ಯಕ್ಷಗಾನ ಪ್ರದರ್ಶನಗಳಲ್ಲಿ ಪರಿವರ್ತನೆ - ಮಾರಕವೋ? ಪೂರಕವೋ
ಅರ್ಹರನ್ನು ಗೌರವಿಸುವುದು ಮಾನವ ಸಹಜ ಗುಣ. ಮಾನವೀಯತೆ ಇರುವವರು ಅದೇ ತೆರನಾಗಿ ವ್ಯವಹರಿಸುತ್ತಾರೆ. ಇದು ಸಂಸ್ಕಾರ. ಸನಾತನಿಗಳು ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ನಮಗೆ ಕೊಡುಗೆಯಾಗಿ ನೀಡಿದ ಸಂದೇಶವದು. ಅನುಗ್ರಹವೂ ಹೌದು. ಅನಪೇಕ್ಷಿತ ವಿಚಾರಗಳು ಬಂದಾಗ ಆಕ್ಷೇಪಿಸುವುದು, ನಮಗೇಕೆ ಆ ವಿಚಾರ? ವಿರೋಧವೇಕೆ ಕಟ್ಟಿಕೊಳ್ಳಬೇಕು? ಎಂದು ಮೌನವಾಗಿ ಸಹಿಸಿಕೊಳ್ಳುವುದು. ಹೀಗೆ ಎರಡೂ ಕ್ರಿಯೆಗಳನ್ನೂ ನಾವು ಮಾಡುತ್ತೇವೆ. ಮಾನವ ಸಹಜ ಗುಣಗಳಿವು. ಆಕ್ಷೇಪಿಸಿದರೆ ಸ್ವಚ್ಛವಾಗಲೂಬಹುದು. ಟೀಕೆಗೊಳಗಾಗಲೂಬಹುದು. ಮೌನವಾಗಿದ್ದರೆ ಸರಿಮಾಡಿಕೊಳ್ಳಲು ಎಲ್ಲಿದೆ ಅವಕಾಶ? ಹೀಗೆ ಕೆಲವೊಂದು ಬಾರಿ ಉಭಯಸಂಕಟಕ್ಕೊಳಗಾಗಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಸ್ಯೆಗಳು ಸಹಜ. ಆದರೂ ಆಡಳಿತ ವರ್ಗವು, ಸಪಾತ್ರರೊಡನೆ, ಆ ಕ್ಷೇತ್ರಕ್ಕೆ ಸಂಬಂಧಪಟ್ಟು, ಇದಮಿತ್ಥಂ ಎಂದು ಹೇಳಬಲ್ಲ ವಿದ್ವಾಂಸರೊಡನೆ ವಿಮರ್ಶಿಸಿ ನಿರ್ಣಯವನ್ನು ಕೈಗೊಳ್ಳುವುದು ಹಿಂದಿನಿಂದಲೂ ನಡೆದು ಬಂದ ರೀತಿ. ಅದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವವರೇ ಹೌದು ನಮ್ಮವರು. ಕೇಳದೆ ನಿರ್ಲಕ್ಷಿಸಿದವರಿಗೆ ಶಿಕ್ಷೆ ಎಂಬ ನಿಯಮವೂ ನಮ್ಮ ಸಮಾಜದ ಪದ್ಧತಿಯಲ್ಲವೇ?
ಎಲ್ಲಾ ಕಲಾಪ್ರಕಾರಗಳಲ್ಲೂ ನಮಗೆ ಗೌರವವಿದೆ. ಪ್ರತಿಯೊಂದು ಕಲೆಯೂ ತನ್ನದೇ ಆದ ಸ್ವರೂಪ ಮತ್ತು ಸೌಂದರ್ಯವನ್ನು ಹೊಂದಿವೆ. ಕಲಾಪ್ರಕಾರಗಳು ಉತ್ತಮ ಸಂದೇಶಗಳನ್ನೂ ಮನೋರಂಜನೆಯನ್ನೂ ನೀಡುತ್ತಾ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವು. ಹಾಗಾಗಿ ನಾವು ಸಮಸ್ತ ಭಾರತೀಯ ಕಲೆಗಳನ್ನು ಗೌರವಿಸುತ್ತೇವೆ. ಅವುಗಳು ಭಾರತೀಯರ ಹೆಮ್ಮೆಯ ಸಂಕೇತ. ಆದರೂ ಯಕ್ಷಗಾನವೆಂಬುದು ‘ಗಂಡುಕಲೆ’ ಎಂದೇ ಪ್ರಸಿದ್ಧವಾಗಿದೆ. ಅದು ಅನುಪಮವಾದ ಕಲೆ. ತುಲನಾತೀತವಾದುದು. ಇಂತಹ ಕಲೆ ಬೇರೊಂದಿಲ್ಲ. ಪಂಡಿತರಿಂದ ಪಾಮರರವರೇಗೆ ಎಲ್ಲರನ್ನೂ ಆಕರ್ಷಿಸಬಲ್ಲ ವಿಶಿಷ್ಠ ಶಕ್ತಿ ಈ ಮೇರುಕಲೆಯೊಳಗಡಗಿದೆ. ಯಕ್ಷಗಾನದಲ್ಲಿ ಏನಿದೆ? ಎಂದು ಕೇಳುವುದಕ್ಕಿಂತ ಏನಿಲ್ಲ? ಎಂದು ಕೇಳಬೇಕು. ಅಂದರೆ ಎಲ್ಲವೂ ಇದೆ. ಗಾಯನವಿದೆ, ವಾದನವಿದೆ, ನರ್ತನವಿದೆ, ಅಭಿನಯವಿದೆ. ಭಾವಗಳನ್ನು ಪ್ರಕಟಿಸುವುದಕ್ಕೆ ವಿಫುಲ ಅವಕಾಶಗಳಿವೆ. ಸಂಭಾಷಣೆಗಳೂ ಇವೆ. ಧರಿಸಿದ ಪೋಷಾಕು, ಕಿರೀಟ, ಆಭರಣಗಳು, ಬಣ್ಣಗಾರಿಕೆಯನ್ನು ನೋಡಿದಾಗಲೇ ಇದು ಇಂತಹ ವೇಷ ಎಂದು ಗುರುತಿಸಬಹುದು. ಉಚ್ಛಾರ ವ್ಯಾಕರಣದೋಷಗಳಿಲ್ಲದ ಶುದ್ಧವಾದ ಭಾಷಾಪ್ರಯೋಗವು ಯಕ್ಷಗಾನದಲ್ಲಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಅಪವಾದವೆಂಬಂತೆ ಕೊರತೆಗಳಿದ್ದರೂ ಸಾಧನೆಯ ಮೂಲಕ ತಿದ್ದಿಕೊಳ್ಳಬೇಕಾದುದು ಕಲಾವಿದರಿಗೆ ಕರ್ತವ್ಯವೂ ಹೌದು. ಯಕ್ಷಗಾನವು ವ್ಯಕ್ತಿ ನಿರ್ಮಾಣವನ್ನು ಮಾಡಬಲ್ಲುದು. ಖಂಡಿತಾ ಆ ಚೈತನ್ಯ ಈ ಮೇರುಕಲೆಗಿದೆ. ಜನರಿಗೆ ಉತ್ತಮ ಸಂದೇಶಗಳನ್ನು ನೀಡುವ ಕಲಾಪ್ರಕಾರ ಇಂತಹ ಉತ್ತಮ ವಿಶೇಷ ವಿಚಾರಗಳನ್ನು ಒಳಗೊಂಡಿರುವ ಕಾರಣವೇ ಇದು ‘ಗಂಡುಕಲೆ’ ಎಂದು ಪ್ರಸಿದ್ಧವಾಗಿರಬೇಕು. ಯಕ್ಷಗಾನದ ಜನಕ ಪಾರ್ತಿಸುಬ್ಬನಿಂದ ಹಿಡಿದು ಅನೇಕ ಕವಿಶ್ರೇಷ್ಠರು ಪ್ರಸಂಗಗಳನ್ನು ರಚಿಸಿ ನಮಗೆ ನೀಡಿದರು. ಅವರುಗಳೆಲ್ಲಾ ವಂದನೀಯರು. ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದ ಸಂಘಟಕರೂ, ಪೋಷಕರೂ, ಪ್ರೇಕ್ಷಕರೂ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಮಿತಿಯೊಳಗೆ ಶ್ರಮಿಸಿದ್ದಾರೆ. ಎಲ್ಲರೂ ಅಭಿನಂದನೀಯರು. ಆದರೂ ಕಲಾಭಿಮಾನಿಗಳು ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡಾಗ ಯಾಕೋ ಯಕ್ಷಗಾನವು ಬೆಳೆಯುತ್ತಿದೆಯೇ? ಕುಸಿಯುತ್ತಿದೆಯೇ? ಎಂಬ ಗೊಂದಲ ಉಂಟಾಗುತ್ತಿದೆ. ಪರಿವರ್ತನೆಯ ಬಗೆಗೆ ಆಡುವ ಮಾತುಗಳವು.
ಇದು ಪರಿವರ್ತನಾಶೀಲ ಪ್ರಪಂಚ. ನಿನ್ನೆ ಇದ್ದಂತೆ ಇಂದಿಲ್ಲ, ಇಂದಿದ್ದಂತೆ ನಾಳೆ ಇರಲಾರದು. ಬದಲಾವಣೆಗಳು ಸಹಜ. ಆದರೆ ಬದಲಾವಣೆಯ ವೇಗ, ಸ್ವರೂಪ, ತೀವ್ರತೆ ಮಿತಿಯಲ್ಲಿದ್ದರೆ ಚಂದ. ಪರಂಪರೆಗೆ, ಮೂಲ ಸ್ವರೂಪಕ್ಕೆ ಧಕ್ಕೆ ಉಂಟುಮಾಡುವ ಬದಲಾವಣೆ ಸಹ್ಯವಲ್ಲ. ಯಕ್ಷರಂಗದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣರ ಮಾತುಗಳು ಅದೆಷ್ಟು ಸೊಗಸಾದುದು- ‘‘ಸುಧಾರಣೆಯೆಂದರೆ ಬುಡವನ್ನು ಕತ್ತರಿಸದೆ, ಅಗತ್ಯವಿಲ್ಲದ ಶಾಖೆಗಳನ್ನು ಕತ್ತರಿಸುವುದೆಂಬ ಕರ್ಷಕ ಬುದ್ಧಿಯಿದ್ದರೆ ಮಾತ್ರ ಕಲೆಯನ್ನು ಆಕರ್ಷಕವಾಗಿ ಬೆಳೆಸಬಹುದೆಂದು ಕಲಾವಿದರೂ, ಕಲಾಭಿಮಾನಿಗಳೂ ನಂಬಿಕೆಯುಳ್ಳವರಾಗಬೇಕು’’ (‘ಸುಧಾಕಲಶ’- ಉಳಿಯ ಧನ್ವಂತರೀ ಯಕ್ಷಗಾನ ಕಲಾಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆಗೆ ಬರೆದ ಲೇಖನದಲ್ಲಿ). ಕಲಾವಿದರು ತಪ್ಪು ಮಾಡಬಾರದು. ರಂಗದಲ್ಲಿನ ವ್ಯವಹಾರ ಕಲೆಗೆ ಕೊಡುಗೆ ಯಾಗಿಯೇ ಇರಬೇಕು. ತಪ್ಪು ಮಾಡಿದರೆ ಪ್ರೇಕ್ಷಕರು ಆಕ್ಷೇಪಿಸಲೇಬೇಕು. ಪ್ರೇಕ್ಷಕರು ತಪ್ಪುದಾರಿಗೆಳೆದರೂ ಕಲಾವಿದರು ಕಲೆಗೆ ಅಪಚಾರವಾಗದಂತೆ ಎಚ್ಚರವಹಿಸಬೇಕು ಎಂಬ ಧ್ವನಿ ಶೇಣಿಯವರ ಈ ಮಾತುಗಳಲ್ಲಿ ನಾವು ಗಮನಿಸಬಹುದು. ಪ್ರಸಿದ್ಧ ಕಲಾವಿದ ಶ್ರೀ ಮಲ್ಪೆ ವಾಸುದೇವ ಸಾಮಗ ಅವರು ಇತ್ತೀಚೆಗೆ ಹೇಳಿದ ಮಾತುಗಳು- ‘‘ಯಕ್ಷಗಾನದಲ್ಲಿ ಮೊದಲು ಕೌಟುಂಬಿಕ ನ್ಯಾಯವಿತ್ತು. ಈಗ ಅದು ಸತ್ತುಹೋಗಿದೆ. ಮೊದಲು ಆ ನ್ಯಾಯೇಣ ಕಲಾವಿದರು ತಂಡವಾಗಿ ಶ್ರಮಿಸಿ ಪ್ರದರ್ಶನವು ಗೆಲ್ಲುತ್ತಿತ್ತು. ಈಗ ಒಂದೂ ಸಸೂತ್ರವಾಗಿಲ್ಲ’’- ಅರ್ಹರನ್ನು ಗೌರವಿಸುವುದು, ಹಿರಿಯರನ್ನು, ಕಿರಿಯರನ್ನು ಗೌರವಿಸುವುದು, ಕಿರಿಯರನ್ನು ಹಿರಿಯರು ಪ್ರೀತಿಸಿ, ವಂಚಿಸದೆ, ದೌರ್ಜನ್ಯ ವೆಸಗದೆ ಪ್ರೋತ್ಸಾಹಿಸುವುದು ಬಿಡಾರದಲ್ಲಿದ್ದು ಕೊಂಡೇ (ತನ್ನ ಮನೆಯೆಂದೇ ಭಾವಿಸಿ) ಅಧ್ಯಯನಶೀಲನಾಗಿ, ಯಾರಿಗೂ ಹೊರೆಯಾಗದಂತೆ ಕಲಾವಿದರು ಬದುಕುವ ರೀತಿಯನ್ನೇ ಶ್ರೀ ವಾಸುದೇವ ಸಾಮಗರು ‘ಕೌಟುಂಬಿಕ ನ್ಯಾಯ’ ಎಂದಿರಬಹುದು. ಆರೋಗ್ಯಕರ ಬದಲಾವಣೆಗಳು ಅಗತ್ಯ ಎಂಬ ಸಂದೇಶ ಶೇಣಿಯವರ ಮಾತುಗಳಲ್ಲೂ ಆರೋಗ್ಯಕರವಲ್ಲದ ಪರಿವರ್ತನೆಗಳು ಈಗ ನಡೆಯುತ್ತಿದೆಯೆಂಬ ಧ್ವನಿ ವಾಸುದೇವ ಸಾಮಗರ ಮಾತುಗಳಲ್ಲೂ ನಾವು ಗಮನಿಸಬಹುದು.
ಮಳೆಗಾಲದ ಪ್ರದರ್ಶನ, ಮೇಳದ ತಿರುಗಾಟದ ಸಂದರ್ಭದಲ್ಲಿ ಪರಿವರ್ತನೆಯ ಬಗೆಗೆ ಪ್ರೇಕ್ಷಕರು ಕಲಾವಿದರನ್ನು ಪ್ರಶ್ನಿಸುತ್ತಾರೆ. ನನ್ನಲ್ಲೂ ಕೇಳಿದ್ದಾರೆ. ಕಲಾವಿದರೆಲ್ಲರನ್ನೂ ಪ್ರಶ್ನಿಸುತ್ತಾರೆ. ಯಾಕೆ ಹೀಗೆ? ಮೊದಲು ಹೀಗಿತ್ತು. ಯಾಕೆ ಈ ಬದಲಾವಣೆ? ಕಲಾವಿದರಿಗೆ ಉತ್ತರಿಸಲು ಸಾಧ್ಯವೇ? ಸಾಧ್ಯವಿದ್ದರೂ ಹೇಳುವ ಸ್ಥಾನವು ಅವರದಲ್ಲ. ಕಲಿಕೆ, ತನ್ನ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುವುದು, ಅವಕಾಶವಿದ್ದಾಗ ಪ್ರದರ್ಶನಗಳನ್ನು ನೋಡುವುದು ಅವನಿಗೆ ಕರ್ತವ್ಯ. ಇಲ್ಲವಾದರೆ ಅವನೂ ಅಭಿವೃದ್ಧಿ ಹೊಂದಲಾರ. ಈ ನಡುವೆ ಇಂತಹ ಪ್ರಶ್ನೆಗಳು ಬಂದಾಗ ಕಲಾವಿದರಿಗೆ ಕಿರಿಕಿರಿ ಎನಿಸಿ ಪಾತ್ರನಿರ್ವಹಣೆಗೂ ತೊಡಕುಂಟಾಗುತ್ತದೆ. ‘ಕೇಳಿ’ ಬಾರಿಸುವ ವಿಚಾರದಿಂದ ಆರಂಭವಾಗುತ್ತದೆ. ಮೊದಲೆಲ್ಲಾ ಪ್ರದರ್ಶನ ಆರಂಭವಾಗುವುದಕ್ಕೆ ಮುಂಚೆ ಸಂಜೆಯ ಹೊತ್ತು ಕೇಳಿ ಬಾರಿಸುತ್ತಿದ್ದರು. ಬಿಡಾರದಲ್ಲೇ ಇರುತ್ತಿದ್ದ ಕಲಾವಿದರು ಆ ಸಮಯಕ್ಕೆ ಬರುತ್ತಿದ್ದರು. ಈಗ ಎಲ್ಲರೂ ದಿನಾ ಮನೆಗೆ ಹೋಗಿ ಬರುವವರು. ಈ ಬದಲಾವಣೆಗೆ ಇದೂ ಒಂದು ಕಾರಣ. ಮೊದಲೆಲ್ಲಾ ಹಳ್ಳಿಪ್ರದೇಶಗಳಲ್ಲಿ ಪ್ರದರ್ಶನಗಳು ನಡೆಯುತ್ತಿದ್ದವು. ದೂರ ದೂರ ಮನೆಗಳಿರುತ್ತಿದ್ದವು. ಯಕ್ಷಗಾನ ಕಾರ್ಯಕ್ರಮ ಇದೆಯೆಂದು ತಿಳಿಯಲೂ, ಅವರು ನೋಡಿ ಆನಂದಿಸಲೆಂದೂ ಕೇಳಿ ಬಾರಿಸುತ್ತಿದ್ದರು. ಚೆಂಡೆ ಬಾರಿಸುವುದನ್ನು ಕೇಳಿ ಜನರು ಮನೆಯಿಂದ ಹೊರಟು ಬರುತ್ತಿದ್ದರು ಎಂಬ ಹೇಳಿಕೆ ಇದೆ. ಕೆಲಸಮಯ ಕೇಳಿಬಾರಿಸಿದ್ದನ್ನು ರೆಕಾರ್ಡ್ ಮಾಡಿದ ಧ್ವನಿಸುರುಳಿಯನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುವ ಕ್ರಮವೂ ಪ್ರಯೋಗಿಸಲ್ಪಟ್ಟಿತು. ಪ್ರಸ್ತುತ ಹೆಚ್ಚಿನ ಕಡೆಗಳಲ್ಲೂ ಕೇಳಿ ಬಾರಿಸುವ ಕ್ರಮ ಇಲ್ಲ. ಒಂದಂತೂ ಸತ್ಯ. ಅಭ್ಯಾಸಿಯು ಮದ್ದಳೆಗಾರನಾಗಿ ತಯಾರಾಗಲು ಇದೊಂದು ಒಳ್ಳೆಯ ಅವಕಾಶ. ಇಲ್ಲಿ ಚೆಂಡೆ ಬಾರಿಸುವವನಿಗೆ ಸಂಪೂರ್ಣ ಸ್ವಾತಂತ್ರ್ಯ. ಭಾಗವತನ ಹಾಡನ್ನು ಅನುಸರಿಸಿ ಬಾರಿಸಬೇಕೆಂದಿಲ್ಲ. ಸಾಹಿತ್ಯಗಳನ್ನು ಬಳಸಲು ಅವಕಾಶ, ಉರುಳಿಕೆಯಲ್ಲಿ ನೈಪುಣ್ಯತೆ ಸಾಧಿಸಲು, ತನ್ನನ್ನು ತಾನು ತಿದ್ದಿಕೊಳ್ಳಲು ಅವಕಾಶವಿದೆ. ಹೇಳಿದರೆ ಕಲಿಯುವವನು ಎಲ್ಲಿಯಾದರೂ ಕಲಿಯುತ್ತಾನೆ ಎಂಬ ಮಾತನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ! ಕೆಲವು ವರ್ಷಗಳ ಹಿಂದೆ, ಒಂದು ದಿನ ಕೇಳಿ ಬಾರಿಸದಿದ್ದರೆ ಅದೊಂದು ದೊಡ್ಡ ವಿಷಯವೇ ಆಗಿಬಿಡುತ್ತಿತ್ತು. ಆಕ್ಷೇಪಿಸುತ್ತಿದ್ದರು. ಕೇಳಿಬಾರಿಸದ ಕಲಾವಿದರು ದಂಡನೆಗೊಳಗಾಗುತ್ತಿದ್ದರು. ಯಾಕೆಂದರೆ ಕಲಾಭಿಮಾನಿಗಳೂ, ಆಟ ಆಡಿಸುವವರೂ ಅದನ್ನು ಕಲಾರಾಧನೆಯ ಒಂದು ಅಂಗವೆಂದೇ ಭಾವಿಸಿದ್ದರು. ಕಲಾಮಾತೆಯ ಸೇವೆಗೆ ಕೊರತೆಯಾಯಿತೆಂದೇ ತಿಳಿಯುತ್ತಿದ್ದರು. ಇದು ಭಕ್ತಿಯ ಪ್ರತೀಕ. ಈಗ ಹತ್ತಿರ ಹತ್ತಿರ ಮನೆಗಳು. ಅವರಿಗೆ ತೊಂದರೆಯಾಗುತ್ತದೆ, ಅಲ್ಲದೆ ಪ್ರಚಾರಕ್ಕೆ ಬೇರೆ ಮಾಧ್ಯಮಗಳೂ (ಆಟ ಇದೆಯೆಂದು ತಿಳಿಸಲು) ಇವೆಯೆಂದು ಹೇಳಿದರೆ ಸರಿಯಾದ ಉತ್ತರವೆ? ಅಲ್ಲ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಇರುವ ವ್ಯವಸ್ಥೆಯೇ? ಈ ಬಗ್ಗೆ ಯೋಚಿಸುತ್ತಾ ಇರುವಾಗ ಹೊಳೆದ ವಿಚಾರವಿದು- ‘ಕೇಳಿ’ ಬಾರಿಸುವುದು ಸಾಯಂ ಸಂಧ್ಯೆಯಲ್ಲಿ. ಆ ಸಮಯದಲ್ಲೇ ನಾವು ಶಂಖನಾದವನ್ನು ಮಾಡುತ್ತೇವೆ. ಇದು ನಮಗೆ ಸಂಸ್ಕಾರ. ಚೆಂಡೆ, ಮದ್ದಳೆ ಮೊದಲಾದ ವಾದ್ಯಗಳು ಕಲಾಮಾತೆಗೆ ಅತ್ಯಂತ ಪ್ರಿಯವಾದವುಗಳು. ಹಾಗಾಗಿ, ರಾತ್ರೆ ನಡೆಯುವ ಕಲಾರಾಧನೆ ಸುಗಮವಾಗಲಿ, ಬರುವ ಪ್ರೇಕ್ಷಕರಿಗೆ ಯಾವುದೇ ತೊಂದರೆಯುಂಟಾಗದಿರಲಿ ಎಂಬ ವಿಚಾರವೂ ‘ಕೇಳಿ’ ಬಾರಿಸುವುದರೊಳಗೆ ಅಡಗಿರಬಹುದೆ? ಇನ್ನೊಂದು ವಿಚಾರ. ಸಂಗೀತಗಾರನೇಕೆ ಚಕ್ರತಾಳ ಬಾರಿಸುವುದಿಲ್ಲ? ಸಂಗೀತಗಾರನೇ ಏಕೆ ಚಕ್ರತಾಳ ಬಾರಿಸಬೇಕೆಂದು ನಾವು ಮರುಪ್ರಶ್ನಿಸಿದರೆ ಸರಿಯಾದ ಉತ್ತರವನ್ನೇ ಕೊಡುತ್ತಾರೆ. ಅವನು ಮುಂದೆ ಭಾಗವತನಾಗಬೇಕಾದವ. ಅವನು ಅಭ್ಯಾಸಿ. ಲಯಜ್ಞಾನ ಸಿದ್ಧಿಸುತ್ತದೆ. ಆಟ ಆಡಿಸುವ ಕ್ರಮ ಗೊತ್ತಾಗುತ್ತದೆ. ಪ್ರಸಂಗಜ್ಞಾನ, ರಂಗನಡೆ ಎಲ್ಲವೂ ಸಿದ್ಧಿಸುತ್ತದೆ. ಹಿರಿಯ ಭಾಗವತರೆ, ಮದ್ದಳೆಗಾರರಿಂದ ಕಲಿಯುವ ಅವಕಾಶ ಸಿಗುತ್ತದೆ ಎನ್ನುತ್ತಾರೆ. ಈಗ ಭಾಗವತರೂ, ಮದ್ದಳೆಗಾರರೂ ಮೂರ್ನಾಲ್ಕು ಮಂದಿಗಳಿರುತ್ತಾರೆ. ಮೊದಲು ಹಾಸ್ಯಗಾರ ಒಬ್ಬನೆ. ಈಗ ಎರಡೋ ಮೂರೋ ಮಂದಿಯಿರುತ್ತಾರೆ ಎಂದು ಹೇಳಿದರೂ ಸಮಾಧಾನವಾಗುವುದಿಲ್ಲ. ಅವರೆಲ್ಲಾ ಅಭ್ಯಾಸ ಮಾಡಿ ಬಂದವರು. ಮೇಳದಲ್ಲಿ ಸಂಗೀತಗಾರ ಅಭ್ಯಾಸಿ. ಮುಂದಕ್ಕೆ ಭಾಗವತನಾಗಬೇಕಾದರೆ ಅವನು ಚಕ್ರತಾಳ ಬಾರಿಸುತ್ತಾ ಆಟ ನೋಡಲೇಬೇಕು ಎಂದು ಹೇಳುತ್ತಾರೆ. ಅವರ ಅಭಿಪ್ರಾಯ ಸರಿಯಾಗಿಯೇ ಇದೆ ತಾನೆ? ಚಕ್ರತಾಳ ಬಾರಿಸದೆ ಆಟ ನೋಡದ ಸಂಗೀತಗಾರನು ಅನಿರೀಕ್ಷಿತವಾಗಿ, ಅನಿವಾರ್ಯಕ್ಕೆ ಪ್ರಸಂಗಕ್ಕೆ ಪದ್ಯ ಹೇಳುವಾಗ ಚಡಪಡಿಸುವುದನ್ನು ನಾವು ಗಮನಿಸುತ್ತೇವೆ. ಹೇಳಿದರೆ ಕಲಿಯುವವನು ಹೇಗೂ ಕಲಿಯುತ್ತಾನೆ ಎಂಬ ಉತ್ತರ!
ಇನ್ನು ಪ್ರಶ್ನೆಗಳು ಗಾನವೈಭವ ಮತ್ತು ನಾಟ್ಯವೈಭವಗಳ ಬಗ್ಗೆ. ಯಕ್ಷಗಾನದಲ್ಲಿ ಆಟಕೂಟಗಳೆಂಬ (ತಾಳಮದ್ದಳೆ) ಎರಡು ವಿಭಾಗಗಳು. ಕೆಲವು ಕಡೆ ಯಕ್ಷಗಾನ ಪ್ರದರ್ಶನಗಳು. ಕೆಲವರಿಗೆ ತಾಳಮದ್ದಳೆಯೆಂದರೆ ಒಲವು ಹೆಚ್ಚು.
ಆಟಕ್ಕೂ, ಕೂಟಕ್ಕೂ ಹಿಮ್ಮೇಳ ಮತ್ತು ಮುಮ್ಮೇಳಗಳು ಬೇಕು. ಗಾನವೈಭವ ಮತ್ತು ನಾಟ್ಯ ವೈಭವಗಳು ಹೊಸ ಆವಿಷ್ಕಾರಗಳು. ಗಾನವೈಭವಕ್ಕೆ ಮುಮ್ಮೇಳದ ಅಗತ್ಯವಿಲ್ಲ. ನಾಟ್ಯವೈಭವಕ್ಕೆ ಮುಮ್ಮೇಳ ಬೇಕು. ಆದರೆ ಮಾತುಗಾರಿಕೆಗೆ ಅವಕಾಶವಿಲ್ಲ. ನಾಟ್ಯ ಮತ್ತು ಅಭಿನಯ ಮಾತ್ರ. ಈ ಬದಲಾವಣೆಯನ್ನು ಹೊಸ ಪ್ರಯೋಗಗಳನ್ನು ಮೆಚ್ಚಿ ಸ್ವಾಗತಿಸುವವರೂ, ಇದು ಯಕ್ಷಗಾನಕ್ಕೆ ಮಾರಕವೆಂದು ಆಕ್ಷೇಪಿಸುವವರೂ ಇದ್ದಾರೆ. ಗಾನವೈಭವ, ನಾಟ್ಯವೈಭವಗಳಿಂದ ಆಟ, ತಾಳಮದ್ದಳೆಗಳ ಸಂಖ್ಯೆ ಕಡಿಮೆಯಾಗಿದೆ. ಕಲಾವಿದರಿಗೆ ಅವಕಾಶ ಗಳು ಕಡಿಮೆಯಾಗಿದೆ. ಆಟ, ಕೂಟಗಳು ಪರಂಪರೆಯಿಂದ ನಡೆದು ಬಂದ ರೀತಿ. ಪ್ರೇಕ್ಷಕರು ಅದನ್ನು ಒಪ್ಪಿಕೊಂಡಿದ್ದಾರೆ. ಆಸ್ವಾದಿಸುತ್ತಾ ಬಂದಿದ್ದಾರೆ. ಆದರೆ ಹೊಸ ಪ್ರಯೋಗಗಳ ಹಿನ್ನಲೆಯೇನು? ವಿದ್ವಾಂಸರು ಅದನ್ನು ಒಪ್ಪಿಕೊಂಡಿದ್ದಾರೆಯೇ? ಎಂದು ಕೆಲವರು ಪ್ರಶ್ನಿಸುತ್ತಾರೆ. ಹೊಸತನ ಅಗತ್ಯ. ನೂತನ ಪ್ರಯೋಗಗಳು ಪ್ರೇಕ್ಷಕರನ್ನು ಯಕ್ಷಗಾನದತ್ತ ಆಕರ್ಷಿಸಿದೆ ಎಂದು ಕೆಲವರು ಹೇಳಿದರೆ ನಮಗೆ ಹಾಡು ಅಂದರೆ ಇಷ್ಟ. ಹಾಗಾಗಿ ಗಾನವೈಭವಕ್ಕೆ ಹೋಗುತ್ತೇವೆ. ನಮಗೆ ನೃತ್ಯ ಎಂದರೆ ಪ್ರೀತಿ. ಹಾಗಾಗಿ ನಾಟ್ಯವೈಭವಕ್ಕೆ ಹೋಗುತ್ತೇವೆ ಎಂದು ಹೇಳುವವರೂ ಇದ್ದಾರೆ. ನಮಗೆ ಯಕ್ಷಗಾನದ ವೈಭವವನ್ನು ನೋಡಬೇಕು. ಗಾನವೈಭವ, ನಾಟ್ಯವೈಭವಗಳ ಜತೆ ಇನ್ನೂ ವೈಭವಗಳು ಹುಟ್ಟಿಕೊಳ್ಳಬಹುದು. ನಮಗದು ಬೇಡ ಎನ್ನುವವರಿದ್ದಾರೆ. ಇನ್ನೊಂದು ಬಹುಮುಖ್ಯ ಪರಿವರ್ತನೆ- ‘ಕಾಲಮಿತಿ ಪ್ರದರ್ಶನ’.
ಕಾಲಮಿತಿ ಪ್ರದರ್ಶನಗಳು ಹೊಸ ಪ್ರಯೋಗವಲ್ಲ. ಮದುವೆ, ಉಪನಯನ ಮೊದಲಾದ ಸಮಾರಂಭಗಳಲ್ಲಿ, ಸಿಕ್ಕ ಸಮಯಕ್ಕೆ ಹೊಂದಿಸಿ ಪ್ರಸಂಗವನ್ನು ನಿರ್ಧರಿಸಿ ಆಟ ಅಥವಾ ಕೂಟಗಳನ್ನು ಏರ್ಪಡಿಸುತ್ತಿದ್ದರು. ಆದರೆ ಮೇಳಗಳಲ್ಲಿ ಕಾಲಮಿತಿ ಪ್ರದರ್ಶನಗಳು ಬದಲಾವಣೆಯೇ ಹೌದು. ಈ ಬಗ್ಗೆ ಬಹಳಷ್ಟು ಜನರು ಪ್ರಶ್ನಿಸುತ್ತಾರೆ. ಕಾಲಮಿತಿ ಪ್ರದರ್ಶನದಿಂದಾಗಿ ನಮಗೆ ಅನುಕೂಲವಾಯಿತು. ರಾತ್ರೆಯಿಡೀ ನಿದ್ದೆ ಮಾಡದಿದ್ದರೆ ಮರುದಿನ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತದೆ. ಕರ್ತವ್ಯ ಮುಗಿಸಿ ಯಕ್ಷಗಾನ ನೋಡಬಹುದು. ರಾತ್ರೆ ನಿದ್ದೆ ಮಾಡಿ ಮರುದಿನ ಕರ್ತವ್ಯಕ್ಕೂ ಹಾಜರಾಗಬಹುದು. ಕಾಲಮಿತಿಯಿಂದಾಗಿ ಈ ವರೇಗೆ ನೋಡದವರೂ ಯಕ್ಷಗಾನ ನೋಡಲಾರಂಭಿಸಿದರು. ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರು ಬರಲಾರಂಭಿಸಿದರು. ಕಲಾವಿದರಿಗೂ ರಾತ್ರೆ ನಿದ್ದೆ ಮಾಡಬಹುದು. ರಾತ್ರೆಯಿಡೀ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆಯೂ ಕಡಿಮೆ. ಕೆಲವೊಮ್ಮೆ ಬೆರಳೆಣಿಕೆಯ ಪ್ರೇಕ್ಷಕರು ಮಾತ್ರ. ಹಾಗಾಗಿ ಪ್ರಸಕ್ತ ಸನ್ನಿವೇಶಕ್ಕೆ ಕಾಲಮಿತಿಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಇನ್ನೊಂದೆಡೆ ಆಕ್ಷೇಪಗಳೂ ಬರಲಾರಂಭಿಸಿದವು. ಈ ವ್ಯವಸ್ಥೆಯಲ್ಲಿ ಅನುಕೂಲದ ಜತೆ ನ್ಯೂನತೆಗಳೇ ಇವೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಕೆಲವನ್ನು ಹೇಳಬಹುದು. ಆದರೆ ಪ್ರಯೋಗ ಬಹಳ ಕಷ್ಟ ಎಂಬ ಅಭಿಪ್ರಾಯ ಬಂದಿತು. ಕಲಾಭಿಮಾನಿಗಳು ಚೌಕಿಗೆ ಬಂದು ನಮ್ಮಲ್ಲಿ ಕಾಲಮಿತಿಯ ಬಗ್ಗೆ ಅಭಿಪ್ರಾಯ ಕೇಳಿದ್ದರು. ನೀವೇ ಹೇಳಿ, ಬದಲಾವಣೆ ಸಹಜವಲ್ಲವೇ ಎಂದೆವು. ನೀವು ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ನಿಮ್ಮನ್ನು ಆಕ್ಷೇಪಿಸುವುದಲ್ಲ. ಕಾಲಮಿತಿ ಪ್ರದರ್ಶನಗಳಿಂದ ಯಕ್ಷಗಾನದ ಸೌಂದರ್ಯ ವರ್ಧನೆಯಾಗಿಲ್ಲ. ಕೆಲವು ಕಲಾವಿದರಿಗೆ ಅನುಕೂಲವಾಗಿರಬಹುದು. ಆದರೆ ಅನಾನುಕೂಲತೆಗಳೇ ಹೆಚ್ಚು ಎಂದು ಕಲಾವಿದರೇ ಹೇಳುತ್ತಾರೆ ಎನ್ನಬೇಕೆ! ಏನು ಅನಾನುಕೂಲ? ವಿಶ್ರಾಂತಿಗೆ ಅವಕಾಶವಿದೆಯಲ್ಲ? ಎಂದೆವು. ಎಲ್ಲಿ ವಿಶ್ರಾಂತಿ? ಇಲ್ಲಿ ಮುಗಿಸಿ ರಾತ್ರಿ ಮತ್ತೆ ಒಂದೋ ಎರಡೋ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ ಎಂದರು. ನಾವು ಟೀಕಿಸುತ್ತಿಲ್ಲ. ನಮಗೆ ಕಲಾವಿದರ ಬಗ್ಗೆ ಕಾಳಜಿಯಿದೆ. ಅವರು ಆರೋಗ್ಯವಂತರಾಗಿರಬೇಕು. ಅವರು ಕಲಾಮಾತೆಯ ಸೇವಕರು. ಅವರಿಗೆ ತೊಂದರೆಯಾದರೆ ನಮಗೆ ನೋವಾಗುತ್ತದೆ. ಯಕ್ಷಗಾನಕ್ಕೆ ಆಗುವ ನಷ್ಟವನ್ನು ನಾವು ಸಹಿಸಲಾರೆವು ಎಂದು ಹೇಳಿದರು. ಹೀಗೇ ಬದಲಾವಣೆಗಳು ಅನೇಕ. ಇದು ಯಕ್ಷಗಾನಕ್ಕೆ ಪೂರಕವೇ? ಮಾರಕವೇ? ಹೇಳುವ ಸ್ಥಾನ ನಮ್ಮದಲ್ಲ. ಹೇಳಲು ಶಕ್ಯರೂ ಅಲ್ಲ. ವಿದ್ವಾಂಸರು ಪ್ರತಿಕ್ರಿಯಿಸಬೇಕು. ಹೇಳಬೇಕು. ನಾವು ಅವರ ನಿರ್ದೇಶನವನ್ನು ಅನುಸರಿಸಬೇಕು. ು
ಲೇಖನ : ರವಿಶಂಕರ್ ವಳಕ್ಕುಂಜ

Comments
Post a Comment