ಮೃದು ಮನಸಿನ ಮದ್ಲೆಗಾರ - ಮಿಜಾರು ಮೋಹನ ಶೆಟ್ಟಿಗಾರ
ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ಪ್ರಚಾರಪ್ರಿಯರಲ್ಲ. ಮಾಧ್ಯಮಗಳಿಂದ ಬಹಳ ದೂರ ಉಳಿದು ತಾನಾಯಿತು ತನ್ನ ಕೆಲಸವಾಯಿತು ಎಂದು ತೃಪ್ತಿಯಿಂದಲೇ ವ್ಯವಹರಿಸುತ್ತಾರೆ. ತನ್ನನ್ನು ತಾನು ಉದ್ಘೋಷಿಸಿಕೊಳ್ಳದೆ, ಶ್ರೇಷ್ಠ ಕಲೆಯಾದ ಯಕ್ಷಗಾನದಲ್ಲಿ ನಾನೊಬ್ಬ ಸಾಮಾನ್ಯ ಕಲಾವಿದ ಅಷ್ಟೆ ಎಂದು ಹೇಳುತ್ತಾರೆ. ವಿನಯವಂತ, ಸರಳ ವ್ಯಕ್ತಿತ್ವ, ಸದಾ ನಗುಮೊಗದಿಂದಲೇ ಕಾಣಿಸಿಕೊಳ್ಳುತ್ತಾರೆ. ಮೇಳಕ್ಕೆ, ಯಜಮಾನರಿಗೆ, ಸಹಕಲಾವಿದರಿಗೆ ಒಂದು ದಿನವಾದರೂ ಹೊರೆಯಾಗದೆ, ಅವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಗಲು ನಿದ್ದೆಯಾಗದಿದ್ದರೂ, ಸಬೂಬು ಹೇಳಿ ತನ್ನ ಕಸುಬು ಮಾಡದೇ ಇರುವವರಲ್ಲ. ಪ್ರಧಾನ ಮದ್ದಳೆಗಾರನಾಗಿ ತನ್ನ ಕರ್ತವ್ಯವೇನು? ಅದನ್ನು ಮಾಡಿಯೇ ಮಾಡುತ್ತಾರೆ. ಅಲ್ಲದೆ ತನಗಿಂತ ಕಿರಿಯ ಮದ್ದಳೆಗಾರರಿಗೆ ಹಗಲು ವಿಶ್ರಾಂತಿಯಾಗದಿದ್ದರೆ, ಅವರ ಹೊಣೆಯನ್ನು ಇವರು ವಹಿಸಿಕೊಂಡು ನಿರ್ವಹಿಸಿದ ಉದಾಹರಣೆಗಳೂ ಇವೆ!! ಒಟ್ಟಿಗೆ ತಿರುಗಾಟ ಮಾಡಿದ ಕಲಾವಿದರು ಈ ಉತ್ತಮ ಕಲಾವಿದನ ವ್ಯಕ್ತಿತ್ವವನ್ನು ವರ್ಣಿಸಿ ಕೊಂಡಾಡುವುದನ್ನು ನಾವು ಗಮನಿಸಬಹುದು. ಯಕ್ಷಗಾನದಲ್ಲಿ ಮದ್ದಳೆಗಾರರ ಸ್ಥಾನ ಶ್ರೇಷ್ಠವಾದುದು. ಹಿರಿದಾದುದು. ಭಾಗವತನ ಸ್ಥಾನದಲ್ಲಿ ಕುಳಿತವನು ಅನನುಭವಿಯಾದರೆ, ಅವನನ್ನು ಮುನ್ನಡೆಸಬೇಕಾದ ಹೊಣೆ ಮದ್ದಳೆಗಾರರಿಗೆ. ಪ್ರಸಂಗ ನಡೆ, ಪುರಾಣ ಜ್ಞಾನ, ಮುಮ್ಮೇಳದ ಕಲಾವಿದರ ಸಾಮರ್ಥ್ಯದ ಅರಿವು, ಸಮಯಪ್ರಜ್ಞೆ, ಎಲ್ಲವನ್ನೂ ತಿಳಿದಿರಬೇಕು. ಆದರೂ ಉಳಿದ ಕಲಾವಿದರನ್ನು ಗುರುತಿಸಿದಷ್ಟು, ಮದ್ದಳೆಗಾರರನ್ನು ಗುರುತಿಸುವಲ್ಲಿ ನಾವು ಸೋತಿದ್ದೇವೆಯೋ? ಎಂದೆನಿಸುತ್ತಿದೆ. ಅದು ಶ್ರೇಷ್ಠ ಸ್ಥಾನ. ಖಂಡಿತಾ ಅವಜ್ಞೆಗೊಳಗಾಗಬಾರದು. ತನ್ನ ಕರ್ತವ್ಯವನ್ನಷ್ಟೇ ಮಾಡಿ ಅಂತರ್ಮುಖಿಯಾಗಿರುವ ದೆಸೆಯಿಂದಲೂ ಕೆಲವೊಮ್ಮೆ ಕಲಾವಿದರು ಅವಜ್ಞೆಗೊಳಗಾದಂತೆ ಕಾಣಿಸಲೂಬಹುದು. ತೆರೆದು ಕಾಣಿಸಿಕೊಳ್ಳ ದಿರಲು ಅದೂ ಒಂದು ಕಾರಣವಿರಬಹುದು. ಅಂತೂ ದಣಿವರಿಯದೆ ದುಡಿಯುವ, ನಿಷ್ಠಾವಂತ ಅನೇಕ ಕಲಾವಿದರಲ್ಲಿ ಮದ್ದಳೆಗಾರರಾದ ಮಿಜಾರು ಶ್ರೀ ಮೋಹನ ಶೆಟ್ಟಿಗಾರರೂ ಒಬ್ಬರು. ಸದ್ಯ ಕಟೀಲು 3ನೇ ಮೇಳದ ಪ್ರಧಾನ ಮದ್ದಳೆಗಾರರು.
ಶ್ರೀ ಮಿಜಾರು ಮೋಹನ ಶೆಟ್ಟಿಗಾರರು ಮಂಗಳೂರು ತಾಲೂಕು ತೆಂಕಎಡಪದವು ಗ್ರಾಮದ ಮಂಜನಕಟ್ಟೆ ಎಂಬಲ್ಲಿ ದಡ್ಡಿ ನಾರಾಯಣ ಶೆಟ್ಟಿಗಾರ್ ಮತ್ತು ಗೌರಮ್ಮ ದಂಪತಿಗಳಿಗೆ ಪುತ್ರನಾಗಿ ಜನಿಸಿದರು. ಮೋಹನ ಶೆಟ್ಟಿಗಾರರ ತಂದೆ ನಾರಾಯಣ ಶೆಟ್ಟಿಗಾರರು ಉತ್ತಮ ವೇಷಧಾರಿಗಳಾಗಿದ್ದರಂತೆ. ಸಾತ್ವಿಕ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರಂತೆ. ಮೋಹನ ಶೆಟ್ಟಿಗಾರರ ಅಜ್ಜ ದಡ್ಡಿ ಚಂದಯ್ಯ ಶೆಟ್ಟಿಗಾರರೂ ವೇಷಧಾರಿಯಾಗಿದ್ದರು. ಅವರು ಆ ಕಾಲದ ಉತ್ತಮ ಹಾಸ್ಯಗಾರರಾಗಿದ್ದರು. ಮೋಹನ ಶೆಟ್ಟಿಗಾರರ ಸಣ್ಣಜ್ಜ ದಡ್ಡಿ ಬಾಬು ಶೆಟ್ಟಿಗಾರರು ವೇಷಧಾರಿ ಮತ್ತು ಮದ್ದಳೆಗಾರರೂ ಆಗಿ ದಡ್ಡಿಮೇಳ, ಗಂಜಿಮಠ ಮೇಳ, ಮುಂಡ್ಕೂರು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇನ್ನೇನು ಬೇಕು ಯಕ್ಷಗಾನಾಸಕ್ತಿ ಹುಟ್ಟಲು, ಬೆಳೆಯಲು? ಮೋಹನ ಶೆಟ್ಟಿಗಾರರಿಗೆ ಕಲೆಯು ರಕ್ತಗತವಾಗಿಯೇ ಇತ್ತು.
ಮಿಜಾರು ಮೋಹನ ಶೆಟ್ಟಿಗಾರರು ಓದಿದ್ದು ಬಡಗ ಮಿಜಾರು ಶಾಲೆಯಲ್ಲಿ 6ನೇ ತರಗತಿಯ ವರೇಗೆ. ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿಂದಲೇ ಶಾಲೆ ಬಿಟ್ಟರಂತೆ! ಇವರಿಗೆ ಕಲಾವಿದನಾಗಲು ಪ್ರೇರಕರಾದವರು ಮುಚ್ಚೂರು ಹರೀಶ ಶೆಟ್ಟಿಗಾರರು. ಇವರು ಧರ್ಮಸ್ಥಳ ಮತ್ತು ಕಟೀಲು ಮೇಳಗಳಲ್ಲಿ ವ್ಯವಸಾಯ ಮಾಡಿದವರು. ಮಾತುಗಾರಿಕೆ ಬಲುಸೊಗಸು. ಚೆನ್ನಾಗಿ ಹೇಳಿ ಕೊಡಬಲ್ಲ ಕಲೆಯೂ ಇತ್ತು. ಹರೀಶ ಶೆಟ್ಟಿಗಾರರು ಮದ್ದಳೆ ಕೂಡಾ ಬಾರಿಸುತ್ತಿದ್ದರು. ಮೋಹನ ಶೆಟ್ಟಿಗಾರರ ಗುರುಗಳು ಶ್ರೀ ಅಣ್ಣಿಭಟ್ ಗುರುಪುರ. ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಹಿಮ್ಮೇಳ ತರಗತಿ ನಡೆಸುತ್ತಿದ್ದರು. ಆಗ ಮಿಜಾರು ಮೋಹನ ಶೆಟ್ಟಿಗಾರರೂ, ಜತೆಯಾಗಿ ರಾಮಕೃಷ್ಣ ಶೆಟ್ಟಿಗಾರರೂ, ಹರೀಶ ಶೆಟ್ಟಿಗಾರರೂ ಹಿಮ್ಮೇಳವನ್ನು ಅಣ್ಣಿ ಭಟ್ಟರಿಂದ ಅಭ್ಯಸಿಸಿದರು. ಮಿಜಾರು ಮೋಹನ ಶೆಟ್ಟಿಗಾರರ ಮೊದಲ ತಿರುಗಾಟ 1982ರಲ್ಲಿ. ಕಟೀಲು ಮೇಳದಲ್ಲಿ. 3ನೇ ಮೇಳ. ಆಗ ನಿಡ್ಲೆ ನರಸಿಂಹ ಭಟ್ಟರು ಪ್ರಧಾನ ಮದ್ದಳೆಗಾರರಾಗಿದ್ದರು. ಅವರೂ ನನಗೆ ಗುರು ಸಮಾನರು. ಪ್ರೀತಿಯಿಂದ ತುಂಬಾ ಹೇಳಿಕೊಟ್ಟರು. ಪ್ರತಿಯೊಬ್ಬ ಕಲಾವಿದನೂ ನೆನಪಿಸುವಂತಹ ವಿಶಿಷ್ಟ ಅತ್ಯುತ್ತಮ ವ್ಯಕ್ತಿತ್ವ ಗುರು ನರಸಿಂಹ ಭಟ್ಟರದ್ದು ಎಂಬುದು ಮೋಹನ ಶೆಟ್ಟಿಗಾರರ ಅಭಿಪ್ರಾಯ. ಕಟೀಲು ಮತ್ತು ಕರ್ನಾಟಕ ಎರಡೂ ಮೇಳಗಳ ಸಂಚಾಲಕರಾಗಿದ್ದವರು ಕಲ್ಲಾಡಿ ವಿಠಲ ಶೆಟ್ಟರು. ಕಾಸರಗೋಡು ವೆಂಕಟರಮಣ ಅವರು ಅನಾರೋಗ್ಯದಿಂದ ಮನೆಗೆ ತೆರಳಿದಾಗ ಮೋಹನ ಶೆಟ್ಟಿಗಾರರನ್ನು ಕರ್ನಾಟಕ ಮೇಳಕ್ಕೆ ವಿಠಲ ಶೆಟ್ಟರು ಕಳುಹಿಸಿದರು. ಎರಡು ವರ್ಷಗಳ ಕಾಲ ಮಂಡೆಚ್ಚರ ಜತೆ, ಎಂಟು ವರ್ಷಗಳ ತಿರುಗಾಟ ದಿನೇಶ ಅಮ್ಮಣ್ಣಾಯರ ಜತೆ, ಕಾಂಚನ ಮದ್ದಳೆಗಾರರು, ಪ್ರಭಾಕರ ಗೋರೆಯವರಂತ ಒಡನಾಟ, ಮೋಹನ ಶೆಟ್ಟಿಗಾರರ ನಿಜ ಪ್ರತಿಭೆ ಹೊರಹೊಮ್ಮಿತು. ಪರುಷ ಶಿಲೆಗೆ ತಾಗಲ್ಪಟ್ಟ ಲೋಹಗಳು ಬಂಗಾರವಾಗುವಂತೆ ಮೋಹನ ಶೆಟ್ಟಿಗಾರರ ಪ್ರತಿಭೆಗೆ ಕರ್ನಾಟಕ ಮೇಳವು ವೇದಿಕೆಯಾಯಿತು. ಮಾತೃಶ್ರೀಯವರ ಮರಣದ ನಂತರ ಮೇಳ ಬಿಡುವ ಅನಿವಾರ್ಯಕ್ಕೆ ಸಿಲುಕಿದರು ಮೋಹನ ಶೆಟ್ಟಿಗಾರರು. ಕೆಲಸಮಯ ಮನೆಯಲ್ಲಿದ್ದರೂ ಕುಬಣೂರು ಶ್ರೀಧರ ರಾಯರ ಅಪೇಕ್ಷೆಯಂತೆ ಕಟೀಲು 1ನೇ ಮೇಳಕ್ಕೆ ಸೇರಿದರು. 1994ರಲ್ಲಿ ಕಟೀಲು 4ನೇ ಮೇಳ ಪ್ರಾರಂಭವಾದಾಗ ಪ್ರಧಾನ ಮದ್ದಳೆಗಾರರಾಗಿ ವ್ಯವಸಾಯ. ನಿರಂತರ 19 ವರ್ಷ 4ನೇ ಮೇಳದಲ್ಲಿ. ಆಗ ಪೂಂಜರು ಮತ್ತು ಶ್ರೀಧರ ರಾಯರ ಭಾಗವತಿಕೆ. 2014ರಿಂದ ಪ್ರಸ್ತುತ 3ನೇ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಹೀಗೆ ಒಟ್ಟು 35 ವರುಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ ಮಿಜಾರು ಮೋಹನ ಶೆಟ್ಟಿಗಾರರು. ಕೌಟುಂಬಿಕವಾಗಿಯೂ ಇವರು ಸಂತೃಪ್ತರು. ಪತ್ನಿ ಮೀನಾಕ್ಷಿ (ಇವರು ಮದ್ದಳೆಗಾರರ ಸೋದರಮಾವನ ಮಗಳು) ಮತ್ತು ಮೂರು ಮಂದಿ ಮಕ್ಕಳು. (2 ಗಂಡು, 1 ಹೆಣ್ಣು) ಹಿರಿಯ ಪುತ್ರ ಜಗದೀಶ Motor Winding ಉದ್ಯೋಗಿ. ಮದ್ದಳೆಗಾರನೂ ಹೌದು. ಕಿರಿಯ ಪುತ್ರ ದೇವಿದಾಸ Furniture ಕೆಲಸ ಮಾಡುತ್ತಿದ್ದಾರೆ. 3ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯ. ಮಗಳು ಲಾವಣ್ಯ. ಪದವೀಧರೆ.
ಮಿಜಾರು ಮೋಹನ ಶೆಟ್ಟಿಗಾರರು ನೇಯ್ಗೆ ಕೆಲಸವನ್ನೂ ಮಾಡುತ್ತಾರೆ. ಅದರಲ್ಲಿ ಪರಿಣತರು. ಮಳೆಗಾಲದಲ್ಲಿ ತಮ್ಮ ಕುಲದ ಕಸುಬನ್ನು ನಿರ್ವಹಿಸುತ್ತಾರೆ. ಹೆಚ್ಚಿನ ಎಲ್ಲಾ ಭಾಗವತರುಗಳೊಂದಿಗೆ ವ್ಯವಸಾಯ ಮಾಡಿದರೂ, ಅಗರಿಯವರೊಂದಿಗೆ ತಿರುಗಾಟ ನಡೆಸಲಾಗದೇ ಇದ್ದುದು ಕೊರತೆಯಾಗಿಯೇ ಉಳಿಯಿತು ಎಂದು ಹೇಳುವ ಮೂಲಕ ಆ ಶ್ರೇಷ್ಠ ಕಲಾವಿದರಿಗೆ ಗೌರವವನ್ನರ್ಪಿಸುತ್ತಾರೆ. ಮೇಳಗಳಲ್ಲದೆ ಮಿಜಾರು ಮೋಹನ ಶೆಟ್ಟಿಗಾರರು ದುಬಾಯಿ, ಮುಂಬಯಿ, ಬೆಂಗಳೂರು ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಕಲಾ ಮಾತೆಯ ಅನುಗ್ರಹ ಸದಾ ಮಿಜಾರು ಮೋಹನ ಶೆಟ್ಟಿಗಾರರಿಗಿರಲಿ. ಅವರಿಂದ ಇನ್ನಷ್ಟು ಕಲಾಸೇವೆ ನಡೆಯಲಿ. ು
ಲೇಖನ: ರವಿಶಂಕರ್ ವಳಕ್ಕುಂಜ
ಮಿಜಾರು ಮೋಹನ ಶೆಟ್ಟಿಗಾರ

Comments
Post a Comment