‘ಕದ್ರಿ ವಿಷ್ಣು’ ಪ್ರಶಸ್ತಿ ವಿಜೇತ ಮಾಡಾವು ಕೊರಗಪ್ಪ ರೈ

                 ಶ್ರೀ ಮಾಡಾವು ಕೊರಗಪ್ಪ ರೈ ಪ್ರಸ್ತುತ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿರುವ ಯಕ್ಷಗಾನ ಕಲಾವಿದ. ಮೃದು ಮನಸ್ಸಿನ, ವಿನಯವಂತ, ಹೆಚ್ಚು ಮಾತನಾಡುವವರಲ್ಲ. ಕೆಲವು ಪ್ರಶ್ನೆಗಳಿಗೆ ನಗುವೇ ಇವರ ಉತ್ತರ. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಅತಿರೇಕಗಳಿಗೆ ಎಡೆಕೊಡದ ಕಾರಣವೇ ಈ ಉತ್ತಮ ಕಲಾವಿದ ಪ್ರಸಿದ್ಧಿಯಿಂದ ದೂರ ಉಳಿದರೇನೋ? ಎಂದೆನಿಸಿದರೆ ತಪ್ಪಾಗಲಾರದು. ಸ್ವಭಾವವನ್ನರಿತು, ಹಿತಮಿತವಾದ ಮಾತು, ಕುಣಿತಗಳಿಂದ ಪಾತ್ರಕ್ಕೆ ಜೀವ ತುಂಬುವ ಮಾಡಾವು ಕೊರಗಪ್ಪಣ್ಣನವರ ಬಗ್ಗೆ ಬರೆಯುವುದು ಕಲಾಭಿಮಾನಿಗಳೆಲ್ಲರಿಗೂ ಸಂತಸ ತರುವ ವಿಚಾರ.

                         ಶ್ರೀ ಮಾಡಾವು ಕೊರಗಪ್ಪ ರೈಗಳು 26-12-1955ರಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಲ ನಡುಮನೆಯಲ್ಲಿ ಮಹಾಬಲ ರೈ, ಶ್ರೀಮತಿ ಕಮಲ ಎಂ. ರೈ ದಂಪತಿಗಳಿಗೆ ಮಗನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾರ್ಜನೆಯನ್ನು ಕೆಯ್ಯೂರು ಶಾಲೆಯಲ್ಲಿ ಪೂರೈಸಿದರು (7ನೇ ತರಗತಿ). ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ಶಾಲಾದಿನಗಳಲ್ಲಿ ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರಂತೆ. ಕಲಾವಿದನಾಗಬೇಕೆಂಬ ಆಸೆಯು ಸಹಜವಾಗಿ ಎಳೆಮನಸ್ಸಿನಲ್ಲಿ ಚಿಗುರೊಡೆಯಿತು. ನಾಟ್ಯಾಭ್ಯಾಸಕ್ಕೆ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿಕೊಂಡರು (1971). ಶ್ರೀ ಪಡ್ರೆ ಚಂದು ಅವರಿಂದ ನಾಟ್ಯ ಕಲಿಯುವಾಗ ಪದ್ಯಾಣ ಗಣಪತಿ ಭಟ್, ಸಿದ್ಧಕಟ್ಟೆ ಚೆನ್ನಪ್ಪಣ್ಣ, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮುಂಡಾಜೆದ್ವಯರು ಮೊದಲಾದವರು ಇವರ ಸಹಪಾಠಿಗಳಾಗಿದ್ದರು (ಕೇಂದ್ರದ ಮೊದಲ ತಂಡ).
                      ಮಾಡಾವು ಕೊರಗಪ್ಪ ರೈಗಳು ತಿರುಗಾಟ ಆರಂಭಿಸಿದ್ದು ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. 5 ವರ್ಷಗಳ ಕಾಲ ಪೂರ್ವರಂಗದಲ್ಲಿ ಬಾಲಗೋಪಾಲರಾಗಿ, ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ಮಾಡುತ್ತಾ ಕಲಾವಿದನಾಗಿ ಬೆಳೆದರು. ಶ್ರೀ ದಾಮೋದರ ಮಂಡೆಚ್ಚರು, ಕಾಸರಗೋಡು ವೆಂಕಟರಮಣ, ಕಾಂಚನ ನಾರಾಯಣ ಭಟ್ (ಹಿಮ್ಮೇಳ), ಶ್ರೀ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಬೋಳಾರ ನಾರಾಯಣ ಶೆಟ್ಟಿ, ಮೂಡಬಿದಿರೆ ಮಾಧವ ಶೆಟ್ಟಿ, ಮಿಜಾರು ಅಣ್ಣಪ್ಪ ಹಾಸ್ಯಗಾರರು, ಕೋಳ್ಯೂರು, ಅರುವ ಕೊರಗಪ್ಪ ಶೆಟ್ಟಿ, ಪುಳಿಂಚ, ಅಳಿಕೆ ಲಕ್ಷ್ಮಣ ಶೆಟ್ಟಿ, ಮದ್ದಡ್ಕ ಗೋಪಾಲ ಶೆಟ್ಟಿ, ಬೆಳ್ಳಾರೆ ವಿಶ್ವನಾಥ ರೈ ಮೊದಲಾದ ಹಿರಿಯ, ಶ್ರೇಷ್ಠ ಕಲಾವಿದರೊಂದಿಗೆ, ಚಿಕ್ಕ ಕಲಾವಿದನಾಗಿ ಅಭಿನಯಿಸಿದ್ದು ನನ್ನ ಭಾಗ್ಯ ಎಂದು ಕೊರಗಪ್ಪ ರೈಗಳು ಹಿಂದಿನ ದಿನಗಳನ್ನು ನೆನಪಿಸುತ್ತಾರೆ. ನಂತರ ಬಪ್ಪನಾಡು ಮೇಳದಲ್ಲಿ 3 ವರ್ಷ, ಕದ್ರಿ ಮೇಳದಲ್ಲಿ 2 ವರ್ಷ, ಕಾಂತಾವರ ಮೇಳದಲ್ಲಿ 1 ವರ್ಷ ಕಲಾಸೇವೆ ಯನ್ನು ಮಾಡಿದ ಮಾಡಾವು ಕೊರಗಪ್ಪ ರೈಗಳು ಪ್ರಸ್ತುತ 25 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. (14 ವರ್ಷ ಶ್ರೀ ವಿಠಲ ಶೆಟ್ರ ಸಂಚಾಲಕತ್ವದಲ್ಲಿ ನಂತರ 11 ವರ್ಷ ಶ್ರೀ ದೇವೀಪ್ರಸಾದ ಶೆಟ್ಟರ ಸಂಚಾಲಕತ್ವದಲ್ಲಿ). ಇವರಿಗೆ ಇಷ್ಟವಾದ ಮತ್ತು ಹೆಸರು ತಂದುಕೊಟ್ಟ ಪಾತ್ರಗಳು- ಅಭಿಮನ್ಯು, ಬಭ್ರುವಾಹನ, ಭಾರ್ಗವ, ಲಕ್ಷ್ಮಣ, ಶ್ರೀಕೃಷ್ಣ, ಲೋಹಿತಾಶ್ವ, ಪ್ರಹ್ಲಾದ, ಚಂಡಮುಂಡರು, ಚಂಡಪ್ರಚಂಡರು, ಹುಂಡಪುಂಡರು, ಚತುರ್ಭಾಹು ಮೊದಲಾದವು. ಅನಿವಾರ್ಯ ಸಂದರ್ಭದಲ್ಲಿ ಇವರು ಹಾಸ್ಯಪಾತ್ರಗಳನ್ನು ನಿರ್ವಹಿಸಬಲ್ಲ ಕಲಾವಿದರು.
                         ಇವರಿಗೆ ಸಂದ ಪುರಸ್ಕಾರಗಳು : 1) 2002ರಲ್ಲಿ ಮಂಗಳೂರು ಬಂಟರ ಕಲೋತ್ಸವದಲ್ಲಿ 2) 2013ರಲ್ಲಿ ನವಶಕ್ತಿ ಸೇವಾ ಸಂಘ, ಮರವೂರು 3) 2014ರಲ್ಲಿ ಕಂಕನಾಡಿ ವಲಯ ಬಂಟರ ಸಂಘ ಬಜಾಲು, ಮಂಗಳೂರು 4) 2016ರಲ್ಲಿ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ರಜತ ಮಹೋತ್ಸವದ ಸನ್ಮಾನ 5) 2017ರಲ್ಲಿ ವಾಮಂಜೂರು ದೇವೀಪ್ರಸಾದ್ ಕಾಂಪೌಂಡ್ ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸನ್ಮಾನ        6) ಶ್ರೀ ದುರ್ಗಾ ಯುವಕ ಮಂಡಲ ಕೆಯ್ಯೂರು ಇವರಿಂದ 7) ಕೂಳೂರು ಶ್ರೀಮತಿ ಬಿ. ಕೆ. ರಾಜೀವಿ ವಿಶ್ವನಾಥ ಇವರ ಸೇವೆಯಾಟದ ಸಂದರ್ಭದಲ್ಲಿ ಸನ್ಮಾನ. ಕರ್ನಾಟಕ ಮೇಳದಲ್ಲಿ 5 ವರುಷಗಳ ತಿರುಗಾಟ ನಡೆಸಿದ ನಂತರ ಇವರು 5 ವರ್ಷಗಳ ಕಾಲ ಮುಂಬೈಯಲ್ಲಿ ಉದ್ಯೋಗಿಯಾಗಿದ್ದರು. ಕಲಾವಿದನಿಗೆ ನಿರಂತರ ಕಸುಬು ಬೇಕು. ಆಯುಧವಾದರೂ ಹರಿತವಾಗಿರಬೇಕಾದರೆ ದಿನಾ ಮಸೆಯಬೇಕಾಗುತ್ತದೆ. 5 ವರ್ಷಗಳ ಸಮಯ ರಂಗದಿಂದ ದೂರ ಉಳಿದ ಕಾರಣ ಕಲಾಬದುಕಿಗೆ ಹಿನ್ನಡೆಯಾಯಿತು. ಆದರೂ ಕಲ್ಲಾಡಿ ವಿಠಲ ಶೆಟ್ರು, ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಪ್ರೋತ್ಸಾಹ, ಕೋಳ್ಯೂರು, ಕುಬಣೂರು, ಸುಣ್ಣಂಬಳ ಮೊದಲಾದವರ ಸಹಕಾರ ಸಿಕ್ಕಿತು. ಹಿರಿಯ ಕಿರಿಯ ಕಲಾವಿದರೆಲ್ಲರ ಸಹಕಾರದಿಂದ ಇಲ್ಲಿಯವರೇಗೆ ತಿರುಗಾಟ ನಡೆಸಿದೆ. ಕಷ್ಟಕಾಲದಲ್ಲಿ ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್’ ಅವರು ಆರ್ಥಿಕ ಸಹಾಯ ನೀಡಿ ಆಸರೆಯಾದರು ಎಂದು ಮಾಡಾವು ಕೊರಗಪ್ಪ ರೈಗಳು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.
                        ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಸಣಂಗಲ ನಡುಮನೆಯಲ್ಲಿ ಪತ್ನಿ ಹೇಮಾವತಿ, ಪುತ್ರ ಭಾನುಪ್ರಕಾಶ್ ಮತ್ತು ಸೊಸೆ ಸುರೇಖ ಅವರೊಂದಿಗೆ ಸುಖೀಜೀವನ ಶ್ರೀ ಕೊರಗಪ್ಪ ರೈಗಳದು. ಕಲಾಭಿಮಾನಿಗಳೆಲ್ಲರ ಪರವಾಗಿ     ಶ್ರೀ ಮಾಡಾವು ಕೊರಗಪ್ಪ ರೈಗಳಿಗೆ ಶುಭಾಶಯಗಳು. ಇನ್ನಷ್ಟು ಕಲಾಸೇವೆಯನ್ನು ಮಾಡುವ ಭಾಗ್ಯವನ್ನು ದೇವರು ಒದಗಿಸಲಿ ಎಂಬ ಹಾರೈಕೆಗಳು.

ಲೇಖನ: ರವಿಶಂಕರ್ ವಳಕ್ಕುಂಜ 

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು