ಹಾಸ್ಯಪಟು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ

                               ನೀವೇಕೆ ಇಷ್ಟು ಸಣ್ಣ ಸಣ್ಣ ವೇಷಗಳನ್ನು ಮಾಡುತ್ತೀರಿ? ದೊಡ್ಡ ದೊಡ್ಡ ವೇಷಗಳನ್ನು ಮಾಡಬೇಕು. ಹೀಗೆಂದು ಹಾಸ್ಯಗಾರರಲ್ಲಿ ಕೆಲವರು ಕೇಳುವುದನ್ನು ನೋಡಿದ್ದೇನೆ. ನನ್ನಲ್ಲೂ ಕೇಳಿದವರಿದ್ದಾರೆ. ಏನೆಂದು ಉತ್ತರಿಸಬೇಕು? ಕಿರೀಟ, ವೇಷಭೂಷಣಗಳನ್ನು ಧರಿಸಿ ಬಂದ ವೇಷವೇ ದೊಡ್ಡ ವೇಷವೆಂದು ಅವರ ಲೆಕ್ಕಾಚಾರ. ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನವೇನೆಂದು ತಿಳಿದವರು ಈ ರೀತಿ ಪ್ರಶ್ನಿಸಲಾರರು. ವಿಧೂಷಕನ ಹೊಣೆಗಾರಿಕೆಯ ವ್ಯಾಪ್ತಿ, ಸ್ಥಾನದ ಮಹತ್ವವನ್ನು ಅವರಿಗೆ ತಿಳಿಯಪಡಿಸಿದರೆ ‘ಹೋ, ನನಗೆ ಗೊತ್ತಿರಲಿಲ್ಲ, ಈಗ ತಿಳಿಯಿತು' ಎನ್ನುತ್ತಾರೆ. ಕಲಾವಿದರಂತೆ ಪ್ರೇಕ್ಷಕರಿಗೂ ಕಲಿಯುವುದಕ್ಕೆ ತುಂಬಾ ಇದೆ. ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ಕಲಾವಿದನಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಇದೆ. ಪ್ರಬುದ್ಧ ಪ್ರೇಕ್ಷಕರೇ ಯಕ್ಷಗಾನವನ್ನು ಆಸ್ವಾದಿಸಬಲ್ಲರು, ನಿರ್ಣಯಿಸಬಲ್ಲರು ಎಂದು ಹೇಳಿ ಮೇಳದ ಪ್ರತಿಯೊಬ್ಬ ಕಲಾವಿದನ ಸ್ಥಾನ, ಕರ್ತವ್ಯಗಳನ್ನು ಕೇಳಿ ತಿಳಿದವರೂ ಇದ್ದಾರೆ. ಅವರು ಪ್ರಶ್ನಿಸಿದ್ದು ಒಳಿತೇ ಆಯಿತು. ವಿಚಾರ ಸಂಗ್ರಹಕ್ಕೆ ಅದು ಒಂದು ಮಾಧ್ಯಮ. "ಯಾವಾತನು ಸದಾ ಪ್ರಶ್ನಿಸುತ್ತಾನೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟು ಕಮಲವು ಅರಳುವಂತೆ ವಿಕಸನ ಹೊಂದುತ್ತದೆ. ಪ್ರಶ್ನಿಸುವ ಗುಣ ಪ್ರತಿಯೊಬ್ಬರಲ್ಲೂ ಬೇಕು. ಯಕ್ಷಗಾನದಲ್ಲಿ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಟ ಪ್ರತಿಭೆಯಿಂದ ರಂಗದಲ್ಲಿ ಮೆರೆದು ಕೀರ್ತಿಯನ್ನು ಗಳಿಸಿದರು. ಹಾಸ್ಯಗಾರ ಸ್ಥಾನಕ್ಕೆ ಚ್ಯುತಿ ಯಾಗದಂತೆ ವ್ಯವಹರಿಸಿ ನ್ಯಾಯವನ್ನು ಒದಗಿಸಿದರು. ಅಂತಹವರಲ್ಲೊಬ್ಬರು ದಿ| ಬೆಟ್ಟಂಪಾಡಿ ಶ್ರೀ ಬಾಳಪ್ಪ ಶೆಟ್ಟಿ.
ಬೆಟ್ಟಂಪಾಡಿ ಶ್ರೀ ಬಾಳಪ್ಪ ಶೆಟ್ಟಿ.

                                  ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಕೊರಗಪ್ಪ ಶೆಟ್ಟಿ ಮತ್ತು ಲಕ್ಷ್ಮಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪೂವನಡ್ಕ ಇವರ ಮೂಲ ಮನೆ. ಓದಿದ್ದು 7ನೇ ತರಗತಿ ವರೆಗೆ. ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರಂತೆ. ಎಳವೆಯಲ್ಲೇ ಯಕ್ಷಗಾನದತ್ತ ಆಸಕ್ತರಾದ ಇವರು ಕುಂಬಳೆ ಕಣ್ಣನವರಿಂದ ನಾಟ್ಯ ಕಲಿತಿದ್ದರು. ಬೆಟ್ಟಂಪಾಡಿ ಪರಿಸರದಲ್ಲಿ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದ ಇವರ ಪ್ರತಿಭೆಯನ್ನು ದಿ| ಕೆ.ಪಿ. ವೆಂಕಪ್ಪ ಶೆಟ್ಟರು ಗುರುತಿಸಿದರು. ಶಿಷ್ಯನಾಗಿ ಸ್ವೀಕರಿಸಿ ವಿದ್ಯೆಯನ್ನು ಧಾರೆಯೆರೆದರು. ಆರಂಭದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಬಾಳಪ್ಪ ಶೆಟ್ಟರು ಅನಿವಾರ್ಯ ಸಂದರ್ಭದಲ್ಲಿ ಹಾಸ್ಯಗಾರನಾಗಿ ಅಭಿನಯಿಸಿ ಸೈ ಎನಿಸಿಕೊಂಡವರು. ಇದು ಅವರ ವೃತ್ತಿಜೀವನದ ಒಂದು ತಿರುವೇ ಆಯಿತು. ಖ್ಯಾತ ಹಾಸ್ಯಗಾರನೊಬ್ಬ ಕಾಣಿಸಿಕೊಳ್ಳಲು ಅದು ವೇದಿಕೆಯಾಯಿತು. ಶೇಣಿ, ಸಾಮಗರು, ಕೋಳ್ಯೂರು, ಪಾತಾಳ ವೆಂಕಟ್ರಮಣ ಭಟ್, ಅಳಿಕೆ ರಾಮಯ್ಯ ರೈ, ವಿಟ್ಲ ಜೋಶಿ, ಕಡತೋಕ ಮಂಜುನಾಥ ಭಾಗವತರು, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್, ಕರ್ನೂರು ಕೊರಗಪ್ಪ ರೈ, ಪಡ್ರೆ ಚಂದು ಮೊದಲಾದವರೊಡನೆ ಮೇಳ ಮತ್ತು ಮಳೆಗಾಲದ ತಿರುಗಾಟಗಳಲ್ಲಿ ಕಲಾವಿದನಾಗಿ ಬೆಳೆಯತೊಡಗಿದರು. ಆಟ  ಕೂಟಗಳೆರಡರಲ್ಲೂ ಕಾಣಿಸಿಕೊಂಡರು. ಕೆ.ಪಿ. ವೆಂಕಪ್ಪ ಶೆಟ್ಟರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಬಾಳಪ್ಪ ಶೆಟ್ಟರು ಶೀನ ಭಂಡಾರಿಗಳ ಬಳ್ಳಂಬೆಟ್ಟು ಮೇಳ, ಕೂಡ್ಲು, ಕುಂಬಳೆ, ಮುಲ್ಕಿ, ಕುಂಡಾವು, ಸುರತ್ಕಲ್, ಸುಂಕದಕಟ್ಟೆ, ಮಲ್ಲ ಮೇಳ, ಅಲ್ಲದೆ ಬಡಗಿನ ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ನಡೆಸಿ ಅತ್ಯುತ್ತಮ ಹಾಸ್ಯಗಾರರೆಂದು ಹೆಸರು ಗಳಿಸಿದ್ದಾರೆ. ಕೂಡ್ಲು ಮೇಳದಲ್ಲಿ ಶೇಣಿಯವರೊಂದಿಗಿನ ತಿರುಗಾಟ ಯಕ್ಷಗಾನ ಜ್ಞಾನಾರ್ಜನೆಗೆ ಪೂರಕವಾಯಿತು. ಕೂಡ್ಲು, ಸುರತ್ಕಲ್, ಕುಂಡಾವು ಮೇಳಗಳಲ್ಲಿ ಹಾಸ್ಯಗಾರರಾಗಿ ಶ್ರೀಯುತರು ಖ್ಯಾತರಾದರು. ಕೊನೆಯ ತಿರುಗಾಟ ನಡೆಸಿದ್ದು ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದಲ್ಲಿ. ಕನ್ನಡ ಪುರಾಣ ಅಲ್ಲದೆ ಅನೇಕ ತುಳು ಪ್ರಸಂಗಗಳಲ್ಲಿ ಅಭಿನಯಿಸಿದ ಬಾಳಪ್ಪ ಶೆಟ್ಟರು ಸಾತ್ವಿಕ ಪಾತ್ರಗಳಾದ ನಾರದ, ಅಕ್ರೂರ, ಧೃತರಾಷ್ಟ್ರ, ಸಂಜಯ, ಚಿತ್ರಸೇನ ಮೊದಲಾದ ಪಾತ್ರಗಳನ್ನೂ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರಂತೆ. ಅವರ ವೇಷಗಳನ್ನು ನೋಡಿ ಆನಂದಿಸಿದ ಮಂದಿಗಳು ಆ ಕ್ಷಣಗಳನ್ನು ಈಗಲೂ ನೆನಪಿಸುತ್ತಾರೆ. ‘ಬಾಳಪ್ಪನ ಹಾಸ್ಯ ನನ್ನ ಕಲ್ಪನೆಯ ಕೂಸು' ಕವಿಭೂಷಣ ವೆಂಕಪ್ಪ ಶೆಟ್ಟರ ಈ ಮಾತುಗಳು ಬಾಳಪ್ಪ ಶೆಟ್ಟರಿಗೆ ಸಂದ ಪ್ರಶಸ್ತಿಯೇ ಹೌದು.
                             ಮಂತ್ರವಾದಿ ವಿಜಯ, ಸಖ, ಗೂಢಚಾರಕ, ಪಾಪಣ್ಣ, ಅಗಸ, ಮಂಥರೆ ಮೊದಲಾದ ಪಾತ್ರಗಳಿಗೆ ಜೀವ ತುಂಬಿದ ಬಾಳಪ್ಪ ಶೆಟ್ಟರನ್ನು 1983ರಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸನ್ಮಾನ ಸಮಿತಿಯು ಅಭಿನಂದಿಸಿತು. ಹುಟ್ಟೂರ ಸನ್ಮಾನ. ಕಲಾಜೀವನ ಸಾರ್ಥಕವಾಯಿತು. 20-08-1983 ಶನಿವಾರದಂದು ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಶ್ರೀ ಹೆಚ್. ಎಲ್. ನಾಗೇಗೌಡರು ವಹಿಸಿದ್ದರು. ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಸಮಾರಂಭ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದ ನೆನಪಿನ ಸಂಚಿಕೆ "ಯಕ್ಷಿಕಾ"ವನ್ನು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಬಿಡುಗಡೆಗೊಳಿಸಿದ್ದರು. ಕಟೀಲು ದೇವಳದ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾಗಿದ್ದ ಶ್ರೀ ಕೆ. ಗೋಪಾಲಕೃಷ್ಣ ಅಸ್ರಣ್ಣ, ಕರ್ನಾಟಕ ಘನ ಸರಕಾರದ ವಾರ್ತಾ ಮತ್ತು ಪ್ರಚಾರ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದ ಶ್ರೀ ಎಂ. ರಘುಪತಿ, ಕನ್ನಡ ಮತ್ತ್ತು ಸಂಸ್ಕೃತಿ ಸಚಿವರಾಗಿದ್ದ ಡಾ. ಜೀವರಾಜ ಆಳ್ವ ಇವರುಗಳು "ಯಕ್ಷಿಕಾ" ಸಂಚಿಕೆಗೆ ಶುಭ ಸಂದೇಶಗಳನ್ನು ಕಳುಹಿಸಿದ್ದರು. ಖ್ಯಾತ ಸಮಾಜಸೇವಕ ಶ್ರೀ ಜತ್ತಪ್ಪ ರೈಗಳು ಸನ್ಮಾನ ಸಮಿತಿಯ ಗೌರವ ಅಧ್ಯಕ್ಷರಾಗಿದ್ದರು. ಲೇಖಕ, ವಿದ್ವಾಂಸ ಶ್ರೀ ಎಂ. ಪ್ರಭಾಕರ ಜೋಶಿ,          ಶ್ರೀ ಅಮೃತ ಸೋಮೇಶ್ವರ ಕುದ್ಕಾಡಿ ವಿಶ್ವನಾಥ ರೈ, ಶ್ರೀ ಪ್ರಭಾಕರ ಶಿಶಿಲ, ಭಾಸ್ಕರ ರೈ ಕುಕ್ಕುವಳ್ಳಿ, ಕೆ. ಜತ್ತಪ್ಪ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರು ಬಾಳಪ್ಪ ಶೆಟ್ಟರ ಬಗೆಗೆ ಅನಿಸಿಕೆಗಳನ್ನು ಅಕ್ಷರರೂಪದಲ್ಲಿ ಓದುಗರಿಗೆ ನೀಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟರು, ಶ್ರೀ ವಿ. ಬಿ. ಹೊಸಮನೆ, ಪುತ್ತೂರು ನಾರಾಯಣ ಹೆಗ್ಡೆ, ಕಡತೋಕ ಮಂಜುನಾಥ ಭಾಗವತ, ಕುಂಬಳೆ ಸುಂದರ ರಾವ್, ಪಾತಾಳ ವೆಂಕಟ್ರಮಣ ಭಟ್, ವಿಠಲ ಜೋಶಿ, ಕರ್ನೂರು ಕೊರಗಪ್ಪ ರೈ, ಕೆ. ಜತ್ತಪ್ಪ ರೈ, ಅಳಿಕೆ ರಾಮಯ್ಯ ರೈ, ಕಯ್ಯಾರ ಕಿಂಞಣ್ಣ ರೈ, ಕುಂಬಳೆ ಶ್ರೀಧರ ರಾವ್, "ತಪಸ್ವಿ" ಕಾಸರಗೋಡು ಇವರುಗಳು ತಮ್ಮ  ಅನಿಸಿಕೆ ಗಳನ್ನು ಬರಹ ರೂಪದಲ್ಲಿ ನೀಡಿರುತ್ತಾರೆ. ‘ಯಕ್ಷಿಕಾ' ನೆನಪಿನ ಸಂಚಿಕೆಯನ್ನು ಓದಿದರೆ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಘನ ಹಾಸ್ಯಗಾರರಾಗಿದ್ದರು ಎಂಬುದನ್ನು ನಮಗೆ ತಿಳಿಯಬಹುದು. ಶ್ರೀ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು   ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ, ಬೆಟ್ಟಂಪಾಡಿ ಇದರ ಸ್ಥಾಪನೆಗೆ ಶ್ರಮಿಸಿದವರು. ಸ್ಥಾಪಕ ಅಧ್ಯಕ್ಷರಾಗಿ ಕೆಲಕಾಲ ಸೇವೆಯನ್ನು ಮಾಡಿದ ಶ್ರೇಷ್ಠ ಸಂಘಟಕರೂ ಆಗಿದ್ದರು. ಅಶ್ಲೀಲಕ್ಕೆ ಎಡೆಗೊಡದೆ ಶುದ್ಧ ಪರಂಪರೆಯ ಹಾಸ್ಯಗಾರರಾಗಿ ಖ್ಯಾತರಾದ ಶ್ರೀಯುತರು ಕಲಾಭಿಮಾನಿಗಳಿಂದ, ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಅನಿವಾರ್ಯ ಕಾರಣಗಳಿಂದ 1995ನೇ ಇಸವಿ ಯಕ್ಷಗಾನ ಕ್ಷೇತ್ರದಿಂದ ನಿವೃತ್ತರಾದರು. 2005 ಜೂನ್ 25ರಂದು ಇಹಲೋಕ ಯಾತ್ರೆಯನ್ನು ಮುಗಿಸಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು.
                        ಶ್ರೀ ಬಾಳಪ್ಪ ಶೆಟ್ಟರು ಸಾಂಸಾರಿಕವಾಗಿಯೂ ತೃಪ್ತರಿದ್ದರು.   ಪತ್ನಿ ಸರ್ವಾಣಿ ಶೆಟ್ಟಿ ಪ್ರಸ್ತುತ ಬೆಟ್ಟಂಪಾಡಿಯ ‘ಯಕ್ಷಕೃಪಾ' ಮನೆಯಲ್ಲಿ ವಾಸವಾಗಿದ್ದಾರೆ. ಬಾಳಪ್ಪ ಶೆಟ್ಟಿ ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳು. (ಮೂರು ಗಂಡು, ಒಂದು ಹೆಣ್ಣು) ಹಿರಿಯ ಪುತ್ರ ಶ್ರೀ ಸುಂದರ ಶೆಟ್ಟಿ ವಿಜಯ ಬ್ಯಾಂಕ್‍ನ ಮುಖ್ಯ ಪ್ರಬಂಧಕರಾಗಿ ನಿವೃತ್ತರಾಗಿ ಈಗ ಕದ್ರಿ ಮಂಜುಶ್ರೀ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಅಲ್ಲದೆ ‘ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನ' ಎಂಬ ಸಂಸ್ಥೆಯನ್ನು ತೀರ್ಥರೂಪರ ಹೆಸರಲ್ಲಿ ಸ್ಥಾಪಿಸಿ ಕಲಾಸೇವೆಯನ್ನು ಮಾಡು ತ್ತಿದ್ದಾರೆ. ಯಕ್ಷಗಾನ ಚಟುವಟಿಕೆ ಅಲ್ಲದೆ ತಂದೆಯವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ನೀಡುತ್ತಿದ್ದಾರೆ. ದ್ವಿತೀಯ ಪುತ್ರ ಶ್ರೀ ಸದಾನಂದ ಶೆಟ್ಟಿ ನಿವೃತ್ತ ಅಧ್ಯಾಪಕರು. ತೃತೀಯ ಪುತ್ರ ಶ್ರೀ ಪದ್ಮನಾಭ ಶೆಟ್ಟಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಕಲಾಸೇವೆಯು ನಡೆಯಲಿ. ಪುತ್ರರ ಕಲಾಸೇವೆಯನ್ನು ನೋಡಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಅವ್ಯಕ್ತಲೋಕದಲ್ಲಿ ಸಂತಸಪಡಲಿ. ದೇವರ ಅನುಗ್ರಹ ಸದಾ ಇರಲಿ ಎಂಬ ಹಾರೈಕೆಗಳು.

- ರವಿಶಂಕರ್ ವಳಕ್ಕುಂಜ

Comments

  1. ಶ್ರೀಯುತರ ಬಗ್ಯೆ ವಿವರವಾಗಿ ಬರೆದು ಯಕ್ಷಗಾನಾಭಿಮಾನಿಗಳ ನೆನಪನ್ನು ಹಸಿರುಗೊಳಿಸಿದ್ದೀರಿ. ವಂದನೆಗಳು.

    ReplyDelete

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು