ಮೇಳಗಳ ಯಾಜಮಾನ್ಯಕ್ಕೆ ನ್ಯಾಯ ಒದಗಿಸಿದ ಸಮರ್ಥ ನಾಯಕತ್ವ - ಕಲ್ಲಾಡಿ ಮನೆತನ

                      ಯಕ್ಷಗಾನ ಮೇಳಗಳನ್ನು ಯಜಮಾನನಾಗಿ ಯಶಸ್ವಿಯಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ಅದೊಂದು ಕಠಿಣ ಕಾರ್ಯವೇ ಸರಿ. ಸಾಹಸವೇ ಹೌದು. ಧೈರ್ಯವೂ ಬೇಕು. ವ್ಯವಹಾರ ಚತುರತೆಯೂ ಬೇಕು. ಯೋಜನೆ ಯೋಚನೆಗಳೆಲ್ಲಾ ಬಲಿಷ್ಠವಾಗಿರಬೇಕು. ಅದರೊಳಗೆ ಪ್ರಾಮಾಣಿಕತೆ, ಪಾರದರ್ಶಕತೆ, ಕಲಾವಿದರ ಬಗೆಗೆ ಕಾಳಜಿ, ಸಂಘಟರಿಗೆ ಹಿಂಸೆಯಾಗದಂತೆ ಎಚ್ಚರ, ಪ್ರೇಕ್ಷಕರತ್ತ ಗಮನ, ಯಶಸ್ವೀ ಪ್ರದರ್ಶನಗಳಿಗೆ ಬೇಕಾಗಿರುವ ವಿಚಾರಗಳು ಹೀಗೆ ಎಲ್ಲವೂ ಅಡಕವಾಗಿರಬೇಕು. ಮನೆಯೊಳಗೇ ಕುಳಿತು ಮೇಳವನ್ನು ನಡೆಸುವುದಕ್ಕಾಗುವುದಿಲ್ಲ. ಹಾಗಾಗಿ ಎಲ್ಲಾ ಮೇಳಗಳ ಸಂಚಾಲಕರಲ್ಲಿ ನಮಗೆ ಗೌರವವಿದೆ. ಅವರೂ ಕಲಾಮಾತೆಯ ಸುಪುತ್ರರೇ ಹೌದು. ಯಾವ ಯಜಮಾನರೂ ಮೇಳವನ್ನು ನಡೆಸುವುದು ಕಷ್ಟವೆಂದು ಹೇಳದಿದ್ದರೂ ಸುಲಭವೆಂದು ಹೇಳಲಾರರು. ಹೇಳುವುದರ ಬದಲಾಗಿ ಕಷ್ಟವನ್ನೂ ನಷ್ಟವನ್ನೂ ಅನುಭವಿಸುತ್ತಾರೆ ಅಷ್ಟೇ. ಹೇಳಲೂ ಬಾರದು. ಅದರಿಂದ ಸತ್ಪರಿಣಾಮ ಉಂಟಾಗುವ ಬದಲು ದುಷ್ಪರಿಣಾಮವೇ ಉಂಟಾಗುತ್ತದೆ.  ನಾಯಕನಾದವನು ಧೈರ್ಯಗುಂದಿದಾಗ ಅದರ ಪರಿಣಾಮವನ್ನು ಎಲ್ಲರಿಗೂ ಊಹಿಸಬಹುದು. ಅವನನ್ನು ಅನುಸರಿಸಿ ವ್ಯವಹರಿಸುವವರ ನಡೆಯೂ ಶಿಥಿಲವಾಗುತ್ತದೆ. ರೂಢಿಯಲ್ಲಿ ಒಂದು ಮಾತಿದೆ. "ನಿನಗೆ ಯಾರಲ್ಲಾದರೂ ಹಗೆ ಸಾಧಿಸಲಿಕ್ಕಿದ್ದರೆ ಯಕ್ಷಗಾನ ಮೇಳವನ್ನು ಕಟ್ಟಲು ಹೇಳು" ಎಷ್ಟು ಅರ್ಥಪೂರ್ಣವಾದ ಮಾತು! ಮೇಳವನ್ನು ಕಟ್ಟಿ ಮುನ್ನಡೆಸಲು ಅಷ್ಟು ಕಷ್ಟವಿದೆಯೆಂದು ಈ ಮಾತಿನ ಅರ್ಥ.

            ಎಲ್ಲರನ್ನು ಒಂದೇ ಕೊಡೆಯ ಅಡಿಗೆ ತಂದು ಮುನ್ನಡೆಸುವಲ್ಲಿ ನಾಯಕತ್ವವು ಅದೆಷ್ಟು ಬಲಿಷ್ಠವಾಗಿರಬೇಕು ಎಂಬುದನ್ನು ಪ್ರಕಟಪಡಿಸಲು ಈ ಮಾತುಗಳನ್ನು ಹಿಂದಿನ ತಲೆಮಾರಿನ ಜನರು ಆಡಿದ್ದಿರಬಹುದು. ಮೇಳಗಳನ್ನು ಮುನ್ನಡೆಸಿದ ಸಂಚಾಲಕರೆಲ್ಲಾ ಒದಗಿದ ಸಂಕಷ್ಟಗಳನ್ನೆಲ್ಲಾ ಅನುಭವಿಸಿ, ಎದುರಿಸಿ ಯಕ್ಷಗಾನ ಕಲೆಯ ಉತ್ಕರ್ಷಕ್ಕೆ ಕಾರಣರಾದರು. ಗಾಣಕ್ಕೆ ಸಿಕ್ಕ ಕಬ್ಬಿನ ಜಲ್ಲೆಯು ಜಜ್ಜುವಾಗಲೂ ನಮಗೆ ಸಿಹಿಯಾದ ರಸವನ್ನು ನೀಡಿದಂತೆ, ಕರ್ಪೂರವು ಹೊತ್ತಿ ಉರಿಯುವಾಗಲೂ ಬಳಿಯಲ್ಲಿದ್ದವರಿಗೆ ಪರಿಮಳವನ್ನೇ ನೀಡಿದಂತೆ ಅವರುಗಳೆಲ್ಲಾ ಕಲಾಭಿಮಾನಿಗಳಿಗೆ ಪ್ರದರ್ಶನಗಳನ್ನು ನೋಡಿ ಆನಂದಿಸುವ ಅವಕಾಶಗಳನ್ನು ನೀಡಿದರು. ಆದುದರಿಂದ ಮೇಳಗಳನ್ನು ಮುನ್ನಡೆಸುವ ನಾಯಕರುಗಳೆಲ್ಲಾ ಅಭಿನಂದನೀಯರು. ಅಂತಹಾ ಮಹನೀಯರು ಅನೇಕರಿದ್ದಾರೆ. ಅವರುಗಳಲ್ಲಿ ಪ್ರಮುಖ ಸ್ಥಾನವು ಕಲ್ಲಾಡಿ ಮನೆತನಕ್ಕೆ ಸಲ್ಲುತ್ತದೆ. ಮೇಳಗಳ ಯಾಜಮಾನ್ಯಕ್ಕೆ ನ್ಯಾಯ ಒದಗಿಸಿದ ಸಮರ್ಥ ನಾಯಕತ್ವ ಕಲ್ಲಾಡಿ ಕುಟುಂಬದವರದ್ದು. ಕಲ್ಲಾಡಿ ಶ್ರೀ ಕೊರಗ ಶೆಟ್ಟಿ, ಕಲ್ಲಾಡಿ ಶ್ರೀ ವಿಠಲ ಶೆಟ್ಟಿ, ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರು. ಹೀಗೆ ಅವರ ಮನೆತನವು ಮೇಳಗಳನ್ನು ಸಮರ್ಥವಾಗಿ ಮುನ್ನಡೆಸಿ ಕೀರ್ತಿಯನ್ನು ಗಳಿಸಿದೆ. ಮೇಳಗಳಿಗೆ ಆಟವೇ ಸಿಗದಿದ್ದ ಕಾಲದಲ್ಲಿ ವ್ಯವಹಾರ ಚತುರತೆಯಿಂದ ಊರಿನ ಗಣ್ಯರಲ್ಲಿ ಮಾತನಾಡಿ ಪ್ರದರ್ಶನಗಳನ್ನು ಏರ್ಪಡಿಸುವಂತೆ ಪ್ರೇರೇಪಿಸಿದರು. ಹಾಗಾಗಿ ಕಲ್ಲಾಡಿ ಮನೆತನದವರೂ ಆಟ ಆಡಿಸಿದ ಮಹನೀಯರುಗಳೂ ಯಕ್ಷಗಾನ ಪ್ರದರ್ಶನಗಳ ಸಂಖ್ಯೆಯನ್ನು ಗಣನೀಯವಾಗಿ ವೃದ್ಧಿಸಲು ಕಾರಣರಾದರು. ಅವರೆಲ್ಲಾ ಅಭಿನಂದನೀಯರು. ಅದರ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ.
                    ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕಲ್ಲಾಡಿ ಎಂಬ ಪ್ರದೇಶ. ಮೇಳದ ಯಜಮಾನನಾಗಿ ಯಕ್ಷಗಾನ ಪ್ರದರ್ಶನ ವೃದ್ಧಿಸಲು ಕಾರಣರಾಗಿ ಅನೇಕ ಕಲಾವಿದರಿಗೆ ಅನ್ನದಾತರಾಗಿ ಶ್ರೀ ಕೊರಗ ಶೆಟ್ಟರು ಯಕ್ಷಗಾನಕ್ಕೂ, ಕಲ್ಲಾಡಿ ಎಂಬ ಊರಿಗೂ, ತಾನು ಜನಿಸಿದ ಮನೆತನಕ್ಕೂ ಗೌರವವನ್ನು ತಂದುಕೊಟ್ಟವರು. ಅವರ ಬಗೆಗೆ ಹಿರಿಯರು ಆಡುವ ಮಾತುಗಳನ್ನು ನಾವು ಕೇಳಿದ್ದೇವೆ. ಶ್ರೀಯುತರು ಕುಂಡಾವು ಮೇಳವನ್ನು 1942ರಲ್ಲಿ ಸ್ಥಾಪಿಸಿ ತಿರುಗಾಟ ನಡೆಸಿ ನಂತರ ‘ಇರಾ ಸೋಮನಾಥೇಶ್ವರ ಯಕ್ಷಗಾನ ನಾಟಕ ಸಭಾ' ಎಂಬ ಹೆಸರಿನಿಂದ ಡೇರೆ ಮೇಳವನ್ನು ಆರಂಭಿಸಿದರು. ‘ಮಾತು ಕಡಿಮೆ ದುಡಿಮೆ ಹೆಚ್ಚು' ಎಂಬಂತೆ ಪ್ರದರ್ಶನಗಳು ತೀರಾ ವಿರಳವಾಗಿದ್ದ ಆ ಕಾಲದಲ್ಲಿ ತನ್ನ ಪರಿಶ್ರಮದಿಂದ ಅದು ವೃದ್ಧಿಸಲು ಕಾರಣರಾದರು. ಯಕ್ಷಗಾನವನ್ನೂ ಕಲಾವಿದರನ್ನೂ ಕಡೆಗಣ್ಣಿನಿಂದ ನೋಡಿದ ಕಾಲವದು. ಇವರಿಂದ ಕಲೆಗೂ ಕಲಾವಿದರಿಗೂ ಸಮಾಜವು ಗೌರವ ಕೊಡಲಾರಂಭಿಸಿತು. ಹಾಗಾಗಿ ಕಲ್ಲಾಡಿ ಶ್ರೀ ಕೊರಗ ಶೆಟ್ಟರ ಸಾಹಸವು ‘ಯಕ್ಷಗಾನ ಕ್ಷೇತ್ರದ ಮೌನ ಕ್ರಾಂತಿ' ಎಂದು ಕೊಂಡಾಡಲ್ಪಟ್ಟಿತು. ಇವರು 1900ನೇ ಇಸವಿಯಲ್ಲಿ ಕಲ್ಲಾಡಿ ಸೇಸಪ್ಪ ಶೆಟ್ಟಿ ಮತ್ತು ಲಕ್ಷ್ಮಿ ಶೆಟ್ಟಿ ದಂಪತಿಗಳಿಗೆ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಇವರದು ಕೃಷಿ ಕುಟುಂಬ. ಕಲ್ಲಾಡಿ ಕೊರಗ ಶೆಟ್ಟರು ಐದನೆಯ ತರಗತಿಯವರೆಗೆ ಓದಿದವರು. ಶಾಲೆಯಲ್ಲಿ ಓದಿದ್ದು ಕಡಿಮೆಯಾದರೂ ಬದುಕೆಂಬ ಪಾಠಶಾಲೆಯಲ್ಲಿ ಬಹಳಷ್ಟು ಓದಿ ಸಾಧಕರಾದರು. ಕುಕ್ಕಾಜೆಯಲ್ಲಿ ಪಟೇಲ್ ಶಂಕರ ನಾರ್ಣಪ್ಪಯ್ಯನವರ ಜೊತೆ ಭಂಡಸಾಲೆಯನ್ನು ತೆರೆದರೂ ಯಶಸ್ವಿಯಾಗಲಿಲ್ಲ. ಸಾಧಕನಾಗಬೇಕೆಂಬ ಛಲ ಕೊರಗ ಶೆಟ್ಟರಲ್ಲಿತ್ತು. ಸಂದರ್ಭವು ತಾನಾಗಿ ಒದಗಿ ಬಂದಿತ್ತು. ಯಕ್ಷಗಾನಾಸಕ್ತಿ ಎಳವೆಯಿಂದಲೇ ಇತ್ತು. ಅನಿರೀಕ್ಷಿತವಾಗಿ ಕಟೀಲು ಮೇಳವನ್ನು ಮುನ್ನಡೆಸುವ ಸೌಭಾಗ್ಯ ಸಿದ್ಧಿಸಿತು. ನೂಜಿಪ್ಪಾಡಿ ಶಂಕರನಾರ್ಣಪ್ಪಯ್ಯನವರೂ ಇವರಿಗೆ ಸಹಕರಿಸುತ್ತಿದ್ದರಂತೆ. 1939ರಿಂದ ತೊಡಗಿ 1966ರ ತನಕ ಕಟೀಲು ಮೇಳದ ಅಭಿವೃದ್ಧಿಗೆ ಕಾರಣರಾದರು. ನಂತರ ಮೇಳಗಳ ಹೊಣೆಯನ್ನು ಪುತ್ರ ಕಲ್ಲಾಡಿ ವಿಠಲ ಶೆಟ್ಟರಿಗೆ ಹಸ್ತಾಂತರಿಸಿ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿದರೂ ಪ್ರೇಕ್ಷಕನಾಗಿ ಆಸ್ವಾದಿಸುತ್ತಿದ್ದರು. ಮೇಳದ ಯಜಮಾನನಾಗಿದ್ದಾಗ ಮರದಡಿಯಲ್ಲೇ ಚಾಪೆ ಹಾಸಿ ಕುಳಿತು ನಿರ್ದೇಶಿಸುತ್ತಿದ್ದರಂತೆ. ಜನಾಕರ್ಷಣೆಗಾಗಿ ಪರಂಪರೆಗೆ ಮಾರಕವಾಗದಂತೆ ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿ ಪ್ರದರ್ಶನಗಳ ಸಂಖ್ಯೆ ವೃದ್ಧಿಸಲು ಕಾರಣರಾಗಿ ಪ್ರೇಕ್ಷಕರು ಯಕ್ಷಗಾನ ವೈಭವವನ್ನು ಕಾಣುವಂತಾಯಿತು. ಇರಾ ಶ್ರೀ ಸೋಮನಾಥೇಶ್ವರ ದೇವಳದ ಸರ್ವತೋಮುಖ ಅಭಿವೃದ್ಧಿಗೂ ಕಾರಣರಾದ ಶ್ರೀಯುತರು ಸಮರ್ಥ ಯಜಮಾನ ಎಂಬ ಕೀರ್ತಿಗೆ ಪಾತ್ರರಾದರು. 1969ನೇ ಇಸವಿಯಲ್ಲಿ ಇರಾ ಶ್ರೀ ಸೋಮನಾಥೇಶ್ವರ ಸನ್ನಿಧಿಯಲ್ಲಿ ಶ್ರೀ ದೇವರಿಗೆ ಪೂಜೆಯಾಗುತ್ತಿದ್ದಂತೆ ಕುಸಿದ ಅವರನ್ನು ಭಕ್ತವತ್ಸಲನೂ ಮಂಗಲಕಾರಕನೂ ಆದ ಪರಶಿವನು ತನ್ನ ಬಳಿಗೆ ಕರೆದೊಯ್ದಿದ್ದ. ಆದರೂ ಮರಣಿಸುವಾಗ ಮೇಳದ ಹೊಣೆಯನ್ನು ಸಮರ್ಥನಾದ ಮಗನಿಗೆ ವಹಿಸಿದ್ದೇನೆ. ಕೊರತೆಯಾಗದು ಎಂಬ ಸಂಪೂರ್ಣ ತೃಪ್ತಿ ಕಲ್ಲಾಡಿ ಕೊರಗ ಶೆಟ್ಟರಿಗಿತ್ತು. ವಿದ್ವಾಂಸರೂ ಹಿರಿಯ ಶ್ರೇಷ್ಠ ಕಲಾವಿದರೆಲ್ಲಾ ಕಲ್ಲಾಡಿ ಕೊರಗ ಶೆಟ್ಟರನ್ನು ಶ್ರೇಷ್ಠ ಯಜಮಾನ ಎಂದು ಪ್ರಶಂಸಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಇದು ಮುಖಸ್ತುತಿಯಲ್ಲ, ವಸ್ತುಸ್ಥಿತಿ. ಯಕ್ಷಗಾನದ ಭೀಷ್ಮ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು "ಕಲ್ಲಾಡಿ ಕೊರಗ ಶೆಟ್ಟರು ಕಲಾವಿದರ ಕಷ್ಟವನ್ನು ಕಂಡವರು ಮತ್ತು ನೋವನ್ನು ಉಂಡವರೂ ಆಗಿದ್ದರು. ಶೆಟ್ಟರು ಮೇಳದ ದಾರ್ಶನಿಕ ಯಜಮಾನರು ಮಾತ್ರವಲ್ಲ ಯಜಮಾನ ಶಬ್ದದ ಜೀವಂತ ಪ್ರತಿರೂಪರು. ಅವರು ನಿಷ್ಠಾವಂತ ಧನಿಯಾಗಿ ಯಕ್ಷಗಾನದ ಧ್ವನಿಯಾಗಿದ್ದರು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
"ಕಲ್ಲಾಡಿ ಕೊರಗ ಶೆಟ್ಟರ ಸ್ಮರಣೆಯಲ್ಲಿ ಯಾವನಿಗೆ ಮೈಯಲ್ಲಿ ನವಿರೇಳುವುದಿಲ್ಲವೋ ಅವನು, ಅವರು ದಿವಂಗತರಾದ ಮೇಲೆಯೇ ಹುಟ್ಟಿರಬೇಕು. ಯಕ್ಷಗಾನದ ಕಲ್ಪನೆ, ವ್ಯವಸ್ಥಾ ಚಾತುರ್ಯ, ವ್ಯವಸ್ಥಾಪಕ ನಲ್ಲಿರಬೇಕಾದ ಗಾಂಭೀರ್ಯಗಳು ಅವರಲ್ಲಿದ್ದುವು. ತೆಂಗಿನಕಾಯಿಯ ಹೊರಗೆ ಒರಟು. ಒಳಗೆ ಮಧುರೋಧಕ ಹೇಗೋ ಹಾಗೆಯೆ ಅವರ ವ್ಯಕ್ತಿತ್ವ ಎಂದು ನನ್ನ ಅನಿಸಿಕೆ" ಇದು ಹರಿದಾಸ ಮಲ್ಪೆ ಶ್ರೀ ರಾಮದಾಸ ಸಾಮಗರ ಮಾತುಗಳು.
ಡಾ. ಎಂ. ಪ್ರಭಾಕರ ಜೋಶಿಯವರು "ತೆಂಕುತಿಟ್ಟಿನಲ್ಲಿ ಡೇರೆ ಮೇಳಗಳ ಉಗಮ ಮತ್ತು ಉಚ್ಛ್ರಾಯ ಕಾಲವೆನಿಸಿದ 1950-1990ರ ಅವಧಿಯ ಮೂಲಪ್ರವರ್ತಕರು ಕೊರಗ ಶೆಟ್ಟರು. ಅವರ ವ್ಯಕ್ತಿತ್ವವು ಯಕ್ಷಗಾನ ಕಲೆಯ ಚರಿತ್ರೆಯಲ್ಲಿ ಒಂದು ವರ್ಣಮಯ ಅಧ್ಯಾಯದ ವಸ್ತುವಾಗಿದೆ" ಎಂದು ಕೊರಗ ಶೆಟ್ಟರನ್ನು ಪ್ರಶಂಸಿಸಿದ್ದರು.
‘‘ಎಲ್ಲಿಯವರೆಗೆ ಯಕ್ಷಗಾನ ಪ್ರದರ್ಶನವಿರುತ್ತದೋ ಅಲ್ಲಿಯ ತನಕ ಕೊರಗ ಶೆಟ್ಟರು ಮರೆಯಲಾಗದ ಮಹಾನುಭಾವನಾಗಿ ಉಳಿಯುತ್ತಾರೆ. ಯಕ್ಷಗಾನದಿಂದ ಕೊರಗ ಶೆಟ್ಟರಿಗೆ ಗೌರವ ಬಂತೋ ಅಥವಾ ಕೊರಗ ಶೆಟ್ಟರಿಂದಾಗಿ ಯಕ್ಷಗಾನಕ್ಕೆ ಗೌರವ ಬಂತೋ ಎಂದು ಪ್ರಶ್ನಿಸಿದರೆ ಎರಡೂ ಹೌದು ಎನ್ನುವುದೇ ಸರಿಯಾದ ಉತ್ತರವಾಗುತ್ತದೆ.’’ ಖ್ಯಾತ ಕಲಾವಿದ ಕುಂಬಳೆ ಸುಂದರ ರಾಯರು ಹೀಗೆ ಕೊರಗ ಶೆಟ್ಟರಿಗೆ ನುಡಿ ಗೌರವವನ್ನು ಸಲ್ಲಿಸಿದ್ದಾರೆ.
"ಮಾನಧನ" ಎಂದು ಕಡಂದೇಲು ಪುರುಷೋತ್ತಮ ಭಟ್ಟರೂ ತೆಂಕಿನ ಯಕ್ಷಗಾನ ಕಲೆಯನ್ನು, ಕಲಾವಿದರನ್ನು ಎತ್ತರಕ್ಕೇರಿಸಿದ ಯಜಮಾನ ಎಂದು ಕೊಳ್ಯೂರು ರಾಮಚಂದ್ರ ರಾಯರೂ, ಕಲಾವಿದರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದ ಕಲ್ಲಾಡಿ ಕೊರಗ ಶೆಟ್ಟರ ಸಾಧನೆಯು ಯಕ್ಷಗಾನದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿಯೆಂದು ಏರ್ಯ ಲಕ್ಷ್ಮೀನಾರಾಯಣ ಆಳ್ವರೂ ಪ್ರಶಂಸಿಸಿದ್ದರು. ಯಜಮಾನನಾದವನಿಗೆ ಬೇರೇನೂ ಬೇಕು? ಇವರ ಪ್ರಶಂಸೆಗಳೆಲ್ಲಾ ಕೊರಗ ಶೆಟ್ಟರ ಸಾಧನೆಗೆ ಸಂದ ಪ್ರಶಸ್ತಿಗಳು.
ಇವರ ಹೆಸರಿನಲ್ಲಿ ಕಲ್ಲಾಡಿ ಕೊರಗ ಶೆಟ್ಟಿ ಪ್ರತಿಷ್ಠಾನ (ರಿ.) ಇರಾ ಎಂಬ ಸಂಸ್ಥೆಯು ಕಾರ್ಯಾಚರಿಸುತ್ತಿದ್ದು ನಿಟ್ಟೆ ಶ್ರೀ ಭಾಸ್ಕರ ಶೆಟ್ಟರ ಸಂಪಾದಕತ್ವದಲ್ಲಿ ‘ಯಕ್ಷ ಕಲಾಕುಸುಮ' (ಕಲ್ಲಾಡಿ ಕೊರಗ ಶೆಟ್ಟರ ಬದುಕಿನ ಇಣುಕು ನೋಟ) ಎಂಬ ಕೃತಿಯೂ ಬಿಡುಗಡೆಗೊಂಡಿತ್ತು.
1967ರಿಂದ ಶ್ರೀ ವಿಠಲ ಶೆಟ್ಟರು ತೀರ್ಥರೂಪರ ಅಪೇಕ್ಷೆಯಂತೆ ಯಾಜಮಾನ್ಯವನ್ನು ವಹಿಸಿ ಯಶಸ್ವಿಯಾಗಿ ಮುನ್ನಡೆಸಿದರು. ಅಲ್ಲದೆ ಕೊರಗ ಶೆಟ್ಟರ ಆಣತಿಯಂತೆ 1955ರ ಸುಮಾರಿಗೆ ಕರ್ನಾಟಕ ಯಕ್ಷಗಾನ ನಾಟಕ ಸಭಾ, ಮಂಗಳೂರು ಈ ಮೇಳದ ಹೊಣೆಯನ್ನು ಹೊತ್ತು ಮುನ್ನಡೆಸಿದರು. ಎಳವೆಯಲ್ಲೇ ತನ್ನ ತೀರ್ಥರೂಪರು ಸಾಗಿದ ದಾರಿಯಲ್ಲೇ ಸಾಗಿದವರು. ಅವರು ಮೇಳವನ್ನು ನಡೆಸುತ್ತಿದ್ದ ರೀತಿಯನ್ನು ಗಮನಿಸುತ್ತಾ ಬೆಳೆದವರು. ಸಂಘಟಕರು, ಕಲಾವಿದರು, ಪ್ರೇಕ್ಷಕರು ಸೇರಿದಂತೆ ಯಕ್ಷಗಾನ ಎಂಬ ಆವರಣದಲ್ಲಿಯೇ ಬೆಳೆದವರು. ಹಾಗಾಗಿ ಮೇಳವನ್ನು ಮುನ್ನಡೆಸುವ ಕಲೆಯು ಕರಗತವಾಗಿತ್ತು. ಇವರು ಸಂಚಾಲಕನಾದಾಗ ಒಂದು ಮೇಳ ಕಾರ್ಯಾಚರಿಸುತ್ತಿತ್ತು. ನಾಲ್ಕಾಗಿ ವೃದ್ಧಿಗೊಳಿಸುವಲ್ಲಿ ಇವರ ಪರಿಶ್ರಮ ಅಪಾರ. ತನ್ನ ತಂದೆಯವರು ಗಳಿಸಿದ ಕೀರ್ತಿಗೆ ಕುಂದುಂಟಾಗದಂತೆ ವ್ಯವಹರಿಸಿದರು. ಕರ್ನಾಟಕ ಮೇಳದಲ್ಲೂ ನೂತನ ಪ್ರಯೋಗಗಳನ್ನು ನಡೆಸಿ ಸಮರ್ಥ ಯಜಮಾನ ಎಂಬ ಪ್ರಶಂಸೆಗೆ ಪಾತ್ರರಾದರು. ಇವರ ಸಂಚಾಲಕತ್ವದಡಿಯಲ್ಲಿಯೇ ನಾನು ತಿರುಗಾಟ ಆರಂಭಿಸಿದ್ದು. ಅವಕಾಶಗಳನ್ನು ಇತ್ತು ಪ್ರೋತ್ಸಾಹಿಸಿದ್ದರು. ನಾವು ಮಾತನಾಡಬೇಕೆಂದಿಲ್ಲ. ಅವರು ಮುಗುಳ್ನಕ್ಕರೆ ಸಾಕು. ಹೇಗಿದ್ದೀರಿ? ಚೆನ್ನಾಗಿದ್ದೀರಾ? ಏನಾದರೂ ಸಮಸ್ಯೆಗಳಿದ್ದರೆ ಹೇಳಿ ಎಂಬುದೇ ಆ ಮುಗುಳ್ನಗೆಯ ಹಿಂದಿರುವ ಧ್ವನಿ. ಅವರದು ಆಕರ್ಷಕ ವ್ಯಕ್ತಿತ್ವ. ನಾವು ಅವರಲ್ಲಿ ಮಾತನಾಡಬೇಕೆಂದಿಲ್ಲ. ಮೇಳದೊಳಗೆ ಏನು ನಡೆದರೂ ಅವರಿಗೆ ತಿಳಿಯುತ್ತಿತ್ತು. ಸಮಸ್ಯೆಗಳನ್ನೂ ಅದನ್ನು ಪರಿಹರಿಸುವ ರೀತಿಯನ್ನೂ ತಿಳಿದ ಸಮರ್ಥ ಚಾಣಾಕ್ಷ ಯಜಮಾನರವರು.
ಎಳವೆಯಿಂದಲೇ ಪಡೆದ ಅನುಭವಗಳಿಂದ ಸಿದ್ಧಿಸಿದ ಸಾಮರ್ಥ್ಯ ಅದು. ಮೂರು ವರ್ಷ ತಿರುಗಾಟ ನಡೆಸಿದಾಗಲೇ ನನ್ನನ್ನು ಮುಖ್ಯ ಹಾಸ್ಯಗಾರನ ಸ್ಥಾನಕ್ಕೆ ಭಡ್ತಿಗೊಳಿಸಿದ್ದರು. ನಾಲ್ಕನೇ ಮೇಳದಲ್ಲಿ  ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು ನಿವೃತ್ತರಾದಾಗ ಆ ಸ್ಥಾನಕ್ಕೆ ವಳಕ್ಕುಂಜ ಮಾಣಿ ಭಟ್ರನ್ನು ಕಳುಹಿಸೋಣ ಎಂದಿದ್ದರಂತೆ. ಯಜಮಾನರ ಆತ್ಮೀಯರು ಕೆಲ ಸಮಯದ ಬಳಿಕ ನನಗೆ ತಿಳಿಸಿದ ವಿಚಾರವಿದು. ಅವರು ನನ್ನಲ್ಲಿರಿಸಿದ ವಿಶ್ವಾಸಕ್ಕೆ ಯಾವತ್ತೂ ಕೃತಜ್ಞನಾಗಿರುತ್ತೇನೆ. ಯಕ್ಷಗಾನ ಮೇಳಗಳನ್ನು ಯಜಮಾನನಾಗಿ ನಡೆಸುವುದಕ್ಕೆಂದೇ ಇವರು ಕಲ್ಲಾಡಿ ಕೊರಗ ಶೆಟ್ಟರ ಸುಪುತ್ರರಾಗಿ ಜನಿಸಿದರೆಂದೂ, ಇದು ಕಲಾಮಾತೆಯ ಮತ್ತು   ಶ್ರೀ ಸೋಮನಾಥೇಶ್ವರ ದೇವರ ಅನುಗ್ರಹವೆಂದೂ ಸಂಘಟಕರು, ಕಲಾಭಿಮಾನಿಗಳು ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. 2005ನೇ ಇಸವಿಯಂದು ಅವರು ದೇವರ ಪಾದವನ್ನು ಸೇರಿಕೊಂಡಾಗ ಸಹಜವಾಗಿ ಕಲಾಭಿಮಾನಿಗಳೆಲ್ಲರಿಗೂ ಅತ್ಯಂತ ದುಃಖವಾಗಿತ್ತು. ಇವರ ಯಜಮಾನಿಕೆಯಲ್ಲಿ ಸೇವೆ ಆಟಗಳು ಗಣನೀಯವಾಗಿ ವೃದ್ಧಿಸಿದುವು. ಪರಿಣಾಮ ಮೇಳಗಳ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಯಿತು. 1975ನೇ ಇಸವಿಯಲ್ಲಿ ಎರಡನೇ ಮೇಳ ಆರಂಭವಾಯಿತು. 1983ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ ತಿರುಗಾಟಕ್ಕೆ ಹೊರಟು ನಿಂತವು. ಇದುವೇ ಸಮರ್ಥ ನಾಯಕತ್ವ.
2005ನೇ ಇಸವಿಯಿಂದ ಕಲ್ಲಾಡಿ ವಿಠಲ ಶೆಟ್ಟರ ಸುಪುತ್ರರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಕಟೀಲು ಮೇಳಗಳನ್ನು ಸಂಚಾಲಕರಾಗಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇವರು ಕೂಡಾ ಯಶಸ್ವೀ ಸಂಚಾಲಕರೆಂದೇ ಪ್ರಸಿದ್ಧರಾಗಿದ್ದಾರೆ. ಸೇವಾಕರ್ತರ, ಕಲಾಭಿಮಾನಿಗಳ, ಕಲಾವಿದರ ಪ್ರೀತಿಗೆ ಪಾತ್ರರಾಗಿರುತ್ತಾರೆ. ತನ್ನ ತೀರ್ಥರೂಪರು ಮೇಳವನ್ನು ನಡೆಸುತ್ತಿದ್ದ ರೀತಿಯನ್ನು ನೋಡಿಯೇ ಬೆಳೆದವರು. ಅಲ್ಲದೆ ಮೇಳವನ್ನು ನಡೆಸಿ ಮೊದಲೇ ಅನುಭವಗಳನ್ನು ಪಡೆದುಕೊಂಡವರು. ಶ್ರೀಯುತರು ಸಂಚಾಲಕರಾದ ಮೇಲೆ ಬದಲಾವಣೆಗಳಡಿಯಲ್ಲಿ ಅನೇಕ ಸುಧಾರಣೆಗಳು ಉಂಟಾದುವು 2010ನೇ ಇಸವಿಯಲ್ಲಿ ಐದನೇ ಮೇಳ ಆರಂಭವಾಗಿ 2013ರಲ್ಲಿ ಮತ್ತೊಂದು ಮೇಳ ಆರಂಭವಾಗಿ ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಕಾರ್ಯಾಚರಿಸುತ್ತಿದ್ದು ಶ್ರೀ ಕ್ಷೇತ್ರದ ಭಕ್ತರ ಕಲಾಸೇವೆಯನ್ನು ನಡೆಸಿಕೊಡುವಲ್ಲಿ ಶ್ರಮಿಸುತ್ತಿವೆ. ಇವರು ಮೇಳಗಳ ಯಜಮಾನಿಕೆಯನ್ನು ವಹಿಸಿಕೊಂಡಾಗ ಇದ್ದುದ್ದು 4 ಮೇಳಗಳು. ಈಗದು 6 ಆಗಿ ವೃದ್ಧಿಸಿದೆ. ಕಲಾವಿದರ ಹಾಗೂ ನೇಪಥ್ಯ ಕಲಾವಿದರ ಸಂಬಳವೂ ಗುರುತಿಸುವ ರೀತಿಯಲ್ಲಿ ಹೆಚ್ಚಾಗಿದೆ.  ದೇವಿಪ್ರಸಾದ ಶೆಟ್ಟರ ಆಡಳಿತದಲ್ಲೇ ಮೇಳದ ಕಲಾವಿದರ ಸೇವಾದಾರರ ಹಿತಾಸಕ್ತಿಯನ್ನು ಕಾಪಾಡಲೆಂದೇ 2007- 2008ಕ್ಕೆ "ಶ್ರೀ ದುರ್ಗಾಪರಮೇಶ್ವರೀ ಯಕ್ಷಧರ್ಮ ಬೋಧಿನೀ ಚಾರಿಟಬಲ್ ಟ್ರಸ್ಟ್" ಆರಂಭವಾಯಿತು. ಆರು ಮೇಳಗಳಿಗೆ ಬಸ್‍ಗಳು, ಎತ್ತರದ ರಂಗಸ್ಥಳವೇ ಮೊದಲಾದ ವ್ಯವಸ್ಥೆಗಳು ಆರಂಭ ವಾದುವು. ಮೊದಲು ನೆಲದಲ್ಲೇ ನಿರ್ಮಿಸಿದ ರಂಗಸ್ಥಳದಲ್ಲಿ ಕುಣಿಯುತ್ತಿದ್ದುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ ಅನೇಕ ವರ್ಷಗಳಿಂದ ಕಲಾವಿದರು ರಜಾ ಸಂಬಳವನ್ನು ಪಡೆಯುತ್ತಿದ್ದಾರೆ. ಈಗ ಸರಂಜಾಮುಗಳನ್ನು ಸಾಗಿಸಲು ವಾಹನದ ವ್ಯವಸ್ಥೆಯೂ ಆಗಿದೆ. ಸೇವಾ ಬಯಲಾಟಗಳ ಸಂಖ್ಯೆಯಲ್ಲಿ ಹೆಚ್ಚಳ, ಮೇಳಗಳ ಸಂಖ್ಯೆಯಲ್ಲಿ ವೃದ್ಧಿ, ಕಲಾವಿದರಿಗೆ ಸಂಚರಿಸಲು ಬಸ್ ವ್ಯವಸ್ಥೆ, ರಜಾ ಸಂಬಳ, ಔಷದೋಪಚಾರಕ್ಕೆ ಧನಸಹಾಯ ಮೊದಲಾದ ವ್ಯವಸ್ಥೆಗಳೆಲ್ಲಾ ಆದುದು ಅಭಿವೃದ್ಧಿಯ ಸಂಕೇತವೇ ಹೌದು. ಕಲಾವಿದರಿಗೆ ಇನ್ನಷ್ಟು ಕೊಡಬೇಕು, ವ್ಯವಸ್ಥೆಗಳೂ ಆಗಬೇಕು ಎಂಬ ಒಳ್ಳೆಯ ಮನಸ್ಸೂ ಕಲ್ಲಾಡಿ ದೇವಿಪ್ರಸಾದ ಶೆಟ್ಟರಿಗಿದೆ. ಸಂಘಟಕರು, ಸೇವಾಕರ್ತರು ಮೇಳದ ಯಜಮಾನರಾದ ನಿಮ್ಮನ್ನು ಸನ್ಮಾನಿಸುತ್ತೇವೆ ಎಂದರೆ ನಯವಾಗಿ ನಿರಾಕರಿಸಿ "ಆಟ ನಡೆಯುವುದು ಕಲಾವಿದರಿಂದ, ಸೇವೆಯನ್ನು ನಡೆಸಿಕೊಡುವವರು ಕಲಾವಿದರು, ನಾನು ನಿಮಿತ್ತ ಮಾತ್ರ. ಆದುದರಿಂದ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ" ಎಂದು ಹೇಳುವ ಶೆಟ್ಟರು ಅಭಿನಂದನೀಯರು. ಕಲಾಭಿಮಾನಿಗಳ, ಸೇವಾದಾರರ, ಕಲಾವಿದರ, ಅಸ್ರಣ್ಣ ಬಂಧುಗಳ ಸಹಕಾರದಿಂದ ಈ ವರೆಗೂ ಮುನ್ನಡೆಸಿದ್ದೇನೆ. ಕಲಾಮಾತೆಯಾದ ಶ್ರೀ ಕಟೀಲು ದೇವರ ಅನುಗ್ರಹವಿರುವ ತನಕ ಯಜಮಾನ ನಾಗಿ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಿ ಮುನ್ನಡೆಸುತ್ತೇನೆ ಎನ್ನುವ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಆಡಳಿತಾವಧಿಯಲ್ಲೇ ಕಟೀಲಿನಲ್ಲಿ ಕಲಾವಿದರಿಗೆ ಅತ್ಯುತ್ತಮ ವಸತಿ ವ್ಯವಸ್ಥೆಯೂ ಆಗಿತ್ತು. ಇವರ  ಸಂಚಾಲಕತ್ವದಲ್ಲಿ ಕಟೀಲು ಆರೂ ಮೇಳಗಳು ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ. ಉತ್ತಮ ವ್ಯವಸ್ಥೆಗಳು ಕೊಡಲ್ಪಡಲಿ. ಕಲಾವಿದರ ಬದುಕು ಹಸನಾಗಲಿ. ಯಕ್ಷಗಾನದ ವೈಭವವನ್ನು ಪ್ರೇಕ್ಷಕರು ನೋಡಿ ಸಂತಸಪಡುವಂತಾಗಲಿ. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಶ್ರೇಷ್ಠ ಯಜಮಾನನಾಗಿ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಖ್ಯಾತರಾಗಲಿ. ಮೇಳಗಳನ್ನು ಮುನ್ನಡೆಸುವಲ್ಲಿ ಅವರಿಗೆ ದೇವರ ಅನುಗ್ರಹವಿರಲಿ. ಪುರಾಣ ಜ್ಞಾನ, ಪ್ರಸಂಗ ಜ್ಞಾನ, ಕಲಾವಿದರ ಬಗೆಗೆ ಕಾಳಜಿ, ಕಲಾವಿದರ ಸಾಮರ್ಥ್ಯವನ್ನು ಅಳೆದು ನಿರ್ಧರಿಸುವ ಜಾಣ್ಮೆ, ಸಂಘಟಕರಿಗೆ, ಶ್ರೀಕ್ಷೇತ್ರಕ್ಕೆ ಕೊರತೆಯಾಗದಂತೆ ವ್ಯವಹರಿಸುವ ರೀತಿ, ಸಹನೆ, ಮೊದಲಾದ ನಾಯಕತ್ವದ ಗುಣಗಳನ್ನು ಹೊಂದಿರಬೇಕು. ಈ ಎಲ್ಲಾ ವಿಚಾರಗಳನ್ನು ತಿಳಿದ ಕಾರಣವೇ ಕಲ್ಲಾಡಿ ಮನೆಯವರು ಸಮರ್ಥ ಸಂಚಾಲಕರಾಗಿ ಮೇಳಗಳನ್ನು ಮುನ್ನಡೆಸಿದರು. ಶ್ರೀ ದೇವಿಪ್ರಸಾದ ಶೆಟ್ಟರ ನಾಯಕತ್ವದಲ್ಲಿ ಕಟೀಲು ಮೇಳಗಳು ಮುನ್ನಡೆಯಲಿ. ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನವು ವಿಜೃಂಭಿಸಲಿ ಎಂಬ ಹಾರೈಕೆ.ು

- ರವಿಶಂಕರ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್