‘‘ಸಾಮೀಪ್ಯದ ಸವಿಯುಂಡ ಹದಿನಾರು ವರ್ಷಗಳು’’ ಕುಬಣೂರು ಶ್ರೀಧರ ರಾವ್ - ಇನ್ನು ನೆನಪು ಮಾತ್ರ
‘‘ಸಾಮೀಪ್ಯದ ಸವಿಯುಂಡ ಹದಿನಾರು ವರ್ಷಗಳು’’
ಕುಬಣೂರು ಶ್ರೀಧರ ರಾವ್ - ಇನ್ನು ನೆನಪು ಮಾತ್ರ
ಮೃತ್ಯುವು ಸಹಜವಾದುದರಿಂದ ಇದು ಮತ್ರ್ಯಲೋಕ. ಮೃತ್ಯುವಿಗೆ ವಶವಾಗತಕ್ಕವರು ಎನ್ನುವುದರಿಂದ ನಾವೆಲ್ಲಾ ಮತ್ರ್ಯರು ಲೋಕ ನಿಯಮವನ್ನು ಮುರಿದು ಮೆರೆಯಲು ಯಾರಿಗೂ ಅಸಾಧ್ಯ. ಹಿರಿಯರು, ಒಡನಾಡಿಗಳು, ಆತ್ಮೀಯರ ಅಗಲುವಿಕೆಯಿಂದ ಉಂಟಾಗುವ ನೋವೂ ಸಹಜ. ಅದನ್ನು ಅನುಭವಿಸಲೇಬೇಕು. ಅರಗಿಸಿ ಕೊಳ್ಳುವುದು ಬಲು ಕಷ್ಟ. ಆದರೆ ಲೋಕ ನಿಯಮವನ್ನು ಅವರು ಪಾಲಿಸಿದ್ದಾರೆ ಎಂದು ಸಮಾಧಾನಪಟ್ಟು ಕೊಳ್ಳುವುದು ಅನಿವಾರ್ಯ. ಗೇರುಕಟ್ಟೆ ಗಂಗಯ್ಯ ಶೆಟ್ರು, ಗಂಗಾಧರ ನಾವೂರು, ಆಲ್ಮನೆ ಪದ್ಮನಾಭ, ಉದ್ಯಾವರ ಜಯಕುಮಾರ್, ಪಡುಮಲೆ ನಾರಾಯಣ ಪಾಟಾಳಿ ಇವರನ್ನು ಕಳೆದುಕೊಂಡ ನೋವು ಇನ್ನೂ ಮಾಸದಿರುವಾಗ ಆದ ಗಾಯದ ಮೇಲೆ ಕಾದ ಬರೆ ಎಂಬಂತೆ ಶ್ರೇಷ್ಠ ಭಾಗವತರಾದ ಕುಬಣೂರು ಶ್ರೀಧರ ರಾಯರೂ ಇಹದ ವ್ಯವಹಾರವನ್ನು ಮುಗಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡರು.ಕುಬಣೂರು ಶ್ರೀಧರ ರಾವ್
ಕಲಾಭಿಮಾನಿಗಳು, ಕಲಾವಿದರಿಗೆ ಈ ಘಟನೆ ಗಳಿಂದ ನೋವಾಗುವುದು ಸಹಜ. ಈ ವರುಷ ಹೀಗೇಕೆ? ಕಲಾವಿದರಿಗೇಕೆ ಮರಣಭಯವು ಕಾಡುತ್ತಿದೆ? ಕಲಾಮಾತೆಯು ಕಲಾವಿದರನ್ನೂ ಕಲಾಭಿಮಾನಿಗಳನ್ನೂ ಅನುಗ್ರಹಿಸಲಿ, ಅನವರತ ರಕ್ಷಿಸಲಿ. ನಮ್ಮಿಂದ ದೂರವಾದ ಕಲಾವಿದರು ಅವ್ಯಕ್ತ ಪ್ರಪಂಚದಲ್ಲಿ ಸುಖವಾಗಿರಲಿ. ಅಲೌಕಿಕ ಲೋಕದಲ್ಲಿದ್ದು ನಮ್ಮನ್ನು ಹರಸಲಿ ಎಂದು ಪ್ರಾರ್ಥಿಸೋಣ.
ಶ್ರೀ ಕುಬಣೂರು ಶ್ರೀಧರ ರಾಯರು, ಕಟೀಲು ಮೇಳದ ಹಿರಿಯ ಭಾಗವತರು. ಕಳೆದ ವರ್ಷವಷ್ಟೇ ‘ಶ್ರೀಧರಾಯಣ’ ಎಂಬ ಕಾರ್ಯ ಕ್ರಮದಲ್ಲಿ ಅವರನ್ನು ಗೌರವಿಸಿದುದನ್ನು ನೋಡಿ ಸಂಭ್ರಮಿಸಿದೆವು. ಗಾನರತ್ನಾಕರ ಎಂಬ ಬಿರುದಿಗೆ ಪಾತ್ರರಾದ, ಅವರಿಂದ ಇನ್ನಷ್ಟು ಕಲಾಸೇವೆಯನ್ನು ಬಯಸಿದೆವು. ಆದರೆ ವಿಧಿಯ ಆಟ, ಸಂಕಲ್ಪ ಬೇರೆಯೇ ಆಗಿತ್ತು. ಕುಬಣೂರು ಭಾಗವತರು ಭಾಗವತರಾಗಿ, ಪತ್ರಿಕೋದ್ಯಮಿಯಾಗಿ, ಪ್ರಸಂಗ ಕರ್ತನಾಗಿ ಯಕ್ಷಗಾನಕ್ಕೆ ವಿಶೇಷ ಕೊಡುಗೆ ಗಳನ್ನಿತ್ತವರು. ಯಕ್ಷಪ್ರಭಾ ಎಂಬ ಯಕ್ಷಗಾನ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದಲ್ಲದೆ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ದಾಶರಥಿ ದರ್ಶನ ಮೊದಲಾದ ಪ್ರಸಂಗಗಳನ್ನೂ ರಚಿಸಿದರು. ಸರಳ, ನಿಗರ್ವಿ, ಸಜ್ಜನನಾಗಿ ಬಾಳಿ ಬದುಕಿದರು. ಸ್ವಾಭಿಮಾನಿಯೂ ಆಗಿದ್ದರು. ‘ಅನಾಯಾಸೇನ ಮರಣ ವಿನಾ ದೈನ್ಯೇನ ಜೀವನಂ’- ಇವೆರಡೂ ಎಲ್ಲರಿಗೂ ಬಯಸಿದರೂ ಸಿದ್ಧಿಸುವುದಿಲ್ಲ. ಕುಬಣೂರು ಶ್ರೀಧರ ರಾಯರಿಗೆ ಸಿದ್ಧಿಸಿತು. ಎಲ್ಲಕ್ಕಿಂತ ಹೆಚ್ಚಾಗಿ 16 ವರ್ಷಗಳ ಕಾಲ ಅವರ ಜತೆ ನಾನು ತಿರುಗಾಟ ನಡೆಸಿದ್ದೇನೆ. ಹತ್ತಿರ ಕುಳಿತು ಊಟ ಮಾಡಿದ್ದೇವೆ. ಅವರ ಹತ್ತಿರದಲ್ಲಿಯೇ ಇದ್ದು ಮಾತನಾಡುತ್ತಾ ನಿದ್ದೆ ಮಾಡಿದ ದಿನಗಳನೇಕ. ಮಧ್ಯಾಹ್ನ ಊಟಕ್ಕೆ, ರಾತ್ರೆ ಎಚ್ಚರವಾಗದಿದ್ದರೆ ಕರೆಯುತ್ತಿದ್ದರು. ನನಗೆ ಮೊದಲು ಎಚ್ಚರವಾದರೆ ಅವರನ್ನು ಕರೆಯುತ್ತಿದ್ದೆ. ಹೀಗೆ ಮರೆಯಲಾಗದ ದಿನಗಳವು. ಬಾಂಧವ್ಯವೂ ಹೌದು. ಪ್ರಸಂಗಗಳ ಆಯ್ಕೆ, ನಡೆ, ವೇಷ ಹಂಚುವಿಕೆ ಈ ವಿಚಾರಗಳಲ್ಲಿ ನಮ್ಮೊಳಗೆ ಆರೋಗ್ಯಕರ ಚರ್ಚೆಗಳು ಆಗುತ್ತಿತ್ತು. ಕೊನೆಗೊಂದು ತೀರ್ಮಾನಕ್ಕೆ ಬರಲೂ ಬರುತ್ತಿತ್ತು. ಒಂದಂತೂ ನಿಜ. ಅವರು ನನ್ನನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ನಾನೂ ಅವರನ್ನು ಗೌರವಿಸು ತ್ತಿದ್ದೆ. ಇನ್ನು ಕೇವಲ ನೆನಪು ಮಾತ್ರ. ಅಮೂಲ್ಯ ವಾದುದನ್ನು ಕಳೆದುಕೊಂಡೆವು. ಯಕ್ಷಗಾನ ಕಲಾವಿದನಾಗಿ ತಿರುಗಾಟ ಮಾಡಲೇಬೇಕು ಎಂಬ ನಿರ್ಣಯ, ಉತ್ಸಾಹ ಈಗಿಲ್ಲ. ಇನ್ನು... ಮಾಡುತ್ತೇನೆ... ಅಷ್ಟೆ.
ಕುಬಣೂರು ಶ್ರೀಧರ ರಾಯರು... ನಮ್ಮ ಭಾಗವತರನ್ನು ಹತ್ತಿರದಿಂದಲೇ ತಿಳಿದಿದ್ದೇನೆ. ಅವರ ಮನಸೇನು ಎಂಬುದನ್ನು ಅರಿತಿದ್ದೇನೆ. ಕೆಲವು ಪ್ರಸಂಗಗಳಲ್ಲಿ ನನ್ನ ಪಾಲಿಗೆ ಆರೇಳು ವೇಷಗಳನ್ನು ಬರೆಯುತ್ತಿದ್ದರು. ಹೆಚ್ಚಾದ ಸಂದರ್ಭಗಳೂ ಇವೆ. ಹಾಸ್ಯಗಾರರಿಗೆ ಕಷ್ಟ ಆಗುತ್ತಿದೆ ಎಂದು ಗೊತ್ತಿದೆ. ಅವರಲ್ಲಿ ವಿಶ್ವಾಸ ವಿದೆ. ಅವರೇ ಆ ಪಾತ್ರಗಳಲ್ಲಿ ಕಾಣಿಸಿಕೊಳ್ಳ ಬೇಕೆಂಬುದು ನನ್ನ ಬಯಕೆ. ಭಾಗವತನಾಗಿ ಪ್ರಸಂಗವನ್ನು ಮುನ್ನಡೆಸಲು ನನಗೆ ಇದರಿಂದ ಅನುಕೂಲವಾಗುತ್ತದೆ ಎಂದು ಕೆಲವು ವ್ಯಕ್ತಿಗಳಲ್ಲಿ ಅವರು ಹೇಳುತ್ತಿದ್ದ ವಿಚಾರವೂ ನನಗೆ ತಿಳಿದಿದೆ. ಕುಬಣೂರು ಭಾಗವತರು ಅಪಾರ ಬೌದ್ಧಿಕ ಸಾಮಥ್ರ್ಯವುಳ್ಳವರಾಗಿದ್ದರು. ಪ್ರತ್ಯುತ್ಪನ್ನಮತಿ ಗಳಾಗಿದ್ದರು. ಪ್ರಸಂಗಕ್ಕೆ ವೀರರಸ ಬೇಕು. ಆದರೆ ಅದುವೇ ಆಗಿರಬಾರದು ಎನ್ನುವ ಅವರು ಅತ್ಯುತ್ತಮ ಸಂಭಾಷಣೆಗಳಿಗೆ ಅವಕಾಶಗಳಿರುವ ಪ್ರಸಂಗಗಳನ್ನು ಮೆಚ್ಚುತ್ತಿದ್ದರು. ಆಳವಾದ ಸಂಭಾಷಣೆಗಳು, ಮಾತಿನ ಬಾಣಗಳು ಕಲಾವಿದ ರಿಂದ ಎಸೆಯಲ್ಪಟ್ಟಾಗ ಮೊದಲು ಅವರೇ ಗ್ರಹಿಸಿ ಪ್ರತಿಕ್ರಿಯಿಸಿದವರು. ಚತುರಮತಿಗಳಾಗಿದ್ದರು. ಒಳ್ಳೆಯ ವಿಚಾರಗಳು ಸಂಭಾಷಣೆಯೊಳಗೆ ಬಂದಾಗ ಜಾಗಟೆ ಕೆಳಗಿರಿಸಿ ಕೇಳುತ್ತಾ ಸಂತೋಷಪಟ್ಟು ಹುರಿದುಂಬಿಸುತ್ತಿದ್ದರು.
ಹೀಗೆ ಕುಬಣೂರು ಶ್ರೀಧರ ರಾಯರ ಶ್ರೇಷ್ಠ ಮೇಲ್ಮಟ್ಟದ ಚಿಂತನೆಗಳಿಗೆ ಅನೇಕ ನಿದರ್ಶನ ಗಳಿವೆ. ಬರೆದರೆ ಒಂದು ಪುಸ್ತಕ ಆಗಬಹುದು. ಶೃಂಗಾರ, ಕರುಣ, ಹಾಸ್ಯ, ಭಕ್ತಿರಸಗಳ ಸನ್ನಿವೇಷ ಗಳ ಸಂಭಾಷಣೆಗಳನ್ನು ಇವರು ತನ್ಮಯರಾಗಿ ಕೇಳುತ್ತಾ ಅನುಭವಿಸಿ ಸ್ಪಂದಿಸುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕಲಾವಿದರ ಸಂಭಾಷಣೆ ಗಳನ್ನು ಗಮನಿಸಿ ಆಸ್ವಾದಿಸುವ, ನಿರ್ಣಯಿಸುವ, ಗಳನ್ನು ಗಮನಿಸಿ ಆಸ್ವಾದಿಸುವ, ನಿರ್ಣಯಿಸುವ, ನಿರ್ದೇಶಿಸುವ ಭಾಗವತರುಗಳೇ ಯಕ್ಷಗಾನಕ್ಕೆ, ಕಲಾವಿದರಿಗೆ ಆಸ್ತಿ. ಅಂತಹ ಭಾಗವತರುಗಳಲ್ಲಿ ಕುಬಣೂರು ಶ್ರೀಧರ ರಾಯರೂ ಒಬ್ಬರು. ಸಪೂರವಾದ ಬೆಂಚಲ್ಲಿ ತನ್ನ ಸೂಟ್ಕೇಸ್ನ ಮೇಲೆ ತಲೆಯಿಟ್ಟು ಮಲಗುತ್ತಿದ್ದರು. ಐದಾರು ಕುರ್ಚಿಗಳನ್ನು ಸಾಲಾಗಿರಿಸಿ ಮಲಗಿದ್ದೂ ಇದೆ. ಯಾರಾದರೂ ತಂದುಕೊಟ್ಟರೆ ಇಲ್ಲವಾದರೆ ಅವರೇ ಹೋಗಿ ಚಾ ಕುಡಿಯುವುದನ್ನೂ ಕಂಡಿದ್ದೇನೆ. ಹೊರೆಯಾದವರಲ್ಲ. ಎಲ್ಲರಿಗೂ ಬೇಕಾದವರಾಗಿದ್ದರು. ಇದಕ್ಕಿಂತ ಹೆಚ್ಚೇನನ್ನು ಹೇಳಲಿ.
ಭಾಗವತರ ಅಗಲುವಿಕೆಯಿಂದುಂಟಾದ ನೋವು ಅಷ್ಟು ಬೇಗನೇ ಮಾಸಲಾರದು. ಶ್ರೀ ಕುಬಣೂರು ಶ್ರೀಧರ ರಾಯರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಪರಮಾತ್ಮನು ಅನುಗ್ರಹಿಸಲಿ. ಅವರು ಅಮರರಾಗಲಿ ಎಂದು ಕಲಾಭಿಮಾನಿ ಗಳ, ಕಲಾವಿದರೆಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ.ು
ರವಿಶಂಕರ್ ವಳಕ್ಕುಂಜ

ನಿಮ್ಮ ಬರವಣಿಗೆಯನ್ನು ಓದುತ್ತಾ ಹೋದ ಹಾಗೇ ಮಾತು ಮೌನವಾಗಿ ಭಾವವೇ ಮಾತಾಡುವ ಸ್ಥಿತಿ ಒದಗಿತು.ಅವರೊಂದಿಗೆ ತಿರುಗಾಟದಲ್ಲಿ ಇಲ್ಲದವನಾದರೂ ಅವರನ್ನು ಆತ್ಮೀಯವಾಗಿ ಮೆಚ್ಚುತ್ತಿದ್ದೆ ಅವರ ಯೋಗ್ಯತೆ, ಸರಳತೆಯೇ ಅಂತಹುದು.ಮೇಳ ಬಿಟ್ಟ ಮೇಲೆ ಅವರಿದ್ದ ಸೆಟ್ಟಿನಲ್ಲಿ ನಾನು ಸೇವೆ ಮಾಡಿದ್ದು ಹೆಚ್ಚು. ಪದ್ಮಾವತಿ, ಸರಸ್ವತಿ, ಕಯಾದು,ಭೃಮರಕುಂತಳೆ ಹೀಗೇ ಹಲವಾರು ಪಾತ್ರಗಳು. ನೀವು ಊರಲ್ಲಿದ್ದಷ್ಡು ದಿನ ನಮ್ಮ ಸೆಟ್ಟಿನಲ್ಲೇ ಸೇವೆ ಮಾಡಿ ಅನ್ನುವ ಅವರಲ್ಲಿ ಕಲಾವಿದರ ಬಗೆಗಿರುವ ಗೌರವ ಭಾವವನ್ನು ಸುಲಭವಾಗಿ ತಿಳಿದುಕೊಳ್ಳುವುದಕ್ಕಾಗಿ ಸಾಧ್ಯ ವಾಗ್ತದೆ.ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಕೌಶಿಕೆಯಾಗಿ ಅಭಿನಯಿಸಿದಾಗ ಆ ದಿನ ತೀರ್ಪುಗಾರರಾಗಿ ಬಂದಿದ್ದ ಅವರ ಕಂಗಳಲ್ಲಿ ಕಂಡ ಮೆಚ್ಚುಗೆಯ ಭಾವ ನನ್ನ ಪಾತ್ರಪೋಷಣೆಗೆ ಹೆಚ್ಚಿನ ಪುಷ್ಟಿಯನ್ನು ಇತ್ತಿತು.ಪ್ರತಿ ತಿಂಗಳ ಯಕ್ಷಪ್ರಭಾ ನನ್ನ ಕೈ ಸೇರುತ್ತಿದ್ದಾಗ ಕುಬಣೂರು ಭಾಗವತರಲ್ಲೇ ಮಾತಾಡಿದ ಅನುಭವ ಆಗುತ್ತಿತ್ತು. ಅವರು ಅಗಲಿದ ವರುಷದ ಕೊನೆಯ ಸೇವೆಗೆ ಅಸ್ರಣ್ಣರ ಆಟಕ್ಕೆ ನಾನು ಸೇವೆಗೆ ಬರುತ್ತೇನೆಂದಾಗ ಇಂದು ಬೇಡ ವೇಷ ಮೊದಲೇ ಹಂಚಿಯಾಗಿದೆ.ನೀವು ಮಾಡುವ ವೇಷ ಕೊಡಬೇಡವೇ ,ನಾನೇ ನಿಮಗೆ
ReplyDeleteಪೋನು ಮಾಡಿ ತಿಳಿಸುತ್ತೇನೆಂದರು.ಆ ವರುಷ ೩ ನೆಯ ಸೆಟ್ಟಿನ ನನ್ನ ಸ್ವಂತ ಹರಕೆಯಾಟದಲ್ಲೇ ಸೇವೆ ಮುಗಿಸಿದೆ.ರಜೆ ಇಲ್ಲದೆ ಮುಂಬಯಿಗೆ ಮರಳಿದೆ.ಆ ವರುಷ ಅವರೊಂದಿಗೆ ನಡೆದ ಮಾತುಕತೆಯೇ ಕೊನೆಯ ಮಾತುಕತೆಯಾಗಿ ಅವರೊಂದಿಗೆ ಸೇವೆ ಮಾಡಬೇಕೆನ್ನುವ ಬಯಕೆ ಬರೇ ಕನಸಾಗಿ ಉಳಿದು ಹೋಯಿತು.ಬರೇ ನೆನಪುಗಳಾಗಿ ಉಳಿಯಿತು. ಅವರ ದಿವ್ಯ ಚೇತನ ಅನಿಕೇತನವಾಗಲೆಂದು ಹಾರೈಸುತ್ತೇನೆ.ಇಂತಹ ದಿವ್ಯಚೇತನ ಮತ್ತೊಮ್ಮೆ ಹುಟ್ಟಿಬರಲಿ ಯಕ್ಷ ಮಾತೆಯ ಮಡಿಲ ಸಾರ್ಥಕ್ಯಗೊಳಿಸಲೆಂದು ಆಶಿಸುವೆ. 🙏🙏🙏🙏🙏
ಶ್ರೀಧರರಾಯರ ಪದ ಕೇಳಲೆಂದೆ ಹಲವು ಆಟಕ್ಕೆ ಹೋಗಿದ್ದುಂಟು. ಕಣ್ಣು ಮುಚ್ಚಿ ಕೇಳಿದರೆ ಯಾವುದೋ ಲೋಕದಲ್ಲಿ ತೇಲಿದ ಅನುಭವವನ್ನು ಪಡೆದಿದ್ದೇನೆ. ಅವರ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥನೆ 🙏
ReplyDeleteಕುಬಣೂರು ಶ್ರೀಧರ ರಾಯರ ಮಧುರ ಗಾನ ತುಂಬಾ ಇಂಪು
ReplyDelete