ತೆಂಕುತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳ

                ತೆಂಕುತಿಟ್ಟು ಯಕ್ಷಗಾನದ ಮುಮ್ಮೇಳದಲ್ಲಿ ಹಾಸ್ಯ, ಬಣ್ಣದ ವೇಷ, ಎದುರು ವೇಷ, ಪೀಠಿಕೆ ವೇಷ, ಪುಂಡುವೇಷ, ಸ್ತ್ರೀವೇಷ- ಹೀಗೆ ಹಲವು ವಿಭಾಗಗಳು. ಪೂರ್ವರಂಗದಲ್ಲಿ ಬಾಲಗೋಪಾಲ ವೇಷದಿಂದ ತೊಡಗಿ ಎಲ್ಲಾ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದೇ ಈ ಸ್ಥಾನಗಳನ್ನು ಪಡೆಯುವುದು ಮೊದಲಿನಿಂದ ನಡೆದು ಬಂದ ರೀತಿಯೇ ಆಗಿದೆ. ಪೂರ್ವರಂಗದಲ್ಲಿ ಕುಣಿಯುತ್ತಾ ಸಭಾಕಂಪನವೂ ದೂರವಾಗಿ, ರಂಗನಡೆ, ಲಯಜ್ಞಾನಗಳನ್ನೂ ಹೊಂದಿ, ಪ್ರದರ್ಶನಗಳನ್ನು ಗಮನವಿಟ್ಟು ನೋಡಿದ ದೆಸೆಯಿಂದ ಪ್ರಸಂಗಜ್ಞಾನವೂ ಸಿದ್ಧಿಸಿ ಆತ ಪಕ್ವನಾಗಿರುತ್ತಾನೆ. ಆದಕಾರಣ ಪ್ರಸಂಗಗಳಲ್ಲಿ ಬರುವ ವೇಷಗಳನ್ನು ದಾಟಿ ಬಂದ ಕಲಾವಿದರಿಗೆ ನಂತರ ಆಯ್ಕೆಗೆ ಅವಕಾಶಗಳಿವೆ. ಅಭಿರುಚಿಗೆ, ಮನೋಧರ್ಮಕ್ಕೆ ತಕ್ಕಂತೆ, ತಾನು ಯಾವ ವಿಭಾಗದಲ್ಲಿ ಮುಂದುವರಿದರೆ ಕಾಣಿಸಿಕೊಳ್ಳಬಹುದು ಎಂದು ಯೋಚಿಸಿಯೇ ಮುಂದುವರಿಯಬಹುದು. ತಾನೊಬ್ಬ ಪುಂಡುವೇಷಧಾರಿಯಾಗಬೇಕು ಎಂಬ ಆಸೆಯಿದ್ದರೆ ಆತ ದೇವೇಂದ್ರನ ಬಲ, ಪ್ರಹ್ಲಾದ, ಧ್ರುವ, ಬಾಲಲೀಲೆಯ ಕೃಷ್ಣ, ಷಣ್ಮುಖ ಇತ್ಯಾದಿ ಪಾತ್ರಗಳನ್ನು ಮಾಡಿ ಬೆಳೆದು ಬಭ್ರುವಾಹನ, ಅಭಿಮನ್ಯು, ಪರಶುರಾಮ, ಲಕ್ಷ್ಮಣ ಮೊದಲಾದ ಪಾತ್ರಗಳಿಗೆ ತೇರ್ಗಡೆಯಾಗುತ್ತಾನೆ. ಉತ್ತಮ ನಾಟ್ಯ, ಗಿರಕಿ ಹೊಡೆಯುವ ಕಲೆ, ಹಿತಮಿತವಾದ ಮಾತಿನ ಜತೆ, ರೂಪ ಮತ್ತು ವೇಷಕ್ಕೆ ಬೇಕಾದಂತೆ ದೇಹವೂ (ಫಿಗರ್) ಇದ್ದರೆ ಈ ಪಾತ್ರಗಳಲ್ಲಿ ಕಲಾವಿದ ರಂಜಿಸುತ್ತಾನೆ ಎಂಬುದು ನಿಸ್ಸಂಶಯ. ಈ ಸಂದರ್ಭಗಳಲ್ಲಿ ಮಾತುಗಾರಿಕೆಯತ್ತ ಗಮನಹರಿಸಿ ಅಭ್ಯಸಿಸಿದರೆ ಆತ ಒಂದನೇ ಪುಂಡುವೇಷಧಾರಿಯಾಗಿ ಮೆರೆಯಲು ಅವಕಾಶಗಳೂ ಒದಗುತ್ತದೆ. ದಿಂಗಿಣ, ನಾಟ್ಯ, ಗಿರಕಿ ಮೊದಲಾದ ಕುಣಿತದ ಕ್ರಮಗಳಿಂದ ಪುಂಡುವೇಷಧಾರಿಗಳು ಪ್ರೇಕ್ಷಕರನ್ನು ಬಹುಬೇಗನೇ ತಲುಪಬಲ್ಲರು. ಪಾತ್ರೋಚಿತವಾಗಿ ಹೇಗೆ ಕುಣಿಯುತ್ತಾರೆ? ಎಷ್ಟು ಹಾರುತ್ತಾರೆ? ಎಂದು ಲೆಕ್ಕಹಾಕುವ ಪ್ರೇಕ್ಷಕರೂ ಸಭೆಯಲ್ಲಿರು ತ್ತಾರೆ. ತೆಂಕುತಿಟ್ಟಿನಲ್ಲಿ ಪ್ರಸಕ್ತ ಪುಂಡುವೇಷಧಾರಿಗಳಾಗಿ ಅನೇಕ ಕಲಾವಿದರು ಮಿಂಚುತ್ತಿದ್ದಾರೆ. ಅವರಲ್ಲೊಬ್ಬರು ಶ್ರೀ ಚಂದ್ರಶೇಖರ ಧರ್ಮಸ್ಥಳ. ಶ್ರೀ ಧರ್ಮಸ್ಥಳ ಮೇಳದ ಕಲಾವಿದ.
ಚಂದ್ರಶೇಖರ ಧರ್ಮಸ್ಥಳ

                          ಶ್ರೀ ಚಂದ್ರಶೇಖರ ಅವರು ಅವಿರತ ಸಾಧನೆಯ ಮೂಲಕ ಬೆಳೆದು ಕಲಾವಿದನಾಗಿ ಕಾಣಿಸಿಕೊಂಡವರು. ಪ್ರಸ್ತುತ ಬಹುಬೇಡಿಕೆಯ ಪುಂಡುವೇಷಧಾರಿ. ಇವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 1975ನೇ ಇಸವಿ ಸೆಪ್ಟಂಬರ್ 22ನೇ ತಾರೀಕಿನಂದು ಶ್ರೀ ಗುರುವಪ್ಪ ಪೂಜಾರಿ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಗುರುವಪ್ಪ ಪೂಜಾರಿ ನೀಲಮ್ಮ ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳು (3 ಗಂಡು, 1 ಹೆಣ್ಣು). ಗುರುವಪ್ಪ ಪೂಜಾರಿಯವರು ಕೃಷಿಕರು. ಜತೆಗೆ ಕುಲಕಸುಬಿನಲ್ಲೂ (ಮೂರ್ತೆ) ನಿಷ್ಣಾತರು. ಚಂದ್ರಶೇಖರರ ತಾಯಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಖಾವಂದರ ಕೃಪಾಶ್ರಯದಲ್ಲಿ ದುಡಿಯುತ್ತಿದ್ದಾರೆ. ಇವರ ಮನೆಯವರೆಲ್ಲಾ ಯಕ್ಷಗಾನಾಸಕ್ತರು. ಚಂದ್ರಶೇಖರ ಅವರು ಓದಿದ್ದು 5ನೇ ತರಗತಿ ವರೇಗೆ. ಧರ್ಮಸ್ಥಳ ಶಾಲೆಯಲ್ಲಿ. ನಂತರ 2 ವರ್ಷಗಳ ಕಾಲ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದರು. ಎಳವೆಯಲ್ಲಿ ಬಡತನ ಇತ್ತು. ಚುರುಕಾಗಿ ಬುದ್ಧಿವಂತರಾಗಿದ್ದರೂ ಅನಿವಾರ್ಯವಾಗಿ ಓದು ನಿಲ್ಲಿಸಬೇಕಾಗಿ ಬಂದಿತ್ತು. ಬಾಲಕನಾಗಿದ್ದಾಗ ತಂದೆಯವರ ಜತೆ ಚಂದ್ರಶೇಖರ ಅವರೂ ಒಂದು ವರ್ಷ ಕುಲಕಸುಬನ್ನು ಮಾಡಿದ್ದರು. ಯಕ್ಷಗಾನಾಸಕ್ತಿ ಇತ್ತು. ಆದರೆ ನಾಟ್ಯ ಕಲಿತು ಕಲಾವಿದನಾಗೆಂದು ಯಾರೂ ಒತ್ತಾಯ ಮಾಡಿರಲಿಲ್ಲ. ಹೋಟೆಲ್ ಕೆಲಸ ಮಾಡುತ್ತಿದ್ದ ಸಂದರ್ಭ, ಪಕ್ಕದ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಿತ್ರರೊಬ್ಬರು ಅಂಗಡಿ ಕೆಲಸ ಬಿಟ್ಟು ಯಕ್ಷಗಾನ ಸೇರುತ್ತೇನೆ ಎಂದಾಗ ಇವರಿಗೂ ಆಸಕ್ತಿ ಹುಟ್ಟಿತ್ತು. ನಾಟ್ಯ ಕಲಿಯುವ ನಿರ್ಧಾರವನ್ನೂ ಮಾಡಿದರು. 1990-91ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಸೇರಿದರು. ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಮತ್ತು ಶ್ರೀ ತಾರಾನಾಥ ಬಲ್ಯಾಯ ವರ್ಕಾಡಿ ಅವರಿಂದ ನಾಟ್ಯಾಭ್ಯಾಸ.
                      ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರ ಮೊದಲ ತಿರುಗಾಟ ಬಪ್ಪನಾಡು ಮೇಳದಲ್ಲಿ. ಅಡ್ಯಾರು ಶಂಕರ ಆಳ್ವರ ಸಂಚಾಲಕತ್ವ. ಕೋಳ್ಯೂರು ರಾಮಚಂದ್ರ ರಾವ್, ಹೊಸಹಿತ್ತಿಲು ಮಹಾಲಿಂಗ ಭಟ್, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಬೈಪಾಡಿತ್ತಾಯ ದಂಪತಿಗಳು, ಪೆರುವಡಿ ಹಾಸ್ಯಗಾರರು, ಮುಂಡಾಜೆ ಸದಾಶಿವ ಶೆಟ್ರು ಮೊದಲಾದ ಕಲಾವಿದರ ಒಡನಾಟ. ಆಟ ಬೇಡ ಎಂದು ತೀರ್ಮಾನಿಸಿ ಮತ್ತೆ ಹೋಟೆಲ್ ಕೆಲಸಕ್ಕೆ. 2 ತಿಂಗಳು ಹೋಟೆಲ್ ಕೆಲಸದಲ್ಲಿ ಕಳೆದಿದ್ದರು. ಕರ್ನಾಟಕ ಮೇಳದಿಂದ ಕರೆಬಂದಿತ್ತು. ನಿರಂತರ 11 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ವ್ಯವಸಾಯ. ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಮಳೆಗಾಲದಲ್ಲಿ ತರಕಾರಿ ಕೃಷಿ ಮಾಡಿಯೂ ಜೀವನ ನಡೆಸಿದ್ದರು. ಕರ್ನಾಟಕ ಮೇಳದಲ್ಲಿ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಸಂಚಾಲಕತ್ವ. (ಕಲ್ಲಾಡಿ ವಿಠಲ ಶೆಟ್ರ ಸಂಚಾಲಕತ್ವದಲ್ಲೂ ತಿರುಗಾಟ ನಡೆಸಿದ್ದರು). ಶ್ರೀ ದಿನೇಶ ಅಮ್ಮಣ್ಣಾಯ, ಪ್ರಭಾಕರ ಗೋರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಅರುವ ಕೊರಗಪ್ಪ ಶೆಟ್ಟಿ, ಪುಳಿಂಚ ರಾಮಯ್ಯ ರೈ, ಅಳಿಕೆ ಲಕ್ಷ್ಮಣ ಶೆಟ್ಟಿ, ಮಿಜಾರು ಅಣ್ಣಪ್ಪ, ಗುಂಪೆ ರಾಮಯ್ಯ ರೈ, ಮಿಜಾರು ತಿಮ್ಮಪ್ಪ, ಜಪ್ಪು ದಯಾನಂದ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಬಾಯಾರು ರಘುನಾಥ ಶೆಟ್ಟಿ, ಸಂಜಯ ಕುಮಾರ್, ಕೊಳ್ತಿಗೆ ನಾರಾಯಣ ಗೌಡ, ಬೆಳ್ಳಾರೆ ರಮೇಶ್ ರೈ, ಜೋಸೆಫ್ ಡಿ’ಸೋಜಾ ಮೊದಲಾದ ಕಲಾವಿದರ ಒಡನಾಟ. ತುಳು ಪ್ರಸಂಗಗಳ ಪ್ರದರ್ಶನ. ಈ ಸಂದರ್ಭದಲ್ಲಿ ಕರ್ನಾಟಕ ಮೇಳವನ್ನು 2 ವರ್ಷ ಕಿಶನ್ ಹೆಗ್ಡೆಯವರೂ ನಡೆಸಿದ್ದರು. ಚಂದ್ರಶೇಖರ ಅವರು ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲಕೋಟಿ ಮತ್ತು ಚೆನ್ನಯ್ಯರಾಗಿ, ದೇವಪೂಂಜ ಪ್ರತಾಪದಲ್ಲಿ ದೇವಪೂಂಜನಾಗಿ, ಕೋರ್ದಬ್ಬು ಬಾರಗ ಪ್ರಸಂಗದಲ್ಲಿ ಬಬ್ಬು ಪಾತ್ರದಲ್ಲಿ, ಮಹಾಂಕಾಳಿ ಅಪ್ಪೆ ಪ್ರಸಂಗದಲ್ಲಿ ಮಹಾಂಕಾಳಿ ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಕಚ್ಚೂರ ಮಾಲ್ದಿ ಪ್ರಸಂಗದ ನಾಗರತಿ (ರಾಜಕುಮಾರಿ) ಪಾತ್ರವೂ ಇವರಿಗೆ ಹೆಸರನ್ನು ತಂದುಕೊಟ್ಟಿತ್ತು.
                     ಕರ್ನಾಟಕ ಮೇಳವು ತನ್ನ ತಿರುಗಾಟವನ್ನು ನಿಲ್ಲಿಸಿದ ನಂತರ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಸಾಲಿಗ್ರಾಮ ಮೇಳದಲ್ಲಿ ಅವರ ಅಪೇಕ್ಷೆಯಂತೆ ತಿರುಗಾಟ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಬರೆದ ಮೇಘ ಮಾಣಿಕ್ಯ ಪ್ರಸಂಗದ ಮೇಘಮಾಣಿಕ್ಯನ ಪಾತ್ರದಲ್ಲಿ ರಂಜಿಸಿದ್ದರು. ನಾರಾಯಣ ಶಬರಾಯ, ವಾಸುದೇವ ಸಾಮಗ, ಬಳ್ಕೂರು ಕೃಷ್ಣಯಾಜಿ, ಬೆಳಿಯೂರು ಕೃಷ್ಣಮೂರ್ತಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಕೆದಿಲ ಜಯರಾಮ ಭಟ್, ಹೊಸಂಗಡಿ ರಾಜೀವ ಶೆಟ್ಟಿ, ಮಂಕಿ ಈಶ್ವರ ನಾಯ್ಕ, ಧರ್ಮಸ್ಥಳ ರತ್ನಾಕರ ಶೆಟ್ಟಿ ಸಹಕಲಾವಿದರಾಗಿದ್ದರು. ಬಳಿಕ ಪುತ್ತೂರು ಮೇಳ- ವರ್ಕಾಡಿ ಐತಪ್ಪ, ಸರಪಾಡಿ ಅಶೋಕ ಶೆಟ್ಟಿ, ಸೀತಾರಾಮ ಕುಮಾರ್ ಇವರ ನೇತೃತ್ವದಲ್ಲಿ ವಾಸ್ತುವೈಭವ ಎಂಬ ಪ್ರಸಂಗವು ತುಳು ಮತ್ತು ಕನ್ನಡ ಉಭಯ ಭಾಷೆಗಳಲ್ಲಿ ಪ್ರದರ್ಶನವಾಗಿತ್ತು. ಈ ಪ್ರಸಂಗದ ವಾಸ್ತುಪುರುಷನ ಪಾತ್ರವನ್ನು ನಿರ್ವಹಿಸಿದ್ದರು. ಈ ಸಂದರ್ಭ ಕಡಬ ರಾಮಚಂದ್ರ ರೈ, ಹೊಸಂಗಡಿ ರವೀಂದ್ರ ಶೆಟ್ಟಿ, ಬೈಂದೂರು ಕೃಷ್ಣಯ್ಯ, ಕಾಂಚನ ಸಂಜೀವ ರೈ, ಅಂಬಾಪ್ರಸಾದ ಪಾತಾಳ, ಕೊಳ್ತಿಗೆ ನಾರಾಯಣ ಗೌಡ ಸಹಕಲಾವಿದರಾಗಿದ್ದರು. 1 ವರ್ಷ ತಿರುಗಾಟ.
                           ``ನಾನು ಪುರಾಣ ಪ್ರಸಂಗಗಳ ಅನುಭವವನ್ನು ಹೊಂದಿದ್ದು ಎಡನೀರು ಮೇಳದಲ್ಲಿ. ಇದಕ್ಕೆ ಕಾರಣರು ಎಡನೀರು ಮಠಾಧೀಶರು ಮತ್ತು ಶ್ರೀ ಗೋಪಾಲಕೃಷ್ಣನ ಅನುಗ್ರಹ. ಎಡನೀರು ಶ್ರೀ ದೇವರ ಸನ್ನಿಧಿಯಲ್ಲಿ ನರ್ತಿಸಲು ಆಸೆಯಾಗುತ್ತದೆ. ನರ್ತಿಸಿದಾಗ ಆನಂದಾನುಭವವೂ ಉಂಟಾಗುತ್ತದೆ.’’ ಇದು ಎಡನೀರು ಕ್ಷೇತ್ರದ ಮತ್ತು ಮಠಾಧೀಶರ ಬಗೆಗೆ ಚಂದ್ರಶೇಖರರು ಆಡುವ ಗೌರವದ ನುಡಿಗಳು. ಸದ್ರಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ಪ್ರಭಾಕರ ಗೋರೆ, ದೇಲಂತಮಜಲು, ಪಿ. ಟಿ. ಜಯರಾಂ, ಶಿವರಾಮ ಜೋಗಿ, ಸಂಪಾಜೆ ಶೀನಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮನೋಹರ ಕುಮಾರ್, ರಾಧಾಕೃಷ್ಣ ನಾವಡ, ಬಂಟ್ವಾಳ ಜಯರಾಮ ಆಚಾರ್ಯ, ಸಂಜಯ ಕುಮಾರ್, ಮಿಜಾರು ತಿಮ್ಮಪ್ಪ, ದಿವಾಕರ ರೈ, ಬೋಳಂತೂರು ಜಗದೀಶ ಮೊದಲಾದವರು ಸಹಕಲಾವಿದರಾಗಿದ್ದರು.
                            ಎಡನೀರು ಮೇಳದ ತಿರುಗಾಟದಲ್ಲಿ ಪುರಾಣ ಪ್ರಸಂಗಗಳ ಎಲ್ಲಾ ಪುಂಡುವೇಷಗಳನ್ನೂ, ಅಲ್ಲದೆ ಕಿರೀಟ, ಸ್ತ್ರೀವೇಷ, ಬಣ್ಣದ ವೇಷಗಳನ್ನೂ ನಿರ್ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಎಡನೀರು ಮೇಳದ ಪ್ರದರ್ಶನ. ಚಂದ್ರಶೇಖರರ ವೇಷವನ್ನು ಧರ್ಮಸ್ಥಳದ ಖಾವಂದರು ನೋಡಿದ್ದರು. ಪೂಜ್ಯ ಖಾವಂದರು ಕರೆದ ಕಾರಣ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರುವಂತಾಯಿತು. 2008ರಿಂದ ತೊಡಗಿ ಇಂದಿನವರೆಗೂ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರ, ಡಿ ಹರ್ಷೇಂದ್ರ ಕುಮಾರರ ಆಶೀರ್ವಾದದಿಂದ ಹುಟ್ಟೂರಿನ ಮೇಳದಲ್ಲಿ ತಿರುಗಾಟ ನಡೆಸುತ್ತಿರುವುದು ಸಂತೋಷಕ್ಕೆ ಕಾರಣವಾಗಿದೆ. ವ್ಯವಸ್ಥಾಪಕ ಹಿಮ್ಮೇಳ ಮತ್ತು ಮುಮ್ಮೇಳದ ಸಮಸ್ತ ಕಲಾವಿದರಿಂದ ಸಹಕಾರ ಪ್ರೋತ್ಸಾಹ ಸಿಕ್ಕಿದೆ. ಧರ್ಮಸ್ಥಳ ಮೇಳದ ಕಲಾವಿದ ಎಂದು ಹೇಳಿಕೊಳ್ಳುವಾಗ ಹೆಮ್ಮೆಯಾಗುತ್ತದೆ ಎನ್ನುವ ಚಂದ್ರಶೇಖರರಿಗೆ ಅಭಿಮನ್ಯು, ಸುದರ್ಶನ, ಅಶ್ವತ್ಥಾಮ, ಭಾರ್ಗವ, ಲಕ್ಷ್ಮಣ, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳು ಅತ್ಯಂತ ಪ್ರಿಯವಾದವುಗಳು. ಕಿರೀಟ ವೇಷಗಳಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ ಮೊದಲಾದವು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾದರೂ ಇವರಿಗೆ ಪುಂಡುವೇಷಗಳಲ್ಲಿ ಹೆಚ್ಚು ಆಸಕ್ತಿ. ಪುಂಡುವೇಷಕ್ಕೆ ಶ್ರೀಧರ ಭಂಡಾರಿಯವರೇ ಚಂದ್ರಶೇಖರರಿಗೆ ಆದರ್ಶ. ಚಂದ್ರಶೇಖರರು ಧರ್ಮಸ್ಥಳ ಮೇಳ ಸೇರಲು ಪ್ರೋತ್ಸಾಹಿಸಿದ್ದರಂತೆ. ತನ್ನ 25ನೇ ತಿರುಗಾಟದ ಸಂಭ್ರಮವನ್ನು ಮಂಗಳೂರು ಸರಕಾರೀ ಕಾಲೇಜು ಮೈದಾನದಲ್ಲಿ ‘ರಜತಚಂದ್ರ’ ಎಂಬ ಕಾರ್ಯಕ್ರಮದಡಿ ಆಚರಿಸಿದ್ದರು. ಗುರುಗಳಾದ ಕೋಳ್ಯೂರು ಶ್ರೀ ರಾಮಚಂದ್ರ ರಾಯರನ್ನೂ ಶ್ರೀ ತಾರಾನಾಥ ಬಲ್ಯಾಯ ಅವರನ್ನೂ ಗುರುವಂದನೆ ಸಲ್ಲಿಸಿ ಸನ್ಮಾನಿಸಿದ್ದಾರೆ. ತಾನು ತಿರುಗಾಟ ನಡೆಸಿದ ಮೇಳದ ಯಜಮಾನರುಗಳಾದ ಡಿ. ಹರ್ಷೇಂದ್ರ ಕುಮಾರ್, ಕಿಶನ್ ಹೆಗ್ಡೆ ಎಡನೀರು ಮಠಾಧೀಶರನ್ನೂ ಶ್ರೀ ಜಯರಾಮ ಮಂಜತ್ತಾಯರನ್ನೂ ಮೇಳದ ಭಾಗವತರುಗಳನ್ನೂ ಗೌರವಿಸಿದ್ದಾರೆ. ಕಲಾಪೋಷಕ ಡಾ. ಟಿ. ಶ್ಯಾಮ ಭಟ್ಟರು ಎಲ್ಲ ವಿಧದ ಸಹಕಾರ ಪ್ರೋತ್ಸಾಹವನ್ನು ನೀಡಿದ್ದಾರೆ. ಕಲಾಭಿಮಾನಿಗಳೆಲ್ಲರೂ ಬದುಕಿನುದ್ದಕ್ಕೂ ಸ್ಪಂದಿಸಿದ್ದಾರೆ ಎನ್ನುವ ಚಂದ್ರಶೇಖರರಿಗೆ ಮನೆಯವರ ಸಹಕಾರದಿಂದ ಇನ್ನಷ್ಟು ಕಾಲ ಯಕ್ಷಗಾನದಲ್ಲಿ ಮುಂದುವರಿಯುವ ಆಸೆ ಇದೆ.
ಚಂದ್ರಶೇಖರ ಧರ್ಮಸ್ಥಳ ಮತ್ತು ಕುಟುಂಬ

                          ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಗೃಹಸ್ಥಾಶ್ರಮಿಯಾದುದು 2010ರಲ್ಲಿ. ದೀಪ ಅವರ ಜತೆ ವಿವಾಹ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದಿತ್ತು. ದೀಪ ಅವರು ಬೆಟ್ಟಂಪಾಡಿ ಸಮೀಪದ ಗುಮ್ಮಟೆಗದ್ದೆಯ ಶ್ರೀ ಬಾಬು ಪೂಜಾರಿ ಮತ್ತು ಕಮಲ ದಂಪತಿಗಳ ಪುತ್ರಿ. ಚಂದ್ರಶೇಖರ ಧರ್ಮಸ್ಥಳ, ದೀಪ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕು| ಚಿಂತನ, 3ನೇ ತರಗತಿ ವಿದ್ಯಾರ್ಥಿನಿ. ಕಿರಿಯ ಪುತ್ರಿ ಕು| ವಂಶಿಕಾ, ಯು.ಕೆ.ಜಿ. ವಿದ್ಯಾರ್ಥಿನಿ. ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್, ಮಸ್ಕತ್, ಕುವೈಟ್, ದುಬಾಯಿ, ಲಂಡನ್, ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಮೊತ್ತಮೊದಲ ಅಮೇರಿಕಾ ಪ್ರದರ್ಶನಕ್ಕೆ ಕಾರಣರಾದವರು ಶ್ರೀಮತಿ ವಿದ್ಯಾ ಕೋಳ್ಯೂರು. ಇವರು ಕಲಾವಿದೆ ಮತ್ತು ‘ಯಕ್ಷಮಂಜೂಷ’ ತಂಡದ ರೂವಾರಿ. ಯಕ್ಷಮಂಜೂಷ ತಂಡದ ಹಿಂದಿ ಭಾಷೆಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಜತೆಯೂ ಅಮೇರಿಕಾ ಪ್ರವಾಸ ಮಾಡಿರುತ್ತಾರೆ. ಪಟ್ಲ ಫೌಂಡೇಶನ್‍ನ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶವನ್ನಿತ್ತು ಪ್ರೋತ್ಸಾಹಿಸಿದವರು ಶ್ರೀ ಪಟ್ಲ ಸತೀಶ್ ಶೆಟ್ರು. ತೆಂಕುತಿಟ್ಟಿನ ಧರ್ಮಸ್ಥಳ ಮೇಳದ ಸಮರ್ಥ ಪುಂಡುವೇಷಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರ ಕಲಾಬದುಕು ಸುಂದರವಾಗಿರಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶಗಳು ಸಿಗಲಿ. ದೇಶವಿದೇಶಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನಕ್ಕೆ ಇನ್ನಷ್ಟು ಅವಕಾಶಗಳು ಸಿಗಲಿ. ಪುತ್ರಿಯರಿಬ್ಬರಿಗೂ ಉಜ್ವಲವಾದ ಭವಿಷ್ಯವು ದೊರಕಲಿ. ಕಲಾಮಾತೆ ಮತ್ತು ನಟರಾಜನಾದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವು ಸದಾ ಇರಲಿ ಎಂಬ ಹಾರಯಿಕೆಗಳು.


- ರವಿಶಂಕರ್ ವಳಕ್ಕುಂಜ

Comments

  1. Ravi Anna 🙏 chandrashekar nimage Manjunath swamy SHREE RAKSHE 🙏

    ReplyDelete

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

‘ನಾದಲೋಕದ ಗುರಿಕಾರ’ ಶ್ರೀ ನೆಡ್ಲೆ ನರಸಿಂಹ ಭಟ್