ಕಲಾರಸಿಕರ ಕರ್ಣಗಳಿಗೆ ಗಾನಸುಧಾರಸವನ್ನು ಹರಿಸುವ ಗಾಯಕ ಶ್ರೀ ದಿನೇಶ ಅಮ್ಮಣ್ಣಾಯರು ಅರುವತ್ತರ ಸಂಭ್ರಮದಲ್ಲಿ

                  ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ ‘ಗಾನಕೋಗಿಲೆ’ ಶ್ರೀ ದಿನೇಶ ಅಮ್ಮಣ್ಣಾಯರನ್ನು ಯಕ್ಷದೀಪ ಪತ್ರಿಕೆಯು ಸಂದರ್ಶಿಸಿ, ‘‘ಭಾವಗಳ ಗರಿಬಿಚ್ಚಿದ ಹಾಡುಹಕ್ಕಿ - ದಿನೇಶ ಅಮ್ಮಣ್ಣಾಯ’’ ಎಂಬ ಶೀರ್ಷಿಕೆಯಡಿ 2016 ಸೆಪ್ಟಂಬರ್ ತಿಂಗಳಿನಲ್ಲಿ (6ನೇ ಸಂಚಿಕೆ) ಲೇಖನವನ್ನು ಪ್ರಕಟಿಸಿತ್ತು. ಆಗ ಅವರ ವಯಸ್ಸು 57. ಅರುವತ್ತರ ಸಂಭ್ರಮವನ್ನು ಹೇಗೆ ಆಚರಿಸುತ್ತೀರಿ? ಎಂದು ಸಂದರ್ಶಕ, ಯಕ್ಷದೀಪ ಮಾಸಪತ್ರಿಕೆಯ ಸಂಪಾದಕ ಶ್ರೀ ಮನಮೋಹನ್ ವಳಕ್ಕುಂಜ ಅವರು ಕೇಳಿದಾಗ ಅಮ್ಮಣ್ಣಾಯರು ಪ್ರತಿಕ್ರಿಯಿಸಿದ ರೀತಿ ಹೀಗಿತ್ತು. ‘‘ಇಷ್ಟು ವರ್ಷ ದಿನೇಶ ಅಮ್ಮಣ್ಣಾಯರು ಯಾರು ಅಂತ ಜನರಿಗೆ ತೋರಿಸಿ ಕೊಟ್ಟದ್ದು ಯಕ್ಷಗಾನ. ಆ ಶಕ್ತಿ ದೇವರು ಕೊಟ್ಟದ್ದು. ಇಷ್ಟು ವರ್ಷ ನನ್ನನ್ನು ಎತ್ತಿ ಆಡಿಸಿದವ ದೇವರು. ಇದನ್ನು ಅವನಿಗೇ ಅರ್ಪಿಸಿದ್ದೇನೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅಂತ ಸೇವೆ ಮಾಡಿಕೊಂಡು ಬರ್ತೇನೆ. ಅದು ಮುಖ್ಯ. ಪ್ರದರ್ಶನಕ್ಕೆ, ಪ್ರಚಾರಕ್ಕೆ ನಾನು ಮುಂದಾಗುವುದಿಲ್ಲ. ನಾಲ್ಕಾರು ಜನರು ಹೇಳಿದ್ದಾರೆ- ನಾವೆಲ್ಲಾ ಇದ್ದೇವೆ. ಅರುವತ್ತರ ಸಂಭ್ರಮವನ್ನು ಆಚರಿಸಲೇಬೇಕೆಂದು. ಅವರನ್ನು ನಿರುತ್ಸಾಹಗೊಳಿಸಬಾರದು ಎಂಬ ಕಾರಣಕ್ಕೆ ‘‘ನಿಮ್ಮ ಇಷ್ಟ. ನಿಮ್ಮ ಚಿತ್ತ. ನಾನು ಮಾತ್ರ ಅದನ್ನು ಬಯಸುವುದೂ ಇಲ್ಲ’’ ಎಂದೆ. ‘‘ಕಲಾವಿದನು ಕಲೆಗಿಂತ ದೊಡ್ಡವನಲ್ಲ. ಕಲೆಯಿಂದಾಗಿಯೇ ಕಲಾವಿದ’’ ಎಂಬ ಧ್ವನಿಯನ್ನು ಶ್ರೀ ದಿನೇಶ ಅಮ್ಮಣ್ಣಾಯರ ಮಾತುಗಳಲ್ಲಿ ಗಮನಿಸಬಹುದು. ಆದರೆ ಒಂದಂತೂ ನಿಜ. ಗಾನಸುಧಾ ರಸವನ್ನು ಹರಿಸುವ ಈ ಗಾಯಕನ ಅರುವತ್ತರ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲುಗೊಂಡು ಸಂತೋಷಪಡುವ ಅವಕಾಶಕ್ಕಾಗಿ ಕಳೆದೆರಡು ವಸಂತಗಳಿಂದಲೂ ಕಲಾಭಿಮಾನಿಗಳು ಕಾಯುತ್ತಿದ್ದರು. ಹೌದು. ಗಾನಕೋಗಿಲೆ ಶ್ರೀ ದಿನೇಶ ಅಮ್ಮಣ್ಣಾಯರಿಗೆ ಶುಭಾಶಯಗಳನ್ನು ಸಲ್ಲಿಸಿ ಸಂತಸವನ್ನನುಭವಿಸುವ ಕಾಲವು ಕಲಾಭಿಮಾನಿಗಳಿಗೆ ಕೂಡಿಬಂದಿದೆ. ಶ್ರೀಯುತರ ಷಷ್ಟ್ಯಬ್ಧ ಸಮಾರಂಭದ ಸಂಭ್ರಮವು ಶ್ರೀಮದೆಡನೀರು ಮಠದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ. ಅದೂ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ನೇತೃತ್ವದಲ್ಲಿ, ಆಶೀರ್ವಚನದಲ್ಲಿ ಸಂಭ್ರಮದಿಂದ ನಡೆದಿದೆ. (ಒಕ್ಟೋಬರ್ 2, 2019)
ಶ್ರೀ ದಿನೇಶ ಅಮ್ಮಣ್ಣಾಯ

                   ಪ್ರಸ್ತುತ ತೆಂಕುತಿಟ್ಟಿನ ಹಿರಿಯ ಭಾಗವತರು ಶ್ರೀ ಬಲಿಪ ನಾರಾಯಣ ಭಾಗವತರು. ಇವರಿಗಿಂತ ಕಿರಿಯವರಾಗಿ ರಂಗನಾಯಕ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು, ಪ್ರಸಂಗಕರ್ತೃ, ಭಾಗವತ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಯಕ್ಷಗಾನ ಹಾಡುಗಾರಿಕೆಯಲ್ಲಿ ಪ್ರಸಿದ್ಧರು. ಶ್ರೀ ಪದ್ಯಾಣ ಗಣಪತಿ ಭಟ್, ಪುತ್ತಿಗೆ ಶ್ರೀ ರಘುರಾಮ ಹೊಳ್ಳ, ಶ್ರೀ ದಿನೇಶ ಅಮ್ಮಣ್ಣಾಯರು ಹೆಚ್ಚು ಕಡಿಮೆ ಸಮಾನವಯಸ್ಕರಾಗಿ, ತಮ್ಮ ಪ್ರತಿಭೆ, ಅಪ್ರತಿಮ ಹಾಡುಗಾರಿಕೆಯಿಂದ ಯಕ್ಷಗಾನ ಕಲಾಭಿಮಾನಿಗಳ ಮನಗೆದ್ದವರು. ಪ್ರಸ್ತುತ ಮೂವರೂ ಬಹುಬೇಡಿಕೆಯುಳ್ಳ ಹಿರಿಯ, ಅನುಭವೀ ಭಾಗವತರುಗಳು. ಶ್ರೀ ದಿನೇಶ ಅಮ್ಮಣ್ಣಾಯರು ಶ್ರೀ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿ ಅಮ್ಮ ದಂಪತಿಗಳ ಸುಪುತ್ರನಾಗಿ, ಈ ಲೋಕದ ಬೆಳಕನ್ನು ಕಂಡುದು 1959ರಲ್ಲಿ. ಓದಿದ್ದು ಎಸ್.ಎಸ್.ಎಲ್.ಸಿ. ತನಕ. ಸೋದರ ಮಾವನ ಮಗ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಮದ್ದಳೆವಾದನದ ಅಭ್ಯಾಸ. ಚಿಕ್ಕಪ್ಪ ಶ್ರೀ ವಿಷ್ಣು ಅಮ್ಮಣ್ಣಾಯರಿಂದ ಭಾಗವತಿಕೆಯ ಮೂಲಪಾಠ ಕಲಿಕೆ. ವಿಷ್ಣು ಅಮ್ಮಣ್ಣಾಯರು ಖ್ಯಾತ ಮದ್ದಳೆಗಾರ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ತೀರ್ಥರೂಪರು. ಸಂಗೀತ ಕಲಿತದ್ದು ಅಕ್ಕ ರಾಜೀವಿ ಅವರಿಂದ (ಚಿಕ್ಕಪ್ಪನ ಮಗಳು). ತನ್ನ ಸೋದರ ಸಂಬಂಧಿ ಲಕ್ಷ್ಮೀಶ ಅಮ್ಮಣ್ಣಾಯರ ಬಗೆಗೆ ದಿನೇಶ ಅಮ್ಮಣ್ಣಾಯರಿಗೆ ಹೆಮ್ಮೆಯಿದೆ. ಮೃದಂಗವಾದನದಲ್ಲಿ ಅವರೋರ್ವ ಸಾಧಕ ಎಂದು ಹೇಳಿ ಗೌರವವನ್ನು ಸಲ್ಲಿಸುತ್ತಾರೆ. ದಿನೇಶ ಅಮ್ಮಣ್ಣಾಯರು ಶ್ರೇಷ್ಠ ಭಾಗವತನಾಗಬೇಕೆಂಬ ಮಹದಾಸೆಯನ್ನು ಇರಿಸಿ ಆ ನಿಟ್ಟಿನಲ್ಲಿ ಪರಿಶ್ರಮಿಸಿದವರು ಶ್ರೀ ವಿಷ್ಣು ಅಮ್ಮಣ್ಣಾಯರು. ಅವರ ಪ್ರಾಥಮಿಕ ಪರಿಶ್ರಮವು ಇಂದು ದಿನೇಶ ಅಮ್ಮಣ್ಣಾಯರು ಶ್ರೇಷ್ಠ ಗಾಯಕನಾಗುವುದಕ್ಕೆ ಭದ್ರ ಪಂಚಾಂಗವಾಗಿತ್ತು. ದಿನೇಶ ಅಮ್ಮಣ್ಣಾಯರು ಮೊದಲು ಮೇಳ ಸೇರಿದ್ದು ಮದ್ದಳೆಗಾರನಾಗಿ. ಮಂಡೆಚ್ಚರು, ಕಾಂಚನ ನಾರಾಯಣ ಭಟ್, ಪದ್ಯಾಣ ಶಂಕರನಾರಾಯಣ ಭಟ್ಟರ ಜತೆ ತಿರುಗಾಟ. ಕರ್ನಾಟಕ ಮೇಳದಲ್ಲಿ. ನಂತರ 1980ರಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳದಲ್ಲಿ. 1981ರಲ್ಲಿ ಮತ್ತೆ ಕರ್ನಾಟಕ ಮೇಳಕ್ಕೆ. ನಿರಂತರ 21 ವರ್ಷಗಳ ತಿರುಗಾಟ. 1985ರಲ್ಲಿ ಗುರುಗಳಾದ ಶ್ರೀ ದಾಮೋದರ ಮಂಡೆಚ್ಚರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡ ಮೇಲೆ ದಿನೇಶ ಅಮ್ಮಣ್ಣಾಯರೇ ಭಾಗವತರಾಗಿ ಕರ್ನಾಟಕ ಮೇಳವನ್ನು ಮುನ್ನಡೆಸಿದ್ದರು. ಸಂಜೆ 7 ಗಂಟೆಗೇ ಚೌಕಿಗೆ ಬಂದು ಶ್ರೀ ದಾಮೋದರ ಮಂಡೆಚ್ಚರು ದಿನೇಶ ಅಮ್ಮಣ್ಣಾಯರಿಗೆ ಭಾಗವತಿಕೆಯ ಸಮಗ್ರ ಮಾಹಿತಿಯನ್ನೂ ಹೇಳಿಕೊಡುತ್ತಿದ್ದರಂತೆ. ಮಂಡೆಚ್ಚರ ಗರಡಿಯಲ್ಲಿ ಪಳಗಿ ಪಕ್ವರಾದ ಭಾಗವತರಿವರು. ಕರ್ನಾಟಕ ಮೇಳದಲ್ಲಿ ಗಾಂಧಾರಿ, ಮಾನಿಷಾಧ ಪ್ರಸಂಗದ ಹಾಡುಗಳು ಅಲ್ಲದೆ ಅನೇಕ ಪುರಾಣ ಮತ್ತು ತುಳು ಪ್ರಸಂಗಗಳ ಹಾಡುಗಳಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರು ಪ್ರೇಕ್ಷಕರ ಮನವನ್ನು ಗೆದ್ದವರು. ಹಳೇಬೇರು ಹೊಸ ಚಿಗುರು ಎಂಬ ಮಾತಿನಂತೆ, ಗುರು ಶ್ರೀ ದಾಮೋದರ ಮಂಡೆಚ್ಚರನ್ನು ಅನುಸರಿಸುತ್ತಾ ‘ಅಮ್ಮಣ್ಣಾಯ ಶೈಲಿ’ಯನ್ನು ಹಾಡುಗಾರಿಕೆಯಲ್ಲಿ ಲೋಕಾರ್ಪಣೆಗೊಳಿಸಿ ಮೆರೆದರು. ಮಂಡೆಚ್ಚರಿಗೆ ಅಮ್ಮಣ್ಣಾಯರೆಂದರೆ ಬಲುಪ್ರೀತಿ. ಅಮ್ಮಣ್ಣಾಯರಿಗೆ ಮಂಡೆಚ್ಚರ ಬಗೆಗೆ ಗೌರವ. ಹಾಗಿತ್ತು ಗುರುಶಿಷ್ಯ ಸಂಬಂಧ. ಎಲ್ಲರ ಮುಂದೆ ಮಂಡೆಚ್ಚರು ದಿನೇಶ ಅಮ್ಮಣ್ಣಾಯರನ್ನು ಆಲಿಂಗಿಸಿ, ‘‘ಇವನು ನನ್ನ ಶಿಷ್ಯನೇ’’ ಎಂದು ಹೇಳಿ ತಲೆಮುಟ್ಟಿ ಆಶೀರ್ವದಿಸಿದ್ದರು. ‘‘ನನಗೆ ಅದು ಒಂದು ಭಾವತಿರೇಕದ ಮನದುಂಬುವ ಸನ್ನಿವೇಶವಾಗಿತ್ತು. ನಾನೆಂದೂ ಮರೆಯಲಾಗದ ಕ್ಷಣವದು’’- ಹೀಗೆ ಹೇಳುವ ಮೂಲಕ ಅಂದಿನ ಘಟನೆಯನ್ನು ಅಮ್ಮಣ್ಣಾಯರು ನೆನಪಿಸುತ್ತಾರೆ. ದಾಮೋದರ ಮಂಡೆಚ್ಚರ ಬಗೆಗೆ ಹೇಳಿ ಎಂದು ದಿನೇಶ ಅಮ್ಮಣ್ಣಾಯರನ್ನು ಒತ್ತಾಯಿಸಿದರೆ ನಿದ್ರಿಸದೆ ರಾತ್ರೆಯಿಂದ ಬೆಳಗ್ಗಿನ ತನಕವೂ ಹೇಳಬಲ್ಲರು. ದೇವತಾ ಮನುಷ್ಯರೂ, ವಿದ್ವಾಂಸರಾದರೂ ನಿಗರ್ವಿಗಳೂ, ಮುಗ್ಧರೂ, ಎಳೆಯ ಮಕ್ಕಳ ಮನಸ್ಸನ್ನು ಹೊಂದಿದ ಅವರ ಗುಣಗಾನವನ್ನು ಮಾಡುತ್ತಾ ಭಾವುಕರಾಗಿ ಕಣ್ಣೀರಿಳಿಸುತ್ತಾರೆ.
                ಧೈರ್ಯ, ಲಯಸಾಮರ್ಥ್ಯ , ಮಧುರತೆ, ಸುಸ್ವರ, ಅರ್ಥಜ್ಞಾನ, ಪದಚ್ಛೇದ ಮಾಡುವ ಸಾಮರ್ಥ್ಯ ಈ ಗುಣಗಳನ್ನು ಹೊಂದಿದಾಗ ಮಾತ್ರ ಆತ ಶ್ರೇಷ್ಠ ಗಾಯಕನಾಗಬಲ್ಲ. ಇವೆಲ್ಲವೂ ಅಮ್ಮಣ್ಣಾಯರಲ್ಲಿದೆ. ಸರಳ, ಸಜ್ಜನ, ಭಾವುಕತೆಯನ್ನು ಮೈಗೂಡಿಸಿಕೊಂಡ ಇವರು ಆ ಭಾವುಕತೆಯನ್ನು ಯಕ್ಷಗಾನದ ಹಾಡುಗಳಲ್ಲಿಯೂ ತುಂಬಿ ಪ್ರದರ್ಶನವನ್ನು ರಂಜಿಸುವ ಎಲ್ಲರ ನೆಚ್ಚಿನ ಭಾಗವತರು. ‘‘ಹಾಡುಗಾರಿಕೆಯಲ್ಲಿ ಭಾವ ಬೇಕು. ಭಾವ ಇದ್ದರೆ ಮಾತ್ರ ಅಭಿನಯಕ್ಕೆ ಸ್ಫೂರ್ತಿ ಬರುತ್ತದೆ. ಯಕ್ಷಗಾನಕ್ಕೆ ರಾಗಗಳು ಎಷ್ಟು ಮುಖ್ಯವೋ, ಭಾವಗಳೂ ಅಷ್ಟೇ ಮುಖ್ಯ. ಭಾವದಿಂದ ರಾಗ ಬರುತ್ತದೆ. ರಾಗದಿಂದ ಭಾವ ಅಲ್ಲ. ದುಃಖರಸದಲ್ಲಿ ಶಿವರಂಜಿನಿ ರಾಗದಲ್ಲಿ ಎಷ್ಟೇ ಚೆನ್ನಾಗಿ ಹಾಡಿದರೂ ಧ್ವನಿ ಮತ್ತು ಭಾವ ಇಲ್ಲದಿದ್ದರೆ ದುಃಖ ಬರಲಾರದು. ರಾಗಕ್ಕಿಂತಲೂ ಧ್ವನಿ ಮತ್ತು ಭಾವಗಳು ಮುಖ್ಯ’’- ಶ್ರೀ ದಿನೇಶ ಅಮ್ಮಣ್ಣಾಯರ ಈ ಮಾತುಗಳು- ‘‘ಭಾಗವತಿಕೆಯಲ್ಲಿ ಹಾಡಿನ ಶೈಲಿ ಆಕರ್ಷಕವಾಗಿರುವುದಕ್ಕಿಂತ ರಂಗದಲ್ಲಿ ಒಂದು ಕಥೆ, ಪಾತ್ರ, ಪಾತ್ರದ ಭಾವ ಇವಕ್ಕೆ ಹಿಮ್ಮೇಳದವರು ಒದಗಬೇಕಾಗಿರೋದು ಮುಖ್ಯ. ಹಾಡುಗಾರಿಕೆಯಲ್ಲಿ ಭಾವನೆಗಳು ತುಂಬಿರಬೇಕು. ಕರುಣ, ಭಕ್ತಿರಸಗಳು ಹೆಚ್ಚು ಪರಿಣಾಮವನ್ನು ಬೀರುತ್ತವೆ. ರೌದ್ರ ವೀರರಸಗಳಲ್ಲಿ ಹೆಚ್ಚು ಸ್ಪಷ್ಟತೆ ಇರಲಾರದು. ಒಮ್ಮೆ ವಿಜೃಂಭಿಸಿ ಬಿಡುತ್ತದೆ. ಬಹಳ ಹೊತ್ತು ಪರಿಣಾಮ ಉಳಿಯಲಾರದು. ವೇಗದ ಹಾಡುಗಾರಿಕೆಯಲ್ಲಿ ಕಥೆ ಓಡುತ್ತಿರುತ್ತದೆ ವಿನಹಾ ಸ್ಥಾಪನೆಯಾಗಲಾರದು.’’ ಬಡಗಿನ ಖ್ಯಾತ ಭಾಗವತರಾಗಿದ್ದ ನೆಬ್ಬೂರು ಶ್ರೀ ನಾರಾಯಣ ಭಾಗವತರು ಅನುಭವಿಸಿ ಆಡಿದ ಈ ನುಡಿಗಳನ್ನು ನೆನಪಿಸುತ್ತದೆ. ಕರ್ನಾಟಕ, ಪುತ್ತೂರು, ಕದ್ರಿ, ಕುಂಟಾರು ಮೇಳಗಳಲ್ಲಿ ವ್ಯವಸಾಯ. ಕಳೆದ 15 ವರ್ಷಗಳಿಂದ ಎಡನೀರು ಮೇಳದಲ್ಲಿ ಕಲಾ ಸೇವೆ. ಹೀಗೆ 44 ವರ್ಷಗಳಿಂದ ಗಾನಸುಧೆ ಯನ್ನು ಹರಿಸಿ ಕಲಾರಸಿಕರ ಮನಗೆದ್ದ ಗಾಯಕರಿವರು. ಶ್ರೀಮದೆಡನೀರು ಮಠಾಧೀಶರ ಆಶೀರ್ವಾದ, ಬೆಂಬಲ, ಸಹಕಲಾವಿದರ ಸಹಕಾರ, ಕಲಾಭಿಮಾನಿಗಳ ಹಾರಯಿಕೆಗಳನ್ನು ಸದಾ ನೆನಪಿಸುತ್ತಾರೆ. ಪತ್ನಿ ಶ್ರೀಮತಿ ಸುಧಾ ಮತ್ತು ಪುತ್ರಿಯರಾದ ಅಕ್ಷತಾ ಮತ್ತು ಅಮಿತಾ (ವಿವಾಹಿತೆಯರು) ಇವರುಗಳ ಪ್ರೋತ್ಸಾಹವನ್ನು ಹೊಂದಿ ಶ್ರೇಷ್ಠ ಭಾಗವತರಾಗಿ ಮೆರೆಯುತ್ತಿರುವ ಶ್ರೀ ದಿನೇಶ ಅಮ್ಮಣ್ಣಾಯರಿಗೆ ಈಗ ಷಷ್ಟ್ಯಬ್ಧದ ಸಂಭ್ರಮ. ಶ್ರೀ ಎಡನೀರು ಮಠದ ದಕ್ಷಿಣಾ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನ ದಲ್ಲಿ, ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯಾನುಗ್ರಹದೊಂದಿಗೆ ಒಕ್ಟೋಬರ್ 2 ಬುಧವಾರದಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರುವತ್ತರ ಸಂಭ್ರಮವು ನಡೆದಿದೆ. ಈ ಸಂದರ್ಭ, ಕಳೆದ 15 ವರ್ಷಗಳಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ, ಶ್ರೀ ಮಠದ ಅಭಿಮಾನೀ ಶಿಷ್ಯರಾದ ಗಾನಕೋಗಿಲೆ ಶ್ರೀ ದಿನೇಶ ಅಮ್ಮಣ್ಣಾಯರನ್ನು ಶ್ರೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗಣ್ಯರ ಸಮಕ್ಷಮದಲ್ಲಿ ಅಭಿನಂದಿಸುವ ಸಮಾರಂಭವೂ ನಡೆದಿದೆ. ಗಾನಕೋಗಿಲೆ ಶ್ರೀ ದಿನೇಶ ಅಮ್ಮಣ್ಣಾಯರಿಗೆ ಕಲಾಭಿಮಾನಿಗಳ ಪರವಾಗಿ ಅಭಿನಂದನೆಗಳು. ಶುಭಾಶಯಗಳು. ಶ್ರೀಯುತರಿಂದ ಇನ್ನಷ್ಟು ಕಲಾಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.


- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್