ಸಮರ್ಥ ಕಲಾಸೇವಕ - ಪೆರ್ಲ ಶ್ರೀ ಜಗನ್ನಾಥ ಶೆಟ್ಟಿ

                     ಶ್ರೀ ಪೆರ್ಲ ಜಗನ್ನಾಥ ಶೆಟ್ಟರು ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಕಲಾವಿದರು. ಸರಳ, ಸಜ್ಜನ, ನಿಗರ್ವಿ, ವಿನಯವಂತರು. ಸುಮಾರು 37 ವರುಷಗಳಿಂದ ಯಕ್ಷಗಾನ ಕಲಾವಿದನಾಗಿ ಹೆಸರು ಗಳಿಸಿದ್ದಾರೆ. ಸಾತ್ವಿಕ ಪಾತ್ರಗಳಲ್ಲಿ ರಂಜಿಸುವ ಇವರು ಅಗತ್ಯಬಿದ್ದರೆ ಹಾಸ್ಯಪಾತ್ರಗಳನ್ನೂ ಮಾಡಬಲ್ಲ ಸಾಹಸಿ. ‘‘ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಕುಮಾರರು ಇದ್ದರೆ ಯಾವ ಪ್ರಸಂಗವನ್ನೂ ಪ್ರದರ್ಶಿಸಬಹುದು’’- ಖ್ಯಾತ ಕಲಾವಿದ, ಸಂಘಟಕ ಶ್ರೀ ಉಜಿರೆ ಅಶೋಕ ಭಟ್ಟರ ಈ ಮಾತುಗಳು ಜಗನ್ನಾಥ ಶೆಟ್ಟರಿಗೆ ಸಿಕ್ಕ ಶ್ರೇಷ್ಠ ಪ್ರಶಸ್ತಿಯೇ ಹೌದು.

                    ಕೇರಳ ರಾಜ್ಯ, ಕಾಸರಗೋಡು ಜಿಲ್ಲೆಯ, ಎಣ್ಮಕಜೆ ಗ್ರಾಮದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಸಮೀಪವಿರುವ ಪಟ್ಲ ಮನೆಯಲ್ಲಿ 14-10-1966ರಂದು ಜಗನ್ನಾಥ ಶೆಟ್ರು ಜನಿಸಿದರು. ತಂದೆ ಪಟ್ಲ ಮಂಜಪ್ಪ ಶೆಟ್ಟಿ. ತಾಯಿ ಕಮಲಾ ಶೆಟ್ಟಿ (ಕೊಳ್ತಿಗೆ ಗ್ರಾಮದ ಪಾಲ್ತಾಡಿ ಮೂಲದವರು). ಇವರದು ಕೃಷಿ ಕುಟುಂಬ. ಜತೆಗೆ ಜಗನ್ನಾಥ ಶೆಟ್ಟರ ತಂದೆ ಪೆರ್ಲದಲ್ಲಿ ಹೋಟೆಲನ್ನೂ ನಡೆಸುತ್ತಿದ್ದರು. ಕಾಟುಕುಕ್ಕೆ ಬಾಲಪ್ರಭಾ ಅಪ್ಪರ್ ಪ್ರೈಮರೀ ಶಾಲೆಯಲ್ಲಿ 7ನೇ ತರಗತಿ, ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ 8ನೇ ತರಗತಿವರೇಗೆ ಓದಿ ಶಾಲೆಗೆ ಅನಿವಾರ್ಯವಾಗಿ ವಿದಾಯ ಹೇಳಬೇಕಾಯಿತು. ಎಳವೆಯಲ್ಲೆ ಯಕ್ಷಗಾನಾಸಕ್ತಿ. ಪೆರ್ಲ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಆದಿಸುಬ್ರಹ್ಮಣ್ಯ, ಪುತ್ತೂರು ಮೇಳಗಳ ಒಂದು ಪ್ರದರ್ಶನವನ್ನೂ ಬಿಟ್ಟವರಲ್ಲ. ಹೋಟೆಲ್ ಕೆಲಸ ಕಷ್ಟವಾಗುತ್ತದೆ. ಆಟಕ್ಕೆ ಹೋಗುವುದು ಬೇಡ ಎಂದು ತಂದೆ ತಾಯಿಯರು ಹೇಳುತ್ತಿದ್ದರಂತೆ. ಇವರು ಮಲಗುವುದನ್ನೇ ಕಾಯುತ್ತಿದ್ದ ತಂದೆ ಮಂಜಪ್ಪ ಶೆಟ್ಟರು ಆಟಕ್ಕೆ ಹೋಗುತ್ತಿದ್ದರು. ಇವರಿಗೆಲ್ಲ ನಿದ್ದೆ ಬರಬೇಕು? ಅವರು ಆಟಕ್ಕೆ ಹೋಗುವುದನ್ನೇ ಕಾಯುತ್ತಾ ನಿದ್ದೆ ಬಂದವನಂತೆ ನಟಿಸುತ್ತಿದ್ದ ಬಾಲಕ ಜಗನ್ನಾಥರು ಎದ್ದು ಆಟಕ್ಕೆ ಹೋಗುತ್ತಿದ್ದರು. ನಟನಾಕೌಶಲ ಆಗಲೇ ಒಲಿದಿತ್ತು! ಬಾಲಕನೊಳಗೊಬ್ಬ ಕಲಾವಿದ ಅಡಗಿ ಕುಳಿತಿದ್ದ! ಆಟ ಮುಗಿಯುವುದಕ್ಕೆ ಮುಂಚೆ ಐದುವರೆ ಗಂಟೆ ಹೊತ್ತಿಗೆ ಬಂದು ಚಾಪೆಯಲ್ಲಿ ಮುಸುಕು ಹಾಕಿ ಮಲಗುತ್ತಿದ್ದರು. ಮಗನಿಗೆ ಗೊತ್ತಾಗದಂತೆ ಆಟಕ್ಕೆ ಹೋದೆನೆಂಬ ಸಂತೋಷ ಮಂಜಪ್ಪ ಶೆಟ್ರಿಗೆ! ತಂದೆಗೆ ತಿಳಿಯದಂತೆ ಆಟ ನೋಡಿದೆ ಎಂಬ ಸಂತಸ ಮಗ ಜಗನ್ನಾಥನಿಗೆ! ಆಟ ನೋಡಿ ಬಂದು ಮನೆಯಲ್ಲೂ, ಹೋಟೆಲ್‍ನಲ್ಲೂ ಗೆಳೆಯರ ಜತೆ ಅಣಕು ಯಕ್ಷಗಾನದಲ್ಲಿ ಅಭಿನಯ. ಇವರು ಬಡಿದ ತಾಳಕ್ಕೆ ಪ್ಲೇಟುಗಳು ಜಜ್ಜಿ ಹೋಗುತ್ತಿತ್ತು! ಕುಪ್ಪಿಯ ಗ್ಲಾಸುಗಳನೇಕ ಪುಡಿಪುಡಿ! ಮಂಜಪ್ಪ ಶೆಟ್ರ ಹತ್ತು ಮಂದಿ ಮಕ್ಕಳಲ್ಲಿ ಜಗನ್ನಾಥ ಶೆಟ್ರು 2ನೇಯವರು. ದೇವೀ ಮಹಾತ್ಮ್ಯೆ ಆಟ ನೋಡಿ ಬಂದು ಮತ್ತೆ ಗದ್ದೆಯಲ್ಲಿ ಅಭಿನಯ. ಚಂಡಮುಂಡರನ್ನು ಓಡಿಸಿ ಕಾಳಿಯು ಅವರ ಕೊರಳನ್ನು ಕತ್ತರಿಸುವ ದೃಶ್ಯ. ಬೆನ್ನಿನ ಮೇಲಕ್ಕೆ ಬಾಳೆಯ ಗಿಡದ ಬುಡಗಳನ್ನು ಕಟ್ಟಿ ಚಂಡಮುಂಡರು ಓಡುವುದು (ಚಂಡಮುಂಡರ ರುಂಡಗಳನ್ನು ಬಾಳೆಯ ಬುಡಕ್ಕೆ ಆರೋಪಿಸಿ) ಕಾಳಿಯು ಅವರನ್ನು ಅಟ್ಟಾಡಿಸಿ ಕೊಲ್ಲುವ ಸಾಹಸ ಪ್ರದರ್ಶನ. ಕತ್ತಿಯಿಂದ ಕಡಿಯುವಾಗ ಗೆಳೆಯನೊಬ್ಬನ ತಲೆಯಲ್ಲೊಂದು ತೂತಾಗಿತ್ತು! ಆಟದ ಗೀಳು ಇವರಿಗೂ ನೆರೆಹೊರೆಯ ಗೆಳೆಯರಿಗೂ ಅಷ್ಟು ತೀವ್ರವಾಗಿತ್ತು.
                       ಯಕ್ಷರಂಗದ ಭೀಷ್ಮ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರಿಂದ ‘‘ಮಾತನಾಡುವ ಬಣ್ಣ’’ ಎಂಬ ಪ್ರಶಂಸೆಗೆ ಪಾತ್ರರಾದ ಕಾಟುಕುಕ್ಕೆ ಕುಂಞರಾಮ ಮಣಿಯಾಣಿಯವರು (ಕಟೀಲು ಮೇಳದ ಕಲಾವಿದ) ಕಾಟುಕುಕ್ಕೆಯಲ್ಲಿ ನಾಟ್ಯ ತರಗತಿಯನ್ನು ನಡೆಸುತ್ತಿದ್ದರು. ಮಹಿಷಾಸುರ, ಮೈರಾವಣ ಮೊದಲಾದ ವೇಷಗಳಲ್ಲಿ ಅವರು ಯಕ್ಷಗಾನ ಬಣ್ಣದ ವಿಭಾಗವನ್ನು ಶ್ರೀಮಂತಗೊಳಿಸಿದವರಲ್ಲೊಬ್ಬರು. ಅಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿ ಗಳು ನಾಟ್ಯ ಕಲಿಯುತ್ತಿದ್ದರು. ಜಗನ್ನಾಥ ಶೆಟ್ರು ಅವರಿಂದ ನಾಟ್ಯವನ್ನು ಅಭ್ಯಸಿಸಿದರು. ಆ ಪೈಕಿ ಮೇಳದ ತಿರುಗಾಟ ನಡೆಸಿದವರು ಇಬ್ಬರು ಮಾತ್ರ. ಸವ್ಯಸಾಚಿ ಕಲಾವಿದ ಅಡ್ಯನಡ್ಕ ದಿ| ಗಂಗಾಧರ ಆಚಾರ್ಯ ಮತ್ತು ಪೆರ್ಲ ಜಗನ್ನಾಥ ಶೆಟ್ರು. 1982ರಲ್ಲಿ ಖ್ಯಾತ ಹಾಸ್ಯಗಾರ ಬೆಟ್ಟಂಪಾಡಿ ಬಾಳಪ್ಪ ಶೆಟ್ರು ಜಗನ್ನಾಥ ಶೆಟ್ರನ್ನು ಕದ್ರಿ ಮೇಳಕ್ಕೆ ಸೇರಿಸಿದರೆ, ಗಂಗಾಧರ ಆಚಾರ್ಯರನ್ನು ಕಾಟುಕುಕ್ಕೆ ಕುಂಞರಾಮರು ಕಟೀಲು ಮೇಳಕ್ಕೆ ಕರೆದೊಯ್ದರು. ಕದ್ರಿ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ, ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರದಲ್ಲಿ ವಿನೋದ ರೈ, ವಾಟೆಪಡ್ಪು ವಿಷ್ಣುಶರ್ಮ, ಸಜಿಪ ಸುಬ್ರಹ್ಮಣ್ಯ, ವೇಣೂರು ಅಶೋಕ ಆಚಾರ್ಯ ಮೊದಲಾದವರು ಜಗನ್ನಾಥ ಶೆಟ್ರ ಸಹಪಾಠಿಗಳು. ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಬಂದ ನಂತರ ಶಿವರಾಮ ಜೋಗಿಯವರು ಸುರತ್ಕಲ್ಲು ಮೇಳಕ್ಕೆ ಕರೆದುಕೊಂಡು ಹೋದರಂತೆ. ‘‘ಕಲಿಯುವವರಿಗೆ ಸುರತ್ಕಲ್ ಮೇಳ ಒಂದು ಪಾಠಶಾಲೆ’’ ಎಂದು ಶಿವರಾಮ ಜೋಗಿಯವರು ಹೇಳುವ ಮಾತು ಸತ್ಯವಾಯಿತು. ಅಲ್ಲಿ ನನ್ನಿಂದಾದಷ್ಟು ಕಲಿತೆ ಎಂದು ಜಗನ್ನಾಥ ಶೆಟ್ರು ಆ ದಿನಗಳನ್ನು ನೆನಪಿಸುತ್ತಾರೆ. ಅಗರಿ ರಘುರಾಮ ಭಾಗವತರೂ, ಪದ್ಯಾಣದವರೂ, ಎಂ. ಕೆ. ರಮೇಶಾಚಾರ್ಯರೂ ಹೇಳಿ ಕೊಡುತ್ತಿದ್ದರು. ಎಲ್ಲರ ಪ್ರೋತ್ಸಾಹ ದಿಂದ ಜಗನ್ನಾಥ ಶೆಟ್ರು ಕಲಾವಿದನಾಗಿ ಕಾಣಿಸಿಕೊಂಡರು. ಸಮರ್ಥ ಯಜಮಾನ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳದ 13 ತಿರುಗಾಟ.
                                  ನಂತರ ಕದ್ರಿ ಮೇಳದಲ್ಲಿ 7 ತಿರುಗಾಟ. ‘ಕದಿರೆದ ಗರುಡೆ’ ಪ್ರಸಂಗದ ‘ಮೆಹರ್ಜಾನ್’ ಪಾತ್ರದಲ್ಲಿ ರಂಜಿಸಿದರು. ಆ ಪಾತ್ರ ನೋಡಲೆಂದೇ ಪ್ರೇಕ್ಷಕರು ಬರುತ್ತಿದ್ದರಂತೆ. ಮೇಳದ ಸಂಚಾಲಕ ಶ್ರೀ ಡಿ. ಮನೋಹರ ಕುಮಾರರು ಕಥಾನಾಯಕನಾಗಿಯೂ, ಸರಪಾಡಿ ಅಶೋಕ ಶೆಟ್ರು ಖಳನಾಯಕನಾಗಿಯೂ ಅಭಿನಯಿಸಿದ ಪ್ರಸಂಗವದು. ನಂತರ ಗಣೇಶಪುರ ಮೇಳದಲ್ಲಿ (ಸಂಜಯ ಕುಮಾರರ ಸಂಚಾಲಕತ್ವ) 1 ತಿರುಗಾಟ, ಕುಂಟಾರು ಶ್ರೀ ರವೀಶ ತಂತ್ರಿಗಳ ನಿರ್ದೇಶನದ ಕುಂಟಾರು ಮೇಳದಲ್ಲಿ (ಗಂಗಾಧರ ಭಂಡಾರಿಯವರ ಸಂಚಾಲಕತ್ವ) 4 ವರ್ಷ. ಆಗ ದಿನೇಶ ಅಮ್ಮಣ್ಣಾಯರು ಭಾಗವತರಾಗಿದ್ದರು. ಗಣೇಶಪುರ ಮೇಳದ ತಿರುಗಾಟದ ನಂತರ ಪೆರ್ಲದಿಂದ ಈಶ್ವರಮಂಗಲಕ್ಕೆ ಬಂದು ನೆಲೆಸಿದ ಇವರು ಪೇಟೆಯಲ್ಲಿ ಕೊನೆತೋಟ ಮಹಾಬಲ ಭಟ್ಟರ ಆಶ್ರಯದಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಮಹಾಬಲ ಭಟ್ಟರು ಹೋಟೆಲ್ ನಡೆಸಲು ಸ್ಥಳ ಒದಗಿಸಿ ಕೊಟ್ಟರಂತೆ. ‘ಯಕ್ಷದೇಗುಲ’ ಎಂಬ ಹೋಟೆಲನ್ನು 13 ವರ್ಷಗಳ ಕಾಲ ನಡೆಸಿದರು. ಮತ್ತೆ ಜಗನ್ನಾಥ ಶೆಟ್ರು ಎಡನೀರು ಮೇಳದಲ್ಲಿ 1 ವರ್ಷ, ಹೊಸನಗರದಲ್ಲಿ 10 ವರ್ಷ, ಎಡನೀರು ಮೇಳದಲ್ಲಿ 1 ವರ್ಷ, ಪ್ರಸ್ತುತ ಕಳೆದ ವರ್ಷದಿಂದ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಪೆರ್ಲ ಸತ್ಯನಾರಾಯಣ ಹೈಸ್ಕೂಲ್ ಬಳಿ ಕದ್ರಿ ಮೇಳದ ಪ್ರದರ್ಶನದ ಸಂದರ್ಭ- ಗುರುಗಳಾದ ಕಾಟುಕುಕ್ಕೆ ಕುಂಞರಾಮ ಮಣಿಯಾಣಿಯವರನ್ನು ಪೆರ್ಲ ಜಗನ್ನಾಥ ಶೆಟ್ರು ಗೌರವಿಸಿ ಗುರುನಮನ ವನ್ನು ಸಲ್ಲಿಸಿದ್ದಾರೆ. ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವ ಮೇಳದ ಸಂಚಾಲಕರಾದ ಶ್ರೀ ಡಿ. ಮನೋಹರ ಕುಮಾರರು ಮೇಳದ ರಂಗಸ್ಥಳವನ್ನು ಗುರುಗಳಿಗೆ ಗೌರವ ಅರ್ಪಿಸಲು ನೀಡಿ ಸಹಕರಿಸಿದ್ದನ್ನು ಜಗನ್ನಾಥರು ನೆನಪಿಸುತ್ತಾರೆ. ನಾವು ದೇವರನ್ನು ನಂಬುತ್ತೇವೆ, ಪೂಜಿಸುತ್ತೇವೆ. ಭಗವಂತನು ಅನುಗ್ರಹಿಸುತ್ತಾನೆ. ಕಲಾಮಾತೆಯೂ ಅಲೌಕಿಕವಾಗಿದ್ದು ಅನುಗ್ರಹಿಸುತ್ತಾಳೆ. ಆದರೂ ಕಲಾಪೋಷಕರಾದ ಡಾ| ಟಿ. ಶ್ಯಾಮ ಭಟ್ಟರು ಕಣ್ಣಿಗೆ ಕಾಣುವ ದೇವರುಗಳಲ್ಲೊಬ್ಬರು ಎನ್ನುವ ಮೂಲಕ ಪೆರ್ಲ ಜಗನ್ನಾಥ ಶೆಟ್ಟರು ‘ಸಂಪಾಜೆ ಯಕ್ಷೋತ್ಸವ’ದ ರೂವಾರಿ ಡಾ| ಟಿ. ಶ್ಯಾಮ ಭಟ್ಟರನ್ನು ಗೌರವಿಸುತ್ತಾರೆ. ಹಿರಿಯ ಕಲಾವಿದರಿಗೆ ಇವರು ಜಗ್ಗ. ಕಿರಿಯ ಕಲಾವಿದರಿಗೆ ಪ್ರೀತಿಯ ಜಗ್ಗಣ್ಣ. ಹೆಚ್ಚಾಗಿ ಸಾತ್ವಿಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಇವರು ಹಾಸ್ಯಪಾತ್ರಗಳನ್ನೂ ನಿರ್ವಹಿಸಬಲ್ಲರು. ಶ್ರೀರಾಮ, ಶ್ರೀಕೃಷ್ಣ, ವಿಷ್ಣು, ಧರ್ಮರಾಯ, ಅಕ್ರೂರ, ಸಂಜಯ ಮೊದಲಾದ ಪಾತ್ರಗಳಲ್ಲದೆ ವಿಕ್ರಮಾದಿತ್ಯ ಪ್ರಸಂಗದ ‘ನಂದಿಶ್ರೇಷ್ಠಿ’ಯಂತಹ ವೇಷಗಳನ್ನು ಪಾತ್ರೋಚಿತವಾಗಿ ಮಾಡಬಲ್ಲರು. ಅನೇಕ ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. ಪ್ರಸ್ತುತ ಈಶ್ವರಮಂಗಲದ ಸಮೀಪ ಮುಂಡ್ಯ ಎಂಬಲ್ಲಿ ಪತ್ನಿ ಮಕ್ಕಳ ಜತೆ ವಾಸ. ಪತ್ನಿ ಶ್ರೀಮತಿ ಮೋಹಿನಿ ಜೆ. ಶೆಟ್ಟಿ (ಗೃಹಿಣಿ)
                     ಹಿರಿಯ ಪುತ್ರಿ ಧನ್ಯಶ್ರೀ ಬಿ.ಕಾಂ., ಒಡಿಯೂರು ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಉದ್ಯೋಗಿ (ವಿವಾಹಿತೆ) ಅಳಿಯ ರಾಜೇಶ್ ರೈ ಪುತ್ತೂರು ದರ್ಬೆಯಲ್ಲಿ ಮೆಕ್ಯಾನಿಕ್ ಉದ್ಯಮಿ. ಕಿರಿಯ ಪುತ್ರಿ ಕು| ರಮ್ಯಶ್ರೀ ಬಿ.ಕಾಂ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪುತ್ರ ಮಾ| ರೂಪಿತ್ ಶೆಟ್ಟಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ.
ಶ್ರೀ ಪೆರ್ಲ ಜಗನ್ನಾಥ ಶೆಟ್ಟರಿಗೆ ಇನ್ನಷ್ಟು ಗೌರವ, ಸನ್ಮಾನಗಳು ದೊರಕುವಂತಾಗಲಿ. ಅವರ ಜೀವನ ಸುಖಮಯವಾಗಿರಲೆಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರಯಿಕೆಗಳು.

ವಿಳಾಸ : ಪೆರ್ಲ ಜಗನ್ನಾಥ ಶೆಟ್ಟಿ, ಮುಂಡ್ಯ ಮನೆ, ಅಂಚೆ : ಈಶ್ವರಮಂಗಲ
ನೆಟ್ಟಣಿಗೆ ಮೂಡ್ನೂರು ಗ್ರಾಮ, ಪುತ್ತೂರು, ದ. ಕ. ಮೊ. : 9449903745



- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು