ಅಳಿದರೂ ಕಾಯ, ಉಳಿಯಿತು ಕೀರ್ತಿ ... ದಿ| ಪುಚ್ಚೆಕೆರೆ ಕೃಷ್ಣ ಭಟ್ಟರು

                        ಪರರಿಗಾಗಿ ಬದುಕುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇದು ಲೌಕಿಕ ಪ್ರಪಂಚ.  ನಾನು ಶಾಶ್ವತನಲ್ಲ. ಸಾಧನೆಯನ್ನು ಮಾಡುತ್ತಾ ಸಮಾಜಕ್ಕೆ ಕೊಡುಗೆಗಳನ್ನಿತ್ತರೆ ಜೀವನ ಸಾರ್ಥಕವಾಗುತ್ತದೆ ಎಂಬ ಅರಿವು ಮನೋಭಾವನೆ ಇರಬೇಕು. ಬದುಕಿರುತ್ತಾ ಸಾಯದೆ, ಸತ್ಕರ್ಮಗಳನ್ನು ಮಾಡುತ್ತಾ ಜೀವನಯಾತ್ರೆಯನ್ನು ಕೊನೆಗೊಳಿಸಿದರೂ, ಅವರು ಜನಮಾನಸದಲ್ಲಿ ಶಾಶ್ವತರಾಗಿ ನೆಲೆಸುತ್ತಾರೆ. ಹುಟ್ಟು ಆಕಸ್ಮಿಕ, ಮರಣ ನಿಶ್ಚಿತ. ಲೋಕನಿಯಮವನ್ನು ಮುರಿದು ಮೆರಯಲು ಯಾರಿಂದಲೂ ಅಸಾಧ್ಯ. ಯಾರಿಗೂ ಸಾಧ್ಯವಿಲ್ಲ. ಆದರೂ ಬದುಕಿ ಸಾಯದೆ ಸತ್ತು ಬದುಕುವ ರೀತಿಯಾದರೂ ಗೊತ್ತಿರಬೇಕು. ದುರ್ಲಭವಾದರೂ, ಸಿದ್ಧಿಸದ ಮಾನವಜನ್ಮವನ್ನು ಸಾರ್ಥಕ್ಯಗೊಳಿಸುವ ವಿಧಾನವೇ ಇದು. ಅಧ್ಯಾಪಕನಾಗಿ, ಕಲಾಪೋಷಕನಾಗಿ, ಕಲಾವಿದನಾಗಿ, ಸಂಘಟಕನಾಗಿ ನಿಸ್ವಾರ್ಥ ಸೇವೆಯನ್ನು ಮಾಡಿದ ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರು ಈಗ ನಮ್ಮನ್ನಗಲಿದರೂ ಅವರ ಆದರ್ಶಗಳು ಜೀವಂತವಾಗಿವೆ. ಎಲ್ಲರಿಗೂ ಅನುಸರಣೀಯವಾದುದು.
 ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟ


                       ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರು ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಪುಚ್ಚೆಕೆರೆ, ಶ್ರೀ ಕೃಷ್ಣ ಭಟ್ಟರ ಹುಟ್ಟೂರು. ಶ್ರೀ ಶಂಕರ ಭಟ್ಟ, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಮಂಚಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಉಡುಪಿಯಲ್ಲಿ ಪ್ರೌಢಶಿಕ್ಷಣ. ಉಜಿರೆ ಸಿದ್ಧವನದಲ್ಲಿ ಅಧ್ಯಾಪಕ ತರಬೇತಿಯನ್ನು ಪಡೆದರು.      ಎಕ್ಕಾರು ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರೂ, ಉಡುಪಿಯಲ್ಲಿ ಸಹಪಾಠಿಯಾಗಿದ್ದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರ ಸೂಚನೆಯಂತೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರೌಢ, ಪ್ರಾಥಮಿಕ ಶಾಲೆಯನ್ನು ಸೇರಿದರು. ನಿವೃತ್ತಿಯ ವರೆಗೂ ವಿದ್ಯಾರ್ಥಿಗಳಿಗೆ ವಿದ್ಯೆಯೆಂಬ ಪೀಯೂಷವನ್ನು ಉಣಿಸುತ್ತಾ, ಯಕ್ಷಗಾನ ಕಲಾಮಾತೆಯಾದ ಭ್ರಮರಾಂಬಿಕೆಯ ಸನ್ನಿಧಿಯಲ್ಲಿ ಸಮರ್ಥ ಯಕ್ಷಗಾನ ಸಂಘಟಕನಾಗಿಯೂ ಪ್ರಸಿದ್ಧರಾದರು. ಖ್ಯಾತ ವಿಮರ್ಶಕ, ಲೇಖಕ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿಯವರ ಅಭಿಪ್ರಾಯದಂತೆ- ಪುಚ್ಚೆಕೆರೆ ಕೃಷ್ಣ ಭಟ್ಟರು ದೀರ್ಘಕಾಲ ಮುಖ್ಯೋಪಾಧ್ಯಾಯರಾಗಿ ಹಲವು ಅಸಾಮಾನ್ಯ ಸಾಧನೆಗಳಿಗೆ ದಾಖಲೆಗಳಿಗೆ ಕರ್ತೃವಾದರು. ಕೆಲವೊಂದು ವಿಷಯದಲ್ಲಿ ಕಟೀಲಿನ ಶಿಕ್ಷಣ ಸಂಸ್ಥೆ, ಸಮೂಹ ಮತ್ತು ಕ್ಷೇತ್ರದ ಸಾಂಸ್ಕೃತಿಕ ಚಟುವಟಿಕೆಗಳ ‘ಐಕಾನಿಕ್’ ಮುಖವಾಗಿ ಕಾರ್ಯಕರ್ತ, ನೇತಾರ, ಕಲಾವಿದ, ಎಲ್ಲವೂ ಆಗಿ ಇತಿಹಾಸ ನಿರ್ಮಿಸಿದವರು. ಮುಖ್ಯೋಪಾಧ್ಯಾಯರಾಗಿದ್ದಾಗ ತನ್ನ ವಿಶಿಷ್ಟ ಆಡಳಿತ ಶೈಲಿಯಿಂದ ವಿದ್ಯಾರ್ಥಿಗಳು, ಪಾಲಕರು, ಸಹವರ್ತಿಗಳು, ಆಡಳಿತ ಮತ್ತು ಶಿಕ್ಷಣ ಇಲಾಖೆ ಈ ಐದೂ ಹಂತಗಳಿಗೆ ಬೇಕಾದವರಾಗಿದ್ದರು. ಬಹುಕಾಲ ಶಾಲಾ ಮುಖ್ಯೋಪಾಧ್ಯಾಯರಾಗಿ ಜನಪ್ರಿಯತೆ ಮತ್ತು ಅಂಗೀಕಾರ ಉಳಿಸಿಕೊಳ್ಳುವುದು ಕಠಿಣ. ಅದರಲ್ಲೂ ಈ ಹೆಡ್ಮಾಸ್ಟರರಿಗೆ ‘ಡಿಸ್ಟಿಂಕ್‍ಶನ್’ Rank. (ಪುಚ್ಚೆಕೆರೆ ಕೃಷ್ಣ ಭಟ್ಟ ಜೀವನ-ಸಾಧನೆ ಪುಸ್ತಕದಿಂದ) ‘‘ಯಾವುದೇ ಸಮಸ್ಯೆಯನ್ನು ಸಮಸ್ಯೆಯೆಂದು ತಿಳಿಯದೆ ನಿಭಾಯಿಸುವ ಅವರ ಕ್ರಮ ವಿಚಿತ್ರ’’. ಪುಚ್ಚೆಕೆರೆ ಕೃಷ್ಣ ಭಟ್ಟರ ಬಗೆಗೆ ಶ್ರೀ ಕಲ್ಲಾಡಿ ವಿಠಲ ಶೆಟ್ಟರ ಅನಿಸಿಕೆಯನ್ನು ಡಾ. ಎಂ. ಪ್ರಭಾಕರ ಜೋಶಿಯವರು ‘‘ಮರೆಯಲಾರದ ಬಹುವರ್ಣ ರತ್ನ’’ ಎಂಬ ತಮ್ಮ ಲೇಖನದಲ್ಲಿ ನಮೂದಿಸಿದ್ದರು.
ಉಡುಪಿ ಶ್ರೀಕೃಷ್ಣ ಮಠದ ಸಂಸ್ಕೃತ ವಿದ್ಯಾಲಯದಲ್ಲಿ ವಿದ್ಯಾರ್ಜನೆಯನ್ನು ಪೂರೈಸಿ, ಉಜಿರೆಯಲ್ಲಿ ಅಧ್ಯಾಪಕ ತರಬೇತಿಯನ್ನು ಪಡೆಯುವಾಗ ಯಕ್ಷಗಾನ ಗುರುಗಳಾದ ಶ್ರೀ ಗೋಪಾಲಕೃಷ್ಣ ಕುರುಪ್ ಮತ್ತು ಶಿವರಾಮ ಶಿಶಿಲ ಯಕ್ಷಗಾನ ವಿಶೇಷ ತರಬೇತಿಯನ್ನು ಶ್ರೀ ಕೃಷ್ಣ ಭಟ್ಟರು ಪಡೆದಿದ್ದರು. ಕಟೀಲಿನಲ್ಲಿ ನಡೆದ ಯಕ್ಷಗಾನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ ನಿಡ್ಲೆ ನರಸಿಂಹ ಭಟ್ ಮತ್ತು ಶ್ರೀ ಅಳಿಕೆ ರಾಮಯ್ಯ ರೈಗಳಿಂದಲೂ ಶ್ರೀ ಭಟ್ಟರು ಅಭ್ಯಾಸ ಮಾಡಿದ್ದರು. 1974ರಲ್ಲಿ ದಿ| ಗೋಪಾಲಕೃಷ್ಣ ಆಸ್ರಣ್ಣರ ಆಶೀರ್ವಾದ,    ಡಾ. ಗಣನಾಥ ಶೆಟ್ಟರ ಸಹಕಾರದೊಂದಿಗೆ ಆರಂಭಗೊಂಡ ಶ್ರೀ ಭ್ರಾಮರೀ ಯಕ್ಷಗಾನ ಮಂಡಳಿಯನ್ನು ಇಪ್ಪತ್ತೈದು ವರ್ಷಗಳ ಕಾಲ ಸಮರ್ಪಕವಾಗಿ ಮುನ್ನಡೆಸಿದ ಕೀರ್ತಿಯು ಪುಚ್ಚೆಕೆರೆ ದಿ| ಕೃಷ್ಣ ಭಟ್ಟರಿಗೆ ಸಲ್ಲುತ್ತದೆ. ವೇಷಧಾರಿಯಾಗಿ, ಅರ್ಥಧಾರಿಯಾಗಿ ಯಕ್ಷಗಾನದ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾದ ಕಾರಣ ಈ ಸಾಧನೆ ಅವರಿಗೆ ಸಾಧ್ಯವಾಯಿತು. ಕಟೀಲಿನಲ್ಲಿ ಅಧ್ಯಾಪಕನಾಗಿದ್ದ ಕಾಲದಲ್ಲಿ ಅವರು ಎಕ್ಕಾರು ರಾಯರಮನೆಯಲ್ಲಿ ವಾಸವಾಗಿದ್ದರು. ಮನೆಯ ಸದಸ್ಯನಾಗಿ ಪುಚ್ಚೆಕೆರೆ ಕೃಷ್ಣ ಭಟ್ಟರು- ‘‘ಅದೊಂದು ಜನ್ಮಾಂತರದ ಅನುಬಂಧ. ನನಗೆ ಅದು ನಿರಾಕರಿಸಲಾಗದ ಆಶ್ರಯ’’ ಎನ್ನುತ್ತಿದ್ದರಂತೆ.
                         ‘‘ದಿ| ಕಲ್ಲಾಡಿ ವಿಠಲ ಶೆಟ್ಟರು ಕಟೀಲು ಮೇಳಗಳ ಸಂಚಾಲಕರಾಗಿದ್ದಾಗ ‘‘ಕಟೀಲು ಮೇಳಗಳ ಕಲಾವಿದರು ಮತ್ತು ಕೆಲಸಗಾರರ ಶ್ರೇಯೋಭಿವೃದ್ಧಿ ಸಾಧಕ ಸಮಿತಿ’’ ಎಂಬ ಸಂಸ್ಥೆಯನ್ನು ಹುಟ್ಟುಹಾಕುವಲ್ಲಿ ಇವರ ಪರಿಶ್ರಮ ಹಿರಿದು. ಕಲೆ ಮತ್ತು ಕಲಾವಿದರಲ್ಲಿ ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರಿಗಿದ್ದ ಪ್ರೀತಿಗೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾಗಲಾರದು. ಮುಂಬೈಯಲ್ಲಿರುವ ಅವರ ವಿದ್ಯಾರ್ಥಿಗಳೆಲ್ಲಾ ಕೃಷ್ಣ ಭಟ್ಟರನ್ನು ಅಲ್ಲಿಗೆ ಕರೆಸಿಕೊಂಡು ಅದ್ಧೂರಿಯಿಂದ ಗುರು ಅಭಿವಂದನೆಯನ್ನು ನಡೆಸಿದ್ದರು. ವಿದ್ಯಾರ್ಥಿಗಳಿಗೆ ಅವರ ಮೇಲಿರುವ ಭಕ್ತಿಯನ್ನು ನಾನೂ ಈ ಕಾರ್ಯಕ್ರಮದಲ್ಲಿ ಕಣ್ತುಂಬಿಸಿಕೊಂಡಿದ್ದೇನೆ. ಅವರು ನಿವೃತ್ತರಾದಾಗ ಶಾಲಾ ಆಡಳಿತ ಮಂಡಳಿ, ಆಸ್ರಣ್ಣ ಬಂಧುಗಳು, ಊರ ನಾಗರಿಕರು, ವಿದ್ಯಾರ್ಥಿಗಳು ಸೇರಿ ಕಟೀಲಿನಲ್ಲಿ ಬಹಳ ವಿಜೃಂಭಣೆಯಿಂದ ಮಾಡಿದ ವಿದಾಯ ಸಮಾರಂಭ... ಪ್ರಾಯಶಃ ಯಾವುದೇ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೂ ಇಂತಹ ವೈಭವದ ವಿದಾಯ ಸಮಾರಂಭ ಆಗಿರಲಾರದೇನೋ? ಅದು ಅವರ ವೃತ್ತಿಗಾಗಿ ಮಾತ್ರ ಅಲ್ಲ. ವ್ಯಕ್ತಿತ್ವಕ್ಕೆ ಸಂದ ಪುರಸ್ಕಾರ’’ (ಪುಚ್ಚೆಕೆರೆ ಕೃಷ್ಣ ಭಟ್ಟ-ಜೀವನ-ಸಾಧನೆ ಕೃತಿಯಲ್ಲಿ, ‘ಮರೆಯಲಾಗದ ಮಾನವತೆ’ ಎಂಬ ಲೇಖನದಲ್ಲಿ- ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್).
                   ಕಟೀಲಿನಲ್ಲಿದ್ದಾಗ ತಮಗೆ ಸಹಕರಿಸಿದ ಜನತೆಯನ್ನೂ, ಆಸ್ರಣ್ಣ ಬಂಧುಗಳನ್ನೂ, ಮಿತ್ರರನ್ನೂ, ಸಹಕರಿಸಿದ ಸರ್ವರನ್ನೂ ಹೆಸರಿಸಿ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದರು ಶ್ರೀ ಕೃಷ್ಣ ಭಟ್ಟರು. ಪ್ರಶಸ್ತಿಗಾಗಿ ಪ್ರಯತ್ನಿಸದಿದ್ದರೂ ಹಲವು ಪ್ರಶಸ್ತಿಗಳು ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರನ್ನು ಅರಸಿ ಬಂದವು. ಸಾಧಕರಾದ ಇವರನ್ನು ಕಲಾ ಮತ್ತು ಶಿಕ್ಷಣ ಎರಡೂ ವಿಭಾಗಗಳಲ್ಲೂ ಸಮಾಜವು ಗುರುತಿಸಿ ಅಭಿನಂದಿಸಿತು. ಪತ್ನಿ ಲಲಿತಾ ಭಟ್ ಮತ್ತು ಇಬ್ಬರು ಪುತ್ರಿಯರನ್ನು ಒಳಗೊಂಡ ಸಂತೃಪ್ತ ಸಂಸಾರ ಜೀವನ ನಡೆಸಿದ ಶ್ರೀ ಪುಚ್ಚೆಕೆರೆ ಕೃಷ್ಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಾಧನೆ, ಸಂದೇಶಗಳು ಹಸಿರಾಗಿಯೇ ಇವೆ.

ಲೇಖನ :  ರವಿಶಂಕರ ವಳಕ್ಕುಂಜ 

(ಶ್ರೀ ಉಜಿರೆ ಅಶೋಕ ಭಟ್ ಸಂಪಾದಕತ್ವದ ‘ಪುಚ್ಚೆಕೆರೆ ಕೃಷ್ಣ ಭಟ್ಟ ಜೀವನ-ಸಾಧನೆ’ ಎಂಬ ಕೃತಿಯಲ್ಲಿ ವಿದ್ವಾಂಸರಿಂದ ಬರೆಯಲ್ಪಟ್ಟ ಲೇಖನಗಳ ಆಧಾರದಿಂದ)

Comments

  1. I lost my most favourite higher primary Maths and English teacher in 1966-67. He was very disciplined and strict to the students. He made me maths as my most liking subject. And as Sugreeva his arguments with Rama and Vali was ever remembered by me. May his immortal soul rest in peace.

    ReplyDelete
  2. And many students remember his 36" wooden ruler.

    Dejappa Shetty

    ReplyDelete

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು