ಸರ್ಪಂಗಳ ಪ್ರಶಸ್ತಿ ವಿಜೇತ - ಅಭಿನವ ವಾಲ್ಮೀಕಿ, ಯಕ್ಷಗಾನದ ಸಮರ್ಥ ನಿರ್ದೇಶಕ - ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ

                 ‘‘ವಿದ್ವಾಂಸನು ಗುಹೆಯೊಳಡಗಿದರೂ ಕರೆತಂದು ಗೌರವಿಸುತ್ತಾರೆ’’ ಎಷ್ಟು ಅರ್ಥಪೂರ್ಣವಾದ ಮಾತು. ಅರ್ಹರನ್ನು ಗುರುತಿಸಿ ಗೌರವಿಸ ಬೇಕಾದುದು ನಮಗೆ ಕರ್ತವ್ಯವೂ ಹೌದು. ಪಕ್ವವಾದುದನ್ನೇ ಬಳಸುವುದು ಸಂಸ್ಕೃತಿ. ಅಪಕ್ವವಾದುದು ಆಕರ್ಷಣೀಯವಾಗಿದ್ದರೂ ಬಳಸದೆ ಎತ್ತಿ ಎಸೆಯುವುದು ಸರಿಯಾದ ರೀತಿ. ನಿಜಪ್ರತಿಭೆಗೆ ಪ್ರಶಸ್ತಿಯು ಸಂದಾಗ ಆ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಸರ್ಪಂಗಳ ಪ್ರಶಸ್ತಿ ವಿಜೇತರಾದ         ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಮತ್ತು ಅವರನ್ನು ಗೌರವಿಸಿದ ಮಹನೀಯರುಗಳಿಗೆ ಓದುಗರ, ಸಮಸ್ತ ಕಲಾಭಿಮಾನಿಗಳ ಪರವಾಗಿ ಅಭಿನಂದನೆಗಳು. ಶ್ರೀ ಪೂಂಜರನ್ನು ಅರಸಿಕೊಂಡು ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂಬ ಹಾರಯಿಕೆಗಳು. ಶ್ರೀಯುತರು ಕಟೀಲು ಮೇಳದ ಹಿರಿಯ ಭಾಗವತರು. ಅವರದು ಬಹುಮುಖ ಪ್ರತಿಭೆ. ಅದ್ಭುತ ಪ್ರತಿಭೆ. ಅದ್ಭುತವೆಂದರೆ ಪ್ರಕೃತಿಗೆ ವಿರುದ್ಧವಾದುದು ಎಂದರ್ಥ. ಮಾನವನಾಗಿ ಹುಟ್ಟಿದವನಿಗೆ ಸಾಧನೆಯನ್ನು ಮಾಡುವಲ್ಲಿ ಒಂದು ಮಿತಿ ಇದೆ. ಸತತ ಅಭ್ಯಾಸಿಯಾಗಿ, ತನ್ನ ಪ್ರತಿಭಾ ವ್ಯಾಪಾರದಿಂದ, ಉಳಿದವರಿಗೆ ಎಟುಕಲಾರದ ಸಾಧನೆಯನ್ನು ಮಾಡಿದರೆ ಅದು ಅದ್ಭುತ ಎನಿಸಲ್ಪಡುತ್ತದೆ. ಪೂಂಜರು ಅಂತಹ ಮಹಾನ್ ಸಾಧಕ. ಅವರೊಳಗೊಬ್ಬ ನಿರ್ದೇಶಕನಿದ್ದಾನೆ, ಕವಿಶ್ರೇಷ್ಠನಿದ್ದಾನೆ, ಕಲಾವಿದ ನಿದ್ದಾನೆ. ಶಿಷ್ಯರಿಗೆ ವಿದ್ಯೆಯೆಂಬ ಪೀಯೂಷವನ್ನು ಉಣಿಸುವ ಗುರುವಿದ್ದಾನೆ, ಉತ್ತಮ ಸಲಹೆಗಳನ್ನು ನೀಡಿ ಸಂತೈಸುವ ಮಿತ್ರನಿದ್ದಾನೆ! ತಾನು ಕಾಣಿಸಿಕೊಳ್ಳಬೇಕೆಂಬ ಆಸೆಯಿಲ್ಲ. ಪ್ರಶಸ್ತಿ, ಸನ್ಮಾನಗಳಿಗೆ ಹಂಬಲಿಸಿದವರಲ್ಲ. ಇದನ್ನು ಕನಸಿನಲ್ಲೂ ಇವರು ಕಾಣಲಾರರು. ಕಲಾಸೇವೆಯು ಕರ್ತವ್ಯವೆಂದು ಭಾವಿಸಿ ತನ್ನನ್ನು ತಾನು ತೊಡಗಿಸಿಕೊಂಡವರು. ಅವರೊಂದಿಗಿನ ಮೊದಲ ಮೂರು ತಿರುಗಾಟಗಳು ಮರೆಯಲಸಾಧ್ಯ. ನನಗೆ ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಅವರೂ ಕಾರಣರು. ವಿನೋದಪ್ರಿಯರಾದರೂ ಅವರ ಹತ್ತಿರ ಹೋಗಿ ಮಾತನಾಡಲು ಸಂಕೋಚ. ಭಯವೆಂದಲ್ಲ. ಅವರ ವ್ಯಕ್ತಿತ್ವಕ್ಕೆ ಸಲ್ಲುವ ಗೌರವ.
  
 ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮತ್ತು ಪಟ್ಲ ಸತೀಶ್ ಶೆಟ್ಟಿ -  ಪೂಂಜರ ಪ್ರಸಂಗ ಸಂಪುಟಗಳ ಬಿಡುಗಡೆ ಸಂದರ್ಭದಲ್ಲಿ (ಫೋಟೋ : ಅಶ್ವಿತ್ ಶೆಟ್ಟಿ ತುಳುನಾಡ್)

                         ಹತ್ತಿರ ಹೋದರೆ ಅವರೇ ಕರೆದು ಕುಳ್ಳಿರಿಸಿ ಮಾತನಾಡುತ್ತಾರೆ. ಹೇಳಿ ಕೊಡುತ್ತಾರೆ. ಒಮ್ಮೆಯೂ ಸಿಡುಕಿದವರಲ್ಲ. ಸರಳ, ಸಜ್ಜನ, ಸದಾ ಮುಗುಳ್ನಗುತ್ತಾ ಪ್ರೀತಿಯಿಂದ ಮಾತನಾಡಿಸುತ್ತಾರೆ. ‘‘ತುಂಬಿದ ಕೊಡ ತುಳುಕುವುದಿಲ್ಲ’’. ರೂಢಿಯ ಮಾತುಗಳು ಶಾಸ್ತ್ರಕ್ಕಿಂತಲೂ ಕೆಲವೊಂದು ಸಂದರ್ಭಗಳಲ್ಲಿ ಬಲಿಷ್ಠವಾಗಿರುತ್ತದೆ.
ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಶ್ರೀ ತ್ಯಾಂಪಣ್ಣ ಪೂಂಜ ಮತ್ತು ಶ್ರೀಮತಿ ಜಲಜಾ ದಂಪತಿಗಳ ಸುಪುತ್ರ. ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಬೊಟ್ಟಿಕೆರೆ ಎಂಬಲ್ಲಿ ಜನನ. ಇವರ ಮನೆಯವ ರೆಲ್ಲರೂ ಯಕ್ಷಗಾನಾಸಕ್ತರು. ಇವರ ಬಾಲ್ಯದಲ್ಲಿ ಈಗಿನಂತೆ ಯಕ್ಷಗಾನ ನೋಡುವ ಅವಕಾಶ ಇರಲಿಲ್ಲ. ಪ್ರದರ್ಶನಗಳು ತೀರಾ ವಿರಳ. ವರ್ಷಕ್ಕೆ ಬೆರಳೆಣಿಕೆಯ ಕಾರ್ಯಕ್ರಮಗಳು. ಪೂಂಜರು ಕೈರಂಗಳ ಸಮೀಪದ ಶಾಲೆಯಲ್ಲಿ ಕಲಿಯುತ್ತಿರುವಾಗ ಸದ್ರಿ ಶಾಲೆಯಲ್ಲಿ ಇವರ ಅಣ್ಣ ಸೀತಾರಾಮ ಪೂಂಜರು ಅಲ್ಲಿ ಶಿಕ್ಷಕರಾಗಿದ್ದರು. ಕೈರಂಗಳದಲ್ಲಿ ಯಕ್ಷಗಾನ ಸಂಘವೂ ಕಾರ್ಯಾಚರಿಸುತ್ತಿತ್ತು. ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದ ಅಣ್ಣ ಸೀತಾರಾಮ ಪೂಂಜರ ಅಭ್ಯಾಸ ಪುಸ್ತಕಗಳನ್ನು ಪುರುಷೋತ್ತಮ ಪೂಂಜರು ನೋಡುತ್ತಿದ್ದರಂತೆ. ಪೆರ್ಲ ಕೃಷ್ಣ ಭಟ್ಟರು ಬರೆದ ‘ತಾಳಮದ್ದಳೆ’ ಎಂಬ ಪ್ರಹಸನವನ್ನು ಶಾಲೆಯಲ್ಲಿ ಶಿಕ್ಷಕರಿಗೋಸ್ಕರ ಏರ್ಪಡಿಸಿದ್ದ ಸಂದರ್ಭ. ಪ್ರಹಸನದ ‘ಭಾಗವತರ ಪಾತ್ರವನ್ನು ಅನಿವಾರ್ಯವಾಗಿ ಮಾಡಬೇಕಾಯಿತು. ಆ ಪಾತ್ರವು ನಾಲ್ಕು ಪದ್ಯಗಳನ್ನು ಹಾಡಬೇಕಾಗಿತ್ತು. ಭಜನಾ ಪದ್ಯಗಳನ್ನು ಹಾಡಿ, ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಅಭ್ಯಾಸವಿದ್ದ ಪೂಂಜರು ಕಲಿತು ಪಾತ್ರವನ್ನು ನಿರ್ವಹಿಸಿದರು. ಹೀಗೆ ಅಂಟಿದ ಯಕ್ಷಗಾನದ ನಂಟು, ಅವರೊಬ್ಬ ಯಕ್ಷಗಾನದ ಸಮರ್ಥ ನಿರ್ದೇಶಕನಾಗುವಲ್ಲಿ ವೇದಿಕೆಯಾಯಿತು.
                          ಶ್ರೀ ಪೂಂಜರು ಪ್ರೌಢಶಿಕ್ಷಣವನ್ನು ಪೂರೈಸಿ, ಮಂಗಳೂರು ಸರಕಾರೀ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕಲಾಸಕ್ತಿಯನ್ನು ಬೆಳೆಸಿಕೊಂಡ ಇವರು ಕಲೆಯ ಒಂದೊಂದೇ ಅಂಗಗಳನ್ನು ಅಭ್ಯಸಿಸುತ್ತಾ, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಬೆಳೆದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಆಟ, ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಸಂಘದ ವೇಷಭೂಷಣಗಳನ್ನು ಸಾಗಿಸುವಾಗ ಇವರೂ ಜತೆಯಾಗಿ ಸಾಗುತ್ತಿದ್ದರು. ಮೇಕಪ್ ಮಾಡುವ ಕಲೆಯೂ ಪೂಂಜರಿಗೆ ಗೊತ್ತು. ಹಾಗಾಗಿಯೇ ಕಲಾವಿದರ ಬಣ್ಣಗಾರಿಕೆ ಸರಿಯಾಗಿ ಇರದಿದ್ದರೆ ಗುರುತಿಸುತ್ತಾರೆ. ಭಾಗವತನಾಗಿ ಅವರನ್ನು ತಿದ್ದುವುದಕ್ಕೆ ಅವಕಾಶವಾಯಿತು. ಮೇಕಪ್ ಮಾಡಿ ಅನಿವಾರ್ಯವಾದರೆ ವೇಷ ಮಾಡುತ್ತಿದ್ದರು. ಅಗತ್ಯ ಬಿದ್ದರೆ ಭಾಗವತಿಕೆ ಮಾಡಲೂ, ಚೆಂಡೆ ಮದ್ದಳೆ ಬಾರಿಸಲೂ ಹಿಂಜರಿದವರಲ್ಲ. ಭಾಗವತರಿಗೆ ಅನಿರೀಕ್ಷಿತವಾಗಿ ಪದ್ಯ ಹೇಳಲು ಅನಾನುಕೂಲವಾದಾಗ ವೇಷ ಕಳಚಿ ಪೂಂಜರು ಪದ್ಯ ಹೇಳಿದ್ದೂ ಇದೆ. ನನಗೆ ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ತೊಡಗಿಸಿಕೊಳ್ಳುವ ಅವಕಾಶವು ಬಂತು. ನನಗದು ಭಾಗ್ಯ. ಆದರೆ ನಾನು ಪರಿಪೂರ್ಣನಲ್ಲ. ನಾನು ಯಕ್ಷಗಾನದಲ್ಲಿ ಒಬ್ಬ ವಿದ್ಯಾರ್ಥಿ ಅಷ್ಟೆ ಎಂದು ವಿನೀತರಾಗಿ ಪೂಂಜರು ಹೇಳುತ್ತಾರೆ. ಹೌದು, ಪೂಂಜರು ಯಾವತ್ತೂ ಬೀಗಿದವರಲ್ಲ. ಬಾಗುವುದು ಅವರ ಶ್ರೇಷ್ಠ ಗುಣ. ಫಲಪುಷ್ಪಗಳಿಂದ ತುಂಬಿಕೊಂಡಿರುವ ರೆಂಬೆಯು ತಾನೆ ಬಾಗುವುದು? ಬೆಲೆಬಾಳುವ ಲೋಹಗಳು ಹೆಚ್ಚು ಧ್ವನಿಸುವುದಿಲ್ಲ. 1974ರಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ಪೂಂಜರೊಳಗೆ ಆಗಲೇ ಶ್ರೇಷ್ಠ ಕವಿಯೊಬ್ಬ ಅವ್ಯಕ್ತವಾಗಿದ್ದ. ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗಲೇ ‘ವೈಶಾಲಿನಿಪರಿಣಯ’ ಎಂಬ ಪ್ರಸಂಗವನ್ನು ಎಲ್ಲರೂ ಬೆರಗಾಗುವಂತೆ ರಚಿಸಿದ್ದರು! ಅದರಲ್ಲಿರುವ ದೋಷಗಳನ್ನು ಗುರುಮುಖೇನ ತಿಳಿದು, ತಿದ್ದಿಕೊಂಡು ಪ್ರಯತ್ನಿಸಿದಾಗ ವೈಶಾಲಿನಿಪರಿಣಯವು ‘ವಧುವೈಶಾಲಿನಿ’ ಎಂಬ ಶ್ರೇಷ್ಠ ಪ್ರಸಂಗವಾಯಿತು. ಕಾಲೇಜು ದಿನಗಳಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಪೂಂಜರ ಸಹಕಲಾವಿದರಾಗಿದ್ದರು.
                                ಉದ್ಯೋಗವನ್ನರಸಿ ವಾಣಿಜ್ಯ ನಗರಿಯತ್ತ : ಪದವೀಧರರಾದ ಪುರುಷೋತ್ತಮ ಪೂಂಜರು ಮುಂಬಯಿ ನಗರವನ್ನು ಸೇರಿಕೊಂಡರು. ಊರನ್ನು ಬಿಟ್ಟರೂ ಯಕ್ಷಗಾನವನ್ನು ಬಿಟ್ಟವರಲ್ಲ. ಮುಂಬಯಿಯಲ್ಲಿ ಕಲಾಸೇವೆಯನ್ನು ಮಾಡುವ ಅವಕಾಶಗಳೂ ಸಿಗುತ್ತಿತ್ತು. ಅಲ್ಲಿ ಹಲವು ಯಕ್ಷಗಾನ ಮಂಡಳಿಗಳು ಕಾರ್ಯಾಚರಿಸುತ್ತಿತ್ತು. ‘ಗೀತಾಂಬಿಕಾ’ ಮಂಡಳಿಯಲ್ಲಿ 7 ವರ್ಷಗಳ ಕಾಲ ಸದಸ್ಯನಾಗಿ, ವೇಷಧಾರಿಯಾಗಿ, ಭಾಗವತನಾಗಿ ತನ್ನ ಅನುಭವಗಳನ್ನು ನಗರವಾಸೀ ಸಹಕಲಾವಿದರಿಗೆ ಧಾರೆಯೆರೆದರು. ಪ್ರಸ್ತುತ ಅನೇಕ ವರ್ಷ ಗಳಿಂದ ಪೂಂಜರು ಮುಂಬಯಿಯಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದಾರೆ (ಮಳೆಗಾಲದಲ್ಲಿ) ಅವರ ಶಿಷ್ಯಂದಿರನೇಕರು ಮುಂಬೈ ನಗರದಲ್ಲಿ ಕಲಾವಿದರಾಗಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬಯಿಯಲ್ಲಿ 7 ವರ್ಷ ಕಾಲ ಕಲಾಸೇವೆಯಲ್ಲಿ ತೊಡಗಿಸಿಕೊಂಡದ್ದು ಮೇಳದ ಕಲಾವಿದನಾಗಲು ಮಾರ್ಗಸೂಚಿಯಾಯಿತು ಎಂಬುದು ಪೂಂಜರ ಅಭಿಪ್ರಾಯ. ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಭಡ್ತಿ ವಿಷಯದಲ್ಲಿ ಮನನೊಂದು ಪೂಂಜರು ವಾಣಿಜ್ಯನಗರಿಗೆ ಬೆನ್ನುಹಾಕಿ ಮನೆಯತ್ತ ಸಾಗಿಬಂದರು. ಮುಂಬಯಿಯಲ್ಲೇ ಇರುತ್ತಿದ್ದರೆ ಆರ್ಥಿಕವಾಗಿ ಶ್ರೀಮಂತರಾಗುತ್ತಿದ್ದರು. ಕಲಾಸೇವೆಯನ್ನು ಮಾಡಿ ಯಕ್ಷಗಾನದ ಶ್ರೀಮಂತಿಕೆ ಹೆಚ್ಚಲು ಕಾರಣರಾದರು. ಹೃದಯಶ್ರೀಮಂತಿಕೆಯನ್ನು ಹೊಂದಿದ ಪೂಂಜರನ್ನು ಕಲಾಮಾತೆಯು ಅನುಗ್ರಹಿಸುತ್ತಾಳೆ. ಪೂಂಜ ದಂಪತಿಗಳು ಮಕ್ಕಳಿಗೆ ಒಳ್ಳೆಯ ವಿದ್ಯೆಯೆಂಬ ಅಮೃತವನ್ನು ಉಣಿಸಿದ್ದಾರೆ. ಆ ದೆಸೆಯಿಂದ ಪೂಂಜರೂ ಆರ್ಥಿಕವಾಗಿಯೂ ಶ್ರೀಮಂತಿಕೆಯನ್ನು ಅನುಭವಿಸುವಂತಾಗಲಿ ಎಂಬ ಹಾರೈಕೆಗಳು.
                        ಮುಂಬಯಿಯಿಂದ ಮರಳಿದ ಬಳಿಕ ಪುತ್ತೂರು ಮೇಳದಲ್ಲಿ ತಿರುಗಾಟ. ಆ ವರ್ಷವೇ ‘ಪಟ್ಟದ ಕತ್ತಿ’ ಎಂಬ ಪ್ರಸಂಗ ರಚನೆ. ಕಲಾಮಾತೆಯು ಪೂಂಜರನ್ನು ಅನುಗ್ರಹಿಸಲಾರಂಭಿಸಿದಳು. ಪುರಾಣ, ಕಾಲ್ಪನಿಕ, ತುಳು ಪ್ರಸಂಗಳನೇಕ ಪೂಂಜರ ಲೇಖನಿಯಿಂದ ಹೊರಬಂದವು. ಅಂಧಕ ನಿದಾನ, ಭುವನಾಭಿರಾಮ (ಕನ್ನಡ), ಜೇವುಕೇದಗೆ (ತುಳು) ಎಂಬ ನೃತ್ಯರೂಪಕಗಳನ್ನೂ ರಚಿಸಿದರು. ಅಲ್ಲದೆ ‘ಹಿತ್ತಾಳೆ ಕಿವಿ’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದರೆ. ಪುತ್ತೂರು ಮೇಳದ ನಂತರ ಕರ್ನಾಟಕ ಮೇಳದಲ್ಲಿ 5 ವರ್ಷ ತಿರುಗಾಟ. ನಂತರ ಕಳೆದ 25 ವರ್ಷಗಳಿಂದ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಭಾಗವತ ಹೇಗಿರಬೇಕು ಎಂದು ಕೇಳಿದರೆ- ‘‘ಭಾಗವತರು ಬರಿಯ ಹಾಡುಗಾರರಾದರೆ ಸಾಲದು. ತುಂಬಾ ಚೆನ್ನಾಗಿ ಹಾಡುವವರಿದ್ದಾರೆ. ಬೇರೇನೂ ವಿಷಯ ಗೊತ್ತಿರುವುದಿಲ್ಲ. ಅವನಿಗೆ ಯಕ್ಷಗಾನದ ಸಮಗ್ರ ಜ್ಞಾನವಿರಬೇಕು. ರಾಗ, ತಾಳ, ಲಯ, ಜ್ಞಾನ ಬೇಕು. ಸಾಹಿತ್ಯಜ್ಞಾನ, ಅರ್ಥಜ್ಞಾನ, ಹೆಜ್ಜೆಗಾರಿಕೆ, ಚೆಂಡೆ, ಮದ್ದಳೆಯ ಬಗ್ಗೆ ತಿಳಿದಿರಬೇಕು. ಬಣ್ಣಗಾರಿಕೆಯ ಬಗ್ಗೆಯೂ ತಿಳಿದಿದ್ದರೆ ಉತ್ತಮ. ಯಕ್ಷಗಾನದ ಸಮಗ್ರ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡಿ, ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸಿದವನೇ ‘ಪರಿಪೂರ್ಣ ಭಾಗವತ’ ಎಂದು ಕರೆಸಿಕೊಳ್ಳುತ್ತಾನೆ.
ನಮ್ಮ ಹಿಂದಿನ ಭಾಗವತರೆಲ್ಲಾ ಅಷ್ಟು ಸಮರ್ಥರಾದ ಕಾರಣ ಭಾಗವತರೆಂದು ಕರೆಯಿಸಿಕೊಂಡರು. ಅಗರಿ ಭಾಗವತರು ಪುಸ್ತಕವಿಲ್ಲದೇ ಆಟ ಆಡಿಸುತ್ತಿದ್ದರು. ಆಶುಕವಿತ್ವದ ಶಕ್ತಿ, ಕವಿತಾ ಸಾಮರ್ಥ್ಯ, ರಂಗವನ್ನು ನಿರ್ದೇಶಿಸುವ ಸಾಮರ್ಥ್ಯ, ಪ್ರಸಂಗಜ್ಞಾನ, ಕಲಾವಿದರು ತಪ್ಪು ಮಾಡಿದರೆ ತಿದ್ದುವ ಸಾಮರ್ಥ್ಯ, ಪುರಾಣಜ್ಞಾನ ಇವೆಲ್ಲವನ್ನೂ ಅಧ್ಯಯನದಿಂದ ಭಾಗವತರು ತಿಳಿದಿರಬೇಕು. ಈಗಿನ ಕಲಾವಿದರಿಗೆ ಕಲಿಯಲು ಬೇಕಾದಷ್ಟು ಅವಕಾಶಗಳಿವೆ. ಸ್ಮಾರ್ಟ್‍ಫೋನ್ ಇದ್ದರೆ ಅಂತರ್ಜಾಲದಲ್ಲಿ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬಹುದು. ಹಿಂದಿನವರಿಗೆ ದೇಶ ಸುತ್ತಿ ಕೋಶ ಓದಬೇಕಾಗುತ್ತಿತ್ತು ಎಂದು ಶ್ರೀ ಪೂಂಜರು ಹೇಳುತ್ತಾರೆ.
                              ಮೇಳದ ತಿರುಗಾಟದ ಅವಧಿಯಲ್ಲಿ ಪೂಂಜರಿಗೆ ಬರೆಯಲು ಸಮಯಾವಕಾಶ ಸಿಗುತ್ತಿರಲಿಲ್ಲವಾದರೂ ‘ಮನ್ಮಥೋಪಖ್ಯಾನ’ ಮತ್ತು ‘ಸತಿ ಉಲೂಪಿ’ ಎಂಬ ಪ್ರಸಂಗಗಳನ್ನು ರಚಿಸಿದರು. ಪತ್ತನಾಜೆಗೆ ಮೇಳದ ತಿರುಗಾಟ ಮುಗಿದ ನಂತರ ಮಳೆಗಾಲದಲ್ಲಿ ಬರೆಯುತ್ತಿದ್ದರು. ‘ಮಾನಿಷಾಧ’ ಎಂಬ ಪ್ರಸಂಗವನ್ನು ರಚಿಸಿ ‘ಅಭಿನವ ವಾಲ್ಮೀಕಿ’ ಎಂದು ಪ್ರಸಿದ್ಧರಾದರು. ಕರ್ನಾಟಕ ಮೇಳದಲ್ಲಿ ಜಯಭೇರಿ ಬಾರಿಸಿದ ಈ ಪ್ರಸಂಗವು ಈಗ ಎಲ್ಲೆಡೆ ಪ್ರದರ್ಶಿತವಾಗುತ್ತಿದೆ. ದಶಪ್ರಚೇತಸರಿಗೆ ವೃಕ್ಷಕನ್ಯೆ ಮಾರಿಷೆಯಲ್ಲಿ ಮಗನಾಗಿ ಜನಿಸಿ, ದಕ್ಷನ (ನಾರದನಿಗೆ ಕಲಹಪ್ರಿಯನಾಗು ಎಂದು ಶಪಿಸಿದ) ಸಹೋದರನಾಗಿ, ಗುರುಶಾಪದಿಂದ ನಿಷಾಧನಾಗಿ, ಸಪ್ತರ್ಷಿಗಳ ಸಂಸರ್ಗ ದಿಂದ ತಾರಕಮಂತ್ರವನ್ನು ಪಠಿಸುತ್ತಾ ವಲ್ಮೀಕದಿಂದ ಎದ್ದುಬಂದು ವಾಲ್ಮೀಕಿಯಾಗಿ, ಬ್ರಹ್ಮರ್ಷಿಯಾಗಿ, ಬ್ರಹ್ಮಶಾರದೆಯರ ಅನುಗ್ರಹದಿಂದ ಸಾಕೇತದ ಸಾರ್ವಭೌಮನಾದ ಶ್ರೀರಾಮಚಂದ್ರನನ್ನು ಕಥಾನಾಯಕನಾಗಿ ಸ್ವೀಕರಿಸಿ ‘ಶ್ರೀಮದ್ರಾಮಾಯಣ’ ಎಂಬ ಘನವಾದ ಕಾವ್ಯವನ್ನು ವಿರಚಿಸಿ ‘ಆದಿಕವಿ’ ಎಂದು ಪ್ರಸಿದ್ಧನಾದ ವಾಲ್ಮೀಕಿ ಮಹರ್ಷಿಯ ಚರಿತೆ ಈ ಪ್ರಸಂಗದೊಳಗಡಗಿದೆ. ಹೀಗೆ ಅನೇಕ ಪ್ರಸಂಗಗಳನ್ನು ರಚಿಸಿದರು. ಇವರ ಇಪ್ಪತ್ತೊಂಬತ್ತು ಪ್ರಸಂಗಗಳು ಸಂಪುಟಗಳಾಗಿ ‘ಅಂಬುರುಹ ಕುಶ’ ಮತ್ತು ‘ಅಂಬುರುಹ ಲವ’ ಎಂಬ ಹೆಸರುಗಳಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಈ ಸಂಸ್ಥೆಯಿಂದ ಲೋಕಾರ್ಪಣೆಗೊಂಡಿತು. ಪೂಂಜರಿಗೆ ಅವರು ರಚಿಸಿದ ಪ್ರಸಂಗಗಳನ್ನು ಸಂಪುಟಗಳಾಗಿ ಹೊರತರಲು ಮೂಲಪ್ರೇರಕರು ಕಟೀಲು ಸಿತ್ಲ ಶ್ರೀ ರಂಗನಾಥ ರಾಯರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸರಳವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಅರ್ಥ ಹೇಳಿಕೊಡಬಲ್ಲರು. ಸಾಹಿತ್ಯ ರಚನೆ ಮಾಡಬಲ್ಲರು. ಆದರೂ ಅಪರೂಪದ ಶಬ್ದಗಳು ಅವರು ರಚಿಸಿದ ಹಾಡುಗಳಲ್ಲಿ ಗಮನಿಸಬಹುದು. ಉದಾ- ಮಾನಿಷಾಧ ಪ್ರಸಂಗದ ಮೊದಲ ಪದ್ಯ- ಅಂಚೆದೇರನು ತನ್ನ ಸೃಷ್ಠಿಯ | ಪಂಚಭೂತಾತ್ಮಕ ಪ್ರಪಂಚದ | ಚಂಚಲತೆಯನ್ನೆಣಿಸಿ ಮರುಗೆ ವಿವಂಚನೆಯಲಿ || ಇಂತಹ ವೈಶಿಷ್ಟ್ಯಗಳು ಪೂಂಜರ ಪ್ರತಿಯೊಂದು ಪ್ರಸಂಗಗಳ ಕೆಲವು ಪದ್ಯಗಳಲ್ಲಿ ಇವೆ. ವೇಷಧಾರಿಗಳು ಸಂಭಾಷಣೆಗಳನ್ನು ಸಿದ್ಧಗೊಳಿಸುವಲ್ಲಿ ಯೋಚಿಸುವುದಕ್ಕೆ, ಕೇಳಿ ತಿಳಿಯುವ ಗುಣವನ್ನು ಬೆಳೆಸಿಕೊಳ್ಳಲು ಇದೊಂದು ವೇದಿಕೆಯೇ ಆಯಿತು. ಅಂಚೆದೇರ, ಕಿತ್ತಡಿ, ಗಂದವಾಹಕ, ಮತ್ರ್ಯ, ಬರ್ದಿಲ ಮೊದಲಾದ ಶಬ್ದಗಳಿಗೆ ಅರ್ಥವೇನೆಂದು ನಾನು ತಿಳಿದುದೇ ಮೇಳಕ್ಕೆ ಸೇರಿ ‘ಮಾನಿಷಾಧ’ ಪ್ರಸಂಗವನ್ನು ನೋಡಿದ ಮೇಲೆ. ಶುದ್ಧ ಭಾಷೆಯ ಉತ್ತಮ ಸಂಭಾಷಣೆಗಳನ್ನು ಮೆಚ್ಚಿ, ಪ್ರೋತ್ಸಾಹಿಸುವ ಪೂಂಜರು, ಕುಶಲೆಯಾದ ಗೃಹಿಣಿಯು ಷಡ್ರಸಗಳನ್ನು ಉಚಿತ ಪ್ರಮಾಣದಲ್ಲಿ ಸೇರಿಸಿ ಇಂದ್ರಿಯಭೋಗಕ್ಕೂ, ಆರೋಗ್ಯಕ್ಕೂ ಸರಿಹೊಂದುವ ಭೋಜ್ಯವನ್ನು ಅತಿಥಿಗಳಿಗೆ ಉಣಬಡಿಸುವಂತೆ, ರಸಗಳನ್ನು ಬೇಕಾದಂತೆ, ಉಚಿತ ಪ್ರಮಾಣ ದಲ್ಲಿ ಸೇರಿಸಿ, ಪ್ರಸಂಗಗಳನ್ನು ರಚಿಸಿ ಕಲಾವಿದರಿಗೆ, ಪ್ರೇಕ್ಷಕರಿಗೆ ರಸದೌತಣವನ್ನೇ ನೀಡಿದರು. ಖ್ಯಾತ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರ ಅಭಿಪ್ರಾಯದಂತೆ- ‘‘ಪೂಂಜರು ರಚಿಸಿದ ಹಾಡುಗಳಿಗೆ ಅರ್ಥ ಹೇಳುವಾಗ ಯೋಚಿಸಲೇಬೇಕು. ಅಧ್ಯಯನ ಮಾಡಲೇಬೇಕು. ಸಂಭಾಷಣೆಗಳನ್ನು ಪರಮಾವಧಿ ಉತ್ತಮವಾಗಿ ಮಾಡಿದರೂ ಸಾಕೆನಿಸುವುದಿಲ್ಲ. ತೃಪ್ತಿಯಾಗುವುದಿಲ್ಲ. ಕವಿಯ ಆಶಯಗಳನ್ನು ಹೇಳುವಲ್ಲಿ ನಾವು ಸೋತೆವೋ? ಎಂದೆನಿಸಿ ಮತ್ತೆ ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತವೆ. ಅಷ್ಟು ವಿಚಾರಗಳು ಅವರ ಪದ್ಯಗಳಲ್ಲಿ ಅಡಗಿವೆ. ಅದನ್ನು ಹೊರಗೆಡಹಿದರೆ ಅದೊಂದು ಸಾಹಸವೇ ಹೌದು.’’ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಾಹಿತ್ಯ ರಚನೆಯ ಕೌಶಲಕ್ಕೆ ಸಿಕ್ಕ ಪ್ರಶಸ್ತಿಯಿದು.
                    ಶಿಸ್ತಿನ ವಿಚಾರ ಬಂದಾಗ- ಇದು ಯಕ್ಷಗಾನಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇರಬೇಕು. ಹೇರಿಕೆಯಿಂದ, ನಿರ್ಬಂಧಪಡಿಸುವುದಕ್ಕಿಂತ ಕಲಾವಿದರು ಸ್ವಯಂ ತಮ್ಮನ್ನು ತಾವು ಶಿಸ್ತಿಗೊಳಪಡಿಸಿಕೊಳ್ಳಬೇಕು. ಶಿಸ್ತು ಇಲ್ಲದ ಜೀವನ ಪರಿಪೂರ್ಣವಾಗಲಾರದು. ಭಾಗವತರು, ವ್ಯವಸ್ಥಾಪಕರು ಹೇಳುವ ಮೊದಲೇ ತನ್ನ ಕಲಾಜೀವನದಲ್ಲಿ ಶಿಸ್ತಿನ ಚೌಕಟ್ಟನ್ನು ಕಲಾವಿದರು ಹಾಕಿಕೊಳ್ಳಬೇಕು. ‘ಕಾಲಮಿತಿ ಪ್ರದರ್ಶನ’ಗಳ ಬಗ್ಗೆ- ಕಾಲಮಿತಿ ಎನ್ನುವುದು ನಿಜವಾಗಿಯೂ ನಾವಿರುವ ಕಾಲದ ಬೇಡಿಕೆಯೆಂದೇ ಹೇಳಬಹುದು. ಇಡೀ ರಾತ್ರೆ ಯಕ್ಷಗಾನ ನೋಡಲು ಎಲ್ಲರಿಗೂ ಸಮಯವಿಲ್ಲ. ಉದ್ಯೋಗ, ಕೆಲಸದ ಒತ್ತಡ, ವೇಗದ ಯುಗದಲ್ಲಿ ಎಲ್ಲವೂ ವೇಗವೇ. ಆದುದರಿಂದ ಒಂದು ದೃಷ್ಠಿಯಲ್ಲಿ ಕಾಲಮಿತಿ ಅಗತ್ಯ. ಇನ್ನೊಂದು ದೃಷ್ಠಿಯಲ್ಲಿ ಯಕ್ಷಗಾನದ ಸಮಗ್ರ ಸೌಂದರ್ಯವನ್ನು ಸವಿಯಲು ಕಾಲಮಿತಿ ಪ್ರದರ್ಶನದಲ್ಲಿ ಅಸಾಧ್ಯ. ಸ್ವೀಕಾರಾರ್ಹ ಎನ್ನುವುದಕ್ಕಿಂತಲೂ ಈ ರೀತಿಯ ಪ್ರದರ್ಶನಗಳ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅನಿವಾರ್ಯ. ಪರಂಪರೆಯ ಒಡ್ಡೋಲಗದ ಕ್ರಮವನ್ನು ಪ್ರದರ್ಶಿಸುವುದಕ್ಕೆ 45 ನಿಮಿಷಗಳು ಬೇಕು. ಈಗ ಅದು 15 ನಿಮಿಷಕ್ಕೆ ಇಳಿದಿದೆ. ಮುಂದಕ್ಕೆ ಕಾಲದ ಮಿತಿಯಲ್ಲಿ ಸಿಕ್ಕಿ ಯಕ್ಷಗಾನದ ಎಲ್ಲಾ ವಿಭಾಗಗಳ ರಸಾಸ್ವಾದನೆ ಕಷ್ಟಸಾಧ್ಯ. ಇದರಲ್ಲಿ ಒಳಿತು ಕೆಡುಕುಗಳೆರಡೂ ಇವೆ. ಎಲ್ಲಾ ವಿದ್ಯೆಗಳಲ್ಲೂ ಕಲಿತ ನಂತರ ಪರೀಕ್ಷೆಯಿರುತ್ತದೆ. ಯಕ್ಷಗಾನದಲ್ಲಿ ಆ ವ್ಯವಸ್ಥೆ ಬೇಕೇ? ಎಂದು ಕೇಳಿದರೆ, ಖಂಡಿತವಾಗಿಯೂ ಮಾಡಬೇಕು. ತನ್ನ ಕಲಿಕೆಯನ್ನು ಪರೀಕ್ಷೆಗೆ ಒಳಪಡುವುದರ ಮೂಲಕವೇ ಸಾಬೀತುಪಡಿಸಬೇಕು. ಸ್ವಲ್ಪ ಸಮಯ ಅಭ್ಯಾಸ ಮಾಡಿ ರಂಗವೇರುವ ಕ್ರಮ ಸರಿಯಲ್ಲ. ಯಕ್ಷಗಾನದ ಮೂಲಪಾಠಗಳನ್ನು ಅಭ್ಯಾಸ ಮಾಡದೆ ಪ್ರದರ್ಶನಕ್ಕೆ ಹೊರಡುವುದಲ್ಲ. ಕೇರಳದ ಕಥಕ್ಕಳಿಯಂತಹ ಕಲೆಯಲ್ಲಿ ವರ್ಷಗಳ ಕಾಲ ಕಡ್ಡಾಯವಾಗಿ ಶಿಕ್ಷಣ ಪಡೆದು ಪರೀಕ್ಷೆಗೊಳಪಟ್ಟೇ ಪ್ರದರ್ಶನಕ್ಕೆ ಬರುತ್ತಾರೆ. ಯಕ್ಷಗಾನಕ್ಕೂ ಅದೇ ತೆರನಾದ ವ್ಯವಸ್ಥೆಯಾಗಬೇಕು ಎಂಬುದು ಪೂಂಜರ ಅಭಿಮತ.
                         ಶ್ರೀ ಪೂಂಜರ ಈ ಸಾಧನೆಗೆ ಅವರ ಪತ್ನಿ ಶ್ರೀಮತಿ ಶೋಭಾ ಅವರ ಸಹಕಾರವೂ ಇದೆ. ಅವಳು ನನಗಾಗಿ ದಿನವನ್ನಿಡೀ ಮೀಸಲಿಡಲು ಸದಾ ಸಿದ್ಧಳು. ಪತ್ನಿಯ ಸಹಕಾರ, ಪ್ರೋತ್ಸಾಹ ಇಲ್ಲದಿದ್ದರೆ ನಾನು ಈ ರಂಗದಿಂದ ಎಂದೋ ನಿವೃತ್ತನಾಗುತ್ತಿದ್ದೆ. ಮಕ್ಕಳೂ ಸಹಕಾರ ಕೊಡುತ್ತಿದ್ದಾರೆ. ಅವರೇ ನನಗೆ ಪ್ರೇರಕರು. ಹಾಗಾಗಿಯೇ ಅಸಾಧ್ಯವೆಂದು ಕಂಡರೂ ವೃತ್ತಿಕಲಾವಿದ ನಾಗಿ ಮುನ್ನಡೆಯುತ್ತಿದ್ದೇನೆ ಎಂದು ಮನೆಯವರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಓದುವುದು, ಬರೆಯುವುದು, ಸಂಗೀತ ಕೇಳುವುದು, ಕ್ರೀಡೆ ಪೂಂಜರ ಹವ್ಯಾಸಗಳು. ವಿದ್ಯಾರ್ಥಿಯಾಗಿದ್ದಾಗ ಕಾಲೇಜು ವಾಲಿಬಾಲ್ ತಂಡದ ನಾಯಕನಾಗಿದ್ದರು. ಬೆಳಗ್ಗೆ ಆಟ ಮುಗಿದು ಚೌಕಿಪೂಜೆ ಆದ ತಕ್ಷಣ ದಿನಪತ್ರಿಕೆ ಸಿಕ್ಕಿದರೆ ಸಂತೋಷವಾಗುತ್ತದೆ. ಓದಲೇಬೇಕು. ಆಟ ಮುಗಿದು ಮೇಳದ ವಾಹನ ಹೊರಡಲು ಸ್ವಲ್ಪ ಸಮಯ ಇದ್ದರೆ ಅವರ ಜತೆ ನಾನು ಕ್ರಿಕೆಟ್ ಆಡಿದ್ದೂ ಇದೆ (ಅವರು ಕೇಂಪ್‍ನಲ್ಲಿ ಇದ್ದ ದಿನಗಳು) ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಜೀವಿತೇಶ್ ಬಹ್ರೈನ್‍ನಲ್ಲಿ ಉದ್ಯೋಗದ ಜತೆ CA ಅಭ್ಯಾಸ. ಕಿರಿಯ ಪುತ್ರ ಆಳ್ವಾಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗಿ. ‘‘ಸರ್ಪಂಗಳ ಪ್ರಶಸ್ತಿ’’ ಪುರಸ್ಕೃತ ಶ್ರೀ ಪೂಂಜರ ಜೀವನ ಸುಖಕರವಾಗಿ ಸಾಗಲಿ. ಪ್ರಶಸ್ತಿಗಳು, ಗೌರವ, ಸನ್ಮಾನಗಳು ಬರಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವ ಚೈತನ್ಯವನ್ನು ದೇವರು ಅನುಗ್ರಹಿಸಲಿ ಎಂದು ನಾವೆಲ್ಲರೂ ಹಾರೈಸೋಣ.


- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು