ಐದು ದಶಕಗಳ ಕಾಲ ರಂಗವಾಳಿದ ಸ್ತ್ರೀಪಾತ್ರಧಾರಿ - ಕೋಳ್ಯೂರು ಶ್ರೀ ರಾಮಚಂದ್ರ ರಾಯರಿಗೆ 2018ನೇ ಸಾಲಿನ ಪಿ. ವಿ. ಹಾಸ್ಯಗಾರ ಪ್ರಶಸ್ತಿ
ಕೋಳ್ಯೂರು ಶ್ರೀ ರಾಮಚಂದ್ರ ರಾಯರು ಯಕ್ಷಗಾನ ಜಗತ್ತು ಕಂಡ ಅತ್ಯುತ್ತಮ ಸ್ತ್ರೀಪಾತ್ರಧಾರಿಗಳಲ್ಲೊಬ್ಬರು. ಐದು ದಶಕಗಳಿಗೂ ಮಿಕ್ಕಿದ ತಿರುಗಾಟ. ವಿದ್ವಾಂಸರು ಶ್ರೇಷ್ಠ ಕಲಾವಿದರ ಒಡನಾಟ. ನಿರಂತರ ಕಲಿಕೆ. ರಂಗಕ್ಕೆ ದ್ರೋಹವೆಸಗದೆ, ಅರ್ಪಣಾಭಾವದಿಂದ ಪಾತ್ರನಿರ್ವಹಣೆ, ಪ್ರಸಿದ್ಧಿಗಾಗಿ ಬಾಗದೆ ಪ್ರಸಂಗಕ್ಕೆ ತಾನು ಧರಿಸುವ ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸುವ ಗುಣ. ಈ ಎಲ್ಲಾ ವಿಚಾರಗಳನ್ನು ಮೈಗೂಡಿಸಿಕೊಂಡು ಶ್ರೀಯುತರು ಯಕ್ಷರಂಗದ ಶ್ರೇಷ್ಠ ಸ್ತ್ರೀವೇಷಧಾರಿಯಾಗಿ ರಂಗವನ್ನಾಳಿದರು. ``ಫಲವನ್ನು ಅಪೇಕ್ಷಿಸದೆ ಕರ್ಮವನ್ನು ಮಾಡು. ಫಲವನ್ನು ನೀಡುವವನು ನಾನು’’. ಇದು ಭಗವಾನ್ ಶ್ರೀಕೃಷ್ಣನ ಮಾತು. ನಾವು ಶ್ರದ್ಧೆಯಿಂದ ಕರ್ತವ್ಯವನ್ನು ಮಾಡಿದಾಗ ದೇವರು ಖಂಡಿತವಾಗಿಯೂ ಅನುಗ್ರಹಿಸುತ್ತಾನೆ. ಕೋಳ್ಯೂರು ರಾಮಚಂದ್ರ ರಾಯರು ಅಂತೆಯೇ ನಡೆದವರು. ಸತತ ಅಧ್ಯಯನಶೀಲರಾಗಿ, ತಾನು ಧರಿಸಿದ ವೇಷಕ್ಕೆ, ಯಕ್ಷಗಾನಕ್ಕೆ ಕೊರತೆಯಾಗದಂತೆ ಎಚ್ಚರದಿಂದಲೇ ಅಭಿನಯಿಸಿದರು. ಕಲಾಮಾತೆಯು ಅನುಗ್ರಹಿಸಿದಳು. ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದವು. ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಅಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಭಾಜನರಾದರು. 2018ನೇ ಸಾಲಿನ ಪಿ. ವಿ. ಹಾಸ್ಯಗಾರ ಪ್ರಶಸ್ತಿಯೂ ಇವರ ಮುಡಿಗೇರಲಿದೆ. ಪರಂಪರೆಯ ಚೌಕಟ್ಟಿನೊಳಗೇ ಪಾತ್ರಗಳನ್ನು ನಿರ್ವಹಿಸಿ ವಿದ್ವಾಂಸರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಕೋಳ್ಯೂರು ರಾಮಚಂದ್ರ ರಾಯರಿಗೆ ಈಗ ವಯಸ್ಸು 86. ಅವರು ಶತಾಯುಷಿಯಾಗಲಿ. ಶ್ರೀಯುತರ ಸಾಧನೆ, ಅನುಭವಗಳು ಕಲೆಗೆ ಕೊಡುಗೆಯಾಗಿ, ಕಲಾವಿದರಿಗೆ ಅನುಸರಣೀಯವಾಗಿ ಯಾವಾಗಲೂ ಇರುತ್ತದೆ.
ಶ್ರೀ ಕೋಳ್ಯೂರು ರಾಮಚಂದ್ರ ರಾಯರು
ಫೋಟೋ : ಶ್ರೀ ರಾಮ್ ನರೇಶ್ ಮಂಚಿ
ಶ್ರೀ ಕೋಳ್ಯೂರು ರಾಮಚಂದ್ರ ರಾಯರು 14 ವಯಸ್ಸು ತುಂಬಿದಾಗಲೇ ಶ್ರೀ ಧರ್ಮಸ್ಥಳ ಮೇಳದಲ್ಲಿ ಬಾಲಕಲಾವಿದನಾಗಿ ಎರಡು ತಿರುಗಾಟಗಳನ್ನು ಪೂರೈಸಿದ್ದರು! ಓದಿದ್ದು ಎಂಟನೇ ತರಗತಿಯವರೇಗೆ ಮಾತ್ರ. ಆದರೂ ಬದುಕು ಎಂಬ ಶಾಲೆಯಲ್ಲಿ ಅನುಭವಗಳೆಂಬ ಪಾಠಗಳನ್ನು ಕಲಿತು ಪಕ್ವರಾದರು. ವಿಶ್ವವಿದ್ಯಾನಿಲಯದಲ್ಲಿ ಓದದಿದ್ದರೂ ವಿಶ್ವವೆಂಬ ವಿದ್ಯಾನಿಲಯದಲ್ಲಿ ಓದಿ ಪದವಿ ಪಡೆದರು. ಬಾಲ್ಯದಲ್ಲಿ ಯಕ್ಷಗಾನ ಎಂಬ ಆವರಣದೊಳಗೇ ಬೆಳೆದವರು. ಮನೆಯಲ್ಲಿಯೂ ಕಲಾ ಕಲಿಕೆಗೆ ಪೂರಕವಾದ ವಾತಾವರಣವೇ ಇದ್ದಿತ್ತು. ಆಟ, ಕೂಟ ಎಂಬ ಎರಡು ಪ್ರಕಾರಗಳನ್ನೂ ನೋಡುತ್ತಾ ಬೆಳೆದರು. ಶಾಲಾ ವಿದ್ಯಾಭ್ಯಾಸದತ್ತ ಒಲವು ಕಡಿಮೆಯಾದರೂ ಪುರಾಣ ಸಂಬಂಧೀ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಇದು ಯಕ್ಷಗಾನ ಕಲಾವಿದನಾಗಲು ಭದ್ರ ಬುನಾದಿಯೇ ಆಯಿತು. ಯಾವಾತನು ಸದಾ ಓದುತ್ತಾನೋ, ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟು ಕಮಲವು ಅರಳುವಂತೆ ಅರಳುತ್ತದೆ. ಹಾಗೆಯೇ ಓದುತ್ತಾ ಪುರಾಣಜ್ಞಾನವನ್ನು ಗಳಿಸಿಕೊಂಡರು. ತೆಂಕಿನ ನಾಟ್ಯಾಚಾರ್ಯ ಕುರಿಯ ಶ್ರೀ ವಿಠಲ ಶಾಸ್ತ್ರಿಗಳಿಂದ ಅಭ್ಯಾಸ. ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿ, 1947ರಲ್ಲಿ ಕಲ್ಲಾಡಿ ಶ್ರೀ ಕೊರಗ ಶೆಟ್ರ ಯಜಮಾನಿಕೆಯ ಶ್ರೀ ಕಟೀಲು ಮೇಳಕ್ಕೆ ಸೇರ್ಪಡೆ. ಪ್ರಸಿದ್ಧ ಹಾಸ್ಯಗಾರರಾದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಯಿಸರು ಕೊರಗ ಶೆಟ್ರ ಬಳಿಗೆ ಇವರನ್ನು ಕರೆದುಕೊಂಡು ಹೋಗಿದ್ದರಂತೆ. ದಿ| ಬಲಿಪ ನಾರಾಯಣ ಭಾಗವತರು, ನೆಡ್ಲೆ ನರಸಿಂಹ ಭಟ್ಟರು, ಅಳಿಕೆ ಮೋನಪ್ಪ ರೈಗಳು, ಬಣ್ಣದ ಕುಟ್ಯಪ್ಪು, ಚಂದ್ರಗಿರಿ ಅಂಬು, ಕುಂಞರಾಮ ಮಣಿಯಾಣಿ, ಬೋಳಾರ ನಾರಾಯಣ ಶೆಟ್ಟಿ, ಅಡ್ಕಸ್ಥಳ ನಾರಾಯಣ ಶೆಟ್ರು, ಅಳಿಕೆ ರಾಮಯ್ಯ ರೈಗಳು, ಪಡ್ರೆ ಚಂದು, ಮೂಡುಬಿದಿರೆ ಕೃಷ್ಣ (ಕಿಟ್ಟು), ಸ್ತ್ರೀಪಾತ್ರಕ್ಕೆ ಪುರುಷೋತ್ತಮ ಭಟ್ಟರು, ಹಾಸ್ಯಕ್ಕೆ ವಿಟ್ಲ ಜೋಶಿಯವರು. ಮೊದಲಾದ ಕಲಾವಿದರು ಕಲ್ಲಾಡಿ ಕೊರಗ ಶೆಟ್ರ ಯಜಮಾನಿಕೆಯಡಿಯಲ್ಲಿ ಕಲಾಸೇವೆ ಮಾಡುತ್ತಿದ್ದರು. ಕೋಳ್ಯೂರು ರಾಮಚಂದ್ರ ರಾಯರು ಬಾಲಗೋಪಾಲನಾಗಿ ಪೂರ್ವರಂಗ ಎಲ್ಲಾ ವೇಷಗಳನ್ನೂ ಮಾಡುತ್ತಾ ಹಂತ ಹಂತವಾಗಿ ಮೇಲೇರಿದರು. ಪೂರ್ವರಂಗದ ಎಲ್ಲಾ ವೇಷಗಳನ್ನೂ ಇಂದು ನಿರ್ವಹಿಸುವ ಜ್ಞಾನವನ್ನು ಹೊಂದಿದ ಕೆಲವೇ ಕೆಲವು ಕಲಾವಿದರಲ್ಲಿ ಇವರು ಪ್ರಮುಖರು. ನಂತರ ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ.
ತಿರುಗಾಟ ಆರಂಭಿಸಿದ ಮೇಲೆ ಕೋಳ್ಯೂರು ರಾಮಚಂದ್ರ ರಾಯರು ಹಿಂತಿರುಗಿ ನೋಡಿದವರಲ್ಲ. ಬೆಳೆಯುತ್ತಾ ಮುಂದೆ ಸಾಗಿ ಕೀರ್ತಿಯೆಂಬ ಶಿಖರವನ್ನೇರಿದರು. ಹಿರಿಯ ಕಲಾವಿದರ, ವಿದ್ವಾಂಸರ ಒಡನಾಟವೂ ಇವರ ಕಲಿಕೆಗೆ ಅನುಕೂಲವಾಯಿತು. ಕರ್ನಾಟಕ ಮೇಳವಂತೂ ಗಜಮೇಳವೆಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಶ್ರೇಷ್ಠ ಕಲಾವಿದರನ್ನು ಹೊಂದಿದ ತಂಡವಾಗಿತ್ತು. ಕೋಳ್ಯೂರು ಅವರು ಪುರಾಣ ಮತ್ತು ತುಳು ಪ್ರಸಂಗಗಳಲ್ಲೂ ಮಿಂಚಿದರು. ಶಿಲೆಯು ಶಿಲ್ಪಿಯ ಕರಚಮತ್ಕೃತಿಯಿಂದ ಶಿಲ್ಪವಾಗುವಂತೆ ಕೋಳ್ಯೂರು ಅವರು ಪಾತ್ರಗಳನ್ನು ಚಿತ್ರಿಸುತ್ತಿದ್ದರು. ಅವರ ಪಾತ್ರರಚನಾ ಕೌಶಲವು ಪ್ರಶಂಸನೀಯವಾದುದು. ಅಭ್ಯಾಸಿಗಳಿಗೆ ಅನುಸರಣೀಯ ವಾದುದು. ಪಾತ್ರದ ಸ್ವಭಾವವನ್ನು ಅರಿತೇ ಅಭಿನಯಿಸುತ್ತಿದ್ದರು. ಒಂದರ್ಥದಲ್ಲಿ ಪರಕಾಯ ಪ್ರವೇಶ. ಪಾತ್ರಗಳ ನಿರ್ವಹಣೆಯಲ್ಲಿ ಕಸವು ಲವಲೇಶವೂ ಇರುತ್ತಿರಲಿಲ್ಲ. ಭಾವನೆಗಳು ಪರಿಪೂರ್ಣವಾಗಿ ಹೊರಹೊಮ್ಮು ತ್ತಿದ್ದುವು. ದಮಯಂತಿ, ಚಂದ್ರಮತಿ, ದಾಕ್ಷಾಯಿಣಿ, ಶಕುಂತಲೆ, ದ್ರೌಪದಿ, ರುಕ್ಮಾಂಗದ ಚರಿತ್ರೆಯ ಮೋಹಿನಿ, ಬೇಡರ ಕಣ್ಣಪ್ಪ ಪ್ರಸಂಗದ ರಾಣಿ, ಚೂಡಾಮಣಿ ಪ್ರಸಂಗದ ಸೀತೆ, ಮಂಡೋದರಿ, ಮೇನಕೆ, ಮಾಯಾ ಶೂರ್ಪನಖಿ, ಮಾಯಾಪೂತನಿ, ಪಾರಿಜಾತ ಪ್ರಸಂಗದ ಸತ್ಯಭಾಮೆ, ಮಾಯಾ ಅಜಮುಖಿ, ಸುಭದ್ರೆ, ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿ (ಕಸೆ ಸ್ತ್ರೀವೇಷಗಳು) ಮೊದಲಾದ ವೇಷಗಳನ್ನು ಸಮರ್ಥವಾಗಿ ಚಿತ್ರಿಸಿದರು. ಅನೇಕ ತುಳು ಪ್ರಸಂಗಗಳ ವೇಷಗಳಲ್ಲೂ ರಂಜಿಸಿದರು. ಇವರ ಎಲ್ಲಾ ವೇಷಗಳೂ ಅಭ್ಯಾಸಿಗಳಿಗೆ, ಉದಯೋನ್ಮುಖರಿಗೆ ತೆರೆದಿಟ್ಟ ಪುಸ್ತಕದಂತೆ. ನೋಡಿ ಎಲ್ಲವನ್ನೂ ಸ್ವೀಕರಿಸಿ ಪ್ರಯೋಗಿಸಬಹುದು. ಅಲ್ಲದೆ ವಿಷಯೆ, ಚಂದ್ರಾವಳೀ, ಆಲೋಲಿಕೆ, ಪದ್ಮಾವತೀ ಮೊದಲಾದ ವೇಷಗಳನ್ನು ಎಳೆಪ್ರಾಯದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರೆಂಬುದನ್ನು ಕೇಳಿ ಬಲ್ಲೆ. ಕರ್ನಾಟಕ ಮೇಳವು ತಿರುಗಾಟ ನಿಲ್ಲಿಸಿದ ಮೇಲೆ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಕಟೀಲು ಮೇಳದಲ್ಲಿ ಇವರ ಜತೆಗಿನ ಮೂರು ತಿರುಗಾಟಗಳು ಮರೆಯಲಾಗದ ನೆನಪುಗಳು. ಅವಕಾಶ ಒದಗಿ ಬಂದುದು ನನ್ನ ಭಾಗ್ಯ. ಗುರುವಾಗಿ ಮಾರ್ಗದರ್ಶನ ಮಾಡಿದ್ದಾರೆ. ಸ್ನೇಹಿತನಂತೆ ಸಲಹೆಗಳನ್ನು ನೀಡಿರುತ್ತಾರೆ. ಕೆಲವು ವೇಷಗಳಿಗೆ ಸಂಭಾಷಣೆಗಳನ್ನು ಬರೆದೂ ಕೊಟ್ಟಿರುತ್ತಾರೆ. ಅಕ್ಷಯಾಂಬರ ವಿಲಾಸದ ಅವರ ದ್ರೌಪದಿ ಪಾತ್ರಕ್ಕೆ ಪ್ರಾತಿಕಾಮಿಯಾಗಿ ಅಭಿನಯಿಸಿದಾಗ ಮೆಚ್ಚುಗೆ ಸೂಚಿಸಿದ್ದರು. ಆಗ ಅತ್ಯಂತ ಸಂತೋಷವಾಗಿತ್ತು. ಕೋಳ್ಯೂರು ಶ್ರೀ ರಾಮಚಂದ್ರ ರಾಯರ ಜತೆ ಸಹಕಲಾವಿದನಾಗಿ ಕಿರಿಯನಾದ ನನಗೆ ಅಭಿನಯಿಸಲು ಸಂದರ್ಭ ಒದಗಿ ಬಂದುದು ನಿಜಕ್ಕೂ ಭಾಗ್ಯವೆಂದೇ ಭಾವಿಸುತ್ತೇನೆ. ನನ್ನನ್ನು ತಿದ್ದಿ ತೀಡಿದ್ದಾರೆ.
ಕೋಳ್ಯೂರು ಶ್ರೀ ರಾಮಚಂದ್ರ ರಾಯರು ಪ್ರಸ್ತುತ ಯಕ್ಷಗಾನ ಕಲಾವಿದನಾಗಿ ನಿವೃತ್ತರು. ಆದರೂ ಅವರ ಅನುಭವಗಳು ನಮಗೆ ಸ್ವೀಕಾರಾರ್ಹವಾದುದು. ಅದನ್ನು ಅವರಿಂದ ಪಡೆಯುವಲ್ಲಿ ನಾವು ಪ್ರಯತ್ನಿಸೋಣ. ಯಕ್ಷಗಾನ ಸಂಬಂಧೀ ಗೋಷ್ಠಿ, ಕಮ್ಮಟಗಳಲ್ಲಿ ಶ್ರೀಯುತರು ಸದಾ ಕಾಣಿಸಿಕೊಳ್ಳಬೇಕು. ಕೇಳಿದರೆ ಪ್ರೀತಿಯಿಂದ ಕುಳ್ಳಿರಿಸಿ ಹೇಳಿ ಕೊಡುವ ಗುಣ ಅವರಲ್ಲಿದೆ ಎಂಬುದು ನನಗಾದ ಅನುಭವ. ಸನ್ಮಾನಗಳಿಗೆ ಪ್ರಶಸ್ತಿಗಳಿಗೆ ಹಂಬಲಿಸದಿದ್ದರೂ ರಾಜ್ಯೋತ್ಸವ, ರಾಷ್ಟ್ರೋತ್ಸವ ಪ್ರಶಸ್ತಿಗಳೂ, ಡಾಕ್ಟರೇಟ್ ಪದವಿಯೂ ಅವರ ಸಾಧನೆಗೆ ಒಲಿದು ಬಂತು. ಬಡಗಿನ ಅನೇಕ ಹಿರಿಯ ಕಲಾವಿದರ ಜತೆಯೂ ಅಭಿನಯಿಸಿ ಪ್ರಶಂಸೆಗೆ ಪಾತ್ರರಾದ ಕೋಳ್ಯೂರು ಅವರಿಗೆ 2018ನೇ ಸಾಲಿನ ಪಿ. ವಿ. ಹಾಸ್ಯಗಾರ ಪ್ರಶಸ್ತಿ ಘೋಷಣೆಯಾದುದು ಸಂತಸದ ವಿಚಾರ. ನವಂಬರ್ 18ರಂದು ಹೊನ್ನಾವರ ಹವ್ಯಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಾಯೋಜಕರಾದ ಆನಂದ ಪರಮ ಹಾಸ್ಯಗಾರರು ತಿಳಿಸಿದ್ದಾರೆ. ಕೋಳ್ಯೂರು ಅವರಿಗೂ ಪ್ರಶಸ್ತಿ ಪ್ರಾಯೋಜಕರಿಗೂ ಅಭಿನಂದನೆಗಳು. ಕಾರ್ಯಕ್ರಮವು ಸುಂದರವಾಗಿ ಮೂಡಿ ಬರಲೆಂಬ ಹಾರೈಕೆಗಳು. ಖ್ಯಾತ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಂದ ಇನ್ನಷ್ಟು ಕಲಾಸೇವೆಯಾಗಲಿ. ಅವರಿಂದ ಇನ್ನಷ್ಟು ಕೊಡುಗೆಗಳು ಯಕ್ಷಗಾನಕ್ಕೆ ಕೊಡಲ್ಪಡಲಿ. ಅವರು ಶತಾಯುಷಿಯಾಗಲಿ. ದೇವರು ಆರೋಗ್ಯ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರಯಿಕೆಗಳು.ು
- ರವಿಶಂಕರ ವಳಕ್ಕುಂಜ

Comments
Post a Comment