ಪರಂಪರೆಯ ಸಂಪ್ರದಾಯವನ್ನು ಮುರಿಯದೆ ಮೆರೆದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಭಾಗವತರು
ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರು ಬಡಗಿನ ಶ್ರೇಷ್ಠ ಭಾಗವತರುಗಳಲ್ಲೊಬ್ಬರು. ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದವರು. ಇವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಕಲಾಭಿಮಾನಿಗಳು ಗುರುತಿಸಿದ್ದಾರೆ. ಕಲಾವಿದರ ನಟನಾ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು ಎಂಬುದು ಎಲ್ಲರೂ ಒಪ್ಪಿಕೊಂಡ ವಿಚಾರ. ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು. ಸದಾ ಅಧ್ಯಯನಶೀಲರಾಗಿ ಅಂದಿನ ಶ್ರೇಷ್ಠ ಕಲಾವಿದರ ಒಡನಾಟದಿಂದ ಬೆಳೆಯುತ್ತಾ ಮುಂದೆ ಸಾಗಿದರು.
ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ (ಕೆರೆಮನೆ ಮೇಳ) ಪ್ರಧಾನ ಭಾಗವತರಾಗಿ ಸುಮಾರು ಐವತ್ತು ವರ್ಷಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು ಪ್ರದೇಶಗಳಲ್ಲಿ ನಡೆದ ಪ್ರದರ್ಶನಗಳ ಯಶಸ್ಸಿಗೆ ಕಾರಣರಾದವರು. ಹೊರರಾಜ್ಯಗಳ ಪ್ರೇಕ್ಷಕರಿಗೆ ಗಾನಸುಧೆಯನ್ನು ಉಣಿಸಿದರು. ವಿದೇಶಗಳಲ್ಲಿ ನಡೆದ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಭಾಗವತರಾಗಿ ನೆಬ್ಬೂರು ನಾರಾಯಣ ಹೆಗಡೆಯವರು ಪ್ರಸಿದ್ಧರಾದರು.
ಭಾಗವತಿಕೆಯನ್ನು ಕಲಿಯಲು ಗುರುವಾಗಿ ರಂಗನಟರನ್ನು ಆಯ್ಕೆ ಮಾಡಿದ್ದು ಮತ್ತು ರಂಗನಟನೊಬ್ಬನು ಶ್ರೇಷ್ಠ ಭಾಗವತನನ್ನು ತಯಾರು ಮಾಡಿದ್ದು ನಿಜಕ್ಕೂ ಅಚ್ಚರಿಯನ್ನು ತರುವ ವಿಚಾರ. ಯಕ್ಷಗಾನದ ಇತಿಹಾಸದಲ್ಲಿ ಇನ್ನೂ ಇದೊಂದು ವಿಸ್ಮಯದಿಂದೊಡಗೂಡಿದ ಸತ್ಯ. ಶ್ರೀ ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡಿದ ಹಳೆಯ ಪ್ರೇಕ್ಷಕರು ನೆಬ್ಬೂರರು ನಿಧಾನ ಲಯದಲ್ಲಿ ಹಾಡುವ ಪದ್ಯಗಳ ಸೊಗಸು ಅವರ್ಣನೀಯವಾದುದು ಎಂದು ಪ್ರಶಂಸಿಸುತ್ತಾರೆ. ಭಾವ ಪ್ರಕಟನೆ, ಅಭಿನಯ, ಕುಣಿತ ಮೊದಲಾದ ವಿಭಾಗಗಳೆಲ್ಲಾ ಪರಂಪರೆಯ ಚೌಕಟ್ಟಿನೊಳಗೆ ನೆಬ್ಬೂರರ ಹಾಡುಗಳಲ್ಲಿ ಅಳಿಯದೆ ಉಳಿದು ರಂಜಿಸಿತು ಎಂಬ ವಿಚಾರವನ್ನು ಹಿರಿಯ ಪ್ರೇಕ್ಷಕರು ಹೇಳುತ್ತಾರೆ. ಕಲಾಭಿಮಾನಿಗಳ ಈ ಅಭಿಪ್ರಾಯವನ್ನು ನೆಬ್ಬೂರು ಭಾಗವತರಲ್ಲಿ ಹೇಳಿದರೆ ಅವರ ಪ್ರತಿಕ್ರಿಯೆ ಹೀಗಿದೆ. “ನಾನು ವೇಗದ ಲಯದಲ್ಲೇ ಹಾಡಬಲ್ಲೆ ಮತ್ತು ಹಾಡಿದ್ದೇನೆ. ಆದರೆ ನಿಧಾನಲಯದಲ್ಲಿ ಯಕ್ಷಗಾನದ ನಿಜವಾದ ಸೌಂದರ್ಯವು ಸರಿಯಾಗಿ ಕಾಣಿಸಿಕೊಳ್ಳುತ್ತದೆ. ವೇಗದ ಹಾಡುಗಾರಿಕೆಯಲ್ಲಿ ಕತೆ ಓಡುತ್ತಿರುತ್ತದೆ ಆದರೆ ಸ್ಥಾಪನೆಯಾಗುವುದಿಲ್ಲ”. ಎಂತಹ ಶ್ರೇಷ್ಠ ಪ್ರತಿಕ್ರಿಯೆ! ನೆಬ್ಬೂರು ಅವರು ಅನುಭವಿಸಿ ಆಡಿದ ನುಡಿಗಳಿವು.
ನೆಬ್ಬೂರು ನಾರಾಯಣ ಹೆಗಡೆಯವರ ಭಾಗವತಿಕೆಯಲ್ಲಿ ನಡೆದ ಇಡಗುಂಜಿ ಮೇಳದ ಪ್ರದರ್ಶನಗಳನ್ನು ನಾನು ನೋಡಿದವನಲ್ಲ. ಆದರು ಇತ್ತೀಚೆಗೆ ಕೆಲವು ಅವಕಾಶಗಳು ಒದಗಿ ಬಂದಿತ್ತು. ನನ್ನ ತಂಗಿಯ ಮನೆ ಶಿರಸಿ ಸಮೀಪದ ಓಣಿಕೇರಿ. ಅಲ್ಲಿಗೆ ತೆರಳಿದಾಗ ನೆಬ್ಬೂರು ಅವರ ಹಾಡನ್ನು ಆಟ ಮತ್ತು ತಾಳಮದ್ದಳೆಗಳಲ್ಲಿ ಕೇಳಿ ಆನಂದಿಸುವ ಭಾಗ್ಯ ಬಂದಿತ್ತು. ಅಲ್ಲದೆ ಇತ್ತೀಚೆಗಿನ ಮಾಧ್ಯಮಗಳಾದ ವಾಟ್ಸಾಪ್ ಫೇಸ್ ಬುಕ್‌ಗಳಲ್ಲಿ ಅವರ ಹಾಡುಗಳನ್ನು ಕೇಳಿದ್ದೇನೆ. ಯಕ್ಷಗಾನಾಸಕ್ತ ಹಿರಿಯ ತಲೆಮಾರಿನ ಪ್ರೇಕ್ಷಕರು ನೆಬ್ಬೂರರ ಹಾಡುಗಳ ಬಗ್ಗೆ ವರ್ಣಿಸುವುದನ್ನು ಕೇಳಿಸಿಕೊಂಡವನು. ಅವರೇನು ಮತ್ತು ಅವರೆಷ್ಟು ಎಂಬುದನ್ನು ಸರಿಯಾಗಿ ಅರಿಯಲು ನಾನು ಶಕ್ಯನಲ್ಲ. ಆದರು ನನ್ನ ಮತಿಯ ಮಿತಿಯೊಳಗೆ ಅವರೊಬ್ಬ ಶ್ರೇಷ್ಠ ಭಾಗವತರು ಎಂಬುದನ್ನು ತಿಳಿಯುವುದಕ್ಕೆ ಅವಕಾಶವಾಯಿತು. ಅವರನ್ನು ನೋಡಬೇಕು, ಅವರ ಬಗೆಗೆ ಬರೆಯಬೇಕೆಂಬ ಬಯಕೆಯು ಚಿಗುರೊಡೆಯಿತು. ಬಂಧುಗಳಾದ ಶ್ರೀ ಸುಬ್ಬು ಭಾವ ಮತ್ತು ಶ್ರೀ ರಮೇಶ ಹಳೇಕಾನಗೋಡ ಇವರ ಜೊತೆ ನೆಬ್ಬೂರರ ಮನೆಗೆ ಹೋಗಿದ್ದೆ. (ಶಿರಸಿಯ ಸಮೀಪದ ಹಣಗಾರು) ಹಳ್ಳಿಯ ಹಳೆಯ ಶೈಲಿಯ ಮನೆಯು ನಮ್ಮನ್ನು ಸ್ವಾಗತಿಸಿತ್ತು. ನೆಬ್ಬೂರು ದಂಪತಿಗಳು ನಮ್ಮನ್ನು ನಗುತ್ತಾ ಮಾತನಾಡಿಸಿ ಸತ್ಕರಿಸಿದ್ದರು. ಅವರ ಪ್ರೀತಿಯ ಮಾತುಗಳಿಂದಲೇ ಹಸಿವು ದೂರವಾಗಿತ್ತು.
ಮನೆಯ ಗೋಡೆಗಳಲ್ಲಿ ಇವರದು ಒಂದು ಫೋಟೋ. ಬಡಗಿನ ಪ್ರಾಚಾರ್ಯ ಭಾಗವತ ನಾರ್ಣಪ್ಪ ಉಪ್ಪೂರರ ಒಂದು ಫೋಟೋ. ಇನ್ನೊಂದು ತನ್ನ ಗುರು ಕೆರೆಮನೆ ಶಿವರಾಮ ಹೆಗಡೆಯವರದ್ದು. ಇದ್ದುದು ಮೂರೆ ಚಿತ್ರಪಟಗಳಲ್ಲ, ಗೋಡೆ ತುಂಬಾ ಇದ್ದುದು ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆಯವರ ವೇಷದ ಚಿತ್ರಗಳು. ಖ್ಯಾತ ಹಿಮ್ಮೇಳ ಕಲಾವಿದನ ಮನೆಯಲ್ಲಿ, ಮನೆಯ ಗೋಡೆಯಲ್ಲಿ ರಂಗನಟರ ವೇಷದ ಚಿತ್ರಗಳು. ಯಾಕೆ ಹೀಗೆಂದು ವಿನೋದಕ್ಕಾಗಿ ಕೇಳಿದ್ದೆ. ನಗುತ್ತಾ ನನ್ನ ಬೆನ್ನು ಸವರಿದರು. ಅದುವೆ ಉತ್ತರವಾಗಿತ್ತು.
ತನಗೆ ಅನ್ನವಿಕ್ಕಿದ ಮನೆಯನ್ನು, ಗುರುಗಳನ್ನು, ಗುರುಸಮಾನರಾಗಿ ಮುನ್ನಡೆಸಿದ ಉಪ್ಪೂರರನ್ನು ಮರೆಯದೆ ಗೌರವಿಸುತ್ತಿದ್ದರು. ನೆಬ್ಬೂರರು ತನಗೆ ಪ್ರಸಿದ್ಧಿಯನ್ನು ತಂದಿದ್ದ ಕೆರೆಮನೆ ಮೇಳ ಮತ್ತು ಕಲಾವಿದರನ್ನು ಮರೆತಿಲ್ಲ. ಬದುಕಿನುದ್ದಕ್ಕೂ ಗುರುಭಕ್ತಿಯಿಂದ ಮೇಳಕ್ಕೆ ನಿಷ್ಟನಾಗಿ ಮುನ್ನಡೆದವರು. ಯಕ್ಷಗಾನವು ಒಂದು ಸಮಷ್ಟಿಕಲೆ. ಹಿಮ್ಮೇಳ ಮುಮ್ಮೇಳಗಳ ಸರಿಯಾದ ಸಾಂಗತ್ಯದಿಂದ ಪ್ರದರ್ಶನವು ರಂಜಿಸುತ್ತದೆ. ಶ್ರೇಷ್ಠ ಭಾಗವತರು ತನ್ನ ಹಾಡುಗಾರಿಕೆಯಲ್ಲಿ ಅಡಗಿದ ಉತ್ತಮ ವಿಚಾರಗಳು ಪ್ರತ್ಯಕ್ಷಗೊಳ್ಳುವುದು ನಟರಿಂದ, ತನ್ನ ಕಲಾ ಸಾಮರ್ಥ್ಯವು ಅಭಿವ್ಯಕ್ತವಾಗುವುದು ವೇಷಧಾರಿಗಳಿಂದ ಎಂದು ತಿಳಿದಿರುತ್ತಾರೆ. ಪಾತ್ರಧಾರಿಗಳು ಹಾಗೆ, ಭಾಗವತರು ಅವಕಾಶ ಮತ್ತು ಪ್ರೋತ್ಸಾಹಗಳನ್ನು ನೀಡಿದಾಗ ನಾನು ಕಾಣಿಸಿಕೊಳ್ಳುತ್ತೇನೆ ಎಂಬುದನ್ನು ತಿಳಿದಿರಬೇಕು. ತಾವು ರಂಗದಲ್ಲಿ ಮೆರೆಯುವ ವಿಚಾರದಲ್ಲಿ ಪರಸ್ಪರ ಪೂರಕರು ಎಂಬುದನ್ನು ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರುಗಳು ಅರಿತಿರಬೇಕೆಂಬ ಸಂದೇಶವನ್ನು ನೆಬ್ಬೂರರ ಮನೆಯ ಗೋಡೆಯೂ ಸಾರುತ್ತಿತ್ತು. ನೆಬ್ಬೂರು ಭಾಗವತರಿಗೆ ಈಗ ವಯಸ್ಸು 82. ಆರೋಗ್ಯವಂತರಾಗಿ ಲವಲವಿಕೆಯಿಂದ ಇದ್ದಾರೆ. ಅಭಿಮಾನಿಗಳಿಗೆ, ಸಂಘಟಕರಿಗಾಗಿ ಈಗಲೂ ಹಾಡುತ್ತಾರೆ. ಅವರು ಶತಾಯುಷಿಯಾಗಲಿ ಆರೋಗ್ಯವಂತರಾಗಿ ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ. ಕಲಿಕಾಸಕ್ತರು ಅವರ ಅನುಭವಗಳನ್ನು ಪಡೆದು ಕಲಾವಿದರಾಗಿ ಮಿಂಚಲಿ ಎಂಬ ಹಾರೈಕೆಗಳು.
ನೆಬ್ಬೂರು ನಾರಾಯಣ ಭಾಗವತರು 1936ನೆಯ ಇಸವಿ ಡಿಸೆಂಬರ್ 16ರಂದು ನೆಬ್ಬೂರು ದೇವರು ಹೆಗಡೆ ಮತ್ತು ಗಣಪಿ ಅಮ್ಮ ದಂಪತಿಗಳಿಗೆ ಮಗನಾಗಿ ಹಣಗಾರು ಎಂಬಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಊರಿದು. ಇವರ ಮೂಲ ಮನೆ ನೆಬ್ಬೂರು. ನೆಬ್ಬೂರು ನಾರಾಯಣ ಭಾಗವತರ ತಂದೆ ದೇವರು ಹೆಗಡೆಯವರು ಮನೆ ಅಳಿಯನಾಗಿ ಹಣಗಾರಿನಲ್ಲಿ ವಾಸವಾಗಿದ್ದರು. ಹಣಗಾರು ನೆಬ್ಬೂರಿನ ಸಮೀಪದ ಊರು. ನಾರಾಯಣ ಹೆಗಡೆಯವರು ದೇವರು ಹೆಗಡೆ, ಗಣಪಿ ಅಮ್ಮ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೆಯವರು (ಮೂರು ಹೆಣ್ಣು ಮತ್ತು ಒಂದು ಗಂಡು)
ತನ್ನ ಹತ್ತನೆಯ ವಯಸ್ಸಿನ ವರೆಗೂ ಇವರು ಶಿರಸಿ ಪೇಟೆಯನ್ನು ನೋಡಿರಲಿಲ್ಲವಂತೆ. ವಾಹನ ಸೌಕರ್ಯಗಳಿಲ್ಲದ ಕಾಲ. ಮಣ್ಣಿನ ಮಾರ್ಗ, ಎತ್ತಿನ ಗಾಡಿ ಬಳಕೆಯಲ್ಲಿದ್ದ ಸಮಯ. ಆಗ ನಗದಿನ ವ್ಯವಹಾರವು ನಡೆಯುತ್ತಿರಲಿಲ್ಲ. ಆಳುಕಾಳುಗಳಿಗೆ ಸಂಬಳವನ್ನು ವಸ್ತುರೂಪದಲ್ಲೇ ಕೊಡುತ್ತಿದ್ದರು. ಹಳ್ಳಿಗಳಲ್ಲಿ ಮನೆಯವರೆಲ್ಲ ಪರಸ್ಪರ ತೋಟಗದ್ದೆ ಕೆಲಸಗಳನ್ನು ನಿರ್ವಹಿಸುತ್ತಿದ್ದರಂತೆ. ದೇವರು ಹೆಗಡೆಯವರು ಶ್ರೀಮಂತಿಕೆಯಲ್ಲಿ ಜನಿಸಿ ಬಡತನವನ್ನು ಉಂಡವರು. ಆ ಕಾಲದ ಹವ್ಯಾಸಿ ಭಾಗವತರಾಗಿದ್ದರು. ಆಸುಪಾಸಿನಲ್ಲಿ ಆಟ ತಾಳಮದ್ದಳೆ ಇದ್ದರೆ ಇವರೇ ಭಾಗವತರು. ಕೊಳೆರೋಗ ಬಾರದಂತೆ ಆ ಕಾಲದಲ್ಲಿ ಅಡಿಕೆ ಗೊನೆಗೆ ಹಾಳೆಯ ಕೊಟ್ಟೆ ಕಟ್ಟುವ ಕ್ರಮವಿತ್ತು. ಔಷಧಿ ಸಿಂಪಡಿಸುವ ಕ್ರಮ ಇದ್ದಿರಲಿಲ್ಲ. ಹಾಳೆಗಳನ್ನು ಕೊಯ್ದು ಪೋಣಿಸಿ ತಟ್ಟು (ಗೂಡಿನ ಆಕಾರ) ಕಟ್ಟುವ ಕೆಲಸವನ್ನು ದೇವರು ಹೆಗಡೆಯವರು ಮಾಡುತ್ತಿದ್ದರಂತೆ. ಗಣಪಿ ಅಮ್ಮನವರು ಬೇರೆಯವರ ಮನೆ ಪಾತ್ರೆ ತೊಳೆಯುವ, ತೋಟದ ಕಳೆ ಕೀಳುವ ಕೆಲಸವನ್ನು ಮಾಡಿ ಸಂಸಾರವನ್ನು ಸಾಗಿಸುತ್ತಿದ್ದರು. ನೆಬ್ಬೂರು ಭಾಗವತರು ಆಡಳ್ಳಿ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ್ದರು. ಆಡಳ್ಳಿಯು ಹಣಗಾರು ಮತ್ತು ನೆಬ್ಬೂರು ಮಧ್ಯೆ ಇರುವ ಹಳ್ಳಿ. (ಆಡಳ್ಳಿ ಪ್ರದೇಶವು ದಟ್ಟಡವಿಯಿಂದ ಕೂಡಿತ್ತು. ಹುಲಿಗಳ ಆಶ್ರಯ ಸ್ಥಾನ. ಆಗ ಭಾರತದಲ್ಲಿ ಬ್ರಿಟೀಷರ ಆಡಳಿತ. ಕೋಣಗಳನ್ನು ಕಟ್ಟಿ ಹುಲಿಗಳನ್ನು ಬೇಟೆಯಾಡುತ್ತಿದ್ದರಂತೆ)
ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕುಮಟಾ, ಶಿರಸಿ ಕಡೆಗೆ ಹೋಗಬೇಕಾಗಿತ್ತು. ಅದಕ್ಕೆ ಅನುಕೂಲಗಳಿರಲಿಲ್ಲ. ಸಾರಿಗೆ ಸಂಪರ್ಕವೂ ಇರಲಿಲ್ಲ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೆ ನೆಬ್ಬೂರರಿಗೆ ಯಕ್ಷಗಾನ ಆಸಕ್ತಿ ಹುಟ್ಟಿತು. ಆಡಳ್ಳಿ ಶಾಲೆಯು ಆಗ ಸೋಗೆ ಮಾಡಿನ ಗುಡಿಸಲಿನಂತೆ ಇತ್ತಂತೆ. ಅಲ್ಲಿ ಶಿವಾನಂದ ಸ್ವಾಮಿಗಳು ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರಂತೆ. ಶಿವಾನಂದ ಹೆಗಡೆ ಎಂಬವರು ಸಮಾಜಸೇವಕರಾಗಿ ಶಿವಾನಂದ ಸ್ವಾಮಿ ಎನಿಸಿಕೊಂಡಿದ್ದರು. ಮನೆ ಹತ್ತಿರದಲ್ಲೇ ಗುಹೆಯನ್ನು ಮಾಡಿ ಅಲ್ಲಿ ಶಿವಾನಂದ ಸ್ವಾಮಿಗಳು ತಂಗುತ್ತಿದ್ದರು. ಅವರ ಮರಣದ ನಂತರ ಆಡಳ್ಳಿ ಶಾಲೆಯು ಜಿಲ್ಲಾ ಬೋರ್ಡ್ ಶಾಲೆಯಾಯ್ತು. ಅಲ್ಲಿಗೆ ಸುಬ್ರಾಯ ಬಸ್ತೀಕರ್ ಎಂಬವರು ಗೋಕರ್ಣದಿಂದ ಅಧ್ಯಾಪಕರಾಗಿ ಬಂದರು. ನೆಬ್ಬೂರರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಇವರೆ ಕಾರಣರು. ಮಕ್ಕಳ ತಂಡವನ್ನು ಕಟ್ಟಿ ಅವರಿಗೆ ನಾಟಕ ಆಟ ತಾಳಮದ್ದಳೆ ವಿಚಾರದಲ್ಲಿ ತರಬೇತಿ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟವರು ಬಸ್ತೀಕರ್ ಮಾಸ್ತರರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯ ಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿ ದರು. ನಾಟಕಗಳಲ್ಲೂ ಅಭಿನಯಿಸಿದ್ದರು. ಬಸ್ತೀಕರ್ ಮಾಸ್ತರರು ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು. ಎಲ್ಲರೂ ನಾಣೀ ಎಂದು ನೆಬ್ಬೂರರನ್ನು ಆಗ ಕರೆದರೆ ಈಗಲೂ ಕೆಲವರು ನಾಣಿ ಭಾಗವತರೆಂದು ಕರೆಯುತ್ತಾರೆ.
ಶಾಲೆ ಬಿಟ್ಟ ನಂತರವೂ ಬಸ್ತೀಕರರ ಮನೆಗೆ ಆಗಾಗ ಹೋಗಿಬರುತ್ತಿದ್ದರು. ನೆಬ್ಬೂರರ ಅರ್ಥಗಾರಿಕೆಯಲ್ಲಿ ಶ್ರುತಿ ಜ್ಞಾನವಿದ್ದುದನ್ನ ಅಧ್ಯಾಪಕರು ಗುರುತಿಸಿದ್ದರು. ನೀನು ಭಾಗವತಿಕೆ ಕಲಿ ಎಂಬ ನಿರ್ದೇಶನವನ್ನೂ ನೀಡಿದ್ದರು. ಹಾಗಾಗಿ ಬಸ್ತೀಕರ ಮಾಸ್ತರರು ಜೀವನದಲ್ಲಿ ನಾನು ಮರೆಯಲಾರದ ಮರೆಯಬಾರದ ವ್ಯಕ್ತಿಗಳಲ್ಲೊಬ್ಬರು ಎಂದು ನೆಬ್ಬೂರರು ಹೇಳುತ್ತಾರೆ. ಇಡಗುಂಜಿ ಮೇಳದ ಭಾಗವತರಾಗಿದ್ದ ಸಂದರ್ಭ, ಭಟ್ಕಳ ಆಟಕ್ಕೆ ಬಸ್ತೀಕರ ಮಾಸ್ತರರು ಬಂದು ನೆಬ್ಬೂರರನ್ನು, ಶಂಭು ಹೆಗಡೆಯವರನ್ನು ಮನೆಗೆ ಕರೆದುಕೊಂಡು ಹೋಗಿ ಸನ್ಮಾನಿಸಿದ್ದನ್ನು ನೆಬ್ಬೂರರು ಇಂದಿಗೂ ನೆನಪಿಸುತ್ತಾರೆ.
ಶಾಲೆ ಬಿಟ್ಟನಂತರ ನೆಬ್ಬೂರರು ಅಡಿಕೆ ಕೊನೆಗೆ ಕೊಟ್ಟೆ ಕಟ್ಟುವುದು, ಗೊನೆ ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಬಡತನದ ಕಾರಣದಿಂದ ಈ ಕಾಯಕವು ಅನಿವಾರ್ಯವಾಗಿತ್ತು. ಐವತ್ತು ಕೊಟ್ಟೆ ಕಟ್ಟಿದ್ದರೆ ಎರಡು ರೂಪಾಯಿ ಪಗಾರ ಸಿಗುತ್ತಿತ್ತು. ದಿನವೊಂದಕ್ಕೆ ಇನ್ನೂರು ಕೊಟ್ಟೆ ಕಟ್ಟಿ ಹತ್ತಿರದಲ್ಲಿ ಆಗುತ್ತಿದ್ದ ತಾಳಮದ್ದಳೆಗೆ ಹೋಗಿ ಪದ್ಯ ಹೇಳುತ್ತಿದ್ದರು. ನೆಬ್ಬೂರರ ಚಿಕ್ಕಪ್ಪನ ಮನೆ ಬಾಳೆಗದ್ದೆ ಎಂಬಲ್ಲಿ. ಅಲ್ಲೇ ಸಮೀಪ ಆ ಕಾಲದ ಒಳ್ಳೆಯ ಭಾಗವತರಾಗಿದ್ದ ಕೊಡಗಿಪಾಲ ಗಣಪತಿ ಹೆಗಡೆಯವರು ವಾಸವಾಗಿದ್ದರು. ಹೊಸ್ತೋಟ ಮಂಜುನಾಥ ಭಾಗವತರೂ ಇವರೂ ಒಡನಾಡಿಗಳಾಗಿದ್ದರು. ಕೊಡಗಿಪಾಲ ಗಣಪತಿ ಹೆಗಡೆಯವರು ನೆಬ್ಬೂರರಿಗೆ ಪದ್ಯ ಹೇಳಲು ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದರು. ಅವರಿಗೆ ಕೆರೆಮನೆ ಶಿವರಾಮ ಹೆಗಡೆಯವರು ಆತ್ಮೀಯರು. ಹತ್ತಿರದಲ್ಲಿ ಆಟವಿದ್ದರೆ ಕೆರೆಮನೆ ಶಿವರಾಮ ಹೆಗಡೆಯವರು ಮತ್ತು ಇತರ ಕಲಾವಿದರು ಕೊಡಗಿಪಾಲ ಗಣಪತಿ ಹೆಗಡೆಯವರ ಮನೆಗೆ ವಿಶ್ರಾಂತಿಗಾಗಿ ಬರುತ್ತಿದ್ದರು. ಗಣಪತಿ ಹೆಗಡೆ ಯವರ ಕಿರಿಯ ತಮ್ಮ ಕೊಡಗಿಪಾಲ ಸುಬ್ರಾಯ ಹೆಗಡೆಯವರು ಆ ಕಾಲದ ಅತ್ಯುತ್ತಮ ಕಲಾವಿದ. ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯ. ಅವರ ಮನೆಯಲ್ಲಿದ್ದೆ ಯಕ್ಷಗಾನ ಕಲಿತವರು. ಕೊಡಗಿಪಾಲ ಗಣಪತಿ ಹೆಗಡೆಯವರು ಮತ್ತು ಹೊಸ್ತೋಟ ಮಂಜುನಾಥ ಭಾಗವತರು ನೆಬ್ಬೂರರ ಸ್ವರ, ಭಾಗವತಿಕೆಯನ್ನು ಮೆಚ್ಚಿ ಅವಕಾಶ ನೀಡುತ್ತಿದ್ದರು. ನೆಬ್ಬೂರರ ಪ್ರತಿಭೆಯನ್ನು ಬಸ್ತೀಕರ ಮಾಸ್ತರರಂತೆ ಇವರಿಬ್ಬರು ಗುರುತಿಸಿದ್ದರು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ಕೆರೆಮನೆ ಮೇಳ) ಕೆರೆಮನೆ ಶಿವರಾಮ ಹೆಗಡೆಯವರಿಂದ 1934ರಲ್ಲಿ ಸ್ಥಾಪಿತವಾಗಿತ್ತು. ಶ್ರೀ ವೆಂಕಟ್ರಮಣ ಯಾಜಿಯವರು ಅದರ ಸ್ಥಾಪಕ ಭಾಗವತರಾಗಿದ್ದರು. ಅವರಿಗೆ ವಯಸ್ಸಾಗಿತ್ತು. ಕೆರೆಮನೆ ಶಿವರಾಮ ಹೆಗಡೆಯವರು ಭಾಗವತಿಕೆ ಕಲಿಕಾ ಆಸಕ್ತಿಯುಳ್ಳವರಿಗಾಗಿ ಅರಸುತ್ತಿದ್ದರು. ಈ ವಿಚಾರವನ್ನು ಕೊಡಗಿಪಾಲ ಗಣಪತಿ ಹೆಗಡೆ ಅವರಲ್ಲೂ ಹೇಳಿದ್ದರು. ನೆಬ್ಬೂರರು ತನ್ನ ಬಾಳಗೆದ್ದ ಚಿಕ್ಕಪ್ಪನ ಮನೆಗೆ ಕೊಟ್ಟೆ ಕಟ್ಟಲು ಹೋಗಿದ್ದಾಗ ಕೊಡಗಿಪಾಲ ಗಣಪತಿ ಹೆಗಡೆ ಯವರು ಕರೆದು ನೀನು ಕೆರೆಮನೆಗೆ ಹೋಗಿ ಕಲಿ. ಒಳ್ಳೆಯ ಭಾಗವತನಾಗುತ್ತಿ ಎಂದು ಹೇಳಿದ್ದರಂತೆ. ನೆಬ್ಬೂರರು ಒಪ್ಪಿಕೊಂಡರು. ‘ಕೆರೆಮನೆ ಶಿವರಾಮ ಹೆಗಡೆಯವರಿಂದ ಕಲಿಯುವುದು ಅಷ್ಟು ಸುಲಭವೆಂದು ಭಾವಿಸಬೇಡ. ಅವರು ಕಲಿಸಿದ ಹಾಗೆ ನೀನು ಕಲಿತ ಹಾಗೆ’ ಎಂದು ಹೇಳಿ ಕೆಲವರು ಹೆದರಿಸಿದ್ದರು. ಆದರೂ ಕೊಡಗಿಪಾಲ ಗಣಪತಿ ಹೆಗಡೆಯವರು ಧೈರ್ಯ ತುಂಬಿದ್ದರು. ಖರ್ಚಿಗೆ ಹಣವನ್ನು ನೀಡಿ ಆಶೀರ್ವದಿಸಿದರು. ನೆಬ್ಬೂರರನ್ನು ಕಳುಹಿಸಿ ಕೊಡುತ್ತಿದ್ದೇನೆಂದು ಪತ್ರದ ಮೂಲಕ ಮುಂಚಿತವಾಗಿಯೇ ಕೆರೆಮನೆ ಶಿವರಾಮ ಹೆಗಡೆ ಯವರಿಗೆ ತಿಳಿಸಿದ್ದರು. (ಆಗ ದೂರವಾಣಿಯ ವ್ಯವಸ್ಥೆ ಇರಲಿಲ್ಲ)
ಕಲಿತು ಭಾಗವತನಾಗುವೆನೆಂಬ ಆಸೆಯನ್ನು ಹೊತ್ತು ನೆಬ್ಬೂರರು ಗಣೇಶ ಚೌತಿಯ ಮರುದಿನದಂದು ಹುಟ್ಟೂರಿನಿಂದ ಕೆರೆಮನೆಯತ್ತ ಹೊರಟರು. ಅಲ್ಲಿಯವರೆಗೂ ಅವರು ಘಟ್ಟದಿಂದ ಕೆಳಗಿಳಿದವರಲ್ಲ. ಕರಾವಳಿ ತೀರವನ್ನು ನೋಡಿದವರಲ್ಲ. ಸರಕಾರಿ ಬಸ್ಸುಗಳಿರಲಿಲ್ಲ. ಸೀಮಿತ ಸಂಖ್ಯೆಯ ಖಾಸಗಿ ವಾಹನಗಳು ಮಾತ್ರ ಸಾಗುತ್ತಿದ್ದುದು. ದೂಳಿನ ಮಾರ್ಗ. ಹಣಗಾರಿನಿಂದ ಅಮ್ಮೀನಳ್ಳಿಗೆ ಬಂದು ವಾಹನವನ್ನೇರಿದರು. ಬೆಳಿಗ್ಗೆ ಎಂಟು ಗಂಟೆಗೆ ಹೊರಟವರು ಸಂಜೆ ಆರು ಗಂಟೆಗೆ ಕೆರೆಮನೆ ತಲುಪಿದ್ದರು. ಕರಾವಳಿಯ ಯಾವ ಹೊಳೆಗಳಿಗೂ (ಹಿನ್ನೀರು) ಸೇತುವೆ ಇರಲಿಲ್ಲ. ದೋಣಿಯನ್ನೇರಿಯೇ ದಾಟಬೇಕಾಗಿತ್ತು. ಅಂತೂ ಮನೆ ತಲುಪಿದ್ದರು. ಕೆರೆಮನೆ ಶಿವರಾಮ ಹೆಗಡೆಯವರು ಇದ್ದಾರೋ ಎಂದು ಕೇಳಿದ್ದು ಅವರಲ್ಲೇ. ನಾನೇ ಶಿವರಾಮ ಹೆಗಡೆ, ಮನೆಯೊಳಗೆ ಬಾ ಎಂದರಂತೆ. ನೆಬ್ಬೂರರು ಕೊಡಗಿಪಾಲ ಗಣಪತಿ ಹೆಗಡೆಯವರು ನೀಡಿದ ಚೀಟಿಯನ್ನು ಶಿವರಾಮ ಹೆಗಡೆಯವರ ಕೈಗಿತ್ತರು. ಅದು ಅಂದು ಹೆಚ್ಚು ಮಾತನಾಡಿರಲಿಲ್ಲ. ಊಟ ಮಾಡಿ ಎಲ್ಲರೂ ನಿದ್ರಾಂಗನೆಯ ವಶವಾಗಿದ್ದರು. ಮರುದಿನ ಬೆಳಿಗ್ಗೆ ಕೆರೆಮನೆಯವರು ನೆಬ್ಬೂರರನ್ನು ಮಂಕಿ ತನಕ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿದ್ದರು. ದಾರಿ ಮಧ್ಯದಲ್ಲಿ ಯಾವ ಉದ್ದೇಶದಿಂದ ಬಂದೆ? ಭಾಗವತಿಕೆಯನ್ನು ಸರಿಯಾಗಿ ಕಲಿತು ಹೆಸರು ಗಳಿಸುತ್ತಿಯೋ ಅಲ್ಲ ನಾಲ್ಕು ಪದ್ಯ ಹೇಳಲು ಕಲಿತು ಭಾಗವತ ಆದೆ ಎಂದು ಹೇಳುವ ಆಸೆಯೋ? ಎಂದು ಪ್ರಶ್ನಿಸಿದ್ದರಂತೆ. ಮಾರನೆಯ ದಿನ ಸಂಜೆ ನೆಬ್ಬೂರರಿಗೆ ಪ್ರಥಮ ಪರೀಕ್ಷೆ. ಮದ್ದಳೆಗಾರರನ್ನು ಕರೆಸಿ ಪದ್ಯ ಹೇಳಿಸಿದರು. ಅಂದು ಗೇರುಸೊಪ್ಪ ಹೈಗುಂದದಲ್ಲಿ ಆಯುರ್ವೇದ ವೈದ್ಯರಾಗಿದ್ದ ಡಾ. ಪದ್ಮನಾಭಯ್ಯನವರು ಬಂದಿದ್ದರು. ಇವರು ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಆತ್ಮೀಯರು. ನೆಬ್ಬೂರರು ಪದ್ಯ ಹೇಳಿದರು. ಸ್ವರ ಇಬ್ಬರಿಗೂ ಇಷ್ಟವಾಯಿತು. ಇವನಿಗೆ ಕಲಿಸಿ ಎಂದು ಡಾಕ್ಟರ್ ಪದ್ಮನಾಭಯ್ಯನವರು ಶಿವರಾಮ ಹೆಗಡೆಯವರಿಗೆ ಹೇಳಿದ್ದರು. ಇಲ್ಲವಾದರೆ ಕರೆದುಕೊಂಡುಹೋಗಿ ಮರವಂತೆ ನರಸಿಂಹ ದಾಸ ಭಾಗವತರಿಂದ ಕಲಿಸುತ್ತೇನೆ ಎಂದು ಹೇಳಿದರು. ನೆಬ್ಬೂರರನ್ನು ಬಿಟ್ಟುಕೊಡಲು ಕೆರೆಮನೆ ಶಿವರಾಮ ಹೆಗಡೆಯವರು ಸಿದ್ಧರಿರಲಿಲ್ಲ. ತನ್ನ ಮನೆಯಲ್ಲೇ ಉಳಿಸಿಕೊಂಡರು. ಎಲ್ಲಿ ಕಲಿತರು ಅಡ್ಡಿಯಿಲ್ಲ ಚೆನ್ನಾಗಿ ಕಲಿ ಎಂದು ಹೇಳಿ ಡಾ. ಪದ್ಮನಾಭಯ್ಯನವರು ಶುಭ ಹಾರೈಸಿದ್ದರು. ನೆಬ್ಬೂರರು ಕೆರೆಮನೆಯಲ್ಲಿದ್ದುಕೊಂಡೇ ಶಿವರಾಮ ಹೆಗಡೆಯವರ ಗರಡಿಯಲ್ಲಿ ಪಳಗಲು ಆರಂಭಿಸಿದರು. ಆಗ ನೆಬ್ಬೂರರಿಗೆ ವಯಸ್ಸು 18. ಶಿವರಾಮ ಹೆಗಡೆಯವರು ನೆಬ್ಬೂರರನ್ನು ಮಗನೆಂದೇ ಸ್ವೀಕರಿಸಿದ್ದರು. ಮನೆಯ ಸದಸ್ಯನಂತೆಯೇ ಇದ್ದುಕೊಂಡು ನೆಬ್ಬೂರರು ಅಲ್ಲಿ ಕಲಿತು ಸಾಧಕರಾದರು. ನೆಬ್ಬೂರರು ಶಿವರಾಮ ಹೆಗಡೆ ದಂಪತಿಗಳನ್ನು ಅಪ್ಪಯ್ಯ, ಅಮ್ಮ ಎಂದೆ ಕರೆಯುತ್ತಿದ್ದರು. ಕೆರೆಮನೆ ಮಹಾಬಲ ಹೆಗಡೆಯವರು ಕೂಡಾ ನೆಬ್ಬೂರರ ಜತೆ ಪದ್ಯ ಹೇಳುತ್ತಾ ಕುಣಿಯುತ್ತಿದ್ದರು. ಅವರಿಂದಲೂ ನಾನು ಬಹಳಷ್ಟನ್ನು ಕಲಿತಿದ್ದೇನೆ ಎಂದು ಹೇಳುವ ಮೂಲಕ ನೆಬ್ಬೂರರು ಮಹಾಬಲ ಹೆಗಡೆಯವರನ್ನು ಗೌರವಿಸುತ್ತಾರೆ. ಕೆರೆಮನೆ ಶಂಭು ಹೆಗ್ಗಡೆಯವರು ಆತ್ಮೀಯರಾದರು. ಜತೆಯಾಗಿಯೇ ಕಲಿತು ಇಬ್ಬರು ಪ್ರಸಿದ್ಧರಾದರು. ಅಣ್ಣತಮ್ಮಂದಿರಂತೆ ಮನೆಯಲ್ಲೂ ಕಲಾ ಬದುಕಿನುದ್ದಕ್ಕೂ ಬಾಳಿಬೆಳಗಿದರು.
‘‘ಯಕ್ಷಗಾನ ಪಾತ್ರಧಾರಿಯಾಗಿ ನನ್ನ ಸಾಮರ್ಥ್ಯ ವಿಕಸನಗೊಳ್ಳುವಲ್ಲಿ ನೆಬ್ಬೂರರ ಪಾತ್ರ ಮಹತ್ವದ್ದು. ಒಬ್ಬ ರಂಗನಟ ಮತ್ತು ಒಬ್ಬ ರಂಗ ಭಾಗವತ ಪರಸ್ಪರ ಮನಸ್ಸಿನಿಂದ ಅರ್ಥಮಾಡಿ ಕೊಂಡಾಗ ಅವರಿಬ್ಬರ ಸಂಯೋಜನೆಯಿಂದ ಹುಟ್ಟುವ ಕಲಾನುಭವ ಸೊಗಸಾಗಿರುತ್ತದೆ ಎನ್ನುವುದಕ್ಕೆ ನಮ್ಮಿಬ್ಬರ ಜೀವನವೇ ಸಾಕ್ಷಿ. ಅಪ್ಪಯ್ಯ ನೆಬ್ಬೂರರನ್ನು ಆಪ್ತತೆಯಿಂದ ಕರೆದು ಮಾತನಾಡಿಸುತ್ತಿದ್ದರು. ಎಲ್ಲ ವಿಚಾರಗಳನ್ನು ಹಂಚಿ ಕೊಳ್ಳುತ್ತಿದ್ದರು. ತಂದೆಯವರು ಅವರಿಗೆ ಪದ ಹೇಳಿಕೊಡುವ ರೀತಿ, ಅವರನ್ನು ಕಂಡ ರೀತಿ ಇದಕ್ಕೆ ಬೇರೆಯವರಾದರೆ ಅಸೂಯೆ ಪಡುತ್ತಿದ್ದರೋ ಏನೋ? ನನಗೆ ಅವರ ಮೇಲೆ ಅಸೂಯೆ ಯಾಕೆ ಬಂದಿಲ್ಲ? ನಾವು ಸಹೋದರರಾಗಿ ಸ್ನೇಹಿತರಾಗಿ ಬದುಕಿದವರು. ನಮ್ಮ ಕುಟುಂಬಕ್ಕೆ ನೆಬ್ಬೂರರು ಚೆನ್ನಾಗಿ ಹೊಂದಿ ಕೊಂಡಿದ್ದರು’’. ಕೆರೆಮನೆ ಶಂಭು ಹೆಗಡೆ ಅವರ ಮನದಾಳದ ಮಾತುಗಳಿವು. ಕೆರೆಮನೆಯಲ್ಲಿದ್ದುಕೊಂಡೇ ಶಿವರಾಮ ಹೆಗಡೆಯವರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದ ನೆಬ್ಬೂರರು ಮೊದಲು ತಿರುಗಾಟ ಮಾಡಿದ್ದು 1958ರಲ್ಲಿ. ಕಲಾವಿದನಾಗಿ ಅಲ್ಲ, ಕೇವಲ ಸಹಾಯಕನಾಗಿ. ಅದರಿಂದ ಅನುಕೂಲವೇ ಆಗಿದೆ. ಮೇಳದ ತಿರುಗಾಟದಲ್ಲಿ ಹೇಗಿರಬೇಕೆಂಬ ವಿಚಾರವೂ ತಿಳಿಯಿತು. ಆಟ ನೋಡುತ್ತಾ ಬೆಳೆದ ಪರಿಣಾಮವನ್ನು ಮುಂದಿನ ತಿರುಗಾಟಗಳಲ್ಲಿ ಅನುಭವಿಸಿದೆ ಎಂಬುದು ನೆಬ್ಬೂರರ ಅಭಿಪ್ರಾಯ. 1959 ಮತ್ತು 1960ರಲ್ಲಿ ಕೆರೆಮನೆ ಮೇಳದಲ್ಲಿ ಸಂಗೀತಗಾರನಾಗಿ ತಿರುಗಾಟ. ಆಗ ಮಾರ್ವಿ ನಾರಣಪ್ಪ ಉಪ್ಪೂರರು ಪ್ರಧಾನ ಭಾಗವತರಾಗಿದ್ದರು. ನೆಬ್ಬೂರರ ಸ್ವರ, ವಿನಯತೆಗೆ ಉಪ್ಪೂರರು ಮಾರುಹೋಗಿದ್ದರು. ವಾತ್ಸಲ್ಯವನ್ನು ತೋರಿ ಪ್ರೋತ್ಸಾಹಿಸಿದರು. ಎಚ್ಚರಿಸುತ್ತಲೂ ಇದ್ದರು. ತನ್ನ ಹಾಡುಗಾರಿಕೆ ಮುಗಿದ ಮೇಲೆ ಉಪ್ಪೂರರ ಭಾಗವತಿಕೆಗೆ ಹಾರ್ಮೋನಿಯಂ ಬಾರಿಸುತ್ತಿದ್ದರು. ಇದರಿಂದ ರಂಗಾನುಭವ, ಪ್ರಸಂಗದ ನಡೆಗಳನ್ನು ತಿಳಿದುಕೊಳ್ಳುವ ಅವಕಾಶವಾಗಿತ್ತು. ಈಗಿನ ಅಭ್ಯಾಸ ಕ್ರಮಕ್ಕಿಂತ ಮೊದಲಿನ ಅಭ್ಯಾಸ ಕ್ರಮ ಒಳ್ಳೆಯದು. ಮೊದಲೆಲ್ಲ ಪ್ರದರ್ಶನ ಮತ್ತು ಅಭ್ಯಾಸ ಒಟ್ಟೊಟ್ಟಿಗೆ ಆಗುತ್ತಿತ್ತು. ಈಗ ಅಭ್ಯಾಸ ಮೊದಲು ಮತ್ತೆ ರಂಗವೇರಿ ಹಾಡುತ್ತಾರೆ. ಇದರಿಂದ ಪ್ರದರ್ಶನವು ವಿಫಲವಾಗುವ ಸಾಧ್ಯತೆ ಹೆಚ್ಚು ಎಂದು ನೆಬ್ಬೂರರ ಅನುಭವದ ಮಾತುಗಳು. ಉಪ್ಪೂರರಲ್ಲಿ ಬಹಳಷ್ಟು ಕಲಿತೆ, ಎರಡು ವರ್ಷ ಮೇಳದಲ್ಲಿ ಅವರೊಂದಿಗೆ ಒಡನಾಡುವ ಭಾಗ್ಯ ಸಿದ್ಧಿಸಿತ್ತು. ಅವರ ಒಡನಾಟ ನನ್ನ ಕಲಾಬದುಕಿನ ಉತ್ಕರ್ಷಕ್ಕೆ ಕಾರಣವಾಯಿತು. ತನಗಿಂತ ಕಿರಿಯರು ಚೆನ್ನಾಗಿ ಹಾಡಿದಾಗ ಮೆಚ್ಚುವ ವ್ಯಕ್ತಿತ್ವ ಅವರದು. ಸತ್ತ ರಂಗಸ್ಥಳವನ್ನು ಬಡಿದೆಬ್ಬಿಸುವ ಕಲೆ ಉಪ್ಪೂರರಿಗೆ ಕರಗತವಾಗಿತ್ತು. ಯಕ್ಷಗಾನದ ಹಿಮ್ಮೇಳಕ್ಕೆ ಗೌರವವನ್ನು ತಂದುಕೊಟ್ಟ ಮಹಾನ್ ಚೇತನ ಉಪ್ಪೂರರು. ಮೇಳ ನಡೆಸುವ ಚಾಕಚಕ್ಯತೆ, ಕಲಾವಿದರ ಮೇಲಿನ, ಪ್ರಸಂಗದ ಮೇಲಿನ ಹಿಡಿತ, ಶುದ್ಧ ಹಸ್ತ, ವರ್ಚಸ್ಸು ಇದ್ದ ಅಪೂರ್ವ ಭಾಗವತರವರು. ಅವರು ನನ್ನ ಬಗ್ಗೆ ಕಾಳಜಿಯನ್ನು ವಹಿಸಿ ಆಶೀರ್ವದಿಸಿದ್ದಾರೆ. ಉಪ್ಪೂರರ ಮಕ್ಕಳೂ ನನ್ನನ್ನು ಪ್ರೀತಿಸಿ ಗೌರವಿಸುತ್ತಿದ್ದಾರೆ. ನೆಬ್ಬೂರರು ಮನತುಂಬಿ ಹೀಗೆ ಉಪ್ಪೂರರ ಕುಟಂಬವನ್ನು ಗೌರವಿಸುತ್ತಾರೆ. 1961ರಲ್ಲಿ ಉಪ್ಪೂರರು ಅಮೃತೇಶ್ವರಿ ಮೇಳಕ್ಕೆ ಹೋದಾಗ ನೆಬ್ಬೂರರು ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಆಯ್ಕೆ ಯಾದರು. 1969ರಿಂದ ಮೂರು ವರ್ಷಗಳ ಕಾಲ ಸದ್ರಿ ಮೇಳವು ತಿರುಗಾಟ ನಡೆಸಿರಲಿಲ್ಲ. 1969ರಲ್ಲಿ ನೆಬ್ಬೂರರು ಅಮೃತೇಶ್ವರಿ ಮೇಳದಲ್ಲೂ ಮುಂದಿನ ಎರಡು ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ನಡೆಸಿದ್ದರು. ನಾನು ಕೆರೆಮನೆ ತಂಡದಲ್ಲಿದ್ದೆ. ಅಮೃತೇಶ್ವರಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಕಲಾಸೇವೆ ಮಾಡಿದೆ ಎಂದು ನೆಬ್ಬೂರರು ಹೇಳುತ್ತಾರೆ. ಕೆರೆಮನೆ ಮೇಳ ಮತ್ತು ಕೆರೆಮನೆ ಕುಟುಂಬದ ಜತೆ ಅಂತಹ ಬಾಂಧವ್ಯವನ್ನು ನೆಬ್ಬೂರರು ಹೊಂದಿದ್ದರು. 1972ರಲ್ಲಿ ಕೆರೆಮನೆ ಮೇಳವನ್ನು ಶಂಭು ಹೆಗ್ಗಡೆ ಯವರು ಪುನರ್ ಸಂಘಟಿಸಿದ್ದರು. ಅಲ್ಲಿಂದ ತೊಡಗಿ 2009ರ ವರೆಗೆ ನೆಬ್ಬೂರರ ಭಾಗವತಿಕೆಯಲ್ಲಿ ಕೆರೆಮನೆ ಮೇಳದ ಪ್ರದರ್ಶನಗಳು ಎಲ್ಲೆಡೆ ರಂಜಿಸಿದವು. ಮೂಲ್ಕಿ, ಕೊಲ್ಲೂರು ಅಲ್ಲದೆ ಪುರ್ಲೆ ರಾಮಚಂದ್ರರಾಯರ ಶಿರಸಿ ಮೇಳ ದಲ್ಲೂ ಅಲ್ಪಕಾಲ ನೆಬ್ಬೂರರು ವ್ಯವಸಾಯ ಮಾಡಿದ್ದರು. ತನ್ನ ಕಲಾ ಬದುಕಿನಲ್ಲಿ ಕೆರೆಮನೆ ಶಿವರಾಮ ಹೆಗಡೆ, ನಾರಣಪ್ಪ ಉಪ್ಪೂರ, ಕೆರೆಮನೆ ಮಹಾಬಲ ಹೆಗಡೆ, ಕಡತೋಕಾ ಕೃಷ್ಣ ಭಾಗವತ ಮೊದಲಾದ ಹಿರಿಯರ ಸಹವಾಸ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ತಿಮ್ಮಣ್ಣ ಯಾಜಿ, ಮೂರೂರು ದೇವರು ಹೆಗಡೆ, ವೀರಭದ್ರನಾಯಕ, ಈಶ್ವರ ಹೆಗಡೆ ಮೂರೂರು, ಆಕ್ಟರ್ ಜೋಷಿ, (ಗೋಕರ್ಣ ವಿಘ್ನೇಶ್ವರ ಜೋಶಿ), ಗಜಾನನ ಹೆಗಡೆ, ವಂಡ್ಸೆ ನಾರಾಯಣ, ಹೆರಂಜಾಲು ವೆಂಕಟರಮಣ ಗಾಣಿಗ, ಮೂಡ್ಕಣಿ ನಾರಾಯಣ ಹೆಗಡೆ, ಕೊಂಡದಕುಳಿ ರಾಮ ಹೆಗಡೆ, ಶಿರಿಯಾರ ಮಂಜು ನಾಯ್ಕ, ಕುಂಜಾಲು ರಾಮಕೃಷ್ಣ, ಸಾಲ್ಕೋಡು ಗಣಪತಿ ಹೆಗಡೆ, ಕರ್ಕಿ ವಿವಿ ಹಾಸ್ಯಗಾರ, ಹಳದೀಪುರದ ಭಂಡಾರಿ, ಶ್ರೀಧರ ಹಂದೆ, ಕೋಟ ವೈಕುಂಠ, ಅಣ್ಣು ನಾಯಕ, ಬಣ್ಣದ ನಾಗಪ್ಪ ಗೌಡ, ಗೋಡೆ ನಾರಾಯಣ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯಾಯ, ಕೆರೆಮನೆ ಶಿವಾನಂದ ಹೆಗಡೆ, ತೀರ್ಥಹಳ್ಳಿ ಪುಂಡರೀಕಾಕ್ಷ ಉಪಾಧ್ಯಾಯ, ಮೊದಲಾದವರು ಮುಮ್ಮೇಳಕ್ಕೂ ಹಿರಿಯರಾದ ಮರವಂತೆ ನರಸಿಂಹದಾಸ ಭಾಗವತ, ಕಿನ್ನೀರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ ಮೊದಲಾದವರು ಹಿಮ್ಮೇಳದಲ್ಲಿ ಅಲ್ಲದೆ ಅನೇಕ ಕಿರಿಯ ಕಲಾವಿದರು ನೆಬ್ಬೂರರಿಗೆ ಸಹ ಕಲಾವಿದರಾಗಿ ಒದಗಿಬಂದಿದ್ದರು. ನೆಬ್ಬೂರರ ಭಾಗವತಿಕೆಯಲ್ಲಿ ಅನೇಕ ಪುರಾಣ ಪ್ರಸಂಗಗಳ ಪ್ರದರ್ಶನಗಳು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿ ಉಳಿಯಿತು. ಶ್ರೀಕೃಷ್ಣ ಸಂಧಾನ, ಕೀಚಕವಧೆ, ಮಾಗಧವಧೆ, ಪಟ್ಟಾಭಿಷೇಕ, ಕರ್ಣಪರ್ವ, ಗದಾಯುದ್ಧ, ರತ್ನಾವತಿ ಕಲ್ಯಾಣ, ಚಂದ್ರಹಾಸ, ಸುಧನ್ವಾರ್ಜುನ, ಶ್ರೀರಾಮನಿರ್ಯಾಣ ಮೊದಲಾದ ಪ್ರಸಂಗಗಳ ಹಾಡುಗಳು ನೆಬ್ಬೂರರಿಗೆ ಜನಪ್ರಿಯತೆಯನ್ನು ನೀಡಿತು. ದೂರದರ್ಶನ ಕಾರ್ಯಕ್ರಮಗಳಲ್ಲೂ ಹಲವು ಬಾರಿ ಕಾಣಿಸಿಕೊಂಡ ಮೊದಲಿಗರಿವರು.
ಕೆರೆಮನೆ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದರು. 1984ರಲ್ಲಿ ಮೊದಲಿಗೆ ಬಹ್ರೈನ್‌ಗೆ, ಅಮೇರಿಕಾ ದೇಶಕ್ಕೆ ಎರಡು ಬಾರಿ ಹಾಗೂ ಅಲ್ಲಿನ ಹೆಚ್ಚಿನ ಎಲ್ಲಾ ನಗರಗಳಲ್ಲಿ ಪ್ರದರ್ಶನ ನೀಡಿದರು. ಲಂಡನ್, ನೇಪಾಳ, ಚೀನಾ, ಫ್ರಾನ್ಸ್, ಸ್ಪೇನ್, ಬಾಂಗ್ಲಾ, ಸಿಂಗಪೂರ್, ಬರ್ಮಾ, ಲಾವೋಸ್, ಮಲೇಶಿಯ, ಫಿಲಿಪ್ಪೀನ್ಸ್, (ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ) ಮೊದಲಾದ ದೇಶಗಳ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಲ್ಲಿ ತೇಲಾಡಿಸಿದರು. 1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಕೋಳ್ಯೂರು ಶ್ರೀ ರಾಮಚಂದ್ರ ರಾಯರಿಗೂ ನೆಬ್ಬೂರರಿಗೆ ಜತೆಯಾಗಿ ಸದ್ರಿ ಪ್ರಶಸ್ತಿ ಬಂದಿತ್ತು. 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ ಅಲ್ಲದೆ ನೆಬ್ಬೂರರಿಗೆ ರಾಜ್ಯ ಪ್ರಶಸ್ತಿಯೂ ಕರ್ನಾಟಕ ಸರಕಾರದಿಂದ ಕೊಡಲ್ಪಟ್ಟಿತ್ತು. ಭಾರತ ದೇಶದೆಲ್ಲೆಡೆ ಮತ್ತು ವಿದೇಶಗಳಲ್ಲೂ ಕಲಾಪ್ರಿಯರಿಗೆ ತಮ್ಮ ಗಾನಸುಧಾ ಅಮೃತವನ್ನು ಉಣಿಸಿದ ನೆಬ್ಬೂರು ನಾರಾಯಣ ಭಾಗವತರನ್ನು ಎಲ್ಲೆಡೆ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಯಕ್ಷಗಾನ ಪ್ರಪಂಚದಲ್ಲಿ ಖ್ಯಾತ ರಂಗನಟರಾಗಿ ರಂಜಿಸಿದ ಕೆರೆಮನೆ ಶಿವರಾಮ ಹೆಗಡೆಯವರ ಪ್ರಶಸ್ತಿ, ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆದು ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಶಸ್ತಿ ಇವೆರಡೂ ನನ್ನ ಬದುಕಿನ ಆಸ್ತಿಗಳು ಎಂದು ಹೇಳುವ ನೆಬ್ಬೂರರ ಅಸಂಖ್ಯ ಅಭಿಮಾನಿಗಳಲ್ಲಿ ಮುಸಲ್ಮಾನ ಬಂಧುಗಳು ಹಲವರಿದ್ದಾರೆ. ಶ್ರೀರಾಮನಿರ್ಯಾಣ ಪ್ರಸಂಗದ ಹಾಡುಗಳಿಗೆ ಮನಸೋತ ಅವರು ನೆಬ್ಬೂರರ ಮನೆಗೆ ಬಂದು ಸನ್ಮಾನಿಸಿದ ಘಟನೆಯು ನಡೆದಿದೆ. ನೆಬ್ಬೂರರು ಕೆರೆಮನೆ ಕುಟುಂಬದ ನಾಲ್ವರು ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. ಗುರು ಶಿವರಾಮ ಹೆಗಡೆ ಯವರನ್ನು ಭಯ ಮತ್ತು ಆತಂಕದಿಂದ ಕುಣಿಸಿದೆ. ಶಂಭು ಹೆಗಡೆಯವರನ್ನು ಪ್ರೀತಿ ವಿಶ್ವಾಸ ಆತ್ಮೀಯತೆ ಯಿಂದ ಕುಣಿಸಿದೆ. ಶಿವಾನಂದ ಹೆಗಡೆಯನ್ನು ವಾತ್ಸಲ್ಯಭಾವದಿಂದ ಕುಣಿಸಿದೆ. ಕೆರೆಮನೆ ಶಿವಾನಂದ ಹೆಗಡೆ ಅವರ ಪುತ್ರ ಶ್ರೀಧರನನ್ನು ಮೋಹದಿಂದ ಕುಣಿಸಿದ್ದೇನೆ. ಆದರೂ ಶಿವರಾಮ ಹೆಗಡೆಯವರ ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಆಗಲಿಲ್ಲ ಎಂಬ ಬೇಸರವಿದೆ ಎಂಬ ನೆಬ್ಬೂರರ ಮಾತುಗಳಲ್ಲಿ ಯಕ್ಷಗಾನವೂ ಒಂದು ಮಹಾಸಿಂಧು, ಕಲಿತು ಮುಗಿಯುವಂಥದ್ದಲ್ಲ ಎಂಬ ಧ್ವನಿಯು ಅಡಗಿದೆ. ಯಕ್ಷಗಾನವು ನನಗೆ ಎಲ್ಲವನ್ನೂ ನೀಡಿದೆ. ಅನ್ನ ನೀಡಿದ ಕಲೆ, ಇದು ಹೆಸರನ್ನು ನೀಡಿದೆ. ಸಮಾಜದ ಒಬ್ಬ ಗೌರವಾನ್ವಿತ ವ್ಯಕ್ತಿಯನ್ನಾಗಿ ಮಾಡಿದೆ. ಕರ್ನಾಟಕ ಸರಕಾರದ ಮಾಸಾಶನವು ಬರುತ್ತಿದೆ. ಕಷ್ಟಕಾಲಕ್ಕೆ ನೆರೆಹೊರೆಯವರು, ಅಭಿಮಾನಿಗಳು ಸ್ಪಂದಿಸುತ್ತಾರೆ. ವಾಸದ ಮನೆ ಬಿಟ್ಟರೆ ಫಸಲು ಕೊಡುವ ಬೇರೆ ಜಮೀನು ಇಲ್ಲ. ನಮ್ಮ ಊರಲ್ಲಿ ಸಾಕಷ್ಟು ತೋಟ ಇರುವುದು ನಿಜ. ಯಾವುದು ನನ್ನದಲ್ಲ, ಬೇರೆಯವರದು ಎಂದು ಹೇಳುವ ನೆಬ್ಬೂರರ ಮಾತುಗಳಲ್ಲಿ ನಾನು ಅತ್ಯಂತ ತೃಪ್ತನು ಎಂಬ ಭಾವವಿದೆ. ನೆಬ್ಬೂರು ಭಾಗವತರು ಸಾಂಸಾರಿಕವಾಗಿ ತೃಪ್ತರು. ಪತಿಯನ್ನು ಅನುಸರಿಸುವ ಸತಿ ಶರಾವತಿ ನೆಬ್ಬೂರು ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ವಿನಾಯಕ ಹೆಗಡೆ ಬೆಂಗಳೂರಿನಲ್ಲಿ ಉದ್ಯೋಗಿ. ಪುತ್ರಿ ಶಕುಂತಲಾ ಹೆಗಡೆ ವಿವಾಹಿತೆ. ನೆಬ್ಬೂರು ನಾರಾಯಣ ಭಾಗವತರ ಆತ್ಮಕಥನವು ‘ನೆಬ್ಬೂರಿನ ನಿನಾದ’ ಎಂಬ ಶಿರೋನಾಮೆಯಡಿ 2007 ರಂದು ಪ್ರಕಟಿಸಲ್ಪಟ್ಟಿವೆ. ಡಾ. ಜಿ.ಎಸ್. ಭಟ್ಟ ಅವರು ಇದರ ಸಂಪಾದಕರು. ಶ್ರೀ ನೆಬ್ಬೂರರ ಷಷ್ಟ್ಯಬ್ಧ ಅಭಿನಂದನ ಸಮಿತಿ ಶಿರಸಿ ಇದರ ಪ್ರಕಾಶಕರು. ಕೆರೆಮನೆ ಶಂಭು ಹೆಗ್ಗಡೆಯವರು ‘ನಿನಾದದ ನಿಷ್ಕರ್ಷೆ’ ಎಂಬ ತಲೆಬರಹದಡಿ ನೆಬ್ಬೂರರ ಬಗೆಗೆ ಈ ಆತ್ಮಕಥನದಲ್ಲಿ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿರುತ್ತಾರೆ. ನೆಬ್ಬೂರು ಶ್ರೀ ನಾರಾಯಣ ಭಾಗವತರಿಗೆ ಕಲಾಮಾತೆಯು ಆಯುಷ್ಯ ಆರೋಗ್ಯ ಭಾಗ್ಯಾದಿಗಳನ್ನು ಅನುಗ್ರಹಿಸಿ ರಕ್ಷಿಸಲಿ ಎಂಬ ಹಾರೈಕೆಗಳು. ು
ಲೇಖನ - ರವಿಶಂಕರ್ ವಳಕ್ಕುಂಜ
-----------------------------------------------------------------------------------------------------------------------
ಭಾಗವತಿಕೆಯಲ್ಲಿ ಹಾಡಿನ ಶೈಲಿ ಆಕರ್ಷಕವಾಗಿರುವುದಕ್ಕಿಂತ ರಂಗಸ್ಥಳದಲ್ಲಿ ಒಂದು ಕಥೆ, ಪಾತ್ರ, ಪಾತ್ರದ ಭಾವ ಇವಕ್ಕೆ ಹಿಮ್ಮೇಳದವರು ಒದಗಬೇಕಾಗಿರೋದು ಮುಖ್ಯ. ಹಾಡುಗಾರಿಕೆಯಲ್ಲಿ ಭಾವನೆಗಳು ತುಂಬಿರ ಬೇಕು. ಕರುಣ ಭಕ್ತಿ ದುಃಖರಸಗಳು ಹೆಚ್ಚು ಪರಿಣಾಮವನ್ನು ಬೀರುತ್ತವೆ. ರೌದ್ರ ವೀರರಸಗಳಲ್ಲಿ ಹೆಚ್ಚು ಸ್ಪಷ್ಟತೆ ಇರಲಾರದು. ಆ ಹೊತ್ತಿನಲ್ಲಿ ಒಂದು ಸಲ ವಿಜೃಂಭಿಸಿ ಬಿಡುತ್ತದೆ. ಬಹಳಹೊತ್ತು ಪರಿಣಾಮ ಉಳಿಯಲಾರದು.
-ನೆಬ್ಬೂರು ನಾರಾಯಣ ಭಾಗವತ
=====================================================================
ವೇಗದ ಹಾಡುಗಾರಿಕೆಯಲ್ಲಿ ಕಥೆಯು ಓಡುತ್ತಿರುತ್ತದೆ ವಿನಹಾ ಸ್ಥಾಪನೆಯಾಗುವುದಿಲ್ಲ.
ಕೆರೆಮನೆ ಶಿವರಾಮ ಹೆಗಡೆಯವರು ನಿರೀಕ್ಷಿಸಿದ ಮಟ್ಟಕ್ಕೆ ಮುಟ್ಟಲಾಗಲಿಲ್ಲ ಎಂಬ ಬೇಸರವಿದೆ.
ಶೇಣಿಯವರ ಬಗೆಗೆ ಅಪಾರ ಗೌರವವಿದೆ. ಅವರ ತಾಳಮದ್ದಳೆಯ ಅರ್ಥಗಾರಿಕೆಗೆ ಪದ್ಯ ಹೇಳಿದ್ದೇನೆ. ಶೇಣಿ ಪ್ರಶಸ್ತಿಯೂ ನನಗೆ ಬಂದಿತ್ತು. ಶೇಣಿಯವರ ಹೆಸರಿನ ಪ್ರಶಸ್ತಿ ಪಡೆಯುವಾಗ ಯಮ ಕೂಡ ಎದೆ ಮುಟ್ಟಿ ನೋಡಿಕೊಳ್ಳಬೇಕಾಗುತ್ತದೆ. ನಾನು ಶ್ರೇಣಿ ಪ್ರಶಸ್ತಿಗೆ ಅರ್ಹನೇ ಎಂಬ ಭಾವನೆ ಮೂಡಿತ್ತು. ಶೇಣಿಯವರ ಆಯ್ಕೆ ನಾನೇ ಆಗಿದ್ದೆ. ಆದರೆ ಅವರ ಕೈಯಿಂದಲೇ ಪ್ರಶಸ್ತಿಯನ್ನು ಪಡೆಯುವ ಭಾಗ್ಯವಿರಲಿಲ್ಲ. ಸಮಾರಂಭದ ಒಂದು ತಿಂಗಳ ಮೊದಲೇ ಅವರು ಅವ್ಯಕ್ತ ಪ್ರಪಂಚವನ್ನು ಸೇರಿ ಕೊಂಡಿದ್ದರು.
ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಮತ್ತು ಶೇಣಿ ಪ್ರಶಸ್ತಿ ಇವೆರಡು ನನ್ನ ಬದುಕಿನ ಆಸ್ತಿ. ಇಬ್ಬರೂ ಮೇರು ಮಂಧರ ಸದೃಶ್ಯರು.ಭಾಗವತರನ್ನು ತಯಾರಿಸಲು ನನ್ನಲ್ಲಿ ಗುಳಿಗೆ ಮಾತ್ರೆಗಳಿಲ್ಲ ಅವರಾಗಿ ಆಸಕ್ತಿ ತೋರಿ ಬಂದರೆ ಕಲಿಸಬಹುದು ನನ್ನ ಹತ್ತಿರ ಯಾರೂ ಕೇಳಲಿಲ್ಲ. ಯಾರು ಬರಲೂ ಇಲ್ಲ.
- ನೆಬ್ಬೂರು ನಾರಾಯಣ ಭಾಗವತ
=======================================================================
ನೆಬ್ಬೂರರ ಬದುಕು ಮತ್ತು ಹಾಡುಗಾರಿಕೆ ಯನ್ನು ಉಡುಪಿ ಯಕ್ಷಗಾನ ಕಲಾರಂಗ ಸಂಸ್ಥೆಯು ಚಿತ್ರೀಕರಿಸಿ ದಾಖಲಿಸಿಕೊಂಡಿದ್ದಾರೆ ಅಲ್ಲದೆ ಕಟೀಲು ಸಿತ್ಲ ಶ್ರೀ ರಂಗನಾಥರಾಯರು ಸಂದರ್ಶಿಸಿ ದಾಖಲಿಸಿದ್ದಾರೆ.
- ರವಿಶಂಕರ್ ವಳಕ್ಕುಂಜ
======================================================================
ನೆಬ್ಬೂರು ನಾರಾಯಣ ಭಾಗವತರು

ನೆಬ್ಬೂರರ ಜೊತೆಯಲ್ಲಿ ಲೇಖಕರು ಮತ್ತು ಪತ್ರಕರ್ತ ರಮೇಶ್ ಕಾನಗೋಡ್

Comments
Post a Comment