ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಡ್ಲಮೊಗರು ಶ್ರೀ ವಾಣೀವಿಜಯ ಶಾಲೆಯಲ್ಲಿ ಪೂರೈಸಿದ ಇವರು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನದಲ್ಲಿ ಅಪಾರ ಆಸಕ್ತಿ. ರಜಾದಿನಗಳಲ್ಲಿ ಮನೆಯ ಪರಿಸರದಲ್ಲಿ ನಡೆಯುತ್ತಿದ್ದ ಆಟ, ಕೂಟಗಳನ್ನು ಬಿಟ್ಟವರಲ್ಲ. ನಾನೂ ಕಲಾವಿದನಾಗಬೇಕೆಂಬ ಆಸೆ ತನ್ನಿಂದ ತಾನೆ ಹುಟ್ಟಿಕೊಂಡಿತು.
                                                       ಕೆ. ಮಹಾಬಲೇಶ್ವರ ಭಟ್ ಭಾಗಮಂಡಲ

                     ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಲಿತ ಕಲಾಕೇಂದ್ರಕ್ಕೆ ಸೇರಿಕೊಂಡ ಮಹಾಬಲಣ್ಣ  ಶ್ರೀ ಕೆ. ಗೋವಿಂದ ಭಟ್ಟರಿಂದ ಹೆಜ್ಜೆಗಾರಿಕೆ ಕಲಿತರು. ಮಹಾಬಲೇಶ್ವರ ಭಟ್ಟರು ಪ್ರಥಮವಾಗಿ ಗೆಜ್ಜೆಕಟ್ಟಿ ವೇಷ ಮಾಡಿದ್ದು ಉಪ್ಪಳ ಶ್ರೀ ಭಗವತೀ ಯಕ್ಷಗಾನ ಮಂಡಳಿಯಲ್ಲಿ. ನಂತರ ಕಟೀಲು ಮೇಳದಲ್ಲಿ ಎರಡು ವರ್ಷಗಳ ಕಾಲ ತಿರುಗಾಟ ನಡೆಸಿದರು. ಅಲ್ಲಿ ಕೋಡಂಗಿ, ಬಾಲ ಗೋಪಾಲರು ಮತ್ತು ಪ್ರಸಂಗದಲ್ಲಿ ತನಗೆ ಸಿಕ್ಕ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು. ತದನಂತರ ಕದ್ರಿ ಮೇಳದಲ್ಲಿ ಹತ್ತು ವರ್ಷಗಳ ತಿರುಗಾಟ ನಡೆಸಿದರು. ನಂತರ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರ್ಷ, ಅರುವ ಮೇಳದಲ್ಲಿ ಎರಡು ವರ್ಷ ಕಲಾಮಾತೆಯ ಸೇವೆಯನ್ನು ಮಾಡಿದರು. ಬಪ್ಪನಾಡು, ಮಲ್ಲ, ಕೂಡ್ಲು, ಕೊಲ್ಲಂಗಾನ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಅಭಿನಯಿಸಿ ಪ್ರಸ್ತುತ ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ.
                             ಶ್ರೀ ಎಸ್. ಎನ್. ಪಂಜಾಜೆ ನಿರ್ದೇಶನದಲ್ಲಿ ಅಖಿಲ ಭಾರತ ಯಕ್ಷಗಾನ ಸಂಘದ ಜತೆ ಜರ್ಮನಿ ಪ್ರವಾಸ ಕೈಗೊಂಡು ಬರ್ಲಿನ್‍ನಲ್ಲಿ ನಡೆದ ಪ್ರದರ್ಶನದಲ್ಲಿ ಪಾಲುಗೊಂಡ ಹಿರಿಮೆ ಭಾಗಮಂಡಲ ಶ್ರೀ ಮಹಾಬಲೇಶ್ವರ ಭಟ್ಟರದ್ದು. ಮಳೆಗಾಲದಲ್ಲಿ ಹತ್ತು ವರುಷಗಳ ಕಾಲ ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ತಂಡದಲ್ಲಿ ಚೆನ್ನೈ, ಬೆಂಗಳೂರು, ಕೊಯಂಬತ್ತೂರು, ವಿಜಯವಾಡ, ಹೈದರಾಬಾದ್ ಮೊದಲಾದೆಡೆ ನಡೆದ ಪ್ರದರ್ಶನ ಗಳಲ್ಲಿ ಅಭಿನಯಿಸಿದರು.
                            1998ರಲ್ಲಿ ಧರ್ಮಸ್ಥಳದ ಶ್ರೀ ನರೇಂದ್ರ ಮಾಸ್ತರ್ ನೇತೃತ್ವದಲ್ಲಿ ಮುಂಬೈಯ ಅಪ್ಳಾ ಉತ್ಸವ್‍ನಲ್ಲಿ ಭಾಗವಹಿಸಿದ ಶ್ರೀ ಭಾಗಮಂಡಲ ಮಹಾಬಲೇಶ್ವರ ಭಟ್ಟರು 2001ರಲ್ಲಿ ಕಾಸರಗೋಡು ಚಿನ್ನಾ ನೇತೃತ್ವದಲ್ಲಿ ಕುಂಬಳೆಯಿಂದ-ಬೆಂಗಳೂರು ವರೇಗೆ ಸಾಗಿದ ‘‘ಯಕ್ಷತೇರು’’ ಎಂಬ ಸಂಚಾರಿ ಯಕ್ಷಗಾನೋತ್ಸವದಲ್ಲಿ ಪಾಲುಗೊಂಡಿದ್ದರು. ಇವರ ಕಲಾಸೇವೆಗೆ 1999ರಲ್ಲಿ ಮಡಿಕೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಒಲಿದು ಬಂತು. 1999ರಿಂದ 2010ರ ತನಕ ಕಾವೇರಿ ಜೂನಿಯರ್ ಕಾಲೇಜು, ಎಫ್.ಎಂ.ಸಿ. ಕಾಲೇಜು, ಮಾದೇಶ್ವರ ಪದವಿಪೂರ್ವ ಕಾಲೇಜು ಮದೆನಾಡು, ಹಿರಿಯ ಪ್ರಾಥಮಿಕ ಶಾಲೆ ಜೋಡುಪಾಲ (ಕೊಡಗು   ಜಿಲ್ಲೆ) ಮೊದಲಾದೆಡೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯನ್ನು ನಡೆಸಿದರು. ಈ ಸಂದರ್ಭದಲ್ಲಿ ಭಾಗಮಂಡಲದಲ್ಲಿ ವಾಸವಾಗಿದ್ದರು.
                              ಹಾಗಾಗಿ ಇವರು ಭಾಗಮಂಡಲ ಮಹಾಬಲೇಶ್ವರ ಭಟ್ಟರೆಂದೇ ಕರೆಸಿಕೊಂಡರು. ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲೂ ಇವರು ಯಕ್ಷಗಾನ ತರಗತಿಯನ್ನು ನಡೆಸಿದರು. 2016ರಲ್ಲಿ ದಸರಾ ಚಿತ್ತಾರ ಪ್ರಶಸ್ತಿಯನ್ನು ಪಡೆದಿರುವ ಇವರು ವೃತ್ತಿಪರ ಕಲಾವಿದರನ್ನು ಸೇರಿಸಿ ‘‘ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ತಂಡ (ರಿ.)’’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಹಂಪಿ, ಮೈಸೂರು ಮತ್ತು ಕೊಡಗಿನಾದ್ಯಂತ ಯಕ್ಷಗಾನ ಪ್ರದರ್ಶನಗಳು ನಡೆಯುವುದಕ್ಕೆ ಕಾರಣರಾದರು.

Comments

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು