‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್


‘ನಾದಲೋಕದ ಗುರಿಕಾರ’    ಶ್ರೀ ನೆಡ್ಲೆ ನರಸಿಂಹ ಭಟ್

ಯಕ್ಷಗಾನ ಹಿಮ್ಮೇಳದ ಶ್ರೇಷ್ಠ ಮದ್ದಳೆಗಾರರಾಗಿ, ಗುರುವಾಗಿ ಸುಮಾರು 60 ವರುಷಗಳಿಗಿಂತಲೂ ಹೆಚ್ಚು ಕಲಾಮಾತೆಯ ಸೇವೆಯನ್ನು ಮಾಡಿ, ಕುರಿಯ ಗಣಪತಿ ಶಾಸ್ತ್ರಿ, ಗೋಪಾಲಕೃಷ್ಣ ಕುರುಪ್, ಶ್ರೀ ಪೆರುವಾಯಿ ನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಸುಬ್ರಹ್ಮಣ್ಯ ಶಾಸ್ತ್ರಿ ಮೊದಲಾದ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಮೇರು ವ್ಯಕ್ತಿತ್ವ ಶ್ರೀ ನೆಡ್ಲೆ ನರಸಿಂಹ ಭಟ್ಟರದು. ತಮ್ಮ ಶಿಷ್ಯಂದಿರ ಕೈಚಳಕ, ಕಲಾಸೇವೆ ರಂಗದಲ್ಲಿ ಅವರು ವಿಜೃಂಭಿಸುವುದನ್ನು ಕಂಡು ಅಲೌಕಿಕ ಪ್ರಪಂಚದಲ್ಲಿರುವ ಮಹಾಚೇತನ ಖಂಡಿತಾ ಸಂತಸಪಡುತ್ತಿರಬಹುದು. ವಿದ್ಯೆಯೆಂಬ ಪೀಯೂಷವನ್ನು ಅವರಿಗೆ ಉಣಿಸಿದುದು ಸಾರ್ಥಕವಾಯಿತು ಎಂದು ಭಾವಿಸುತ್ತಿರಬಹುದು. ನೆಡ್ಲೆ ನರಸಿಂಹ ಭಟ್ಟರ ಬಗೆಗೆ ಬರೆಯಲು ನಾವೆಷ್ಟು ಸಮರ್ಥರು? ಖಂಡಿತಾ ಸಮರ್ಥರಲ್ಲ. ಆದರೂ ಹಿರಿಯರಿಂದ ಕೇಳಿ, ಪುಸ್ತಕಗಳಿಂದ ಓದಿ ತಿಳಿದು
ಬರೆಯುವುದು ಆ ಮಹಾನ್ ವ್ಯಕ್ತಿಗೆ ನೀಡುವ ಗೌರವವಲ್ಲವೇ. ನಮಗದು ಕರ್ತವ್ಯವೂ ಹೌದು.

ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ, ನರನ್ಸ್, ಯೆಯ್ಯಾಡಿ, ಮಂಗಳೂರು ಈ ಸಂಸ್ಥೆಯಿಂದ ಪ್ರಕಾಶಿತವಾದ, ಶ್ರೀ ಸರ್ಪಂಗಳ ಈಶ್ವರ ಭಟ್ಟರಿಂದ ನಿರೂಪಿಸಲ್ಪಟ್ಟ ಶ್ರೀ ನೆಡ್ಲೆ ನರಸಿಂಹ ಭಟ್ಟರ ಆತ್ಮಕಥನ- ‘ಚೆಂಡೆಯ ಮೆಲುನುಡಿ’ ಕೃತಿಯೇ ಈ ಲೇಖನಕ್ಕೆ ಆಧಾರ. ಈ ಕೃತಿಗೆ ಸೊಗಸಾಗಿ ಮುನ್ನುಡಿಯನ್ನು ಬರೆದವರು ಲೇಖಕರೂ, ವಿಮರ್ಶಕರೂ, ಖ್ಯಾತ ಅರ್ಥಧಾರಿಗಳೂ ಆಗಿರುವ ಡಾ. ಎಂ. ಪ್ರಭಾಕರ ಜೋಶಿಯವರು. ಶ್ರೀ ಜೋಶಿಯವರ ಅಭಿಪ್ರಾಯದಂತೆ, ಗುರಿಕಾರ ಮನೆತನದ ನರಸಿಂಹ ಭಟ್ಟರು ಕಲೆಯಲ್ಲೂ ಓರ್ವ ಗುರಿಕಾರರಾಗಿಯೇ ಮೆರೆದವರು. ಈ ಪುಸ್ತಕ ಪ್ರಕಾಶನದ ಸಂದರ್ಭದಲ್ಲಿ ನೆಡ್ಲೆ ನರಸಿಂಹ ಭಟ್ಟರ ಹೆಸರಿನಲ್ಲಿ ಪ್ರತಿಷ್ಠಾನವೊಂದು ಸ್ಥಾಪಿತವಾಗುತ್ತಿರುವುದು ಸಂತೋಷದ ಸಂಗತಿ. ಈ ಪ್ರತಿಷ್ಠಾನವು ಶ್ರೀ ನೆಡ್ಲೆಯವರು ನಂಬಿದ, ನೆಚ್ಚಿದ ಯಕ್ಷಗಾನದ ರೂಪ ರೀತಿಗಳನ್ನು ಕಣ್ಣಮುಂದಿಟ್ಟುಕೊಂಡು, ಅದರ ಸಂವರ್ಧನೆಗಾಗಿ ಯಕ್ಷಗಾನ ಕ್ಷೇತ್ರದಲ್ಲಿ ಆಗಬೇಕಾದ ಸತ್ಕಾರ್ಯಗಳನ್ನು ಕೈಗೊಂಡು, ಪೋಷಿಸಿ, ಪ್ರೋತ್ಸಾಹಿಸಿ, ಒಂದು ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದೂ ಡಾ. ಎಂ. ಪ್ರಭಾಕರ ಜೋಷಿಯವರು ಹಾರೈಸಿರುತ್ತಾರೆ. ನಿರೂಪಕ ನಾಗಿ, ‘‘ಬರೆದವನ ಬಿನ್ನಹ’’ ಎಂಬ ಲೇಖನದಡಿಯಲ್ಲಿ ‘‘ನಾನೂ ಬರೆದೆ. ಇದು ಹೆಗ್ಗಳಿಕೆಯ ಮಾತಲ್ಲ. ಸಮಾಧಾನದ ಉಸಿರು. ಆದರೂ ಎಲ್ಲವನ್ನೂ ಬರೆದೆ ಎಂದು ತೋರುವುದಿಲ್ಲ. ಬರೆದುದಕ್ಕಿಂತ ಬರೆಯದೆ ಬಿಟ್ಟುದೇ ಹೆಚ್ಚು. ಅದೊಂದು ಸಾಗರ. ನನ್ನದು ಬಿಂದಿಗೆ ಮಾತ್ರ.’’ ಶ್ರೀ ಸರ್ಪಂಗಳ ಈಶ್ವರ ಭಟ್ಟರ ಈ ಮಾತುಗಳು ಶ್ರೀ ನೆಡ್ಲೆ ನರಸಿಂಹ ಭಟ್ಟರು ಒಬ್ಬ ಅದ್ಭುತ ಸಾಧಕ ಎಂಬುದನ್ನು ಸೂಚಿಸುತ್ತದೆ.
ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ನೆಡ್ಲೆ ರಾಮ ಭಟ್ಟರ ಮಾತುಗಳನ್ನು ಗಮನಿಸೋಣ. ನನ್ನ ತೀರ್ಥರೂಪರು ಶ್ರೀ ನೆಡ್ಲೆ ನರಸಿಂಹ ಭಟ್ಟರ ಬದುಕನ್ನು ರೂಪಿಸಿದ್ದೇ ಯಕ್ಷಗಾನ. ಜೀವನದಲ್ಲಿ ಸದಾ ತಿರುವುಚೆಂಡೆಯ ಮೆಲುನುಡಿಗಳನ್ನೇ ಕಂಡ ಅವರು ಸುಖವನ್ನು ಕಂಡದ್ದು ಯಕ್ಷಗಾನದ ನಾದಮಯ ಕ್ಷೇತ್ರದಲ್ಲಿ. ಯಕ್ಷಗಾನದಲ್ಲಿ ಒಬ್ಬ ಮದ್ದಳೆಗಾರನಾಗಿ ಎತ್ತರವನ್ನೂ ಬಿತ್ತರವನ್ನೂ ಪಡೆದರು. ಯಕ್ಷಗಾನಾಸಕ್ತರೆಲ್ಲರ ಮನದಲ್ಲಿ ಮನೆಮಾಡಿದರು. ಹೀಗೆ ಪ್ರಸಿದ್ಧಿಯನ್ನು ಪಡೆದ ಅಭಿಜಾತ ಕಲಾವಿದನೊಬ್ಬನ ಮಗನೆನಿಸಿಕೊಳ್ಳುವುದು ನನಗೆ ಅತ್ಯಂತ ಹೆಮ್ಮೆ. ಶ್ರೀ ನೆಡ್ಲೆ ರಾಮ ಭಟ್ಟರು ತೀರ್ಥರೂಪರ ಹೆಸರಿನಲ್ಲೇ ಪ್ರತಿಷ್ಠಾನವೊಂದನ್ನು ಪ್ರಾರಂಭಿಸಿ (ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ) ಕರ್ಮಪುತ್ರರೆನಿಸಿಕೊಂಡರು. ತೀರ್ಥರೂಪರು ಮತ್ತು ಯಕ್ಷಗಾನ ಕಲೆಯ ಮೇಲೆ ನಿಡ್ಲೆ ಶ್ರೀ ರಾಮ ಭಟ್ಟರಿಗಿರುವ ಗೌರವಕ್ಕೆ ಇದುವೇ ಸಾಕ್ಷಿ.
ವಿಟ್ಲ ಸೀಮೆಯ ಗುರಿಕಾರ ಮನೆ. ವಿಟ್ಲ ಸಮೀಪದ ನೆಡ್ಲೆ ಎಂಬಲ್ಲಿ ನೆಡ್ಲೆ ರಾಮ ಭಟ್ಟ ಮತ್ತು ಅದಿತಿ ಅಮ್ಮ ದಂಪತಿಗಳಿಗೆ ಮಗನಾಗಿ 1914ನೇ ಇಸ್ವಿ ಆಗಸ್ಟ್ ತಿಂಗಳಲ್ಲಿ ನರಸಿಂಹ ಭಟ್ಟರು ಜನಿಸಿದರು. ಹಾಗಾಗಿಯೇ ನೆಡ್ಲೆ ಅವರ ಮನೆ ಕಲೆಯ ನೆಲೆವೀಡಾಗಿತ್ತು. ಎಲ್ಲರೂ ಕಲಾವಿದರೇ. ಹಾಗೆ ಯಕ್ಷಗಾನದ ಹಾಡುಗಳನ್ನು ಗುಣುಗುಣಿಸುತ್ತಾ, ಯಕ್ಷಗಾನದ ಬಗ್ಗೆಯೇ ಮಾತನಾಡುತ್ತಿದ್ದರು. ನಿತ್ಯವೂ ಸಂಜೆ ಭಜನೆಯೂ ನಡೆಯುತ್ತಿತ್ತು. ಅದಕ್ಕೆ ಮದ್ದಳೆ, ಟಮ್ಕಿ ಬಾರಿಸುತ್ತಿದ್ದರು. ತಾಳಮದ್ದಳೆಯೂ ಆಗಾಗ ನಡೆಯುತ್ತಿತ್ತು. ಹೀಗೆ ನಾದಮಯ ವಾತಾವರಣದಲ್ಲೇ ಬೆಳೆದವರು ಶ್ರೀ ನೆಡ್ಲೆಯವರು. ಇವರ ದೊಡ್ಡಪ್ಪ ಕೇಶವ ಭಟ್ಟರು ಒಳ್ಳೆಯ ಭಾಗವತರು. ಮಗು ಭಾಗವತರೆಂದೇ ಪ್ರಸಿದ್ಧರು. ನೆಡ್ಲೆಯವರ ತೀರ್ಥರೂಪರಿಗೂ ಭಾಗವತಿಕೆ ಗೊತ್ತಿತ್ತು. ಚಿಕ್ಕಪ್ಪ ಶಂಕರ ಭಟ್ಟರು ಮದ್ದಳೆಗಾಗರೂ, ಅರ್ಥಧಾರಿಯೂ ಆಗಿದ್ದರು. ಅತಿಕಾಯನ ಪಾತ್ರವನ್ನು ಸೊಗಸಾಗಿ ಹೇಳುತ್ತಿದ್ದ ಕಾರಣ ಅತಿಕಾಯ ಶಂಕರನೆಂದು ಕರೆಯುತ್ತಿದ್ದರಂತೆ. ನೆಡ್ಲೆಯವರ ತಾಯಿ ದೇವರನಾಮಗಳನ್ನು ಚೆನ್ನಾಗಿ ಹಾಡುತ್ತಿದ್ದರು. ಹಿರಿಯರ ಎಲ್ಲಾ ಸಂಸ್ಕಾರಗಳೂ ಅರಿವಿಲ್ಲದೆಯೇ ನನಗೆ ಪ್ರೇರಣೆಯನ್ನು ತುಂಬಿರಬಹುದು. ಹಾಗಾಗಿ ನಾನೂ ಕಲಾವಿದನಾದೆ ಎಂದು ನೆಡ್ಲೆ ನರಸಿಂಹ ಭಟ್ಟರು ಹೇಳುತ್ತಿದ್ದರಂತೆ. ಕುಕ್ಕಿಲ, ಕೊಡಂಗಾಯಿ ಮತ್ತು ಕೋಡಪದವಿನಲ್ಲಿ (ಮೂರು ಶಾಲೆಗಳು) 6ನೇ ತರಗತಿವರೇಗೆ ಓದಿದರು. ಮಂಗಳೂರಿನ ಹಂಪನಕಟ್ಟೆ ಮೇಳದಲ್ಲಿ ಹಿರಿಯ ಬಲಿಪರು, ಕೆಮ್ಮಣ್ಣು ನಾರ್ಣಪ್ಪಯ್ಯ ಕಲಾವಿದರಾಗಿದ್ದರು. ಮದ್ರಾಸಿನಲ್ಲಿ ನಡೆಯುವ ಪ್ರದರ್ಶನಗಳಿಗೆ ನೆಡ್ಲೆಯವರನ್ನು ಕರೆದುಕೊಂಡು ಹೋದರಂತೆ. ಪ್ರದರ್ಶನ ಮುಗಿದ ಮೇಲೆ ಕಲಾವಿದರೆಲ್ಲರೂ ಮರಳಿದರೂ ಬಲಿಪರು ನಾರ್ಣಪ್ಪಯ್ಯನವರ ಜತೆ ಇವರೂ ಮದ್ರಾಸಿನಲ್ಲೇ ಉಳಿದರು. ಮರಳಿ ಬಂದಾಗ ಶಾಲೆ ಬೇಡ. ಆಟವೇ ಒಳ್ಳೆಯದು ಎಂಬ ನಿರ್ಣಯವಾಯಿತು.
ತಂದೆ, ಚಿಕ್ಕಪ್ಪನವರಿಗೆ ಸಹಾಯಕನಾಗಿ ತೋಟ, ಗದ್ದೆಗಳಲ್ಲಿ ಶ್ರಮವಹಿಸಿ ದುಡಿಯುತ್ತಿದ್ದ ಇವರಿಗೆ ಭಾಗವತನಾಗಬೇಕೆಂಬ ಬಯಕೆ ಮೂಡಿತು. ಕುಕ್ಕಿಲ ಕೃಷ್ಣ ಭಟ್ಟರಿಂದ ಸಂಗೀತ ಕಲಿತರು. ಮನೆಕೆಲಸಗಳೆಲ್ಲಾ ಮುಗಿಸಿ ರಾತ್ರೆಯ ಹೊತ್ತು ಅಭ್ಯಾಸ. ಇದು ಭಾಗವತಿಕೆಗೆ ಅನುಕೂಲವಾಯಿತು. ಹೀಗೆ ಆಟ ತಾಳಮದ್ದಳೆಗಳಲ್ಲಿ ಪದ್ಯ ಹೇಳುತ್ತಿದ್ದರು. ಭಾಗವತಿಕೆಗೆ ಭಾವ ಪಂಜಿಗದ್ದೆ ಗೋವಿಂದ ಭಟ್ಟರು ಗುರುಗಳು. ಹಲವಾರು ಪ್ರಸಂಗಗಳನ್ನು ಬಾಯಿಪಾಠ ಮಾಡಿಕೊಂಡರೂ ಸ್ವರ ಸಾಲದೆಂಬ ಕಾರಣಕ್ಕೆ ಮದ್ದಳೆಯನ್ನೂ ಅಭ್ಯಾಸ ಮಾಡುವ ಮನಮಾಡಿದರು. ಭಾಗವತಿಕೆ ಕಲಿತುದು ಮದ್ದಳೆಗಾರನಾಗಲು ತುಂಬಾ ಅನುಕೂಲವಾಯಿತೆಂದು ನೆಡ್ಲೆಯವರು ಹೇಳುತ್ತಿದ್ದರು. ಶ್ರೀ ಧರ್ಮಸ್ಥಳ ಮೇಳ, ವಿಟ್ಲ ಚಂದಯ್ಯ ಹೆಗ್ಡೆಯವರ ಯಜಮಾನಿಕೆ. ನೆಡ್ಲೆಯವರ ದೊಡ್ಡಪ್ಪ ಕೇಶವ ಭಟ್ಟರ ಉಸ್ತುವಾರಿ. ಹಲವಾರು ಪ್ರಸಂಗಗಳನ್ನು ನೆಡ್ಲೆಯವರು ಆಡಿಸಿದ್ದರಂತೆ. ಆರು ಪ್ರಸಂಗಗಳು ಬಾಯಿಪಾಠ ಬಂದರೆ ಹದಿನಾರು ಪ್ರಸಂಗಗಳನ್ನು ಆಡಿಸಬಹುದು. ಕಥೆಯ ನಡೆ ಗೊತ್ತಿದ್ದರೆ ಸಾಕು. ಲೊಟ್ಟೆ ಪದ್ಯ ಮಾಡುವುದಕ್ಕಾಗುತ್ತದೆ. ಬಹುಮಂದಿ ಭಾಗವತರು ಹಾಗೆಯೇ ಮಾಡುತ್ತಿದ್ದರು. ಪುಸ್ತಕ ನೋಡಿ ಪದ ಹೇಳುವ ಕ್ರಮ ಬಂದುದು ಮತ್ತೆ. ನೆಡ್ಲೆಯವರ ಈ ಮಾತುಗಳನ್ನು ಸಹಜ ರೀತಿಯಲ್ಲಿ ‘ಚೆಂಡೆಯ ಮೆಲುನುಡಿ’ ಆತ್ಮಕಥನದಲ್ಲಿ ಶ್ರೀ ಸರ್ಪಂಗಳ ಈಶ್ವರ ಭಟ್ಟರು ಬಹು ಸೊಗಸಾಗಿ ಅಕ್ಷರ ರೂಪಕ್ಕಿಳಿಸಿದ್ದಾರೆ. ಓದುತ್ತಾ ಸಾಗಿದಾಗ ನಮಗದು ಅನುಭವವಾಗುತ್ತದೆ.
ಮದ್ದಳೆಗಾರನಾಗಬೇಕೆಂಬ ಬಯಕೆ ಸಾಕಾರವಾಗುವುದಕ್ಕೆ ಸಂದರ್ಭ ತಾನಾಗಿಯೇ ಒದಗಿಯೇ ಬಂತು. ಬಲಿಪರ ಉಸ್ತುವಾರಿಯಲ್ಲಿ ವಿಟ್ಲದಲ್ಲಿ ಆಗಾಗ ತಾಳಮದ್ದಳೆ ನಡೆಯುತ್ತಿತ್ತು. ಅಲ್ಲಿ ಮದ್ದಳೆ ಬಾರಿಸಲೂ ನೆಡ್ಲೆಯವರು ಕೂರುತ್ತಿದ್ದರಂತೆ. ಅಲ್ಲಿಗೆ ಖ್ಯಾತ ಮದ್ದಳೆಗಾರರಾದ ಕೆಮ್ಮಣ್ಣು ನಾರ್ಣಪ್ಪಯ್ಯ ಇರುತ್ತಿದ್ದರು. ಅಭ್ಯಾಸ ಪ್ರಾರಂಭವಾಯಿತು. ಅದೇ ವರ್ಷ ಹಂಪನಕಟ್ಟೆ ಮೇಳಕ್ಕೆ ಕೆಮ್ಮಣ್ಣು ನಾರ್ಣಪ್ಪಯ್ಯನವರು ಅವರ ಬದಲಿಗೆ ನೆಡ್ಲೆಯವರನ್ನೇ ಕಳುಹಿಸಿದರು! ಗುರುವಿನ ಅನುಗ್ರಹವಾಗಿತ್ತು. ಶಿಷ್ಯನ ಮೇಲೆ ಎಂತಹ ವಿಶ್ವಾಸ! ಹೇಳಿಕೊಟ್ಟ ವಿದ್ಯೆಗಳನ್ನು ಬಹುಬೇಗನೇ ಗ್ರಹಿಸುವ ಶಿಷ್ಯನ ಬೌದ್ಧಿಕ ಸಾಮಥ್ರ್ಯಕ್ಕೆ ನಾರ್ಣಪ್ಪಯ್ಯನವರು ಸಂತಸ ಗೊಂಡಿದ್ದರು. ವೃತ್ತಿಜೀವನದಲ್ಲಿ ಬೆಳೆಯುವುದಕ್ಕೆ (ತನ್ನ ಅವಕಾಶಗಳನ್ನು ಬಿಟ್ಟುಕೊಟ್ಟು) ಗುರುಗಳೇ ಕಾರಣರು. ಅವಕಾಶಗಳನ್ನು ಚೆನ್ನಾಗಿ ನೀಡಿದ್ದರು. ಈ ವಿಚಾರಗಳನ್ನೂ ವಿವರವಾಗಿ ನೆಡ್ಲೆಯವರು ಆತ್ಮಕಥನದಲ್ಲಿ ಹೇಳಿದ್ದಾರೆ. ಮದ್ದಳೆ ಅಭ್ಯಾಸವಾಗುತ್ತಿದ್ದಂತೆ ಚೆಂಡೆ ಬಾರಿಸುವುದನ್ನು ಕಲಿತೆ. ಚೆಂಡೆ ಬಾರಿಸಲು ಬಾರದಿದ್ದರೆ ಅವನು ಮದ್ದಳೆಗಾರನೇ ಅಲ್ಲ. ಚೆಂಡೆ ಪ್ರತ್ಯೇಕ ಹೇಳಿಕೊಡ ಬೇಕಾಗುವುದಿಲ್ಲ. ಉರುಳಿಕೆ ಸರಿಯಾಗಿ ಬಂದರೆ ಆಯಿತು. ಆದರೆ ಉರುಳಿಕೆ ಸ್ಪಷ್ಟವಾಗಿ, ಸ್ಫುಟವಾಗಿ ಬರುವುದೇ ಕಷ್ಟ. ಅದಕ್ಕೆ ತುಂಬಾ ಅಭ್ಯಾಸ ಮಾಡಬೇಕು. ಆದರೆ ಕಲೆಯಲ್ಲಿ ಆಸಕ್ತಿ ಇದ್ದರೆ ಕಷ್ಟವಾಗುವುದಿಲ್ಲ. ಬೇರೆ ಕೆಲಸ ಮಾಡುತ್ತಲೇ ಅಭ್ಯಾಸ ಮಾಡುವುದಕ್ಕಾಗುತ್ತದೆ. ಪದ, ಬಾಯಿ ತಾಳ ಹೇಳುತ್ತಲೇ ಅಡಿಕೆ ಹೆಕ್ಕಲಿಕ್ಕಾಗುತ್ತದೆ. ನಾನೂ ಅಂತೆಯೇ ಮಾಡುತ್ತಿದ್ದೆ. ಇದು ನರಸಿಂಹ ಭಟ್ಟರ ಮಾತುಗಳು. ಗುಡ್ಡೆಯಲ್ಲಿ ಕಲ್ಲಿಗೆ ಬಡಿಯುತ್ತಾ ಬಹುಹೊತ್ತಿನವರೇಗೆ ನೆಡ್ಲೆಯವರು ಅಭ್ಯಾಸ ಮಾಡುತ್ತಿದ್ದರಂತೆ. ದೊಡ್ಡ ಬಲಿಪರು ನೆಡ್ಲೆಯವರನ್ನು ತಿದ್ದಿದವರಂತೆ. ನಾರ್ಣಪ್ಪಯ್ಯ, ಕುದ್ರೆಕೋಡ್ಲು ರಾಮ ಭಟ್ಟರು ಮತ್ತು ನೆಡ್ಲೆಯವರನ್ನು ದೊಡ್ಡ ಬಲಿಪರು ಹಿಮ್ಮೇಳಕ್ಕೆ ಬಹುವಾಗಿ ಇಷ್ಟಪಡುತ್ತಿದ್ದರಂತೆ. ಆಡಿನ ಹಾಲನ್ನು ಕುಡಿದು ನೇವಸ ಸಮಸ್ಯೆಯನ್ನು ನಿವಾರಿಸಿದ ವಿಚಾರವನ್ನೂ ನೆಡ್ಲೆಯವರು ತನ್ನ ಆತ್ಮಕಥನದಲ್ಲಿ ವಿವರಿಸಿದ್ದಾರೆ. ತಾನೇ ತಯಾರಿಸಿದ ಚೆಂಡೆಯೊಂದನ್ನು ಆರ್ಥಿಕ ಸಮಸ್ಯೆಯಿಂದ ಮಾರಿದುದನ್ನೂ ಅದನ್ನು ಖರೀದಿಸಿದ ಶಂಕರ ಶೆಟ್ಟರಲ್ಲಿ ಅದು ಈಗಲೂ ಇದೆಯೆಂಬುದನ್ನೂ, ಬೆಳ್ತಂಗಡಿಯಲ್ಲಿ ಚೆಂಡೆಯೇ ಇಲ್ಲದ ಜೋಡಾಟ ನಡೆದುದನ್ನೂ, ವೇಷಧಾರಿ ಗಳು ಪಾತ್ರದ ಸ್ವಭಾವವನ್ನರಿಯದೆ ಕುಣಿದು ಅಭಿನಯಿಸುವ ಬಗ್ಗೆಯೂ, ದೊಡ್ಡ ಬಲಿಪರ ಜತೆ ಅವರಿಗಿದ್ದ  ಆತ್ಮೀಯ ನಂಟನ್ನೂ, ಕಲಿಕೆಯೆಂಬುದು ಹೇಗೆ ಮತ್ತು ಯಾಕೆ ನಿರಂತರವಾಗಿರಬೇಕೆಂದೂ, ‘ಚೆಂಡೆಯ ಮೆಲುನುಡಿ’ ಕೃತಿಯಲ್ಲಿ ನೆಡ್ಲೆಯವರು ಸೊಗಸಾಗಿ ತಿಳಿಸಿದ್ದಾರೆ. ತನ್ನ 32ನೆಯ ವಯಸ್ಸಿನಲ್ಲಿ ವಿವಾಹವಾದ ನೆಡ್ಲೆ ನರಸಿಂಹ ಭಟ್ಟರು (ಮಡದಿ ಲಕ್ಷ್ಮಿ) ಇಬ್ಬರು ಮಕ್ಕಳನ್ನು ಪಡೆದರು. ಮಗಳು ಅದಿತಿ. ಪುತ್ರ ನೆಡ್ಲೆ ರಾಮ ಭಟ್ಟರು. ಆ ಕಾಲದಲ್ಲಿ ಪತ್ನಿಯನ್ನು ಕಳೆದುಕೊಂಡ ನೆಡ್ಲೆ ನರಸಿಂಹ ಭಟ್ಟರು ದೇವಸ್ಯ ಎಂಬಲ್ಲಿ ರೈಟರ್ ಆಗಿ ಕೆಲಸವನ್ನೂ ಮಾಡಿದರು. ಶಿರಸಿ, ಶಿವಮೊಗ್ಗ, ಮದ್ರಾಸ್, ಬೊಂಬಾಯಿ ಮೊದಲಾದ ಕಡೆ ಪ್ರದರ್ಶನಗಳಲ್ಲಿ ಮದ್ದಳೆಗಾರರಾಗಿ ರಂಜಿಸಿದ ನೆಡ್ಲೆ ನರಸಿಂಹ ಭಟ್ಟರಿಂದ ಮಳಿ ಶ್ಯಾಮ ಭಟ್ ಮತ್ತು ಖ್ಯಾತ ಹಾಸ್ಯಗಾರರಾದ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಮತ್ತು ನಯನಕುಮಾರರೂ ಮದ್ದಳೆ ಕಲಿತಿದ್ದರು. ದೊಡ್ಡ ಬಲಿಪರ ಜತೆ 19 ವರ್ಷ ಮತ್ತು ಅಗರಿಯವರ ಜತೆ 19 ವರ್ಷ ತಿರುಗಾಟ. ಪರಂಪರೆ ಶೈಲಿ ಗಟ್ಟಿಯಾಗುವುದಕ್ಕೆ ಕಾರಣವಾಯಿತು. ಮತ್ತೆ ಕಡತೋಕ ಮಂಜುನಾಥ ಭಾಗವತರು, ದಾಮೋದರ ಮಂಡೆಚ್ಚರ ಜತೆಯೂ ಅನೇಕ ವರ್ಷಗಳ ಕಾಲ ಮದ್ದಳೆಗಾರರಾಗಿ ಸಹಕರಿಸಿದ ನೆಡ್ಲೆಯವರು, ಹೊಸತಿರಲಿ, ಆದರೆ ಲೆಕ್ಕಾಚಾರ ಖಚಿತವಾಗಿರಬೇಕು ಎಂಬುದನ್ನು ವಿವರಿಸುತ್ತಾರೆ. ಅವರ ಕಾಲದಲ್ಲಿ ನಡೆದ ಜೋಡಾಟಗಳ ರೋಚಕ ಸನ್ನಿವೇಶಗಳನ್ನೂ, ತಾನು ವೇಷ ಮಾಡಿದ ಸಂದರ್ಭವನ್ನೂ, ಕುರಿಯ ಗಣಪತಿ ಶಾಸ್ತ್ರಿಗಳು ನಾನೇ ತಯಾರು ಮಾಡಿದ ಭಾಗವತ, ನಿಮ್ಮಿಂದಾಗಿಯೇ ನಾನು ಭಾಗವತನಾದೆ ಎಂದು ಕುರಿಯ ಗಣಪತಿ ಶಾಸ್ತ್ರಿಗಳು ಹೇಳುವ ವಿಚಾರವನ್ನೂ ನೆಡ್ಲೆಯವರು ನೆನಪಿಸುತ್ತಿದ್ದರು. ತನ್ನ ಭಾವ ದಿವಾಣ ಭೀಮ ಭಟ್ಟರ ಬಗೆಗೂ ಈ ಕೃತಿಯಲ್ಲಿ ನೆಡ್ಲೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಧರ್ಮಸ್ಥಳ ಕಲಿಕಾ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದ ನೆಡ್ಲೆಯವರು ಮತ್ತೆ ಕಟೀಲು ತಾಯಿಯ ಬಳಿಯಲ್ಲಿದ್ದು ಕಲಾಸೇವೆಯನ್ನು ಮಾಡಿದವರು. ಶ್ರೀ ಗೋಪಾಲಕೃಷ್ಣ ಆಸ್ರಣ್ಣರ, ಕಲ್ಲಾಡಿ ವಿಠಲ ಶೆಟ್ಟರ, ಕಟೀಲು ಜನತೆಯ ಪ್ರೀತಿಗೆ ಪಾತ್ರರಾಗಿ ಶ್ರೀ ಕ್ಷೇತ್ರ ಕಟೀಲು ತನ್ನ ಮನೆಯೆಂದೇ ತಿಳಿದು ಬದುಕಿದವರು. ಮೇಳದ ಎಲ್ಲಾ ಯಜಮಾನರುಗಳನ್ನೂ ಅವರ ವ್ಯಕ್ತಿತ್ವವನ್ನೂ ನೆಡ್ಲೆಯವರು ತನ್ನ ಆತ್ಮಕಥನದಲ್ಲಿ ವಿವರಿಸಿದ್ದಾರೆ.

ದೊಡ್ಡ ಬಲಿಪರು, ಕಿಟ್ಟಣ್ಣ ಭಾಗವತರು, ಅಣ್ಣಿ ಭಾಗವತರು, ಪುತ್ತಿಗೆ ಜೋಯಿಸರು, ಅಗರಿಯವರು, ಕಡತೋಕಾ ಮಂಜುನಾಥ ಭಾಗವತರು ಮೈಂದಪ್ಪ ರೈಗಳು, ಸಣ್ಣ ಬಲಿಪರು ಮೊದಲಾದವರ ಜತೆ ಮದ್ದಳೆಗಾರನಾಗಿ ಸಹಕರಿಸಿದರೂ ಹೆಚ್ಚಿನ ಒಡನಾಟ ದೊಡ್ಡ ಬಲಿಪರು, ಅಗರಿಯವರು ಮತ್ತು ಕಡತೋಕಾ ಮಂಜುನಾಥ ಭಾಗವತರೊಂದಿಗೆ ಎಂದು ನೆಡ್ಲೆಯವರು ಹೇಳಿದ್ದಾರೆ. ಕಡತೋಕಾರ ವಿಶಿಷ್ಟ ಪ್ರತಿಭೆಯಿಂದ ಆಕರ್ಷಿತರಾದೆ. ಅವರ ಹೊಸ ಪ್ರಯೋಗಗಳಿಗೆ ಬೇಕಾದಂತೆ ಬಾರಿಸಿದ ಕಾರಣ ನನ್ನ ಚೆಂಡೆಯಲ್ಲಿಯೂ, ಮದ್ದಳೆವಾದನದಲ್ಲಿ ಹೊಸತನ ಮೂಡಿತು. ಒಬ್ಬೊಬ್ಬರದು ಒಂದೊಂದು ಶೈಲಿ. ಎಲ್ಲರಿಗೂ ಹೊಂದಿಕೊಂಡೆ. ಭಾಗವತರ ಮನೋಧರ್ಮವನ್ನು ತಿಳಿದು ಮದ್ದಳೆ ಬಾರಿಸುವ ಕ್ರಮ ಕರಗತವಾದ ಕಾರಣ ಯಾರಿಗೂ ನಾನು ಬೇಡವೆನಿಸುತ್ತಿರಲಿಲ್ಲ. ಅನುಭವಕ್ಕೆ ಒಳ್ಳೆಯದಾಯಿತು. ನಾನೂ ಬೆಳೆಯುತ್ತಾ ಹೋದೆ ಎಂದು ನೆಡ್ಲೆಯವರು ಹಳೆಯ ಅನುಭವಗಳನ್ನು ಚೆನ್ನಾಗಿ ನೆನಪಿಸುತ್ತಾರೆ. ತನಗೆ ಇಷ್ಟವಾಗದ ವಿಚಾರವನ್ನು ನಿಷ್ಠುರವಾಗಿ ಹೇಳದೆ ವಿನೋದವಾಗಿ ಹೇಳುವಲ್ಲಿಯೂ ನೆಡ್ಲೆಯವರು ನಿಸ್ಸೀಮರು. ಶ್ರೇಷ್ಠ ಮದ್ದಳೆಗಾರರಾಗಿದ್ದ ಇವರು ಒಬ್ಬ ಉತ್ತಮ ಲೇಖಕರೂ ಹೌದು. ನೆಡ್ಲೆಯವರು ಬರೆದ ಲೇಖನಗಳು : 1) ಹೂವಿನೊಂದಿಗೆ ಹಗ್ಗ (‘ಯಕ್ಷಗಾನ ಕಲಾತಪಸ್ವಿ’ - ದಿ| ಬಲಿಪ ನಾರಾಯಣ ಭಾಗವತರ ಸಂಸ್ಮರಣಾ ಗ್ರಂಥ) 2) ಶ್ರೀ ಅಗರಿ ಭಾಗವತರ ಸಹವ್ಯವಸಾಯಿಯಾಗಿ ನನ್ನ ಅನುಭವ (ದಿ| ಅಗರಿ ಶ್ರೀನಿವಾಸ ಭಾಗವತರ ಅಭಿನಂದನಾ ಗ್ರಂಥ - ಯಕ್ಷಬ್ರಹ್ಮ) 3) ಅಳಕೆಯವರ ಒಂದು ನೆನಪು. (’ಯಕ್ಷತಿಲಕ’ - ಅಳಕೆ ರಾಮಯ್ಯ ರೈಗಳ ಸ್ಮರಣ ಸಂಚಿಕೆ) ಯಕ್ಷಗಾನದ ಶ್ರೇಷ್ಠ ಮದ್ದಳೆಗಾರರಾಗಿ, ಗುರುವಾಗಿ, ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಪಡೆದು ಎಲ್ಲರಿಗೂ ಪ್ರಿಯರಾಗಿ ಬಾಳಿ ಬದುಕಿ ಕಣ್ಮರೆಯಾದ ನೆಡ್ಲೆ ಶ್ರೀ ನರಸಿಂಹ ಭಟ್ಟರೆಂಬ ಮಹಾನ್ ಚೇತನಕ್ಕೆ ನಮನಗಳು.


 - ರವಿಶಂಕರ್ ವಳಕ್ಕುಂಜ
ಛಾಯಾಚಿತ್ರ ಕೃಪೆ : ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನ (ಚೆಂಡೆಯ ಮೆಲುನುಡಿ)

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು