ಸವ್ಯಸಾಚಿ ಕಲಾವಿದ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ

                             ಯಕ್ಷಗಾನದಲ್ಲಿ ಸಂಪ್ರದಾಯದಂತೆ ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಕಲಾಸೇವೆಯನ್ನು ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಪೂರ್ವ ರಂಗದಲ್ಲಿ ಅನೇಕ ವರ್ಷಗಳ ಕಾಲ ತೊಡಗಿಸಿಕೊಂಡವನಿಗೆ ತನ್ನಿಂದ ತಾನೇ ಆ ಕಲೆಯು ಸಿದ್ಧಿಸಲೇಬೇಕು. ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವಿದ್ದರೂ ಕಲಾವಿದರು ಆ ಸಾಹಸವನ್ನು ತೋರುವಲ್ಲಿ ಮನಮಾಡಲಾರರು. ಯಾಕೆಂದರೆ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯವು ಕಲಾವಿದರಿಗೆ ಕಾಡುವುದು ಸಹಜ. ಆದರೂ ಇಂತಹ ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಕೆಲವೊಮ್ಮೆ ಆಪದ್ಭಾಂಧವರೆನಿಸಿಕೊಳ್ಳುತ್ತಾರೆ. ವೇಷ ಹಂಚುವಿಕೆ, ಪ್ರಸಂಗವನ್ನು ಮುನ್ನಡೆಸುವಲ್ಲಿ ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ. ತನಗೆ ಇಂತಹ ಪಾತ್ರವೇ ಆಗಬೇಕು. ಬೇರೆ ವೇಷಗಳನ್ನು ಮಾಡಲಾರೆ ಎಂಬ ಹಠಕ್ಕೆ ಬೀಳದೆ, ತನಗೆ ಕೊಟ್ಟ ಯಾವ ಪಾತ್ರವನ್ನಾದರೂ ಮಾಡುವ ಪ್ರತಿಭಾವಂತ ಆಲ್‍ರೌಂಡರ್ ಕಲಾವಿದರುಗಳನ್ನು ಕಲಾಭಿಮಾನಿಗಳು ಗುರುತಿಸಿಯೇ ಗುರುತಿಸುತ್ತಾರೆ. ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. ಪ್ರಸ್ತುತ ಹನುಮಗಿರಿ ಮೇಳದ ಕಲಾವಿದ.
ಪ್ರಜ್ವಲ್ ಕುಮಾರ್ ಗುರುವಾಯನಕೆರೆ

                         ಪ್ರಜ್ವಲ್ ಕುಮಾರ್ ಅವರು ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯಲ್ಲಿ ಬೇಬಿ ಶೆಟ್ಟಿ ಮತ್ತು ಸಂಪಾವತೀ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಗುರುವಾಯನಕೆರೆ ಸರಕಾರೀ ಶಾಲೆಯಲ್ಲಿ. ಮನೆಯಲ್ಲಿ ಕಡುಬಡತನ. ಓದನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಬಾಲ್ಯದಲ್ಲಿ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಕಲಾವಿದ ನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಸೇರಿ ಖ್ಯಾತ ಕಲಾವಿದ ಶ್ರೀ ತಾರಾನಾಥ ಬಲ್ಯಾಯರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿ, ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿದರು. (1998-99ರ ಬ್ಯಾಚ್‍ನ ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿ). ಧರ್ಮಸ್ಥಳ ಮೇಳದಲ್ಲಿ ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ಮಾಡುತ್ತಾ ಕಲಾಸೇವೆ. ಮುಂದಿನ ವರ್ಷಗಳಲ್ಲಿ ಮುಖ್ಯ ಸ್ತ್ರೀ ವೇಷ. ನಂತರ ದಿವಾಣ ಶಿವಶಂಕರ ಭಟ್ಟರು ಲಲಿತ ಕಲಾ ಕೇಂದ್ರದ ಗುರು ಆದಾಗಲೂ ಪ್ರಜ್ವಲ್‍ರು ಅಭ್ಯಾಸಿಯಾಗಿ ಹೋಗಿದ್ದರು. ಅಲ್ಲದೆ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಇದರ ಪರಿಣಾಮವನ್ನು ಅವರು ಅನುಭವಿಸಿದ್ದಾರೆ. ತಾಳಜ್ಞಾನ, ಲಯಸಿದ್ಧಿ ಇರುವ ಕಲಾವಿದನೆನಿಸಿಕೊಂಡುದು ಈ ಕಾರಣದಿಂದಲೇ ಆಗಿರಬೇಕು. 5 ವರ್ಷಗಳ ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಕ್ಕೆ ಸೇರಿದ್ದರು. ‘ರಂಗನಾಯಕ’ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಕಟೀಲು ಮೇಳದಲ್ಲಿ 1 ವರ್ಷ. ಬಳಿಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳದಲ್ಲಿ 2 ವರ್ಷ. ಈ ಸಂದರ್ಭದಲ್ಲಿ ಅನೇಕ ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು. ಬಳಿಕ ‘ರಂಗದರಾಜ’ ಶ್ರೀ ರಾಧಾಕೃಷ್ಣ ನಾವಡರು ಪ್ರಜ್ವಲ್ ಅವರನ್ನು ಎಡನೀರು ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದರು. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ ತಿರುಗಾಟ ನಡೆಸಿದ್ದರು. ತದನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಾಸ್ಯಪಾತ್ರಗಳನ್ನೂ ಚೆನ್ನಾಗಿ ಮಾಡಬಲ್ಲ ಪ್ರಜ್ವಲ್ ಅವರು ಧರ್ಮಸ್ಥಳ ಮೇಳದಲ್ಲಿ ಹಾಸ್ಯರತ್ನ ನಯನಕುಮಾರರು ಚೆನ್ನಾಗಿ ಹೇಳಿಕೊಡುತ್ತಿದ್ದರು. ಅಲ್ಲದೆ ಎಲ್ಲಾ ಕಲಾವಿದರಿಂದ ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ. ‘ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಕಾಣಬಹುದು’ ಎಂಬಂತೆ ಧರ್ಮಸ್ಥಳ ಮೇಳದಲ್ಲಿ ಬಾಲಕಲಾವಿದನಾಗಿದ್ದಾಗಲೇ ಇವರ ಪ್ರತಿಭೆಯನ್ನು ಎಲ್ಲರೂ ಗುರುತಿಸಿದ್ದರು. ನಂತರ ತಿರುಗಾಟ ನಡೆಸಿದ ಎಲ್ಲಾ ಮೇಳಗಳಲ್ಲೂ (ಕಟೀಲು, ಎಡನೀರು, ಕುಂಟಾರು, ಹೊಸನಗರ, ಹನುಮಗಿರಿ ಮೇಳ) ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು. ತನ್ನ ಸ್ವಯಂ ಪ್ರತಿಭೆ ಮತ್ತು ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡು ಬೆಳೆದ ಕಲಾವಿದ ಪ್ರಜ್ವಲ್ ಕುಮಾರ್. ಪ್ರತ್ಯುತ್ಪನ್ನಮತಿಯಾದ ಇವರು ವಿಷಯಗಳನ್ನು ಬಲುಬೇಗನೇ ಗ್ರಹಿಸಬಲ್ಲರು. ಪ್ರಸಂಗಜ್ಞಾನ, ರಂಗನಡೆ, ಪಾತ್ರದ ಸ್ವಭಾವ ಇವುಗಳನ್ನು ಅರಿತು ವೇಷಗಳನ್ನು ನಿರ್ವಹಿಸಬಲ್ಲ ಸಮರ್ಥ ಮಾತುಗಾರಿಕೆಯೂ ಶುದ್ಧ ಮತ್ತು ಬಲುಚೊಕ್ಕ. ಎಲ್ಲಾ ವೇಷಗಳಿಗೂ ಬೇಕಾದಂತಹ ಆಳಂಗ ಹೊಂದಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಬಣ್ಣದ ವೇಷಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ಕಿರೀಟ ವೇಷಗಳಿಗೆ ಯಾರಾದೀತು? ಎಂಬ ಪ್ರಶ್ನೆ ಬಂದರೆ ಆಯ್ಕೆಗಳಲ್ಲಿ ಪ್ರಜ್ವಲ್ ಕುಮಾರ್ ಅವರ ಹೆಸರು ಇರುತ್ತದೆ. ಮಾತುಗಾರಿಕೆಯಲ್ಲಿ ಪ್ರಭುತ್ವ ಹೊಂದಿರುವುದರಿಂದ ಮತ್ತು ಪಾತ್ರದ ಸ್ವಭಾವವರಿತು ಅಭಿನಯಿಸಬಲ್ಲ ಸಾಮರ್ಥ್ಯ ಇರುವುದರಿಂದ ಧರ್ಮರಾಯ ಮೊದಲಾದ ಒಡ್ಡೋಲಗ ವೇಷಗಳನ್ನೂ, ನಾರದ, ಅಕ್ರೂರ ಮೊದಲಾದ ಸಾತ್ವಿಕ ಪಾತ್ರಗಳನ್ನೂ ಕೊರತೆಯಾಗದಂತೆ ತುಂಬುತ್ತಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಳಮದ್ದಳೆ ವೇದಿಕೆಯಲ್ಲೂ ಅಪರೂಪಕ್ಕೆ ಕಾಣಿಸಿಕೊಂಡಿದ್ದಾರೆ. ಪ್ರತಿಭೆ ಮತ್ತು ಸಾಮರ್ಥ್ಯ ಇವೆರಡೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದರೆ ಇವರೊಬ್ಬ ಗ್ರೇಟ್ ಆಲೌರೌಂಡರ್ ಕಲಾವಿದರಾಗಿ ಮೆರೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ತಿರುಗಾಟದುದ್ದಕ್ಕೂ ಎಲ್ಲಾ ಮೇಳದ ಹಿರಿಯ ಕಿರಿಯ ಸಹಕಲಾವಿದರ ಪ್ರೋತ್ಸಾಹದಿಂದಲೇ ನಾನು ಗುರುತಿಸಲ್ಪಟ್ಟೆ. ಧರ್ಮಸ್ಥಳದಲ್ಲಿ ಖಾವಂದರು ಪ್ರೋತ್ಸಾಹಿಸಿದ್ದರು. 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರದಲ್ಲಿ ನನ್ನ ಮನೆಯೆಂದೇ ಭಾವಿಸಿ ಇರುವುದಕ್ಕೆ ಅನುಕೂಲವಿತ್ತಿದ್ದರು. ಎಡನೀರು ಶ್ರೀಗಳೂ ಪ್ರೀತಿಸಿ ಆಶೀರ್ವದಿಸಿದ್ದರು. ಕಲಾಪೋಷಕರಾದ ಡಾ. ಟಿ. ಶ್ಯಾಮ ಭಟ್ಟರು ಹಿತವಚನಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಕಷ್ಟಕಾಲದಲ್ಲಿ ಸ್ಪಂದಿಸಿ ಬದುಕನ್ನು ನೀಡಿದ್ದಾರೆ. ಕಲಾಭಿಮಾನಿಗಳೆಲ್ಲರೂ ಪ್ರೀತಿಸಿ ಪ್ರೋತ್ಸಾಹಿಸಿದ್ದಾರೆ. ಸಹಕಲಾವಿದರೆಲ್ಲರೂ ಸಹಕರಿಸಿದ್ದಾರೆ. ಯಕ್ಷಗಾನವೆಂಬ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಅಭಿನಯಿಸಲು ಸಿಕ್ಕಿದ್ದು ನನ್ನ ಭಾಗ್ಯ. ಈ ವಿಚಾರದಲ್ಲಿ ನನಗೆ ಸಂತೋಷವಿದೆ. ನಾನು ಕಲಾವಿದನಾಗುತ್ತೇನೆ ಎಂದಾಗ ಪ್ರೋತ್ಸಾಹಿಸಿದವಳು ನನ್ನ ಅಕ್ಕ. ಕಲಾವಿದನಾಗಲು ನನಗೆ ಅವಳೇ ಪ್ರೇರಕ ಶಕ್ತಿ. ವಿವಾಹಿತೆಯಾಗಿ ದೂರದ ಬಹ್ರೈನ್‍ನಲ್ಲಿ ಉದ್ಯೋಗಿಯಾಗಿದ್ದರೂ ಅವಳು ಸದಾ ಪ್ರೋತ್ಸಾಹಿಸುತ್ತಾಳೆ ಇದು ಪ್ರಜ್ವಲ್ ಕುಮಾರ್ ಅವರ ಮನದಾಳದ ಮಾತುಗಳು.
ಸವ್ಯಸಾಚಿ ಕಲಾವಿದ ಪ್ರಜ್ವಲ್ ಅವರು ಒಟ್ಟು 23 ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವಿ. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಪ್ರತಿಭಾನ್ವಿತ ಕಲಾವಿದ. ಅವರು ಯಾವ ವೇಷವನ್ನು ಮಾಡುತ್ತಾರೆ? ಎಂಬ ಪ್ರಶ್ನೆಗೆ ಯಾವ ವೇಷವನ್ನಾದರೂ ಮಾಡಿಯಾರು ಎಂಬುದೇ ಉತ್ತರ. ಈ ಸಂದರ್ಭದಲ್ಲಿ ಮಲೆಯಾಳಂ ಭಾಷೆಯ ಒಂದು ಮಾತು ನೆನಪಾಗುತ್ತದೆ- ‘‘ಉಪ್ಪು ತೊಟ್ಟು ಕರ್ಪೂರಂವರೆ’’- ಅಂದರೆ ಉಪ್ಪಿನಿಂದ ತೊಡಗಿ ಕರ್ಪೂರದ ವರೇಗೆ ಎಂದರ್ಥ (ಎಲ್ಲಾ ವಸ್ತುಗಳೂ ಸಿಗುವ ಒಂದು ಅಂಗಡಿಯ   ಕುರಿತು ಮಲೆಯಾಳಂನಲ್ಲಿ ಹೀಗೊಂದು ಮಾತಿದೆ. ಆ ಅಂಗಡಿಯಲ್ಲಿ ಏನೆಲ್ಲಾ ಇದೆ ಎಂದು ಕೇಳಿದಾಗ ಉಪ್ಪಿನಿಂದ ಹಿಡಿದು ಕರ್ಪೂರದ ವರೇಗೆ ಎಲ್ಲವೂ ಇದೆ ಎಂಬ ಮಾತು ಎಲ್ಲವೂ ಆ ಅಂಗಡಿಯಲ್ಲಿ ಸಿಗುತ್ತದೆ ಎಂಬ ಅರ್ಥದಲ್ಲಿ ಈ ಮಾತಿನ ಪ್ರಯೋಗ.) ಈ ಮಾತಿನ ಧ್ವನಿಯಂತೆ ಪ್ರಜ್ವಲ್ ಯಾವ ವೇಷ ಮಾಡುತ್ತಾರೆ ಎಂಬ ಪ್ರಶ್ನೆಗೆ ಎಲ್ಲಾ ವೇಷಗಳನ್ನೂ ಮಾಡಬಲ್ಲರು ಎಂಬುದೇ ಉತ್ತರ. ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಇದ್ದರೆ ಯಾವ ಪ್ರಸಂಗವನ್ನಾದರೂ ಆಡಬಹುದು’’. ಖ್ಯಾತ ಕಲಾವಿದ ಉಜಿರೆ ಅಶೋಕ ಭಟ್ಟರ ಮಾತುಗಳು ಇವರ ಪ್ರತಿಭೆಗೆ ಸಿಕ್ಕ ಪುರಸ್ಕಾರ. ಅಭಿನಯ ಸಾಮರ್ಥ್ಯವನ್ನು ಕಂಡು ``ಅದೊಂದು ಸೊತ್ತು’’ ಎಂದು ಹೇಳಿದವರೂ ಇದ್ದಾರೆ. ಸಂತೋಷದಿಂದ ಹೊರಬಂದ ಅಂತರಂಗದ ಧ್ವನಿ ಅದು. ಪ್ರಜ್ವಲ್ ಅವರು ಪ್ರಸ್ತುತ ತನ್ನ ತಾಯಿ ಮತ್ತು ಸೊಸೆ   ಕು| ಕುಶಿ (5ನೇ ತರಗತಿ) ಅವರೊಂದಿಗೆ ಗುರುವಾಯನಕೆರೆಯಲ್ಲಿ ನೆಲೆಸಿರುತ್ತಾರೆ.
                       ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲೇಬೇಕು. ಆ ನಿಟ್ಟಿನಲ್ಲಿ ಪ್ರಜ್ವಲ್ ಅವರೂ ಯೋಚಿಸಬೇಕು. ಭವಿಷ್ಯದಲ್ಲಿ ತಾನೊಬ್ಬ Star ಕಲಾವಿದನಾಗುವ ಎಲ್ಲ ಸಾಧ್ಯತೆಗಳೂ ತೆರೆದೇ ಇರುವಾಗ ಅನ್ಯ ಯೋಚನೆಗಳ ಅಗತ್ಯವೇ ಇಲ್ಲ. ಗುರಿಯತ್ತ ಸಾಗುವಲ್ಲಿ ತೊಡಗಿಸಿಕೊಳ್ಳಬೇಕು. ಗುರಿಯನ್ನು ತಲುಪುವಲ್ಲಿ ಕಲಾಮಾತೆಯು ಸತ್ಪಥವನ್ನು ಅವರಿಗೆ ತೋರಲಿ. ಅವಳ ಅನುಗ್ರಹ ವಿಶೇಷದಿಂದ ಬಹಳಷ್ಟು ವ್ಯವಸಾಯವನ್ನು ಮಾಡುವಂತಾಗಲಿ. ಬದುಕು ಹಸನಾಗಲಿ. ಸುಂದರವಾಗಿರಲಿ ಎಂದು ಕಲಾಭಿಮಾನಿಗಳೆಲ್ಲರ ವತಿಯಿಂದ ಶುಭಹಾರೈಕೆಗಳು.

- ರವಿಶಂಕರ್ ವಳಕ್ಕುಂಜ

Comments

  1. ಪರಿಚಯ ಲೇಖನವನ್ನು ಓದಿದೆ.
    ನಗಿಸುವವರ ಮನಸ್ಸು
    ಎಂದೆಂದಿಗೂ ಸ್ವರ್ಗವಾಗಿರುತ್ತದೆ.
    ಪ್ರಜ್ವಲ್ ಅವರ ಕಲಾ ಬದುಕು
    ಸ್ವರ್ಗವೇ ಆಗಿರಲಿ
    ಎಂದು ಶುಭ ಹಾರೈಕೆ •

    ReplyDelete
  2. ಸೃಜನ ಶೀಲತೆ ಇವರಲ್ಲಿದೆ. ಕಿರೀಟ ವೇಷಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅವುಗಳತ್ತವೇ ಇವರು ಹೆಚ್ಚು ಹೆಚ್ಚು ಗಮನ ಕೊಡಬೇಕು. ಬಹಳ ಉತ್ತಮ ಕಲಾವಿದ.

    ReplyDelete

Post a Comment

Popular posts from this blog

ರಂಗನಿಷ್ಠೆ, ಅರ್ಪಣಾಭಾವದ ಯಕ್ಷತಾರೆ ಕಾಸರಗೋಡು ಸುಬ್ರಾಯ ಹೊಳ್ಳ

ಬಡಗಿನ ಅನುಭವೀ ಕಲಾವಿದ, ಸಂಘಟಕ - ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ದಿಗ್ವಿಜಯಕ್ಕೆ ಸಜ್ಜಾಗಿರುವ ಮೇಳಗಳಿಗೆ ಮತ್ತು ಕಲಾವಿದರುಗಳಿಗೆ ಶುಭಾಶಯಗಳು