ಸ್ವಾಭಿಮಾನೀ, ಶಿಸ್ತಿನ, ನಿಷ್ಠಾವಂತ ಕಲಾವಿದ - ದಿ| ಅಳಿಕೆ ಲಕ್ಷ್ಮಣ ಶೆಟ್ಟಿ


                    1950ನೇ ಇಸವಿ. ಅಂದರೆ 68 ವರ್ಷಗಳಷ್ಟು ಹಿಂದೆ ಈಗಿನಂತೆ ವಾಹನ ಸೌಕರ್ಯಗಳಿಲ್ಲದ ಕಾಲ. ಕೆಲವು ದಿನಪತ್ರಿಕೆಗಳನ್ನು ಬಿಟ್ಟರೆ ಬೇರೆ ಮಾಧ್ಯಮಗಳು ಇಲ್ಲ. ಅದನ್ನು ಓದಲು ಸಂಜೆ ವರೇಗೆ ಕಾಯುತ್ತಿದ್ದ ಜನರೂ ಇದ್ದರು. ಮನೆಗೆ ತೆರಳಲು ಕಲಾವಿದರಿಗೆ ಅವಕಾಶಗಳಿಲ್ಲ. ಮನೆಯವರ ಸಂಪರ್ಕದಿಂದ ದೂರ ಉಳಿದು ಬಿಡಾರದಲ್ಲೇ ಇದ್ದುಕೊಂಡು ಸಾಧನೆಯ ಮೂಲಕವೇ ಕಲಾವಿದರಾಗಿ ಕಾಣಿಸಿಕೊಂಡರು. ಅವರುಗಳೆಲ್ಲಾ ನಡೆದುಕೊಂಡೇ ಅನೇಕ ಮೈಲುಗಳನ್ನು ದಾಟಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಸಾಗಿದರು. ಪೆಟ್ಟಿಗೆಗಳನ್ನು ಹೊತ್ತುಕೊಂಡೇ ಹೋದರು. ಕೊಟ್ಟ ಸ್ಥಳದಲ್ಲೋ, ಮರದಡಿಯಲ್ಲೋ ಮಲಗಿ ಹಗಲುಗಳನ್ನು ಕಳೆದರು. ಕಷ್ಟವನ್ನನುಭವಿಸುತ್ತಾ ಕಲಿತ ಕಾರಣ ಶ್ರೇಷ್ಠ ಕಲಾವಿದರಾದರೊ? ಕಲೆಯನ್ನು ಶ್ರೀಮಂತಗೊಳಿಸಿದರೊ? ನಾವು ಯೋಚಿಸಲೇ ಬೇಕಾದ ವಿಚಾರವಿದು. ಈಗ ಕಾಲ ಹಾಗಿಲ್ಲ. ಬದಲಾಗಿದೆ. ಕಲಾವಿದರಿಗೆ ಎಲ್ಲಾ ಸೌಕರ್ಯ ಗಳೂ ಸಂಘಟಕರಿಂದ ಕೊಡಲ್ಪಡುತ್ತಿದೆ. ಉತ್ತಮ ಸಂಭಾವನೆಯೂ ಇದೆ. ಪ್ರಚಾರಕ್ಕೆ ಮಾಧ್ಯಮಗಳು! ಯಕ್ಷಗಾನದಿಂದಲೇ ಜೀವಿಸುವ ಕಲಾವಿದರಿದ್ದಾರೆ. ಭೂಮಿ, ಮನೆ ಖರೀದಿಸಿದವರಿದ್ದಾರೆ. ಸ್ವಂತ ವಾಹನದಲ್ಲೇ ಸಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮನೆಗೆ ಬರುತ್ತಾರೆ! ಅಂದಿನ ಕಲಾವಿದರ ಕಷ್ಟದ ದಿನಗಳ ಅನುಭವ ಇತ್ತೀಚೆಗಿನ ಕಲಾವಿದರಿಗಂತೂ ಇರಲಾರದು. ಆದರೂ ಅವರುಗಳ ಸಾಧನೆಯನ್ನೂ ಕೊಡುಗೆಗಳನ್ನೂ ನಾವು ಸ್ಮರಿಸಲೇಬೇಕು. ನಮಗೆ ಅವರು ಅನುಸರಣೀಯರು.

                   ನಿಯಮಿತವಾದ ಸೌಕರ್ಯಗಳಲ್ಲಿ ಕಷ್ಟದ ದಿನಗಳಲ್ಲೂ ಸ್ವಾಭಿಮಾನಿಯಾಗಿ, ಶಿಸ್ತಿನಿಂದ, ನಿಷ್ಠೆಯಿಂದ ಕಲಾಸೇವೆಯನ್ನು ಮಾಡಿದ ಕಲಾವಿದರನೇಕರು ಇದ್ದಾರೆ. ಕಲೆಗೆ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅಂತಹ ಕಲಾವಿದರೇ ಯುವ ಕಲಾವಿದರಿಗೆ ಆದರ್ಶರು. ಕಲಾವಿದನು ಹೀಗೆಯೇ ಇರಬೇಕೆಂಬ ಒಳ್ಳೆಯ ಸಂದೇಶವನ್ನು ನಮಗಿತ್ತಿದ್ದಾರೆ. ಕಲಾವಿದರು ಪ್ರಚಾರಕ್ಕಾಗಿ ಮಾಧ್ಯಮಗಳನ್ನು ಹಾರಯಿಸುವುದಲ್ಲ. ರಂಗಸ್ಥಳವೇ ಅವನಿಗೆ ಮಾಧ್ಯಮವಾಗಿರ ಬೇಕೆಂಬುದನ್ನು ನಮಗೆ ತಿಳಿಯಪಡಿಸಿದರು. ಅಂತಹ ಹಿರಿಯ ಕಲಾವಿದರಲ್ಲೊಬ್ಬರು ದಿ| ಅಳಿಕೆ ಲಕ್ಷ್ಮಣ ಶೆಟ್ಟರು.
                    ಅಳಿಕೆ ಲಕ್ಷ್ಮಣ ಶೆಟ್ಟರು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಪುಳಿಂಚಾರು ಎಂಬಲ್ಲಿ 1947ನೇ ಇಸವಿಯಲ್ಲಿ ದೂಮಣ್ಣ ಶೆಟ್ಟಿ ಮತ್ತು ಪೂವಕ್ಕ ದಂಪತಿಗಳಿಗೆ ಮಗನಾಗಿ ಜನಿಸಿದರು. ಅನೇಕ ವಿದ್ಯಾರ್ಥಿಗಳನ್ನು ಸಮಾಜದ ಭಾವೀ ಪ್ರಜೆಗಳನ್ನಾಗಿ ರೂಪಿಸಿದ ಖ್ಯಾತ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿವರೇಗೆ ಓದಿದರು. ಇವರದು ಬಡ ಕೃಷಿ ಕುಟುಂಬ. ಎಳವೆಯಲ್ಲೇ ಲಕ್ಷ್ಮಣ ಶೆಟ್ಟರಿಗೆ ಯಕ್ಷಗಾನಾಸಕ್ತಿ. ರಾಜ್ಯ ಪ್ರಶಸ್ತಿ ವಿಜೇತ, ಖ್ಯಾತ ಕಲಾವಿದ ಅಳಿಕೆ ರಾಮಯ್ಯ ರೈಗಳಿಂದ ನಾಟ್ಯಾಭ್ಯಾಸ, ಮಾರ್ಗದರ್ಶನ. ತನ್ನ 14ನೇ ವಯಸ್ಸಿನಲ್ಲಿ ಕುಂಡಾವು ಮೇಳದಲ್ಲಿ ಅಳಿಕೆ ರಾಮಯ್ಯ ರೈಗಳ ಹೇಳಿಕೆಯಂತೆ ಮೊದಲ ತಿರುಗಾಟ. ದಿ| ಕಲ್ಲಾಡಿ ಕೊರಗ ಶೆಟ್ರು, ದಿ| ಕಲ್ಲಾಡಿ ವಿಠಲ ಶೆಟ್ರು ಹಾಗೂ ಈಗ ಕಟೀಲು ಆರೂ ಮೇಳಗಳ ಸಂಚಾಲಕರಾಗಿರುವ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಯಜಮಾನಿಕೆಯ ಕರ್ನಾಟಕ ಯಕ್ಷಗಾನ ನಾಟಕ ಸಭಾ ಇರಾ ಮೇಳದಲ್ಲಿ ಸುಮಾರು 40 ವರ್ಷಗಳ ಕಲಾಸೇವೆಯನ್ನು ಮಾಡಿ ಪ್ರಸಿದ್ಧರಾದರು (ನಿರಂತರ ಒಂದೇ ಮೇಳದಲ್ಲಿ ಕಲಾಸೇವೆ). ಮೇಳನಿಷ್ಠೆ, ವೃತ್ತಿನಿಷ್ಠೆ, ಯಜಮಾನರ ಮೇಲೆ ಇರುವ ಗೌರವಕ್ಕೆ ಅಳಿಕೆ ಲಕ್ಷ್ಮಣ ಶೆಟ್ಟರು ಉತ್ತಮ ನಿದರ್ಶನ. ಈ ವಿಚಾರದಲ್ಲಿ ಎಲ್ಲಾ ಕಲಾವಿದರಿಗೆ ಇವರು ಆದರ್ಶರು. ಸ್ವಾಭಿಮಾನಿಯಾಗಿ, ಶಿಸ್ತಿನಿಂದ ಬದುಕಿದ ಇವರು ಯಾರಿಗೂ ಬಾಗಿದವರಲ್ಲ. ಹಾಗೆಂದು ಬೀಗಿದವರೂ ಅಲ್ಲ. ಸರಳವಾಗಿ, ವಿನಯವಂತನಾಗಿ, ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಸಿ, ಗುಣಾಢ್ಯರಾಗಿ ಜೀವನ ನಡೆಸಿದರು.
                              ಪುರಾಣ, ಐತಿಹಾಸಿಕ, ಕನ್ನಡ ಹಾಗೂ ತುಳು ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರಧಾರಿಯಾಗಿ ಹೆಸರು ಗಳಿಸಿದವರು ಅಳಿಕೆ ಲಕ್ಷ್ಮಣ ಶೆಟ್ರು. ಶ್ರೀರಾಮ, ಕೃಷ್ಣ, ಭೀಷ್ಮ, ದಶರಥ, ಧರ್ಮರಾಯ, ನಳ ಮೊದಲಾದ ಸಾತ್ವಿಕ ಪಾತ್ರಗಳಿಗೆ ಜೀವ ತುಂಬಿದರು. ದೇವರ ಅನುಗ್ರಹ, ತಂದೆ ತಾಯಿಯವರ ಕೊಡುಗೆಯಾದ ಸುಂದರ ರೂಪವನ್ನು ಸಮರ್ಪಕವಾಗಿ ಬಳಸಿ ಇಂತಹ ಪಾತ್ರಗಳಲ್ಲಿ ರಂಜಿಸಿದರು. ಸದಾ ಅಧ್ಯಯನಶೀಲರಾಗಿ ಹಿತಮಿತವಾದ ನಾಟ್ಯ ಮಾತುಗಳಿಂದ ಪಾತ್ರಕ್ಕೊಂದು ಆವರಣವನ್ನು ನಿರ್ಮಿಸಿ ಕೊಟ್ಟು ಅಭಿನಯಿಸಿದರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಬರೆದ ‘ಮಾನಿಷಾದ’ ಪ್ರಸಂಗದ ‘ಶ್ರೀರಾಮ’ ಪಾತ್ರ ಇವರಿಗೆ ಅಪಾರ ಹೆಸರನ್ನು ತಂದುಕೊಟ್ಟಿತು. ಭಾಗವತರುಗಳಾದ ದಿ| ದಾಮೋದರ ಮಂಡೆಚ್ಚರು ಮತ್ತು ದಿನೇಶ ಅಮ್ಮಣ್ಣಾಯರ ನಿರ್ದೇಶನದಲ್ಲಿ ಅಳಿಕೆ ಲಕ್ಷ್ಮಣ ಶೆಟ್ಟರು ರಂಗಸ್ಥಳದಲ್ಲಿ ಮಿಂಚಿದರು. ಖ್ಯಾತ ಕಲಾವಿದರಾದ ದಿ| ಬೋಳಾರ ನಾರಾಯಣ ಶೆಟ್ಟಿ, ದಿ| ಅಳಿಕೆ ರಾಮಯ್ಯ ರೈ, ದಿ| ಮಲ್ಪೆ ರಾಮದಾಸ ಸಾಮಗ, ದಿ| ಮಿಜಾರು ಅಣ್ಣಪ್ಪ ಹಾಸ್ಯಗಾರ; ಶ್ರೀ ಕೋಳ್ಯೂರು ರಾಮಚಂದ್ರ ರಾವ್, ಶ್ರೀ ಅರುವ ಕೊರಗಪ್ಪ ಶೆಟ್ಟಿ, ಬೆಳ್ಳಾರೆ ವಿಶ್ವನಾಥ ರೈ, ಸಂಜಯ ಕುಮಾರ್ ಮೊದಲಾದವರ ಜತೆ ಕಲಾಸೇವೆಯನ್ನು ಮಾಡಿರುತ್ತಾರೆ.
                             ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರ ಕಲಾಸೇವೆಯನ್ನು ಗುರುತಿಸಿ ಬಂಟರ ಸಂಘ ಮುಂಬೈ ನಾಟ್ಯಗುರು ಪಡ್ರೆ ಚಂದು ಸ್ಮಾರಕ ಸಮಿತಿ ಪೆರ್ಲ, ದಿ| ಕಲ್ಲಾಡಿ ಕೊರಗ ಶೆಟ್ಟಿ ಮತ್ತು ದಿ| ಕಲ್ಲಾಡಿ ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನ, ಇರಾ, ಕರ್ನಾಟಕ ಮೇಳದ ಅಭಿಮಾನೀ ಬಳಗ ಮುಂಬಯಿ, ಲಿಯೋ ಕ್ಲಬ್ ಪುತ್ತೂರು, ರಾಗಸುಧಾ ಸಂಸ್ಥೆ ಪುತ್ತೂರು, ಅಳಿಕೆ ಯುವಕ ಮಂಡಲ, ಗೆಳೆಯರ ಬಳಗ ಬೈರಿಕಟ್ಟೆ ಮೊದಲಾದ ಸಂಘ-ಸಂಸ್ಥೆಗಳು ಶ್ರೀಯುತರನ್ನು ಸನ್ಮಾನಿಸಿವೆ, ಅಲ್ಲದೆ ಅನೇಕ ಕಲಾಪೋಷಕರೂ ಗೌರವಿಸಿದರು. ಅನಾರೋಗ್ಯದ ಕಾರಣ ಯಕ್ಷಗಾನ ಕ್ಷೇತ್ರದಿಂದ ನಿವೃತ್ತಿ ಹೊಂದಿದ ಶ್ರೇಷ್ಠ ಕಲಾವಿದ ಅಳಿಕೆ ಲಕ್ಷ್ಮಣ ಶೆಟ್ಟರು 27-7-2008ರಂದು ನಮ್ಮನ್ನಗಲಿ ದೇವರ ಪಾದವನ್ನು ಸೇರಿಕೊಂಡರು. ಅಳಿಕೆ ಲಕ್ಷ್ಮಣ ಶೆಟ್ರ ಪತ್ನಿ ಶ್ರೀಮತಿ ಲಕ್ಷ್ಮಿ ಅವರು ಪ್ರಸ್ತುತ ಕಿರಿಯ ಮಗನೊಂದಿಗೆ ಅಳಿಕೆಯಲ್ಲಿ ವಾಸವಾಗಿದ್ದಾರೆ. ಹಿರಿಯ ಪುತ್ರ ಶ್ರೀಧರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದರು. ಪುತ್ರಿ ಜಯಂತಿ ವಿವಾಹಿತೆ. ಗೃಹಿಣಿ.
                         ಕಿರಿಯ ಪುತ್ರ ಶ್ರೀ ಹರೀಶ್ ಶೆಟ್ಟಿ ಅವರು ಕಳೆದ 25 ವರ್ಷಗಳಿಂದ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಅಳಿಕೆ ಲಕ್ಷ್ಮಣ ಶೆಟ್ರಂತಹ ಶ್ರೇಷ್ಠ ಕಲಾವಿದರನ್ನು ಕಲಾಭಿಮಾನಿಗಳು ಯಾವಾಗಲೂ ನೆನಪಿಸಬೇಕು. ಮರೆಯಲಾರರು. ಅವರ ಮನೆಯವರಿಗೆ ಸಕಲ ಭಾಗ್ಯಗಳನ್ನೂ ದೇವರು ಅನುಗ್ರಹಿಸಲಿ.


- ರವಿಶಂಕರ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು