ಬಡಗುತಿಟ್ಟು ಯಕ್ಷಗಾನದ ಅನಭಿಷಿಕ್ತ ದೊರೆಯಾಗಿ ಮಿಂಚಿದ ಅಭಿನಯ ಚತುರ ಚಿಟ್ಟಾಣಿ ರಾಮಚಂದ್ರ ಹೆಗಡೆ - ನೆನಪಿನಂಗಳದಲ್ಲಿ

               ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ, ಅಭಿನಯ ಚತುರರಾಗಿ ಮೆರೆದು ಅಸ್ತಂಗತರಾದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರ ಬಗೆಗೆ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ತಿಳಿದವರು ಬರೆದರೆ ಅದು ಒಂದು ದೊಡ್ಡ ಕೃತಿಯೇ ಆಗಬಹುದು. ಅವರ ಬಗೆಗೆ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸುವ ಅರ್ಹತೆಯನ್ನು ಹೊಂದಿರುವೆನೆಂಬ ಅಹಂಭಾವ ಖಂಡಿತಾ ಇಲ್ಲ. ಆದರೂ ಬರೆಯುವ ಭಾಗ್ಯ, ಅವಕಾಶಗಳು ಸಿಕ್ಕಿರುವುದು ಅವಕಾಶವೆಂದು ಭಾವಿಸುತ್ತೇನೆ. ನಮಗದು ಕರ್ತವ್ಯವೂ ಹೌದು. ನಾನು ಶಾಲಾ ವಿದ್ಯಾರ್ಥಿಯಾಗಿರುವಲ್ಲಿಂದ ತೊಡಗಿ, ಚಿಟ್ಟಾಣಿಯವರು ಮರಣಿಸುವ ವರೇಗೂ ಅವರ ವೇಷಗಳನ್ನು ನೋಡಿ ಸಂತೋಷಪಟ್ಟಿದ್ದೇನೆ. ಕೆಲವೊಂದು ಬಾರಿ ಅವರನ್ನು ಮಾತನಾಡಿಸಿದ್ದೂ ಇದೆ. ನಾನು ಚಲನಚಿತ್ರಗಳ ಆಸಕ್ತನಲ್ಲ. ಅಂದರೆ ಸಿನೆಮಾಗಳನ್ನು ನೋಡುವುದಿಲ್ಲ ಎಂದರ್ಥವಲ್ಲ. ಯಕ್ಷಗಾನದ ಉಭಯತಿಟ್ಟುಗಳ ಶ್ರೇಷ್ಠ ಕಲಾವಿದರು ನನ್ನ ಪಾಲಿಗೆ ಹೀರೋಗಳಾಗಿದ್ದರು. ಬಣ್ಣದ ಮನೆಗೆ ಹೋಗಿ ಅವರುಗಳನ್ನು ಮಾತನಾಡಿಸುವ ರೂಢಿಯೂ ಇತ್ತು, ಈಗಲೂ ಇದೆ. ಬೆರಳೆಣಿಕೆಯಷ್ಟು ಬಾರಿ ಚಿಟ್ಟಾಣಿಯವರ ಬಳಿ ಹೋಗಿ ಮಾತನಾಡುವ ಅವಕಾಶವೂ ಸಿಕ್ಕಿತ್ತು. ಶ್ರೀಯುತರ ಬಗ್ಗೆ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿದೆ. ಯಕ್ಷಗಾನ ಕ್ಷೇತ್ರದ ಬಡಗುತಿಟ್ಟಿನಲ್ಲಿ ಐದು ದಶಕಗಳ ಕಾಲ ‘ನಟಸಾರ್ವಭೌಮ’ ಎಂದೇ ಖ್ಯಾತರಾಗಿ ಮೆರೆದರು. ಭಸ್ಮಾಸುರ, ಕೌರವ, ಮಾಗಧ, ಕೀಚಕ, ಕಲಾಧರ (ಕವಿರತ್ನ ಕಾಳಿದಾಸ ಪ್ರಸಂಗ), ದುಷ್ಟಬುದ್ಧಿ, ರುದ್ರಕೋಪ, ವಿಶ್ವಾಮಿತ್ರ, ಕಾರ್ತವೀರ್ಯ ಮೊದಲಾದ ಪಾತ್ರಗಳು ಚಿಟ್ಟಾಣಿಯವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತ್ತು. ತನ್ನ ನಾಟ್ಯ, ಅಭಿನಯ ಸಾಮರ್ಥ್ಯಗಳಿಂದ ಯುವಕರೂ ಯಕ್ಷಗಾನದತ್ತ ಆಕರ್ಷಿತರಾಗುವಂತೆ ಮಾಡಿದ ಸಾಹಸಿ. ಬಹುಷಃ ಬಡಗುತಿಟ್ಟಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ ಕಲಾವಿದರಿವರು ಎಂದು ಹೇಳಿದರೂ ತಪ್ಪಾಗಲಾರದು. ಸಂಪತ್ತು ಆಗಿರಲಿ, ಒಳ್ಳೆಯ ಹೆಸರು (ಪ್ರಸಿದ್ಧಿ) ಆಗಿರಲಿ, ಗಳಿಸುವುದು ದೊಡ್ಡ ವಿಚಾರವಲ್ಲ. ಅದನ್ನು ಉಳಿಸುವುದು ಮುಖ್ಯ. ಒಮ್ಮೆ ಗಳಿಸಿದ ಹೆಸರನ್ನು ಕೊನೆಯ ವರೆಗೆ ಉಳಿಸಿಕೊಳ್ಳುವುದು ಕಲಾವಿದರಿಗೆ ಸವಾಲೇ ಹೌದು. ಈ ಸವಾಲನ್ನು ಎದುರಿಸಲು ಅಸಾಧ್ಯವಾದರೆ ಅಂತಹ ಕಲಾವಿದನು ಒಂದು ಬಾರಿ ಮಿಂಚಿದರೂ, ಮರೆಯಾಗಿ ನೇಪಥ್ಯವನ್ನು ಸೇರಿಕೊಳ್ಳುತ್ತಾನೆ. ಚಿಟ್ಟಾಣಿಯವರು ಹಂತ ಹಂತವಾಗಿ ಬೆಳೆದರು. ವೃತ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾ, ತನ್ನ ವಿಶಿಷ್ಟ ಕುಣಿತ, ಅಭಿನಯಗಳಿಂದ ಪ್ರೇಕ್ಷಕರ ಮನಸೂರೆಗೊಂಡವರು. ಕಲಾಬದುಕಿನಲ್ಲಿ ಬೀಳುಗಳನ್ನು ಕಂಡವರಲ್ಲ. ಕೊನೆಯವರೆಗೂ ಬಹುಬೇಡಿಕೆಯ ಕಲಾವಿದರಾಗಿದ್ದರು. ಅಪೂರ್ವ ಸಾಧಕರಾದ ಕೆರೆಮನೆ ಶ್ರೀ ಶಂಭು ಹೆಗಡೆಯವರೂ ಇದೇ ತೆರನಾಗಿ ಮೆರೆದಿದ್ದರು. ಕೆರೆಮನೆ ಶಂಭು ಹೆಗಡೆಯವರು ಮತ್ತು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರು ಬಡಗುತಿಟ್ಟಿನ ಯಕ್ಷಾಗಸವನ್ನು ರವಿ, ಶಶಿಯರಂತೆ ಬೆಳಗಿಸಿದ ಕಲಾರತ್ನದ್ವಯರು.
ಚಿಟ್ಟಾಣಿ ರಾಮಚಂದ್ರ ಹೆಗಡೆ

                ನಟಸಾರ್ವಭೌಮ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರ ಹುಟ್ಟೂರು ಹೊಸಾಕುಳಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಗುಂಡಬಾಳದ ಮಧ್ಯೆ ಹಡಿನಬಾಳ, ಹೊಸಾಕುಳಿ, ಸಾಲ್ಕೋಡು, ನೀಲ್ಕೋಡು, ಮುಗ್ವಾ ಎಂಬ ಐದು ಗ್ರಾಮಗಳು. ಸಮಷ್ಠಿಯಲ್ಲಿ ಇವುಗಳು ಹೊಸಾಕುಳಿ ಪಂಚಗ್ರಾಮಗಳು. ಈ ಪಂಚಗ್ರಾಮದಲ್ಲಿ ಒಂದಾದ ಹೊಸಾಕುಳಿಯ ಒಂದು ಹಳ್ಳಿ ಚಿಟ್ಟಾಣಿ. ಸುಮಾರು ಹದಿನೆಂಟು ಮನೆಗಳಿದ್ದ ಬ್ರಾಹ್ಮಣರ ಕೇರಿ ಯಾಗಿತ್ತು ಅದು. ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರ ಮನೆಯ ಮಾತಿನಲ್ಲಿ ಎತ್ತರವಾದ ಸ್ಥಳಕ್ಕೆ ಚಿಟ್ಟೆ ಎಂದೂ ಅರೆ (ಕಲ್ಲಗುಡ್ಡೆ)ಗೆ ಅಣಿ ಎಂದೂ ಕರೆಯುತ್ತಾರೆ. ಅಂತಹ ಸ್ಥಳವಾದುದರಿಂದ ಆ ಊರಿಗೆ ಚಿಟ್ಟಾಣಿ ಎಂದು ಬಹಳ ಹಿಂದಿನಿಂದಲೂ ಹೆಸರಿತ್ತು. ಅಭಿಮಾನಿಗಳಿಂದ ಮೊದಲು ಹೊಸಾಕುಳಿ ರಾಮಚಂದ್ರ ಹೆಗಡೆ ಯವರೆಂದೇ ಕರೆಸಿಕೊಂಡಿದ್ದರೂ ಮತ್ತೆ ‘ಚಿಟ್ಟಾಣಿ’ ಎಂದೇ ಖ್ಯಾತರಾದರು. ಇವರು ಜನಿಸಿದ್ದು 1935ನೇ ಇಸವಿ ಆಗಸ್ಟ್ 18ರಂದು. ತಂದೆ ಶ್ರೀ ಸುಬ್ರಾಯ ಹೆಗಡೆ. ತಾಯಿ ಶ್ರೀಮತಿ ಗಣಪಿ ಅಮ್ಮ. ಇವರದು ಕೃಷಿ ಕುಟುಂಬ. ಸುಮಾರು 84 ಸದಸ್ಯರಿದ್ದ ಕೂಡುಕುಟುಂಬದ ಮನೆಯಲ್ಲಿ ಜನನ. ಸೋಗೆಮಾಡಿನ, ಮಣ್ಣಿನ ಗೋಡೆಯ ಮನೆ. ಮಳೆಗಾಲದಲ್ಲಿ ಬಿಸುಪನ್ನೂ, ಬೇಸಿಗೆಯಲ್ಲಿ ತಂಪನ್ನೂ ಕೊಡುವ ಗುಣ ಇಂತಹ ಮನೆಗಳಿಗೆ. ಇವರ ಮುತ್ತಜ್ಜ ಪರಮೇಶ್ವರ ಹೆಗಡೆಯವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅಜ್ಜ ಈಶ್ವರ ಹೆಗಡೆಯವರು ಕೃಷಿಕರಾಗಿದ್ದರು. ಸುಮಾರು ಹನ್ನೆರಡು ವರ್ಷವರೆಗೂ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು 84 ಸದಸ್ಯರಿದ್ದ ಈ ಮನೆಯಲ್ಲೇ ವಾಸವಾಗಿದ್ದರು. ತಂದೆ ಸುಬ್ರಾಯ ಹೆಗಡೆಯವರು ಕೃಷಿ ಕಾರ್ಯಗಳಲ್ಲಿ ನಿರತರು. ಅಡಿಕೆ, ಬಾಳೆ, ತೆಂಗು, ವೀಳ್ಯದೆಲೆ ಕೃಷಿಕರು. ಮನೆಯವರೆಲ್ಲರೂ ತೋಟದಲ್ಲಿ ದುಡಿಯಬೇಕಾಗಿತ್ತು. ಜೀವನ ನಿರ್ವಹಣೆಗೆ ಅದುವೇ ದಾರಿ. ವೀಳ್ಯದೆಲೆಯನ್ನು ತಿಂಬ ಎಲೆಯೆಂದೂ, ಬಾಳೆಎಲೆಯನ್ನು ಉಂಬ ಎಲೆಯೆಂದೂ ಕರೆಯುತ್ತಿದ್ದರು. ಸುಬ್ರಾಯ ಹೆಗಡೆಯವರು ವಾರಕ್ಕೆ 19,000 ವೀಳ್ಯದೆಲೆಗಳನ್ನು ಅಂಕೋಲದ ವ್ಯಾಪಾರಿಯೊಬ್ಬರಿಗೆ ಮಾರುತ್ತಿದ್ದರಂತೆ. ಅಲ್ಲದೆ ಅಡಿಕೆಗೊನೆಗೆ ಕೊಟ್ಟೆ ಕಟ್ಟುವುದು, ಮದ್ದು ಹೊಡೆಯುವುದು, ಗೊನೆ ಕೊೈಯುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದವರು. ದಣಿವಿಲ್ಲದ, ಬಿಡುವಿಲ್ಲದ ದುಡಿಮೆ. ಸುಮಾರು 18 ವರ್ಷ ವರೆಗೂ ತಂದೆಗೆ ಸಹಾಯಕರಾಗಿ ಚಿಟ್ಟಾಣಿಯವರು ಈ ಕೆಲಸಗಳನ್ನೂ ಮಾಡುತ್ತಿದ್ದರು. ಶ್ರಮವಹಿಸಿ ದುಡಿಯುವ ಗುಣವು ತಂದೆಯಿಂದಲೇ ಬಂದಿರಬೇಕು. ಚಿಟ್ಟಾಣಿಯವರು ಕಲಾವಿದನಾಗಿ ರಂಗದಲ್ಲೂ ದಣಿವಿಲ್ಲದೆ ದುಡಿದಿದ್ದರು. ಚಿಟ್ಟಾಣಿಯವರು ಜನಿಸಿದ್ದು ಸಾಲ್ಕೋಡಿನಲ್ಲಿ. (ತಾಯಿಯ ಅಜ್ಜನ ಮನೆಯಲ್ಲಿ). ಜನಿಸಿದಾಗಲೇ ಕಣಿರೋಗವು ಬಾಧಿಸಿತ್ತು. (ತಲೆ ಸೀಳು ಬಿಡುವ ರೋಗ) ಆದರೂ ಪವಾಡಸದೃಶರಾಗಿ ಬದುಕಿದ್ದರು. ಬಹುಷಃ ಕಲಾಮಾತೆಯ ಅನುಗ್ರಹವೇ ಇರಬೇಕು. ಬರೆಹಾಕಿ, ಸುಟ್ಟು, ರೋಗವನ್ನು ಗುಣಪಡಿಸುವ ಪ್ರಯತ್ನವು ಸಫಲವಾಗಿತ್ತು. ಅದರ ಪರಿಣಾಮವಾಗಿ 9 ಕಲೆಗಳು ಚಿಟ್ಟಾಣಿಯವರ ತಲೆಯಲ್ಲಿ ಕೊನೆಯವರೆಗೂ ಉಳಿದಿತ್ತು. ತಾಯಿ ಗಣಪಿ ಅಮ್ಮ ಮದುವೆಯ ಹಾಡುಗಳನ್ನು ಅಂದವಾಗಿ ಹೇಳುತ್ತಿದ್ದರಂತೆ. ಮನೆವಾರ್ತೆಗಳನ್ನು ನಿರ್ವಹಿಸುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಚಿಟ್ಟಾಣಿಯವರಿಗೆ ಓದಿನಲ್ಲಿ ಆಸಕ್ತಿಯೇ ಇರಲಿಲ್ಲ. ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಅಣ್ಣಂದಿರ ಜತೆ ಭಾಸ್ಕೇರಿ ಶಾಲೆಗೆ ಮನೆಯಿಂದ ಹೊರಡುತ್ತಿದ್ದರು. ಆದರೆ ಶಾಲೆಗೆ ತಲುಪುತ್ತಿರಲಿಲ್ಲ. ಗೇರು ಬೆಟ್ಟದಲ್ಲಿ ಒಬ್ಬನೇ ಕುಣಿಯುತ್ತಿದ್ದರಂತೆ! ಅಷ್ಟು ತೀವ್ರವಾಗಿತ್ತು ಯಕ್ಷಗಾನಾಸಕ್ತಿ. ಹೊಸಾಕುಳಿ ಲಕ್ಷ್ಮೀನಾರಾಯಣ ದೇವಳದ ಬಳಿ ನಡೆಯುತ್ತಿದ್ದ ಪ್ರದರ್ಶನಗಳನ್ನೆಲ್ಲಾ ನೋಡುತ್ತಿದ್ದರು. ಮತ್ತೆ ಗೇರುಬೆಟ್ಟವನ್ನು ಹತ್ತಿ ಕುಣಿಯುತ್ತಿದ್ದರು. ಮೂಡ್ಕಣಿ ಮೇಳದ ಕಲಾವಿದರುಗಳಾದ ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆಯವರ ವೇಷಗಳನ್ನು ನೋಡುತ್ತಿದ್ದರು. ಕರ್ಕಿಮೇಳದ ಪರಮಯ್ಯ ಹಾಸ್ಯಗಾರರು ಮೂಡ್ಕಣಿ ನಾರಾಯಣ ಹೆಗಡೆಯವರ ವೇಷಗಳನ್ನು ನೋಡುವ ಅವಕಾಶಗಳು ಸಿಕ್ಕಿತ್ತು. ಹೀಗೆ ಎಳವೆಯಲ್ಲಿ ಈ ನಾಲ್ಕು ಮಂದಿ ಕಲಾವಿದರ ಅಭಿನಯ ಸಾಮರ್ಥ್ಯಕ್ಕೆ ಚಿಟ್ಟಾಣಿಯವರು ಮಾರುಹೋಗಿದ್ದರು. ಕೊಂಡದಕುಳಿ ರಾಮ ಹೆಗಡೆ ಮತ್ತು ಲಕ್ಷ್ಮಣ ಹೆಗಡೆಯವರು ಚಿಟ್ಟಾಣಿ ಅವರ ಬಂಧುಗಳೇ ಆಗಿದ್ದರು. ಯಕ್ಷಗಾನಕ್ಕೆ ಕರ್ಕಿ ಪರಮಯ್ಯ ಹಾಸ್ಯಗಾರರ ಕೊಡುಗೆ ಅಪಾರ. ಪರಂಪರೆಯನ್ನು ಉಳಿಸಿ ಬೆಳೆಸಿದವರೂ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದವರೂ ಆಗಿದ್ದರು. ಚಿಟ್ಟಾಣಿಯವರು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ಶಾಲೆಗೆ ಚಕ್ಕರ್ ಹಾಕಿ ಗೇರುಬೆಟ್ಟದಲ್ಲಿ ಕುಣಿಯುತ್ತಿದ್ದಾಗ ಅಧ್ಯಾಪಕರ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಗದರಿಸಿದಾಗ, ‘ನನಗೆ ಆಟ ಕುಣಿಯುವ ಚಟ. ಹೇಗಾದರೂ ಮಾಡಿ ಒಂದು ವೇಷ ಮಾಡಬೇಕೆಂಬ ಆಸೆ. ಹಾಗಾಗಿ ಗೇರುಬೆಟ್ಟದಲ್ಲಿ ಕುಣಿದೆ’ ಎಂದು ಧೈರ್ಯವಾಗಿ ಹೇಳಿದ್ದರು. ಅದೇ ಸಮಯಕ್ಕೆ ಕೆರೆಮನೆ ಮೇಳದ ಪ್ರದರ್ಶನ ಹೊಸಾಕುಳಿಯಲ್ಲಿ ನಡೆದಿತ್ತು. ಪ್ರಸಂಗ ಗದಾಯುದ್ಧ. ಕೆರೆಮನೆ ಶಿವರಾಮ ಹೆಗಡೆಯವರ ಕೌರವನ ಪಾತ್ರನಿರ್ವಹಣೆಯಿಂದ ಚಿಟ್ಟಾಣಿಯವರು ಆಕರ್ಷಿತರಾಗಿದ್ದರು. (ಶಿವರಾಮ ಹೆಗಡೆಯವರಂತ ಕಲಾವಿದರು, ಅಭಿನಯ ಚತುರರು ಯಕ್ಷಗಾನದಲ್ಲಿ ವಿರಳ ಎಂಬ ಅಭಿಪ್ರಾಯವನ್ನು ಚಿಟ್ಟಾಣಿಯವರು ಹೊಂದಿದ್ದರು). ಅದೇ ವರ್ಷ ಯಕ್ಷಗಾನ ಮೇಳಕ್ಕೆ ಸೇರುವುದೆಂಬ ನಿರ್ಣಯವನ್ನೂ ಮಾಡಿದ್ದರು. ಆ ಸಮಯದಲ್ಲಿ ಸಂತೆಗುಳಿ ಬಾಳೆಗದ್ದೆ ರಾಮಕೃಷ್ಣ ಭಟ್ಟರು ಒಳ್ಳೆಯ ವೇಷಧಾರಿಯಾಗಿ ಹೆಸರು ಗಳಿಸಿದ್ದರು. ಜತೆಗೆ ಚಹದ ಅಂಗಡಿಯನ್ನೂ ನಡೆಸುತ್ತಿದ್ದವರು. ಅಲ್ಲಿ ಯಕ್ಷಗಾನ ತರಬೇತಿಯನ್ನೂ ನೀಡುತ್ತಿದ್ದರು. ಚಿಕ್ಕಪ್ಪ ಶಿವ ಹೆಗಡೆಯವರೇ ಚಿಟ್ಟಾಣಿಯವರನ್ನು ಕರೆದುಕೊಂಡು ಹೋಗಿ, ಬಾಳೆಗದ್ದೆ ರಾಮಕೃಷ್ಣ ಭಟ್ಟರಿಗೆ ಒಪ್ಪಿಸಿ, ಯಕ್ಷಗಾನವನ್ನು ಕಲಿಸಬೇಕೆಂದು ಕೇಳಿಕೊಂಡಿದ್ದರು. ರಾಮಕೃಷ್ಣ ಭಟ್ಟರ ಆದೇಶದಂತೆ ಚಹದ ಅಂಗಡಿಯ ಹತ್ತಿರ ಕುಣಿದ ಚಿಟ್ಟಾಣಿಯವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಉತ್ತಮ ಭವಿಷ್ಯ ಇದೆ ಎಂದು ಹೇಳಿ ಆಶೀರ್ವದಿಸಿ, ಮೇಳದಲ್ಲಿ ವೇಷ ಮಾಡಲು ಹೇಳಿದರಂತೆ. ಅವರ ಬಾಳೆಗದ್ದೆ ಮೇಳದ ಆಟ (ಈ ಮೇಳವನ್ನು ಆರಂಭಿಸಿದವರು ಬಾಳೆಗದ್ದೆ ರಾಮಕೃಷ್ಣ ಭಟ್ಟರ ತಂದೆಯವರು), ಬಾಳೆಗದ್ದೆ ವೆಂಕಟ್ರಮಣ ದೇವಸ್ಥಾನದಲ್ಲಿ. ಶ್ರೀಕೃಷ್ಣ ಪಾರಿಜಾತ ಪ್ರಸಂಗ. ಚಿಟ್ಟಾಣಿಯವರು ಅಗ್ನಿಯಾಗಿ ರಂಗವೇರಿದ್ದರು. ಅಂದು ಬಾಳೆಗದ್ದೆ ರಾಮಕೃಷ್ಣ ಭಟ್ಟರ ದೇವೇಂದ್ರ. ಇದು ಚಿಕ್ಕಪ್ಪ ಶಿವ ಹೆಗಡೆಯವರಿಗೆ ಬಿಟ್ಟರೆ ಮನೆಯವರಾರಿಗೂ ತಿಳಿದಿರಲಿಲ್ಲ. ನಾಲ್ಕು ದಿನ ಕಳೆದ ಮೇಲೆ ಈ ವಿಚಾರ ತಿಳಿದ ತಂದೆ ಸುಬ್ರಾಯ ಹೆಗಡೆಯವರು ಚಿಟ್ಟಾಣಿಯವರನ್ನು ಅಟ್ಟಾಡಿಸಿ ಹೊಡೆದಿದ್ದರಂತೆ. ಆದರೂ ಚಿಕ್ಕಪ್ಪ ಶಿವ ಹೆಗಡೆಯವರ ಪ್ರೋತ್ಸಾಹ ಇತ್ತು. ಭಾಸ್ಕೇರಿಯ ಆಟ- ಅಭಿಮನ್ಯು ಕಾಳಗ, ಸೈಂಧವ ವಧೆ ಪ್ರಸಂಗ. ಮೊದಲೇ ನಿರ್ಧರಿಸಿದಂತೆ, ಮನೆಯವರಾರಿಗೂ ತಿಳಿಯದಂತೆ ಚಿಟ್ಟಾಣಿಯವರು ಅಭಿಮನ್ಯುವಾಗಿ ರಂಗ ವೇರಿದ್ದರು. ಆದರೂ ವಿಚಾರ ತಿಳಿದ ಇವರ ದೊಡ್ಡಪ್ಪ ರಾಮಹೆಗಡೆಯವರು ಪ್ರೇಕ್ಷಕರ ಮಧ್ಯೆ ಕುಳಿತು ಆಟ ನೋಡಿದ್ದರು! ವೇಷ ಮಾಡಿದರೆ ಕಾಲು ಮುರಿಯುತ್ತೇನೆ ಎಂದು ಗದರಿಸಿದ್ದ ಅವರಿಗೆ, ಚಿಟ್ಟಾಣಿಯವರು ಅಭಿಮನ್ಯು ಪಾತ್ರವನ್ನು ನಿರ್ವಹಿಸಿದ ರೀತಿಯು ಸಂತೋಷವನ್ನು ನೀಡಿತ್ತು. ನೀನು ಇನ್ನು ವೇಷ ಮಾಡು. ಒಳ್ಳೆಯದಾಗಲಿ ಎಂದು ಹರಸಿದ್ದರು. ಅಲ್ಲಿಗೆ ಬಂದಿದ್ದ ಕೊಂಡದಕುಳಿ ರಾಮ ಹೆಗಡೆಯವರೂ ಮೆಚ್ಚಿ ಮೂಡ್ಕಣಿ ಮೇಳಕ್ಕೆ ಬಾ ಎಂದು ಆಹ್ವಾನಿಸಿದ್ದರು. ಮೂಡ್ಕಣಿ ಮೇಳದ ಜತೆಗೆ ಮಾವಿನಕುರ್ವೆ ಮೇಳದ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಆ ಕಾಲದ ಪ್ರಸಿದ್ಧ ವೇಷಧಾರಿಗಳ ಜತೆ ಪಾತ್ರಗಳನ್ನು ಮಾಡಿದರು. ಅದನ್ನು ಸವಾಲು ಎಂಬಂತೆ ಸ್ವೀಕರಿಸಿ ತೊಡಗಿಸಿಕೊಂಡರು. ಇದೇ ಕಾಲಕ್ಕೆ ಕೂಡುಕುಟುಂಬವು ಬೇರೆ ಬೇರೆಯಾಗಿ ವಾಸಿಸುವ ಸಂದರ್ಭವೊದಗಿತ್ತು. ಚಿಟ್ಟಾಣಿಯವರು ಮೂಡ್ಕಣಿ ಮೇಳದ ತಿರುಗಾಟದ ಜತೆಗೆ, ಮಳೆಗಾಲದಲ್ಲಿ ಕೃಷಿಕಾರ್ಯಗಳನ್ನು ನಡೆಸುತ್ತಿದ್ದರು. ಮಳೆಗಾಲ ತಾಳಮದ್ದಳೆಗಳಿಗೂ ಹೋಗಿ ಮಾತುಗಾರಿಕೆಯನ್ನೂ ಅಭ್ಯಸಿಸಿದರು. ಪ್ರಸಂಗನಡೆಗಳನ್ನು ತಿಳಿದುಕೊಂಡರು. ಪರಿಸರದ ತೋಟಗಳಲ್ಲಿ ಅಡಿಕೆ ಕೊನೆಗೆ ಕೊಟ್ಟೆ ಕಟ್ಟುವ ಕೆಲಸವನ್ನೂ ಮಾಡಿದರು. ಹೀಗೆ ಶ್ರಮವಹಿಸಿ ದುಡಿದ ಪರಿಣಾಮ ರಂಗಸ್ಥಳದಲ್ಲೂ ದಣಿವಾಗಲಿಲ್ಲ ಎಂದು ಚಿಟ್ಟಾಣಿಯವರು ಹೇಳುತ್ತಿದ್ದರು. ಚಿಕ್ಕವನಿರುವಾಗ ಭಜನೆ ಕುಣಿತದಲ್ಲೂ ಗೆಳೆಯರ ಜತೆ ಭಾಗವಹಿಸುತ್ತಿದ್ದರು. ಏಕತಾಳದ ಹೆಜ್ಜೆಗಳ ಲಯವು ಇದರಿಂದಾಗಿಯೇ ಸರಿಯಾಗಿ ಸಿದ್ಧಿಸಿತು ಎಂದೂ ಅವರು ಹೇಳುತ್ತಿದ್ದರು. ಚಿಕ್ಕಮೇಳಗಳಲ್ಲಿ ಭಾಗವಹಿಸಿದರು. ಗೆಳೆಯ ಮಾಗೋಡು ರಾಮ ಹೆಗಡೆಯವರ ಜತೆ ಕೆಲಸಮಯ ಸಣ್ಣಮಟ್ಟಿನ ಅಡಿಕೆ ವ್ಯಾಪಾರವನ್ನೂ ನಡೆಸಿದ್ದರು. 22ನೇ ವಯಸ್ಸಿನವರೆಗೆ ಬದುಕು ಹೀಗೆ ಸಾಗಿತ್ತು.

                         ಎಳವೆಯಲ್ಲೇ ಮೂಡ್ಕಣಿ ನಾರಾಯಣ ಹೆಗಡೆಯವರ ಮತ್ತು ಕೆರೆಮನೆ ಶಿವರಾಮ ಹೆಗಡೆಯವರ ಜತೆ ವೇಷಗಳನ್ನು ಮಾಡುವ ಅವಕಾಶಗಳು ಚಿಟ್ಟಾಣಿಯವರಿಗೆ ಲಭಿಸಿತ್ತು. ಜತೆಗೆ ಸ್ವಯಂಪ್ರತಿಭೆಯೂ ತುಂಬಿತ್ತು. ಕಲಾವಿದನಾಗಿ ಬೆಳೆಯಲು ಬೇರೇನು ಬೇಕು? ಕೊಂಡದಕುಳಿ ರಾಮ ಹೆಗಡೆ, ಲಕ್ಷಣ ಹೆಗಡೆ, ಕೆಕ್ಕಾರು ಗಣೇಶ ಭಟ್ರು ಮೊದಲಾದವರ ಜತೆಗೂ ವೇಷಮಾಡಿ ಅನುಭವವನ್ನು ಗಳಿಸಿಕೊಂಡರು. ಜತೆಗೆ ಗುಂಡಬಾಳಾ ಕ್ಷೇತ್ರದಲ್ಲೂ ವೇಷ ಮಾಡುತ್ತಿದ್ದರು. ಮೂಡ್ಕಣಿ ಮೇಳವನ್ನು ಮೂರೂರು ಮೇಳವಾಗಿ ಖ್ಯಾತ ಕಲಾವಿದ ಮೂರೂರು ದೇವರು ಹೆಗಡೆಯವರು ನಡೆಸಲಾರಂಭಿಸಿದ್ದರು. ಹಿಮ್ಮೇಳಕ್ಕೆ ಕಡತೋಕಾ ಮಂಜುನಾಥ ಭಾಗವತರು, ಕೃಷ್ಣ ಭಾಗವತರು, ಕರ್ಕಿ ಸತ್ಯನಾರಾಯಣ, ಕೇಶವ ಭಂಡಾರಿ (ಹಿಮ್ಮೇಳಕ್ಕೆ) ಮೂರೂರು ಈಶ್ವರ ಹೆಗಡೆ, ಏಕ್ಟರ್ ಗಜಾನನ ಜೋಷಿ, ಕಲ್ಲಬ್ಬೆ ವಿಷ್ಣುಹೆಗಡೆಯವರು, ಗುಂಡಿಬೈಲು ಗಣೇಶ ಭಟ್, ಸಾಲ್ಕೋಡು ಗಣಪತಿ ಹೆಗಡೆ, ಮೂರೂರು ಲಕ್ಕಣ್ಣ, ಜಲವಳ್ಳಿ ವೆಂಕಟೇಶ್ (ಮುಮ್ಮೇಳ) ಮೊದಲಾದವರಿದ್ದರು. ಕಡತೋಕ ಮಂಜುನಾಥ ಭಾಗವತರು ಬರೆದ ಪ್ರಸಂಗ ಕವಿರತ್ನ ಕಾಳಿದಾಸದ ಕಲಾಧರ ಎಂಬ ಪಾತ್ರ ಅನಿವಾರ್ಯವಾಗಿ ಮಾಡಬೇಕಾಗಿ ಬಂದಿತ್ತು. ಸಿಕ್ಕಿದ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಚಿಟ್ಟಾಣಿಯವರು ಆ ಪಾತ್ರದಲ್ಲಿ ಖ್ಯಾತರಾದರು. ‘ಕಲಾಧರ ಹೆಗಡೆ’ ಎಂದೇ ಕರೆಸಿಕೊಂಡರು. ಅವಕಾಶಗಳು ಒಂದೊಂದಾಗಿ ಅರಸುತ್ತಾ ಬರತೊಡಗಿದವು. ದೇವರು ಹೆಗಡೆಯವರೂ, ಕಡತೋಕಾ ಮಂಜುನಾಥ ಭಾಗವತರೂ ಚಿಟ್ಟಾಣಿಯವರನ್ನು ಪ್ರೋತ್ಸಾಹಿಸಿ, ಅವರ ಬೆಳವಣಿಗೆಗೆ ಕಾರಣ ರಾಗಿದ್ದರು. 1960ನೇ ಇಸವಿ ತನ್ನ 25ನೇ ವಯಸ್ಸಿನಲ್ಲಿ ಕಡತೋಕ ಮಳ್ಳಜ್ಜಿ ನಾರಾಯಣ ಹೆಗಡೆಯವರ ಕಿರಿಯ ಪುತ್ರಿ ಸುಶೀಲ ಎಂಬವರೊಡನೆ ವಿವಾಹವಾಗಿದ್ದರು. 1962ರಲ್ಲಿ ಮೂರೂರು ಮೇಳವು ತಿರುಗಾಟ ನಿಲ್ಲಿಸಿತ್ತು. ನಂತರ ಚಿಟ್ಟಾಣಿಯವರು ಗುಂಡಬಾಳಾ ಮೇಳಕ್ಕೆ ಸೇರಿದ್ದರು. ಸದ್ರಿ ಮೇಳದ ತಿರುಗಾಟದಲ್ಲಿರುವಾಗಲೇ ಗುಂಡಬಾಳಾ ಸಮೀಪದ ಹಡ್ಸಿ ಎಂಬಲ್ಲಿ ಹತ್ತು ಎಕರೆ ಜಮೀನು ಖರೀದಿಸಿ ಅಲ್ಲಿ ವಾಸ್ತವ್ಯ ಹೂಡಿದ್ದರು. ಬೇಸಿಗೆಯಲ್ಲಿ ಮೇಳ. ಮಳೆಗಾಲ ಕೃಷಿ. ಚಿಟ್ಟಾಣಿಯವರ ಮಡದಿ ಶ್ರೀಮತಿ ಸುಶೀಲ ಚಿಟ್ಟಾಣಿ ಕೃಷಿಯಲ್ಲಿ ಆಸಕ್ತರಾಗಿದ್ದರು. ಕೆಲಕಾಲದ ನಂತರ ಹಡ್ಸಿ ಜಾಗವನ್ನು ಸಹೋದರರಿಗೆ ನೀಡಿ ಮತ್ತೆ ಚಿಟ್ಟಾಣಿಗೆ ಬಂದು ನೆಲೆಸಿದ್ದರು. ಬಳಿಕ ಸಂತೆಗುಳಿ ನಾರಾಯಣ ಭಟ್ಟರ ಸಂಯುಕ್ತ ಮೇಳದಲ್ಲಿ ವ್ಯವಸಾಯ. ಕಡತೋಕಾ ಕೃಷ್ಣ ಭಾಗವತರು, ಕಿನ್ನೀರು ನಾರಾಯಣ ಹೆಗಡೆ, ನೆಬ್ಬೂರು ನಾರಾಯಣ ಭಾಗವತರು, ಕರ್ಕಿ ಭಂಡಾರಿ ಸಹೋದರರು, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಏಕ್ಟರ್ ಜೋಷಿ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂರೂರು ಈಶ್ವರ ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಗಜಾನನ ಭಂಡಾರಿ, ಹೆರಂಜಾಲು ವೆಂಕಟ್ರಮಣ ಮೊದಲಾದ ದಿಗ್ಗಜರೊಂದಿಗೆ ಒಡನಾಟ. 1965 ರಲ್ಲಿ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರು ಮಾಡಿದ ಯಕ್ಷಗಾನ ಶಾಲೆಯಲ್ಲಿ ನಾಟ್ಯ ತರಬೇತಿಯನ್ನೂ ಚಿಟ್ಟಾಣಿಯವರು ನೀಡಿದ್ದರು. ಬಳಿಕ 1967ರಲ್ಲಿ ಪುರ್ಲೆಯವರ ನೇತೃತ್ವದಲ್ಲಿ ಆರಂಭವಾದ ‘ಸೀತಾರಾಮಾಂಜನೇಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಕೊಳಗಿಬೀಸ್’ ಮೇಳದಲ್ಲಿ ತಿರುಗಾಟ. ಇದು ಖ್ಯಾತ ಕಲಾವಿದರಿದ್ದ ಮೇಳವಾಗಿತ್ತು. ಸದ್ರಿ ಮೇಳವನ್ನು ಮಾಗೋಡ ರಾಮ ಹೆಗಡೆಯವರು ಮುಂದುವರಿಸಿದಾಗ ಚಿಟ್ಟಾಣಿಯವರೂ ಜತೆಗಿದ್ದರು. ಬಳಿಕ ಕೋಟ ಪಾರಂಪಳ್ಳಿ ಶ್ರೀಧರ ಹಂದೆಯವರ ನೇತೃತ್ವದ ಅಮೃತೇಶ್ವರೀ ಮೇಳಕ್ಕೆ. ಮತ್ತೊಮ್ಮೆ ಮಹಾನ್ ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಜತೆಯವರ ಜತೆ ವ್ಯವಸಾಯ. ಅಮೃತೇಶ್ವರೀ ಮೇಳದಲ್ಲಿ ಒಟ್ಟು 13 ತಿರುಗಾಟ. ಉಪ್ಪೂರರ ಹಾಡುಗಳಿಗೆ ಚಿಟ್ಟಾಣಿಯವರ ವೇಷಗಳು ರಂಜಿಸಿತ್ತು. ಬಳಿಕ ಪುರ್ಲೆ ರಾಮಚಂದ್ರ ಹೆಗಡೆಯವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ತಿರುಗಾಟ. ಬಳಿಕ ಒಂದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿದ್ದರು. 1989ರಲ್ಲಿ ಬಚ್ಚಗಾರು ಮೇಳದಲ್ಲಿ ಕಲಾಸೇವೆ. ಶಿರಸಿ ಮತ್ತು ಬಚ್ಚಗಾರು ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ ಅವರೂ ತಂದೆಯ ಜತೆ ಕಲಾಸೇವೆಯನ್ನು ಮಾಡಿದ್ದರು. ಬಳಿಕ ಶಿರಸಿ ಮಾರಿಕಾಂಬಾ ಮೇಳದಲ್ಲಿ ಕಲಾಸೇವೆ. ನಂತರ 1 ವರ್ಷ ಪೆರ್ಡೂರು ಮೇಳ. ನಂತರ ಮೇಳದ ತಿರುಗಾಟದಿಂದ ದೂರ ಉಳಿದರೂ, ‘ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಎಂಬ ಬಯಲಾಟದ ತಂಡದಲ್ಲಿ ವೇಷ ಮಾಡುತ್ತಿದ್ದರು. ಅಲ್ಲದೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು.
                      ಹೀಗೆ ಸುಮಾರು 50 ವರ್ಷಕ್ಕಿಂತಲೂ ಹೆಚ್ಚಿನ ಕಾಲಗಳ ಕಲಾಬದುಕು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಅವರದು. ಅನೇಕ ಸಂಘ-ಸಂಸ್ಥೆಗಳು ‘ಕಲಾಧರ ಚಿಟ್ಟಾಣಿ’ ಅವರನ್ನು ಸನ್ಮಾನಿಸಿ ಗೌರವಿಸಿದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಪುತ್ರರಾದ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಶ್ರೀ ನರಸಿಂಹ ಚಿಟ್ಟಾಣಿ ಯಕ್ಷಗಾನ ಕ್ಷೇತ್ರದಲ್ಲಿ ಒಳ್ಳೆಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. ಮೊಮ್ಮಗ ಶ್ರೀ ಕಾರ್ತಿಕ್ ಚಿಟ್ಟಾಣಿ ಅವರು ಉದಯೋನ್ಮುಖ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರ ಎಪ್ಪತ್ತನೆಯ ವಯಸ್ಸಿನ ಸಂದರ್ಭ ‘ನಿಮ್ಮ ಚಿಟ್ಟಾಣಿ’ ಎಂಬ ಕೃತಿಯೊಂದು ಓದುಗರ ಕೈಸೇರಿತ್ತು. ಇದರ ಲೇಖಕರು ಡಾ| ಜಿ. ಎಲ್. ಹೆಗಡೆ ಅವರು. ಪ್ರಕಾಶಕರು ಶ್ರೀ ನಾಗೇಂದ್ರ ಯಲ್ಲಾಪುರ ಅವರು (ಯಲ್ಲಾಪುರ ಪ್ರಕಾಶನ). ಈ ಪುಸ್ತಕದಲ್ಲಿ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆಯವರು ತಮ್ಮ ಬದುಕು ಸಾಗಿದ ರೀತಿಯನ್ನು ‘ನಿಮ್ಮ ಚಿಟ್ಟಾಣಿ’ ಎಂಬ ಶೀರ್ಷಿಕೆಯಡಿ ಸೊಗಸಾಗಿ ವಿವರಿಸಿದ್ದಾರೆ. ರಾಷ್ಟ್ರೀಯ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಕಲಾವಿದರಿವರು. ಬದುಕಿನ ಕೊನೆಯ ವರೇಗೂ ಯಕ್ಷಗಾನದಿಂದ ದೂರ ಉಳಿದವರಲ್ಲ. 2017ನೇ ಇಸವಿ ಒಕ್ಟೋಬರ್ 3ರಂದು ಚಿಟ್ಟಾಣಿಯವರು ನಿಧನ ರಾದಾಗ ಕಲಾಭಿಮಾನಿಗಳೆಲ್ಲರೂ ಅತ್ಯಂತ ದುಃಖ ವನ್ನು ಅನುಭವಿಸಿದ್ದರು. ನಟಸಾರ್ವಭೌಮ, ಕಲಾಧರ, ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಯವರಿಗೆ ಕಲಾಭಿಮಾನಿಗಳೆಲ್ಲರ ಪರವಾಗಿ ನುಡಿನಮನಗಳು.

- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು