ಕೇದಗಡಿ ಶ್ರೀ ಗುಡ್ಡಪ್ಪ ಗೌಡ - ಪರಂಪರೆಯ ಶಿಸ್ತಿನ ಕಲಾವಿದ
ಶ್ರೀ ಕೇದಗಡಿ ಗುಡ್ಡಪ್ಪ ಗೌಡರು ಪರಂಪರೆಯ ಶಿಸ್ತಿನ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದವರು. ಸಂಪ್ರದಾಯ ಬದ್ಧ ನಾಟ್ಯ, ಪಾತ್ರೋಚಿತವಾದ, ಹಿತಮಿತವಾದ ಸಂಭಾಷಣೆ, ಗತ್ತುಗಾರಿಕೆಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಪ್ರತಿಭಾವಂತ ಕಲಾವಿದರಿವರು. ವೀರರಸದ ಪದ್ಯಗಳಿಗೆ ಕುಣಿಯುತ್ತಾ ಎರಡೂ ಕಾಲುಗಳನ್ನು ಎತ್ತಿ ಹಾರುವ ಕ್ರಮವನ್ನು ಕೊನೆಯ ವರೆಗೂ ಉಳಿಸಿಕೊಂಡು ಬಂದಿದ್ದರು. ಸಂಪ್ರದಾಯವನ್ನು ಯಾವತ್ತೂ ಮುರಿದು ಮೆರೆದವರಲ್ಲ. ಆದುದರಿಂದ ಕಲಿಕಾಸಕ್ತರಿಗೆ ಇವರೊಬ್ಬ ಆದರ್ಶ, ಅನುಸರಣೀಯ ಕಲಾಕಾರರಾಗಿದ್ದರು. ತುಸು ಗಿಡ್ಡ ಆಳಂಗ ಎಂಬುದನ್ನು ಹೊರತುಪಡಿಸಿದರೆ ಕೊರತೆಯಿಲ್ಲದ ಪರಿಪೂರ್ಣ ವೇಷಗಾರಿಕೆ ಇವರದು. ಪಾತ್ರ ನಿರ್ವಹಣೆಯ ಯಾವ ವಿಭಾಗಗಳಲ್ಲೂ ಅತಿರೇಕತೆ ಕಾಣದು. ಜತೆಗೆ ಕಡಿಮೆಯೂ ಆಗದೆ ಕೊರತೆಯಾಗದಂತೆ ಪಾತ್ರವನ್ನು ಚಿತ್ರಿಸುವ ಕಲೆಯೂ ಕರಗತವಾಗಿತ್ತು.
ಗಡಿನಾಡ ಕಾಸರಗೋಡು ಅನೇಕ ಹೆಸರಾಂತ ಕಲಾವಿದರನ್ನು ಯಕ್ಷಗಾನ ಕಲಾಮಾತೆಯ ಮಡಿಲಿಗಿಕ್ಕಿದ ಮಣ್ಣು. ಅಂತಹಾ ಗಡಿನಾಡ ಶ್ರೇಷ್ಠ ಕಲಾವಿದರಲ್ಲಿ ಕೇದಗಡಿ ಶ್ರೀ ಗುಡ್ಡಪ್ಪ ಗೌಡರೂ ಒಬ್ಬರು. ಪುಂಡುವೇಷಧಾರಿಯಾಗಿ ಕಲಾಬದುಕನ್ನು ಆರಂಭಿಸಿ, ಪೀಠಿಕೆ ವೇಷಧಾರಿಯಾಗಿ ಬೆಳೆದು, ಎದುರು ವೇಷಧಾರಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದರು. ತೆಂಕುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಕೇದಗಡಿ ಶ್ರೀ ಗುಡ್ಡಪ್ಪ ಗೌಡರು ಜನಿಸಿದ್ದು ಕಾಸರಗೋಡು ಪ್ರದೇಶದ ದೇಲಂಪಾಡಿ ಗ್ರಾಮದ ಬನಾರಿ ಸಮೀಪದ ಕೇದಗಡಿ ಮನೆಯಲ್ಲಿ. ಶ್ರೀ ಸುಬ್ರಾಯ ಗೌಡ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಓದಿದ್ದು ಐದನೇ ತರಗತಿಯ ವರೆಗೆ. ಹೆಚ್ಚಿನ ಕಲಿಕೆಗೆ ಅವಕಾಶವೂ ಇರಲಿಲ್ಲ. ಬಡತನವೂ ಜತೆಗಿತ್ತು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಇದೇ ಸಮಯಕ್ಕೆ ಯಕ್ಷ ಗುರುಕುಲದ ರೂವಾರಿ ಮಾಸ್ತರ್ ವಿಷ್ಣು ಭಟ್ಟರು ಕೀರಿಕ್ಕಾಡಿನಿಂದ ಬಂದು ಬನಾರಿಯಲ್ಲಿ ನೆಲೆಸಿದ್ದರು. ಮಾತ್ರವಲ್ಲ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಂಘವನ್ನೂ ಆರಂಭಿಸಿ ಯಕ್ಷಗಾನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಲಿಕಾಸಕ್ತರಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇದು ಗುಡ್ಡಪ್ಪ ಗೌಡರ ಯಕ್ಷಗಾನಾಸಕ್ತಿ ಎಂಬ ಚಿಗುರಿಗೆ ನೀರು ಸಾರಗಳು ಸಿಕ್ಕಿ ಬೆಳೆಯಲು ಸಹಕಾರಿಯಾಗಿತ್ತು.
ಹಗಲು ತಂದೆ ತಾಯಿಯರ ಜತೆ ಮನೆಯ ಕೆಲಸಗಳಲ್ಲಿ ತೊಡಗಿ ಸಂಜೆಯಾಗುತ್ತಲೇ ನಾಟಕ ಶಾಲೆಗೆ ತೆರಳುತ್ತಿದ್ದರು. ಕೀರಿಕ್ಕಾಡು ಮಾಸ್ತರರಿಂದ ಯಕ್ಷಗಾನ ಪಾಠ. ಕಲಿಕಾಸಕ್ತರಾಗಿ ಬಂದವರನ್ನು ತನ್ನ ಮನೆಯ ಮಕ್ಕಳಂತೆಯೇ ನೋಡುತ್ತಿದ್ದವರು ಕೀರಿಕ್ಕಾಡು ಮಾಸ್ತರರು. ಬಾಲಕ ಗುಡ್ಡಪ್ಪ ಗೌಡರು ತೀವ್ರ ಅನಾರೋಗ್ಯಪೀಡಿತರಾದಾಗ ಔಷಧೋಪಚಾರಗಳನ್ನು ಮಾಡಿ ಚೇತರಿಸುವಂತೆ ಮಾಡಿದ್ದರು. (ಪ್ರಕೃತಿ ಚಿಕಿತ್ಸೆ ಮತ್ತು ಹಳ್ಳಿಮದ್ದು) ಒಂದರ್ಥದಲ್ಲಿ ಪುನರ್ಜನ್ಮ. ಗುಡ್ಡಪ್ಪ ಗೌಡರು ಮತ್ತೆ ಹುಟ್ಟಿಬಂದರೆಂದೂ ಹೇಳಬಹುದು. ಇದು ಕಲಾಮಾತೆಯ ಅನುಗ್ರಹವೂ ಹೌದು. ಶ್ರೇಷ್ಠ ಕಲಾವಿದನೊಬ್ಬ ಮುಂದೆ ತನ್ನ ಸೇವೆಯನ್ನು ಮಾಡಲಿದ್ದಾನೆ ಎಂಬುದನ್ನು ಆಕೆ ತಿಳಿದಿದ್ದಳು. ಹಾಗಾಗಿ ಗುಡ್ಡಪ್ಪ ಗೌಡರನ್ನು ಬದುಕಿಸಿದ್ದಳು. ಕೀರಿಕ್ಕಾಡು ಮಾಸ್ತರರ ವ್ಯವಸ್ಥೆಯಲ್ಲಿ ಖ್ಯಾತ ಕಲಾವಿದ ಕಡಾರು ನಾರಾಯಣ ಭಟ್ಟರಿಂದ ನಾಟ್ಯಾಭ್ಯಾಸ. ಇವರು ಅತಿಕಾಯ ಮೊದಲಾದ ವೇಷಗಳಲ್ಲಿ ಖ್ಯಾತರು. ಅತಿಕಾಯ ನಾರಾಯಣ ಭಟ್ಟರೆಂದೇ ಪ್ರಸಿದ್ಧರು. ಶ್ರೀ ಗುಡ್ಡಪ್ಪ ಗೌಡರು ಬನಾರಿ ಯಕ್ಷಗಾನ ಕಲಾ ಸಂಘದ ಪ್ರದರ್ಶನದಲ್ಲಿ ಮೊತ್ತಮೊದಲು ಅಭಿಮನ್ಯುವಾಗಿ ರಂಗ ಪ್ರವೇಶಿಸಿದ್ದರು. ಬಳಿಕ ಬನಾರಿ ಸಂಘದ ಮತ್ತು ಇತರ ಪ್ರದರ್ಶನಗಳಲ್ಲಿ ಗುರುಗಳೊಂದಿಗೆ ಸದಾ ಭಾಗವಹಿಸಿ ಅನುಭವಗಳನ್ನು ಗಳಿಸಿಕೊಂಡರು. ಮೂರು ವರ್ಷಗಳ ಕಾಲ ಯಕ್ಷಗಾನ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಆಗಲೇ ಬೆಳೆಯುತ್ತಿರುವ ಪ್ರತಿಭೆಯನ್ನು ಕಲಾಭಿಮಾನಿಗಳೆಲ್ಲರೂ ಗುರುತಿಸಿದ್ದರು.

Comments
Post a Comment