ತೆಂಕು ಬಡಗು ಖ್ಯಾತಿಯ ಸವ್ಯಸಾಚಿ ಭಾಗವತ - ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ
ಶ್ರೀ ಸತ್ಯನಾರಾಯಣ ಪುಣಿಂಚಿತ್ತಾಯರು ಸವ್ಯಸಾಚಿ ಭಾಗವತರು. ಉಭಯತಿಟ್ಟುಗಳ ಭಾಗವತಿಕೆಯನ್ನೂ ಅಭ್ಯಸಿಸಿ ಹಾಡುತ್ತಿರುವ ಶ್ರೇಷ್ಠ ಕಲಾವಿದ. ಪ್ರಸ್ತುತ ಬಹು ಬೇಡಿಕೆಯುಳ್ಳ ಯುವ ಹಾಡುಗಾರರಲ್ಲೊಬ್ಬರು. ಆಟ, ಕೂಟಗಳಲ್ಲಿ ಅಲ್ಲದೆ ಯಕ್ಷಗಾನದ ಇತ್ತೀಚೆಗಿನ ಪ್ರಯೋಗಗಳಾದ ನಾಟ್ಯವೈಭವ, ಗಾನವೈಭವ ಕಾರ್ಯಕ್ರಮಗಳಲ್ಲೂ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮದ ಶಿರಂತಡ್ಕ ಎಂಬಲ್ಲಿ ಗಣಪತಿ ಪುಣಿಂಚಿತ್ತಾಯ ಮತ್ತು ಶ್ರೀಮತಿ ಗೀತಾ ದಂಪತಿಗಳಿಗೆ ಮಗನಾಗಿ 23-12-1971ರಂದು ಸತ್ಯನಾರಾಯಣ ಪುಣಿಂಚಿತ್ತಾಯರು ಜನಿಸಿದರು. ಇವರದು ಬಡ ಕೃಷಿ ಕುಟುಂಬ. ತಂದೆ ಗಣಪತಿ ಪುಣಿಂಚಿತ್ತಾಯರು ಉತ್ತಮ ಹವ್ಯಾಸಿ ಕಲಾವಿದ, ತಾಳಮದ್ದಳೆ ಅರ್ಥಧಾರಿ. ತಾಯಿ ಗೀತಾ ಅವರು ಪ್ರಸಂಗಕರ್ತ, ಹಿಮ್ಮೇಳ ಮುಮ್ಮೇಳ ಕಲಾವಿದ ರಾದ ಅಡೂರು ಸೂರ್ಯನಾರಾಯಣ ಕಲ್ಲೂರಾಯರ ಪುತ್ರಿ. ಹಾಗಾಗಿ ಯಕ್ಷಗಾನ ರಕ್ತಗತವಾಗಿಯೇ ಒಲಿದಿತ್ತು ಸತ್ಯನಾರಾಯಣ ಪುಣಿಂಚಿತ್ತಾಯರಿಗೆ. ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೇಗೆ ಓದು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಮತ್ತು ಇಲೆಕ್ಟ್ರಿಕಲ್ ವಿಚಾರಗಳು ಇ...