ಶ್ರೇಷ್ಠ ಮದ್ದಳೆಗಾರ ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ

                ಅನುಪಮವಾದ ಶ್ರೇಷ್ಠವಾದ ಕಲೆ ನಮ್ಮ ಹೆಮ್ಮೆಯ ಯಕ್ಷಗಾನ. ಆಟ, ಕೂಟಗಳಲ್ಲಿ ‘ಹಿಮ್ಮೇಳ’ ಮತ್ತು ‘ಮುಮ್ಮೇಳ’ ಎಂಬ ಎರಡು ವಿಭಾಗಗಳು. ಹಿಮ್ಮೇಳ ಪ್ರಧಾನವೋ?  ಮುಮ್ಮೇಳ ಪ್ರಧಾನವೋ? ಎಂದು ಕೆಲವರು ಪ್ರಶ್ನಿಸುವುದುಂಟು. ಯಕ್ಷಗಾನವು ಒಂದು ಸಮಷ್ಠಿಕಲೆ. ಎಲ್ಲವೂ ಪ್ರಧಾನವೆ. ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ರಂಜಿಸುವುದು. ಈ ಸಂದರ್ಭದಲ್ಲಿ ಹಿರಿಯ ಶ್ರೇಷ್ಠ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಮಾತುಗಳು ನೆನಪಾಗುತ್ತದೆ. ‘‘ಯಶಸ್ವಿ ಪ್ರದರ್ಶನಕ್ಕೆ ಬೇಕು... ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ’’ ಎಂಬ ತಲೆಬರಹದಡಿಯಲ್ಲಿ ಲೇಖನವೊಂದನ್ನು ಯಕ್ಷದೀಪ ಪತ್ರಿಕೆಗಾಗಿ ಬರೆದಿದ್ದರು. ಈ ಲೇಖನದಲ್ಲಿ ಭಾಗವತನ, ಮದ್ದಳೆಗಾರನ, ವೇಷಧಾರಿಗಳ ಸ್ಥಾನ ಮತ್ತು ಕರ್ತವ್ಯಗಳನ್ನು ಸರಳವಾಗಿ ಮನಮುಟ್ಟುವಂತೆ ಅವರು ತಿಳಿಯಪಡಿಸಿದ್ದಾರೆ.
ಯಕ್ಷಗಾನಕ್ಕೆ ಭಾಗವತರೇ ನಿರ್ದೇಶಕರು. ಅವರ ನಡೆಯನ್ನು ವಾದಕರು ಅನುಸರಿಸುತ್ತಾರೆ. ಅವರನ್ನು ಅನುಸರಿಸಿ ವೇಷಧಾರಿಗಳು ಕುಣಿಯುತ್ತಾರೆ, ಹಾಡಿನ ನಂತರ ಅದರೊಳಗಿರುವ ವಿಚಾರಗಳನ್ನು ಮಾತಿನ ಮೂಲಕ ಪ್ರಕಟಿಸುತ್ತಾರೆ. ಹಾಗಾಗಿ ಮುಮ್ಮೇಳಕ್ಕಿಂತ ಹಿಮ್ಮೇಳವೇ ಪ್ರಧಾನವಾದುದು. ಭಾಗವತರ, ಮದ್ದಳೆಗಾರರ ಸ್ಥಾನವು ಶ್ರೇಷ್ಠವಾದುದು. ವೇಷಧಾರಿಗಳು ರಂಗಪ್ರವೇಶ ಮಾಡುವಾಗ ಅವರಿಗೆ ನಮಸ್ಕರಿಸಿ ಬರುವುದನ್ನು ನಾವು ಕಾಣುತ್ತೇವೆ. ರಂಗವನ್ನು ಪ್ರವೇಶಿಸಿದ ನಂತರ ಸಭಾವಂದನೆಯನ್ನು ಮಾಡುತ್ತಾರೆ. ಮುಮ್ಮೇಳ ಕಲಾವಿದರೂ ಅವರದ್ದೇ ಆದ ಸ್ಥಾನ ಗೌರವವನ್ನು ಹೊಂದಿರುತ್ತಾರೆ. ಅರ್ಹತೆಯನ್ನು ಹೊಂದಿ ಆ ಸ್ಥಾನವನ್ನು ಪಡೆದು ಹಿಮ್ಮೇಳ, ಮುಮ್ಮೇಳದ ಕಲಾವಿದರು ಪ್ರಾಮಾಣಿಕರಾಗಿ ಕಲಾಸೇವೆಯನ್ನು ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಯಕ್ಷಗಾನವು ಗೆಲ್ಲುತ್ತದೆ. ಪ್ರದರ್ಶನವು ರಂಜಿಸುತ್ತದೆ. ಹಾಗಾದಲ್ಲಿ ಮಾತ್ರ ಕಲಾವಿದರು ಗೌರವಿಸಲ್ಪಡುತ್ತಾರೆ.
‘ಮದ್ದಳೆಗಾರ’ ಸ್ಥಾನವು ಯಕ್ಷಗಾನದಲ್ಲಿ ಶ್ರೇಷ್ಠವಾದುದು. ಭಾಗವತನು ಅನನುಭವಿಯಾಗಿದ್ದಲ್ಲಿ ಪ್ರಸಂಗವನ್ನು ಮುನ್ನಡೆಸುವ ಹೊಣೆ ಆತನಿಗಿದೆ. ಪ್ರಸಂಗಜ್ಞಾನ, ರಂಗನಡೆ, ಪ್ರತಿಯೊಂದು ವೇಷಕ್ಕಿರುವ ಲಯ, ಅರ್ಥಜ್ಞಾನವನ್ನೂ ಹೊಂದಿರಬೇಕು. ಆದರೂ ಆ ಶ್ರೇಷ್ಠ ಸ್ಥಾನ ಅವಜ್ಞೆಗೊಳಗಾಗುತ್ತಿದೆಯೇ? ಉಳಿದ ಕಲಾವಿದರಿಗೆ ಸಿಗುವಷ್ಟು ಗೌರವಗಳು ಮದ್ದಳೆಗಾರರಿಗೆ ಸಿಗುತ್ತಿಲ್ಲವೇ? ಗುರುತಿಸುವಲ್ಲಿ ನಾವು ಎಡವಿದ್ದೇವೆಯೇ? ಖಂಡಿತಾ ಹಾಗಾಗಲಾರದು. ನಿಜವಾದ ಯಕ್ಷಗಾನ ಕಲಾಭಿಮಾನಿಗಳು ಗುರುತಿಸುತ್ತಾರೆ. ಯಕ್ಷಗಾನ ಕಲೆಯಲ್ಲಿ, ಪ್ರದರ್ಶನಗಳು ರಂಜಿಸುವಲ್ಲಿ ‘ಮದ್ದಳೆಗಾರ’ನ ಸ್ಥಾನವೇನೆಂಬುದನ್ನು ತಿಳಿದವರು ಗೌರವಿಸಿಯೇ ಗೌರವಿಸುತ್ತಾರೆ.
ಪ್ರಸ್ತುತ ಕಲಾಮಾತೆಯ ಸೇವೆಯನ್ನು ಮಾಡುತ್ತಿರುವ ಶ್ರೇಷ್ಠ ಮದ್ದಳೆಗಾರರಲ್ಲಿ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳೂ ಒಬ್ಬರು.
ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ

ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳು ಪ್ರಸ್ತುತ ಕಟೀಲು ಮೇಳದ ಮದ್ದಳೆಗಾರರು. ‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್ಟರ ಶಿಷ್ಯ. (ಕುರಿಯ ಗಣಪತಿ ಶಾಸ್ತ್ರಿ, ಗೋಪಾಲಕೃಷ್ಣ ಕುರುಪ್, ಪೆರುವಾಯಿ ನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯರೂ ನೆಡ್ಲೆಯವರ ಗರಡಿಯಲ್ಲಿ ಪಳಗಿದವರು.) ಸುಬ್ರಹ್ಮಣ್ಯ ಶಾಸ್ತ್ರಿಗಳು ಜನಿಸಿದ್ದು ಮಣಿಮುಂಡ ಪೌರೋಹಿತ್ಯ ಮನೆತನದಲ್ಲಿ (1966 ಫೆಬ್ರವರಿ 23). ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್ಲು ಎಂಬಲ್ಲಿ. ತಂದೆ ಸುಬ್ರಹ್ಮಣ್ಯ ಶಾಸ್ತ್ರಿ. ತಾಯಿ ರಮಾದೇವಿ. ಬಣಕಲ್ಲು ಶಾಲೆಯ 7ನೇ ತರಗತಿ ವರೇಗೆ ಓದಿದರು. ಇವರು ಯಕ್ಷಗಾನಕ್ಕೆ ಸೇರಿದ್ದು ಮೊದಲು ವೇಷಧಾರಿಯಾಗಿ! (ಮದ್ದಳೆಗಾರ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಮೊದಲು ವೇಷಧಾರಿಯಾಗಿದ್ದರು) 1979ರಲ್ಲಿ ಶಾಸ್ತ್ರಿಗಳು ಯಕ್ಷಗಾನ ನಾಟ್ಯಾಭ್ಯಾಸಕ್ಕೆ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರವನ್ನು ಸೇರಿದರು. ಯಕ್ಷಗುರು ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯವನ್ನು ಕಲಿತು 2 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾವಿದನಾಗಿ ವ್ಯವಸಾಯ. ನಂತರ 1 ವರ್ಷ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ವೇಷಧಾರಿಯಾಗಿ ತಿರುಗಾಟ ಮಾಡಿದ್ದರು. ನಂತರ ಮತ್ತೆ ಧರ್ಮಸ್ಥಳ ಲಲಿತಕಲಾ ಕೇಂದ್ರಕ್ಕೆ. ನೆಡ್ಲೆ ನರಸಿಂಹ ಭಟ್ಟರಿಂದ ಹಿಮ್ಮೇಳ ಕಲಿಕೆ. ಪುತ್ತೂರು ಮೇಳದಲ್ಲಿ 2 ವರ್ಷ ಮದ್ದಳೆಗಾರನಾಗಿ ಕಲಾವ್ಯವಸಾಯ ಮಾಡಿದರು. ಸುಬ್ರಹ್ಮಣ್ಯ ಶಾಸ್ತ್ರಿಗಳ ನಿಜಪ್ರತಿಭೆ ಪ್ರಕಟಗೊಂಡದ್ದು ಧರ್ಮಸ್ಥಳ ಮೇಳದಲ್ಲಿ. ಕಡತೋಕಾ, ಚಿಪ್ಪಾರು ಅಲ್ಲದೆ ಪ್ರಸಿದ್ಧ ವೇಷಧಾರಿಗಳ ಗರಡಿಯಲ್ಲಿ ಇವರು ಮದ್ದಳೆಗಾರರಾಗಿ ಹೊಳೆದು ಕಾಣಿಸಿಕೊಂಡರು. ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. ಮತ್ತೆ ಅನೇಕ ವರ್ಷಗಳ ಕಾಲ ಸುಬ್ರಹ್ಮಣ್ಯ ಶಾಸ್ತ್ರಿಗಳು ಯಕ್ಷಗಾನ ಕ್ಷೇತ್ರದಿಂದ ದೂರವಾಗಿ ಉಳಿದರು. ಮಾನವನ ಜೀವನವೆಂದರೆ ಹಾಗೆಯೇ ತಾನೆ? ನೋವು, ನಲಿವು, ಕಷ್ಟ, ನಷ್ಟ, ಸುಖ, ದುಃಖ ಎಲ್ಲವನ್ನೂ ಅನುಭವಿಸಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿ ಅಷ್ಟೆ. ಕೆಲವೊಮ್ಮೆ ಸ್ವಯಂಕೃತಾಪರಾಧ, ಕೆಲವೊಮ್ಮೆ ವಂಚನೆಗೊಳಗಾಗಿ, ಅಲ್ಲಾ ದೇವರ ನಿರ್ಣಯವೋ? ಮಾನವನು ಯಾರೂ ಗುರುತಿಸಲಾರದ ಸ್ಥಿತಿಗೆ ತಳ್ಳಲ್ಪಡುತ್ತಾನೆ. ಸುಬ್ರಹ್ಮಣ್ಯ ಶಾಸ್ತ್ರಿಗಳ ಕಲಾಜೀವನ ಮುಗಿಯಿತು. ಯಕ್ಷಗಾನಕ್ಕೆ ಒಬ್ಬ ಉತ್ತಮ ಕಲಾವಿದ ನಷ್ಟವಾದ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕಲಾಮಾತೆ ಅವರನ್ನು ಕಳೆದುಕೊಳ್ಳಲು ಸಿದ್ಧಳಿರಲಿಲ್ಲ. ಬಾ... ನನ್ನ ಸೇವೆಯನ್ನು ಮಾಡು ಎಂದು ಕೈಬೀಸಿ ಕರೆದಳು. ಸುಬ್ರಹ್ಮಣ್ಯ ಶಾಸ್ತ್ರಿಗಳು ಮತ್ತೆ ರಂಗದಲ್ಲಿ ವಿಜೃಂಭಿಸುವುದನ್ನು ಕಾಣುವ ಭಾಗ್ಯ ಕಲಾಭಿಮಾನಿಗಳಿಗೆ ಬಂತು. ಪ್ರಸ್ತುತ 10 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಗುರುಗಳಾದ ನೆಡ್ಲೆ ನರಸಿಂಹ ಭಟ್ಟರಂತೆ ವಿನೋದಪ್ರಿಯರಾದ ಶಾಸ್ತ್ರಿಗಳು, ತನ್ನ ಅನುಭವಗಳನ್ನೂ ಘಟನೆಗಳನ್ನೂ ಕೇಳುಗರು ನಗುವಂತೆ ಹೇಳಬಲ್ಲರು. ಇವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದ ವಿಚಾರ ಇದು. ತೆರೆದು ಕಾಣಿಸಿಕೊಳ್ಳುವ ಸ್ವಭಾವವಲ್ಲ ಇವರದು. ಸದಾ ಅಂತರ್ಮುಖಿಯಾಗಿರುವ ಕಾರಣ ಪ್ರಸಿದ್ಧಿಯಿಂದ ದೂರ ಉಳಿದರೇನೋ ಎಂದು ಅನಿಸುತ್ತದೆ.
ಪತ್ನಿ ಜಯಲಕ್ಷ್ಮೀ ಅವರೊಂದಿಗೆ ಮಂಗಳೂರು ತಾಲೂಕು ಕಾವೂರಿನ ಸಮೀಪ ಮರಕಡ ಎಂಬಲ್ಲಿ ವಾಸಿಸುತ್ತಿದ್ದಾರೆ. ಹಿಮ್ಮೇಳ ತರಬೇತುದಾರರಾಗಿ ಶಿಷ್ಯಂದಿರನ್ನೂ ಸಿದ್ಧ ಗೊಳಿಸುತ್ತಿದ್ದಾರೆ. ಮಣಿಮುಂಡ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳ ಕಲಾಜೀವನ ನಿರಂತರವಾಗಿರಲಿ. ಸಂತಸದಿಂದ ಕೂಡಿರಲಿ. ಅವರಿಗೆ ಕಲಾ ಮಾತೆಯು ಸಕಲ ಭಾಗ್ಯಗಳನ್ನು ಕರುಣಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


By - ರವಿಶಂಕರ್ ವಳಕ್ಕುಂಜ
Photo: Internet

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು