‘‘ಕಲಾವಿದನಿಂದ ಕಲಾವಿದರಿಗಾಗಿ’’ - ಶ್ರೀ ಪಟ್ಲ ಸತೀಶ್ ಶೆಟ್ಟಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು
ಕಲಾವಿದನಿಂದ ಕಲಾವಿದರಿಗಾಗಿ ಲೋಕಾರ್ಪಣೆಗೊಂಡ ಸಂಸ್ಥೆಯೇ- ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು. ಖ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟಿಯವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು. ಯಕ್ಷಗಾನ ಕಲಾವಿದರ ಯೋಗಕ್ಷೇಮಕ್ಕಾಗಿ ಮೊತ್ತಮೊದಲು ಸ್ಥಾಪನೆಗೊಂಡ ಸಂಸ್ಥೆ ಎಂಬ ಕೀರ್ತಿಯು ಹೇಗೆ ಯಕ್ಷಗಾನ ಕಲಾರಂಗ ಉಡುಪಿ (ರಿ.) ಈ ಸಂಸ್ಥೆಗೆ ಸಲ್ಲುತ್ತದೆಯೋ ಹಾಗೆಯೇ ಕಲಾವಿದನಿಂದ ಕಲಾವಿದರಿಗಾಗಿ ಸ್ಥಾಪನೆಗೊಂಡ ಸಂಸ್ಥೆ ಎಂಬ ಹೆಗ್ಗಳಿಕೆಯು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಈ ಸಂಸ್ಥೆಗೆ ಯಾವಾಗಲೂ ಸಲ್ಲುತ್ತದೆ. ಕಲಾವಿದನಿಂದ ಕಲಾವಿದರಿಗಾಗಿ ಚಿಗುರೊಡೆದು ಬೆಳೆಯುತ್ತಿರುವ ಏಕಮೇವಾದ್ವಿತೀಯ ಟ್ರಸ್ಟ್ ಇದು. ರಂಗದಲ್ಲಿ ಕಲಾವಿದನಾಗಿ ರಂಜಿಸುವುದರ ಜತೆಗೆ ತಾನು ಕಾಣಿಸಿಕೊಳ್ಳಲು ಕಾರಣವಾದ ಕಲೆಗೆ ಮತ್ತು ಕಲಾವಿದರಿಗಾಗಿ ಕೊಡುಗೆಗಳನ್ನು ನೀಡಬೇಕಾ ದುದು ಕರ್ತವ್ಯವೂ ಹೌದು. ಕೊಂಡುಕೊಂಡರೆ ಸಾಕೆ? ಕೊಡುವ ಮನಸ್ಸು ಬೇಕೇ ಬೇಕು. ಕಷ್ಟಪಟ್ಟು ದುಡಿದು ಸಂಪಾದಿಸಿದ ಸಂಪತ್ತಿನ ಒಂದಂಶವನ್ನು ಕಲೆಗೆ, ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ನೀಡಿ ಮಾನವೀಯತೆಯನ್ನು ಮೆರೆಯುತ್ತಿರುವ ಅನೇಕ ಕಲಾವಿದರನ್ನು ನಮಗೆ ಕಾಣಬಹುದು. ನಾನು ಯಕ್ಷಗಾನ ಕಲಾವಿದನಾಗಿ ಸಂಪಾದಿಸಿದ್ದೇನೆ. ಕಲೆಯ ಹೆಸರಿನಿಂದಲೇ ಜೀವಿಸುತ್ತಿದ್ದೇನೆ ಎಂಬ ನೆನಪು ಅವರಿಗಿದೆ. ಕೊಂಡುಕೊಂಡು, ಕೊಡುವ ಮೂಲಕ ತಾವು ಕೃತಾರ್ಥರಾಗುತ್ತಿದ್ದಾರೆ. ಅಂತವರಲ್ಲಿ ಪ್ರಮುಖರು ಪಟ್ಲ ಸತೀಶ ಶೆಟ್ಟಿಯವರು. ಇವರಿಂದ ಕಲಾವಿದರಿಗಾಗಿ ಈ ತೆರನಾದ ಶ್ರೇಷ್ಠ ಕೊಡುಗೆಯಾದುದು ಕಲಾಭಿಮಾನಿಗಳೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.
ಯಕ್ಷಗಾನ ಪ್ರದರ್ಶನಗಳು ಮೊದಲೆಲ್ಲಾ ಕರ್ನಾಟಕದ ಕರಾವಳೀ ಮತ್ತು ಮಲೆನಾಡು, ಕೇರಳದ ಕಾಸರಗೋಡು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹಾಗಿಲ್ಲ. ವ್ಯಾಪ್ತಿಯು ವಿಸ್ತರಿಸಲ್ಪಟ್ಟಿದೆ. ಈ ಸರ್ವಾಂಗ ಸುಂದರ ಕಲೆಯು ನಾಲ್ಕು ಗೋಡೆಗಳ ನಡುವಿನಿಂದ ನೆಗೆದು ವಿಶ್ವವ್ಯಾಪಿಯಾಗಿದೆ. ದೇಶ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿವೆ. ಅನಿವಾಸಿ ಭಾರತೀಯರೂ, ವಿದೇಶಿಗರೂ ನೋಡಿ ಆನಂದಿಸುತ್ತಿದ್ದಾರೆ. ಕಲಾವಿದರು ವಿದೇಶಕ್ಕೋ, ಬೇರೆ ರಾಜ್ಯಕ್ಕೋ ತೆರಳಿದಾಗ ನಮ್ಮೂರಿನ ಹೆಮ್ಮೆಯ ಕಲಾವಿದರು ಬಂದರೆಂಬ ಸಂತೋಷದಿಂದ ಸ್ಪಂದಿಸುತ್ತಾರೆ. ಪ್ರದರ್ಶನಕ್ಕೆ ಅವಕಾಶ ನೀಡಿ ಸಹಕರಿಸುತ್ತಾರೆ. ನೋಡಿ ಸಂತೋಷ ಪಡುತ್ತಾರೆ. ಕನ್ನಡ ಭಾಷೆ ಬಾರದವರಿಗೂ ಯಕ್ಷಗಾನ ಏನೆಂಬುದು ಅರ್ಥವಾಗುತ್ತಿದೆ. ಕನ್ನಡ ಭಾಷೆ ತಿಳಿಯದವರೂ ಯಕ್ಷಗಾನ ಕಲಾವಿದರಾಗುತ್ತಿದ್ದಾರೆ. ಅಷ್ಟೊಂದು ಕರ್ಷಕ ಶಕ್ತಿಯುಳ್ಳ ವಿಶಿಷ್ಟ ಕಲೆ ಯಕ್ಷಗಾನ. ಗಾನ ಅಥವಾ ಹಾಡುಗಾರಿಕೆಯು ಈ ಕಲೆಯ ಪ್ರಮುಖ ಅಂಗ. ಮುಮ್ಮೇಳದ ಕುಣಿತ ಮತ್ತು ಅಭಿನಯವು ಹಾಡುಗಾರಿಕೆಗೆ ಪೂರಕವಾಗಿರುತ್ತದೆ. ಹಾಡಿಗೆ ಪೋಷಕ ಸ್ಥಾನದಲ್ಲಿರುವ ವಿಚಾರಗಳು- ಚೆಂಡೆ, ಮದ್ದಳೆ, ಶೃತಿ. ಭಾಗವತಿಕೆಯು ಶೃತಿ, ಲಯ, ತಾಳ ಮತ್ತು ರಾಗಗಳ ಆಧಾರದಲ್ಲಿ ನಿಂತಿರುತ್ತದೆ. ಗಾಯಕನಿಗೆ ಯಕ್ಷಗಾನ ಹಾಡುಗಾರಿಕೆಯಲ್ಲಿ ಲಭಿಸುವಷ್ಟು ವಿವಿಧ, ವಿಪುಲ ಅವಕಾಶಗಳು ಬೇರೆ ಯಾವುದೇ ಗಾನ ಪ್ರಕಾರಗಳಲ್ಲೂ ಬಹುಷಃ ಸಿಗಲಾರದು. ತನ್ನದೇ ಶೈಲಿ ಮತ್ತು ಮಾರ್ಗವನ್ನು ಹೊಂದಿ ಮಾರ್ಗಪದ್ಧತಿಯಾಗಿರದೆ, ಪರಿಮಿತವಾಗಿರದೆ, ಅಪರಿಮಿತವಾಗಿದೆ. ಆದರೂ ಕರ್ನಾಟಕ ಸಂಗೀತದ ಪ್ರಭಾವವನ್ನು ಕಾಣಬಹುದು. ಯಕ್ಷಗಾನದ ಮೊದಲ ಪಾತ್ರಧಾರಿಯೇ ಭಾಗವತ. ಪ್ರಬುದ್ಧನಾಗಿರದಿದ್ದರೆ ಪ್ರದರ್ಶನದ ಸೋಲಿಗೆ ಕಾರಣನಾಗುವನು. ಸಮರ್ಥ ಭಾಗವತನು ಯಶಸ್ವೀ ಪ್ರದರ್ಶನಕ್ಕೆ ಕಾರಣ ನಾಗುವನು. ಪ್ರದರ್ಶನದ ಗೆಲುವಿಗೂ, ಸೋಲಿಗೂ ಆತನು ಹೊಣೆ ಹೊರಲೇಬೇಕು. ಪ್ರೇಕ್ಷಕರಿಗೆ ಸಂತೋಷವನ್ನುಂಟುಮಾಡುವ, ಗಾಢವಾದ ಪ್ರಭಾವವನ್ನು ಬೀರುವ ಕುಣಿತಗಳು ಯಕ್ಷಗಾನದಲ್ಲಿವೆ. ಉದಾಹರಣೆಗೆ- ದೀಂಗಿಣ, ಒಡ್ಡೋಲಗ, ನೀರಾಟದ ದೃಶ್ಯ, ವನವಿಹಾರದ ದೃಶ್ಯಗಳು, ಹಾಸ್ಯರಸವನ್ನು ಹೊಮ್ಮಿಸಬಲ್ಲ ಕುಣಿತ, ಅಭಿನಯಗಳು ಮೊದಲಾದವು. ಭಾಗವತರು ಸಮರ್ಥನಾದರೆ ವೇಷಧಾರಿಗಳನ್ನು ಪಾತ್ರೋಚಿತವಾಗಿ ಕುಣಿಸಬಲ್ಲರು. ವೇಷಧಾರಿಗೆ ಭಾವ ಪ್ರಕಟವಾಗಬೇಕಾದರೆ ಹಾಡಿನ ಭಾವವನ್ನು ಭಾಗವತನು ತನ್ನ ಧ್ವನಿಯ ಮೂಲಕ ಪ್ರಕಟಿಸಲೇಬೇಕು. ಹಾಗಾದಾಗ ಕಲಾವಿದರಿಗೆ ಭಾವಪ್ರಕಟವಾಗಿ, ರಸಸಂವಹನವಾಗಿ ಪ್ರೇಕ್ಷಕರಲ್ಲೂ ರಸೋತ್ಪತ್ತಿ ಯಾಗುತ್ತದೆ. ಅಂತಹ ಹಿರಿಯ ಅನೇಕ ಭಾಗವತರುಗಳು ಯಕ್ಷಗಾನ ಹಾಡುಗಾರಿಕೆ ವಿಭಾಗವನ್ನು ಶ್ರೀಮಂತಗೊಳಿಸಿದರು. ಉದಯೋನ್ಮುಖರನೇಕರು ಪ್ರತಿಭಾವಂತರೂ ಆಗಿ ಹಾಡುಗಾರಿಕೆಯಲ್ಲಿ ಮಿಂಚುತ್ತಿದ್ದಾರೆ. ಅವರಲ್ಲೊಬ್ಬರು ಶ್ರೀ ಪಟ್ಲ ಸತೀಶ್ ಶೆಟ್ಟಿಯವರು.
ಶ್ರೀ ಪಟ್ಲ ಸತೀಶ್ ಶೆಟ್ಟಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಟ್ಲದಲ್ಲಿ ಶ್ರೀ ಪಟ್ಲಗುತ್ತು ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳಿಗೆ ಮಗನಾಗಿ 1979 ಆಗಸ್ಟ್ 1ರಂದು ಜನಿಸಿದರು. ವಿಜಯಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿ ಹೈಸ್ಕೂಲು ಮತ್ತು ಪಿ.ಯು.ಸಿ. ಶಿಕ್ಷಣವನ್ನು ಕನ್ಯಾನ ಸರಕಾರೀ ಕಾಲೇಜಿನಲ್ಲಿ ಪೂರೈಸಿದರು. ಯಕ್ಷಗಾನ ಕಲೆಯ ಬಗ್ಗೆ ಜ್ಞಾನವನ್ನು ಹೊಂದಿ ಕಲಾವಿದನಾಗಿಯೂ, ಮೇಳವನ್ನು ನಡೆಸಿಯೂ ಅನುಭವವನ್ನು ಹೊಂದಿದವರು ಪಟ್ಲ ಮಹಾಬಲ ಶೆಟ್ಟರು. ಸಹಜವಾಗಿ ಸತೀಶ್ ಶೆಟ್ಟಿಯವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳನ್ನು ನೋಡಿಯೇ ಬೆಳೆದವರು. ಆಸಕ್ತಿ ಹೆಚ್ಚಿತು. ತಾನೂ ಕಲಾವಿದನಾಗಬೇಕೆಂಬ ಬಯಕೆಯು ಗರಿಕೆದರಿತು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಯಕ್ಷಗಾನ ಹಿಮ್ಮೇಳಕ್ಕೆ ಕೊಡುಗೆಯಾಗಿ ನೀಡಿದ ಶ್ರೇಷ್ಠಗುರು ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆಯನ್ನೂ, ಚೆಂಡೆಮದ್ದಳೆ ವಾದನಕ್ರಮವನ್ನೂ ಅಭ್ಯಸಿಸಿದರು. 1999-2000ನೇ ಇಸವಿಯ ತಿರುಗಾಟದಲ್ಲಿ ಶ್ರೀ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ, ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ 3ನೇ ಮೇಳಕ್ಕೆ ಸಂಗೀತಗಾರನಾಗಿ ಸೇರ್ಪಡೆ. ಅನಿವಾರ್ಯವಾಗಿ ನಂತರ ಯಜಮಾನರ ನಿರ್ದೇಶನದಂತೆ ಆ ವರುಷ ಬಲಿಪ ನಾರಾಯಣ ಭಾಗವತರ ಸಾರಥ್ಯದ 2ನೇ ಮೇಳಕ್ಕೆ ಸೇರಿದರು. ಸಂಗೀತ ಗಾರನಾಗಿ ಪೂರ್ವರಂಗದ ಹಾಡುಗಳಿಗೆ ವಿಶೇಷ ಸೌಂದರ್ಯವನ್ನಿತ್ತು ಬಳಿಕ ಬೆಳಗಿನವರೇಗೂ ಚಕ್ರತಾಳ ಬಾರಿಸುತ್ತಿದ್ದರು. ಬಲಿಪರು ಆಟ ಆಡಿಸುವ ರೀತಿಗಳನ್ನು ಶ್ರದ್ಧೆಯಿಂದ ಗಮನಿಸುತ್ತಾ ಬೆಳೆದರು. ಅಭ್ಯಾಸಿಯಾದವನು ಹೀಗೇ ಇರಬೇಕಾದುದು. ‘ವಿದ್ಯಾತುರಾಣಾಂ ನ ಸುಖಂ ನ ನಿದ್ರಾ.’ ವಿದ್ಯೆ ಕಲಿಯಬೇಕು ಎಂಬ ಹಂಬಲವಿರುವವನು ನಿದ್ದೆ ಮತ್ತು ಸುಖವನ್ನು ಅತಿಯಾಗಿ ಬಯಸಲೇ ಬಾರದು. ತ್ಯಾಗ ಮಾಡಲೇಬೇಕು. ಆಲಸಿ ಯಾದವನು ಅಭಿವೃದ್ಧಿ ಹೊಂದಲು ಎಲ್ಲಿ ಸಾಧ್ಯ? ಹೀಗೆ ಪ್ರದರ್ಶನಗಳನ್ನು ಬೆಳಗಿನ ತನಕ ಶ್ರದ್ಧೆಯಿಂದ ನೋಡಿದ ಪರಿಣಾಮವನ್ನು ಪಟ್ಲ ಸತೀಶ ಶೆಟ್ಟಿಯವರು ಅನುಭವಿಸಿದರು. ಪ್ರಸಂಗನಡೆ, ಅರ್ಥಜ್ಞಾನ, ಆಟ ಆಡಿಸುವ ಕ್ರಮ ಎಲ್ಲವನ್ನೂ ತಿಳಿದುಕೊಂಡರು. ಪೂರ್ವರಂಗಕ್ಕೆ ಪದ್ಯ ಹೇಳುವಾಗ ಇವರ ಹಾಡನ್ನು ಕೇಳುವುದಕ್ಕೆಂದೇ ಪ್ರೇಕ್ಷಕರು ಬರುತ್ತಿದ್ದರು. ಇವರ ಹಾಡನ್ನು ಕೇಳಿದ ಪ್ರೇಕ್ಷಕರು, ಕಲಾವಿದರು ಮುಂದಕ್ಕೆ ಇವರು ಶ್ರೇಷ್ಠ ಭಾಗವತರಾಗುತ್ತಾರೆಂದು ಹೇಳುತ್ತಿದ್ದರು. ಅವರ ಮಾತು ಸುಳ್ಳಾಗಲಿಲ್ಲ. ಆಗ 2ನೇ ಮೇಳದಲ್ಲಿ ಹಿರಿಯ, ಶ್ರೇಷ್ಠ ಮದ್ದಳೆಗಾರರಾದ ಪೆರುವಾಯಿ ನಾರಾಯಣ ಭಟ್ಟರಿದ್ದರು. ಬಲಿಪರೂ, ಪೆರುವಾಯಿ ನಾರಾಯಣ ಭಟ್ಟರೂ ನನ್ನನ್ನು ತಿದ್ದಿ ತೀಡಿದರು. ನನಗೆ ಗುರುಸಮಾನರು ಎಂದು ಹೇಳುವ ಮೂಲಕ ಪಟ್ಲ ಸತೀಶ ಶೆಟ್ಟಿಯವರು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಸತತ ಅಭ್ಯಾಸದಿಂದ ಎಳೆಯ ಪ್ರಾಯದಲ್ಲೇ ಪ್ರಸಿದ್ಧಿಯನ್ನು ಪಡೆದರು. ಪ್ರತಿಭೆಯಿದ್ದವರೆಲ್ಲಾ ಹೊಳೆದು ಕಾಣಿಸಿಕೊಳ್ಳಲಾರರು. ಪ್ರತಿಭೆಯ ಜತೆಯಾಗಿ ಯೋಗಭಾಗ್ಯಗಳು ಮೇಳೈಸಿದಾಗ ಆತ ಪ್ರಸಿದ್ಧನಾಗುತ್ತಾನೆ ಎಂಬುದಕ್ಕೆ ಇವರೇ ಸಾಕ್ಷಿ. ಹತ್ತು ವರುಷಗಳ ಕಾಲ ಕಟೀಲು 2ನೇ ಮೇಳದಲ್ಲಿ ತಿರುಗಾಟ. ಬಲಿಪ ಭಾಗವತರು ನಿವೃತ್ತರಾದಾಗ ಅವರ ಪುತ್ರ ಪ್ರಸಾದ ಬಲಿಪರೂ, ಪಟ್ಲ ಸತೀಶ ಶೆಟ್ಟಿಯವರು 2ನೇ ಮೇಳವನ್ನು ಭಾಗವತರಾಗಿ ಮುನ್ನಡೆಸಿದರು. ಇವರು ಚೆಂಡೆ ಬಾರಿಸಬಲ್ಲರು. ಮದ್ದಳೆಯನ್ನೂ ನುಡಿಸಬಲ್ಲರು. ಹಿಮ್ಮೇಳದ ಸರ್ವಾಂಗಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿ ಸೊಗಸಾಗಿ ಪ್ರಸಂಗವನ್ನು ಮುನ್ನಡೆಸಬಲ್ಲರು. ವಿದ್ವಾಂಸರಾದ ಶಿಮಂತೂರು ಶ್ರೀ ನಾರಾಯಣ ಶೆಟ್ಟರಿಂದಲೂ ಅನುಭವಗಳನ್ನು ಹೊಂದಿ, ಅವರ ಮೆಚ್ಚುಗೆಗೂ ಪಾತ್ರರಾದರು. ಇದು ವೇಗದ ಯುಗ. ಮನೋರಂಜನೆಗಾಗಿ ಅನೇಕ ಮಾಧ್ಯಮಗಳಿವೆ. ಯಕ್ಷಗಾನಕ್ಕೆ ತೊಂದರೆಯಾದೀತೇ ಎಂಬ ಭಯವು ಕಾಡಿದ್ದರೆ ತಪ್ಪಲ್ಲ. ಆದರೂ ಅನೇಕ ಹಿಮ್ಮೇಳ ಮುಮ್ಮೇಳ ಕಲಾವಿದರು ತಮ್ಮ ವಿಶಿಷ್ಟ ಶೈಲಿಯಿಂದ, ಕೊಡುಗೆಗಳಿಂದ ಪ್ರೇಕ್ಷಕರು ಯಕ್ಷಗಾನದಿಂದ ದೂರವಾಗದಂತೆ ನೋಡಿ ಕೊಂಡರು. ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದರು. ಅಂತವರಲ್ಲಿ ಪಟ್ಲ ಸತೀಶ ಶೆಟ್ಟಿಯವರು ಒಬ್ಬರು. 2010ನೇ ಇಸವಿ ಕಟೀಲು 5ನೇ ಮೇಳ ಆರಂಭವಾಯಿತು. ಅಲ್ಲಿಂದ 2017ರ ವರೇಗೆ 7 ವರ್ಷಗಳು 5ನೇ ಮೇಳದಲ್ಲಿ, ಕಳೆದ ವರ್ಷದಿಂದ 4ನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಪಟ್ಲ ಸತೀಶ ಶೆಟ್ಟಿಯವರು ವ್ಯವಸಾಯ ಮಾಡುತ್ತಿದ್ದಾರೆ. ಹೀಗೆ 19 ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ. ಕಿರಿಯ ಸಮಯದ ಅವಧಿಯಲ್ಲಿ ಹಿರಿದಾದುದನ್ನು ಸಾಧಿಸಿದ್ದಾರೆ. ಅಲ್ಲದೆ ತೆಂಕು ಬಡಗು ಎಂಬ ಭೇದವಿಲ್ಲದೆ ಅಶಕ್ತ ಕಲಾವಿದರ ಕಷ್ಟಕ್ಕೆ ಸ್ಪಂದಿಸಲು, ಅವರ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಸದುದ್ದೇಶದಿಂದ, ಸಮಾನಮನಸ್ಕ ಬಂಧುಗಳ ಸಹಕಾರದೊಂದಿಗೆ ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.)’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 2015ನೇ ಇಸವಿ ಸೆಪ್ಟಂಬರ್ ತಿಂಗಳಿನಲ್ಲಿ ಈ ಟ್ರಸ್ಟ್ ಶ್ರೀ ಕ್ಷೇತ್ರ ಕಟೀಲಿನಲ್ಲಿ ಆರಂಭವಾಯಿತು. ಅದೇ ದಿನ ಹನ್ನೊಂದು ಮಂದಿ ಅಶಕ್ತ ಕಲಾವಿದರಿಗೆ ತಲಾ 50,000 ರೂಪಾಯಿಗಳ ಧನಸಹಾಯ ಮಾಡಲಾಗಿತ್ತು. ಆರಂಭದ ವರ್ಷದಲ್ಲೇ ಕಲಾವಿದರಿಗೆ ಇಷ್ಟು ದೊಡ್ಡ ಮೊತ್ತ ನೀಡಿ ನೆರವಾದುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಯೋಜನೆಗಳು ಮುಂದುವರಿಯುತ್ತಾ ಅನಾರೋಗ್ಯದಿಂದ, ಬಡತನದಿಂದ ಬಳಲುತ್ತಿರುವ, ಅಕಾಲ ಮರಣಕ್ಕೆ ತುತ್ತಾದ ಕಲಾವಿದರ ಕುಟುಂಬಕ್ಕೆ ಟ್ರಸ್ಟ್ ಸ್ಪಂದಿಸಿತು. ಕಳೆದ ಮೂರು ವರ್ಷಗಳಿಂದ ಈ ಸತ್ಕಾರ್ಯಗಳು ನಡೆಯುತ್ತಾ ಇವೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಲು ಹಲವಾರು ಕಡೆ ಉಪಸಮಿತಿಗಳನ್ನೂ ರಚಿಸಲಾಯಿತು. ದೇಶ ವಿದೇಶಗಳಲ್ಲಿ ಮಹಿಳಾ ಘಟಕವೂ ಸೇರಿದಂತೆ ಒಟ್ಟು ಮೂವತ್ತೆರಡು ಘಟಕಗಳು ಕಾರ್ಯಾಚರಿಸುತ್ತಿವೆ. ಅಮೇರಿಕಾ, ದುಬೈ, ಮಸ್ಕತ್, ಕತಾರ್‍ಗಳಲ್ಲೂ ಘಟಕಗಳು ಸ್ಥಾಪಿಸಲ್ಪಟ್ಟಿವೆ. 2019 ಫೆಬ್ರವರಿ ತಿಂಗಳಿನಲ್ಲಿ ಬಹ್ರೈನ್ ನಗರದಲ್ಲೂ ಘಟಕವು ಆರಂಭವಾಗಲಿದೆ. ಅಲ್ಲದೆ 2016ರಿಂದ ಪ್ರತಿವರ್ಷವೂ ‘ಯಕ್ಷಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮ ನಡೆಯುತ್ತಿದ್ದು ಪಟ್ಲ ಪ್ರಶಸ್ತಿಯನ್ನೂ ನೀಡಲಾಗುತ್ತಿದ್ದು, ಸಂಸ್ಥೆಯು 2016ರಲ್ಲಿ ಖ್ಯಾತ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟರಿಗೂ, 2017ರಲ್ಲಿ ಶ್ರೀ ಬಲಿಪ ನಾರಾಯಣ ಭಾಗವತರಿಗೂ, 2018ರಲ್ಲಿ ವಿದ್ವಾಂಸರಾದ ಶಿಮಂತೂರು ಶ್ರೀ ನಾರಾಯಣ ಶೆಟ್ಟರಿಗೂ ಪಟ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ‘ಪಟ್ಲ ಯಕ್ಷಾಶ್ರಯ’ ಯೋಜನೆಯ ಅಡಿಯಲ್ಲಿ ಬಡ ಕಲಾವಿದರಿಗೆ ಮೂರು ಮನೆಯನ್ನು ನಿರ್ಮಿಸಿ ಕೊಡಲಾಗಿದ್ದು, ನೂರು ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಟ್ರಸ್ಟ್ ಹೊಂದಿದೆ. ಈ ವರೇಗೆ ಒಟ್ಟು ನಾಲ್ಕು ಕೋಟಿ ರೂಪಾಯಿಗಳಿಗೂ ಮಿಕ್ಕಿ ಧನಸಹಾಯವನ್ನು ಕಲಾವಿದರಿಗೆ ನೀಡಲಾಗಿದೆ. ಸಾಮಾಜಿಕ ಮುಖಂಡರು, ಉದ್ಯಮಿಗಳು, ಗಣ್ಯರು, ಕಲಾಭಿಮಾನಿಗಳ ಸಹಕಾರದಿಂದ ಸಂಸ್ಥೆಯು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ ಎಂಬುದು ಪಟ್ಲ ಸತೀಶ ಶೆಟ್ಟಿಯವರು ಮನದ ಮಾತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಮತ್ತು ಶ್ರೀ ಪಟ್ಲ ಸತೀಶ್ ಶೆಟ್ಟಿಯವರಿಂದ ಇನ್ನಷ್ಟು ಸೇವಾಕಾರ್ಯಗಳು ನಡೆಯಲಿ. ಆ ನಿಟ್ಟಿನಲ್ಲಿ ಶ್ರೀ ದೇವರ ಅನುಗ್ರಹವು ಸದಾ ಇರಲಿ. ಕಲಾಭಿಮಾನಿಗಳ ಪರವಾಗಿ ಶುಭ ಹಾರಯಿಕೆಗಳು. ು
- ರವಿಶಂಕರ್ ವಳಕ್ಕುಂಜ

ಪಟ್ಲ ಸತೀಶ್ ಶೆಟ್ಟಿ

Comments
Post a Comment