ಹಿರಿಯ ಕಲಾವಿದ- ಪಡುಪೆರಾರ ಲಕ್ಷ್ಮಣ ಕೋಟ್ಯಾನ್

                         ರೂಢಿಯ ಮಾತುಗಳು ಅದೆಷ್ಟೋ ಬಲಿಷ್ಟವಾಗಿರುತ್ತದೆ! ಬಹುಷಃ ಅನುಭವಗಳೇ ಮಾತಿನ ಮೂಲಕ ಹೊರಹೊಮ್ಮಿ ಅದನ್ನು ನಿರಂತರ ಬಳಸೋದು ರೂಢಿಯಾಗಿರಬೇಕು. ಯಕ್ಷಗಾನ ಸಂಬಂಧಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಬಂದ ಗಣ್ಯರು, ಅತಿಥಿಗಳು ಸದ್ರಿ ಕಲೆಯ ಬಗ್ಗೆ ಅವರವರ ಅಭಿಪ್ರಾಯಗಳನ್ನು ಹೇಳುತ್ತಾರೆ. ಕಲೆಯ ಸ್ವರೂಪ, ಸೌಂದರ್ಯ, ಕಲೆಯು ಅವರಲ್ಲಿ ಉಂಟುಮಾಡಿದ ಪರಿಣಾಮ, ಅವರೇಕೆ ಯಕ್ಷಗಾನದತ್ತ ಆಕರ್ಷಿತರಾದರು? ಈ ಬಗ್ಗೆ ವಿವರಿಸುತ್ತಾರೆ. ಪ್ರೇಕ್ಷಕರು ಅವರದ್ದೇ ಆದ ರೀತಿಯಲ್ಲಿ ಗಂಡುಕಲೆಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಅವರೆಲ್ಲರ ಅನಿಸಿಕೆಗಳಲ್ಲಿ ಸರ್ವರಿಂದಲೂ ಸಮ್ಮತಿಸಲ್ಪಟ್ಟ ವಿಚಾರವೆಂದರೆ ಯಕ್ಷಗಾನವು ಪಂಡಿತರಿಂದಲೂ ಹಿಡಿದು ಪಾಮರರವರೆಗೆ ಆಸ್ವಾದಿಸುವ ಕಲೆ ಎಂಬುದು. ಈ ವಿಚಾರವನ್ನು ಎಲ್ಲರೂ ಒಪ್ಪಿದ್ದಾರೆ, ಆಡುತ್ತಾರೆ. ಈ ಮೇರುಕಲೆಯು ಸರಳವಾಗಿ ಎಲ್ಲರೂ ಅರ್ಥಮಾಡಿಕೊಳ್ಳುವಂತೆ ಇದೆ ಎಂಬುದೇ ಇದರ ಅರ್ಥ. ಯಕ್ಷಗಾನ ಕಲಾವಿದನಾಗಬೇಕಾದರೆ ಪದವೀಧರನಾಗಬೇಕಾಗಿಲ್ಲ. ಯಾವ ಪದವಿಯ ಪ್ರಮಾಣ ಪತ್ರಗಳು ಬೇಕಾಗಿಲ್ಲ. ಅವನಲ್ಲಿ ಇರಬೇಕಾದುದು ಶುದ್ಧ ಭಾಷೆಯಲ್ಲಿ ಮಿತವಾಗಿ ಆಡುವ ಮಾತುಗಳು, ಸಾಮಾನ್ಯ ಜ್ಞಾನ ಮತ್ತು ಅಧ್ಯಯನ ಎಂಬ ಗುಣಗಳು. ಇತಿಹಾಸವನ್ನು ಗಮನಿಸಿದರೆ ನಮಗೆ ತಿಳಿಯುತ್ತದೆ ಶೇಣಿ, ಸಾಮಗರು, ಕುಂಬಳೆ ಸುಂದರರಾಯರು ಪದವೀಧರರೇ? ಬಣ್ಣದ ಮಹಾಲಿಂಗ, ಚಂದ್ರಗಿರಿ ಅಂಬು ಶಾಲೆಗೆ ಹೋಗಿ ಹೆಚ್ಚು ಕಲಿತವರಲ್ಲ. ಶಾಲೆಯ ಮೆಟ್ಟಿಲುಗಳನ್ನೇ ನೋಡದವರು ಖ್ಯಾತ ಕಲಾವಿದರಾಗಿದ್ದಾರೆ. ಕಷ್ಟಪಟ್ಟು ಸತತ ಅಧ್ಯಯನದಿಂದ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಸವೆಸಿ ಶ್ರೇಷ್ಠ ಕಲಾವಿದರಾಗಿ ಆ ಕಲೆಯಲ್ಲಿ ಪದವೀಧರರಾದರು. ಕಲಾಮಾತೆಗೆ ಎಲ್ಲರೂ ಸುಪುತ್ರರು. ಅವರನ್ನು ತನ್ನ ಕುಕ್ಷಿಯೊಳಗೆ ಇರಿಸಿ ರಕ್ಷಿಸುತ್ತಾಳೆ. ಯಕ್ಷಗಾನ ಕಲಾವಿದನಾಗುವವನಿಗೆ ‘ನಾನು ವಿದ್ಯಾವಂತನಲ್ಲ, ಶಾಲೆಗೆ ಹೋಗಿಲ್ಲ’ ಎಂಬ ಕೊರಗು ಬೇಡ. ಕಲಾಮಾತೆ ಅವರನ್ನು ಕೈಬೀಸಿ ಬಾರೆಂದು ಕರೆಯುತ್ತಾಳೆ. ಹೋಗಿ ಆಕೆಯ ಸೇವೆಯನ್ನು ಮಾಡುವ ಮನಸ್ಸು ನಮಗೆ ಬೇಕು. ಹೀಗೆ ಶಾಲೆಗೆ ಹೋಗಿ ಹೆಚ್ಚು ಕಲಿತಿರದಿದ್ದರೂ ಯಕ್ಷಗಾನ ಕಲಾವಿದರಾಗಿ ಅನೇಕರು ವ್ಯವಸಾಯವನ್ನು ಮಾಡುತ್ತಿದ್ದಾರೆ. ಅವರಲ್ಲೊಬ್ಬರು ಪಡುಪೆರಾರ ಲಕ್ಷ್ಮಣ ಕೋಟ್ಯಾನ್.
ಪಡುಪೆರಾರ ಲಕ್ಷ್ಮಣ ಕೋಟ್ಯಾನ್.

                      ಶ್ರೀ ಲಕ್ಷ್ಮಣ ಕೋಟ್ಯಾನ್ ಅವರು ಪ್ರಸ್ತುತ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಈಗ ಅವರಿಗೆ ವಯಸ್ಸು ಅರವತ್ತೆಂಟು ಆದರೂ ಯುವಕರಂತೆ ಉತ್ಸಾಹದಿಂದ ರಂಗವೇರುತ್ತಾರೆ. ಇವರು ಬಣ್ಣದ ವೇಷಧಾರಿ. ಮಹಿಷಾಸುರ, ವರಾಹ, ಮತ್ಸ್ಯ, ಕುಂಭಕರ್ಣ, ಕಿರಾತ, ತಾರಕಾಸುರ, ಶೂರಪದ್ಮ, ಅಲ್ಲದೆ ಹೆಣ್ಣು ಬಣ್ಣಗಳನ್ನು ನಿರ್ವಹಿಸಬಲ್ಲರು. ಇವರ ಕಿರೀಟ ವೇಷಗಳೂ ಆಕರ್ಷಕ. ನಾಟಕೀಯ ಪಾತ್ರಗಳನ್ನು ಕೂಡಾ ಮಾಡುತ್ತಾರೆ. ಇವರು 1949ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ತಾಲ್ಲೂಕು ಪಡುಪೆರಾರದ ಚಿನ್ನಯ್ಯ ಪೂಜಾರಿ ಮತ್ತು ಮುತ್ತು ಪೂಜಾರಿ ದಂಪತಿಗಳ ಮಗನಾಗಿ ಜನಿಸಿದರು. ಕಿನ್ನಿಕಂಬಳ ಶಾಲೆಯಲ್ಲಿ ಐದನೇ ತರಗತಿವರೇಗೆ ಓದಿದರು. ಆ ಸಂದರ್ಭದಲ್ಲಿ ಖ್ಯಾತ ಪುಂಡು ವೇಷಧಾರಿ ಕ್ರಿಶ್ಚನ್ ಬಾಬು ಅವರಿಂದ ನಾಟ್ಯ ಕಲಿತು ವೇಷ ಮಾಡಲು ಪ್ರಾರಂಭಿಸಿದರು. ನಂತರ ಜೀವನೋಪಾಯಕ್ಕಾಗಿ ಮುಂಬೈ ನಗರವನ್ನು ಸೇರಿಕೊಂಡ ಲಕ್ಷ್ಮಣ ಕೋಟ್ಯಾನ್ ಹದಿನೆಂಟು ವರ್ಷಗಳ ಕಾಲ ಸಿಐಡಿ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿದ್ದರು. ಮುಂಬೈಯಲ್ಲಿ ಕಲಾಸೇವೆಯನ್ನು ಮುಂದುವರಿಸಲು ಅವಕಾಶಗಳು ಇದ್ದು, ಅನೇಕ ಮಂಡಳಿಗಳು ಕಾರ್ಯಾಚರಿಸುತ್ತಿದ್ದು, ಅವುಗಳಲ್ಲೊಂದು ಶ್ರೀ ಗುರು ನಾರಾಯಣ ಮಂಡಳಿ. ವೇಷ ಮಾಡುವುದರ ಜತೆಗೆ ನಾಟ್ಯದ ತರಬೇತಿಯನ್ನು ನೀಡಿದರು. ಇವರು ಕ್ರೀಡೆಯಲ್ಲೂ ಆಸಕ್ತರು. ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ಹೊಂದಿ, ಆಟಗಾರನಾಗಿಯೂ, ತರಬೇತುದಾರನಾಗಿಯೂ ಕಾಣಿಸಿಕೊಂಡರು. ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಇವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗವೂ ಸಿಕ್ಕಿತ್ತು. ಆದರೆ ಮನೆ ಸಮಸ್ಯೆಯಿಂದಾಗಿ ಊರಿಗೆ ಬರಬೇಕಾಯಿತು. ಜೀವನೋಪಾಯಕ್ಕಾಗಿ ತಾನು ಮೊದಲು ಕಲಿತ ಯಕ್ಷಗಾನವನ್ನೇ ಅವಲಂಬಿಸಬೇಕಾಯಿತು.
                         ತಲಕಳ ಮತ್ತು ಕದ್ರಿ ಮೇಳಗಳಲ್ಲಿ ತಲಾ ಒಂದು ವರ್ಷ ತಿರುಗಾಟ ನಡೆಸಿ ಕಳೆದ ಮೂವತ್ತು ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಹುಟ್ಟಿಕೊಂಡ ಫುಟ್ಬಾಲ್ ನಂಟು ಊರಿಗೆ ಬಂದರೂ ಕೋಟ್ಯಾನ್‍ರನ್ನು ಬಿಡಲಿಲ್ಲ. ಸರಕಾರಿ ಕಾಲೇಜು ಮಂಗಳೂರು, ಕೆಎಂಸಿ ಫುಟ್ಬಾಲ್ ತಂಡ ಮತ್ತು ಸ್ಪೋರ್ಟಿಂಗ್ ಕ್ಲಬ್‍ನಲ್ಲಿ ಕೋಚ್ ಆಗಿ ತರಬೇತಿ ನೀಡಿದರು. ಅನೇಕ ಸನ್ಮಾನ ಗೌರವಗಳನ್ನು ಪಡೆದುಕೊಂಡರು. ಸದಾ ನಗುನಗುತ್ತಾ ಎಲ್ಲರನ್ನೂ ಮಾತನಾಡಿಸುವ ಶ್ರೀ ಲಕ್ಷ್ಮಣ ಕೋಟ್ಯಾನ್ ಸರಳ, ಸಜ್ಜನ, ನಿಗರ್ವಿ ಕಲಾವಿದ. ಯಾವ ವೇಷವನ್ನೂ ನಿರ್ವಹಿಸಬಲ್ಲರು. ವರ್ಷವಿಡಿ ಒಂದೇ ಸೆಟ್ಟಿನಲ್ಲೇ ತಿರುಗಾಟ ಮಾಡುತ್ತೇನೆ ಎಂಬ ಹಟಕ್ಕೆ ಬೀಳುವವರಲ್ಲ. ಅನಿವಾರ್ಯವಾದರೆ ಸಂಚಾಲಕರ ಅಪ್ಪಣೆಯಂತೆ ಆರು ಮೇಳಗಳಲ್ಲಿ ಯಾವ ಮೇಳದಲ್ಲೂ ವೇಷ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಶ್ರೀ ಲಕ್ಷ್ಮಣ ಕೋಟ್ಯಾನ್ ಸಾಂಸಾರಿಕವಾಗಿಯೂ ಕಲಾವಿದನಾಗಿಯೂ ತೃಪ್ತರು. ಮಡದಿ ಶ್ರೀಮತಿ ಚಂದ್ರಾವತಿ ಗೃಹಣಿ. ಮಗಳು ಮಂಜುಳಾ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುತ್ತಾರೆ. ಪ್ರಸ್ತುತ ಪಾಂಪೈ ಕಾಲೇಜಿನಲ್ಲಿ ಉಪನ್ಯಾಸಕಿ. ಶ್ರೀ ಲಕ್ಷ್ಮಣ ಕೋಟ್ಯಾನ್‍ರು ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ. ಅವರಿಗೆ ಸಕಲ ಭಾಗ್ಯಗಳನ್ನು ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು.ು


- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್