ಆಟ-ಕೂಟಗಳ ಸರದಾರ ಪೆರ್ಮುದೆ ಜಯಪ್ರಕಾಶ ಶೆಟ್ಟಿ (ಕುಡಾಲು ಭಂಡಾರಗುತ್ತು)
ಯಕ್ಷಗಾನ ಎಂಬ ಸರ್ವಾಂಗ ಸುಂದರ, ಶ್ರೇಷ್ಠ ಕಲೆಯಲ್ಲಿ ಯಾವ ಕಲಾವಿದನೂ ಪರಿಪೂರ್ಣನಾಗಲು ಸಾಧ್ಯವಿಲ್ಲ. ಅದು ಸಾಗರಸದೃಶವಾದುದು. ಈಜಿ ದಡ ಸೇರಲೂ ಯಾರೂ ಶಕ್ಯರಲ್ಲ. ಈಜುತ್ತಾ ಇರಬೇಕು ಅಷ್ಟೆ. ಯಕ್ಷಗಾನವು ಒಂದು ಸಿಂಧು. ಕಲಾವಿದರು ಅದರೊಳಗಿರುವ ಬಿಂದುಗಳು. ಇದು ಕಲಾವಿದರ ಸಹಿತ ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಅಭಿರುಚಿಗೆ ತಕ್ಕಂತೆ ಆಯ್ಕೆಗಂತೂ ಅವಕಾಶಗಳಿವೆ. ಭಾಗವತನಾಗಿ, ಮದ್ದಳೆಗಾರನಾಗಿ, ಹಾಸ್ಯಗಾರನಾಗಿ, ಸ್ತ್ರೀವೇಷಧಾರಿಯಾಗಿ, ಪುಂಡುವೇಷಧಾರಿ, ಕಿರೀಟವೇಷಧಾರಿಯಾಗಿ ತಾನು ಗಂಡುಕಲೆಯ ಒಂದು ಅಂಗವಾಗಿ ಬೆಳೆಯಲು ಅವಕಾಶ ಸಿಕ್ಕಿದುದಕ್ಕಾಗಿ ಕಲಾವಿದನು ಸಂತೋಷಪಡಬೇಕು. ನಿರಂತರ ಕಲಿಕೆ, ಅರ್ಪಣಾಭಾವದಿಂದ ಕಲಾಸೇವೆಯನ್ನು ಮಾಡಿದ ಕಲಾವಿದರನ್ನು ಕಲಾಮಾತೆಯು ಖಂಡಿತಾ ಅನುಗ್ರಹಿಸುತ್ತಾಳೆ. ಯಕ್ಷಗಾನದಲ್ಲಿ ಆಟ, ಕೂಟಗಳೆಂಬ ಎರಡು ಪ್ರಕಾರಗಳು. ಪ್ರತಿಭೆ, ಸಾಮರ್ಥ್ಯ ಇದ್ದರೂ ತಾಳಮದ್ದಳೆಯತ್ತ ಆಸಕ್ತಿ ವಹಿಸದೆ ವೇಷಧಾರಿಯಾಗಿ ಅನೇಕರು ಕಲಾಸೇವೆಯನ್ನು ಮಾಡಿದರು. ಕೆಲವರಿಗೆ ತಾಳಮದ್ದಳೆ ಕ್ಷೇತ್ರದಲ್ಲಿ ಮಾತ್ರ ಒಲವು. ಆಟ-ಕೂಟಗಳೆರಡರಲ್ಲೂ ಸಮಾನವಾಗಿ ಭಾಗವಹಿಸಿದ ಕಲಾವಿದರನೇಕರು. ಶೇಣಿ ಸಾಮಗ ಪರಂಪರೆಯವರಂತೂ ಎರಡೂ ವಿಭಾಗಗಳಲ್ಲಿ ವಿಜೃಂಭಿಸಿದರು. ಶೇಣಿ ಮತ್ತು ರಾಮದಾಸ ಸಾಮಗರಂತವರು ನಾಟ್ಯದಲ್ಲಿ ಪ್ರಬುದ್ಧರಾಗಿರಲಿಲ್ಲ. ಆದರೂ ಮಾತು ಮತ್ತು ಭಾವನೆಗಳ ಮೂಲಕವೇ ಅವರು ದೃಶ್ಯ ಮತ್ತು ಪಾತ್ರಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಿದ್ದರು. ಕುಂಬಳೆ ಸುಂದರ ರಾಯರೂ ಕೂಡಾ. ಹಾಗೆಂದು ಇವರುಗಳು ಕುಣಿಯದೆ ಸುಮ್ಮನೆ ನಿಂತವರೂ ಅಲ್ಲ. ರಂಗದಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ರಂಗಸ್ಥಳದಲ್ಲಿ ಕುಣಿಯದೇ ನಿಂತು ಮಾತನಾಡಿದರೂ ಇವರನ್ನೆಲ್ಲಾ ಪ್ರೇಕ್ಷಕರು ವೇಷಧಾರಿಗಳೆಂದು ಒಪ್ಪಿಕೊಂಡರು. ಮಾತಿನ ಮೂಲಕವೇ ಪಾತ್ರವನ್ನು ಚಿತ್ರಿಸುವ ಕಲೆಯು ಅವರಿಗೆ ಕರಗತವಾಗಿತ್ತು. ಶಿಲ್ಪಿಯ ಕೈಯಲ್ಲಿ ಶಿಲೆಯು ಶಿಲ್ಪವಾಗುವಂತೆ ಇವರು ಪಾತ್ರಗಳನ್ನು ಚಿತ್ರಿಸುತ್ತಿದ್ದ ರೀತಿಗೆ ಕಲಾಭಿಮಾನಿಗಳು ತಲೆದೂಗಿದರು. ಹಾಗಾಗಿ ಆಟ-ಕೂಟಗಳ ಕಲಾವಿದರೆಂದು ಖ್ಯಾತರಾದರು. ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರಿಗೂ ಈ ಸಾಮರ್ಥ್ಯವಿತ್ತು. ಆಟದಲ್ಲಿ ವೇಷ ಮಾಡುತ್ತಾ ಮಾತುಗಾರಿಕೆಯತ್ತಲೂ ಗಮನಹರಿಸಿ ಹಂತ ಹಂತವಾಗಿ ಬೆಳೆದ ಕಲಾವಿದ ತಾಳಮದ್ದಳೆಯಲ್ಲಿ ಸುಲಭವಾಗಿ ಅರ್ಥ ಹೇಳಬಲ್ಲ- (ಪ್ರಯತ್ನಿಸಿದರೆ, ಆಸಕ್ತಿ ಇದ್ದರೆ) ಯಾಕೆಂದರೆ ಪ್ರಸಂಗಜ್ಞಾನ, ರಂಗನಡೆ ಪಾತ್ರದ ಸ್ವಭಾವ ಇವುಗಳ ಬಗ್ಗೆ ಆತ ಜ್ಞಾನವನ್ನು ಹೊಂದಿರುತ್ತಾನೆ. ಅಂತಹ ಕಲಾವಿದ ರಂಗದಲ್ಲಿ ಪ್ರತ್ಯೇಕವಾಗಿ ಗುರುತಿಸಿಯೂ, ಗುರುತಿಸಲ್ಪಡುತ್ತಾನೆ. ಇಂದು ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆ ಎಂಬ ಎರಡೂ ವಿಭಾಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲಾವಿದರನೇಕರಿದ್ದಾರೆ. ಕೆಲವರು ಅನುಭವಿಗಳಾಗಿ ಮೆರೆಯುತ್ತಿದ್ದರೆ, ಉದಯೋನ್ಮುಖರೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಆಟ-ಕೂಟಗಳೆರಡರಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಕಲಾವಿದರಲ್ಲೊಬ್ಬರು ಪೆರ್ಮುದೆ ಜಯಪ್ರಕಾಶ ಶೆಟ್ಟಿ. (ಕುಡಾಲು ಭಂಡಾರಗುತ್ತು) ಪ್ರಸ್ತುತ ಶ್ರೀ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳ ಗ್ರಾಮದ ಕುಡಾಲುಗುತ್ತು ಮನೆಯಲ್ಲಿ 1975ನೇ ಇಸವಿ ಎಪ್ರಿಲ್ 26ನೇ ತಾರೀಕಿನಂದು ಕುಡಾಲುಗುತ್ತು ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾವತಿ ಶೆಟ್ಟಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಬಾಲಕೃಷ್ಣ ಶೆಟ್ಟಿಯವರು ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹೆಚ್ಚಾಗಿ ಹೆಣ್ಣುಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳನ್ನು ನಿರ್ವಹಿಸುತ್ತಿದ್ದರಂತೆ. ಇವರ ಸೋದರಮಾವ ಕುಡಾಲುಗುತ್ತು ಬಾಬು ಶೆಟ್ಟಿಯವರೂ ಹವ್ಯಾಸೀ ಅರ್ಥಧಾರಿಯಾಗಿದ್ದರು. ಅಲ್ಲದೆ ಯಕ್ಷಗಾನದ ಸರ್ವಾಂಗಗಳನ್ನೂ ತಿಳಿದಿದ್ದರು. ಖ್ಯಾತ ಕಲಾವಿದರಾದ ಗುಂಪೆ ರಾಮಯ್ಯ ರೈಗಳೂ (ತಂದೆಯ ಮಾವ), ಪೆರುವಾಯಿ ನಾರಾಯಣ ಶೆಟ್ಟಿಯವರೂ (ಗುರು ಮತ್ತು ಮಾವ) ಜಯಪ್ರಕಾಶ ಶೆಟ್ಟಿಯವರ ಬಂಧುಗಳೇ ಆಗಿದ್ದರು. 4ನೇ ತರಗತಿಯವರೇಗೆ ಕುಡಾಲು ಶಾಲೆಯಲ್ಲಿ ಓದು. 5ರಿಂದ 10ನೇ ತರಗತಿ ವರೇಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಸ್ಕೂಲಿನಲ್ಲಿ ಓದುತ್ತಿರುವಾಗ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ಇವರ ತಂದೆಯ ಸೋದರಮಾವ ಕುಡಾಲು ಬಾಬು ಶೆಟ್ಟಿಯವರು ಪೆರ್ಮುದೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ವಾರಕ್ಕೊಂದು ಕೂಟ ನಿರಂತರ ನಡೆಯುತ್ತಿತ್ತು. ಪೂಕಳ ಲಕ್ಷ್ಮೀನಾರಾಯಣ ಭಟ್, ಶಂಕರ ರೈ ಬಾಡೂರು (ಭಾಗವತರು), ಧರ್ಮತ್ತಡ್ಕ ಸುಬ್ರಾಯ ಆಚಾರ್ಯ, ಮಹಾಲಿಂಗ ಪಾಟಾಳಿ, ದಾಸನಡ್ಕ ರಾಮ ಕುಲಾಲ್ ಮೊದಲಾದವರು ಖಾಯಂ ಕಲಾವಿದರು. ಕೆಲವೊಮ್ಮೆ ದೂರದೂರಿನ ಹಿರಿಯ ಕಲಾವಿದರೂ ಅತಿಥಿಗಳಾಗಿ ಬರುತ್ತಿದ್ದರು.
ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಪ್ರತಿ ಕಾರ್ಯಕ್ರಮಕ್ಕೂ ತೆರಳಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಭಾಗವಹಿಸುವ ಆಸಕ್ತಿಯಿಂದ ಹೋದುದು ಅಲ್ಲ. ಮನೆಯಲ್ಲಿ ಬಡತನವಿತ್ತು. ಹೊಟ್ಟೆ ತುಂಬಿಸಬೇಕಲ್ಲ. ತಾಳಮದ್ದಳೆ ನಡೆಯುತ್ತಿರುವಾಗ ಅಲ್ಲಿ ಕೊಡುತ್ತಿದ್ದ ಅವಲಕ್ಕಿ ಬಾಳೆಹಣ್ಣಿನ ಆಸೆಯಿಂದ ಹೋಗುತ್ತಿದ್ದರು. ಹೋದವರು ಹಾರ್ಮೋನಿಯಂ ಬಾರಿಸುತ್ತಿದ್ದರು ಮತ್ತು ಗಮನವಿಟ್ಟು ನೋಡುತ್ತಿದ್ದರು. ಅರ್ಥಗಾರಿಕೆಯನ್ನು ಕೇಳುತ್ತಿದ್ದರು. ಪ್ರಸಂಗಜ್ಞಾನ, ಶ್ರುತಿಜ್ಞಾನ, ರಂಗನಡೆಗಳ ಬಗ್ಗೆ ತಿಳಿದುಕೊಳ್ಳಲು ಇದು ಅವಕಾಶವಾಯಿತು ಎಂದು ಹೇಳಿ ಪೆರ್ಮುದೆಯವರು ತನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಾರೆ. ಆಗಲೇ ಮಾತುಗಾರಿಕೆಯತ್ತ ಗಮನಹರಿಸಿದ್ದರು. ಶ್ರೇಷ್ಠ ಅರ್ಥಧಾರಿಗಳು ಮಾತನಾಡುವಾಗ, ಕೇಳುತ್ತಾ ತನಗೂ ಒಳ್ಳೆಯ ಮಾತುಗಾರನಾಗಬೇಕೆಂಬ ಆಸೆಯಾಗುವುದು ಸಹಜವಲ್ಲವೇ? ಪೆರ್ಮುದೆಯವರ ಮನದಲ್ಲೂ ಆ ಬಯಕೆಯು ಚಿಗುರೊಡೆಯಿತು. 5ನೇ ಕ್ಲಾಸಿನಲ್ಲಿ ಓದುತ್ತಿರುವಾಗ ತಾಳಮದ್ದಳೆಯಲ್ಲಿ ಮೊದಲ ಪಾತ್ರವನ್ನು ನಿರ್ವಹಿಸಿದ್ದರು. ಸೀತಾಪಹಾರ ಪ್ರಸಂಗದ ಮಾರೀಚನಾಗಿ. ವೇಷಧಾರಿಯಾಗಿ ಮೊದಲು ರಂಗಪ್ರವೇಶ ಮಾಡಿದ್ದು 7ನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದಾಗ. ಪೆರ್ಮುದೆ ಬಳಿಯ ಗಿಳಿಪಾರೆ ಎಂಬಲ್ಲಿ. ಕೋಟಿ ಚೆನ್ನಯ ಪ್ರಸಂಗದ ಚೆಂಡಾಟದ ಚೆನ್ನಯ್ಯನಾಗಿ (ಬಾಲ ಚೆನ್ನಯ್ಯ). ಕುಡಾಲು ಬಾಬು ಶೆಟ್ಟಿಯವರಿಂದ ಕಲಿತು ವೇಷ ಮಾಡಿದ್ದರು. ಬಾಬು ಶೆಟ್ಟಿಯವರು ಆಗ ಸುಬ್ರಹ್ಮಣ್ಯ ಮೇಳದಲ್ಲಿ ಭಾಗವತರಾಗಿದ್ದರು. ಹೀಗೆ ಪೆರ್ಮುದೆಯವರಿಗೆ ಆಟ-ಕೂಟಗಳೆರಡರಲ್ಲಿ ಆಸಕ್ತಿ ಹೆಚ್ಚಾಯಿತು. ಎಸ್.ಎಸ್. ಎಲ್.ಸಿ. ಓದಿನ ನಂತರ ರಜೆಯಲ್ಲಿ 27 ದಿನಗಳ ಕಾಂತಾವರ ಮೇಳದಲ್ಲಿ ತಿರುಗಾಟವನ್ನೂ ನಡೆಸಿದರು. ಕಲಾವಿದನಾಗಬೇಕೆಂಬ ಇಚ್ಚೆಯೂ ಹುಟ್ಟಿಕೊಂಡಿತು. ನಾಟ್ಯಾಭ್ಯಾಸ ಮಾಡುವ ಹಂಬಲವೂ ಉಂಟಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ ಧರ್ಮಸ್ಥಳ ಲಲಿತಕಲಾ ಕೇಂದ್ರವು ಅನೇಕ ಯಕ್ಷಗಾನ ಕಲಾವಿದರನ್ನು ಸಿದ್ಧಗೊಳಿಸಿದ ಶ್ರೇಷ್ಠ ಸಂಸ್ಥೆ. ಕಲಿಕಾಸಕ್ತ ವಿದ್ಯಾರ್ಥಿಗಳನ್ನು ಸಂದರ್ಶನಕ್ಕಾಗಿ ದಿನಪತ್ರಿಕೆಯ ಮೂಲಕ ಅವರು ವರ್ಷವೂ ಆಹ್ವಾನಿಸುತ್ತಿದ್ದರು. ಈ ವಿಚಾರವನ್ನು ತಿಳಿದ ಪೆರ್ಮುದೆಯವರು ನಟರಾಜನಾದ ಮಂಜುನಾಥನ ಸನ್ನಿಧಾನದಲ್ಲೇ ನಾಟ್ಯ ಕಲಿಯಬೇಕೆಂಬ ಆಸೆಯನ್ನೂ ವ್ಯಕ್ತಪಡಿಸಿದರು. ಇವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಕಲಿಕಾಕೇಂದ್ರಕ್ಕೆ ಸೇರಿಸಿದವರು ಅಧ್ಯಾಪಕರಾದ ನಡುಗುಡ್ಡೆ ಜಯಂತ ಮಾಸ್ತರ್. ಇವರು ಜಯಪ್ರಕಾಶ ಶೆಟ್ಟಿಯವರ ತಂದೆಯ ಶಾಲಾ ಸಹಪಾಠಿಯಾಗಿದ್ದವರು. ಖ್ಯಾತ ಸ್ತ್ರೀಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರು ಆಗ ಲಲಿತ ಕಲಾ ಕೇಂದ್ರದ ನಾಟ್ಯಗುರುವಾಗಿದ್ದರು. ಕೋಳ್ಯೂರು ಅವರಿಂದ ನಾಟ್ಯಾಭ್ಯಾಸ. ನರೇಂದ್ರ ಮಾಸ್ತರ್ ಅವರಿಂದ ಬಣ್ಣಗಾರಿಕೆಯ ಪಾಠ. ಜತೆಗೆ ಠಾಕೂರ್ ಅವರ ಸಲಹೆ ನಿರ್ದೇಶನಗಳು. ಧರ್ಮಸ್ಥಳ ಪರಿಸರದಲ್ಲಿ ನಡೆಯುತ್ತಿದ್ದ ಆಟ-ಕೂಟಗಳಿಗೆ ಗುರುಗಳಾದ ಕೋಳ್ಯೂರು ರಾಮಚಂದ್ರ ರಾಯರ ಜತೆ ಜಯಪ್ರಕಾಶ ಶೆಟ್ಟಿಯವರೂ ಹೋಗುತ್ತಿದ್ದರು. 1991ನೇ ಸಾಲಿನ ಆ ತಂಡದಲ್ಲಿ 24 ಮಂದಿ ವಿದ್ಯಾರ್ಥಿಗಳಿದ್ದರು. ಅಭ್ಯಾಸ ಮುಗಿದ ನಂತರ 9 ಮಂದಿಯನ್ನು ವಿವಿಧ ಮೇಳದವರು ಆಯ್ಕೆ ಮಾಡಿ ಕರೆದು ಕೊಂಡು ಹೋಗಿದ್ದರಂತೆ. ಕೆಲವರಿಗೆ ಮೇಳದ ತಿರುಗಾಟದ ಆಸಕ್ತಿಯಿರಲಿಲ್ಲ. ‘‘ನನಗೆ ಮೇಳಕ್ಕೆ ಸೇರಬೇಕೆಂಬ ಆಸೆಯಿತ್ತು. ಆದರೆ ಅವಕಾಶ ಸಿಗಲಿಲ್ಲ. ಮಾತುಗಾರಿಕೆಯಲ್ಲಿ ಹಿಡಿತವಿದ್ದರೂ ನಾಟ್ಯದಲ್ಲಿ ಆಗ ನಾನು ಹಿಂದಿದ್ದೆ. ಹಾಗಾಗಿ ಯಾರೂ ಆಯ್ಕೆ ಮಾಡಲಿಲ್ಲ. ದೇವಸ್ಥಾನದತ್ತ ಸಾಗಿ ಮಂಜುನಾಥ ದೇವರ ಬಳಿ ಕಣ್ಣೀರು ಹರಿಸಿ ಬೇಡಿಕೊಂಡೆ. ಶ್ರೀ ದೇವರು ಅನುಗ್ರಹಿಸಿದರು. ಕಟೀಲು ಮೇಳದಲ್ಲಿ ಆಗ ಸಂಗೀತಗಾರರಾಗಿದ್ದ ಇಳಂತಿಲ ಪದ್ಮನಾಭ ಎಂಬವರು ಧೈರ್ಯ ತುಂಬಿದರು. ನನ್ನನ್ನು ಕರೆದೊಯ್ದು ಕಟೀಲು ಮೇಳಕ್ಕೆ ಸೇರುವಂತೆ ಮಾಡಿದರು’’ ಎಂದು ಅಂದಿನ ದಿನಗಳನ್ನು ಪೆರ್ಮುದೆಯವರು ನೆನಪಿಸಿಕೊಳ್ಳುತ್ತಾರೆ.
ಕಟೀಲು ಮೂರು ಮೇಳಗಳು ತಿರುಗಾಟ ನಡೆಸುತ್ತಿದ್ದ ಕಾಲ. ಮೊದಲು 1ನೇ ಮೇಳಕ್ಕೆ ಆಯ್ಕೆಯಾಗಿದ್ದರು. ಆದರೆ ಅನಿವಾರ್ಯವಾಗಿ ಪೆರ್ಮುದೆಯವರನ್ನು 2ನೇ ಮೇಳಕ್ಕೆ ಕಳುಹಿಸಲಾಯಿತು. ಅದೇ ವರ್ಷ ಪೆರುವಾಯಿ ನಾರಾಯಣ ಶೆಟ್ಟಿಯವರು ಮತ್ತೆ ಕಟೀಲು 2ನೇ ಮೇಳಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೆ ಬಲಿಪ ಭಾಗವತರು, ಪೆರುವಾಯಿ ನಾರಾಯಣ ಭಟ್ ಮದ್ದಳೆಗಾರರು, ಕೋಳ್ಯೂರು ನಾರಾಯಣ ಭಟ್ಟರೂ, ಅಜೆಕಾರು ರಾಜೀವ ಶೆಟ್ಟಿಯವರೂ 2ನೇ ಮೇಳದಲ್ಲಿದ್ದರು. ಮೇಳ ಬದಲಾವಣೆಯಾದುದು ಒಳಿತೇ ಆಯಿತು. ಇವರೆಲ್ಲರ ಒಡನಾಟ ಸಿಕ್ಕಿತು. ಕಲಾವಿದನಾಗಿ ಬೆಳೆಯಲು ಅನುಕೂಲವೇ ಆಯಿತು.
ಬಲಿಪ ಭಾಗವತರೂ, ಶ್ರೇಷ್ಠ ಕಲಾವಿದರೂ ಇದ್ದ ಮೇಳ, ಪೆರುವಾಯಿ ನಾರಾಯಣ ಶೆಟ್ಟಿಯವರ ಮರುಪ್ರವೇಶ ಹೀಗೆ ಮೊದಲ ವರ್ಷವೇ ಎರಡು ಭಾಗ್ಯಗಳು ನನಗೆ ಜತೆಯಾಗಿ ಬಂತು ಎಂಬುದು ಜಯಪ್ರಕಾಶ ಶೆಟ್ಟಿಯವರ ಅಭಿಪ್ರಾಯ. ಮೊದಲ 2 ವರ್ಷ ನಿತ್ಯವೇಷದಿಂದ ತೊಡಗಿ ಬೆಳಗಿನ ವರೇಗೂ ಸಣ್ಣಪುಟ್ಟ ವೇಷಗಳು. ತನ್ನ ಕಲಾಜೀವನದ ಆರಂಭದ ದಿನಗಳು ಹೇಗಿದ್ದವು ಎಂಬುದನ್ನು ಪೆರ್ಮುದೆಯವರ ಬಾಯಿಯಿಂದಲೇ ಕೇಳಬೇಕು. ನೋವು ನಲಿವುಗಳೆರಡನ್ನೂ ಅನುಭವಿಸಿದ್ದರು. ಕೇಳಿದರೆ ಅದನ್ನು ನಗುನಗುತ್ತಲೇ ಹೀಗೆ ಹೇಳುತ್ತಾರೆ- ‘‘ಮನೆಯಲ್ಲಿ ಬಡತನ ಇತ್ತು. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ಆಶ್ರಯಿಸಿದೆ. ಇವನಿಗೆ ಆಟ ಬೇಕಾ? ಮಂಗನ ವೇಷಕ್ಕೆ ಆದೀತು ಎಂದು ಹೀಯಾಳಿಸಿದವರೂ ಇದ್ದಾರೆ. ಹಾಗಾಗಿ ಸಾಧಿಸಬೇಕೆಂಬ ಛಲ ಬಂತು. ಸಹಕಾರ ಪ್ರೋತ್ಸಾಹ ನೀಡಿದವರೂ ಇದ್ದಾರೆ. ಆಟ ನೋಡುತ್ತಿದ್ದೆ. ಓದುತ್ತಿದ್ದೆ. ಹಿರಿಯ ಕಲಾವಿದರ ಸೇವೆ ಮಾಡುತ್ತಿದ್ದೆ. ಕಲಿಕೆಯ ವಿಚಾರದಲ್ಲಿ ರಾಜಿ ಇರುತ್ತಿರಲಿಲ್ಲ. ನಿದ್ದೆ ಮಾಡದೆ ಅಭ್ಯಾಸ ಮಾಡುತ್ತಿದ್ದೆ. ಹಾಸ್ಯ, ಸ್ತ್ರೀವೇಷ, ಬಣ್ಣದ ವೇಷಗಳನ್ನು ಬಿಟ್ಟು ಉಳಿದ ಎಲ್ಲಾ ವೇಷಗಳನ್ನೂ ಮಾಡುವ ಅವಕಾಶ ಸಿದ್ಧಿಸಿದೆ. ನಿತ್ಯವೇಷದಿಂದ ಎದುರುವೇಷದ ವರೇಗೆ ಕಟೀಲು ಮೇಳದಲ್ಲೇ ಬೆಳೆದ ಸಂತೋಷ ಇದೆ.’’ ಕಟೀಲು ಮೇಳದ 3ನೇ ತಿರುಗಾಟದಲ್ಲಿ ಪ್ರಸಂಗದ ವೇಷಗಳನ್ನು ಮಾಡಲಾರಂಭಿಸಿದ್ದರು. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಯಕ್ಷ, ದೇವೀ ಪ್ರತ್ಯಕ್ಷೆ ವಿಷ್ಣು, ಸುಗ್ರೀವ ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶ. 5ನೇ ವರ್ಷದ ತಿರುಗಾಟ ಪೂರ್ಣ ವೇಷಧಾರಿ ಯಾಗಿ. ವಿಷ್ಣು, ಜಾಬಾಲಿ, ಅಲ್ಲದೆ ಎಲ್ಲಾ ಪುಂಡುವೇಷ ಮತ್ತು ಕಿರೀಟ ವೇಷಗಳನ್ನೂ ಮಾಡಲಾರಂಭಿಸಿದ್ದರು. ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಸತತ ಅಧ್ಯಯನದಿಂದ ಕ್ಷಿಪ್ರ ಬೆಳವಣಿಗೆ ಹೊಂದಿದವರು. ಪ್ರಹ್ಲಾದ, ಚಂಡ ಮುಂಡರು, ವಿಷ್ಣು, ಕೃಷ್ಣ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಕಿರೀಟ ವೇಷಧಾರಿಯಾಗಿ ತೇರ್ಗಡೆಗೊಂಡರು. 2006ರ ವರೇಗೆ 2ನೇ ಮೇಳದಲ್ಲಿ ವ್ಯವಸಾಯ. 1998ರಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಂಡರು. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಸದ್ರಿ ಕ್ಷೇತ್ರದಲ್ಲಿ ಬೆಳೆದರು. ಇದಕ್ಕೆ ಅವಕಾಶ ನೀಡಿದವರು ಮುಂಬಯಿಯ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು. ಮಳೆಗಾಲದ ಮುಂಬೈ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ನೀಡಿದ್ದರು. ಅಜೆಕಾರು ಯಕ್ಷಬಳಗದ ಖಾಯಂ ಸದಸ್ಯರಾಗಿ ಪೆರ್ಮುದೆಯವರು ಮುಂಬೈ ಕಾರ್ಯಕ್ರಮಗಳಲ್ಲಿ ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಅರ್ಥಗಾರಿಕೆಯ ಬೆಳವಣಿಗೆಗೆ ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರೂ ಕಾರಣರು. ಅವರೊಂದಿಗೆ ಅನೇಕ ಕೂಟಗಳಲ್ಲಿ ಮುಖಾಮುಖಿ ಸಂವಾದದಲ್ಲಿ ಅವಕಾಶಗಳು ಸಿಕ್ಕಿತ್ತು. ‘‘ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರು ಪ್ರೋತ್ಸಾಹಿಸಿದ್ದರು. ರಂಗದ ಹೊರಗೆ ಅಣ್ಣನಂತೆ ಸಹಕರಿಸಿದ್ದಾರೆ’’ ಎಂದು ಹೇಳುವ ಮೂಲಕ ಅವರಿಗೆ ಪೆರ್ಮುದೆಯವರು ಗೌರವವನ್ನು ಸಲ್ಲಿಸುತ್ತಾರೆ.
2006-2007ರ ತಿರುಗಾಟ ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಪೆರ್ಮುದೆಯವರ ಹೆಚ್ಚಿನ ಎಲ್ಲಾ ವೇಷಗಳಿಗೆ ಸಹಕಲಾವಿದನಾಗಿ ಅಭಿನಯಿಸಿದ್ದೇನೆ (ಅತಿಕಾಯ, ಕರ್ಣ, ದಕ್ಷ, ಋತುಪರ್ಣ, ಮಾಗಧ, ಚಕ್ರವರ್ತಿ ದಶರಥ ಪ್ರಸಂಗದ ದಶರಥ, ಹಿರಣ್ಯಕಶ್ಯಪ, ಅರುಣಾಸುರ ಮೊದಲಾದ ಪಾತ್ರಗಳಿಗೆ) ಸಹಕಲಾವಿದರೊಡನೆ ಉತ್ತಮವಾಗಿ ಸಂಭಾಷಿಸುತ್ತಾರೆ ಎಂಬ ಅನುಭವವಾಗಿದೆ. 2007ರಿಂದ ನಿರಂತರ 9 ವರ್ಷ ಹೊಸನಗರ ಮೇಳ, ಮತ್ತೆ 1 ವರ್ಷ ಎಡನೀರು ಮೇಳ. ಈಗ ಹನುಮಗಿರಿ ಮೇಳದಲ್ಲಿ 2ನೇ ವರ್ಷದ ತಿರುಗಾಟ. ಹೀಗೆ- ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಕಳೆದ 27 ವರ್ಷಗಳಿಂದ ವೃತ್ತಿಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಕಟೀಲು ಮೇಳದ ತಿರುಗಾಟದಲ್ಲಿ ಆಸ್ರಣ್ಣ ಬಂಧುಗಳ, ಕಲ್ಲಾಡಿ ವಿಠಲ ಶೆಟ್ಟಿಯವರ ಆಶೀರ್ವಾದ, ಸಹಕಾರಗಳಿತ್ತು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ 2 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ 5 ವರ್ಷ ತಿರುಗಾಟ ನಡೆಸಿದ್ದೇನೆ. ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶವನ್ನು ಕಟೀಲು ಪದ್ಮನಾಭರೂ, ಅನೇಕ ಸಂಘಟಕರೂ ಒದಗಿಸಿದ್ದಾರೆ. ಕಟೀಲು ಮೇಳದ ತಿರುಗಾಟದಲ್ಲಿ ಶಿವಾಜಿ ಶೆಟ್ಟಿಯವರೂ ಸಹಕರಿಸಿದ್ದಾರೆ. ಕಷ್ಟದ ದಿನಗಳಲ್ಲಿ ಸಹಾಯವಿತ್ತವರು. ಕಲಾಫೋಷಕ ಡಾ. ಟಿ. ಶ್ಯಾಮ ಭಟ್ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು. ಮಾನಸಿಕವಾಗಿ ಕುಂದಿರುವಾಗ ಮರೆಯಲಾಗದ ಸಹಾಯ ಮಾಡಿದ್ದಾರೆ. ಧೈರ್ಯತುಂಬಿ ಪ್ರೋತ್ಸಾಹಿಸಿದ್ದಾರೆ. ತಾಳಮದ್ದಳೆ ಕ್ಷೇತ್ರದಲ್ಲಿ ವಾಸುದೇವ ರಂಗಾಭಟ್ಟರೂ ಸಹಕರಿಸಿ, ಪ್ರೋತ್ಸಾಹಿಸಿದ್ದಾರೆ. ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಪ್ರೋತ್ಸಾಹಿಸಿದ್ದಾರೆ. ಪ್ರೀತಿಸಿದ್ದಾರೆ. ಅಲ್ಲದೆ ಹನುಮಗಿರಿ ಮೇಳದ ತಿರುಗಾಟದಲ್ಲಿ ಕಲಾವಿದರೂ, ತೋಡುಗುಳಿ ಮಹಾಬಲ ಭಟ್ಟರೂ, ಅರವಿಂದ ಹೊಳ್ಳರೂ ಪ್ರೋತ್ಸಾಹಿಸಿದ್ದಾರೆ. ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ನಂಬಿದ್ದೇನೆ. ಕಲಾ ಮಾತೆಯು ಅನುಗ್ರಹಿಸಿದ್ದಾಳೆ ಎಂಬ ತೃಪ್ತಿ ಇದೆ. ಯಕ್ಷಗಾನದಲ್ಲಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ನಾನು ಪೂರ್ಣಕಲಾವಿದನಲ್ಲ. ಅರ್ಧ ಕಲಾವಿದ ಎಂಬುದು ಜಯಪ್ರಕಾಶ ಶೆಟ್ಟಿಯವರ ಅನಿಸಿಕೆ. ಪ್ರಸ್ತುತ ಕಿರೀಟ ವೇಷಧಾರಿಯಾದರೂ, ಪುಂಡುವೇಷಗಳನ್ನೂ ಮಾಡುತ್ತಾರೆ. ಇವರ ಅತ್ಯಂತ ಪ್ರಿಯವಾದ ಅತಿಕಾಯ, ಕರ್ಣ, ಋತುಪರ್ಣ (ಕಿರೀಟವೇಷಗಳಲ್ಲಿ), ಭರತ, ಕರ್ಣಭೇದನದ ಕರ್ಣ, ಕೃಷ್ಣ, ವಿಷ್ಣು (ಪುಂಡುವೇಷಗಳಲ್ಲಿ) ಮೊದಲಾದವು ಇವರಿಗೆ ಪ್ರಿಯವಾದ ಪಾತ್ರಗಳು. ಚಂದಗೋಪ, ನಂದಿಶ್ರೇಷ್ಠಿ, ವಾನರ, ಬಪ್ಪಬ್ಯಾರಿ ಮೊದಲಾದ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಿರುತ್ತಾರೆ. ಪುರಾಣಜ್ಞಾನ, ಪ್ರಸಂಗನಡೆಗಳನ್ನು ತಿಳಿದು ಮಾತುಗಾರಿಕೆಯಲ್ಲೂ ಪಳಗಿದ ಕಾರಣ ಕೂಟಗಳಲ್ಲೂ ಬೇಡಿಕೆಯ ಕಲಾವಿದರಿವರು.
ಆಟ-ಕೂಟಗಳ ಸರದಾರ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ವೃತ್ತಿಬದುಕಿನಲ್ಲೂ ಸಾಂಸಾರಿಕವಾಗಿಯೂ ತೃಪ್ತರು. ಪತ್ನಿ ಪ್ರಭಲತ ಗೃಹಿಣಿ. ಇವರು ಮದ್ದಳೆಗಾರ ವಗೆನಾಡು ಶ್ರೀ ಪ್ರಶಾಂತ ಶೆಟ್ಟಿಯವರ ಅಕ್ಕ. ಪೆರ್ಮುದೆ ಜಯಪ್ರಕಾಶ ಶೆಟ್ಟಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಮಗಳು ಪಲ್ಲವಿ ಪ್ರಥಮ ಪಿ.ಯು.ಸಿ. ಓದುತ್ತಿದ್ದಾಳೆ. ಕಿರಿಯ ಪುತ್ರಿ ಪವಿತ್ರ 9ನೇ ತರಗತಿ ವಿದ್ಯಾರ್ಥಿನಿ. ಮಕ್ಕಳಿಬ್ಬರಿಗೂ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ಜಯಪ್ರಕಾಶ ಶೆಟ್ಟಿಯವರಿಂದ ಬಹಳಷ್ಟು ಕಲಾಸೇವೆಯು ನಡೆಯಲಿ. ಆಟ-ಕೂಟಗಳೆರಡರಲ್ಲಿ ಭಾಗವಹಿಸಿ ಪ್ರಸಿದ್ಧರಾಗಲಿ.
ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರಯಿಕೆಗಳು. ು
ಲೇಖನ: ರವಿಶಂಕರ್ ವಳಕ್ಕುಂಜ
ಫೋಟೋ : ರಾಮ್ ನರೇಶ್ ಮಂಚಿ
ಪೆರ್ಮುದೆ ಜಯಪ್ರಕಾಶ ಶೆಟ್ಟಿ

Comments
Post a Comment