‘‘ವೇಷಧಾರಿಯೊಬ್ಬ ಭಾಗವತನಾದ ಅಚ್ಚರಿಯ ಬಗೆ’’ ಯುವ ಭಾಗವತ - ಶ್ರೀ ರವಿಚಂದ್ರ ಕನ್ನಡಿಕಟ್ಟೆ

                  ಇತ್ತೀಚೆಗೆ ಯಕ್ಷಗಾನ ಕಲೆಗೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯನ್ನು ನೋಡಿದ್ದೆ. ‘ಯಕ್ಷ-ಗಾನ-ನಾಟ್ಯ ವೈಭವ’ ಎಂದು ಶೀರ್ಷಿಕೆಯಡಿ ಮುದ್ರಿತವಾಗಿತ್ತು. ನನ್ನನ್ನು ಯೋಚಿಸುವಂತೆ ಮಾಡಿತು ಈ ಆಮಂತ್ರಣ ಪತ್ರಿಕೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆದಾಗ ನಮಗೆ ಅನುಕೂಲವೇ ಆಗುತ್ತದೆ. ನಾವು ಹುಡುಕುವುದಕ್ಕೆ ಆರಂಭಿಸುತ್ತೇವೆ. ಹುಡುಕುವಿಕೆ ಎಂಬ ಕ್ರಿಯೆಯಿಂದ ಹೊಸ ವಿಚಾರಗಳನ್ನೂ ತಿಳಿಯುತ್ತೇವೆ. ನಮ್ಮ ಶ್ರೇಷ್ಠ ಕಲೆಗೆ ‘ಯಕ್ಷಗಾನ’ ಎಂದು ಹೆಸರು. ಹಾಗೆಂದು ಯಕ್ಷ ಮತ್ತು ಗಾನ ಎಂಬ ಶಬ್ದಗಳೂ ಇವೆ. ಯಕ್ಷ ಎಂದರೆ ದೇವತೆಗಳಲ್ಲಿ ಒಂದು ವರ್ಗ. ಸುರರು, ಕಿನ್ನರರು, ಕಿಂಪುರುಷರು, ಯಕ್ಷರು, ಗಂಧರ್ವರು... ಹೀಗೆ ದೇವತೆಗಳಲ್ಲಿ ಅನೇಕ ಗುಂಪುಗಳು. ವೃಂದ ಸಮೂಹ ನ್ಯಾಯೇಣ ಬದುಕುವ ಕಾರಣದಿಂದಲೇ ದೇವತೆ ಗಳು ‘ವೃಂದಾರಕರು’ ಎಂದು ಕರೆಸಿಕೊಂಡರು. ಗಾನ ಎಂದರೆ ಹಾಡು ಎಂಬುದು ತಿಳಿದಿದೆ. ಆದರೆ ಯಕ್ಷಗಾನ ಎಂದರೇನು? ಆ ಹೆಸರು ಯಾಕೆ ಬಂತು? ಯಕ್ಷಗಾನ ಕಲೆಯು ಯಾವಾಗ ಪ್ರಾರಂಭವಾಯಿತು? ಹೀಗೆ ಪ್ರಶ್ನೆಗಳು ಹುಟ್ಟಿ ಕೊಂಡವು. ಯಕ್ಷಗಾನ ಎಂಬ ಹೆಸರು ಬರಲು ಇದು ಕಾರಣವಿರಲೂಬಹುದು ಎಂದು ಹೇಳಬಹುದು. ಆದರೆ ನಿರ್ಣಯವಿಲ್ಲ. 16ನೇ ಶತಮಾನದ ಕವಿಗಳು ಬರೆದ ಪ್ರಸಂಗವನ್ನು ನಾವು ಆಡುತ್ತೇವೆ. ಹಾಗಾದರೆ ಅದಕ್ಕಿಂತಲೂ ಮೊದಲು ಯಕ್ಷಗಾನ ಇತ್ತೆನ್ನಬಹುದು. ಆದರೆ ಯಾವಾಗ? ಹೇಗಿತ್ತು? ಹೇಳಲು ಶಕ್ಯರಲ್ಲ. ಒಂದಂತೂ ಸತ್ಯ. ಈ ಕಲೆ ಸಾಗರಸದೃಶವಾದುದು. ನಮ್ಮ ಬುದ್ಧಿಯ ಮಿತಿಯೊಳಗೆ ತಿಳಿದುಕೊಳ್ಳಬಹುದು. ಸಾಗರದಲ್ಲಿ ನೀರು ಎಷ್ಟೇ ಇದ್ದರೂ ಕೊಂಡುಹೋದ ಪಾತ್ರೆಯ ಗಾತ್ರದಷ್ಟು ಮಾತ್ರ ನಾವು ಸಂಗ್ರಹಿಸಬಹುದು. ಬಣ್ಣಗಾರಿಕೆ, ವೇಷ, ವಾದನ, ನರ್ತನಗಳಲ್ಲದೆ ಗಾಯನವೂ ಮುಖ್ಯಸ್ಥಾನದಲ್ಲಿಯೇ ಇದೆ ಅನ್ನೋದರಿಂದ... ಯಕ್ಷಗಾನ? ಗಾನ ಎಂಬ ಶಬ್ದವು ಈ ಮೇರುಕಲೆಯ ಹೆಸರಿನೊಂದಿಗೆ ಬೆಸೆದುಕೊಂಡಿದೆ ಅನ್ನೋದು ಸತ್ಯ. ಛೆ... ತಿಳಿಯಲು ನಮ್ಮಿಂದ ಸಾಧ್ಯವಿಲ್ಲ... ಇರಲಿ, ಯಕ್ಷಗಾನದಲ್ಲಿ ಹಾಡುಗಾರಿಕೆ ಇದೆ. ಹಾಡುವವರನ್ನು ಭಾಗವತನೆಂದು ಗೌರವದಿಂದ ಕರೆಯುತ್ತಾರೆ. ಹೊಣೆಗಾರಿಕೆ ದೊಡ್ಡದು. ಅರ್ಹತೆಯನ್ನು ಹೊಂದಿಯೇ ಆ ಸ್ಥಾನದಲ್ಲಿ ಕುಳಿತರೆ ಚಂದ. ಇಲ್ಲವಾದರೆ ಅಪಹಾಸ್ಯಕ್ಕೀಡಾಗಬೇಕಾಗುತ್ತದೆ.   ಈ ಸ್ಥಾನವು ‘ಮಧುಬಿಂದುನ್ಯಾಯ’ದಂತೆ. ಜೇನು ಸವಿಯಲು ಸಿಹಿಯಾಗಿರುತ್ತದೆ. ಆದರೆ ಹರಿತವಾದ ಖಡ್ಗಕ್ಕೆ ಸವರಿದ ಜೇನನ್ನು ನೆಕ್ಕುವಾಗ ಎಚ್ಚರ ಬೇಕಾಗುತ್ತದೆ. ಆಯ್ಕೆ ಮಾಡಿಕೊಟ್ಟ ಹತ್ತಾರು ಪದ್ಯಗಳನ್ನು ಹಾಡಿದ ಕೂಡಲೇ ಆತ ಭಾಗವತನಾಗಲಾರ. ಪ್ರಸಂಗಜ್ಞಾನ, ರಂಗನಡೆ, ಕಲಾವಿದನ ಸಾಮರ್ಥ್ಯವನ್ನಳೆದು ವೇಷ ಹಂಚುವ ಕಲೆ, ಕಥೆಯನ್ನು ಮುನ್ನಡೆಸುವ ರೀತಿ, ಸಮಯಪ್ರಜ್ಞೆ, ವೇಷಧಾರಿಗಳ ಪ್ರತಿಭೆಯನ್ನು ಹೊರಗೆಡಹುವ ಜಾಣ್ಮೆ, ಅರ್ಥಜ್ಞಾನ ಎಲ್ಲವನ್ನೂ ತಿಳಿದಿರಬೇಕು. ಕಿರಾತಾರ್ಜುನ, ತಾಮ್ರಧ್ವಜ ಕಾಳಗ, ದುಶ್ಶಾಸನ ವಧೆ, ಸತ್ಯಹರಿಶ್ಚಂದ್ರ, ನಳದಮಯಂತಿ... ಹೀಗೆ ಅನೇಕ ಪ್ರಸಂಗಗಳ ಮಾಹಿತಿಯನ್ನು ಹೊಂದಿ ಪ್ರಸಂಗವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರಬೇಕು. ಈ ಸಮಯದಲ್ಲಿ ತೆಂಕುಬಡಗಿನ ಸವ್ಯಸಾಚಿ, ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ ಶ್ರೇಷ್ಠ ಭಾಗವತ ಕಡತೋಕ ಶ್ರೀ ಮಂಜುನಾಥ ಭಾಗವತರ ಮಾತುಗಳು ನೆನಪಾಗುತ್ತದೆ. ‘‘ಯಕ್ಷಗಾನದಲ್ಲಿ ಹಾಡುಗಾರಿಕೆಗೆ ಬಹಳಷ್ಟು ಅವಕಾಶಗಳಿವೆ. ಅವನು ಯಶಸ್ವೀ ಪ್ರದರ್ಶನಕ್ಕೆ ಕಾರಣನಾಗುತ್ತಾನೆ. ಸೋಲಿಗೂ ಕಾರಣನಾಗುತ್ತಾನೆ. ಗೆಲುವಿನ ಶ್ರೇಯಸ್ಸು ಪಡೆಯುವುದರ ಜತೆಗೆ ಸೋಲಿನ ಹೊಣೆಯನ್ನು ಸಂಪೂರ್ಣ ಹೊರಲು ಆತ ಸಿದ್ಧನಾಗಲೇಬೇಕು. ಅದರಿಂದ ನುಣುಚಿಕೊಳ್ಳುವಂತಿಲ್ಲ’’ ಎಂಬ ಮಾತನ್ನು ಹೇಳಿದ್ದರು. ಈ ಮಾತು ಭಾಗವತನ ಸ್ಥಾನ, ಹೊಣೆಗಾರಿಕೆ, ಕರ್ತವ್ಯಗಳೇನು ಎಂಬುದನ್ನು ಧ್ವನಿಸುತ್ತದೆ. ತೆಂಕು ಮತ್ತು ಬಡಗಿನ ಅನೇಕರು ಈ ದಿಸೆಯಲ್ಲೇ ಸಾಗಿ ಖ್ಯಾತರಾದರು. ಪ್ರಸ್ತುತ ಉದಯೋನ್ಮುಖರೂ ಮಿಂಚುತ್ತಿದ್ದಾರೆ. ಅವರಲ್ಲೊಬ್ಬರು ತೆಂಕುತಿಟ್ಟಿನ ಯುವ ಭಾಗವತ, ಹನುಮಗಿರಿ ಮೇಳದ ಕಲಾವಿದ- ಶ್ರೀ ರವಿಚಂದ್ರ ಕನ್ನಡಿಕಟ್ಟೆ. ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಇವರು ಖ್ಯಾತ ಭಾಗವತನಾದುದು ಒಂದು ಅಚ್ಚರಿ! ಎರಡು ಘಟನೆಗಳೇ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿತ್ತು. ವೇಷಧಾರಿಯಾಗಿದ್ದ ರವಿಚಂದ್ರರು ಭಾಗವತರಾದರು.
ರವಿಚಂದ್ರ ಕನ್ನಡಿಕಟ್ಟೆ
ಫೋಟೋ: ರಾಮ್ ನರೇಶ್ ಮಂಚಿ 

                       ಹನುಮಗಿರಿ ಮೇಳದ ಭಾಗವತ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಇವರು 1980ನೇ ಇಸವಿ ಒಕ್ಟೋಬರ್ 4ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕನ್ನಡಿಕಟ್ಟೆ ಸಮೀಪದ ಪಜೆಮಾರು ಎಂಬಲ್ಲಿ ಧರ್ಮಣ ಪೂಜಾರಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಕೃಷಿ ಕುಟುಂಬ. ಪಡಂಗಡಿ ಸರಕಾರಿ ಶಾಲೆಯಲ್ಲಿ ಓದು. ಎಸ್.ಎಸ್.ಎಲ್.ಸಿ.ವರೇಗೆ. ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ಕನ್ನಡಿಕಟ್ಟೆ ಆಸುಪಾಸಿನಲ್ಲಿ ಸುರತ್ಕಲ್ಲು ಮತ್ತು ಕರ್ನಾಟಕ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಯಾವ ಪ್ರದರ್ಶನಗಳನ್ನೂ ಬಿಟ್ಟವರಲ್ಲ. ಬೆಳಗಿನವರೇಗೂ ನೋಡುತ್ತಿದ್ದರು. ಖ್ಯಾತ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಗೆ ರವಿಚಂದ್ರರು ಮನಸೋತಿದ್ದರು. ಅವರ ಹಾಡಿನ ಮೋಡಿಗೆ ಒಳಗಾಗಿದ್ದರು. ಆಗ ಆಡಿಯೋ ಕ್ಯಾಸೆಟ್‍ಗಳ ಯುಗ. ಅಮ್ಮಣ್ಣಾಯರ ಹಾಡುಗಳಿದ್ದ ಕ್ಯಾಸೆಟ್‍ಗಳನ್ನು ಕೇಳುವುದು. ಮನೆಯ ಉಳಿದ ಕ್ಯಾಸೆಟ್‍ಗಳ ಹಾಡುಗಳನ್ನು ಡಿಲೀಟ್ ಮಾಡಿಸಿ ಅಮ್ಮಣ್ಣಾಯರ ಹಾಡುಗಳನ್ನು ತುಂಬಿಸಿ ತಂದು ಕೇಳುವುದು, ಬಿಡುವಿನಲ್ಲಿ ರವಿಚಂದ್ರರು ಮಾಡುತ್ತಿದ್ದ ಕೆಲಸ ಇದು. ಹೀಗೆ ಶ್ರೀ ದಿನೇಶ ಅಮ್ಮಣ್ಣಾಯರು ತನ್ನ ಗಾನಾಮೃತ ಸಿಂಚನದಿಂದ ರವಿಚಂದ್ರ ಎಂಬ ಬಾಲಕನ ಮನಸೂರೆಗೊಂಡಿದ್ದರು. ಹಿಮ್ಮೇಳವಾಗಲೀ, ಮುಮ್ಮೇಳವಾಗಲೀ ಕಲಾವಿದರು ಅರ್ಪಣಾ ಭಾವದಿಂದ ತೊಡಗಿಸಿಕೊಂಡಾಗ, ಎಳೆಯರಿಗೆ ನಾನೂ ಅವರಂತಾಗಬೇಕೆಂಬ ಆಸೆ ಹುಟ್ಟುವುದು ಸಹಜ. 6ನೆಯ ತರಗತಿಯಲ್ಲಿರುವಾಗ ಗೆಜ್ಜೆಪೂಜೆ ಮತ್ತು ಸಿರಿಕೃಷ್ಣಚಂದಪಾಲಿ ತುಳು ಪ್ರಸಂಗಗಳ ಹಾಡುಗಳುಳ್ಳ ಧ್ವನಿಸುರುಳಿಯನ್ನು ತಂದಿದ್ದರು. ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳಿಗೆ ಮನಸೋತು ಅವರ ಅಭಿಮಾನಿಯೂ ಆದರು. ಹೀಗೆ ಅಮ್ಮಣ್ಣಾಯರ ಮತ್ತು ಹೊಳ್ಳರ ಅಭಿಮಾನಿಯಾಗಿ ಅವರಿಬ್ಬರ ಹಾಡುಗಳನ್ನು ದಿನಾ ಕೇಳುತ್ತಿದ್ದರು. ಕೇಳಿ ಕೇಳಿ ಪದ್ಯಗಳೆಲ್ಲಾ ಬಾಯಿಪಾಠ! ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಆಯಿತು. 6ನೇ ತರಗತಿಯಲ್ಲಿರುವಾಗ ಶಾಲಾ ಅಧ್ಯಾಪಕರಾದ ಶ್ರೀ ಅನಂತ ಪದ್ಮನಾಭ ಹೊಳ್ಳರಿಂದ ನಾಟ್ಯ ಕಲಿಕೆ. ಅವರು ಹವ್ಯಾಸೀ ಅತ್ಯುತ್ತಮ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅವರು ಕಟ್ಟಿ ಬೆಳೆಸಿದ ಪಡಂಗಡಿ ಶಾಲಾ ತಂಡವು ಅತ್ಯುತ್ತಮ ತಂಡವಾಗಿತ್ತು. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಎಲ್ಲಾ ಶಾಲೆಗಳವರೂ ಈ ತಂಡವನ್ನು ಕರೆಸಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಶ್ರೀ ರವಿಚಂದ್ರರು ಮೊದಲು ಗೆಜ್ಜೆ ಕಟ್ಟಿದ್ದು ಪಡಂಗಡಿ ಶಾಲೆಯಲ್ಲಿ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ. ಕೃಷ್ಣಾರ್ಜುನ ಕಾಳಗ ಪ್ರಸಂಗದ ‘ಗಯ’ನ ಪಾತ್ರದಲ್ಲಿ. ಪ್ರವೇಶ ಮಾಡುವಾಗಲೇ ಕಟ್ಟಿದ ತುರಾಯಿ ಕೆಳಗೆ ಜಾರಿತ್ತು. ಹೇಗೋ ಸರಿಪಡಿಸಿಕೊಂಡು ಪಾತ್ರವನ್ನು ನಿರ್ವಹಿಸಿದ್ದರು. ಬಳಿಕ ಪಂಚವಟಿ ಪ್ರಸಂಗದ ಶ್ರೀರಾಮ, ಸುಧನ್ವ ಮೋಕ್ಷದ ಪ್ರಭಾವತಿ, ರತಿಕಲ್ಯಾಣ ಪ್ರಸಂಗದ ಮೇಘಾಸುರ (ಬಣ್ಣ) ಚರಿತ್ರೆ ಪ್ರಸಂಗದಲ್ಲಿ ವೇಷಗಳನ್ನು ಮಾಡಿದ್ದರು. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ದೇವೇಂದ್ರ ಬಲ, ಸಿತಕೇತ, ರಂಭೆ ಹೀಗೆ ಮೂರು ಪಾತ್ರಗಳನ್ನು ಒಂದೇ ದಿನದಲ್ಲಿ ನಿರ್ವಹಿಸಿದ್ದರು. ಶಾಲೆಯ ಪ್ರದರ್ಶನಗಳಲ್ಲಿ ಇವರ ವೇಷಗಳನ್ನು ನೋಡಿದ ಪ್ರೇಕ್ಷಕರು ಬಹುಮಾನಗಳನ್ನು ತಂದುಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಸುರತ್ಕಲ್ಲು ಮೇಳದಲ್ಲಿ ಆಗ ಕಲಾವಿದನಾಗಿದ್ದ ಖ್ಯಾತ ಪುಂಡುವೇಷಧಾರ ಶ್ರೀ ವೇಣೂರು ಸದಾಶಿವ ಕುಲಾಲರು ನಾಟ್ಯ ಕಲಿಸಲು ಪಡಂಗಡಿ ಶಾಲೆಗೆ ಬರುತ್ತಿದ್ದರು. ಅವರಿಂದಲೂ ರವಿಚಂದ್ರ ಅವರು ನಾಟ್ಯ ಕಲಿತರು. ಅಧ್ಯಾಪಕ ಶ್ರೀ ಅನಂತಪದ್ಮನಾಭ ಹೊಳ್ಳರ ಸಲಹೆಯಂತೆ ಸುರತ್ಕಲ್ ಮೇಳದ ಪ್ರದರ್ಶನಗಳಿಗೂ ಹೋಗುತ್ತಿದ್ದರು. ಆಟ ನೋಡುವ ಜತೆಗೆ ಸದಾಶಿವ ಕುಲಾಲ್ ಮೊದಲಾದ ಕಲಾವಿದರಲ್ಲಿ ಮಾತನಾಡಿ ಬರುತ್ತಿದ್ದರು. ವಿದ್ಯಾಭ್ಯಾಸ ಮುಗಿಸಿ ಆಟಕ್ಕೆ ಬಾ ಎಂದು ಶ್ರೀ ಕುಲಾಲರು ಹೇಳಿದ್ದರಂತೆ. ಶಾಲೆಗೆ ಬೇಗನೆ ಹೋಗಿ ಗೆಳೆಯರ ಜತೆ ಕುಣಿಯುವುದು, ಶಾಲೆ ಬಿಟ್ಟ ನಂತರ ಮತ್ತೆ ಕುಣಿಯುವುದು ಹೀಗೆ ಸಾಗಿತ್ತು ಜೀವನ. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಶಾಲೆಯಲ್ಲಿ ರವಿಚಂದ್ರರಿಗಿಂತ ಒಂದು ವರ್ಷ ಸೀನಿಯರ್ ವಿದ್ಯಾರ್ಥಿ. ಅವರು ಎಸ್.ಎಸ್.ಎಲ್.ಸಿ. ಆಗಿ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರಕ್ಕೆ ಸೇರಿದ್ದರು. ರವಿಚಂದ್ರರನ್ನು ಎಸ್.ಎಸ್.ಎಲ್.ಸಿ. ಆದ ನಂತರ ಅವರೇ ಲಲಿತ ಕಲಾಕೇಂದ್ರಕ್ಕೆ ಕರೆದೊಯ್ದಿದ್ದರು. ಮನೆಯವರ ಒಪ್ಪಿಗೆಯೂ ಇತ್ತು.
                              ಶ್ರೀ ಧರ್ಮಸ್ಥಳ ಕ್ಷೇತ್ರದ ಲಲಿತ ಕಲಾಕೇಂದ್ರದಲ್ಲಿ ಆಗ ತರಬೇತುದಾರರಾಗಿದ್ದವರು ಸಬ್ಬಣಕೋಡಿ ಕೃಷ್ಣ ಭಟ್. ಹಿಂದಿನ ಕಾಲದಲ್ಲಿ ಎಲ್ಲೂ ಯಕ್ಷಗಾನ ತರಬೇತಿ ಕೇಂದ್ರವಿರಲಿಲ್ಲ. ಹಿರಿಯ ಕಲಾವಿದರ ಮನೆಗೆ ತೆರಳಿಯೋ, ಮೇಳದಲ್ಲಿದ್ದುಕೊಂಡೇ ಅಭ್ಯಾಸ ಮಾಡಬೇಕಿತ್ತು. ಅನೇಕ ವಿದ್ವಾಂಸರ ಕೋರಿಕೆಯನ್ನು ಮನ್ನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಖಾವಂದರು ಲಲಿತ ಕಲಾಕೇಂದ್ರವನ್ನು ಪ್ರಾರಂಭಿಸುವ ಮನ ಮಾಡಿದ್ದರು. ಈ ಕೇಂದ್ರವು ಅನೇಕ ಕಲಾವಿದರನ್ನು ಸಿದ್ಧಗೊಳಿಸಿ ಯಕ್ಷಗಾನ ಕಲಾಮಾತೆಯ ಮಡಿಲಿಗಿಕ್ಕಿತು. ಇಂದು ತಿರುಗಾಟ ನಡೆಸುತ್ತಿರುವ ಹೆಚ್ಚಿನ ಕಲಾವಿದರೂ ಅಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ. ಯಕ್ಷಗಾನ ಕಲೆಗೆ ಇಂತಹ ಶ್ರೇಷ್ಠ ಕೊಡುಗೆಯು ಧರ್ಮಸ್ಥಳ ಕ್ಷೇತ್ರದಿಂದ ಕೊಡಲ್ಪಟ್ಟಿತ್ತು. ಯಾವ ಕಾಲಕ್ಕೂ ಮರೆಯಲಾಗದ, ಮರೆಯಬಾರದ ಕೊಡುಗೆ ಇದು. ಮೊದಲೇ ರವಿಚಂದ್ರರು ನಾಟ್ಯ ಕಲಿತ ಕಾರಣ ಉಳಿದವರಿಗೆ ಹೇಳಿಕೊಡುವ ಹೊಣೆಯೂ ಸಿಕ್ಕಿತ್ತು. ಕೇಂದ್ರದಲ್ಲಿ ಇವರ ಸಹಪಾಠಿಗಳಾಗಿದ್ದವರು ಈಗ ವೃತ್ತಿ ಕಲಾವಿದರಾಗಿರುವ ಕೊಂಕಣಾಜೆ ಚಂದ್ರಶೇಖರ ಭಟ್ (ಮದ್ದಳೆಗಾರರು) ಬಾಲಕೃಷ್ಣ ಮಿಜಾರು, ಶ್ರೀನಿವಾಸ ಕುರಿಯಾಳ. ಸಹಪಾಠಿಯಾಗಿದ್ದ ಬೆಳಾಲು ರಮೇಶ ಗೌಡರು ಪ್ರತಿಭಾವಂತ ಸ್ತ್ರೀಪಾತ್ರಧಾರಿಯಾಗಿದ್ದರು. ಹೊಸನಗರ, ಕಟೀಲು ಮೇಳದ ಕಲಾವಿದರಾಗಿದ್ದ ಅವರು ಎಳವೆಯಲ್ಲೇ ನಮ್ಮಿಂದ ದೂರವಾದುದು ಅತ್ಯಂತ ನೋವಿನ ವಿಚಾರ. ಹಾಸ್ಯಗಾರ ದಿನೇಶ್ ಕೋಡಪದವು ಕೂಡಾ ಕೇಂದ್ರದಲ್ಲಿ ರವಿಚಂದ್ರರ ಸಹಪಾಠಿ. ಲಲಿತ ಕಲಾಕೇಂದ್ರದ ಪ್ರದರ್ಶನಗಳಲ್ಲಿ ಪಂಚವಟಿಯ ಶ್ರೀರಾಮ, ಗಿರಿಜಾ ಕಲ್ಯಾಣದ ಮನ್ಮಥ (ಬೆಳಾಲು ರಮೇಶ ಗೌಡರ ರತಿ), ವೀರಮಣಿ ಕಾಳಗದ ಹನೂಮಂತ, ಭಾರ್ಗವ ವಿಜಯದ ಭಾರ್ಗವ ಮೊದಲಾದ ವೇಷಗಳನ್ನು ಮಾಡಿದ್ದರು. ಶಾಲಾ ದಿನಗಳಲ್ಲಿ ಶಶಿಪ್ರಭೆ ಪ್ರಸಂಗದ ದೀರ್ಘಾಕ್ಷ ಕಿರಾತನ ವೇಷವನ್ನೂ ಮಾಡಿದ್ದರು. ಸ್ತ್ರೀವೇಷಗಳನ್ನು ಮಾಡಿದ್ದರೂ ಆಸಕ್ತಿಯಿರಲಿಲ್ಲ. ಸ್ತ್ರೀಪಾತ್ರಗಳಿಗೆ ಮನಸ್ಸು ಒಗ್ಗುತ್ತಿರಲಿಲ್ಲವೆಂದು ರವಿಚಂದ್ರರ ಅಭಿಪ್ರಾಯ. ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿರುವಾಗ ನಡೆದ ಒಂದು ಘಟನೆ- ತರಬೇತಿ ಆರಂಭವಾಗಿ 15 ದಿನಗಳಾಗಿತ್ತು. ರಾತ್ರೆ ಕೊಂಕಣಾಜೆ ಚಂದ್ರಶೇಖರ ಭಟ್ಟರು ಚೆಂಡೆಮದ್ದಳೆ ಅಭ್ಯಾಸ ಮಾಡುತ್ತಿದ್ದರು. ಅವರ ಚೆಂಡೆಗೆ ರವಿಚಂದ್ರರ ಹಾಡು. ‘ಗೆಜ್ಜೆಯ ಪೂಜೆ’ ಮೊದಲಾದ ಪ್ರಸಂಗಗಳ ಹಾಡುಗಳು. ಹೊಳ್ಳರು, ಅಮ್ಮಣ್ಣಾಯರು ಹಾಡಿದ ಪದ್ಯಗಳನ್ನು ಕೇಳಿ ಕಂಠಪಾಠವಾಗಿತ್ತು. ಗುರುಗಳಿಲ್ಲದ ವೇಳೆ ಇದು ನಿರಂತರವಾಗಿ ನಡೆಯುತ್ತಿತ್ತು. ಇದನ್ನು ಮರೆಯಲ್ಲಿ ಬೈಪಾಡಿತ್ತಾಯ ದಂಪತಿಗಳು ಗಮನಿಸಿದ್ದರು. (ಕೇಂದ್ರದ ಹಿಮ್ಮೇಳ ಗುರುಗಳು). ಮರುದಿನ ನಾಟ್ಯ ಬೇಡ. ನೀನು ಪದ್ಯ ಕಲಿ ಎಂದರಂತೆ. ಅಲ್ಲದೆ ರವಿಚಂದ್ರರಲ್ಲಿ ಪದ್ಯಗಳನ್ನೂ ಹೇಳಿಸಿದರಂತೆ.’’ ಕಟ್ಟಿದ ಗೆಜ್ಜೆಯ ನಾದಕೆ ಮರುಗುತ ಇಟ್ಟಳು ಹೆಜ್ಜೆಯ ಬಾರದಲಿ... ಎಂಬ ಹಾಡನ್ನು ಹೇಳಿದರು. ಅಲ್ಲದೆ ಇನ್ನೂ ಕೆಲವು ಪದ್ಯಗಳನ್ನು ಬೈಪಾಡಿತ್ತಾಯ ದಂಪತಿಗಳು ರವಿಚಂದ್ರರಿಂದ ಹೇಳಿಸಿದರು. ಕೊಂಕಣಾಜೆಯವರು ಇವರಿಗೆ ಸಾಥ್ ನೀಡಿದ್ದರು. ಬೈಪಾಡಿತ್ತಾಯ ದಂಪತಿಗಳಿಂದ ಹಾಡುಗಾರಿಕೆ ಕಲಿಯೆಂಬ ಸೂಚನೆ ಸಿಕ್ಕಿತ್ತು. ಮರುದಿನ ಸಬ್ಬಣಕೋಡಿ ಕೃಷ್ಣ ಭಟ್ಟರು ಬಂದಿದ್ದರು. ವಿಮರ್ಶೆ ನಡೆದು ರವಿಚಂದ್ರರು ಮತ್ತೆ ನಾಟ್ಯ ಕಲಿಯುವ ಮನಮಾಡಿದರು. ‘‘ಅವನು ನಾಟ್ಯ ಕಲಿಯಲಿ. ಆದರೆ ರವಿಚಂದ್ರನು ಮುಂದಕ್ಕೆ ಭಾಗವತನೇ ಆಗುತ್ತಾನೆ’’ ಎಂದಿದ್ದರಂತೆ ಬೈಪಾಡಿತ್ತಾಯ ದಂಪತಿಗಳು. ಅವರು ಪ್ರತಿಭೆಯನ್ನು ಗುರುತಿಸಿದ್ದರು. ಅವರ ಭವಿಷ್ಯವಾಣಿಯು ಇಂದಿಗೆ ನಿಜವಾಗಿದೆ. ರವಿಚಂದ್ರರು ಕೇಂದ್ರದ ವಿದ್ಯಾರ್ಥಿಗಳಲ್ಲಿ ಮೊದಲಿಗನೆಂಬ ಖಾವಂದರ ಪ್ರಶಂಸೆಗೂ ಪಾತ್ರರಾದರು. ‘‘ನನ್ನ ಗುರುಗಳಾದ ಶ್ರೀ ಪದ್ಯಾಣ ಗಣಪತಿ ಭಟ್ಟರೂ, ಸಿದ್ಧಕಟ್ಟೆ ಶ್ರೀ ಚೆನ್ನಪ್ಪ ಶೆಟ್ಟರೂ ಧರ್ಮಸ್ಥಳ ಲಲಿತ ಕಲಾಕೇಂದ್ರದ ಮೊದಲ ತಂಡದ ವಿದ್ಯಾರ್ಥಿಗಳಾಗಿದ್ದರು ಎಂಬುದು ನನಗೆ ಹೆಮ್ಮೆಯ ವಿಚಾರ’’ ಎನ್ನುವ ಮೂಲಕ ತಾನು ಕಲಿತ ಸಂಸ್ಥೆಗೆ ರವಿಚಂದ್ರ ಕನ್ನಡಿಕಟ್ಟೆಯವರು ಗೌರವ ಸಲ್ಲಿಸುತ್ತಾರೆ.
                      ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ತರಬೇತಿ ಪಡೆದು ಬಂದ ಬಳಿಕ ಕಟೀಲು ಮೇಳಕ್ಕೆ ಸೇರು ಎಂಬ ಸಲಹೆ ಬಂದಿತ್ತು. ಆದರೆ ಕನ್ನಡಿಕಟ್ಟೆ ಅವರು ವೇಣೂರು ಸದಾಶಿವ ಕುಲಾಲರ ಜತೆ ಸುರತ್ಕಲ್ಲು ಮೇಳಕ್ಕೆ ಸೇರಿದ್ದರು. ಮೊದಲು ಬಾಲಗೋಪಾಲರ ವೇಷ. ಎರಡನೆಯ ವರ್ಷ ಮುಖ್ಯ ಸ್ತ್ರೀವೇಷ, ಇನ್ನುಳಿದ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿರು. ಆಗ ಸದ್ರಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಕಿಗ್ಗ ಹಿರಿಯಣ್ಣ ಆಚಾರ್ಯ, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್, ದಯಾನಂದ ಮಿಜಾರು, ಪೂಕಳ, ಶಿವರಾಮ ಜೋಗಿ, ಎಂ.ಕೆ. ರಮೇಶಾಚಾರ್ಯ, ವೇಣೂರು ಸದಾಶಿವ ಕುಲಾಲ್, ಉಜಿರೆ ರಾಜ ಮೊದಲಾದ ಕಲಾವಿದ ರಿದ್ದರು. ಸುರತ್ಕಲ್ ಮೇಳದ 2ನೇ ತಿರುಗಾಟದ ಸಂದರ್ಭ, ಹಗಲು ಬಿಡಾರದಲ್ಲಿ ಸಂಗೀತಗಾರ ರಾಧಾಕೃಷ್ಣ ಕಲ್ಲುಗುಂಡಿ ಅವರಿಗೆ ಪಾಠ ಮಾಡುತ್ತಿದ್ದರು. ಆಗ ಮಲಗಿರುತ್ತಿದ್ದ ರವಿಚಂದ್ರರು ಎದೆಗೆ ಕೈಯಿಂದ ಬಡಿಯುತ್ತಾ ತಾಳ ಹಾಕುತ್ತಿದ್ದರಂತೆ. ಇದನ್ನು ಗಮನಿಸಿದ ಪದ್ಯಾಣ ಗಣಪತಿ ಭಟ್ಟರು ಪದ್ಯ ಕಲಿಯುತ್ತಿಯಾ? ಎಂದು ಕೇಳಿದರಂತೆ. ರವಿಚಂದ್ರರಿಗೆ ಸಂತೋಷವಾಗಿತ್ತು. ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲ ಅಂದೇ ಪಾಠ ಆರಂಭ ವಾಗಿತ್ತು. ಪದ್ಯಾಣರು ಇವರನ್ನು ಶಿಷ್ಯನಾಗಿ ಸ್ವೀಕರಿಸಿದ್ದರು. ಸಂಗೀತಗಾರನು ರಜೆಯಲ್ಲಿರುವಾಗ ಆ ಕರ್ತವ್ಯವನ್ನು ಮಾಡಿ, ಬೆಳಗಿನವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಸಂಗೀತ ಮಾಡಿದ ದಿನ ವೇಷ ಇರುತ್ತಿರಲಿಲ್ಲ. 1998ನೇ ಇಸವಿ. ಸುರತ್ಕಲ್ ಮೇಳವು ತಿರುಗಾಟ ನಿಲ್ಲಿಸಿತ್ತು. 1999-2000ನೇ ಸಾಲಿನ ತಿರುಗಾಟ ಮಂಗಳಾದೇವಿ ಮೇಳದಲ್ಲಿ. ಸಂಗೀತಗಾರನಾಗಿ ಸೇರ್ಪಡೆ. ಕಿಶನ್ ಹೆಗ್ಡೆಯವರ ಯಾಜಮಾನ್ಯ. ಮುಂದಿನ ವರ್ಷ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ. ಮರುವರ್ಷ ಮತ್ತೆ ಮಂಗಳಾದೇವಿ ಮೇಳಕ್ಕೆ. ಪದ್ಯಾಣ ಗಣಪತಿ ಭಟ್ಟರ ಜತೆ ಭಾಗವತಿಕೆ. 3ನೇ ವರ್ಷದಲ್ಲೇ ರವಿಚಂದ್ರರು 2ನೇ ಭಾಗವತರಾಗಿ ಬೆಳೆದಿದ್ದರು. ಪದ್ಯಾಣರು ಜತೆಯಲ್ಲಿದ್ದು ಹೇಳಿಕೊಡುತ್ತಿದ್ದರು. ಒಂಬತ್ತು ವರ್ಷಗಳ ಕಾಲ ಮಂಗಳಾದೇವಿ ಮೇಳದಲ್ಲಿ 2ನೇ ಭಾಗವತನಾಗಿ ತಿರುಗಾಟ. ಪದ್ಯಾಣರ ಜತೆಗೆ ಬೆಳಗಿನ ವರೆಗೂ ಪ್ರಸಂಗವನ್ನು ಮುನ್ನಡೆಸುವ ಅವಕಾಶಗಳೂ ಸಿಕ್ಕಿತ್ತು. ಸುರತ್ಕಲ್ ಮೇಳ ನಿಂತ ಬಳಿಕ ಪದ್ಯಾಣರ ಪುತ್ತೂರಿನ ಮನೆಗೆ ಮಳೆಗಾಲ ತೆರಳಿ ಅವರಿಂದ ಕಲಿತಿದ್ದರು. ಸಂಗೀತ ಮತ್ತು ಭಾಗವತಿಕೆಯನ್ನು ತಿಳಿದಿದ್ದ ಪದ್ಯಾಣರ ಪತ್ನಿ ಶ್ರೀಮತಿ ಶೀಲಾ ಗಣಪತಿ ಭಟ್ ಪದ್ಯಾಣ ಅವರೂ ಹೇಳಿಕೊಟ್ಟಿದ್ದರು. ‘‘ನಾನು ಅಲ್ಲಿ ಮನೆಯ ಸದಸ್ಯನಂತೆಯೇ ಇದ್ದೆ. ಅವರು ಊಟ ಮಾಡುವ ಮೊದಲೇ ಶೀಲಕ್ಕ ನನಗೆ ಬಡಿಸುತ್ತಿದ್ದರು. ನನ್ನನ್ನು ಮಗನಂತೆಯೇ ನೋಡಿಕೊಂಡರು’’. ಇದು ರವಿಚಂದ್ರ ಅವರು ಗುರುಪತ್ನಿಯ ಬಗೆಗೆ ಆಡುವ ಗೌರವದ ನುಡಿಗಳು. ಕನ್ನಡಿಕಟ್ಟೆ ರವಿಚಂದ್ರರ ತಂದೆ ತಾಯಿಯರೂ ಪದ್ಯಾಣ ಗಣಪತಿ ಭಟ್ಟರನ್ನು ದೇವರೆಂದೇ ಭಾವಿಸಿ ಗೌರವಿಸುತ್ತಿದ್ದರು. ಹತ್ತು ತಿರುಗಾಟಗಳಾದ ಮೇಲೆ ಪದ್ಯಾಣ ಗಣಪತಿ ಭಟ್ಟರು ಮಂಗಳಾದೇವಿ ಮೇಳದಿಂದ ಎಡನೀರು ಮೇಳಕ್ಕೆ ಸೇರಿದ್ದರು. ‘ಪದ್ಯ ಹೀಗೇ ಹೇಳು’ ಎಂದು ಆಶೀರ್ವದಿಸಿಯೂ ಇದ್ದರು. ಮತ್ತೆ       5 ವರ್ಷಗಳ ಕಾಲ ಪ್ರಧಾನ ಭಾಗವತನಾಗಿ ಮಂಗಳಾದೇವಿಯಲ್ಲಿ ತಿರುಗಾಟ. ಸಂಗೀತದಿಂದ ತೊಡಗಿ ಬೆಳಗಿನ ವರೇಗೂ ಹಾಡಿದ ದಿನಗಳಿವೆ! ಈ ಸಂದರ್ಭದಲ್ಲಿಯೂ ಗುರು ಪದ್ಯಾಣರ ಕಲ್ಮಡ್ಕದಲ್ಲಿರುವ ಮನೆಗೆ ಹೋಗಿ ಕಲಿಯುತ್ತಿದ್ದರು. ಸಲಹೆಗಳನ್ನು ಪಡೆಯುತ್ತಿದ್ದರು.
ಮಂಗಳಾದೇವಿ ಮೇಳದಲ್ಲಿ ತುಳು ಮತ್ತು ಪುರಾಣ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಕನ್ನಡಿಕಟ್ಟೆ ಅವರು ಅನುಭವವನ್ನು ಗಳಿಸಿದ್ದರು. ಬಳಿಕ ಶ್ಯಾಂ ಭಟ್ಟರ ಕೇಳಿಕೆಯಂತೆ ಹೊಸನಗರ ಮೇಳಕ್ಕೆ. ಮಂಗಳಾದೇವಿ ಮೇಳವನ್ನು ಬಿಡುವಾಗ ಸಂಚಾಲಕರಾದ ಕಿಶನ್ ಹೆಗ್ಡೆಯವರಿಗೆ ಬೇಸರವಾಗಿತ್ತು ಎಂಬುದು ರವಿಚಂದ್ರರಿಗೆ ತಿಳಿದಿದೆ.
                           ‘‘ಹೊಸನಗರ ಮೇಳ ಮತ್ತು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಕಳೆದ ಹತ್ತು ವರುಷಗಳಿಂದಲೂ ಗುರುಗಳಾದ ಪದ್ಯಾಣ ಶ್ರೀ ಗಣಪತಿ ಭಟ್ಟರ ಜತೆ ವ್ಯವಸಾಯ (ತನ್ಮಧ್ಯೆ ಒಂದು ವರ್ಷ ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದಲೂ ಕಾರ್ಯಾಚರಿಸಿತ್ತು). ಹೊಸನಗರ, ಹನುಮಗಿರಿ ಮೇಳದಲ್ಲಿ ಗುರುಗಳು ಜತೆಗಿದ್ದರು. ಪುರಾಣ ಪ್ರಸಂಗಗಳ ಪ್ರದರ್ಶನ, ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ಟರ ಅನುಭವಗಳೂ ನನಗೆ ನೆರವಾಗಿತ್ತು. ಅವರು ಗುರುಸಮಾನರು. ಎಲ್ಲ ಹಿರಿಯ ಕಲಾವಿದರು ನನಗೆ ಸಲಹೆಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ, ಆಶೀರ್ವದಿಸಿದ್ದಾರೆ. ಕಿರಿಯರು ಪ್ರೀತಿಸಿ ಸಹಕರಿ ಸಿದ್ದಾರೆ. ಕಲಾಪೋಷಕ, ಸಂಪಾಜೆ ಯಕ್ಷೋತ್ಸವ ರೂವಾರಿ ಡಾ| ಟಿ. ಶ್ಯಾಮ ಭಟ್ಟರು ಕಲಾಸೇವೆಯನ್ನು ಮಾಡುವ ಅವಕಾಶವಿತ್ತು ಆಶೀರ್ವದಿಸಿದ್ದಾರೆ. ಯಕ್ಷಗಾನವನ್ನೂ, ಕಲಾವಿದರನ್ನೂ ಅವರು ಪ್ರೀತಿಸಿ ಗೌರವಿಸುತ್ತಾರೆ ಎಂಬುದು ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದ ವಿಚಾರ. ಕಿರಿಯ ಕಲಾವಿದರನ್ನೂ ಬಹುವಚನದಲ್ಲಿ ಗೌರವಿಸಿ ಕರೆದು ಮಾತನಾಡುವುದನ್ನು ನಾವು ಕಣ್ಣಾರೆ ಕಂಡವರು.
ಅನೇಕ ಕಲಾವಿದರು ಅವರಿಂದಾಗಿಯೇ ಇಂದು ಒಳ್ಳೆಯ ಬದುಕನ್ನು ಕಂಡುಕೊಂಡಿದ್ದಾರೆ. ಮಂಗಳಾದೇವಿ ಮೇಳದಲ್ಲಿರುವಾಗ ಸಂಚಾಲಕರಾದ ಶ್ರೀ ಕಿಶನ್ ಹೆಗ್ಡೆಯವರು, ನಾನು ಕಲಾವಿದನಾಗಿ ಬೆಳೆಯಲು ಕಾಣಿಸಿಕೊಳ್ಳಲು ಅವಕಾಶವಿತ್ತವರು. ನಾನು ಇಂದು ಉತ್ತಮ ಸ್ಥಾನದಲ್ಲಿ ಇರುವುದಕ್ಕೆ ಅವರೂ ಕಾರಣರು. ಪದ್ಯಾಣ ಗಣಪತಿ ಭಟ್ಟರೂ ಅವರ ಪತ್ನಿ ಶೀಲಕ್ಕ ನನ್ನನ್ನು ಮಗನಂತೇ ಕಂಡರು. ಮನೆಯವನಂತೇ ನನ್ನನ್ನು ಪ್ರೀತಿಸಿದರು. ನಾನೂ ಮನೆಯ ಸದಸ್ಯನಂತೆಯೇ ಅಲ್ಲಿದ್ದೆ. ಗುರುಪತ್ನಿ ಶೀಲಕ್ಕ ಅವರು ನನ್ನ ಪಾಲಿಗೆ ಅನ್ನಪೂರ್ಣೇಶ್ವರಿಯೇ ಆಗಿದ್ದರು’’ ಇದು ರವಿಚಂದ್ರ ಕನ್ನಡಿಕಟ್ಟೆ ಅವರ ಅಂತರಂಗದ ನುಡಿಗಳು.
               ಬಲಿಪರು ಮತ್ತು ಅಗರಿ ಶೈಲಿಯಲ್ಲಿ ಕೆಲವರು ಹಾಡುವುದೇಕೆ? ಎಂದು ಕೇಳಿದರೆ ‘‘ಅವರಿಬ್ಬರೂ ಯಕ್ಷಗಾನ ಕಲೆಯ ಮಹಾನ್ ಸಾಧಕರು. ಪ್ರೇಕ್ಷಕರಲ್ಲಿ ಹಿರಿಯರು ಇರುತ್ತಾರೆ. ಬಲಿಪ ಮತ್ತು ಅಗರಿಯವರ ಅಭಿಮಾನಿಗಳು ಇರುತ್ತಾರೆ. ಕೆಲವೊಮ್ಮೆ ಅವರ ಶೈಲಿಯಲ್ಲಿ ಹಾಡಿ ಎಂಬ ಬೇಡಿಕೆಯೂ ಬರುತ್ತದೆ. ಅವರ ಅಭಿಮಾನಿಗಳಿಗೂ ಸಂತೋಷವಾಗಿತ್ತು. ಹಾಡಿದ ನಾವೂ ಸಂತೋಷವನ್ನು ಅನುಭವಿಸುತ್ತೇವೆ. ನಾವು ಹಾಡುವುದು ಅವರನ್ನು ಗೌರವಿಸುವುದಕ್ಕೆ, ಸಂತೋಷವನ್ನು ನೀಡುವುದಕ್ಕೆ ಮತ್ತು ಸ್ವತಃ ಅನುಭವಿಸುವುದಕ್ಕೆ ಎನ್ನುತ್ತಾರೆ ಕನ್ನಡಿಕಟ್ಟೆಯವರು. ಸ್ತ್ರೀಪಾತ್ರಕ್ಕೆ ತೆಂಕಿನ ನಾಟ್ಯ ಬೇರೆಯೇ ಇದ್ದು ಕೊಕ್ಕಡ ಈಶ್ವರ ಭಟ್, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂ. ಕೆ. ರಮೇಶ್ ಆಚಾರ್ಯ ಇವರುಗಳದ್ದು ಶುದ್ಧ ತೆಂಕಿನ ನಾಟ್ಯ. ಗೋಣಿಬೀಡು ಸಂಜಯ ಕುಮಾರರೂ ಹೊಸತನಕ್ಕೆ ಹೋಗಿಲ್ಲ. ಕಲಿಕಾಸಕ್ತರಿಗೆ, ಸ್ತ್ರೀವೇಷಧಾರಿಗಳಿಗೆ ಇವರೆಲ್ಲಾ ಆದರ್ಶರು. ಈಗ ತೆಂಕಿನ ಸ್ತ್ರೀವೇಷದ ನಾಟ್ಯಗಳು ಅಧಿಕವೇ ಆಗಿದೆ ಎಂದು ನನ್ನ ಅಭಿಪ್ರಾಯ. ಕುಣಿಸದೇ ಇದ್ದರೆ ಕಲಾವಿದರಿಗೂ ಕಲಾಭಿಮಾನಿಗಳಿಗೂ ನೋವಾಗುತ್ತದೆ. ಇದನ್ನು ಅವರೇ ಅರಿತರೆ ಒಳ್ಳೆಯದು. ಕಲೆಯ ಉತ್ತಮ ಪ್ರದರ್ಶನಕ್ಕೆ ಕಲಾವಿದರ ಜತೆ ಕಲಾಭಿಮಾನಿಗಳೂ ಕಾರಣರಾಗುತ್ತಾರೆ. ಒಳ್ಳೆಯದಾದರೆ ಹೊಗಳಬೇಡಿ. ಕೆಟ್ಟದಾಗಿದ್ದರೆ ದಾಕ್ಷಿಣ್ಯವಿಲ್ಲದೆ ಖಂಡಿಸಿ, ಎಚ್ಚರಿಸಿ ಎಂಬ ಸಂದೇಶವನ್ನು ಕಲಾವಿದರಿಗೂ ಪ್ರೇಕ್ಷಕರಿಗೂ ರವಿಚಂದ್ರರು ನೀಡುತ್ತಾರೆ. ಪುರಾಣದ ಚೌಕಟ್ಟಿನೊಳಗೇ ಉತ್ತಮ ಪ್ರದರ್ಶನ ನೀಡಬಹುದಾಗಿದೆ. ರಾಜಕೀಯ, ಜಾತಿನಿಂದನೆ ಅಗತ್ಯವಿಲ್ಲ. ಮಾಡಲೂಬಾರದು. ಪ್ರಚಾರಕ್ಕಾಗಿಯೇ ಹಾಡಿದಾಗ ಕಲಾವಿದರು ಅಭಿನಯಿಸಿದಾಗ ಪ್ರದರ್ಶನವು ಕೆಡುತ್ತದೆ. ಪ್ರಸಂಗಕ್ಕೆ ಬೇಕಾದಂತೆ ಹಾಡಬೇಕು. ಅಭಿನಯಿಸಬೇಕು. ಆಗ ಯಕ್ಷಗಾನವು ಗೆಲ್ಲುತ್ತದೆ. ಯುವಜನತೆ ಮೊದಲು ಆರ್ಕೆಸ್ಟ್ರ ಕಡೆಗೆ ಒಲವನ್ನು ಹೊಂದಿದ್ದರು. ಈಗ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ಸಂತೋಷ. ಕಲಿಕಾಸಕ್ತ ಕಲಾವಿದರು ಪುರಾಣ, ಕಾದಂಬರಿ, ಕಾವ್ಯಗಳನ್ನು ಓದಬೇಕು. ಅಧ್ಯಯನಶೀಲರಾಗಬೇಕು ಎಂದು ಹೇಳುವ ಈ ಯುವ ಭಾಗವತ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರು ದುಬಾಯಿ, ಮಸ್ಕತ್, ಬಹ್ರೈನ್, ಕುವೈಟ್‍ಗಳಲ್ಲಿ ಅಲ್ಲದೆ ಮುಂಬಯಿ ಮೊದಲಾದ ಭಾರತದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಗಾನವೈಭವ, ನಾಟ್ಯವೈಭವ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಾಂಸಾರಿಕವಾಗಿಯೂ ತೃಪ್ತರಿವರು. 2009ರಲ್ಲಿ ವಿವಾಹ. ಪತ್ನಿ ಶುಭ (ಸೋದರಮಾವ ಶ್ರೀ ಅಮ್ಮು ಪೂಜಾರಿ ಮತ್ತು ಶ್ರೀಮತಿ ರಜನಿ ದಂಪತಿಗಳ ಪುತ್ರಿ)
                 ಶ್ರೀ ರವಿಚಂದ್ರ ಶ್ರೀಮತಿ ಶುಭ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಭವಿಷ್ 4ನೇ ತರಗತಿ ವಿದ್ಯಾರ್ಥಿ. ಪುತ್ರಿ ಕು| ಖುಷಿ 1ನೇ ತರಗತಿ ವಿದ್ಯಾರ್ಥಿನಿ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿದ್ದಾರೆ. ಮಕ್ಕಳಿಬ್ಬರಿಗೂ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರಿಂದ ಇನ್ನು ಬಹಳಷ್ಟು ಕಲಾಸೇವೆಯು ನಡೆಯಲಿ. ಸಕಲಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂದು ಕಲಾಭಿಮಾನಿಗಳ ಪರವಾಗಿ ಶುಭ ಹಾರಯಿಕೆಗಳು.

ಲೇಖನ - ರವಿಶಂಕರ ವಳಕ್ಕುಂಜ
ಫೋಟೋ: ರಾಮ್ ನರೇಶ್ ಮಂಚಿ 

Comments

Post a Comment

Popular posts from this blog

ಯಕ್ಷಗಾನ ಹಿಮ್ಮೇಳಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್

ಯಕ್ಷಾಗಸದ ಪೂರ್ಣಚಂದ್ರ - ಕೊಂಡದಕುಳಿ ರಾಮಚಂದ್ರ ಹೆಗಡೆ