ಕಲೆ - ಕಲಾವಿದ - ಪ್ರೇಕ್ಷಕರ ಬಗ್ಗೆ ಒಂದಿಷ್ಟು
ಕಲೆ - ಕಲಾವಿದ - ಪ್ರೇಕ್ಷಕರ ಬಗ್ಗೆ ಒಂದಿಷ್ಟು
ವಿವಿಧತೆಯಲ್ಲಿ ಏಕತೆಯನ್ನು ಪ್ರಕಟಿಸುತ್ತಾ ಬಾಳಿ ಬದುಕುವ ಸಂದೇಶವನ್ನು ಉಳಿದ ದೇಶಗಳಿಗೆ ಸಾರುತ್ತಿದೆ ನಮ್ಮ ಹೆಮ್ಮೆಯ ಭಾರತ. ವಿವಿಧ ಭಾಷೆಗಳು, ಅವರ ಧರ್ಮಕ್ಕನುಗುಣವಾಗಿ ಬಾಳಿ ಬದುಕುವ ಜನರು, ಪ್ರದೇಶಕ್ಕನುಗುಣವಾದ ಸಂಸ್ಕೃತಿ (ಆದರೂ ಭಾರತೀಯ ಸಂಸ್ಕೃತಿಯ ಮೇರೆಯೊಳಗಿರುವುದು ವಿಶೇಷ!!!) ದೇವರನ್ನು ಪೂಜಿಸುವ ರೀತಿ, ಉಡುಗೆ-ತೊಡುಗೆ, ಆಚಾರ-ವಿಚಾರ ಹೀಗೆ ಎಲ್ಲವೂ ವೈವಿಧ್ಯಮಯ!! ಸ್ವಾಸ್ಥ್ಯ ಸಮಾಜವನ್ನು ಕಟ್ಟಿ ಬೆಳೆಸಲು ಸನಾತನಿಗಳು ನಮಗೆ ನೀಡಿದ ಕೊಡುಗೆಗಳು ಅಪಾರ. ಕಲೆಗಳ ವಿಚಾರದಲ್ಲೂ ನಮಗದು ಗೋಚರಿಸುತ್ತದೆ.
ಎಲ್ಲಾ ಕಲಾಪ್ರಕಾರಗಳ ಮೇಲೆ ಅಪಾರ ಗೌರವವಿದೆ. ಪ್ರತಿಯೊಂದು ಕಲೆಯೂ ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಆದರೂ ಯಕ್ಷಗಾನವು ಉಳಿದ ಕಲೆಗಳಿಗಿಂತ ವಿಶಿಷ್ಠವಾದುದು. ಯಕ್ಷಗಾನದಲ್ಲಿ ಏನಿದೆ? ಎಂದು ಪ್ರಶ್ನಿಸುವುದಕ್ಕಿಂತ ಏನಿಲ್ಲ? ಎಂದು ಪ್ರಶ್ನಿಸಬಹುದು. ಅಂದರೆ ಎಲ್ಲವೂ ಇದೆ. ಗಾಯನವಿದೆ, ನರ್ತನವಿದೆ, ವಾದನವಿದೆ, ಅಭಿನಯವಿದೆ. ಭಾವಪ್ರಕಟನೆಗೆ ವಿಪುಲ ಅವಕಾಶಗಳಿವೆ. ಒಂದು ವಸ್ತುವನ್ನೇ ಆದರೂ ಅಭಿನಯದ ಮೂಲಕ ಪ್ರೇಕ್ಷಕರಿಗೆ ತೋರುವ ವಿಧಾನವಿದೆ (ಮುದ್ರೆ). ಅಪ್ರಾಕೃತಿಕ ದೃಶ್ಯಗಳನ್ನು ಸಂಯೋಜಿಸದೆ ನೋಡುಗರನ್ನು ಪುರಾಣಲೋಕಕ್ಕೆ ಕೊಂಡೊಯ್ಯುವ ವಿಧಾನಗಳಿವೆ. ಅರೆಕ್ಷಣದಲ್ಲಿ ನಾವು ವೈಕುಂಠ ಸತ್ಯಲೋಕ, ಕೈಲಾಸ, ಸ್ವರ್ಗ, ಅಯೋಧ್ಯೆ, ಶೋಣಿತಪುರವನ್ನು ಕಾಣುವ ಅವಕಾಶಗಳಿವೆ. (ಒಂದು ರಾತ್ರಿಯಲ್ಲಿ) ಈ ಅವಕಾಶ, ವ್ಯವಸ್ಥೆ ಇರುವುದು ಯಕ್ಷಗಾನದಲ್ಲಿ ಮಾತ್ರ. ಎಲ್ಲಕ್ಕಿಂತ ಹೆಚ್ಚಾಗಿ ಜನರಿಗೆ, ‘ಬಾಳಿ ಬದುಕಿ ಕೀರ್ತಿವಂತರಾಗುವ ದಾರಿ ಹೇಗೆ?’ ಎಂಬ ಸಂದೇಶಗಳಿವೆ. ಆದುದರಿಂದಲೇ ಯಕ್ಷಗಾನವು ಒಂದು ಗಂಡುಕಲೆ. ಲಿಂಗ ಪ್ರಭೇದವನ್ನು ಆಧರಿಸಿ ಗಂಡುಕಲೆ ಎಂಬ ಅರ್ಥ ಅಲ್ಲ. ಶ್ರೇಷ್ಠ ಕಲೆ ಎಂದರ್ಥ. ಶ್ರೇಷ್ಠವಾದವುಗಳೆಲ್ಲಾ ಗಂಡುಕಲೆಯಾದ ಯಕ್ಷಗಾನದಲ್ಲಿ ಅಡಕವಾಗಿದೆ.
ಸಾಮವೇದದ ಉಪವೇದ ಗಂಧರ್ವವೇದ. ಗಾಯನ, ವಾದನ, ನರ್ತನಗಳೆಲ್ಲಾ ಗಂಧರ್ವ ವೇದಕ್ಕೆ ಸಂಬಂಧಿಸಿದೆ. ನಾವು ಆರಾಧಿಸುವ ದೇವರ್ಕಳು ಹಾಡುತ್ತಾರೆ, ಕುಣಿಯುತ್ತಾರೆ, ಶ್ರೀದೇವಿಯು ಕೌಶಿಕೆಯಾಗಿ ಕದಂಬ ಕಾಂತಾರದಲ್ಲಿ ಕನಕದುಯ್ಯಾಲೆಯಲ್ಲಿ ಕುಳಿತು ಹಾಡುತ್ತಾ ಖಳರನ್ನು ಆಕರ್ಷಿಸಿ ಸಂಹರಿಸಿದಳು. ಅದ್ಭುತವಾದ ಸಾಹಸಗಳನ್ನು ತೋರಿದ ಕಾರಣ ಅದು ಲೀಲೆ, ಮಹಾತ್ಮ್ಯೆ ಎಂದು ಪ್ರಸಿದ್ಧವಾಯಿತು. ಆಕೆ ಯಕ್ಷಗಾನ ಪ್ರಿಯೆ, ಸಾಮವೇದ ಪ್ರಿಯೆ, ಸಂಗೀತ ಪ್ರಿಯೆ. ಅಸುರರ ಪಾಲಿಗೆ ಆಕೆ ಚರಮಗೀತೆಯನ್ನು ಹಾಡಿದಳು. ಶಿವನೂ ನಟರಾಜನೆಂದು ಪ್ರಸಿದ್ಧನಾಗಿದ್ದಾನೆ. ಹಾಡಿದರೆ, ಕುಣಿದರೆ, ಕಲಾಸೇವೆಯನ್ನು ಮಾಡಿದರೆ ದೇವರನ್ನು ಪೂಜಿಸಿದಂತೆ. ದೇವಾಲಯಗಳಲ್ಲಿ ಈ ಪದ್ಧತಿಯನ್ನು ನಾವು ಕಾಣಬಹುದು.
ಕಲೆ-ಕಲಾವಿದ-ಪ್ರೇಕ್ಷಕರೊಳಗೊಂದು ವಿಶಿಷ್ಠ ಸಂಬಂಧವಿದೆ. ಕಲಾವಿದನಿಗಿಂತ ಕಲೆಯೇ ಶ್ರೇಷ್ಠವಾದುದು. ಪ್ರೇಕ್ಷಕರೇ ದೊಡ್ಡವರು. ಕಲಾವಿದನಿಗಾಗಿ ಕಲೆಯಲ್ಲ. ಕಲೆಗಾಗಿ ಕಲಾವಿದ. ಪ್ರೇಕ್ಷಕರನ್ನು ಸಭಾಸದರೆಂದು ಕಲಾವಿದರು ಗೌರವಿಸುತ್ತಾರೆ. ಆದುದರಿಂದಲೇ ಕಲಾವಿದರು ಸಭಾವಂದನೆಯನ್ನು ಮಾಡುತ್ತಾರೆ. ಕಲೆಯ ಮೂಲಕ ಶ್ರೇಷ್ಠ ಸಂದೇಶಗಳನ್ನು ಸಭಿಕರಿಗೆ ನೀಡಿದಾಗ ಕಲಾವಿದ ತನ್ನಿಂದ ತಾನೇ ಶ್ರೇಷ್ಠ ನೆನಿಸಿಕೊಳ್ಳುತ್ತಾನೆ. ಯಾರು ರಂಗಕ್ಕೆ ಬೇಕು? ಎಂದು ನಿರ್ಧರಿಸುವವರು ಪ್ರೇಕ್ಷಕರು. ಅವರು ಈ ಕಲಾವಿದ ರಂಗಕ್ಕೆ ಬೇಡ ಎಂದು ತೀರ್ಮಾನಿಸಿದರೆ ಮುಗಿಯಿತು. ಹಾಗಾಗದಂತೆ ಕಲಾವಿದರು ಮೈಯೆಲ್ಲಾ ಕಣ್ಣಾಗಿ ಎಚ್ಚರದಿಂದ ಇರಬೇಕು. ಈ ಕಲಾವಿದ ರಂಗಕ್ಕೆ ಬೇಕೇ ಬೇಕು ಎಂದು ಪ್ರೇಕ್ಷಕರು ನಿರ್ಧರಿಸಿದರೆ ಅವನ ಜೀವನ ಸಾರ್ಥಕ. (ನೇಪಥ್ಯದವರ ತೀರ್ಮಾನ ಅಂತಿಮವಲ್ಲ). ಅವಿರತ ದುಡಿಮೆಯ ಮೂಲಕವೇ ಕಲಾವಿದರು ಇದನ್ನು ಗಳಿಸಿಕೊಳ್ಳಬೇಕು. ‘‘ಆಲಸಿಯಾದವನು ಅಭಿವೃದ್ಧಿ ಹೊಂದಲಾರ’’. ಕಲಾವಿದರು ರಂಗದೊಳಗೇ ಕಾಣಿಸಿಕೊಳ್ಳಬೇಕು ಹೊರತು ಮಾಧ್ಯಮಗಳಲ್ಲಲ್ಲ. ರಂಗದೊಳಗೆ ಕಾಣಿಸಿಕೊಂಡರೆ ತಾನಾಗಿಯೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ನಿಜವಾದ ಪ್ರತಿಭೆಯೇ ಕಲಾವಿದನಿಗೆ ಮಾಧ್ಯಮವಾದರೆ ಅದು ಚೆನ್ನ.
ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುವುದು, ಕಲಾವಿದರನ್ನು ಗುರುತಿಸಿ ಗೌರವಿಸುವುದು, ಪ್ರದರ್ಶನಕ್ಕೆ ಸ್ಥಳಾವಕಾಶ- ಮೊದಲಾದ ನೆರವನ್ನು ನೀಡುವುದೂ ಕಲಾಮಾತೆಯ ಸೇವೆ ಮಾಡಿದಂತೆ. ಶೂರಪದ್ಮ, ರಾವಣ, ತಾರಕಾಸುರ, ನರಕಾಸುರ, ವೀರವರ್ಮ, ದುಶ್ಶಾಸನ ವಧೆಯ ಭೀಮ, ಕಿರಾತಾರ್ಜುನದ ಶಬರ- ಮೊದಲಾದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸುವವನೇ ನಿಜವಾದ ಬಣ್ಣದ ವೇಷಧಾರಿ ಎನಿಸಿಕೊಳ್ಳುವನು. ದೂತ, ವನಪಾಲಕನ ಪಾತ್ರಗಳನ್ನು ಮಾಡಿ ಪ್ರೇಕ್ಷಕರನ್ನು ನಗಿಸಿದ ಮಾತ್ರಕ್ಕೆ ಆತ ಹಾಸ್ಯಗಾರ ಎನಿಸಿಕೊಳ್ಳಲಾರ. ಚಂದ್ರಮತಿ, ದಾಕ್ಷಾಯಿಣಿ, ದಮಯಂತಿ, ಶಕುಂತಳೆ- ಮೊದಲಾದ ಪಾತ್ರಗಳನ್ನು ನ್ಯಾಯಯುತವಾಗಿ ನಿರ್ವಹಿಸಿದಾಗ ಆತ ಪರಿಪೂರ್ಣ ಸ್ತ್ರೀವೇಷಧಾರಿಯಾಗುವನು. ಸೌದಾಸ ಚರಿತ್ರೆಯ ಒಂದೆರಡು ಪದ್ಯಗಳ ಮದಯಂತಿಯ ಪಾತ್ರವನ್ನು ನೋಡಿದರೂ ಸ್ತ್ರೀವೇಷಧಾರಿಯು ಎಷ್ಟು ಪ್ರಬುದ್ಧನಾಗಿದ್ದಾ ನೆಂದು ತಿಳಿಯಬಹುದು. ಬಬ್ರುವಾಹನ, ಅಭಿಮನ್ಯು, ಲೀಲೆಯ ಕೃಷ್ಣ, ಸಿತಕೇತ ಮೊದಲಾದ ವೇಷಗಳನ್ನು ನಿರ್ವಹಿಸುವ ಕಲಾವಿದರು, ವಿಷ್ಣು, ಶ್ರೀಕೃಷ್ಣ, ಶ್ರೀರಾಮ ಮೊದಲಾದ ಪಾತ್ರಗಳನ್ನು ನಿರ್ವಹಿಸುವತ್ತ ಗಮನಹರಿಸಬೇಕು, ಬೆಳೆಯಬೇಕು. ಇದು ವಿಕಾಸದ ಸಂಕೇತ.
ಒಮ್ಮೆಲೇ ಇದು ಸಾಧ್ಯವಿಲ್ಲ. ಸಾಧನೆ ಬೇಕು. ತಪಸ್ಸು ಅನಿವಾರ್ಯ. ಮುಮ್ಮೇಳದಂತೆ ಹಿಮ್ಮೇಳದವರಿಗೂ ಈ ಮಾತು ಅನ್ವಯವಾಗುತ್ತದೆ. ಅವರೂ ಅಧ್ಯಯನಶೀಲರಾಗಿರಬೇಕು (ನಿರಂತರ). ಬೆಳೆಯುತ್ತಾ ಬೆಳೆಯುತ್ತಾ ಮುಂದೆ ಸಾಗೋಣ. ನಾನೂ ವಿದ್ಯಾರ್ಥಿಯಾಗಿ ನಿಮ್ಮ ಜತೆ ಇರುವೆ. ಸಹಕರಿಸುವೆ. ಕಲಾವಿದನಾಗಿ ಕಿರಿಯ ಕಲಾವಿದರಲ್ಲಿ ನನ್ನ ವಿಜ್ಞಾಪನೆ ಇದು. ಹಿರಿಯರು ಈ ಮಾತನ್ನು ಖಂಡಿತಾ ನನಗೆ ಹೇಳಬೇಕು. ನಾನು ಅನುಸರಿಸುವೆ. ಉಳಿದ ವಿಚಾರಗಳತ್ತ ಗಮನ ಕಡಿಮೆ ಮಾಡಿ ಯಕ್ಷಗಾನದತ್ತ, ರಂಗದತ್ತ, ಅಧ್ಯಯನದತ್ತ ಗಮನಹರಿಸೋಣ. ಯಕ್ಷಗಾನಕ್ಕೂ, ನಮಗೂ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸೋಣ. ು
- ರವಿಶಂಕರ್ ವಳಕ್ಕುಂಜ
Comments
Post a Comment