ತೆಂಕುತಿಟ್ಟಿನ ಹಿರಿಯ, ನಿವೃತ್ತ ಬಣ್ಣದ ವೇಷಧಾರಿ ದಾಸನಡ್ಕ ಶ್ರೀ ರಾಮ ಕುಲಾಲ್
ಯಕ್ಷಗಾನದಲ್ಲಿ ಬಣ್ಣದ ವೇಷಗಳು ಎಂಬ ವಿಚಾರ ಬಂದಾಗ ಇತ್ತೀಚೆಗೆ ನಡೆದ ಒಂದು ಘಟನೆಯು ನೆನಪಾಗುತ್ತದೆ. ಕಡಬ ತಾಲೂಕಿನ ರಾಮಕುಂಜ ವಿದ್ಯಾಲಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಎಂಬ ಘನ ಸಂಸ್ಥೆಯ ಸಹಕಾರದಲ್ಲಿ ‘ಯಕ್ಷನಂದನ’ ಕೊಲ್ಯ ಎಂಬ ಸಂಸ್ಥೆಯು ‘‘ಯಕ್ಷಗಾನ ಪ್ರದರ್ಶನಗಳಲ್ಲಿ ಸ್ಥಾನಪಲ್ಲಟ’’ ಎಂಬ ವಿಚಾರಗೋಷ್ಠಿಯನ್ನು ಏರ್ಪಡಿಸಿತ್ತು. ಸಭೆಯಲ್ಲಿದ್ದ ಮುಲ್ಕಿ ವಿಜಯಾ ಕಾಲೇಜಿನ ಕು| ಆಜ್ಞಾಸೋಹಂ ಎಂಬ ಹೆಸರಿನ ವಿದ್ಯಾರ್ಥಿನಿ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿದ್ದವರಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ‘‘ಯಕ್ಷಗಾನದಲ್ಲಿ ಎಲ್ಲಾ ವೇಷಗಳಿಗೂ ಬಣ್ಣ ಹಾಕಬೇಕು. ಬಣ್ಣಗಾರಿಕೆ ಇಲ್ಲದೆ ವೇಷಗಾರಿಕೆ ಇಲ್ಲ. ಆದರೂ ಎಲ್ಲಾ ವೇಷಗಳನ್ನೂ ಬಣ್ಣದ ವೇಷಗಳು ಎಂದು ಕರೆಯದೆ ಕೆಲವು ವೇಷಗಳನ್ನು ಮಾತ್ರ ಹಾಗೇಕೆ ಗುರುತಿಸುತ್ತಾರೆ?’’ ಎಂಬುದೇ ಆ ಪ್ರಶ್ನೆ. ಆಜ್ಞಾಸೋಹಂ ಎಂಬ ವಿದ್ಯಾರ್ಥಿನಿ ಯಕ್ಷಗಾನ ಕಲಾವಿದೆ. ಮಾತ್ರವಲ್ಲ ಉದಯೋನ್ಮುಖ ಲೇಖಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾದ ಅವರು ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದರು. ಯಾರು ಸದಾ ಪ್ರಶ್ನಿಸುತ್ತಾರೋ ಅವರ ಬುದ್ಧಿಯು ಸೂರ್ಯನ ಕಿರಣಗಳಿಂದ ಪ್ರಚೋದಿಸಲ್ಪಟ್ಟು ಕಮಲವು ಅರಳಿದಂತೆ ವಿಕಸನ ಹೊಂದುತ್ತದೆ. ‘ಜ್ಞಾತುಂ ಇಚ್ಚುಃ ಜಿಜ್ಞಾಸು’- ತಿಳಿಯುವ ಕುತೂಹಲದಿಂದಲೇ ಜಿಜ್ಞಾಸುವಾಗಿ ಅವರು ಪ್ರಶ್ನೆಯನ್ನು ಕೇಳಿದ್ದರು. ವೇದಿಕೆಯಲ್ಲಿ ಖ್ಯಾತ ಕಲಾವಿದ, ‘ಬಲ್ಲಿರೇನಯ್ಯ’ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕರೂ ಆದ ಶ್ರೀ ತಾರಾನಾಥ ಬಲ್ಯಾಯರು ಉಪಸ್ಥಿತರಿದ್ದರು. ಮಲೆಯಾಳಂ ಭಾಷೆಯಲ್ಲಿ ಬಣ್ಣ ಎಂಬ ಶಬ್ದಕ್ಕೆ ದಪ್ಪ ಅಥವಾ ತೋರ ಎಂಬುದು ಅರ್ಥ. ಆ ವೇಷಗಳೆಲ್ಲಾ ಗಾತ್ರದಲ್ಲಿ ಹಿರಿದಾಗಿ ಕಾಣುವುದರಿಂದ ಬಣ್ಣದ ವೇಷ ಎಂಬ ಹೇಳಿಕೆ ಬಂದಿರಲೂಬಹುದು ಎಂದು ತಾರಾನಾಥ ಬಲ್ಯಾಯರು ಹೇಳಿದ್ದರು. ಏನೇ ಇರಲಿ. ಯಕ್ಷಗಾನದಲ್ಲಿ ತೆಂಕುತಿಟ್ಟಿಗೆ ಸಂಬಂಧಿಸಿದಂತೆ ಕೇಶಾವರೀ, ಭೀಮನ ಮುಡಿ ಮೊದಲಾದ ಕಿರೀಟಗಳಲ್ಲಿ ಬಣ್ಣದ ವೇಷಗಳು ಕಾಣಿಸಿಕೊಳ್ಳುತ್ತವೆ. ಹೆಣ್ಣುಬಣ್ಣಕ್ಕೆ ಅದರದ್ದೇ ಆದ ಕಿರೀಟವಿದೆ.
ಹಿಂದಿನ ಕಾಲದಲ್ಲಿ ಹಿರಣ್ಯಕಶ್ಯಪ, ಕಂಸ ಮೊದಲಾದ ವೇಷಗಳನ್ನು ಕೇಶಾವರೀ ಕಿರೀಟದಲ್ಲಿ ಬಣ್ಣದ ವೇಷದವರೇ ಮಾಡುತ್ತಿದ್ದರಂತೆ. ಹೀಗೆ ಯಕ್ಷಗಾನ ಕಲೆಯ ಬಣ್ಣದ ವೇಷಗಳಲ್ಲಿ ಕಾಣಿಸಿಕೊಂಡು ಅಭಿನಯಿಸಿದರು ಅನೇಕರು. ದಾಸನಡ್ಕ ಶ್ರೀ ರಾಮ ಕುಲಾಲ್ ಅವರು ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ. ವೃತ್ತಿ ಕಲಾವಿದರಾಗಿ ಕಲಾಸೇವೆಯನ್ನು ಮಾಡಿದವರು. ಒಟ್ಟು 52 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ಪ್ರಸ್ತುತ ಕಲಾಬದುಕಿನಿಂದ ನಿವೃತ್ತರಾಗಿದ್ದಾರೆ.
ದಾಸನಡ್ಕ ರಾಮ ಕುಲಾಲರು 1942ನೇ ಇಸವಿ ದಶಂಬರ 3ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ, ಕುಡಾಲು ಮೇರ್ಕಳ ಗ್ರಾಮದ ಪೆರ್ಮುದೆ ಸಮೀಪದ ಬಾಯಾಡಿ ಎಂಬಲ್ಲಿ ಜನಿಸಿದರು. ತಂದೆ ಶ್ರೀ ಕುಂಞ ಮೂಲ್ಯ. ತಾಯಿ ಶ್ರೀಮತಿ ಅಪ್ಪು. ಪ್ರಸ್ತುತ ರಾಮ ಕುಲಾಲರು ಧರ್ಮತ್ತಡ್ಕದ ತೆಂಕಕರೆ ಮನೆಯಲ್ಲಿ ವಾಸವಾಗಿರುತ್ತಾರೆ. ಓದಿದ್ದು 6ನೇ ತರಗತಿವರೇಗೆ. 1ನೇ ತರಗತಿಯಿಂದ 3ರ ವರೇಗೆ ಹೇರೂರು ಶಾಲೆಯಲ್ಲಿ. 4ರಿಂದ 6ನೇ ತರಗತಿ ವರೇಗೆ ಚೇವಾರು ಶಾಲೆಯಲ್ಲಿ. ಶಾಲಾ ಬಾಲಕ ನಾಗಿದ್ದಾಗಲೇ ಯಕ್ಷಗಾನಾಸಕ್ತಿ. ಆಟಗಳನ್ನು ನೋಡುತ್ತಿದ್ದರು. ಕೂಡ್ಲು ಮಕ್ಕಳ ಮೇಳದ ಆಟ-ಪ್ರಸಂಗ ಶ್ರೀಕೃಷ್ಣಲೀಲೆ ಕಂಸವಧೆ. ಪೆರ್ಮುದೆ ಪೆರಿಯಡ್ಕದಲ್ಲಿ ನಡೆದ ಈ ಆಟವನ್ನು ನೋಡಿ ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಶಾಲೆ ಬಿಟ್ಟ ನಂತರ ಯಕ್ಷಗಾನ ಕಲಾವಿದನಾಗುವ ಆಸೆಯನ್ನು ಹೊತ್ತು ಕಲಾಪ್ರಿಯನಾದ ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ತೆರಳಿದರು. ಆ ಕಾಲದ ಪ್ರಸಿದ್ಧ ಎದುರು ವೇಷಧಾರಿಯಾಗಿದ್ದ ಮಧೂರು ತಿಮ್ಮಪ್ಪನವರಿಂದ ನಾಟ್ಯ ಕಲಿತರು. ಕೂಡ್ಲು ದೇವಳದ ಆಡಳಿತದಾರರಾದ ಶ್ರೀ ಈಶ್ವರ ಶ್ಯಾನುಭಾಗರ ಸಲಹೆಯಂತೆ ಕೂಡ್ಲು ಮೇಳದಲ್ಲಿ ಮೊದಲ ತಿರುಗಾಟ. ಪೆರುವಡಿ ನಾರಾಯಣ ಭಟ್ಟರ ಸಂಚಾಲಕತ್ವ. ಕೊಕ್ಕಡ ಸುಬ್ರಾಯ ಆಚಾರ್ಯರು ಭಾಗವತರಾಗಿದ್ದರು. ಮಾಳಂಗಾಯಿ ಕೃಷ್ಣ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾೈಕ, ಏಕ್ಟರ್ ಜೋಷಿ, ಎಂಪೆಕಟ್ಟೆ ರಾಮಯ್ಯ ರೈ, ಕೂಡ್ಲು ನಾರಾಯಣ ಬಲ್ಯಾಯ ಮೊದಲಾದ ಕಲಾವಿದರೊಂದಿಗೆ ತಿರುಗಾಟ ನಡೆಸಿ, ಕಲಿಯುವ ಅವಕಾಶ ಸಿಕ್ಕಿತ್ತು. ಮುಂದಿನ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ 1 ವರ್ಷ (ಕುರಿಯ ವಿಠಲ ಶಾಸ್ತ್ರಿಗಳ ಜತೆ) ನಂತರ ಮೇಳದಲ್ಲಿ ಕೆಲವು ವರ್ಷಗಳ ತಿರುಗಾಟ. ತಿರುಗಾಟ ಪ್ರಥಮ ವರ್ಷ ಕೋಡಂಗಿ, ಬಾಲಗೋಪಾಲರು, ರಾಕ್ಷಸ ಬಲ... ಹೀಗೆ ಬೆಳೆಯುತ್ತಾ ಸಾಗಿದವರು ದಾಸನಡ್ಕ ರಾಮ ಕುಲಾಲ್. ಬಣ್ಣದ ವೇಷ ಮಾಡುವ ಸಾಮಥ್ರ್ಯವನ್ನೂ ಹೊಂದಿದ್ದರು. ಈ ಸಂದರ್ಭದಲ್ಲಿ ಕೊಲ್ಲೂರು ಮೇಳದವರು ಬಣ್ಣದ ವೇಷಧಾರಿಗಳ ಅನ್ವೇಷಣೆಯಲ್ಲಿದ್ದರು. ರಾಮ ಕುಲಾಲರಿಗೆ ಅವಕಾಶವೂ ಸಿಕ್ಕಿತ್ತು. ಕೊಲ್ಲೂರು ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರಿದರು. ಅಗರಿ ಶ್ರೀನಿವಾಸ ಭಾಗವತರಿದ್ದ ಮೇಳ. ದೊಡ್ಡ ಸಾಮಗರೂ ಇದ್ದರು. ಅವರೀರ್ವರೂ ರಾಮ ಕುಲಾಲರಿಗೆ ಹೇಳಿಕೊಡುತ್ತಿದ್ದರಂತೆ. ಆಗ ಕೊಳ್ತಿಗೆ ನಾರಾಯಣ ಗೌಡರು ರಾಮ ಕುಲಾಲರ ಸಹಕಲಾವಿದರಾಗಿದ್ದರು. ಬಳಿಕ ನಂದಾವರ ಮೇಳದಲ್ಲಿ ತುಳು ಪ್ರಸಂಗಗಳಲ್ಲಿ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು. ಪದ್ಮತಾಮರೆ ಪ್ರಸಂಗದ ಜಟ್ಟಿ ಮತ್ತು ಬಂಗರಸು ಅಲ್ಲದೆ ಕೋಟಿ, ಬುದ್ಧಿವಂತ, ಚಂದುಗಿಡಿ ಮೊದಲಾದ ವೇಷಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಯಾವ ಯಾವ ಮೇಳಗಳಲ್ಲಿ ಎಷ್ಟು ತಿರುಗಾಟ ಎಂಬುದನ್ನು ರಾಮ ಕುಲಾಲರು ನಿಖರವಾಗಿ ಹೇಳಲಾರರು. ಆದರೆ ಒಟ್ಟು 52 ವರುಷಗಳ ಕಲಾಸೇವೆ ಎಂಬುದನ್ನು ಹೇಳಬಲ್ಲರು.
1991-92ರ ಸುಮಾರಿಗೆ ಕಟೀಲು ಮೇಳಕ್ಕೆ ಸೇರಿದೆನೆಂದು ರಾಮ ಕುಲಾಲರು ಹೇಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಗಳು ಕರೆಸಿ ಮೇಳಕ್ಕೆ ಬರುವಂತೆ ಹೇಳಿದರಂತೆ. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಶುಂಭಾಸುರ ಪಾತ್ರವನ್ನು ಮಾಡಲೆಂದೇ ಕರೆಸಿದ್ದರು. ‘‘ಅವರಿಂದಾಗಿಯೇ ನಾನು ಯಕ್ಷಗಾನದಲ್ಲಿ ಕಾಣಿಸಿಕೊಂಡೆ. ಪ್ರತಿಯೊಂದು ವೇಷಕ್ಕೂ ಹೇಳಿಕೊಟ್ಟು ತಯಾರು ಮಾಡುತ್ತಿದ್ದರು. ಜತೆಗೆ ಪದ್ಯಾಣ ಶಂಕರನಾರಾಯಣ ಭಟ್ಟರ ನಿರ್ದೇಶನವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ಸಹಕಾರವೂ ಇತ್ತು. ನಾನು ಕಟೀಲು ಮೇಳಕ್ಕೆ ಸೇರಿದ ವರ್ಷ ನೆಡ್ಲೆ ನರಸಿಂಹ ಭಟ್ರು, ದಿವಾಣ ಭೀಮ ಭಟ್ರೂ ಇದ್ದರು. ಅವರ ಜತೆ ತಿರುಗಾಟ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯವೆಂದೇ ಭಾವಿಸುತ್ತೇನೆ. ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರೂ, ಆಸ್ರಣ್ಣರೂ ಆಶೀರ್ವದಿಸಿ ಪ್ರೋತ್ಸಾಹಿಸಿದ್ದರು. ಅಲ್ಲದೆ ಅಡೂರು ಲಕ್ಷ್ಮೀನಾರಾಯಣ ರಾವ್ ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಕೈರಂಗಳ ಕೃಷ್ಣ ಮೂಲ್ಯ ಮೊದಲಾದವರ ಸಹಕಾರವೂ ಇತ್ತು. ಗೇರುಕಟ್ಟೆ ಗಂಗಯ್ಯ ಶೆಟ್ಟರ ರುದ್ರಭೀಮನಿಗೆ ದುಶ್ಶಾಸನನಾಗಿ ಅಭಿನಯಿಸಿದ್ದು ವಿಶೇಷ ಅನುಭವ. 23ನೇ ವಯಸ್ಸಿನಲ್ಲೇ ಮಹಿಷಾಸುರನ ಪಾತ್ರವನ್ನು ಮಾಡಿದ್ದೆ. ಕುರಿಯ ಗಣಪತಿ ಶಾಸ್ತ್ರಿಗಳು ನನ್ನಿಂದ ಮಾಡಿಸಿದ್ದರು. ಆದರೆ ನನಗೆ ಆ ವೇಷದಲ್ಲಿ ಆಸಕ್ತಿಯಿರಲಿಲ್ಲ. ಶುಂಭಾಸುರನೇ ಮೊದಲಾದ ಕೇಶಾವರೀ ವೇಷಗಳೇ ನನಗೆ ಇಷ್ಟವಾಗಿತ್ತು.’’ ಹೀಗೆ ಹೇಳುತ್ತಾ ಕಟೀಲು ಮೇಳದ ತನ್ನ ತಿರುಗಾಟದ ಅನುಭವಗಳನ್ನು ದಾಸನಡ್ಕ ರಾಮ ಕುಲಾಲರು ನೆನಪಿಸುತ್ತಾರೆ. ಕಟೀಲು ಮೇಳಕ್ಕೆ ಸೇರುವ ಮೊದಲು ಹಾಸ್ಯರತ್ನ ನಯನ ಕುಮಾರರು ನಡೆಸುತ್ತಿದ್ದ ಚೌಡೇಶ್ವರೀ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಆಗ ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು. ಆಗ ರಾಮ ಕುಲಾಲರ ವಯಸ್ಸು 30. ಭಸ್ಮಾಸುರನಾಗಿ ಇವರ ಅಭಿನಯಕ್ಕೆ ಮೆಚ್ಚಿ ಸಭಿಕರು ನೋಟಿನ ಮಾಲೆಯನ್ನು ತೊಡಿಸಿದ ಘಟನೆಯನ್ನು ರಾಮ ಕುಲಾಲರು ಈಗಲೂ ನೆನಪಿಸುತ್ತಾರೆ. ತನ್ನ 18ನೆಯ ವಯಸ್ಸಿನಲ್ಲಿ ಕುತ್ಯಾಳ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿ ಕಲಾಬದುಕನ್ನು ಆರಂಭಿಸಿದ ದಾಸನಡ್ಕ ರಾಮ ಕುಲಾಲರು 52 ವರ್ಷಗಳ ಕಾಲ ಕಲಾವಿದನಾಗಿ ವ್ಯವಸಾಯ ಮಾಡಿರುತ್ತಾರೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಬಣ್ಣದ ಮಹಾಲಿಂಗ ಯಕ್ಷಪ್ರಶಸ್ತಿಯೂ ದೊರೆತಿದೆ. ಶುಂಭ, ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕುಂಭಕರ್ಣ, ಶೂರ್ಪನಖಿ, ಪೂತನಿ, ಘಟೋತ್ಕಚ, ಮಹಿಷಾಸುರ, ಕಾಲಜಂಘ, ವಜ್ರದುಂಬಿ ಘೋರ ಗರುಡ, ಲವಣಾಸುರ ಮೊದಲಾದ ಪಾತ್ರಗಳಲ್ಲಿ ಮಿಂಚಿದ ಶ್ರೀ ರಾಮ ಕುಲಾಲರು 2011ರಲ್ಲಿ ಕಲಾಬದುಕಿಗೆ ವಿದಾಯ ಹೇಳಿರುತ್ತಾರೆ. ಅವರ ನಿವೃತ್ತ ಜೀವನ ಸುಂದರವಾಗಿರಲಿ. ಆರೋಗ್ಯ, ನೆಮ್ಮದಿಯ ಬದುಕು ಅವರದಾಗಲಿ ಎಂಬ ಹಾರೈಕೆಗಳು. ು
- ರವಿಶಂಕರ ವಳಕ್ಕುಂಜ
ದಾಸನಡ್ಕ ಶ್ರೀ ರಾಮ ಕುಲಾಲ್

Comments
Post a Comment