‘‘ಬದುಕಿ ಇರುತ್ತಿದ್ದರೆ ನೂರನೆಯ ವರುಷ’’ -ಬಡಗಿನ ಪ್ರಾಚಾರ್ಯ ಭಾಗವತ -ಎಂ. ನಾರ್ಣಪ್ಪ ಉಪ್ಪೂರ

                             ಹೌದು. ಅವರು ಇಂದಿಗೂ ಬದುಕಿರುತ್ತಿದ್ದರೆ ನೂರನೆಯ ವರುಷಕ್ಕೆ ಕಾಲಿಡುತ್ತಿದ್ದರು. ‘ಶತಾಯುಷಿ’ ಎನಿಸುತ್ತಿದ್ದರು. ಬಡಗಿನ ಮೇರು ಭಾಗವತ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕಿದ ಸಾಧಕ, ತಮ್ಮ ಆಯುಷ್ಯದ ಹೆಚ್ಚಿನ ಸಮಯಗಳನ್ನೂ ರಂಗಸ್ಥಳದೊಳಗೇ ಕಳೆದು ಕಲಾಸೇವೆಯನ್ನು ಮಾಡಿದ ‘ಮಾರ್ವಿ’ ಶೈಲಿಯ ಕೀರ್ತಿಯೆಂಬ ಪತಾಕೆಯನ್ನು ಬಾನಂಗಳದಲ್ಲಿ ಹಾರಾಡುವಂತೆ ಮಾಡಿದ ಪ್ರಾಚಾರ್ಯ ಎಂ. ನಾರ್ಣಪ್ಪ ಉಪ್ಪೂರರು ಇಂದು ನಮ್ಮ ಜತೆ ಇಲ್ಲ. ಆದರೆ ಅವರ ನೆನಪು ಮಾಸಿಲ್ಲ. ಯಾವತ್ತೂ ಮಾಸಲಾರದು. ಜನಮಾನಸದಲ್ಲಿ ಶ್ರೀಯುತರು ಶಾಶ್ವತರಾಗಿ ನೆಲೆಸಿರುತ್ತಾರೆ. ಅವರು ಮಾಡಿಕೊಟ್ಟ ದಾರಿಯು ಭಾಗವತಿಕೆ ಅಭ್ಯಾಸಿಗಳಿಗೆ ಹೆದ್ದಾರಿಯಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

                        ಶ್ರೀ ನಾರ್ಣಪ್ಪ ಉಪ್ಪೂರರು 1918ನೇ ಇಸವಿ ಫೆಬ್ರವರಿ 7ನೇ ತಾರೀಕಿನಂದು ಮಾರ್ವಿ ಶ್ರೀನಿವಾಸ ಉಪ್ಪೂರ ಮತ್ತು ಅಕ್ಕಣಿ ಅಮ್ಮ ದಂಪತಿಗಳಿಗೆ ಮಗನಾಗಿ (ಉಪ್ಪೂರ ಮನೆತನ) ಕುಂದಾಪುರ ತಾಲೂಕಿನ ಹಾಲಾಡಿ ಸಮೀಪದ ತಟ್ಟುವಟ್ಟು ಎಂಬಲ್ಲಿ ಜನಿಸಿದರು. ಮಾರ್ವಿ ಶ್ರೀನಿವಾಸ ಉಪ್ಪೂರರು ಅಂದಿನ ಕಾಲದ ಪ್ರಸಿದ್ಧ ಭಾಗವತರಾಗಿದ್ದರು. ಮಳೆಗಾಲದಲ್ಲಿ ಬೇಸಾಯ, ಬೇಸಿಗೆಯಲ್ಲಿ ಮೇಳದ ತಿರುಗಾಟ ನಡೆಸುತ್ತಿದ್ದರು. ಮಳೆಗಾಲದಲ್ಲಿ ಮನೆಯಲ್ಲಿಯೇ ಕಲಿಕಾಸಕ್ತರಿಗೆ ಹೇಳಿಕೊಡುತ್ತಿದ್ದರಂತೆ. ಮನೆಯ ಹಿಂಭಾಗದ ಮಕ್ಕಿಗದ್ದೆಯ ತೆಂಗಿನ ಗರಿಯ ಚಪ್ಪರದಡಿಯು ಯಕ್ಷಗಾನ ಕಲಿಕಾ ಕೇಂದ್ರವಾಗಿತ್ತು. ಮಾರ್ವಿ ರಾಮಕೃಷ್ಣ ಹೆಬ್ಬಾರ್, ವಾದಿರಾಜ ಹೆಬ್ಬಾರ್ (ಶ್ರೀನಿವಾಸ ಉಪ್ಪೂರರ ಸೋದರಳಿಯಂದಿರು), ಜೋರಾಡಿ ಬಚ್ಚು ಶೆಟ್ಟಿ, ಕಲ್ಮಕ್ಕಿ ಮಾಲಿಂಗ ಶೆಟ್ಟಿ, ಕಲ್ಲಟ್ಟೆ ಸದಿಯಣ್ಣ ಮೊದಲಾದವರು ಅಭ್ಯಾಸಿಗಳಾಗಿ ಅಲ್ಲಿಗೆ ಬರುತ್ತಿದ್ದರು. ನಾರ್ಣಪ್ಪ ಉಪ್ಪೂರರೂ, ಅವರ ಅಣ್ಣ ವಾಸುದೇವ ಉಪ್ಪೂರರೂ ಅವರೊಂದಿಗೆ ಭಾಗವತಿಕೆ ಮತ್ತು ಮದ್ದಳೆಗಾರಿಕೆಯನ್ನು ಅಭ್ಯಸಿಸಲಾರಂಭಿಸಿದರು. ಖ್ಯಾತ ಮದ್ದಳೆಗಾರರಾದ ಹಿರಿಯಡಕ ಶ್ರೀ ಗೋಪಾಲರಾಯರು ವಾಸುದೇವ ಉಪ್ಪೂರರಿಂದ ಕಲಿತಿದ್ದರೆಂಬ ಹೇಳಿಕೆಯಿದೆ. ಮಾರ್ವಿ ಎಂಬ ಊರು ಕಲಾವಿದರ ಆಡುಂಬೊಲವಾಗಿತ್ತು. 3 ಮೇಳಕ್ಕೆ ಬೇಕಾಗುವಷ್ಟು ಕಲಾವಿದರು ಅಲ್ಲಿದ್ದರು ಎಂದು ಜನರು ಆಡಿಕೊಳ್ಳುತ್ತಿದ್ದರು. ಮಾರ್ವಿ ಶ್ರೀನಿವಾಸ ಉಪ್ಪೂರರ ಮನೆಯಲ್ಲಿದ್ದು ಕಲಿತವರು ಅನೇಕರು. ಶ್ರೀನಿವಾಸ ಉಪ್ಪೂರರ ಹಾಡುಗಾರಿಕೆಯ ಶೈಲಿಯೇ ‘ಮಾರ್ವಿ’ ಶೈಲಿಯೆಂದು ಪ್ರಸಿದ್ಧವಾಯಿತು. ತನ್ನ ಹತ್ತಿರ ಕಲಿಯಲು ಬರುತ್ತಿದ್ದ ವಿದ್ಯಾರ್ಥಿಗಳ ಹಸಿವೆ, ತೃಷೆಗಳೆರಡನ್ನೂ ಇಂಗಿಸಿದವರು ಶ್ರೀನಿವಾಸ ಉಪ್ಪೂರರು. ಕಡುಬಡತನವಿದ್ದರೂ ಈ ವಿಚಾರದಲ್ಲಿ ಅದು ತೊಡಕಾಗಲಿಲ್ಲ. ಯಾಕೆಂದರೆ ಆರ್ಥಿಕವಾಗಿ ಬಡವರಾದರೂ ಅವರ ಮನಸ್ಸು ಶ್ರೀಮಂತವಾಗಿತ್ತು. ಶ್ರೀನಿವಾಸ ಉಪ್ಪೂರರ ಉದಾರತೆ ಕೆಲವೊಮ್ಮೆ ಅವರ ಪತ್ನಿ ಅಕ್ಕಣ್ಣಿ ಅಮ್ಮನವರ ಸಂಕಟಕ್ಕೆ ಕಾರಣವಾಗುತ್ತಿತ್ತು. ಬೇಕಾದ ಪದಾರ್ಥಗಳಿಲ್ಲದೆ ಅಡುಗೆ ಮಾಡುವುದೆಂತು? ಆದರೂ ಅಕ್ಕಣ್ಣಿ ಅಮ್ಮನವರು ಪತಿಯ ಇಚ್ಛೆಯನ್ನರಿತು ನಡೆಯುವ ಸತಿಯೇ ಆಗಿದ್ದರು.
                       ಶ್ರೀ ನಾರ್ಣಪ್ಪ ಉಪ್ಪೂರರು ಕಲಿತದ್ದು 5ನೇ ತರಗತಿವರೇಗೆ. ಕಲಿಕೆಗೆ ಅವಕಾಶಗಳಿರಲಿಲ್ಲ. ಹತ್ತಿರದಲ್ಲೆಲ್ಲೂ ಶಾಲೆಗಳಿರಲಿಲ್ಲ. ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ಮಾತು ಇವರ ಪಾಲಿಗೆ ನಿಜವಾಗಿತ್ತು. ಓದಲು ಬರೆಯಲು ಮನೆಯಲ್ಲೇ ಕಲಿತು ಎರಡನೇ ತರಗತಿಗೆ ಶಾಲೆಯನ್ನು ಸೇರುವ ಪರಿಪಾಠವಿದ್ದ ಕಾಲವದು. ಅಮ್ಮನು ಪ್ರೀತಿಯಿಂದ ಬಡಿಸಿದ ತಂಗಳನ್ನ ಮೊಸರನ್ನುಂಡು ಶಾಲೆಗೆ. ಮಧ್ಯಾಹ್ನದ ಊಟ ಕಕ್ಕುಂಜೆಯ ರಾಮಪ್ಪ ಅಡಿಗಳ ಮನೆಯಲ್ಲಿ. ಶ್ರೀಯುತರು ಅನುಕೂಲ, ಐಶ್ವರ್ಯಗಳ ಜತೆ ಉದಾರಿಗಳೂ ಆಗಿದ್ದರು. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಹಲವಾರು ಮಕ್ಕಳಿಗೆ ಊಟವಿಕ್ಕಿದ ಪುಣ್ಯಾತ್ಮರವರು. ನಾರ್ಣಪ್ಪ ಉಪ್ಪೂರರು ಅವರ ಮನೆಯಲ್ಲೆ ಉಳಿದು ಶಾಲೆಗೆ ಹೋದವರು. ಶನಿವಾರ ಮತ್ತು ಭಾನುವಾರ ತಟ್ಟುವಟ್ಟಿನ ತನ್ನ ಮನೆಗೆ ತೆರಳುತ್ತಿದ್ದರು. 5ನೇ ತರಗತಿಯ ನಂತರ ಮುಂದೆ ಓದಲು ಅನಾನುಕೂಲವಾಗಿತ್ತು. ಆದರೂ ಓದುವ ಹವ್ಯಾಸವು ಚಿಗುರೊಡೆದಿತ್ತು. ಹಾಲಾಡಿ ವೆಂಕಟಗಿರಿ ನಾಯ್ಕರ ಮನೆಗೆ ತೆರಳಿ ರಾಮಾಯಣ, ಭಾಗವತ, ಮಹಾಭಾರತದ ಪುಸ್ತಕಗಳನ್ನು ತಂದು, ಮನೆಯಲ್ಲಿ ಶ್ರೀನಿವಾಸ ಉಪ್ಪೂರರ ಸಂಗ್ರಹದಲ್ಲಿದ್ದ ಯಕ್ಷಗಾನ ಪ್ರಸಂಗ ಪುಸ್ತಕಗಳನ್ನು ಓದುತ್ತಾ ವಿಚಾರ ಸಂಗ್ರಹಿಸಿದರು. ಮೌನಿಯಾದವನ ಬಳಿ ಜಗಳವು ಸುಳಿಯದು, ಸದಾ ದೇವರ ನಾಮಸ್ಮರಣೆ ಮಾಡುತ್ತಿರುವವನ ಬಳಿ ಪಾಪದ ಲೇಪವೂ ಸುಳಿಯದು. ಅಂತೆಯೇ ಸದಾ ಓದುತ್ತಿರುವವನ ಬಳಿ ದಡ್ಡತನವು ಸುಳಿಯುವುದುಂಟೆ? ಸುಳಿಯಲಾರದು. ಸದಾ ಓದುತ್ತಾ ಚುರುಕಾಗಿದ್ದುಕೊಂಡು ಬದುಕೆಂಬ ಪಾಠಶಾಲೆಯಲ್ಲಿ ಅನುಭವಗಳನ್ನು ಗಳಿಸ ಲಾರಂಭಿಸಿದರು. 19ನೇ ವಯಸ್ಸಿನಲ್ಲಿ ಸೌಕೂರು ಮೇಳಕ್ಕೆ ಒತ್ತುಮದ್ದಳೆಗಾರನಾಗಿ ಸೇರಿಕೊಂಡರು. ಅದು ಆ ಕಾಲದ ‘ಗಜಮೇಳ’ವಾಗಿತ್ತು. ಮಾರ್ವಿ ಶ್ರೀನಿವಾಸ ಉಪ್ಪೂರರೇ ಭಾಗವತರಾಗಿದ್ದರು. ವಾಸುದೇವ ಉಪ್ಪೂರರೂ ಮದ್ದಳೆ ಬಾರಿಸುತ್ತಿದ್ದರು. ತಂದೆಯ ಜತೆಯಲ್ಲಿ ಮಕ್ಕಳಿಬ್ಬರೂ ತಿರುಗಾಟ ನಡೆಸಿದರು. ಎರಡನೇ ವರ್ಷ ಅದೇ ಮೇಳದಲ್ಲಿ ಸಂಗೀತಗಾರನಾಗಿಯೂ ಕಲಾಸೇವೆ. ಹೀಗೆ ಹಿಮ್ಮೇಳದ ಸಮಗ್ರ ಜ್ಞಾನಾರ್ಜನೆಗೆ ಅವಕಾಶವು ಸಿಕ್ಕಿತ್ತು. ಪ್ರಸಂಗನಡೆ, ಆಟ ಆಡಿಸುವ ಕ್ರಮಗಳನ್ನೆಲ್ಲಾ ಬಹುಬೇಗನೇ ಗ್ರಹಿಸಿಕೊಂಡರು. ನಂತರ ಮಾರಣಕಟ್ಟೆ ಮೇಳದಲ್ಲಿ ಮಾರ್ವಿ ಶ್ರೀನಿವಾಸ ಉಪ್ಪೂರರೂ, ವಾಸುದೇವ ಉಪ್ಪೂರರೂ, ನಾರ್ಣಪ್ಪ ಉಪ್ಪೂರರೂ ಜತೆಯಾಗಿಯೇ ತಿರುಗಾಟ ನಡೆಸಿದರು. ಸದ್ರಿ ಮೇಳವು ಚಿತ್ತೂರು ಶೆಟ್ಟರ ಯಜಮಾನಿಕೆಯಲ್ಲಿತ್ತು. ನಾರ್ಣಪ್ಪ ಉಪ್ಪೂರರು ಪದ್ಯ ಹೇಳುವಾಗ ಶ್ರೀನಿವಾಸ ಉಪ್ಪೂರರು ಬಳಿಯಲ್ಲಿಯೇ ಇದ್ದು ನಿರ್ದೇಶಿಸುತ್ತಿದ್ದರಂತೆ. ಗುರುವಾಗಿ ತಿದ್ದುತ್ತಿದ್ದರಂತೆ. ತಪ್ಪಿದಾಗ ತೀರ್ಥರೂಪರು ನೀಡಿದ ‘ಗುದ್ದು’ ನನ್ನ ಭಾಗವತಿಕೆ ಬದುಕಿನ ಒಂದು ಪಾಠವೆಂದು ನಾರ್ಣಪ್ಪ ಉಪ್ಪೂರರು ಹೇಳುತ್ತಿದ್ದರು. ಬಾಲ್ಯ ವಿವಾಹವು ಊರ್ಜಿತದಲ್ಲಿದ್ದ ಕಾಲ. ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಕೆಳಮಾರ್ವಿ ಸುಬ್ರಾಯ ಹೆಬ್ಬಾರರ ಪುತ್ರಿ ವೆಂಕಟೇಶ್ವರಿ ಅವರನ್ನು ನಾರ್ಣಪ್ಪ ಉಪ್ಪೂರರು ವಿವಾಹವಾದರು. ತಿರುಗಾಟ ಮುಗಿದು ಮಳೆಗಾಲದಲ್ಲಿ ಹಾರ್ನಳ್ಳಿಯಲ್ಲಿ ತನ್ನ ದೊಡ್ಡಮ್ಮನ ಮಗ ಅಣ್ಣ ಪರಮೇಶ್ವರ ಹೆಬ್ಬಾರರು ನಡೆಸುತ್ತಿದ್ದ ಹೋಟೆಲ್‍ನಲ್ಲೂ ಕೆಲಸ ಮಾಡಿದರು. ಮುಂದಿನ ವರ್ಷ ಅಮೃತೇಶ್ವರೀ ಮೇಳದಲ್ಲಿ ತಂದೆ ಶ್ರೀನಿವಾಸ ಉಪ್ಪೂರರ ಜತೆ ಭಾಗವತನಾಗಿ ತಿರುಗಾಟ. ಶ್ರೀನಿವಾಸ ಉಪ್ಪೂರರು ಸ್ವರದ ಸಮಸ್ಯೆಯಿಂದಾಗಿ ಸ್ವಲ್ಪ ಹೊತ್ತು ಹಾಡಿ ಮಗನಿಗೆ ಅವಕಾಶ ನೀಡುತ್ತಾ ಹೇಳಿಕೊಡುತ್ತಿದ್ದರು. ನಾರ್ಣಪ್ಪ ಉಪ್ಪೂರರು ಜೋಡಾಟಗಳಲ್ಲೂ ಪದ್ಯ ಹೇಳಿ ಸೈ ಎನಿಸಿಕೊಂಡರು. ಶ್ರೇಷ್ಠ ಹಿಮ್ಮೇಳ, ಮುಮ್ಮೇಳ ಕಲಾವಿದರ ಒಡನಾಟದಿಂದ ಅನುಭವಗಳನ್ನು ಗಳಿಸುತ್ತಾ ಪಕ್ವರಾದರು. ಅಮೃತೇಶ್ವರೀ ಮೇಳದಲ್ಲಿ 4 ತಿರುಗಾಟ ನಡೆಸಿದ ನಂತರ 2 ವರ್ಷ ಇಡಗುಂಜಿ ಮೇಳದಲ್ಲಿ ವ್ಯವಸಾಯ. ಕೆರೆಮನೆ ಶಿವರಾಮ ಹೆಗಡೆಯವರ ಸಂಚಾಲಕತ್ವ. ಶ್ರೇಷ್ಠ ಕಲಾವಿದರ ಒಡನಾಟ. ಭಾಗವತಿಕೆಯಲ್ಲಿ ಕುಣಿತದ ಜತೆ ಅಭಿನಯಕ್ಕೆ ಅವಕಾಶ ಮಾಡಿಕೊಡುವ ಕಲೆಯು ಕರಗತವಾಯಿತು. ಮುಂದಿನ ನಾಲ್ಕು ವರ್ಷಗಳ ಕಾಲ ಮಾರ್ವಿ ರಾಮಕೃಷ್ಣ ಹೆಬ್ಬಾರರ (ನಾರ್ಣಪ್ಪ ಉಪ್ಪೂರರ ಭಾವ) ಸಂಚಾಲಕತ್ವದ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ ನಡೆಸಿದರು. ಇವರ ಭಾಗವತಿಕೆಯಲ್ಲಿ ರಾಮಾಂಜನೇಯ, ಚೂಡಾಮಣಿ ಅಲ್ಲದೇ ಅನೇಕ ಪುರಾಣ ಪ್ರಸಂಗಗಳು ವಿಜೃಂಭಿಸಿ ಕಲಾವಿದರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ನಂತರ 4 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಕಲಾಸೇವೆ. ಮುಂದಿನ ವರ್ಷ ಕೊಲ್ಲೂರು ಮೇಳದಲ್ಲಿ ತಿರುಗಾಟ. ನಂತರ ಮತ್ತೆ ಅಮೃತೇಶ್ವರೀ ಮೇಳಕ್ಕೆ ಪುನರಾಗಮನ.
                 1959ನೇ ಇಸವಿ ಜನವರಿ ತಿಂಗಳಿನಲ್ಲಿ ಒಂದು ದಿನ ಅಮೃತೇಶ್ವರೀ ಮೇಳ ಆಟ ಮುಗಿಸಿ ಮುಂದಿನ ಕೇಂಪ್‍ಗೆ ಸಾಗುತ್ತಿರುವಾಗ, ‘‘ಇನ್ನು 8 ದಿನದೊಳಗೆ ನೀವು ಸಾವಿರ ಮೈಲುಗಳಾಚೆ ಹೋಗಲಿದ್ದೀರಿ’’ ಎಂದು ಕುರು ಕುರು ಮಾಮನು ಭವಿಷ್ಯ ನುಡಿದಿದ್ದನಂತೆ. ನಾರ್ಣಪ್ಪ ಉಪ್ಪೂರರು ಈ ಮಾತನ್ನು ನಂಬಿರಲಿಲ್ಲವಂತೆ. ಆದರೂ ಆತನಿಗೆ ನಾಲ್ಕಾಣೆ ಕಾಣಿಕೆಯನ್ನು ನೀಡಿದ್ದರಂತೆ. ಜನವರಿ 26ರ ಗಣರಾಜ್ಯೋತ್ಸವ ಪೆರೇಡಿನಲ್ಲಿ ಯಕ್ಷಗಾನ ಕಲೆಯನ್ನು ಪ್ರತಿನಿಧಿಸುವ ಅವಕಾಶವು ತಾನಾಗಿ ಒಲಿದು ಬಂದಿತ್ತು. ಇವರೂ, ತಂಡದವರೂ 25ನೇ ತಾರೀಕಿನಂದು ದೆಹಲಿ ತಲುಪಿದ್ದರು. ಕುರು ಕುರು ಮಾಮನ ಭವಿಷ್ಯದ ವಾಣಿಯು ನಿಜವಾಗಿತ್ತು!
                               ಶ್ರೀ ಹಿರಿಯಡಕ ಗೋಪಾಲ ರಾಯರು, ಸುಬ್ಬಣ್ಣ ಭಟ್ಟರ ಕೇಳಿಕೆಯಂತೆ ಶ್ರೀ ನಾರ್ಣಪ್ಪ ಉಪ್ಪೂರರು ಡಾ| ಕೋಟ ಶಿವರಾಮ ಕಾರಂತರ ನೃತ್ಯ ನಾಟಕ ತರಬೇತಿಯಲ್ಲೂ ಭಾಗವಹಿಸಿದವರು. ‘ಕೃಷ್ಣಾರ್ಜುನ ಕಾಳಗ’ ಗೀತನಾಟಕದಲ್ಲಿ ಶ್ರೀಕೃಷ್ಣನ ಪಾತ್ರವನ್ನೂ ನಿರ್ವಹಿಸಿದ್ದರು! ಕಾರಂತರ ಕಲ್ಪನೆಯ ಅಪೂರ್ವ ಪ್ರಯೋಗವಿದು. ಕಾರಂತರ ನೇತೃತ್ವದಲ್ಲಿ ಮುಖ್ಯ ಭಾಗವತರುಗಳೆಲ್ಲಾ ಸೇರಿ ನಡೆದ ಯಕ್ಷಗಾನ ಗೋಷ್ಠಿಯಲ್ಲೂ ಭಾಗವಹಿಸಿದ್ದರು. ಕಾರಂತರ ಅನುಭವ, ವಿದ್ಯೆಗಳಿಗೆ ನಾರ್ಣಪ್ಪ ಉಪ್ಪೂರರು ಬೆರಗಾಗಿದ್ದರು. ಮನಸೋತಿದ್ದರು. ಕೆರೆಮನೆ ಮಹಾಬಲ ಹೆಗಡೆಯವರ ಗೀತನಾಟಕ ತರಬೇತಿ ಶಿಬಿರದಲ್ಲೂ ಭಾಗವಹಿಸಿದ್ದರು. ಇಂತಹ ಪ್ರಯೋಗಗಳು ಅನೇಕ ಕಡೆ ನಡೆದಿದ್ದವು. ನಾರ್ಣಪ್ಪ ಉಪ್ಪೂರರು ಉತ್ತಮ ಕೃಷಿಕರೂ ಆಗಿದ್ದರು. ತೀರ್ಥರೂಪರ ಮರಣಾನಂತರ ಕೃಷಿ ಕಾರ್ಯಗಳನ್ನು ನಡೆಸುತ್ತಾ ಮೇಳದ ತಿರುಗಾಟವನ್ನೂ ಮಾಡುತ್ತಿದ್ದರು. 1963 ರಲ್ಲಿ ಕೊಲ್ಲೂರು ಮೇಳದಲ್ಲಿ ಮತ್ತೆ ತಿರುಗಾಟ. 1966ರಲ್ಲಿ ನಾರ್ಣಪ್ಪ ಉಪ್ಪೂರರು ತನ್ನ ಅನುಭವಗಳ ಆಧಾರದಲ್ಲಿ ತಾಳಗಳು ಮತ್ತು ಸಭಾಲಕ್ಷಣ ಇತ್ಯಾದಿ ವಿಚಾರಗಳನ್ನು ದಾಖಲಿಸಿ ‘ಯಕ್ಷಗಾನ ಶಿಕ್ಷಕ’ ಎಂಬ ಪುಸ್ತಕವನ್ನು ಬರೆದಿದ್ದರು. ಈ ಕೃತಿಯ ಪ್ರತಿಗಳೆಲ್ಲಾ ಪ್ರಕಟವಾದ ಒಂದು ವರುಷದ ಒಳಗೆ ಓದುಗರ ಕೈಸೇರಿತ್ತು! 1966ರಿಂದ 1969ರ ವರೇಗೆ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ. ಮತ್ತೆ ಸಾಲಿಗ್ರಾಮ ಮೇಳಕ್ಕೆ. ಅಳಿಯ ಶ್ರೀಧರ ಹಂದೆಯವರ ಸಂಚಾಲಕತ್ವ. ಟೆಂಟಿನ ಮೇಳ. ಹಿಮ್ಮೇಳಕ್ಕೆ ಉಪ್ಪೂರರ ಜತೆ ತಿಮ್ಮಪ್ಪ ನಾಯಕ, ಕೆಮ್ಮಣ್ಣು ಆನಂದನವರು. ಮುಮ್ಮೇಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರ ಗಡಣ. ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ, ಮಲ್ಪೆ ಶಂಕರನಾರಾಯಣ ಸಾಮಗರ ಸಲಹೆ. ಚಂದ್ರಹಾಸ ಚರಿತ್ರೆ, ಬೇಡರಕಣ್ಣಪ್ಪ, ಭೀಷ್ಮ ವಿಜಯ, ಗದಾಯುದ್ಧ, ಪಟ್ಟಾಭಿಷೇಕ ಮೊದಲಾದ ಪ್ರಸಂಗಗಳು ಜನಮೆಚ್ಚುಗೆಯನ್ನು ಪಡೆದವು. ಸಾಗರ, ಶಿರಸಿ ಕಡೆಗಳಲ್ಲೂ ಮೇಳವು ಸಾಗಿ ಪ್ರಸಿದ್ಧಿಯನ್ನು ಪಡೆಯಿತು. ಸುರತ್ಕಲ್ಲು ಮೇಳದ ಯಜಮಾನರಾದ ಶ್ರೀ ಕಸ್ತೂರಿ ಪೈಗಳ ಕರೆಯಂತೆ ಸದ್ರಿ ಮೇಳದ ಜತೆ ಜೋಡಾಟ. ಇದರಲ್ಲಿ ತೆಂಕುತಿಟ್ಟಿನ ಪ್ರಸಿದ್ಧರಾದ ಶ್ರೀ ಬಲಿಪ ನಾರಾಯಣ ಭಾಗವತರೂ ಭಾಗವಹಿಸಿದ್ದರಂತೆ. ನಂತರ ಸಾಲಿಗ್ರಾಮ ಮೇಳದ ಸಂಪೂರ್ಣ ಹಕ್ಕನ್ನು ಪಳ್ಳಿ ಸೋಮನಾಥ ಹೆಗ್ಡೆಯವರು ವಹಿಸಿಕೊಂಡಿದ್ದರು. ಅವರ ಸಂಚಾಲಕತ್ವದಲ್ಲಿ ಬಡಗುತಿಟ್ಟಿನ ಮೇಳ ಗಳಲ್ಲಿ ಒಂದು ಅವಿಸ್ಮರಣೀಯ ದಾಖಲೆ ತಿರುಗಾಟವಾಗಿ ಸಾಲಿಗ್ರಾಮ ಮೇಳವು ಪ್ರಸಿದ್ಧಿಯನ್ನು ಪಡೆಯಿತು ಎಂದು ನಾರ್ಣಪ್ಪ ಉಪ್ಪೂರರು ಹೇಳುತ್ತಿದ್ದರು. 1971-72ರಲ್ಲಿ ಮತ್ತೆ ಅಮೃತೇಶ್ವರೀ ಮೇಳಕ್ಕೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಷಿ, ವಾಸುದೇವ ಸಾಮಗ, ಕೋಟ ವೈಕುಂಠ ಮುಂತಾದ ಕಲಾವಿದರಿಂದ ಭಸ್ಮಾಸುರ ಮೋಹಿನಿ, ಕೀಚಕ ವಧೆ, ಗುರುದಕ್ಷಿಣೆ, ಶಿವಲೀಲೆ, ಕಾಳಿದಾಸ, ಚಂದ್ರಹಾಸ ಮುಂತಾದ ಪ್ರಸಂಗಗಳು ರಂಜಿಸಿದವು. ಅಮೃತೇಶ್ವರೀ ಮೇಳವು ಈ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಜತೆ ಹಲವು ಜೋಡಾಟಗಳಲ್ಲಿ ಭಾಗವಹಿಸಿತ್ತು. ಆಗ ನಾರ್ಣಪ್ಪ ಉಪ್ಪೂರರ ಶಿಷ್ಯ ಜಿ. ಆರ್. ಕಾಳಿಂಗ ನಾವಡರೂ ಅಮೃತೇಶ್ವರೀ ಮೇಳದಲ್ಲಿ ಭಾಗವತರಾಗಿದ್ದರು.
                            1972ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಸ್ಥಾಪಿತವಾಯಿತು. ಇದಕ್ಕೆ ಮೂಲ ಕಾರಣರು ಐರೋಡಿ ಸದಾನಂದ ಹೆಬ್ಬಾರರು. ಈ ಕಲಿಕಾ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರು ಪ್ರಾಚಾರ್ಯರಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದರು. ಶ್ರೀಯುತರು ಬರೆದ ‘ಯಕ್ಷಗಾನ-ಅಧ್ಯಯನ’ ಪುಸ್ತಕವು 1978ರಲ್ಲಿ ಬಿಡುಗಡೆಯಾಗಿ ಓದುಗರ ಕೈಸೇರಿತ್ತು. 1980ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ನಾರ್ಣಪ್ಪ ಉಪ್ಪೂರರನ್ನು ಗೌರವಿಸಿದವು. ಸ್ವಲ್ಪ ಸ್ವಲ್ಪ ಪದ್ಯ ಹೇಳುವವರೆಲ್ಲಾ ಭಾಗವತರಲ್ಲ. ಹತ್ತಿಪ್ಪತ್ತು ಪ್ರಸಂಗಗಳಾದರೂ ಪುಸ್ತಕದಿಂದ ಮಸ್ತಕಕ್ಕೆ ಬಂದಿರಬೇಕು. ಯಾವ ಭಾವಕ್ಕೆ ಯಾವ ರಾಗ? ತಾಳದ ನಡೆ? ನೃತ್ಯಕ್ಕೆ ಅನುಕೂಲ, ಪುನಾವರ್ತನೆ, ಎಷ್ಟು ನಿಧಾನ? ಎಷ್ಟು ತ್ವರಿತ ಹೇಳಬೇಕು. ಯಾವ ವೇಷಕ್ಕೆ ಯಾವ ರೀತಿ ಪದ್ಯ ಹೇಳಬೇಕು? ಎಂಬ ಜ್ಞಾನ ಭಾಗವತನಿಗಿರಬೇಕು. ಚೆಂಡೆಮದ್ದಳೆ ಬಾರಿಸುವವರಿಗೂ ಪ್ರಸಂಗವನ್ನು ಮುನ್ನಡೆಸುವ ಜ್ಞಾನ ಇರಬೇಕು ಎಂದು ಉಪ್ಪೂರರು ಹೇಳುತ್ತಿದ್ದರು. ಪ್ರದರ್ಶನದ ಗೆಲುವಿಗೂ, ಸೋಲಿಗೂ ಹಿಮ್ಮೇಳವೇ ಕಾರಣವಾಗುತ್ತದೆ ಎಂಬ ಧ್ವನಿಯು ಉಪ್ಪೂರರ ಈ ಮಾತುಗಳಲ್ಲಿ ಅಡಗಿದೆ. 1984ನೇ ಇಸವಿ, ಎಪ್ರಿಲ್ 11ರಂದು ಕುಂದಾಪುರದಲ್ಲಿ ಅಮೃತೇಶ್ವರೀ ಮೇಳದ ಆಟ. ಭಸ್ಮಾಸುರ ಮೋಹಿನಿ ಪ್ರಸಂಗ. ಚಿಟ್ಟಾಣಿಯವರ ಭಸ್ಮಾಸುರ. ನಡುರಾತ್ರಿ 1-30ರ ಹೊತ್ತು. ಶ್ರೀ ನಾರ್ಣಪ್ಪ ಉಪ್ಪೂರರು ರಂಗವೇರಲು ಸಿದ್ಧರಾಗುತ್ತಿದ್ದರು. ಚೌಕಿಯಲ್ಲಿ ಕುಳಿತು ಮುಂಡಾಸು ಕಟ್ಟಿ ಹಣೆಗೆ ತಿಲಕವಿಡುತ್ತಿದ್ದರು. ಕಣ್ಣುಕತ್ತಲು ಕವಿದು ಕುಸಿದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳುವ ಭಾಗ್ಯವು ಕಲಾಭಿಮಾನಿಗಳ ಪಾಲಿಗೆ ಇಲ್ಲವಾಯಿತು. ಎಪ್ರಿಲ್ 12ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮಾರ್ವಿ ನಾರ್ಣಪ್ಪ ಉಪ್ಪೂರರು ಇಹದ ಯಾತ್ರೆಯನ್ನು ಮುಗಿಸಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಪರಂಪರೆಗೆ ತೊಡಕಾಗದಂತೆ ಹಲವು ಹೊಸತುಗಳನ್ನು ಯಕ್ಷಗಾನಕ್ಕೆ ನೀಡಿ, ಕಲಾಭಿಮಾನಿಗಳ ಹೃದಯದಲ್ಲಿ ಶಾಶ್ವತರಾಗಿ ಸ್ಥಾನ ಪಡೆದು ನಮ್ಮಿಂದ ಕಣ್ಮರೆಯಾದರು. ಹಂಗಾರಕಟ್ಟೆ ಕಲಿಕಾ ಕೇಂದ್ರದಲ್ಲಿ 1972ರಿಂದ 1983ರ ತನಕ ಸಮರ್ಥ ಶಿಕ್ಷಕನಾಗಿದ್ದ ಇವರು 1940ರಿಂದ 1983ರ ತನಕದ ತನ್ನ ಕಲಾಜೀವನದ ಮುಖ್ಯ ವಿಚಾರಗಳನ್ನು ಡೈರಿಯಲ್ಲಿ ಬರೆದಿರಿಸಿದ್ದರು. ಇದರಲ್ಲಿರುವ ಮಾಹಿತಿಗಳ ಆಧಾರದಲ್ಲೇ ಪ್ರಾಚಾರ್ಯಪಥ ಎಂಬ ಪುಸ್ತಕವು 2016ನೇ ಇಸವಿ ಶ್ರೀ ನಾಗರಾಜ ಮತ್ತಿಗಾರರ ಸಂಪಾದಕತ್ವದಲ್ಲಿ ಪ್ರಕಟನೆಗೊಂಡಿತ್ತು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಖ್ಯಾತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಬರೆದಿದ್ದರು. ಬಡಗುತಿಟ್ಟಿನ ಖ್ಯಾತ ಭಾಗವತರಾದ ಶ್ರೀ ನೆಬ್ಬೂರು ನಾರಾಯಣ ಭಾಗವತರು, ಯಮುನಾ ಪ್ರಕಾಶನ ಮತ್ತಿಗಾರದ ಶ್ರೀ ಸುಬ್ರಾಯ ಹೆಗಡೆ ಅಲ್ಲದೆ ಉಪ್ಪೂರರ ಶಿಷ್ಯಂದಿರಾದ ಕೆ.ಜಿ. ರಾಮರಾವ್, ಸದಾನಂದ ಐತಾಳ, ಕೆ.ಪಿ. ಹೆಗಡೆ, ಸುಬ್ರಹ್ಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆಯವರ ಲೇಖನಗಳೂ ‘ಪ್ರಾಚಾರ್ಯಪಥ’ ಪುಸ್ತಕದಲ್ಲಿವೆ. ಜಿ. ಆರ್. ಕಾಳಿಂಗ ನಾವಡರು ಬದುಕಿರುತ್ತಿದ್ದರೆ ಬಹುಶಃ ಅವರ ಲೇಖನವೂ ಈ ಪುಸ್ತಕದಲ್ಲಿರುತ್ತಿತ್ತು.
                       ಶ್ರೀ ನಾರ್ಣಪ್ಪ ಉಪ್ಪೂರ ವೆಂಕಟೇಶ್ವರೀ ಅಮ್ಮ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. ಹಿರಿಯಾಕೆ ಜಯಲಕ್ಷ್ಮಿ. ವಿವಾಹಿತೆ. ಉಪ್ಪೂರರ ಅಳಿಯ ಪಾರಂಪಳ್ಳಿ ಶ್ರೀಧರ ಹಂದೆಯವರು ಬೆಂಗಳೂರಿನಲ್ಲಿ ಹೋಟೆಲು ಉದ್ಯಮ ನಡೆಸಿದ್ದರು. ಅಲ್ಲದೆ ಸಾಲಿಗ್ರಾಮ ಮತ್ತು ಅಮೃತೇಶ್ವರೀ ಮೇಳದ ಯಜಮಾನರಾಗಿದ್ದರು.
2. ದಾಮೋದರ ಉಪ್ಪೂರ- ಭಾಗವತಿಕೆ ಮಾಡುತ್ತಿದ್ದರು. ಮದ್ದಳೆ ನುಡಿಸುತ್ತಿದ್ದರು. ತರಗತಿಗಳನ್ನೂ ನಡೆಸುತ್ತಿದ್ದರು. ಖ್ಯಾತ ಭಾಗವತ ಶ್ರೀ ರಾಘವೇಂದ್ರ ಮಯ್ಯರಿಗೆ ತಾಳ ಕಲಿಸಿದ ಗುರು.
3. ಕೃಷ್ಣಮೂರ್ತಿ ಉಪ್ಪೂರ- ಯಕ್ಷಗಾನದ ಬೊಂಬೆಗಳನ್ನು ತಯಾರಿಸಿ ಪ್ರದರ್ಶನವನ್ನೂ ನಡೆಸುತ್ತಿದ್ದರು. ನಾರ್ಣಪ್ಪ ಉಪ್ಪೂರರ ಪೋಟೋ, ಪ್ರಶಸ್ತಿ, ಪ್ರಮಾಣಪತ್ರಗಳನ್ನು ಸಂರಕ್ಷಿಸಿ ಇರಿಸಿದ್ದಾರೆ.
4. ರಮೇಶ ಉಪ್ಪೂರ- ಕತೆಗಾರ. ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಉಪ್ಪೂರರ ಹಾಡುಗಳನ್ನು ಧ್ವನಿಮುದ್ರಿಸಿ ನಮಗೆ ಈಗಲೂ ಕೇಳುವ ಹಾಗೆ ಮಾಡಿದವರು.
5. ಶ್ರೀಧರ ಉಪ್ಪೂರ- ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾ| ವಿವೇಕ್ ರೈ ಬಿ. ಎ. ಇವರ ಮಾರ್ಗದರ್ಶನದಲ್ಲಿ ಬಡಗುತಿಟ್ಟಿನ ಯಕ್ಷಗಾನ ‘ಪರಂಪರೆ ಮತ್ತು ಪ್ರಯೋಗ’ ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬಸ್ರೂರು ಶಾರದಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.
6. ಸುರೇಶ್ ಉಪ್ಪೂರ- ಮದ್ದಳೆಗಾರನಾಗಿ ಸೌಕೂರು ಮೇಳದಲ್ಲಿ ವ್ಯವಸಾಯ. ಬಗ್ವಾಡಿ, ಮಡಾಮಕ್ಕಿ ಮೇಳಗಳಲ್ಲೂ ಕಲಾಸೇವೆ ಮಾಡಿರುತ್ತಾರೆ. ಹಾಲಾಡಿ ಮೂಲಮನೆಯಲ್ಲಿ ವಾಸವಾಗಿದ್ದಾರೆ.
7. ಗೌರೀಶ ಉಪ್ಪೂರ- ಮದ್ದಳೆ ಅಭ್ಯಾಸ ಮಾಡಿದ್ದಾರೆ- ಬೆಂಗಳೂರು ಹೋಟೆಲ್ ಉದ್ಯಮದಾರರ ಸಹಕಾರೀ ಬ್ಯಾಂಕಿನಲ್ಲಿ ವ್ಯವಸ್ಥಾಪಕರು.
8. ದಿನೇಶ ಉಪ್ಪೂರ- ಕೆ.ಇ.ಬಿ.ಯಲ್ಲಿ ಅಧಿಕಾರಿಯಾಗಿ ನಿವೃತ್ತರು.
ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದನಾಗಿ, ಸ್ತ್ರೀವೇಷಧಾರಿಯಾಗಿ ಕಲಾಸೇವೆ. ಉಪ್ಪೂರರ ಧ್ವನಿಮುದ್ರಣ, ವೀಡಿಯೋಗಳನ್ನು ಸಂಗ್ರಹಿಸಿ ದಾಖಲೆಗಾಗಿ ಉಳಿಸಿರುತ್ತಾರೆ.
                                           ಶ್ರೀ ಅಮೃತೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯು, ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರ ಪ್ರಶಸ್ತಿ ಕೊಡುವ ಕ್ರಮವನ್ನು ಕಳೆದ ವರ್ಷದಿಂದ ಆರಂಭಿಸಿ ಉಪ್ಪೂರರನ್ನು ಈಗಲೂ ನೆನಪಿಸಿ ಗೌರವಿಸುತ್ತಿದೆ. ಕಳೆದ ವರ್ಷ ಈ ಪ್ರಶಸ್ತಿಯು ನೆಬ್ಬೂರು ಶ್ರೀ ನಾರಾಯಣ ಭಾಗವತರಿಗೆ ಲಭಿಸಿತ್ತು. ಯಕ್ಷಗಾನ ಕಲಾರಂಗ ಉಡುಪಿಯು ಅನೇಕ ವರ್ಷಗಳಿಂದ ನಾರ್ಣಪ್ಪ ಉಪ್ಪೂರ ಪ್ರಶಸ್ತಿಯನ್ನು ಸಾಧಕರಿಗೆ ನೀಡುತ್ತಾ ಬಂದಿದೆ. ಉಪ್ಪೂರರು ಈ ಲೋಕದ ಬೆಳಕನ್ನು ಕಂಡ ನೂರನೇ ವರ್ಷವಿದು. ‘ಜನ್ಮಶತಮಾನೋತ್ಸವ ಸಮಿತಿ’ಯು ರೂಪೀಕರಣವಾಗುತ್ತಿದೆ. ಭಾಗವತ ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು- ‘ಶತಸ್ಮೃತಿ’ ಎಂಬ ಕೃತಿಯೂ ಪ್ರಕಟನೆಗೊಳ್ಳಲಿದೆ. ಆ ಸಮಯಕ್ಕಾಗಿ ಕಾಯೋಣ. ಕಾರ್ಯಕ್ರಮವು ಯಶಸ್ವಿಯಾಗಿ, ಸುಂದರವಾಗಿ ಮೂಡಿಬರಲಿ. ಈ ಸತ್ಕಾರ್ಯವು ಮಾರ್ವಿ ನಾರ್ಣಪ್ಪ ಉಪ್ಪೂರ ಎಂಬ ಮಹಾಚೇತನಕ್ಕೆ ನೀಡುವ ಗೌರವಾರ್ಪಣೆಯಾಗಿ ಶೋಭಿಸಲಿ. ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಹಾರಯಿಕೆಗಳು.



- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು