ಯಕ್ಷಗಾನ ಹಿಮ್ಮೇಳದ ಭಾಗವತಶ್ರೇಷ್ಠ ಇರಾ ಗೋಪಾಲಕೃಷ್ಣ ಭಾಗವತರು - ನುಡಿನಮನಗಳು

                  ಬಹಳ ಹಿಂದಿನ ಕಾಲದಲ್ಲಿ ಮಾಧ್ಯಮಗಳ ಸಂಖ್ಯೆ ಅತಿ ಕಡಿಮೆಯಾಗಿತ್ತು. ಕೇವಲ ದಿನಪತ್ರಿಕೆಗಳಿಂದಲೇ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿತ್ತು. ದಿನಪತ್ರಿಕೆಗಳ ಸಂಖ್ಯೆಯೂ ಕಡಿಮೆಯಿದ್ದ ಕಾಲಘಟ್ಟ ಅದು. ಈಗ ಕಾಲ ಬದಲಾಗಿದೆ. ಇದು ವೇಗದ ಯುಗ. ತಂತ್ರಜ್ಞಾನ ಬೆಳೆದಿದೆ. ಫೇಸ್‍ಬುಕ್, ವಾಟ್ಸಾಪ್ ಮೊದಲಾದ ಅಂತರ್ಜಾಲ ಮಾಧ್ಯಮಗಳು ಇವೆ. ಯಕ್ಷಗಾನಕ್ಕೂ ಮಾಧ್ಯಮಗಳಿಗೂ ಏನು ಸಂಬಂಧ? ಎಂಬ ಪ್ರಶ್ನೆ ಹುಟ್ಟಬಹುದು. ವಿಚಾರಗಳನ್ನು ಜನರಿಗೆ ತಲುಪುವಂತೆ ಮಾಡುವುದು ಮಾಧ್ಯಮಗಳು  ತಾನೆ. ಲೋಕದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಧ್ಯಮಗಳು ನಿರ್ವಹಿಸುತ್ತವೆ. ಒಳಿತನ್ನು ಪ್ರಶಂಸಿಸುವುದು, ಕೆಡುಕನ್ನು ಯಾರಿಗೂ ನೋವಾಗದಂತೆ ಸೂಚಿಸಿ ಅದನ್ನು ನಿವಾರಿಸುವುದು, ಮಾಧ್ಯಮಗಳ ಧರ್ಮವೇ ಆಗಿದೆ. ಕಲೆಯೂ ಇದಕ್ಕೂ ಹೊರತಾಗಿಲ್ಲ. ಕಲೆ ಮತ್ತು ಕಲಾವಿದರ ವಿಚಾರಗಳನ್ನೂ ಮಾಧ್ಯಮಗಳು ಪ್ರಕಟಿಸುತ್ತವೆ. ಆ ಮೂಲಕ ಕಲೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಸರಿಯಾದ ವಿಚಾರಗಳನ್ನು ಪ್ರಕಟಿಸಿದಾಗ ಓದಿದ ಜನರು ಮಾಧ್ಯಮಗಳನ್ನು ಗೌರವಿಸಿಯೇ ಗೌರವಿಸುತ್ತಾರೆ. ಮಾಧ್ಯಮಗಳ ಸಂಖ್ಯೆ ಕಡಿಮೆಯಿದ್ದ ಕಾಲದಲ್ಲೂ ತನ್ನ ಪ್ರತಿಭಾ ವ್ಯಾಪಾರದಿಂದಲೇ ರಂಗವನ್ನಾಳಿ ಪ್ರೇಕ್ಷಕರ ಮನಗೆದ್ದ ಕಲಾವಿದರನೇಕರು. ಹಿಮ್ಮೇಳದ ಹಾಡುಗಾರಿಕೆ ವಿಭಾಗದಲ್ಲಿ ದಿ| ಬಲಿಪ ನಾರಾಯಣ ಭಾಗವತರು (ದೊಡ್ಡ ಬಲಿಪರು),  ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಮವ್ವಾರು ಕಿಟ್ಟಣ್ಣ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕಾ ಮಂಜುನಾಥ ಭಾಗವತರು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು, ನೆಬ್ಬೂರು ನಾರಾಯಣ ಭಾಗವತರು, ಜಿ. ಆರ್. ಕಾಳಿಂಗ ನಾವಡರು, ಅಗರಿ ರಘುರಾಮ ಭಾಗವತರು, ದಾಸರಬೈಲು ಚನಿಯ ನಾಯ್ಕರು, ಕುಬಣೂರು ಶ್ರೀಧರ ರಾಯರು ಮೊದಲಾದವರು ಪ್ರಮುಖರು. ಇವರುಗಳು ಇಂದು ನಮ್ಮ ಜತೆಗಿಲ್ಲ. ಆದರೂ ಕಲಾವಿದರಿಗೆ ರಂಗವೇ ಮೊದಲ, ಮುಖ್ಯ ಮಾಧ್ಯಮವಾಗಿರಬೇಕೆಂಬ ಒಳ್ಳೆಯ ಸಂದೇಶವನ್ನು ನೀಡಿ ಕಣ್ಮರೆಯಾಗಿದ್ದಾರೆ. ಇವರಲ್ಲಿ ದೊಡ್ಡ ಬಲಿಪರು, ಅಗರಿಯವರು, ಕುಬಣೂರು ಶ್ರೀಧರರಾಯರು, ಜಿ. ಆರ್. ಕಾಳಿಂಗ ನಾವಡರು, ಕಡತೋಕ ಅವರುಗಳು ಪ್ರಸಂಗಕರ್ತರಾಗಿಯೂ ಯಕ್ಷಗಾನ ಕಲೆಗೆ ಕೊಡುಗೆಯನ್ನು ನೀಡಿರುತ್ತಾರೆ. ಹೀಗೆ ಪ್ರಚಾರವನ್ನು ಬಯಸದೇ ಹಾಡುತ್ತಾ ಪ್ರಸಿದ್ಧರಾದ ಹಾಡುಗಾರರಲ್ಲಿ ಇರಾ ಶ್ರೀ ಗೋಪಾಲಕೃಷ್ಣ ಭಾಗವತರೂ ಒಬ್ಬರು. ಪ್ರಸ್ತುತ ಇದೇ ಸಂದೇಶವನ್ನೂ ನೀಡುತ್ತಾ ಕಲಾಸೇವೆಯನ್ನು ಮಾಡುತ್ತಿರುವ ಹಿರಿಯ ಭಾಗವತರುಗಳು ನಮ್ಮೊಡನಿದ್ದಾರೆ ಅನ್ನುವುದು ಸಂತೋಷದ ಸಂಗತಿ. ತನ್ನ ಟ್ರ್ಯಾಕ್ ತಪ್ಪದೆ ಹಾಡುಗಾರಿಕೆಯು ತನ್ನ ಹಳಿಯಲ್ಲೇ ಸಾಗಲು ಇದರಿಂದ ಅನುಕೂಲವಾದೀತು.
ಇರಾ ಗೋಪಾಲಕೃಷ್ಣ ಭಾಗವತರು

ತನ್ನ ಹಾಡುಗಾರಿಕೆಯ ಶೈಲಿಯಿಂದ, ಪ್ರಸಂಗಗಳನ್ನು ಮುನ್ನಡೆಸಿದ ರೀತಿಯಿಂದ, ಸರಳ ವ್ಯಕ್ತಿತ್ವದಿಂದ ಇರಾ ಗೋಪಾಲಕೃಷ್ಣ ಭಾಗವತರು ಪ್ರಸಿದ್ಧರಾಗಿದ್ದರು. ಅಳಿದರೂ ಅವರನ್ನು ಇಂದು ಕಲಾಭಿಮಾನಿಗಳು ನೆನಪಿಸುತ್ತಾರೆ. ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿದರೂ ಕಟೀಲು ಮೇಳದ ಭಾಗವತನೆಂದೇ ಗುರುತಿಸಲ್ಪಟ್ಟರು. ಒಟ್ಟು ಆರು ದಶಕಗಳ ಕಲಾಬದುಕು ಇವರದು. ಶ್ರೀಯುತರು ಜನಿಸಿದ್ದು 1922ರಲ್ಲಿ. ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ. ತಂದೆ ಶ್ರೀ ಈಶ್ವರಯ್ಯ. ತಾಯಿ ಕಾವೇರಿ. (ಪರಮೇಶ್ವರಿ ಎಂಬ ಹೆಸರಿಂದಲೂ ಕರೆಸಿಕೊಂಡಿದ್ದರು). ಈಶ್ವರಯ್ಯ ಅವರು ಕೇರಳ ಮೂಲದವರು ಎಂಬ ಹೇಳಿಕೆಯೂ ಇದೆ. ಇರಾ ಎಂಬಲ್ಲಿಗೆ ಬಂದು ನೆಲೆಸಿದ್ದರಂತೆ. ಇಚ್ಲಂಪಾಡಿ ಇವರ ಮೂಲಮನೆ. ಶ್ರೀ ಈಶ್ವರಯ್ಯ ಅವರು ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದರು. ಇವರನ್ನು ಕುಂಡಚ್ಚ ಭಾಗವತರೆಂದೂ ಜನರು ಕರೆಯುತ್ತಿದ್ದರಂತೆ. ಈಶ್ವರಯ್ಯ ಕಾವೇರಮ್ಮ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಕೊನೆಯವರು ಇರಾ ಗೋಪಾಲಕೃಷ್ಣ. ಓದಿದ್ದು ಇರಾ ಗ್ರಾಮದ ಮರಿಗುಳ್ಳ ಶಾಲೆಯಲ್ಲಿ. ಪ್ರಾಥಮಿಕ ಶಿಕ್ಷಣ ಮಾತ್ರ ಪೂರೈಸಿದ್ದರು. ಎಳವೆಯಲ್ಲೇ ಯಕ್ಷಗಾನದ ಗೀಳು ಇತ್ತು. ಮೇರುಕಲೆಯತ್ತ ಆಕರ್ಷಿತರಾಗಿದ್ದರು. ತಂದೆ ಈಶ್ವರಯ್ಯನವರಿಂದಲೇ ಮೊದಲ ಪಾಠ. ಮಾಂಬಾಡಿ ನಾರಾಯಣ ಭಾಗವತರಿಂದ ಹಾಡುಗಾರಿಕೆಯನ್ನೂ ಮದ್ದಳೆವಾದನವನ್ನೂ ಅಭ್ಯಸಿಸಿದ್ದರು. ಆಗ ವಯಸ್ಸು ಕೇವಲ 14. ಊರಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆಗಳಲ್ಲಿ ಹಾಡುತ್ತಾ ಅನುಭವಗಳನ್ನು ಗಳಿಸಿದ್ದರು. ಇವರ ಮೊದಲ ತಿರುಗಾಟ ಗೋಕರ್ಣನಾಥೇಶ್ವರ ಮೇಳದಲ್ಲಿ. ನಂತರ ಕದ್ರಿ, ಕೂಡ್ಲು, ಕುಂಡಾವು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಭಾಗವತನಾಗಿ ಕಲಾಸೇವೆ ಮಾಡಿದ್ದರು.
ಇರಾ ಗೋಪಾಲಕೃಷ್ಣ ಭಾಗವತರು 1958 ರಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದವರು. ಆಗ ಇದ್ದುದು ಒಂದೇ ಮೇಳ. ಹಿಮ್ಮೇಳದಲ್ಲಿ ನೆಡ್ಲೆ ನರಸಿಂಹ ಭಟ್ಟರು, ಪುತ್ತೂರು ಕೃಷ್ಣ ಪದಾರ್ಥಿ ಇವರ ಜತೆಗಿದ್ದರು. ಪುರಾಣ ಪ್ರಸಂಗಗಳಲ್ಲಿ ಒಳ್ಳೆಯ ಹಿಡಿತವನ್ನು ಹೊಂದಿದ್ದರು. ಆಟ ಆಡಿಸುವ ರೀತಿ ಸರ್ವತ್ರ ಪ್ರಶಂಸೆಗೊಳಗಾಗಿತ್ತು. ಪರಂಪರೆಗೆ ಕುಂದಾಗದ ಸಂಪ್ರದಾಯಬದ್ಧವಾದ ಹಾಡುಗಾರಿಕೆಯಿಂದ ಪ್ರದರ್ಶನವನ್ನೂ, ಕಲಾವಿದರನ್ನೂ ಮೆರೆಸುತ್ತಿದ್ದರೆಂದು ಹಿರಿಯ ಪ್ರೇಕ್ಷಕರು ಈಗಲೂ ಹೇಳುವುದನ್ನು ನಾವು ಕೇಳಿಸಿಕೊಂಡಿದ್ದೇವೆ. 40ಕ್ಕಿಂತಲೂ ಹೆಚ್ಚು ಪ್ರಸಂಗಗಳು ಇವರಿಗೆ ಕಂಠಸ್ಥವಾಗಿತ್ತು. ಕಿರಾತಾರ್ಜುನ, ದುಶ್ಶಾಸನವಧೆ, ತಾಮ್ರಧ್ವಜ ಕಾಳಗ, ಅಭಿಮನ್ಯು ಕಾಳಗ, ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗ, ಸತ್ಯಹರಿಶ್ಚಂದ್ರ, ನಳದಮಯಂತಿ, ದೇವೀ ಮಹಾತ್ಮ್ಯೆ ಮೊದಲಾದ ಅನೇಕ ಪ್ರಸಂಗಗಳನ್ನು ಇವರು ಮುನ್ನಡೆಸಿದ ಕ್ರಮವನ್ನು ಹಿರಿಯ ಪ್ರೇಕ್ಷಕರು ಈಗಲೂ ನೆನಪಿಸುತ್ತಾರೆ. ಧ್ವನಿವರ್ಧಕಗಳಿಲ್ಲದ ಕಾಲದಲ್ಲೂ ಸ್ವರವನ್ನು ಉಳಿಸಿಕೊಂಡು ಬೆಳಗಿನವರೇಗೂ ಹಾಡಿದ ಸಾಹಸಿ ಇವರು. ಹಲವಾರು ಜೋಡಾಟಗಳಲ್ಲಿ ಭಾಗವತನಾಗಿ ತಂಡಕ್ಕೆ ಗೆಲುವನ್ನು ಒದಗಿಸಿಕೊಟ್ಟಿದ್ದರಂತೆ. ಅಗರಿ, ಹಿರಿಯ ಬಲಿಪರು, ದಾಮೋದರ ಮಂಡೆಚ್ಚರೊಂದಿಗೆ ಜೋಡಾಟಗಳಲ್ಲಿ ಭಾಗವಹಿಸಿದ ಹಿರಿಮೆ ಇರಾ ಭಾಗವತರಿಗಿತ್ತು. 1950ರಲ್ಲಿ ಶಾರದಾ ಅವರ ಜತೆ ವಿವಾಹ. (ಶಾರದಾ-ಬೆಳ್ಳಾರೆ ಶ್ರೀ ವಾಸುದೇವ ರಾಯರ ಪುತ್ರಿ.) ಇರಾ ಗೋಪಾಲಕೃಷ್ಣ ಭಾಗವತರು, ಶಾರದಾ ದಂಪತಿಗಳಿಗೆ 6 ಮಂದಿ ಮಕ್ಕಳು (3 ಗಂಡು, 3 ಹೆಣ್ಣು) ಶ್ರೀ ಜಯರಾಮ, ಶ್ರೀಪತಿ ಮತ್ತು ಶಿವರಾಮ ಪುತ್ರರು. ಪುತ್ರಿಯರು- ಪರಮೇಶ್ವರೀ, ಸರೋಜಿನಿ, ಯಶೋದಾ. ಇರಾ ಗೋಪಾಲಕೃಷ್ಣ ಭಾಗವತರ ಮಕ್ಕಳು ಕಲಾವಿದರಲ್ಲದಿದ್ದರೂ ಕಲಾಸಕ್ತರು. ಯಕ್ಷಗಾನವನ್ನೂ ಕಲಾವಿದರನ್ನೂ ಗೌರವಿಸುವ ಗುಣವನ್ನು ಹೊಂದಿದ್ದಾರೆ. ಇರಾ ಭಾಗವತರು ಅನೇಕ ಸಂಸ್ಥೆಗಳ ಗೌರವಕ್ಕೂ ಪಾತ್ರರಾಗಿದ್ದರು. ನಿಷ್ಠೆ ಮತ್ತು ಪ್ರಾಮಾಣಿಕತೆಯ ಕಲಾಸೇವಕರಾಗಿ ಕಲಾಬದುಕಿನ ಸುಮಾರು 60 ವಸಂತಗಳನ್ನು ಪೂರೈಸಿ ನಿವೃತ್ತರಾಗಿದ್ದರು.
ಭಾಗವತ ಈಶ್ವರಯ್ಯನವರ ಮಗನಾಗಿ ತಂದೆಯಂತೆ ಕುಂಡಚ್ಚ ಭಾಗವತರೆಂದೇ ಕರೆಸಿಕೊಂಡು, ಪುರಾಣ ಪ್ರಸಂಗಗಳಲ್ಲಿ ಹಾಡುಗಾರಿಕೆಯಲ್ಲಿ ಮೆರೆದರು. ಯಕ್ಷಗಾನ ಕ್ಷೇತ್ರದ ಮರೆಯಲಾಗದ ಮಹಾನುಭಾವರಾಗಿ ಪ್ರಸಿದ್ಧ ರಾದರು. ಕಲಾಬದುಕಿನಿಂದ ನಿವೃತ್ತರಾಗಿ ಕೆಲಸಮಯ ಅನಾರೋಗ್ಯವೂ ಕಾಡಿತ್ತು. 1999ರಲ್ಲಿ ಇರಾ ಗೋಪಾಲಕೃಷ್ಣ ಭಾಗವತರು ಇಹದ ವ್ಯವಹಾರವನ್ನು ಮುಗಿಸಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಶ್ರೀಯುತರ ಹಾಡುಗಳನ್ನು ಆಡಿಯೋ ಕ್ಯಾಸೆಟ್‍ಗಳಲ್ಲಿ ಕೇಳಿದ್ದೇನೆ. ಗುರುತಿಸುವಂತೆ ದಾಖಲೀಕರಣಗೊಳ್ಳದೇ ಇದ್ದುದು ತುಂಬಲಾರದ ನಷ್ಟವೇ ಹೌದು. ನೋವಿನ ವಿಚಾರವೂ ಹೌದು. ಈ ಭಾಗವತ ಶ್ರೇಷ್ಠರ ಹಾಡುಗಳು ಅನೇಕ ಕಲಾಭಿಮಾನಿಗಳು ಸಂಗ್ರಹಿಸಿಟ್ಟ ಧ್ವನಿಸುರುಳಿಗಳಲ್ಲಿರಬಹುದು ಎಂದು ಭಾವಿಸುತ್ತೇನೆ. ಎಲ್ಲವನ್ನೂ ಒಂದೆಡೆ ಕಲೆಹಾಕಿ ಕಲಾಭಿಮಾನಿಗಳಿಗೆ ಕೇಳಿ ಸಂತೋಷವನ್ನು ಪಡುವ ಅವಕಾಶವನ್ನು ಮಾಡಿದರೆ? ಅದೊಂದು ಜನಮೆಚ್ಚುವ ಕೆಲಸವಾದೀತು. ಕಲಿಕಾಸಕ್ತರಿಗೆ ಅನುಕೂಲವೂ ಆದೀತು. ಭಾಗವತ ಶ್ರೇಷ್ಠರಿಗೆ ಗೌರವ ಸಲ್ಲಿಸಿದ ಸಂತೃಪ್ತಿಯೂ ಸಿಕ್ಕೀತು. ಸತ್ಕಾರ್ಯಕ್ಕೆ ಕೈಜೋಡಿಸದೇ ಇರಲಾರರು. ಆ ಕಾಲಕ್ಕಾಗಿ ನಾವು ಕಾಯೋಣ.
ಇರಾ ಗೋಪಾಲಕೃಷ್ಣ ಭಾಗವತರು ಎಂಬ ಗಾಯನ ಲೋಕದ ಶ್ರೇಷ್ಠರಿಗೆ ಕಲಾಭಿಮಾನಿಗಳೆಲ್ಲರ ಪರವಾಗಿ
ನುಡಿನಮನಗಳು.

- ರವಿಶಂಕರ್ ವಳಕ್ಕುಂಜ

Comments

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು