ಸಂಘಟಕರಿಗೆ ಆಪತ್ಬಾಂಧವ - ಕಲಾವಿದ, ಉದ್ಯಮಿ ಪದ್ಯಾಣ ಶ್ರೀ ಪರಮೇಶ್ವರ ಭಟ್

                               ಶ್ರೀ ಪದ್ಯಾಣ ಪರಮೇಶ್ವರ ಭಟ್ ಇವರು ಬೆಳ್ಳಾರೆಯ ಕಿರಣ್ ಪ್ರಿಂಟರ್ಸ್ ಸಂಸ್ಥೆಯ ಮಾಲಿಕರು. ಇವರು ಒಬ್ಬ ಅತ್ಯುತ್ತಮ ಕಲಾವಿದರೂ, ಸಂಘಟಕರೂ ಹೌದು. ಸುಳ್ಯ, ಪುತ್ತೂರು ತಾಲೂಕಿನ ಆಟಕೂಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ವ್ಯವಹಾರದ ಒತ್ತಡದಿಂದ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದರೂ ಅನಿವಾರ್ಯ ಪ್ರಸಂಗ ಒದಗಿದರೆ ತಕ್ಷಣ ಬಂದು ಪ್ರದರ್ಶನವು ಯಶಸ್ವಿಯಾಗಲು ಸಹಕರಿಸುತ್ತಾರೆ. ಯಕ್ಷಗಾನ ಕಲೆಯ ಮೇಲಿರುವ ಗೌರವ ಇದಕ್ಕೆ ಕಾರಣವಿರಬಹುದು. ಸಂಘಟಕನಾಗಿ ತಾನು ಅನುಭವಿಸಿದ ಕಷ್ಟವಿರಬಹುದು, ಪ್ರೇಕ್ಷಕರಿಗೆ ರಸಭಂಗವಾಗದಿರಲಿ ಎಂದಿರಬಹುದು. ಅವರ ಸರಳ ವ್ಯಕ್ತಿತ್ವವೂ ಕಾರಣವಿರಬಹುದು. ಏನೇ ಇರಲಿ ಪರಮೇಶ್ವರ ಭಟ್ಟರು ಯಕ್ಷಗಾನವನ್ನು ಪ್ರೀತಿಸಿ ಆರಾಧಿಸುತ್ತಾರೆ. ಕಲಾವಿದರನ್ನು ಗೌರವಿಸುತ್ತಾರೆ ಎಂಬುದಂತೂ ನಿಜ. ಹಾಗಾಗಿಯೇ ಬೆಳ್ಳಾರೆ ಪರಿಸರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವ ಕಲಾವಿದರು ಇವರನ್ನೊಮ್ಮೆ ಭೇಟಿಯಾಗಿ, ಮಾತನಾಡಿ ಹೋಗುವುದನ್ನು ಗಮನಿಸಬಹುದು. ಖ್ಯಾತ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ಟರು ಸಂಬಂಧದಲ್ಲಿ ಇವರಿಗೆ ಚಿಕ್ಕಪ್ಪ (ಸಣ್ಣಜ್ಜನ ಮಗ), ಪದ್ಯಾಣ ಗಣಪತಿ ಭಟ್ ಮತ್ತು ಪದ್ಯಾಣ ಜಯರಾಮ ಭಟ್ ಇವರ ತಮ್ಮಂದಿರು. ಯುವ ಮದ್ದಳೆಗಾರ ಚೈತನ್ಯಕೃಷ್ಣರೂ ಇವರ ಕುಟುಂಬದ ಸದಸ್ಯ.
                                                    ಶ್ರೀ ಪದ್ಯಾಣ ಪರಮೇಶ್ವರ ಭಟ್

                 ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಎಂಬಲ್ಲಿ 1952ನೇ ಇಸವಿ ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಪರಮೇಶ್ವರ ಭಟ್ಟರು ಜನಿಸಿದರು. ಅಜ್ಜ ಪದ್ಯಾಣ ನಾರಾಯಣ ಭಟ್ಟರು (ಪುಟ್ಟುನಾರಾಯಣ ಭಾಗವತರು) ಹವ್ಯಾಸೀ ಉತ್ತಮ ಭಾಗವತರೂ ಮದ್ದಳೆಗಾರರೂ ಆಗಿದ್ದರು. ಇವರು ಬಲಿಪರ ಸಮಕಾಲೀನರು. ಪ್ರಧಾನ ಭಾಗವತರು ರಜೆಯಲ್ಲಿದ್ದಾಗ ಮೇಳದ ತಿರುಗಾಟವನ್ನೂ ಮಾಡಿದವರು. ರಶ್ಯಾದ ಪ್ರಧಾನಿಯವರು ದೆಹಲಿಗೆ ಬಂದಾಗ ಅವರ ಗೌರವಾರ್ಥ ಏರ್ಪಡಿಸಿದ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಕಾಣಿಸಿಕೊಂಡವರು. ಅದು ಕುರಿಯ ವಿಠಲಶಾಸ್ತ್ರಿಯವರ ತಂಡದ ಪ್ರದರ್ಶನ. ನಿಡ್ಲೆ ನರಸಿಂಹ ಭಟ್ಟರು ಅಂದು ಮದ್ದಳೆಗಾರರಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದರು. 1953ನೇ ಇಸವಿ ಪದ್ಯಾಣ ಪರಮೇಶ್ವರ ಭಟ್ಟರಿಗೆ ಒಂದೂವರೆ ವರ್ಷವಾಗಿದ್ದಾಗ ಅವರ ಅಜ್ಜ ನಾರಾಯಣ ಭಟ್ಟರು ವಾಸ್ತವ್ಯವನ್ನು ಪದ್ಯಾಣದಿಂದ ಕಲ್ಮಡ್ಕಕ್ಕೆ ಬದಲಾಯಿಸಿದರು. ಪದ್ಯಾಣ ಪರಮೇಶ್ವರ ಭಟ್ಟರು 7ನೇ ತರಗತಿವರೇಗೆ ಕಲ್ಮಡ್ಕ ಶಾಲೆಯಲ್ಲೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲೂ ಪೂರೈಸಿದರು.
                            ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯ ಸದಸ್ಯರೆಲ್ಲಾ ಕಲಾವಿದರೇ! ಸಹಜವಾಗಿ ರಕ್ತಗತವಾಗಿ ಬಂದಿತ್ತು ಕಲೆ. ತಂದೆಯವರಿಂದಲೇ ಹಿಮ್ಮೇಳದ ಅಭ್ಯಾಸ. ಅರ್ನಾಡಿ ಶಿವರಾಮ ಭಟ್, ಅಜ್ಜನಗದ್ದೆ ಗಣಪಯ್ಯ ಭಾಗವತರು, ದಾಸರಬೈಲು ಚನಿಯ ನಾೈಕ ಮೊದಲಾದವರು ಭಾಗವಹಿಸು ತ್ತಿದ್ದ ಆಟಕೂಟಗಳಲ್ಲಿ ಮದ್ದಳೆ ಬಾರಿಸುತ್ತಿದ್ದ ಪದ್ಯಾಣ ಪರಮೇಶ್ವರ ಭಟ್ಟರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕಲಾವಿದನಾಗಿ ಕಾಣಿಸಿಕೊಂಡವರು! ಅಲ್ಲದೆ, ಸಂಗಮ ಕಲಾತಂಡ (ಕಲ್ಮಡ್ಕ)ದ ಪ್ರದರ್ಶನಗಳಲ್ಲಿ ಪ್ರಸಾಧನಕ್ಕೆ ಸಹಾಯಕರಾಗಿ, ಚಕ್ರತಾಳಕ್ಕೆ, ಮದ್ದಳೆಗಾರರಾಗಿ, ವೇಷಧಾರಿಯಾಗಿಯೂ ಕಲಾಸೇವೆಯನ್ನು ಮಾಡಿದರು. ಇವರು ಹಾಸ್ಯಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರಂತೆ. 1976ರ ಸುಮಾರಿಗೆ ಕಾಂಚನ ರಾಮಭಟ್ಟರಿಂದ ಪುತ್ತೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದನವನ್ನು ಕಲಿತುದು ಪದ್ಯಾಣ ಪರಮೇಶ್ವರ ಭಟ್ಟರ ಯಕ್ಷಗಾನ ಕಲಾಜೀವನಕ್ಕೆ ಅನುಕೂಲವೇ ಆಯಿತು. ಮೊದಲ ತಿರುಗಾಟ ಕಲ್ಲಾಡಿ ನಾಗರಾಜ ಶೆಟ್ರ ಸಂಚಾಲಕತ್ವದ ಕುಂಡಾವು ಮೇಳದಲ್ಲಿ. ಆಗ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಪರಮೇಶ್ವರ ಭಟ್ಟರು ಇಬ್ಬರೇ ಮದ್ದಳೆಗಾರರು. ಕೇಳಿ ಬಾರಿಸುವಲ್ಲಿಂದ ತೊಡಗಿ ಮಂಗಲ ತನಕ ಇವರಿಬ್ಬರೇ ನಿರ್ವಹಿಸುತ್ತಿದ್ದರು. ನಿಡ್ಲೆ ಶ್ರೀಪತಿ ರಾವ್, ಕೊಕ್ಕಡ ಸುಬ್ರಾಯ ಆಚಾರ್ಯ ಭಾಗವತರಾಗಿಯೂ, ಹೊಸಹಿತ್ಲು ಮಹಾಲಿಂಗ ಭಟ್, ಮುಂಗಿಲ ಕೃಷ್ಣ ಭಟ್, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಬೇಕೂರು ಕೇಶವ, ಕ್ರಿಶ್ಚನ್ ಬಾಬು, ಧರ್ಣಪ್ಪ ನಾೈಕ ಮೊದಲಾದ ಕಲಾವಿದರಿದ್ದ ಕುಂಡಾವು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದ ಪರಮೇಶ್ವರ ಭಟ್ಟರು ನಂತರ ಹವ್ಯಾಸೀ ಕಲಾವಿದರಾಗಿ ತನ್ನನ್ನು ತಾನು ತೊಡಗಿಸಿಕೊಂಡರು.
1981ರಲ್ಲಿ ಬೆಳ್ಳಾರೆಯಲ್ಲಿ ಮುದ್ರಣ ಸಂಸ್ಥೆಯನ್ನು ಆರಂಭಿಸಿದರು (ಕಿರಣ್ ಪ್ರಿಂಟರ್ಸ್). ಎಡನೀರು ಶ್ರೀಗಳ ದಿವ್ಯಹಸ್ತದಿಂದ ಈ ಮುದ್ರಣ ಸಂಸ್ಥೆ ಲೋಕಾರ್ಪಣೆಗೊಂಡಿತು. ಶ್ರೀ ಸತ್ಯಮೂರ್ತಿ ದೇರಾಜೆಯವರ ಜತೆ ಸೇರಿ ‘ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನ ಸಾರಸ್ವತ ಲೋಕಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ ದೇರಾಜೆ ಸೀತಾರಾಮಯ್ಯನವರ ಪ್ರಿಯ ಶಿಷ್ಯ ಖ್ಯಾತ ಅರ್ಥಧಾರಿ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯ ಅವರಿಂದ ಉದ್ಘಾಟನೆಗೊಂಡಿತ್ತು. ಈ ಸಂಸ್ಕೃತಿರಂಗ. ಈ ಸಂಸ್ಥೆಯ ವತಿಯಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ಪ್ರತೀ ತಿಂಗಳ ಕೊನೆಯ ಭಾನುವಾರ ತಿಂಗಳ ಕೂಟ ಮತ್ತು ವಾರ್ಷಿಕೋತ್ಸವದಂದು ಖ್ಯಾತ ಕಲಾವಿದರಿಂದ ತಾಳಮದ್ದಳೆ ಕಾರ್ಯಕ್ರಮವೂ ನಿರಂತರ ನಡೆಯುತ್ತಿದೆ. ಈ ಸಂಸ್ಥೆಯ ಸದಸ್ಯನಾಗಿ ಪದ್ಯಾಣ ಪರಮೇಶ್ವರ ಭಟ್ಟರು ಆರು ಬಾರಿ ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.                                   ಸಾಯಿಬಾಬಾರವರ ಜನ್ಮದಿನೋತ್ಸವದಂದು- ಅಳಿಕೆ ಸತ್ಯಸಾಯಿ ವಿಹಾರ ಮಕ್ಕಳ ತಂಡ (ಕೋಳ್ಯೂರು ರಾಮಚಂದ್ರ ರಾವ್ ಮತ್ತು ಉಬರಡ್ಕ ಉಮೇಶ ಶೆಟ್ಟರು ಈ ತಂಡದ ಗುರುಗಳು) ಮತ್ತು ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದ ಮಕ್ಕಳ ತಂಡದ (ಕೋಡ್ಲ ಗಣಪತಿ ಭಟ್ಟರ ನಿರ್ದೇಶನ) ಪ್ರದರ್ಶನಗಳಲ್ಲಿ ಪದ್ಯಾಣ ಗಣಪತಿ ಭಟ್, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಜಯಪ್ರಕಾಶ ನಾಕೂರು ಇವರ ಜತೆ ಭಾಗವಹಿಸಿದ್ದು ವಿಶೇಷ ಅನುಭವ ನೀಡಿತು ಎಂದು ಪರಮೇಶ್ವರ ಭಟ್ಟರು ಹೇಳುತ್ತಾರೆ. ಶ್ರೀಮತಿ ವಿದ್ಯಾ ಕೋಳ್ಯೂರ್ ಅವರ ‘ಯಕ್ಷಮಂಜೂಷ’ ತಂಡದ ಸದಸ್ಯನಾಗಿ ಮೈಸೂರು, ಚೆನ್ನೈ, ಬೆಂಗಳೂರು ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಪುಟ್ಟಪರ್ತಿಯಲ್ಲಿ ನಡೆದ ಪ್ರದರ್ಶನವನ್ನು ಸಾಯಿಬಾಬಾರವರೂ, ಎಂ.ಎಸ್. ಸುಬ್ಬಲಕ್ಷ್ಮಿಯವರೂ ಮೆಚ್ಚಿಕೊಂಡಿದ್ದರಂತೆ.
              ಶ್ರೀ ಪದ್ಯಾಣ ಪರಮೇಶ್ವರ ಭಟ್ಟರು ಸಮಾಜ ಸೇವಕರಾಗಿಯೂ ಎಲ್ಲರಿಗೂ ಬೇಕಾದವರು. ಬೆಳ್ಳಾರೆಯಲ್ಲಿ ಜೇಸೀಸ್ ಸಂಸ್ಥೆಯ ಸ್ಥಾಪನೆಗೆ ಎಲ್ಲರೊಡನೆ ಸಮಾಲೋಚಿಸಿ ಪ್ರಯತ್ನಿಸಿದ ಪ್ರಮುಖರಲ್ಲಿ ಇವರೂ ಒಬ್ಬರು. 1985ರಲ್ಲಿ ಬೆಳ್ಳಾರೆಗೆ ಬಂದು ನೆಲೆಸಿದ ಪದ್ಯಾಣ ಪರಮೇಶ್ವರ ಭಟ್ಟರ ಮನೆಯಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಬಗ್ಗೆ ಸಭೆ ಸಮಾಲೋಚನೆಗಳೂ ನಡೆಯುತ್ತಿತ್ತು ಎಂಬುದು ನಮಗೆ ತಿಳಿದುಬರುವ ವಿಚಾರ. ಹೆಚ್ಚಿನ ಎಲ್ಲಾ ಭಾಗವತರ ಹಾಡುಗಳಿಗೂ ಮದ್ದಳೆ ಬಾರಿಸಿದ್ದೇನೆ. ಆದರೆ ದೊಡ್ಡ ಬಲಿಪರ, ಹಿರಿಯ ಅಗರಿ ಭಾಗವತರ, ಇರಾ ಗೋಪಾಲಕೃಷ್ಣ ಭಾಗವತರ ಹಾಡುಗಳಿಗೆ ಮದ್ದಳೆ ಬಾರಿಸುವ ಅವಕಾಶ ಸಿಗದೇ ಹೋಯಿತು. ಸಿಕ್ಕಿದ್ದರೆ ಅದೊಂದು ಭಾಗ್ಯ ಎಂದು ಭಾವಿಸುತ್ತಿದ್ದೆ ಎಂದು ಹೇಳುವ ಪದ್ಯಾಣ ಪರಮೇಶ್ವರ ಭಟ್ಟರು ಹಿಂದಿನ ದಿನಗಳನ್ನು ನೆನಪಿಸುತ್ತಾರೆ. 1980ರಲ್ಲಿ ನಿರ್ಮಲಾಕುಮಾರಿ ಅವರನ್ನು ವಿವಾಹವಾದ ಭಟ್ಟರಿಗೆ ಇಬ್ಬರು ಪುತ್ರರು. ಹಿರಿಯವರು ಶ್ರೀ ಅಕ್ಷಯ್ ಪದ್ಯಾಣ, ಎಂ.ಕಾಂ. ಪದವೀಧರ. ಕಿರಣ್ ಪ್ರಿಂಟರ್ಸ್ ಸಂಸ್ಥೆಯನ್ನು ಮುನ್ನಡೆಸು ತ್ತಿದ್ದಾರೆ. ಕಿರಿಯ ಪುತ್ರ ಸೂರಜ್ ಪದ್ಯಾಣ ಮಂಗಳೂರಲ್ಲಿ ಉದ್ಯೋಗಿಯಾಗಿದ್ದುಕೊಂಡು ಎಂ.ಬಿ.ಎ. ಓದುತ್ತಿದ್ದಾರೆ. ಹಿರಿಯ ಪುತ್ರ ಅಕ್ಷಯ್ ಪದ್ಯಾಣರ ಪತ್ನಿ ಸ್ವಾತಿ ಸರಸ್ವತಿ ಹೆಣ್ಣುಮಗುವಿಗೆ ಜನ್ಮವಿತ್ತುದರಿಂದ ತಾನು ಅಜ್ಜನಾದ ಸಂಭ್ರಮದಲ್ಲಿದ್ದಾರೆ ಶ್ರೀ ಪದ್ಯಾಣ ಪರಮೇಶ್ವರ ಭಟ್.
                            ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ ಕಲಾಸೇವೆಯನ್ನು ಗುರುತಿಸಿ ಕಲ್ಮಡ್ಕ ಸಂಗಮ ಕಲಾ ಸಂಘ ಇವರನ್ನು ಸನ್ಮಾನಿಸಿತು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ (ಮಡಪ್ಪಾಡಿಯಲ್ಲಿ) ಸಂದರ್ಭ ಇವರನ್ನು ಸನ್ಮಾನಿಸಲಾಯಿತು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ದೇಲಂಪಾಡಿ (ಕೀರಿಕ್ಕಾಡು) ಈ ಸಂಸ್ಥೆ ನಿರಂತರ ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಿದೆ. ಯಕ್ಷಗಾನಕ್ಕೆ ಕೀರಿಕ್ಕಾಡು ಮನೆಯ ಕೊಡುಗೆ ಅಪಾರ. ಈ ಹೆಮ್ಮೆಯ ಸಂಸ್ಥೆಯೂ ಪದ್ಯಾಣ ಪರಮೇಶ್ವರ ಭಟ್ಟರನ್ನೂ ಖ್ಯಾತ ಕಲಾವಿದ ರೆಂಜಾಳ ರಾಮಕೃಷ್ಣ ರಾಯರನ್ನೂ ಜತೆಯಾಗಿ ಸನ್ಮಾನಿಸಿ ಗೌರವಿಸಿತು. ಪದ್ಯಾಣ ಪರಮೇಶ್ವರ ಭಟ್ಟರನ್ನು ಕಲಾಭಿಮಾನಿಗಳೆಲ್ಲರೂ ಅಭಿನಂದಿಸೋಣ. ಕಲಾಮಾತೆಯ ಅನುಗ್ರಹ ನಿರಂತರ ಅವರ ಮೇಲಿರಲಿ ಎಂದು ಹಾರೈಸೋಣ.

- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು