ಸಮಾಜ ಸೇವೆಯ ಜತೆ ಕಲಾ ಸೇವೆ - ಡಾ. ಗೋವಿಂದ ಪ್ರಸಾದ ಕಜೆ

                     ಡಾ. ಗೋವಿಂದ ಪ್ರಸಾದ ಕಜೆ ಇವರು 16-10-1962ರಂದು ಪುತ್ತೂರು ತಾಲೂಕು ಕಬಕ ಗ್ರಾಮದ ಕಜೆ ಎಂಬಲ್ಲಿ ಕಜೆ ಈಶ್ವರ ಭಟ್ ಮತ್ತು ಇಂದಿರಾ ಕಜೆ ದಂಪತಿಗಳ ಮಗನಾಗಿ ಜನಿಸಿದರು. ಒಕ್ಟೋಬರ ತಿಂಗಳಿನಲ್ಲಿ ಜನಿಸಿದ ಗೋವಿಂದ ಪ್ರಸಾದ ಕಜೆ ಇವರ ಬಗ್ಗೆ ಲೇಖನವು ಸದ್ರಿ ತಿಂಗಳ ‘ಯಕ್ಷದೀಪ’ ಸಂಚಿಕೆಯಲ್ಲೇ ಪ್ರಕಟಗೊಂಡದ್ದು ನಮಗೆಲ್ಲರಿಗೂ ಸಂತೋಷದ ವಿಚಾರ. ಅವರಿಗೆ ಈ ಮೂಲಕ ಶುಭಾಶಯ ಗಳನ್ನು ಸಲ್ಲಿಸೋಣ. ಇವರು ವೃತ್ತಿಯಲ್ಲಿ ವೈದ್ಯರು.

ಉಪ್ಪಿನಂಗಡಿಯಲ್ಲಿ ‘ಸಂಜೀವಿನಿ ಕ್ಲಿನಿಕ್’ ನಡೆಸು ತ್ತಿದ್ದಾರೆ. ಯಕ್ಷಗಾನವು ಇವರಿಗೆ ಹವ್ಯಾಸ. ಮಾತ್ರವಲ್ಲ ಗಂಡುಕಲೆಯ ಬಗ್ಗೆ ಅಭಿಮಾನವನ್ನೂ ಪ್ರೀತಿಯನ್ನೂ ಹೊಂದಿದವರು. ಇವರಿಗೆ 1 ವರ್ಷ ತುಂಬಿದಾಗ ಕಜೆ ಈಶ್ವರ ಭಟ್ಟರು ಬೆಳ್ತಂಗಡಿ ತಾಲೂಕು ಮಾಣಿಮಾರು ಎಂಬಲ್ಲಿ ನೆಲೆಸಿದರು. ಈ ಪ್ರದೇಶ ನೇತ್ರಾವತೀ ನದಿಯ ತೀರ. ಉಪ್ಪಿನಂಗಡಿ ನಗರದ ಸಮೀಪ ಹರಿಯುವ ನದಿಯ ಮತ್ತೊಂದು ದಡ. ಆಗ ಸೇತುವೆ ಇರಲಿಲ್ಲ. ಕೆಲಸ ನಡೆಯುತ್ತಿತ್ತು. ಹೊಳೆ ದಾಟಲು ದೋಣಿಯೇ ಆಧಾರ. ಮುಂದಿನ ವರ್ಷ ಹೊಸ ಸೇತುವೆ ನಿರ್ಮಾಣಗೊಂಡಿತು. ಸಂಪರ್ಕಕ್ಕೆ ಒಳ್ಳೆಯ ವ್ಯವಸ್ಥೆ ಸಿದ್ಧವಾಗಿತ್ತು. ಉಪ್ಪಿನಂಗಡಿ ಸರಕಾರೀ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೇಗೆ ಓದಿದ ಗೋವಿಂದ ಪ್ರಸಾದರು ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು. ನಂತರ ಉಡುಪಿಯ ಎಸ್.ಡಿ.ಎಂ. ಆಯುರ್ವೇದ ವಿದ್ಯಾಲಯದಲ್ಲಿ 5 ವರ್ಷಗಳ ವೈದ್ಯಕೀಯ ಶಿಕ್ಷಣವನ್ನು ಪಡೆದರು. (BAMS) ಪುತ್ತೂರಿನ ಧನ್ವಂತರೀ ನರ್ಸಿಂಗ್ ಹೋಮ್‍ನ ಸಂಸ್ಥಾಪಕ ಕಜೆ ತಿಮ್ಮಣ್ಣ ಭಟ್ಟರು ಇವರ ಬಂಧುಗಳು (ಸಣ್ಣಜ್ಜನ ಮಗ). ಈಗ ತಿಮ್ಮಣ್ಣ ಭಟ್ಟರ ಮಕ್ಕಳು ವೈದ್ಯರುಗಳಾಗಿ ಧನ್ವಂತರೀ ಚಿಕಿತ್ಸಾಲಯವನ್ನು ನಡೆಸುತ್ತಿದ್ದಾರೆ. ಶಿಕ್ಷಣವನ್ನು ಪೂರೈಸಿ ಬಂದ ಡಾ. ಗೋವಿಂದ ಪ್ರಸಾದರು ಈ ಸಂಸ್ಥೆಯನ್ನು ಸೇರಿ ವೈದ್ಯರಾಗಿ ರೋಗಿಗಳ ಶುಶ್ರೂಷಾ ವಿಚಾರದಲ್ಲಿ ನೈಪುಣ್ಯವನ್ನು ಗಳಿಸಿಕೊಂಡರು. 1987ರಲ್ಲಿ ಉಪ್ಪಿನಂಗಡಿ ಪೇಟೆಯಲ್ಲಿ ‘ಸಂಜೀವಿನೀ ಕ್ಲಿನಿಕ್’ ಆರಂಭಿಸಿದರು. ಕಳೆದ 32 ವರುಷಗಳಿಂದ ವೈದ್ಯರಾಗಿ, ಕಲಾಸೇವೆಯಲ್ಲೂ ನಿರತರಾಗಿದ್ದಾರೆ.
                         ಡಾ. ಗೋವಿಂದ ಪ್ರಸಾದ ಕಜೆ ಇವರಿಗೆ ಬಾಲಕನಾಗಿರುವಾಗಲೇ ಶ್ರೇಷ್ಠ ಕಲಾವಿದರ ಪರಿಚಯವಿತ್ತು. ಇವರ ತಂದೆ ಕಜೆ ಈಶ್ವರ ಭಟ್ಟರು ಕಲಾವಿದರಾಗಿದ್ದರು. ತಾಳಮದ್ದಳೆಯಲ್ಲಿ ಭಾಗವಹಿಸುತ್ತಿದ್ದರು. ಕಲೆಯು ರಕ್ತಗತವಾಗಿಯೇ ಇತ್ತು. ಯಕ್ಷಗಾನದ ಶ್ರೇಷ್ಠ ಸಂಘಟಕ ಕುಬಣೂರು ಬಾಲಕೃಷ್ಣ ರಾಯರ ತಂಡವು ವಿಧಾನಸೌಧ ಬ್ಲಾಂಕೆಟ್ ಹಾಲ್‍ನಲ್ಲೂ ತಾಳಮದ್ದಳೆ ನಡೆಸಿದ್ದರು. ಈ ತಂಡದಲ್ಲಿ ಶೇಣಿ, ದೇರಾಜೆ, ಮಂಡೆಚ್ಚರು ಭಾಗವಹಿಸುತ್ತಿದ್ದರಂತೆ. ಉಪ್ಪಿನಂಗಡಿ ಪರಿಸರದಲ್ಲಿ ತಾಳಮದ್ದಳೆ ನಡೆಯುತ್ತಿದ್ದರೆ ಬಲಿಪರು, ಡಾ| ಎಂ ಪ್ರಭಾಕರ ಜೋಷಿ, ಮೂಡಂಬೈಲು ಶಾಸ್ತ್ರಿಗಳು, ಕುಂಬಳೆ ಸುಂದರ ರಾವ್ ಮೊದಲಾದ ಹಿರಿಯ ಕಲಾವಿದರು ಮನೆಗೆ ಬರುತ್ತಿದ್ದರು. ಗೋವಿಂದ ಪ್ರಸಾದರಿಗೆ ಇವರ ಒಡನಾಟವೂ ಸಿಕ್ಕಿತು. ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿಕೊಳ್ಳಲು ಇದೂ ಕಾರಣವಾಯಿತು. 5ನೇ ತರಗತಿ ಓದುತ್ತಿದ್ದಾಗ ಶಾಲಾ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ. ಆಗ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ರಂಗನಾಯಕ ಕುರಿಯ ಗಣಪತಿ ಶಾಸ್ತ್ರಿ ಮತ್ತು ಮದಂಗಲ್ಲು ಆನಂದ ರಾವ್ ಅವರು ಮನೆಗೆ ಬಂದು ಗೋವಿಂದ ಪ್ರಸಾದರಿಗೆ ತರಬೇತಿ ಕೊಟ್ಟರಂತೆ. ಶಾಲೆಯ ಪವಿತ್ರ ವೇದಿಕೆಯಲ್ಲಿ ‘ವಾಲಿಮೋಕ್ಷ’ ಪ್ರಸಂಗ. ಗೋವಿಂದ ಪ್ರಸಾದರು ವಾಲಿಯಾಗಿ ರಂಗಪ್ರವೇಶ ಮಾಡಿದರು. ಮುಂದಿನ ವರ್ಷ ಕರ್ಣಾರ್ಜುನದ ಕರ್ಣ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೂ ಪ್ರದರ್ಶನಗಳಲ್ಲಿ ಭಾಗವಹಿಸಿದರು. ವಿವೇಕಾನಂದ ಕಾಲೇಜು ಯಕ್ಷಗಾನದ ಆಡುಂಬೊಲ.
                             ಖ್ಯಾತ ಪ್ರಸಂಗಕರ್ತ ಅಮೃತ ಸೋಮೇಶ್ವರರೂ, ವಿದ್ವಾಂಸರಾದ ತಾಳ್ತಜೆ ವಸಂತ ಕುಮಾರರೂ ಅಲ್ಲಿ ಉಪನ್ಯಾಸಕರಾಗಿದ್ದರು. ಆಗಾಗ ನಡೆಯುತ್ತಿದ್ದ ಪ್ರದರ್ಶನ, ವಿಚಾರಗೋಷ್ಠಿಗಳಲ್ಲಿ ಕಜೆಯವರು ಭಾಗವಹಿಸುತ್ತಿದ್ದರು. ಉಡುಪಿ ಆಯುರ್ವೇದಿಕ್ ಕಾಲೇಜಿನ ಪ್ರದರ್ಶನಗಳಲ್ಲಿ ಪ್ರತಿ ವರುಷವೂ ಅರ್ಜುನನ ಪಾತ್ರ! ಕಿರಾತಾರ್ಜುನ, ಸುಧನ್ವಾರ್ಜುನ... ಹೀಗೆ ಪ್ರಸಂಗಗಳು ನಡೆದುವು. ಎರಡು ವರ್ಷಗಳ ನಂತರ ಉಪನ್ಯಾಸಕರೆಲ್ಲಾ ಗೋವಿಂದ ಪ್ರಸಾದರನ್ನು ‘ಪಾರ್ಥ’ ಎಂದೇ ಕರೆಯಲಾರಂಭಿಸಿದರು!

                          1987ರಲ್ಲಿ ಕ್ಲಿನಿಕ್ ಆರಂಭಿಸಿದ ನಂತರ ಖ್ಯಾತ ಸ್ತ್ರೀವೇಷಧಾರಿಗಳೂ, ಯಕ್ಷಗಾನಕ್ಕೆ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬರೂ ಆದ ಪಾತಾಳ ವೆಂಕಟ್ರಮಣ ಭಟ್ಟರಿಂದಲೂ, ಅಂಬಾಪ್ರಸಾದ ಪಾತಾಳ ಅವರಿಂದಲೂ ನಾಟ್ಯ ಕಲಿತ ಇವರಿಗೆ ಕಿರೀಟ ವೇಷಗಳನ್ನು ಮಾಡಲು ಆಸಕ್ತಿ. ‘ಯಕ್ಷನಂದನ’ ಗೋಕುಲನಗರ ಕೊೈಲ ಇವರೂ ಶ್ರೀ ಗಣರಾಜ ಕುಂಬ್ಳೆ ಇವರೂ ಅವಕಾಶಗಳನ್ನು ನೀಡಿದರು. ತಾಳ್ತಜೆ ವಸಂತಕುಮಾರರ   ನೇತೃತ್ವದ ‘ವಸುಧಾ ಪ್ರತಿಷ್ಠಾನ’ದ ‘ಹೇಮಂತ ಹಬ್ಬ’ ಕಾರ್ಯಕ್ರಮದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಉಂಡೆಮನೆ ಶ್ರೀಕೃಷ್ಣ ಭಟ್ಟರೂ ಅವಕಾಶಗಳನ್ನಿತ್ತರು. ಇವರೆಲ್ಲರ ಸಹಕಾರಗಳು ಗೋವಿಂದ ಪ್ರಸಾದರು ಕಲಾವಿದನಾಗಿ ಬೆಳೆಯುವಂತೆ ಮಾಡಿತು. ಎಲ್ಲಾ ತರದ ವೇಷಗಳನ್ನೂ ನಿರ್ವಹಿಸಬಲ್ಲರು. ದಕ್ಷ, ಅತಿಕಾಯ, ಇಂದ್ರಜಿತು, ದೇವೇಂದ್ರ, ಹಿರಣ್ಯಾಕ್ಷ, ಅರ್ಜುನ, ರಕ್ತಬೀಜ, ಕೌಂಡ್ಲಿಕ, ಮಕರಾಕ್ಷ, ಜಾಂಬವತೀ ಕಲ್ಯಾಣದ ಜಾಂಬವ ಮತ್ತು ಕೃಷ್ಣ, ಶ್ವೇತಕುಮಾರ ಚರಿತ್ರೆಯ ದುರ್ಜಯಾಸುರ ಮತ್ತು ಲೋಹಿತನೇತ್ರ. ಕಾರ್ತವೀರ್ಯನಾಗಿಯೂ, ದಕ್ಷಯಜ್ಞದ ಈಶ್ವರನಾಗಿಯೂ ಕಾಣಿಸಿಕೊಂಡಿದ್ದಾರೆ. ಆದರೂ ನಾನು ಪರಿಪೂರ್ಣನಲ್ಲ. ಯಕ್ಷಗಾನದಲ್ಲಿ ಬಹಳಷ್ಟು ಇದೆ. ನಾನು ವೇಷ ಮಾಡಿದೆ ಅಷ್ಟೆ ಎಂದು ಹೇಳುತ್ತಾರೆ. ಹೊಸ ವೇಷಗಳು ಬಂದಾಗ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ ಮತ್ತು ಪಾತಾಳ ವೆಂಕಟರಮಣ ಭಟ್ಟರಿಂದ ಮಾಹಿತಿ ಪಡೆಯುತ್ತಾರೆ. ರಂಗವೇರುವ ಮೊದಲು Home Work ಮಾಡುತ್ತಾರೆ.
                            ಡಾ. ಗೋವಿಂದ ಪ್ರಸಾದ್ ಕಜೆ ಅವರು ಜೇಸೀ ಸಂಸ್ಥೆಯ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಮತ್ತು ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. 1996ರಿಂದ ಜೇಸೀ ಸಂಸ್ಥೆಯಲ್ಲಿ ಗುರುತಿಸಿಕೊಂಡು ವಲಯ ತರಬೇತುದಾರರಾಗಿ ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ ಕಲಾವಿದನಾದ ಕಾರಣ ಜೇಸೀ ತರಬೇತಿ ನೀಡಲು ಸಹಾಯವಾಯಿತು. (ಹಾವಭಾವ, ಸ್ವರದ ಏರಿಳಿತ, ಆಂಗಿಕ ಅಭಿನಯ), ಜೇಸೀ ತರಬೇತು ದಾರರಾದ ಕಾರಣ ಯಕ್ಷಗಾನ ಕಲಾವಿದನಾಗಲು ಸಹಾಯವಾಯಿತು. (ಮಾತುಗಾರಿಕೆ) ಹೀಗೆ ಪ್ರತಿಯೊಂದು ವೃತ್ತಿಯಲ್ಲಿರುವ ಉತ್ತಮ ವಿಚಾರಗಳು ಒಂದಕ್ಕೊಂದು ಪೂರಕವಾಗಿರುತ್ತದೆ ಎಂಬ ಅನುಭವವನ್ನೂ ಶ್ರೀಯುತರು ಹೇಳುತ್ತಾರೆ. ಮೃದಂಗ ವಿದ್ವಾನ್ ಶ್ರೀ ಕೆ. ವಿ. ಕಾರಂತರಿಂದ ಕಲಿತು ಶಾಸ್ತ್ರೀಯ ಸಂಗೀತದ ಮೃದಂಗ ಜೂನಿಯರ್ ವಿಭಾಗದಲ್ಲಿ ಉತ್ತೀರ್ಣರಾದ ಇವರು ಉಪ್ಪಿನಂಗಡಿಯ ಕಾಳಿಕಾಂಬಾ ಯಕ್ಷಗಾನ ಕಲಾಸಂಘದ ಖಾಯಂ ಕಲಾವಿದ. ವೃತ್ತಿ ಬದುಕಿನ ಏಕತಾನತೆಯಿಂದ ಬೇರೆಯಾಗಿರಲು, ಉತ್ಸಾಹ ಹೆಚ್ಚಿಸಲು, ಮಾನಸಿಕ ನೆಮ್ಮದಿ ಗಳಿಸಲು, ಅನೇಕ ಜನರ ಸಂಪರ್ಕ ಗಳಿಸಿಕೊಳ್ಳಲು ಉತ್ತಮ ಸಂದೇಶಗಳನ್ನು ನೀಡುವ ಕಲೆ ಯಕ್ಷಗಾನವು ಅವಕಾಶಗಳನ್ನು ನೀಡಿತು. ತುಂಬಾ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಬಂತು. ಕೆ. ಗೋವಿಂದ ಭಟ್, ಕುಂಬಳೆ ಶ್ರೀಧರ ರಾಯರೊಂದಿಗೆ ವೇಷ ಮಾಡಿದೆ. ‘ಸಂಪಾಜೆ ಯಕ್ಷೋತ್ಸವ’ದಲ್ಲಿ ವೇಷ ಮಾಡಿದ್ದು ವಿಶೇಷ ಅನುಭವ. ಅಂದು ಕುಂಬಳೆ ಸುಂದರ ರಾಯರ ವಿಶ್ವಾಮಿತ್ರ. ಮಂಟಪ ಉಪಾಧ್ಯಾಯರ ಮೇನಕೆ. ನಾನು ದೇವೇಂದ್ರನಾಗಿದ್ದೆ. ಕಟೀಲು ಮೇಳದ ರಂಗಸ್ಥಳದಲ್ಲಿ ವೇಷ ಮಾಡುವ ಭಾಗ್ಯವೂ ಸಿಕ್ಕಿದೆ. ಬಂಧುಗಳ ಸೇವಾ ಬಯಲಾಟದ ಸಂದರ್ಭ. ಕಟೀಲು ಕ್ಷೇತ್ರದಲ್ಲಿ ಪಂಚಕಲ್ಯಾಣ ಪ್ರಸಂಗ. ಗಿರಿಜಾ ಕಲ್ಯಾಣದ ದೇವೇಂದ್ರನ ಪಾತ್ರ ಮಾಡುವ ಅವಕಾಶವಿತ್ತರು.
ಬೆಳ್ಳಿಯ ಕಿರೀಟ ಧರಿಸಿ ಪೀಠಿಕೆ ವೇಷ ಮಾಡಿದೆ. ಮೇಳಗಳ ಬೆಳ್ಳಿಯ ಕಿರೀಟಗಳಲ್ಲಿ ಕಲಾಮಾತೆ ನೆಲೆಸಿರುತ್ತಾಳೆ ಎಂಬ ನಂಬಿಕೆ ನಮ್ಮದು. ಆಕೆಯನ್ನು ತಲೆಯಲ್ಲಿ ಹೊತ್ತು ಸೇವೆಯನ್ನು ಮಾಡಿದ ಧನ್ಯತೆಯಿದೆ ಎಂದು ತನ್ನ ಕಲಾಜೀವನದ ಅನುಭವಗಳನ್ನು ಗೋವಿಂದ ಪ್ರಸಾದರು ಹೇಳುತ್ತಾರೆ. ಯಕ್ಷಗಾನದ ಬೆಳವಣಿಗೆ ಗಳ ಬಗ್ಗೆಯೂ ಅವರು ಖೇದ ವ್ಯಕ್ತಪಡಿಸುತ್ತಾರೆ. ಕಾಲಮಿತಿಯ ಪ್ರದರ್ಶನಗಳಿಂದ ಸಮಗ್ರ ಯಕ್ಷಗಾನವನ್ನು ಆಸ್ವಾದಿಸಲು ಅಸಾಧ್ಯ. ಈಗ ಯಕ್ಷಗಾನದ ವೈಭವವು ಮರೆಯಾಗಿದೆ. ಗಾನ ವೈಭವ, ನಾಟ್ಯವೈಭವ, ಹಾಸ್ಯ ವೈಭವಗಳು ಕಾಣಿಸುತ್ತಿವೆ. ಗಾನಕ್ಕೆ ಸಂಗೀತ ಕಛೇರಿ ಇದೆ. ನಾಟ್ಯಕ್ಕೆ ಭರತನಾಟ್ಯವನ್ನು ನೋಡಬಹುದು. ಹೊಸತನ ಬೇಡವೆಂದಲ್ಲ. ಅದಕ್ಕೊಂದು ಮಿತಿ ಬೇಕು. ಸಿಹಿ ಬೇಕು. ಆದರೆ ಊಟದ ಮೊದಲಿನಿಂದ ಕೊನೆಯವರೇಗೆ ಸಿಹಿ ಉಣ್ಣುವುದಲ್ಲ. ಕಲಾವಿದರ ತಪ್ಪೋ? ಪ್ರೇಕ್ಷಕರ ತಪ್ಪೋ? ಇಬ್ಬರೂ ಕಾರಣರು. ಹೇಗೆ ನೋಡಬೇಕು? ಹೇಗೆ ಆಸ್ವಾದಿಸಬೇಕು? ಹೇಗೆ ನಿರ್ಣಯಿಸಬೇಕು? ಎಂಬ ಬಗ್ಗೆ ಪ್ರೇಕ್ಷಕರಿಗೂ ಒಂದು ಕಮ್ಮಟ ಅಗತ್ಯವಿದೆ. ರಂಗಸ್ಥಳ ಹುಡಿ ಮಾಡಿದರು ಎಂಬ ಪ್ರೇಕ್ಷಕ ವರ್ಗ ಸಲ್ಲದು. ವಿಷ್ಣು, ಶ್ರೀಕೃಷ್ಣನಂತಹ ಸಾತ್ವಿಕ ಪಾತ್ರಗಳು ನೂರೆಂಟು ಹಾರಬಾರದು. ಈಗ ಹಾರುವುದು, ಕುಣಿಯುವುದೇ ಮುಖ್ಯವಾಗಿದೆ. ಎಷ್ಟು ಗಂಟೆ ಆಗಿದೆ ಮುಗಿಯುವಾಗ? ಎಂಬ ಪ್ರಶ್ನೆಗೆ ಯಕ್ಷಗಾನದ ಗುಣಮಟ್ಟ ನಿರ್ಣಯವಾಗ ಬಾರದು. ಕಲಾವಿದರ ತಪ್ಪೋ? ಪ್ರೇಕ್ಷಕರ ತಪ್ಪೋ? ಈ ಪ್ರಶ್ನೆಗೆ ಉತ್ತರ ಈಗ ‘ಬೀಜವೃಕ್ಷ ನ್ಯಾಯ’ದಂತೆ ಆಗಿದೆ ಎಂದು ಹೇಳುವ ಡಾ. ಗೋವಿಂದ ಪ್ರಸಾದರು ವೈದ್ಯಕೀಯ ವೃತ್ತಿಗೆ ತೊಂದರೆಯಾಗದಂತೆ ಹೊಂದಾಣಿಕೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಲಾವಿದರಲ್ಲಿ ಅಭ್ಯಾಸದ ಕೊರತೆ ಕಾಣಿಸುತ್ತಿದೆ. ಪ್ರದರ್ಶನಗಳನ್ನು ನೋಡಬೇಕು. ನೋಡುವ ಮೊದಲು ರಂಗವೇರಬಾರದು. ಹಾಗೆ ಮಾಡಿದರೆ ರಂಗಸ್ಥಳ ಹುಡಿಮಾಡುವ ನಾರದನನ್ನೂ, ಸ್ತ್ರೀಪಾತ್ರಗಳನ್ನೂ, ಇನ್ನಿತರ ವೇಷಗಳನ್ನೂ ನೋಡಬೇಕಾಗುತ್ತದೆ ಎನ್ನುವ ಅಭಿಪ್ರಾಯವನ್ನೂ ಹೇಳುತ್ತಾರೆ. ಹೀಗೆ ಸಮಾಜಸೇವೆಯ ಜತೆ ಕಲಾಸೇವೆಯನ್ನು ಮಾಡುತ್ತಿರುವ ಹವ್ಯಾಸೀ ಶ್ರೇಷ್ಠ ಕಲಾವಿದ ಡಾ. ಗೋವಿಂದ ಪ್ರಸಾದ ಕಜೆ ಅವರಿಗೆ ಅವರ ಪತ್ನಿ ವೀಣಾ ಪ್ರಸಾದ್ ಕಜೆ ಅವರ ಪ್ರೋತ್ಸಾಹವೂ ಇದೆ. ತಮ್ಮ ಮಹೇಶ್ ಕಜೆ, ನ್ಯಾಯವಾದಿಗಳು ಪುತ್ತೂರು, ಅವರ ಪತ್ನಿ ದೀಪಿಕಾ, ತಮ್ಮನ ಮಕ್ಕಳಾದ ಕು| ಮಂದಿರಾ ಮತ್ತು ಕು| ಮನೀಶ ಅವರೂ ಡಾ. ಗೋವಿಂದ ಪ್ರಸಾದರ ಕಲಾಸೇವೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದಾರೆ.
                       ಬಣ್ಣದ ವೇಷಧಾರಿ ಗೋಪಾಲ ಭಟ್, ಭಾಗವತ ಪುತ್ತೂರು ರಮೇಶ ಭಟ್, ಮದ್ದಳೆಗಾರ ಪಿ. ಜಿ. ಜಗನ್ನಿವಾಸ ರಾವ್ ಇವರ ಸಹಕಾರವೂ ಕಲಾಜೀವನದಲ್ಲಿ ಡಾ. ಗೋವಿಂದ ಪ್ರಸಾದರಿಗೆ ಸಿಕ್ಕಿತ್ತು. ಶ್ರೀಯುತರಿಗೆ ಸಕಲ ಭಾಗ್ಯಗಳನ್ನು ನೀಡಿ ಇನ್ನಷ್ಟು ಕಲಾಸೇವೆಯನ್ನು ಮಾಡುವಂತೆ ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.



- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು