ಯಕ್ಷಗಾನ ಹಿಮ್ಮೇಳಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್

ಯಕ್ಷಗಾನ ಹಿಮ್ಮೇಳಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್

                                ಯಕ್ಷಗಾನದಲ್ಲಿ ಹಿಮ್ಮೇಳ ಪ್ರಧಾನವೋ? ಮುಮ್ಮೇಳ ಪ್ರಧಾನವೋ? ಎಂಬ ಪ್ರಶ್ನೆಯನ್ನು ಕೆಲವರು ಕೇಳುವುದುಂಟು. ಇದಕ್ಕೆ ಉತ್ತರವೇನು? ಯಕ್ಷಗಾನವು ಒಂದು ಸಮಷ್ಠಿ ಕಲೆ. ತಂಡವಾಗಿ ಶ್ರಮಿಸಿದಾಗ ಗೆಲ್ಲುತ್ತದೆ. ಎರಡೂ ವಿಭಾಗಗಳೂ ಒಂದಕ್ಕೊಂದು ಪೂರಕವಾಗಿರಲೇಬೇಕು. ಇಲ್ಲವಾದರೆ ರಂಗವು ಪೇಲವವಾಗುತ್ತದೆ. ಆದರೂ ಮುಮ್ಮೇಳದ ಕಲಾವಿದರು ತಮ್ಮ ಕ್ರಿಯೆಯನ್ನು ಆರಂಭಿಸುವುದು, ತೊಡಗುತ್ತಾ ಚುರುಕುಗೊಳ್ಳುವುದು ಹಿಮ್ಮೇಳದ ಕಲಾವಿದರ ಪ್ರಚೋದನೆಯಿಂದಲೇ ಹೌದು. ಹಾಗಾಗಿ ಹಿಮ್ಮೇಳವೇ ಮುಮ್ಮೇಳಕ್ಕಿಂತ ಪ್ರಧಾನ ಎಂದು ಹೇಳಿದರೆ ತಪ್ಪಾಗಲಾರದು. ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ. ಅರ್ಹತೆಯನ್ನು ಹೊಂದಿ ಅವನು ಆಸ್ಥಾನದಲ್ಲಿ ಕುಳಿತರೆ, ಮದ್ದಳೆಗಾರರೂ ಭಾಗವತರಷ್ಟೇ ಪ್ರಬುದ್ಧರಾದರೆ ಪ್ರೇಕ್ಷಕರಿಗೆ ಅಂದು ರಸದೌತಣವೇ ಸರಿ. ಮುಮ್ಮೇಳದ ಕಲಾವಿದರು ಅನನುಭವಿಗಳಾದರೂ ಪ್ರದರ್ಶನವು ಸೋಲದು. ಪ್ರಸಂಗವು ಕಳೆಯೇರಿ ಯಕ್ಷಗಾನವು ಗೆಲ್ಲುವುದನ್ನು ಕಾಣಬಹುದು. ಬೀಜವು ಮೊಳಕೆಯೊಡೆಯುತ್ತದೆ. ಸಸಿಯಾಗಿ, ಮರವಾಗಿ ಬೆಳೆದು ನಿಲ್ಲುತ್ತದೆ. ಆದರೆ ನೀರು, ಸಾರ, ಗಾಳಿ, ಬಿಸಿಲುಗಳಿಲ್ಲದೆ ಖಂಡಿತಾ ಬೆಳೆಯಲಾರದು. ಹಾಗೆಯೇ ಕಲಾವಿದನು ಸಿದ್ಧನಾಗಿ ಬೆಳೆಯಬೇಕಾದರೆ ಅವರಿಗೆ ವಿದ್ಯೆ ಎಂಬ ಪೀಯೂಷವನ್ನು ಉಣಿಸಲೇಬೇಕು. ವಿದ್ಯೆ ಹೇಳಿಕೊಟ್ಟ ಗುರುವಿನ ಅನುಗ್ರಹವೂ ಬೇಕು. ರೂಢಿಯ ಮಾತುಗಳು ಶಾಸ್ತ್ರಕ್ಕಿಂತಲೂ ಬಲಿಷ್ಠವಾಗಿರುವುದನ್ನು ಕೆಲವೆಡೆ ಕಾಣಬಹುದು. ‘‘ಗುರುನೆಲೆ ಇಲ್ಲೆಂಗಿಲ್ ಒರುನೆಲೆಯೂ ಇಲ್ಲ’’ (ಮಲೆಯಾಳಂ ಮಾತು) ಗುರುಗಳ ಪ್ರೀತಿ ಅನುಗ್ರಹವನ್ನು ಹೊಂದಿದ ಕಲಾವಿದನಂತೂ ಪರಿಪೂರ್ಣನಾಗಿ ವಿಜೃಂಭಿಸುತ್ತಾನೆ.
                                                        ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್
                                                ಫೋಟೋ : ಶ್ರೀ ರಾಮ್ ನರೇಶ್ ಮಂಚಿ 
           ಯಕ್ಷಗಾನ ಹಿಮ್ಮೇಳಕ್ಕೆ ಅನೇಕ ಶ್ರೇಷ್ಠ ಕಲಾವಿದರನ್ನು ಸಿದ್ಧಗೊಳಿಸಿ ಕೊಟ್ಟವರು, ಕೊಡುತ್ತಾ ಇರುವವರು ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರು. ಇವರ ತೀರ್ಥರೂಪರಾದ ಮಾಂಬಾಡಿ ನಾರಾಯಣ ಭಟ್ಟರಿಂದ ಮೊದಲ್ಗೊಂಡು, ಪುಂಡಿಕಾಯಿ ಕೃಷ್ಣ ಭಟ್, ನಿಡ್ಲೆ ನರಸಿಂಹ ಭಟ್ಟರು, ದಿವಾಣ ಭೀಮ ಭಟ್ಟರು, ಕುದ್ರೆಕೋಡ್ಲು ರಾಮ ಭಟ್ಟರು, ಗೋಪಾಲಕೃಷ್ಣ ಕುರುಪ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮೊದಲಾದವರ ಶಿಷ್ಯಂದಿರು ಇಂದು ಶ್ರೇಷ್ಠ ಹಿಮ್ಮೇಳ ಕಲಾವಿದರಾಗಿ ರಂಜಿಸುತ್ತಿರುವುದನ್ನು ನಾವು ನೋಡುತ್ತೇವೆ. ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು, ಮೋಹನ ಬೈಪಾಡಿತ್ತಾಯರು, ಅಲ್ಲದೆ ಪ್ರಸ್ತುತ ಅನೇಕ ಯುವ ಮದ್ದಳೆಗಾರರು ತರಗತಿಗಳನ್ನು ನಡೆಸಿ ಕಲಾವಿದರನ್ನು ಸಿದ್ಧಗೊಳಿಸುವುದು ಸಂತಸದ ವಿಚಾರವೇ ಹೌದು.
ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಶಿಷ್ಯಂದಿರು ಅನೇಕ ಮಂದಿ ಇಂದು ಯಕ್ಷಗಾನ ಹಿಮ್ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಾ ಗುರುಗಳ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ. ಇದರಿಂದ ಮಾಂಬಾಡಿ ಸುಬ್ರಹ್ಮಣ್ಯರ ಹೊಣೆಗಾರಿಕೆಯೂ ಹೆಚ್ಚಿತೆಂದೇ ಹೇಳಬಹುದು. ಕಲಾಭಿಮಾನಿಗಳು ಅವರಲ್ಲಿ ವಿಶ್ವಾಸ, ಗೌರವವಿರಿಸುತ್ತಿದ್ದಾರೆ. ಅವರಿಂದ ಪಾಠ ಕಲಿತು ಇನ್ನಷ್ಟು ಕಲಾವಿದರು ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸಲಿ ಎಂಬುದೇ ಎಲ್ಲರ ಆಶಯವಾಗಿದೆ. ಈಗ ಯಕ್ಷಗಾನ ಹಿಮ್ಮೇಳ ವಿಭಾಗದಲ್ಲಿ ಹೊಳೆದು ಕಾಣಿಸಿಕೊಳ್ಳುತ್ತಿರುವ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಶ್ರೀ ರಾಮಕೃಷ್ಣ ಮಯ್ಯ, ಪದ್ಯಾಣ ಗೋವಿಂದ ಭಟ್, ಪಟ್ಲ ಸತೀಶ ಶೆಟ್ಟಿ, ಹೊಸಮೂಲೆ ಗಣೇಶ ಭಟ್, ಬೊಂದೇಲ್ ಸತೀಶ್ ಶೆಟ್ಟಿ, ಸುದಾಸ್ ಕಾವೂರು, ನೆಕ್ಕರೆಮೂಲೆ ಗಣೇಶ ಭಟ್, ಕೋಳ್ಯೂರು ಭಾಸ್ಕರ, ಪ್ರಶಾಂತ್ ವಗೆನಾಡು ಮೊದಲಾದವರೆಲ್ಲಾ ಮಾಂಬಾಡಿಯವರ ಗರಡಿಯಲ್ಲಿ ಪಳಗಿದವರೇ ಹೌದು. ಹೀಗಿರುವಾಗ ನಾವೆಲ್ಲರೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನು ಅಭಿನಂದಿಸಲೇಬೇಕು. ಇವರು ಪಾಠ ಮಾಡುವ ಕ್ರಮ ಅತ್ಯಂತ ಸೊಗಸು. ಸರಳವಾಗಿ, ಸುಲಭವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುವ ರೀತಿ ಇವರಿಗೆ ಕರತಲಾಮಲಕ. ಸಿಡುಕದೆ, ನಗುನಗುತ್ತಾ, ಮಾತಿನ ಮೂಲಕವೇ ಹೊಡೆತ ಕೊಡುತ್ತಾ, ಹಾಸ್ಯಚಟಾಕಿಗಳನ್ನು ಹಾರಿಸುತ್ತಾ, ಸುಲಭವಾಗಿ ಅರ್ಥವಾಗಲು ವಿಶಿಷ್ಟ ಬಾಯಿತಾಳಗಳನ್ನು ಸಿದ್ಧಗೊಳಿಸಿ ಹೇಳಿಕೊಡುವ ರೀತಿ ಬಲು ಸೊಗಸು. ನೋಡುತ್ತಾ ಕುಳಿತರೆ ಸಮಯ ಹೋದುದೇ ತಿಳಿಯುವುದಿಲ್ಲ. ತನ್ನ ತಂದೆಯವರ ಹಾದಿಯಲ್ಲೇ ಸಾಗುತ್ತಾ ಅವರು ಗಳಿಸಿದ ಕೀರ್ತಿಯೆಂಬ ಗೋಪುರಕ್ಕೆ ಹೊಳೆಯುವ ಹೊನ್ನ ಕಲಶವನ್ನಿರಿಸುವ ಕಾಯಕದಲ್ಲಿ ತೊಡಗಿದ್ದಾರೆ. ನಿಜವಾಗಿಯೂ ಕರ್ಮಪುತ್ರರೆನಿಸಿಕೊಂಡಿದ್ದಾರೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಮಾಂಬಾಡಿ ನಾರಾಯಣ ಭಟ್ಟರ ಪುತ್ರರು. ಮಾಂಬಾಡಿ ನಾರಾಯಣ ಭಟ್ಟರು 1900ನೇ ಇಸ್ವಿಯಲ್ಲಿ ಜನಿಸಿದರು. ತಿರುವಾಂಕೂರಿನಲ್ಲಿ ಸಂಸ್ಕೃತ ಕಾವ್ಯಾಭ್ಯಾಸವನ್ನು ಮಾಡಿದವರು. ಜ್ಯೋತಿಷ್ಯವನ್ನು ಅಭ್ಯಸಿಸಿದ್ದರಂತೆ. ಅಣ್ಣ ಈಶ್ವರ ಭಟ್ಟರಿಂದ ಯಕ್ಷಗಾನದ ಬಾಲಪಾಠ ಅಭ್ಯಸಿಸಿ ಪುಟ್ಟುನಾರಾಯಣ ಭಾಗವತರ ಶಿಷ್ಯನಾಗಿ ಎಳವೆಯಲ್ಲೇ ಮೇಳಕ್ಕೆ ಸೇರುವಾಗ ಹದಿನೈದಕ್ಕೂ ಹೆಚ್ಚಿನ ಪ್ರಸಂಗಗಳ ಪದ್ಯಗಳು ಕಂಠಪಾಠ ಮಾಡಿಕೊಂಡ ಸಾಧಕ. ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸುತ್ತಾ ಅನೇಕ ಶಿಷ್ಯಂದಿರನ್ನು ರೂಪಿಸಿದ ಗುರುಶ್ರೇಷ್ಠರೆನಿಸಿ ಕೊಂಡವರು. 1972ರಲ್ಲಿ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಗುರುಗಳಾಗಿ ಪದ್ಯಾಣ ಗಣಪತಿ ಭಟ್ಟರಂತಹ ಶಿಷ್ಯಂದಿರನ್ನು ಯಕ್ಷಕಲಾ ಮಾತೆಗೆ ಕಾಣಿಕೆಯಾಗಿ ಕೊಟ್ಟ ಮಹನೀಯರು. ಮಾಂಬಾಡಿ ನಾರಾಯಣ ಭಾಗವತರ ಅಭಿನಂದನಾ ಗ್ರಂಥ- ‘ರಂಗವೈಖರಿ’ಯನ್ನು ಓದಿದರೆ ಅವರ ಸಾಧನೆ, ವ್ಯಕ್ತಿತ್ವದ ಪರಿಚಯ ಸಿಗುತ್ತದೆ. ಈ ಗ್ರಂಥದ ಸಂಪಾದಕರು ಪಾದೆಕಲ್ಲು ನರಸಿಂಹ ಭಟ್ಟರು. ಸಹಸಂಪಾದಕರು ಡಾ. ಪಾದೆಕಲ್ಲು ವಿಷ್ಣುಭಟ್ಟರು. ಈ ಕೃತಿಯ ಬಗ್ಗೆ ಯುವ ಮದ್ದಳೆಗಾರರಾದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಇತ್ತೀಚೆಗೆ ಉತ್ತಮ ಲೇಖನವೊಂದನ್ನು ಬರೆದಿದ್ದರು. ಮಾಂಬಾಡಿ ನಾರಾಯಣ ಭಟ್ಟರ ಕಾಯ ಅಳಿದರೂ ಮಾಂಬಾಡಿ  ಸುಬ್ರಹ್ಮಣ್ಯ ಭಟ್ಟರಂತಹ ಮಗನನ್ನು ಪಡೆದುದರಿಂದ ಅವರ ಪಿತೃತ್ವ ಶಾಶ್ವತವಾಗಿ ಉಳಿಯಿತು. ಮಗನ ಸಾಧನೆ, ಯಕ್ಷಲೋಕಕ್ಕೆ ನೀಡುತ್ತಿರುವ ಕೊಡುಗೆಗಳನ್ನು ನೋಡುತ್ತಾ ಅವ್ಯಕ್ತ ಪ್ರಪಂಚದಲ್ಲಿ ಸಂತಸಪಡುತ್ತಿರಬಹುದು.
         ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು 1949 ಮಾರ್ಚ್ 27ರಂದು ಮಾಂಬಾಡಿ ನಾರಾಯಣ ಭಟ್ ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಾಂಬಾಡಿಯಲ್ಲಿ ಜನಿಸಿದರು. ಇವರ ಸಹೋದರರು- ಗೋಪಾಲಕೃಷ್ಣ ಭಟ್, ಗಣಪತಿ ಭಟ್ ಮತ್ತು ನಾರಾಯಣ ಭಟ್ಟರು. ಗೌರಿಅಮ್ಮ ಮತ್ತು ದ್ರೌಪದಿ ಅಮ್ಮ ಸಹೋದರಿಯರು- ಬಾಲಪಾಠವನ್ನು ತಂದೆಯವರಿಂದಲೇ ಅಭ್ಯಸಿಸಿದ ಇವರು ಎಳವೆಯಲ್ಲೇ ಮೇಳದ ತಿರುಗಾಟವನ್ನು ನಡೆಸಿದರು. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರಿಯ ಶಿಷ್ಯನಾಗಿ, ಕಟೀಲು, ಧರ್ಮಸ್ಥಳ, ಕೂಡ್ಲು, ಮುಲ್ಕಿ, ಕದ್ರಿ ಮೇಳಗಳಲ್ಲಿ ಸುಮಾರು 20 ತಿರುಗಾಟಗಳ ವ್ಯವಸಾಯ ಮಾಡಿ, ಪ್ರಸ್ತುತ ದಕ್ಷಿಣ ಕನ್ನಡ, ಕಾಸರಗೋಡಿನ ಹಲವೆಡೆಗಳಲ್ಲಿ ಹಿಮ್ಮೇಳ ತರಗತಿಗಳನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಯಕ್ಷಗಾನ ಕಲಾರಂಗ ಉಡುಪಿ, ಮಾಂಬಾಡಿ ಸನ್ಮಾನ, ಪುರಭವನ, ಮಂಗಳೂರು; ಸಂಪಾಜೆ ಯಕ್ಷೋತ್ಸವ, ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದೆಹಲಿ ಕರ್ನಾಟಕ ಸಂಘ ಪ್ರಶಸ್ತಿ, ವಿಟ್ಲ ಜೋಷಿ ಪ್ರತಿಷ್ಠಾನ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ-ಕೋಡಪದವು ಮೊದಲಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಪತ್ನಿ ಲಕ್ಷ್ಮಿ ಮತ್ತು ಇಬ್ಬರು ಪುತ್ರರ ಸುಖೀ ಸಂಸಾರ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರದು. ಮಕ್ಕಳಾದ- ವೇಣುಗೋಪಾಲ್ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ ಮಾಂಬಾಡಿ ವೃತ್ತಿಯಲ್ಲಿ ಇಂಜಿನಿಯರರು. ವೇಣುಗೋಪಾಲ್ ಅವರು ಉತ್ತಮ ಹಿಮ್ಮೇಳವಾದಕರೂ ಹೌದು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಇನ್ನಷ್ಟು ಶಿಷ್ಯಂದಿರನ್ನು ರೂಪಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ. ಪ್ರಶಸ್ತಿಗಳೂ ಅವರನ್ನರಸಿಕೊಂಡೇ ಬರಲಿ. ಆರೋಗ್ಯ, ಆಯುಷ್ಯ, ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳೊಂದಿಗೆ...


 ಲೇಖನ : ರವಿಶಂಕರ್ ವಳಕ್ಕುಂಜ
 ಫೋಟೋ : ಶ್ರೀ ರಾಮ್ ನರೇಶ್ ಮಂಚಿ .

Comments

Popular posts from this blog

ಯಕ್ಷಾಗಸದ ಪೂರ್ಣಚಂದ್ರ - ಕೊಂಡದಕುಳಿ ರಾಮಚಂದ್ರ ಹೆಗಡೆ

‘‘ವೇಷಧಾರಿಯೊಬ್ಬ ಭಾಗವತನಾದ ಅಚ್ಚರಿಯ ಬಗೆ’’ ಯುವ ಭಾಗವತ - ಶ್ರೀ ರವಿಚಂದ್ರ ಕನ್ನಡಿಕಟ್ಟೆ